ಪೋಸ್ಟ್‌ಗಳು

Children's Poem ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹೇಸರಗತ್ತೆ ಪ್ರಶ್ನೆ

ಇಮೇಜ್
ಹೇಸರಗತ್ತೆ ಪ್ರಶ್ನೆ ಮೂಲ: ಶೆಲ್ ಸಿಲ್ವರ್ಸ್ಟೀನ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಮೃಗಾಲಯದಲ್ಲಿ ಕಂಡಾಗ  ಹೇಸರಗತ್ತೆ  ಕೇಳಿದೆ ಯಾವ ಬಣ್ಣದ್ದು ನಿನ್ನ ಪಟ್ಟೆ  ಬಿಳಿಮೈ ಮೇಲೆ ಕರಿಬಣ್ಣದ ಪಟ್ಟೆಯೋ  ಕರಿಮೈ ಮೇಲೆ ಬಿಳಿಬಣ್ಣದ್ದು ತೊಟ್ಟೆಯೋ ಹೇಸದೆ ಕೇಳಿತು ಹೇಸರಗತ್ತೆ ನನಗೆ ಮರುಪ್ರಶ್ನೆ ಹೇಳು ನೀನು ದುರಭ್ಯಾಸವುಳ್ಳ ಒಳ್ಳೆ ಹುಡುಗನೆ ಅಥವಾ ಒಳ್ಳೆ ಅಭ್ಯಾಸವಿರುವ ದುಷ್ಟನೋ ಏನು! ಗಲಾಟೆ ಎಬ್ಬಿಸುವ ಹುಡುಗನೋ ಮೂಲತಃ ನೀನು ಶಾಂತವಾಗಿರುವೆಯೋ ಒಮ್ಮೊಮ್ಮೆ ಅಥವಾ ಆಗಾಗ ಗಲಾಟೆ ಮಾಡಿದರೂ ಹೊಂದಿರುವೆಯಾ ಶಾಂತಮೂರ್ತಿ ಎಂಬ ಹೆಮ್ಮೆ ಆಗಾಗ ನಗುವ ಅಳುಬುರುಕನೋ  ಒಮ್ಮೊಮ್ಮೆ ಅಳುವ ನಗೆಬುರುಕನೋ ಒಪ್ಪವಾಗಿಟ್ಟುಕೊಳ್ಳುವೆಯಾ ನಿನ್ನ ವಸ್ತುಗಳನ್ನು ಹರಡಿರುತ್ತೀಯ ಒಮ್ಮೊಮ್ಮೆ ಮಾತ್ರ? ಅಥವಾ ಹರಡಿಕೊಂಡೇ ಇರುವುದೋ ನಿನ್ನ ವಸ್ತುಗಳು ಓರಣಗೊಳಿಸುತ್ತೀಯೋ ಒಮ್ಮೊಮ್ಮೆ ಮಾತ್ರ? ಹೀಗೆ ಕೇಳುತ್ತಲೇ ಇತ್ತು ಹೇಸರಗತ್ತೆ ಒಂದಾದ ಮೇಲೊಂದು ಪ್ರಶ್ನೆ ಕೇಳುವುದಿಲ್ಲ ಇನ್ನುಮುಂದೆ ಹೇಸರಗತ್ತೆಯನ್ನು ಎಂದೂ!

ಕಾಫಿ ಬಂತು ಕಾಫಿ

ಇಮೇಜ್
ಮೂಲ: ಈ ಎಲ್ ಸಿಲ್ವೆಸ್ಟರ್ ಅನುವಾದ: ಸಿ ಪಿ ರವಿಕುಮಾರ್ ಪರಿಮಳ ತರುವಳು ಕಾಫಿಯ ಕಿತ್ತಲಿ, ಹೊಮ್ಮುವ ಬಿಸಿಬಿಸಿ ಕಾಫಿ ಹೊಗೆ! ತರುವಳು ಹರಿಣಿ ಹಾಲಿನ ಗಿಂಡಿ, ನಗುತಿದೆ ನೊರೆಹಾಲು ಮುಗುಳುನಗೆ! ಗಾಜಿನ ಬಟ್ಟಲು ತಂದಳು ಕಮಲಾ ನೋಡಿರಿ ಕಿಣಿ ಕಿಣಿ ಎನಿಸುತ್ತಾ! ಫಳ ಫಳ ಹೊಳೆಯುವ ಚಮಚದ ಗೊಂಚಲು ತಂದಳು ನೋಡಿ ಚಾರುಲತಾ! ಎಲ್ಲರಿಗಿಂತ ಕೊನೆಗೆ ಬಂದಿತು ನಮ್ಮ ಪುಟ್ಟಿ ತೂರಾಡುತ್ತಾ ಸಿಹಿಯಲ್ಲವೇ  ನೀನೆಲ್ಲರಿಗಿಂತ, ಸಕ್ಕರೆ ತಂದೆಯಾ, ಬಾ ಪುಟ್ಟಾ !

ಅಪ್ಪಿಕೋ ಆಟ

ಇಮೇಜ್
ನಾನು ಆಡುವುದಿಲ್ಲ ಹಗ್ಗ ಎಳೆಯುವ ಆಟ ಅಪ್ಪಿಕೊಳ್ಳುವ ಆಟವೇ ನನಗೆ ಇಷ್ಟ ಎಳೆದಾಡುವುದಿಲ್ಲ ಈ ಆಟದಲ್ಲಿ ಯಾರೂ ಅಪ್ಪಿಕೊಳ್ಳುವರು ಎಲ್ಲರೂ ಒಬ್ಬರನ್ನೊಬ್ಬರು  ಹೊರಳಾಡಿ ಚಾಪೆಯ ಮೇಲೆ ಎಬ್ಬಿಸುತ್ತಾ ನಗೆಯ ಅಲೆ  ಹಲ್ಲು ಬಿಡುವರು ಹಿಹಿಹಿ! ಬಹುಮಾನ ಅಪ್ಪುಗೆಯ ಸಿಹಿ! ಎಲ್ಲರೂ ಗೆಲ್ಲುವುದು ಈ ಆಟದ ಹೂಟ! ಮೂಲ: ಶೆಲ್ಬಿ ಸಿಲ್ವರ್ಸ್ಟೀನ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ನನ್ನ ಪುಟ್ಟ ದೋಣಿ

