ಪೋಸ್ಟ್‌ಗಳು

Childhood ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಶಾಲೆಗೆ ಏಕೆ ತಡವಾಯಿತು

ಇಮೇಜ್
ಮೂಲ: ಸ್ಟೀವ್ ಟರ್ನರ್ ಬೆಳಗ್ಗೆ ಏಳುವುದು ತಡವಾಯಿತು ಏಕೆಂದರೆ ವಿಪರೀತ ಸುಸ್ತಾಗಿತ್ತು. ಯಾಕೆ ಸುಸ್ತಾಯಿತು ಅಂದರೆ  ರಾತ್ರಿ ಮಲಗುವುದು ತಡವಾಗಿತ್ತು  ಮಲಗಿದ್ದು ತಡವಾಯ್ತೇಕೆ ಎಂದರೆ  ಹೋಂವರ್ಕ್ ಮಾಡುತ್ತಿದ್ದೆ ಹೋಂವರ್ಕ್ ಮಾಡುತ್ತಿದ್ದದ್ದು ಯಾಕೆಂದರೆ ನಮ್ಮ ಟೀಚರ್ ಕೊಟ್ಟರು, ಅದಕ್ಕೇ. ಅವರು ಯಾಕೆ ಹೋಂ ವರ್ಕ್ ಕೊಟ್ಟರು ಅಂದರೆ ನನಗೆ ಶಾಲೆಯಲ್ಲಿ ಅರ್ಥ ಆಗಲಿಲ್ಲ. ಯಾಕೆ ಅರ್ಥ ಆಗಲಿಲ್ಲ ಅಂದರೆ ನಾನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ. ಯಾಕೆ ಕೇಳಿಸಿಕೊಳ್ಳಲಿಲ್ಲ ಅಂದರೆ ನಾನು ಕಿಟಕಿಯ ಹೊರಗೆ ನೋಡ್ತಿದ್ದೆ ಯಾಕೆ ನೋಡ್ತಿದ್ದೆ ಅಂದರೆ  ಅಲ್ಲಿ ಮೋಡ ಕಾಣಿಸಿತು ಹೀಗಾಗಿ ಸರ್ ನಾನು ಲೇಟಾಗಲು  ಒಂದು ಮೋಡ ಕಾರಣ.

ಒಬ್ಬಂಟಿ

ಇಮೇಜ್
 ಒಬ್ಬಂಟಿ ಮೂಲ: ಎಡ್ಗರ್ ಆಲನ್ ಪೋ  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಬಾಲ್ಯದಿಂದಲೂ ನಾನು ಇತರಿರಿಗಿಂತ ಭಿನ್ನ ನನ್ನ ಕಣ್ಣು ಕಾಣಲಿಲ್ಲ ಅವರು ಕಂಡದ್ದನ್ನ ತರಲಿಲ್ಲ ನಾನು ನನ್ನ ಭಾವಬಂಧ ಸಾರ್ವಜನಿಕ ಸರೋವರದಿಂದ  ನನ್ನ ದುಃಖಗಳ ಮೂಲ ಹುಡುಕಿದರೆ ಅದು ಸಾಮಾನ್ಯ ಸ್ರೋತಕ್ಕಿಂತ ಬೇರೆ ಎಲ್ಲರ ಮನಕ್ಕೂ ಮುದ ತರುವ ಇಂಚರ ನನ್ನೆದೆಯಲ್ಲಿ ತರದು ಯಾವುದೇ ಸಂಚಾರ ಮತ್ತು ಯಾವುದಕ್ಕೆ ಒಲಿಯಿತೋ ನನ್ನ ಮನ ಅಲ್ಲಿ ನನ್ನನ್ನುಳಿದು ಇರಲಿಲ್ಲ ಬೇರೆ ಜನ. ಎಂದೋ ಒಂದು ದಿನ ನನ್ನ ಬಾಲ್ಯದಲ್ಲಿ ಗುಡುಗುಮಳೆ ಜೀವನದ ಮುಂಬೆಳಗಿನಲ್ಲಿ ಒಳಿತು ಕೆಡಕುಗಳ ಆಳಗಳಿಂದೆದ್ದು ಬಂದ ರಹಸ್ಯಮಯ ಬಳ್ಳಿಯದೇ ಇಂದಿಗೂ ಬಂಧ: ಹಿಂಬಾಲಿಸುತ್ತದೆ ನನ್ನನ್ನು ಹೋದಲ್ಲೆಲ್ಲ ಇಣುಕುತ್ತದೆ ಮಳೆಯಲ್ಲಿ, ಇಣುಕುತ್ತದೆ ಹೊಳೆಯಲ್ಲಿ, ಕೆಂಪಾದ ಬೆಟ್ಟಗಳ ತುತ್ತತುದಿಯಲ್ಲಿ ಶಿಶಿರದ ಹೊಂಬೆಳಕಿನಲ್ಲಿ ಮಿಂದೆದ್ದ ಸೂರ್ಯ ಪೂರೈಸಿದಾಗ ನನ್ನನ್ನು ಸುತ್ತುವ ಕಾರ್ಯ ಮಳೆಯ ರಾತ್ರಿ ನನ್ನ ಮೇಲೆ ಕಪ್ಪು ಆಗಸದಲ್ಲಿ ಮಿಂಚಾಗಿ ಹೊಳೆಯುವುದು ಹಿನ್ನೆಲೆಯಲ್ಲಿ ಅಲ್ಲೊಂದು ಕಾರ್ಮೋಡ  ಉರುಳುತ್ತ ಬಂದು ನಿಂತಲ್ಲಿ ಕೋರೆ ದಾಡೆಗಳ ಬಾಯ್ತೆರೆದು ಸ್ವರ್ಗದಲ್ಲಿ ಬೇರೆಲ್ಲವೂ ನೀಲಿಯಾಗಿದ್ದರೂ ಕೂಡಾ ರಾಕ್ಷಸನಂತೆ ನನಗೆ ತೋರುತ್ತದೆ ಮೋಡ.