ಇಮೇಜ್
  ನನ್ನ ಪುಟ್ಟ ದೋಣಿಯನ್ನು  ನೀರಿನಲ್ಲಿ ತೇಲಿಬಿಟ್ಟು ಮುಂದೆ ಸಾಗು ಎಂದು ನಾನು ಅಣತಿ ಮಾಡಿದೆ! ಇಲ್ಲ ದೋಣಿ ಸಾಗಲಿಲ್ಲ, ಮುಂದೆ ಮುಂದೆ ಹೋಗಲಿಲ್ಲ, ನಿಂತು ನನ್ನ ಅಣಕಿಸಿತು, ಮುಂದೆ ಕದಲದೆ! ನನ್ನ ಗೆಳತಿ ಸಪ್ಪೆ ಮೋರೆ ಹಾಕಿಕೊಂಡು ನೋಡಿದಳು, ದೋಣಿ ಏಕೆ ತೇಲದೆಂದು ಅವಳ ಕಾತುರ! ಕೈಗಳಿಂದ ನೀರು ಬಡಿದು ಅಲೆಯ ಮಾಡಿ ತಳ್ಳಿದಾಗ ದೋಣಿಯಲ್ಲಿ ಕಂಡು ಬಂತು ತೇಲುವಾತುರ! ಬೀಸಿತಾಗ ತಂಪು ಗಾಳಿ ಅಲುಗತೊಡಗಿ ದೋಣಿ ಹಾಯಿ ಕಾಣಬಂತು ಅದರ ನಡೆಯೊ- ಳೊಂದು ಸಂಭ್ರಮ! ದೋಣಿ ತೇಲುವುದನು ಕಂಡು ಚಪ್ಪಾಳೆಯ ತಟ್ಟಿ ನನ್ನ ಕೈಯ ಹಿಡಿದು ಮಾಡಿದಳು ಗೆಳತಿ, ನರ್ತನ!

ಅಜ್ಜಿಯ ಬೆಕ್ಕು

ಇಮೇಜ್
  ಅಜ್ಜಿಯ ಹಿಂದೆ ಓಡಾಡುವುದು ಪಟ್ಟಾಪಟ್ಟೆ ಕರಿಬೆಕ್ಕು ಹುಲಿ ಎಂದೇ ತಿಳಿದಿದೆ ತನ್ನನ್ನು ಅಬ್ಬಾ ಎಂತಹ ಸೊಕ್ಕು! ಮಜ್ಜಿಗೆ, ಹಾಲು, ಏನೇ ಇರಲಿ, ಕೃಷ್ಣನಿಗೊಂದು ಪಾಲು! ಬೆಣ್ಣೆಯ ಕಡೆಯಲು ಕೂತರೆ ಅಜ್ಜಿ ನೆಕ್ಕುವುದು ಕಡಗೋಲು! ಹೂವನು ಬಿಡಿಸಲು ಹೋದರೆ ಅಜ್ಜಿ ಅಲ್ಲಿಗೆ ಬರುವನು ಕೃಷ್ಣ ಅಯ್ಯೋ ಹಸಿವಾಯಿತೆ ಕೃಷ್ಣನಿಗೆ ಎನ್ನುತ ಎದ್ದು ತಕ್ಷ್ಣ ಅಜ್ಜನಿಗೆಂದು ಮಾಡಿದ ಕಾಫಿ ಕೊಟ್ಟರೆ ಬಟ್ಟಲಿನಲ್ಲಿ ಒಂದೇ ನಿಮಿಷದಿ ಹೀರಿಬಿಡುವನು ಕೃಷ್ಣನು ಮಹಾಮಳ್ಳಿ! ಊರಿಗೆ ಹೋದಾಗೆಲ್ಲಾ ಅಜ್ಜಿ ಅಜ್ಜನದೇ ವಹಿವಾಟು, ಅಜ್ಜಿಯ ಮುದ್ದು ಮುಚ್ಚಟೆಗೆಲ್ಲ ಸ್ವಲ್ಪ ದಿನ ಫುಲ್ ಸ್ಟಾಪು ಅಡಿಗೆಮನೆಗೇ ನುಗ್ಗುವ ಕೃಷ್ಣ, ಅವನಿಗಿಲ್ಲ ಸಂಕೋಚ ಕುಡಿದು ತಪ್ಪಲೆಯ ತುಂಬಾ ಹಾಲು ಮಿಯಾಂವ್ ಎನ್ನುವನು, ಸಾಚಾ! ಮರಳಿ ಬಂದಾಗ ಅಜ್ಜಿಯು ಇವನು ಅವಳ ತೊಡೆಯ ಏರಿದರೆ  ಬಾರೋ ಕೃಷ್ಣ ಬಾರೋ ಎಂದು ಮುದ್ದಿನ ಸುರಿಮಳೆಧಾರೆ ಅಯ್ಯೋ ಸೊರಗಿಸಿಬಿಟ್ಟಿರಿ ಮಗುವನ್ನು ಹಾಕದೆ ಊಟ, ಪಾಪ! ಎನ್ನುತ ಹಾಲು ಸುರಿದು ಬಟ್ಟಲಿಗೆ ಕರೆವಳು, ಕುಡಿ ಬಾರಪ್ಪಾ! ಅವನಿಗೇನು ಆಗಿದೆಯೇ! ನೋಡು ಕಣ್ಣು ಬಿಟ್ಟು ಸರಿಯಾಗಿ! ಮೈ ಬಂದಿದೆ ಹಾಲೂ ಮೊಸರೂ ಬೆಣ್ಣೆ ಕದ್ದು ತಿಂದಿಹನು ತೇಗಿ! ಹೊತ್ತಿಗೆ ಕಾಫಿ ತಿಂಡಿ ಇಲ್ಲದೆ ಸೊರಗಿಹೋಗಿರುವೆ ನಾನು ಬಂದ ಕೂಡಲೇ ಅವನಿಗೆ ಉಪಚಾರ ಮಾಡುತ್ತಿರುವೆ ನೀನು! ಸಾಕು ಸುಮ್ಮನಿರಿ, ಕಣ್ಣು ಹಾಕದಿರಿ, ಎನ್ನುತ ಅಜ್ಜಿ ಬಿಗಿಯುವಳು ಮುಷ್ಟಿ! ಬಾರೋ ಕೃಷ್ಣಾ, ಉಪ್ಪು ನಿವಾಳ...

ಅಜ್ಜಿಯ ವೇಷ

ಇಮೇಜ್
  ಉಡಿಸಮ್ಮಾ ಅಜ್ಜಿಯ ಜರಿಸೀರೆ! ತೊಡಿಸಮ್ಮಾ  ಕನ್ನಡಕ! ನಾನೂ ಹಾಕುವೆ ಅಜ್ಜಿಯ ವೇಷ ಧ್ವನಿಯಲಿ ನಟಿಸುತ ನಡುಕ! ಟವೆಲ್ ಸುತ್ತಿದರೂ ಪರವಾಗಿಲ್ಲ, ಸೀರೆಯು ತುಂಬಾ ಉದ್ದ! ಓಡಾಡಲು ತೊಂದರೆ ಆಗುವುದು ಬಿದ್ದರೆ ಅಯ್ಯೋ ಸದ್ಯ! ಮೂಗಿನ ಮೇಲೆ ಜಾರುವುದಮ್ಮಾ ಅಜ್ಜಿಯ ಹಳೇ ಚಷ್ಮಾ! ಮೇಲೇರಿಸಿ ದುರುಗುಟ್ಟುವೆ ನೋಡು, ಮುಂದಿದ್ಧವರು ಭಸ್ಮ! ಅಬ್ಬಾ ಏನು ಸೆಖೆ, ಸಾಕಾಯ್ತು, ನಿಂಬೆಯ ಪಾನಕ ಮಾಡೇ! ಬರುತಿದೆಯಲ್ಲೇ ಸುಟ್ಟ ವಾಸನೆ, ಹಾಲು ಉಕ್ಕಿತೋ ನೋಡೇ! ಮೂರು ಹೊತ್ತೂ ಈ ಹಾಳು ಮೊಬೈಲು ಎಲ್ಲಾ ಕೆಲಸ ಹಾಳು! ಕುಕ್ಕರ್ ಕೂಗಾಯಿತು ಮೂರು ಸಲ ಒಲೆ ಆರಿಸು ಮೇಲೇಳು! ಮೊಮ್ಮಗಳಿಗೆ ಮಲ್ಲಿಗೆಜಡೆ ಹಾಕಿ ನೋಡುವ ಆಸೆ ಇತ್ತು! ಯಾರು ಕೇಳುವರು ನಾ ಹೇಳಿದ್ದು ಮಾಡಿಕೊಂಡೆ ಬಾಬ್ ಕಟ್ಟು! ಉಡಿಸಮ್ಮಾ ಅಜ್ಜಿಯ ಜರಿಸೀರೆ! ತೊಡಿಸಮ್ಮಾ  ಕನ್ನಡಕ! ನಾನೂ ಹಾಕುವೆ ಅಜ್ಜಿಯ ವೇಷ ಧ್ವನಿಯಲಿ ನಟಿಸುತ ನಡುಕ!

ಉಯ್ಯಾಲೆ ಆಟ

ಇಮೇಜ್
ಹಿತ್ತಲ ತೋಟದ ಹಲಸಿನ ಮರಕ್ಕೆ ಕಟ್ಟಿರುವಳಮ್ಮ ಉಯ್ಯಾಲೆ ಕೂಡಿಸಿ ನನ್ನನು ತೂಗುವಳಮ್ಮ ಆಡಿಸುವಳು ಕೆಳಗೆ, ಮೇಲೆ! ನಾನು ತೂಗಿದೆಡೆ ಬೌವೌ ಎನ್ನುತ ತಾನೂ ಬರುವನು ರಾಮಹರಿ ನನ್ನ ತೊಡೆ ಮೇಲೆ ಕೂತು ಜೋಕಾಲಿ ಆಡುವುದವನಿಗೆ ನಿತ್ಯಚರಿ! ಬಿಡುವಿಲ್ಲದೆ ಇದ್ದರೆ ಅಮ್ಮನಿಗೆ ಅಜ್ಜಿಯ ಹೋಗಿ ಕೇಳುವೆನು ನಡುಬಗ್ಗಿದ್ದರೂ ಹೇಗೋ ಎದ್ದು ಹುಡುಗಿಯಾಗಿಬಿಡುವಳು ತಾನೂ! ಅಜ್ಜಿಯ ಕೂಡಿಸಿದೆನು ನಾನೊಮ್ಮೆ ಮಾಡಿದೆ ತುಂಬಾ ಬಲವಂತ ಜೀವವ ಕೈಯಲಿ ಹಿಡಿದು ಕುಳಿತಳು ನೆನೆಯುತ ಬಾಯಲಿ "ಭಗವಂತ!" ಬೀಸುವ ತಂಗಾಳಿಯದೋ ಅಥವಾ ಜೋಕಾಲಿಯದೋ ತಿಳಿಯದು, ಮಾಯೆ! ಮಾಯವಾಯ್ತು ಅಜ್ಜಿಯ ಮುಖದಿಂದ ಬಿದ್ದುಬಿಡುವ ಭೀತಿಯ ಛಾಯೆ! ಬಾಲ್ಯದ ಸಖಿಯರ ನೆನೆದು ಮುಖದಲ್ಲಿ ಮೂಡಿತು ನಗೆ ಕಾಮನಬಿಲ್ಲು ಎಷ್ಟೆತ್ತರ ನೂಕುತ್ತಿದ್ದರು ಗೊತ್ತೇ ಎನ್ನಲು ಮಿಂಚಿತು ಬಿಳಿಹಲ್ಲು! ಅಮ್ಮನು ನೋಡಿದಳು ಬೆರಗಾಗಿ ಅಜ್ಜಿ ಆಡುವುದು ಉಯ್ಯಾಲೆ ಉಕ್ಕಿತು ನಗೆ ಹಾಲುಕ್ಕಿದ ಹಾಗೆ ಕಾಯಲಿಟ್ಟದ್ದು ಒಲೆ ಮೇಲೆ! ಹಿತ್ತಲ ತೋಟದ ಹಲಸಿನ ಮರಕ್ಕೆ ಕಟ್ಟಿರುವಳಮ್ಮ ಉಯ್ಯಾಲೆ ಕೂಡಿಸಿ ನನ್ನನು ತೂಗುವಳಮ್ಮ ಆಡಿಸುವಳು ಕೆಳಗೆ, ಮೇಲೆ! - ಸಿ. ಪಿ. ರವಿಕುಮಾರ್ ಏಪ್ರಿಲ್ ೨೩, ೨೦೨೪