ಕಡಲ ಕಿನಾರೆಯಲ್ಲಿ

ಇಮೇಜ್
 ಕಡಲ ಕಿನಾರೆಯಲ್ಲಿ ಮೂಲ: ರಾಬರ್ಟ್ ಲೂಯಿ ಸ್ಟೀವನ್ಸನ್ ಅನುವಾದ: ಸಿ ಪಿ ರವಿಕುಮಾರ್ ಕಡಲ ಕಿನಾರೆಗೆ ಹೋಗಿದ್ದೆ ನಾನು ಮರದ ಚುಚ್ಚುಕವನನ್ನು ಕೈಯಲ್ಲಿ ಹಿಡಿದು ಮರಳನ್ನು ಅಗೆದಗೆದು ತೆಗೆದೆ ಹೊರಗೆ. ಅಗೆದಲ್ಲಿ ಒಂದೊಂದು ಮರಳಿನ ಬಟ್ಟಲು, ಒಂದೊಂದರಲ್ಲೂ ಬಂದುಬಿಟ್ಟಿತು  ಕಡಲು, ಇನ್ನು ಬಾರಲು ಸಾಧ್ಯವಾಗದವರೆಗೆ.

ಕಾಫಿ ಬಂತು ಕಾಫಿ

ಇಮೇಜ್
ಮೂಲ: ಈ ಎಲ್ ಸಿಲ್ವೆಸ್ಟರ್ ಅನುವಾದ: ಸಿ ಪಿ ರವಿಕುಮಾರ್ ಪರಿಮಳ ತರುವಳು ಕಾಫಿಯ ಕಿತ್ತಲಿ, ಹೊಮ್ಮುವ ಬಿಸಿಬಿಸಿ ಕಾಫಿ ಹೊಗೆ! ತರುವಳು ಹರಿಣಿ ಹಾಲಿನ ಗಿಂಡಿ, ನಗುತಿದೆ ನೊರೆಹಾಲು ಮುಗುಳುನಗೆ! ಗಾಜಿನ ಬಟ್ಟಲು ತಂದಳು ಕಮಲಾ ನೋಡಿರಿ ಕಿಣಿ ಕಿಣಿ ಎನಿಸುತ್ತಾ! ಫಳ ಫಳ ಹೊಳೆಯುವ ಚಮಚದ ಗೊಂಚಲು ತಂದಳು ನೋಡಿ ಚಾರುಲತಾ! ಎಲ್ಲರಿಗಿಂತ ಕೊನೆಗೆ ಬಂದಿತು ನಮ್ಮ ಪುಟ್ಟಿ ತೂರಾಡುತ್ತಾ ಸಿಹಿಯಲ್ಲವೇ  ನೀನೆಲ್ಲರಿಗಿಂತ, ಸಕ್ಕರೆ ತಂದೆಯಾ, ಬಾ ಪುಟ್ಟಾ !