ಅಮ್ಮನ ಸೀಕ್ರೆಟ್

ಇಮೇಜ್
ಕಾವಲಿ ಮೇಲೆ ಕಾದಿದೆ ಕೆಂಪಗೆ ಬಿಸಿಬಿಸಿ ರೊಟ್ಟಿ ನನಗೂ ಬೇಕು! ಕಾವಲಿ ಹಾಗೆ ಕಾದಿದೆ ಹೊಟ್ಟೆ ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು! ಪರಿಮಳ ಬರುತಿದೆ ಘಮಘಮ ಎಂದು ಇರಲಾಗದು ಬರಿಹೊಟ್ಟೆಯೊಳಿನ್ನು ಕೈತೊಳೆದಾಗಿದೆ, ಬೇಕಾದರೆ ನೋಡು ಹೇಳುವೆನೇ ಎಂದಾದರೂ ಸುಳ್ಳನ್ನು! ಗುಂಡಗೆ ಕೆಂಪಗೆ ಗರಿಗರಿ ರೊಟ್ಟಿ ಮೇಲ್ಗಡೆ ಕರಗುವ ತುಪ್ಪದ ಗಟ್ಟಿ ಮುರಿಯಿತೇ ಅಯ್ಯೋ ಪರವಾಗಿಲ್ಲ ಮುರಿದೇ ಬಾಯಿಗೆ ಹಾಕುವೆನಲ್ಲ! ರುಚಿರುಚಿಯಾಗಿದೆ ಬಿಸಿಬಿಸಿ ರೊಟ್ಟಿ ಇದು ಒನ್ ಹಂಡ್ರೆಡ್ ಪರ್ಸೆಂಟ್ ಬಿಟ್ಟಿ! ಏನಮ್ಮಾ ಹಾಕಿದೆ ಈ ಅದ್ಭುತ ರುಚಿಗೆ ಹೇಳಿಬಿಡಮ್ಮಾ ಸೀಕ್ರೆಟ್ ನನಗೆ! ಎಂದರೆ ನಗುವಳು ಗಲ್ಲವ ಹಿಂಡುತ್ತಾ ಪ್ರೀತಿ ಎಂಬುದೇ ಸೀಕ್ರೆಟ್ ಪುಟ್ಟಾ! ಇರುವುದು ಅಮ್ಮಂದಿರ ಬಳಿ ಮಾತ್ರ ಎಲ್ಲಾಕಡೆಗೂ ಸಿಕ್ಕಿಬಿಡುತ್ತಾ! ಕಾವಲಿ ಮೇಲೆ ಕಾದಿದೆ ಕೆಂಪಗೆ ಬಿಸಿಬಿಸಿ ರೊಟ್ಟಿ ನನಗೂ ಬೇಕು ಕಾವಲಿ ಹಾಗೆ ಕಾದಿದೆ ಹೊಟ್ಟೆ ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು

ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ

ಇಮೇಜ್
  ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ ಎಲ್ಲ ನನಗೆ ಬೇಕು ಎಂದು ಅಗೋ ಅಲ್ಲಿ ಮರಿಯು ಒಂದು ಎಂಥ ಹೊಟ್ಟೆಬಾಕ! ನಿನ್ನ ಹಾಗೇ ಅಲ್ಲವೇನು ತಿಂದೆ ನಾಲ್ಕು ಜಾಮೂನು ಬಿಡದೆ ತೊಟ್ಟು ಪಾಕ! ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ ಹಂಚಿಕೊಂಡು ತಿಂದರೆ ಹೊಟ್ಟೆಗಿಲ್ಲ ತೊಂದರೆ ಇಬ್ಬರಿಗೂ ತೃಪ್ತಿ! ಸರಿ ಹಾಗಾದರೆ ಅಕ್ಕಾ ನೆನ್ನೆ ನಿನಗೆ ಸಿಕ್ಕ ಚಾಕೋಲೇಟ್ ಫಿಫ್ಟಿ ಫಿಫ್ಟಿ! ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ ಸಿ. ಪಿ. ರವಿಕುಮಾರ್

ಕಟ್ಟುವೆನು ನಾನು

ಇಮೇಜ್
ಸ್ಫೂರ್ತಿ: ರಾಬರ್ಟ್ ಲೂಯಿ ಸ್ಟೀವನ್ಸನ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್ ನೋಡಿ ನಾನು ಮನೆಯಲ್ಲೇ ಏನೇನು ಕಟ್ಟಬಲ್ಲೆ! ಅರಮನೆ, ದೇವಸ್ಥಾನ, ಕೋಟೆ ಕೊತ್ತಲ ಕಿಲ್ಲೆ! ಸುರಿದುಕೊಳ್ಳಲಿ ಎಷ್ಟು ಸುರಿಯುತ್ತದೋ ಮಳೆ, ನಾನಂತೂ ಕಟ್ಟುವ ಆಟ ಆಡುವೆ ಮನೆಯಲ್ಲೇ! ಮೇಜು ಕುರ್ಚಿಗಳೆಲ್ಲ ಆಗಿ ಬೆಟ್ಟದ ಸಾಲು, ಕೆಳಗೆ ಹಾಸಿದ ಚಾಪೆ ಆಗುವುದು ಕಡಲು! ಗೋಡೆ ಕಟ್ಟುವೆ ಸುತ್ತ ಪುಸ್ತಕಗಳ ಪೇರಿಸಿ, ಕಟ್ಟುವೆನು ಗುಡಿಗೋಪುರ, ಧ್ವಜವ ಮೇಲಿರಿಸಿ! ನಾಲ್ಕು ಕಂಬಗಳಿವೆ ನನ್ನ ಪುಸ್ತಕದರಮನೆಗೆ, ಚಾದರದ ಗೋಪುರವನೆಬ್ಬಿಸುವೆ ಕೊನೆಗೆ, ಮೇಲಿಂದ ರಾಜ ಮೆಟ್ಟಿಲು ಇಳಿಯುತ್ತಾ ಬಂದರೆ, ಸಿದ್ಧವಾಗಿದೆ ಕೆಳಗೆ ಜಹಜುಗಳ ಬಂದರೇ! ಅಮ್ಮನ ಪಾತ್ರೆಗಳೆಲ್ಲವೂ ನನ್ನ ಪಾಲು! ಸಾಲಾಗಿ ನಿಂತಿರುವ ಜಹಜುಗಳ ಸಾಲು! ಕಡಲಲ್ಲಿ ತೇಲುತ್ತಿವೆ ಒಂದೆರಡು ಬೋಟು, ಒಂದು ಅಕ್ಕನ ಪರ್ಸ್, ಒಂದು ತಾತನ ಕೋಟು!! ಗುಡಿಯ ಸುತ್ತಲೂ ದೀಪ ಹಚ್ಚಿಟ್ಟ ಹಾಗೆ ಹೇಗೆ ಮಾಡುವುದೆಂದು ಹೊಳೆದದ್ದೇ ನನಗೆ ತಂದು ಅಜ್ಜಿಯ ಭಾರೀ ಜರತಾರಿ ಸೀರೆ ಸುತ್ತಿರುವೆ, ನೋಡೋಣ ಏನನ್ನುತಾರೆ! ಮುಗಿಯಿತಲ್ಲ ಆಟ,ಕಟ್ಟಿದ್ದು ಸಾಕು ಈಗ ಕಟ್ಟಿದ್ದನ್ನು ಕೆಡವಲೇ ಬೇಕು ಕಟ್ಟಲು ಬೇಕಾಯಿತು ಒಂದೆರಡು ಗಂಟೆ ಕೆಡವಲು ಅಷ್ಟೆಲ್ಲಾ ವ್ಯವಧಾನ ಉಂಟೇ! ಕೋಣೆಯ ತುಂಬಾ ಬಿದ್ದಿರುವ ರಾಶಿ  ಸಾಮಾನು, ನೋಡುತ್ತಾ ಕಲ್ಪಿಸಿಕೊಳ್ಳುವೆ ಕಟ್ಟಬಹುದು ಬೇರೇನು, ನಡೆದೇ ಇರುತ್ತದೆ ಕೆಡವಿ ಕಟ್ಟುವ ಆಟ,  ಹೊಟ್ಟೆ ಹಾಕುತ್ತಿದೆ ತಾಳ, ಕರೆಯುತ...

ನಾನೂ ಹಕ್ಕಿ

ಇಮೇಜ್
(ಮಕ್ಕಳಪದ್ಯ) ನಾನೂ ಹಕ್ಕಿ ನಾನೂ ಹಕ್ಕಿ ರೆಕ್ಕೆಯ ಬಿಚ್ಚಿ ಹಾರುತ್ತಿರುವೆನು ಬಾನಲ್ಲಿ ಅತ್ತಿಂದಿತ್ತ ಅಲೆಯುವ ಚಿತ್ತ ಊರು, ಕೇರಿ, ಕಾನನ,ಹಳ್ಳಿ! ನಗುವಿರಿ ಏಕೆ ಕೈಗಳ ರೆಕ್ಕೆ ಎಬ್ಬಿಸಲಾರದೆ ಸುಳಿಗಾಳಿ? ಓಡಿಸಿ ತಲೆಯ ಗಳಿಸಿ ಐಡಿಯಾ ಗುಟ್ಟು ನಿಮಗೂ ಹೇಳುವೆ ತಾಳಿ! ಕಾಗದ ಪಿನ್ನು ಕಡ್ಡಿ ತುಂಡನ್ನು ಸೇರಿಸಿದರೆ ತಿರುಗುವ ರಾಟೆ ತಲೆಯ ಮೇಲ್ಗಡೆ ಡ್ರೋನಿನ ಹಾಗೆ ಹಚ್ಚಿಕೊಂಡು ಇಗೋ ನಾ ಹೊರಟೆ! ನಾನೂ ಡ್ರೋನು ಹಾರಾಡುವೆನು ಬರಿದಾಗಿವೆ ಕೈಗಳು ನೋಡಿ ಕೊಡುವಳು ಅಮ್ಮ ಕೊಬ್ಬರಿ  ಬೆಲ್ಲ ತಿನ್ನುತ ಹಾರುವೆ ಬಾನಾಡಿ -- ಸಿ.ಪಿ. ರವಿಕುಮಾರ್