ಪಡಲ್ ಆಟ

ಇಮೇಜ್
  ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು!* ಮಳೆ ಬಂದಾಗ ಮೈದಾನದಲ್ಲಿ ನೀರು ನಿಂತಾಗ ನೀನೂ ಬಂದು ಜೊತೆ ಸೇರು ಆಡೋಣ ಅತ್ತಕಡೆಯಿಂದಿತ್ತಕಡೆ ಹಾರಿ ಮತ್ತೆ ಇತ್ತಕಡೆಯಿಂದತ್ತಕಡೆ ಹಾರಿ ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! ನೋಡು ನಾನೇ ಹನುಮಂತನಂತೆ ಅದೇ ಲಂಕೆ, ನಡುವೆ ಕಡಲಂತೆ ನೋಡು ಒಂದೇ ಸಲ ಹಾರಿ ಬಂದು ನಿಂತೆ ನೀನೂ ಬಂದರೆ ಜೊತೆಗೇ ಆಡೋಣವಂತೆ  ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! ಛಪ್ ಎಂದು ಕಡಲಲ್ಲಿ ಹಾರಿಸೋಣ ಕೊಚ್ಚೆ ಅಮ್ಮ ಕರೆಯುವವರೆಗೂ ಮನಸೋ ಇಚ್ಛೆ  ಏನೀಗ ಕೊಳೆಯಾದರೆ ಒಂದಿಷ್ಟು ಬಟ್ಟೆ ಒಗೆದರೆ ಬಿಳಿಯಾಗದೇ ಇರುವುದೇ ಮತ್ತೆ! ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! (*ಪಡಲು - puddle. ಮಳೆ ಬಂದಾಗ ನೀರು ಸೇರಿ ಉಂಟಾಗುವ ಪುಟ್ಟ ಹೊಂಡ) ಸಿ ಪಿ ರವಿಕುಮಾರ್

ಅರ್ಧ ದಾರಿ ಮೇಲೆ

ಇಮೇಜ್
ಮೆಟ್ಟಿಲನೇರುತ ನಡುವಿನ ಮೆಟ್ಟಿಲ ಮೇಲೆ ಕೂಡುವೆನು ನಾನು ಇದುವೇ ನನ್ನಯ ಮೆಚ್ಚಿನ ಮೆಟ್ಟಿಲು, ಏತಕೆ ಎನ್ನುವಿರೇನು? ಮೇಲೂ ಅಲ್ಲದ ಕೆಳಗೂ ಅಲ್ಲದ ನಡುವಣ ಮೆಟ್ಟಿಲು ಚೆನ್ನ ಕುಳಿತುಕೊಳ್ಳದೇ ಇದ್ದರೆ ಅಲ್ಲಿ, ಕರಗದು ತಿಂದ ಮೊಸರನ್ನ. ಅಂತ್ಯವಲ್ಲ , ಆರಂಭವೂ ಅಲ್ಲ ಎಲ್ಲೋ ಇದೆ ನಡುವಿನಲಿ! ಮುಂದಿನ ಬೆಂಚಿನ ಮೌನಿಯೂ ಅಲ್ಲ, ಅಲ್ಲ ಹಿಂದಿನ ಬೆಂಚ್ ವಾಚಾಳಿ! ಏನೇನೋ ಆಲೋಚನೆ, ಕಲ್ಪನೆ, ಬರುವುವು ಇಲ್ಲಿ ಕುಳಿತಾಗ, ಕೇಳದಿರಿ ಆಲೋಚನೆ ಏತಕೆ ಏಐ ಏರ್ ಪ್ಲೇನ್ ಏರಿರುವಾಗ! ಮೂಲ: ಏ ಏ ಮಿಲ್ನ್  ಭಾವಾನುವಾದ: ಸಿ. ಪಿ. ರವಿಕುಮಾರ್

ಅಪ್ಪಿಕೋ ಆಟ

ಇಮೇಜ್
ನಾನು ಆಡುವುದಿಲ್ಲ ಹಗ್ಗ ಎಳೆಯುವ ಆಟ ಅಪ್ಪಿಕೊಳ್ಳುವ ಆಟವೇ ನನಗೆ ಇಷ್ಟ ಎಳೆದಾಡುವುದಿಲ್ಲ ಈ ಆಟದಲ್ಲಿ ಯಾರೂ ಅಪ್ಪಿಕೊಳ್ಳುವರು ಎಲ್ಲರೂ ಒಬ್ಬರನ್ನೊಬ್ಬರು  ಹೊರಳಾಡಿ ಚಾಪೆಯ ಮೇಲೆ ಎಬ್ಬಿಸುತ್ತಾ ನಗೆಯ ಅಲೆ  ಹಲ್ಲು ಬಿಡುವರು ಹಿಹಿಹಿ! ಬಹುಮಾನ ಅಪ್ಪುಗೆಯ ಸಿಹಿ! ಎಲ್ಲರೂ ಗೆಲ್ಲುವುದು ಈ ಆಟದ ಹೂಟ! ಮೂಲ: ಶೆಲ್ಬಿ ಸಿಲ್ವರ್ಸ್ಟೀನ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಪೇಪರ್ ಗೊಂಬೆ