ವರ್ಣಪಥ (ಮಕ್ಕಳ ಕವಿತೆ)

ಇಮೇಜ್
ಮೂಲ : ಕ್ರಿಸ್ಟಿನಾ ರೊಸೆಟ್ಟಿ ಕನ್ನಡಕ್ಕೆ : ಸಿ.ಪಿ. ರವಿಕುಮಾರ್ ನದಿಯಲ್ಲಿ ತೇಲುತ್ತವೆ ದೋಣಿ ಸಾಗರದ ಮೇಲೆ ತೇಲುತ್ತವೆ ನಾವೆ ... ಆಗಸದಲ್ಲಿ ತೇಲುವ ಮೋಡಗಳು ಮಾತ್ರ ಇವೆಲ್ಲಕ್ಕಿಂತ ಸುಂದರವಾಗಿ ಕಾಣುತ್ತವೆ ಕಟ್ಟಿದ್ದಾರೆ ನದಿಗಳ ಮೇಲೆ ಒಂದಕ್ಕಿಂತ ಮತ್ತೊಂದು ಸುಂದರತರ ಸೇತುವೆ ಆದರೆ ಹಾದು ಹೋಗುತ್ತದಲ್ಲ ಮರಗಳ ಮೇಲೆ ಸ್ವರ್ಗಕ್ಕೆ ತೂಗಿಬಿಟ್ಟ ಏಣಿಯಂತೆ ಭೂಮಿಗೂ ಗಗನಕ್ಕೂ ನಡುವಣ ವರ್ಣಪಥ ಸುಂದರತಮ ಎಲ್ಲ ಸೇತುವೆಗಳಿಗಿಂತ

ಸ್ನೇಹಿತರು (ಮಕ್ಕಳ ಕವಿತೆ)

ಇಮೇಜ್
ಮೂಲ ಕವಿತೆ - ಆಬಿ ಫಾರ್ವೆಲ್ ಬ್ರೌನ್ ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ ಎಷ್ಟು ಚೆನ್ನ ಒಂದಷ್ಟು ಹೊತ್ತು ಈ ಮರದ ಕೆಳಗೆ ಅಂಗತ್ತ ಮಲಗಿ ಮೇಲ್ಗಡೆಯ ಹಸಿರು ಚಪ್ಪರವ ಕಣ್ಣುಮುಚ್ಚಿ ನೋಡುತ್ತ ಹಸಿರು ಚಪ್ಪರದ ಮೇಲೆ ಕಾಣುವುದು ಸ್ವಚ್ಛ ನೀಲ ಆಕಾಶ ನನ್ನ ಕಡೆಗೆ ನೋಡುತ್ತ ಬೀರುತಿದೆ ನಭನೀಲ ಮಂದಹಾಸ ಚಪ್ಪರದ ನಡುವೆ ತೂರುತ್ತ ಬಂದ ಹೊಂಗಿರಣ  ನವಿಲುಗರಿಯಂತೆ ಮುಖವನ್ನು  ಸವರಿ ಮುತ್ತಿಟ್ಟು ತೋರುವುದು ತಾಯ ಪ್ರೇಮ-ಮಮತೆ! ತಂಬೆಲರು ಹಾಡುವ ಮಧುರಗಾನ ಸವಿದಂತೆ ಮಧುರ  ಜೇನು ಕಾಣದಿದ್ದರೂ ರೂಪ, ಕಾಣುವೆನು ಅದರ ಪ್ರೀತಿ, ಒಲವನ್ನು ಇಷ್ಟೆಲ್ಲ ಸ್ನೇಹಿತರು ತೋರುತಿರುವಾಗ ಮಮಕಾರ, ಕರುಣೆ, ಪ್ರೀತಿ ಯಾವ ಮಗುವನೂ ಕಾಡಲಾರದು ಯಾವ ಬಗೆಯ ಭೀತಿ  (c) ಸಿ. ಪಿ. ರವಿಕುಮಾರ್, ೨೦೧೯

ಮಂಜಿನ ಚೆಂಡು (ಮಕ್ಕಳ ಕವಿತೆ)

ಇಮೇಜ್
ಮೂಲ ಕವಿತೆ - ಶೆಲ್ ಸ್ಪ್ರಿಂಗ್ ಸ್ಟೀನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಮಾಡಿದೆ ನಾನು ಮಂಜಿನ ಚೆಂಡು ನೋಡಲು ಒಳ್ಳೆ ಬೆಳ್ಳಿಯ ಗುಂಡು ನಾನೇ ಸಾಕುವೆ ಮುದ್ದಿನ ಚೆಂಡು ಪಕ್ಕದಲ್ಲಿಯೇ ಮಲಗಿಸಿಕೊಂಡು ಚಳಿ! ಎನ್ನುತ ಹೊದ್ದಿಕೆಯಲಿ ಸುತ್ತಿ ಕೊಟ್ಟೆನು ದಿಂಬಿಗೆ ಮೆತ್ತನೆ ಹತ್ತಿ ಬೆಳಗಾಯಿತು ಲಗುಬಗೆಯಲಿ ಎದ್ದೆ ಎಲ್ಲಿರುವೆ ಓ ಮಂಜಿನ ಮುದ್ದೆ! ಓಡಿಹೋಗಿತ್ತು! ನಾನಿದ್ದೆಯೊಳಿದ್ದೆ! (ಹಾಸಿಗೆಯನು ಅದು  ಮಾಡಿದೆ   ಒದ್ದೆ)

ಬೆಟ್ಟದ ಗಾಳಿ (ಮಕ್ಕಳ ಕವಿತೆ)

ಇಮೇಜ್
ಮೂಲ - ಎ. ಎ. ಮಿಲ್ನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಬರುವುದೆಲ್ಲಿಂದ  ಬೀಸುವ ಗಾಳಿ, ಹೋಗುವುದೆಲ್ಲಿಗೆ ಎನ್ನುವ ವಿಷಯ - ಕೇಳಿದೆ ಎಷ್ಟೋ ಜನರನು ನಾನೂ ಅರಿಯರು ಯಾರೂ ರ-ಹ-ಸ್ಯ! ಬರುವುದು ಎಲ್ಲಿಂದಲೋ ವೇಗದಲಿ ಹೊರಡಲು ಅಷ್ಟೇ ಗಡಿಬಿಡಿ ತೋರಿ - ಹಿಂಬಾಲಿಸಿದರೂ ಓಡೋಡುತ್ತಾ ಕೈಯಿಗೆ ಸಿಗದೇ ಆಗಿ ಪರಾರಿ! ಪಟಪಟ ಹಾರುವ ಗಾಳೀಪಟದ ದಾರವ ಬಿಟ್ಟರೆ ಮೇಲ್ಗಡೆ ಹಾರಿ ಗಾಳಿಯ ಜೊತೆಗೆ ಹಗಲೂರಾತ್ರಿ ಮಾಡುವಾಗ ಜುಮ್ಮೆಂದು ಸವಾರಿ ಹಿಂಬಾಲಿಸುವೆನು ಪಟವನು ನಾನೂ ಬರುವುದು ನನಗೂ ಪತ್ತೇದಾರಿ! ಕಂಡುಹಿಡಿಯುವೆನು ಖಂಡಿತವಾಗಿ ಹೋಗುವುದೆಲ್ಲಿಗೆ ಗಾಳಿಯು, ಅಲೆಮಾರಿ! ಬಿಡಿಸಿದರೂ ಬೀಸುವ ಸುಳಿಗಾಳಿ ಎಲ್ಲಿಗೆ ಹೋಗುವುದೆಂಬ ರಹಸ್ಯ- ಗೂಢವಾಗಿಯೇ ಉಳಿದುಬಿಡುವುದೇ ಅದರ ಮೂಲ ಎಲ್ಲೆನ್ನುವ ವಿಷಯ! ( c) ಸಿ. ಪಿ ರವಿಕುಮಾರ್, ೨೦೧೯

ಆಟೋಕಾಪ್ಟರ್

ಆಟೋಕಾಪ್ಟರ್ ಮಾಡುವೆನಮ್ಮಾ ಆಟೋಕಾಪ್ಟರ್ ಮಾಡುವೆನು! ಆಟೋ ಮೇಲ್ಗಡೆ ರೆಕ್ಕೆಯ ಕಟ್ಟಿ ಆಗಸದಲ್ಲಿ ಹಾರುವೆನು! ಬೆಂಗಳೂರು ಬರಿ ಟ್ರಾಫಿಕ್ ಊರು ಎನ್ನುತ ಎಲ್ಲರೂ ದೂರುವರು! ಆದರು ಎಲ್ಲರೂ ಇಲ್ಲೇ ಬಂದು ತಮ್ಮಯ ಝಂಡಾ ಊರುವರು! ದಿನದಿನ ಕಳೆಯುತ ಟ್ರಾಫಿಕ್ ಬೆಳೆದು ಆಗುತ್ತಿದೆ ಹನುಮನ ಬಾಲ! ಮೆಟ್ರೋ, ಫ್ಲೈ ಓವರ್ ರಸ್ತೆಗಳಿಂದ ದೂಡಬಹುದೇನೋ ಕೆಲಗಾಲ! ಟ್ರಾಫಿಕ್ ಪ್ರಾಬ್ಲಮ್ಮಿಗೆ ನೋಡಮ್ಮಾ ಕಂಡುಹಿಡಿಯುವೆನು ಸೊಲ್ಯೂಷನ್! ಹೊಸಕಾಲಕೆ ಬೇಕೇ ಬೇಕಮ್ಮಾ ಹೊಸಹೊಸ ಹೊಸಹೊಸ ಇನೊವೇಷನ್! ಆಟೋಕಾಪ್ಟರ್ ಮಾಡುವೆನಮ್ಮಾ ಆಟೋಕಾಪ್ಟರ್ ಮಾಡುವೆನು! ಆಟೋ ಮೇಲ್ಗಡೆ ರೆಕ್ಕೆಯ ಕಟ್ಟಿ ಆಗಸದಲ್ಲಿ ಹಾರುವೆನು! ಕಾಮನ ಬಿಲ್ಲಿನ ರಸ್ತೆಯ ಮೇಲೆ ನನ್ನಯ ಆಟೋ ಓಡುವುದು! ನನ್ನಯ ಅದ್ಭುತ ವಿಮಾನವನ್ನು ಜಗ ಕಣ್ ಬಿಡುತ್ತ ನೋಡುವುದು! - ಸಿ.ಪಿ. ರವಿಕುಮಾರ್

ಗಣೇಶನ ಸ್ಟೋರಿ

ಇಮೇಜ್
ಗಣೇಶನ ಸ್ಟೋರಿ  ಸಿ.ಪಿ. ರವಿಕುಮಾರ್  (ಈ ಪದ್ಯ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ೨೦೧೩ ಸೆಪ್ಟೆಂಬರ್  ತಿಂಗಳಲ್ಲಿ ಪ್ರಕಟವಾಗಿದೆ.) ಎಲ್ಲಾ ಆಬ್ಸ್ಟೆಕಲ್ಸ್ ರಿಮೂವ್ ಮಾಡಪ್ಪಾ ಅಂತ ಕೋರಿ ಹೇಳ್ತೀನಿ ಕೇಳಿ ಇಂದಿನ ಮಕ್ಕಳಿಗೆ ಗಣೇಶನ ಸ್ಟೋರಿ  ।। ಸ್ವೀಟೀ, ಹೇಳ್ತೀನಿ ಕೇಳು ಗಣೇಶನ ಕತೇನ ಸೆಲಿಬ್ರೇಟ್ ಮಾಡೋದಕ್ಕೆ ಅವನ ಬರ್ತ್ ಡೇನ ಅವನ ಮಮ್ಮಿ ಡಬಲ್ ಲೇಯರ್  ಚಾಕ್ಲೇಟ್ ಕೇಕ್ ಮಾಡಿದ್ಲು ಯಾಕೇಂದ್ರೆ ಗಣೇಶಂಗೆ  ಎರಡು ಸ್ವೀಟ್ ಟೂತ್  ಇತ್ತು ದೊಡ್ಡದು ಅರ್ಧ ಕೊಟ್ರೆ ಸಾಲ್ದು ನನಗೆ ಅಷ್ಟೂ ಬೇಕು ಅಂತ ಭಾರ ಆಯ್ತು ಹೊಟ್ಟೆ ತಿಂತಾ ತಿಂತಾ ಅಯ್ಯೋ ಇನ್ನೂ ಏನೇನೋ ಇದೆ ತಿನ್ನೋದಕ್ಕೆ ಮಜಾ ಮಜಾ ತಿಂಡಿ! ನೀನು ಕೇಕ್ ನಲ್ಲೇ ಹೊಟ್ಟೆ ತುಂಬ್ಕೊಂಡಿ! ವಾಕಿಂಗ್ ಹೋಗ್ ಬಾ ಒಂದು ರೌಂಡು, ಫ್ರೆಂಡ್ಸ್ ಬರೋದಕ್ಕೆ ಮುಂಚೆ ತಿಂದಿದ್ದು ಕರಗಿ ಸ್ವಲ್ಪ ಹಸಿವೆ ಆಗುತ್ತೆ ಗಣೇಶನ ಹತ್ರ ಒಂದು ಮಿಕ್ಕಿ ಮೌಸ್ ಇತ್ತು ಅದರ ಮೇಲೆ ಕೂತ್ಕೊಂಡು ಹೊರಟ ಟುಕುಟುಕು ಅಲ್ಲೊಂದು ಸ್ನೇಕ್ ಇತ್ತಂತೆ ಭುಸ್ ಅಂತ ಹೆಡೆ ಬಿಚ್ಕೊಂಡು ಮಿಕ್ಕಿ ಪುಕ್ಕಲ !  ಓಡಿದ ನೋಡು ಗಣೇಶನ್ನೂ ಹೊತ್ಕೊಂಡು! ಪಾಪ ಮುಗ್ಗರಿಸಿ  ಬಿದ್ದ ಒಂದು ಕಡೆ ಅರ್ಧ ಮುರೀತು ಗಣೇಶನ ಒಂದು ಸ್ವೀಟ್ ದವಡೆ ಪಾಪ ಢಮ್ ಅಂತ ಒಡೆದು ಗಣೇಶನ ಸ್ಟಮಕ್ಕು ಚೆಲ್ಲಾಪಿಲ್ಲಿ ಆಗೋಯ್ತು ...

ಚಂದ್ರನ ಅಂಗಿ

ಇಮೇಜ್
ಮೂಲ ಹಿಂದಿ ಬಾಲಕವಿತೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್  ಹೀಗಾಯಿತು ಒಮ್ಮೆ, ಚಂದ್ರಮನು ಗೋಗರೆದ ತಾಯ ಬಳಿ ಬಂದು  "ಅಮ್ಮಾ! ಹೊಲಿಸಿಕೊಡು ಚಂದದ ಅಂಗಿ ನನಗೊಂದು  ನೋಡಮ್ಮಾ ಬರಿಮೈಯಲಿ ತಿರುಗುವೆ ಹನ್ನೆರಡೂ ಮಾಸಗಳು  ಬಿಸಿಲು ಮಳೆ ಚಳಿಗಾಳಿಯಲ್ಲಿ ನಲುಗುತ್ತಿದೆ ಹೊಂದೊಗಲು!" ತಾಯಿಗೆ ನಗು ಬಂತು  ಕೊಟ್ಟಳು  ಹೂಮುತ್ತು  "ಮಗೂ! ನನಗೆ ತಿಳಿಯದೇನಪ್ಪ ನಿನ್ನ ಕಷ್ಟ ಕೊರತೆ? ಏನು ಮಾಡಲಿ! ಬದಲಾಯಿಸುವೆ ನೀನು ಪ್ರತಿದಿನವೂ ಅಳತೆ! ಪೂರ್ಣನಾಗುವೆ ಒಮ್ಮೆ, ಅರೆಮೈಯೊಮ್ಮೆ, ಕೆಲವೊಮ್ಮೆ ಸಂಪೂರ್ಣ ಮಾಯ!" ಬಾಡಿತು ಇಂದುಮುಖ, ಮರುಕ್ಷಣ  ಅರಳಿತು, ಹೊಳೆಯಿತು ಒಂದು ಉಪಾಯ! "ಸರಿಯಮ್ಮಾ! ಹೊಲಿಸಿಬಿಡು ಹಾಗಾದರೆ ಹೊಸಬಟ್ಟೆ  ಒಂದಲ್ಲ ಹದಿನೈದು  ಧರಿಸುವೆ ಒಪ್ಪುವಳತೆಯ ಚಂದದಂಗಿ ಪ್ರತಿದಿನ ಬೇರೊಂದು!" Translation by C.P. Ravikumar of a Children's Poem in Hindi by Ramdhari Singh "Dinakar"