ಇಮೇಜ್
ಬೊಂಬೆ ಮಾಡಿ ತೋರಿಸೇ ಅಕ್ಕಾ ಇಗೋ ಕತ್ತರಿ, ಕಾಗದ! ಬೇರೆ ಕೆಲಸ ಇಲ್ಲವೇ ನನಗೆ  ನಿನಗೆ ಸುಮ್ಮನೆ ಕೂಡಲು ಆಗದಾ! ಬೇಸಗೆ ರಜೆ ಅಲ್ಲವೇನಕ್ಕಾ ಶಾಲೆಗೆ ಬಿಡುವಿದೆಯಲ್ಲ! ರಜೆಯಲ್ಲೂ ಹೋಮ್  ವರ್ಕ್ ಕೊಟ್ಟಿದ್ದಾರೆ ಮಿಸ್ ಸರಳಾ ನಮಗೆಲ್ಲ! ಹೋಮ್ ವರ್ಕ್ ಅಂದರೆ ಏನೇ ಅಕ್ಕಾ ನನಗಂತೂ ಗೊತ್ತಿಲ್ಲ! ಏನು ಮಾಡಿದಿರಿ ರಜೆಯಲ್ಲೆಂದು ಬರೆಯಬೇಕು ನಾವೆಲ್ಲ! ತಂಗಿಗೆ ಗೊಂಬೆ ಮಾಡಿದ್ದನ್ನೇ  ಬರೆಯಬಹುದಲ್ಲ ನೀನು! ಒಳ್ಳೆಯ ಐಡಿಯಾ ಕಣೇ ಜಾಣಮರಿ! ಬಾ, ಮಾಡಿಕೊಡುವೆ ಪೇಪರ್  ಮೀನು!

ಬೊಂಬೆಯ ಸ್ನಾನ

ಇಮೇಜ್
ತಮ್ಮಾ ತಾರೋ ನೀರು, ಒಂದು ಕೊಡಪಾನ, ಸುಮ್ಮನೆ ನಿಲ್ಲಬೇಡ ನೋಡುತ್ತಾ! ಈವತ್ತು ವಿಶೇಷ ಏನೆಂದು ಗೊತ್ತಾ? ನನ್ನ ಗೊಂಬೆಗೆ ನಾನು ಮಾಡಿಸುವೆ ಸ್ನಾನ! ತೊಗೊಂಡು ಬಾ ಹಾಗೇ ಸ್ಯಾಂಡಲ್ ಸೋಪು, ಹಾಗೂ ಬಿಳಿಯ ಟರ್ಕಿ ಟವಲ್ಲು! ಓಡಿಬಿಡವೋ, ಕೇಳಿಸಿಕೋ, ನಿಲ್ಲು! ಹಾಗೇ ತೊಗೊಂಡು ಬಾ ಕೂದಲಿಗೆ ಶಾಂಪೂ! ಹಾಗೆಲ್ಲ ಸ್ನಾನಕ್ಕೆ ಅಳಬಾರದು ಕಣೇ  ಕಣ್ಣಲ್ಲಿ ಹೋಗಿಬಿಡುತ್ತೆ ಸೋಪು  ನೀನಲ್ಲವೇ ನನ್ನ ಮುದ್ದು ಪಾಪು ಅಳುವುದೇ ಇಲ್ಲ, ತುಂಬಾ ಜಾಣೆ  ತಲೆ ಒರೆಸುತ್ತೇನೆ ತಾಳು  ಶೀತಗೀತ ಆದೀತು ಎಲ್ಲಾದರೂ ಹಾಕುತ್ತೇನೆ ಹಿಡಿ ಘಮಘಮ ಪೌಡರು ಬಾಚುವುದೇ ಕಷ್ಟ, ಗುಂಗುರು ಕೂದಲು! ತಮ್ಮಾ ನೋಡೋ ಹೇಗೆ ಕಾಣುತ್ತಿದೆ ಮಗು! ಇಡುತ್ತೇನೆ ಗಲ್ಲಕ್ಕೆ ದೃಷ್ಟಿ ಬೊಟ್ಟು, ತಾಳು! ಓಡಿ ಹೋಗಬೇಡವೋ, ನಿಲ್ಲು ನಿಲ್ಲು! ಸ್ನಾನ ಮಾಡಿಸುತ್ತೇನೆ ಬಾ ಇಲ್ಲಿ ನಿನಗೂ!

ನನ್ನ ಪುಟ್ಟ ದೋಣಿ

ಇಮೇಜ್
  ನನ್ನ ಪುಟ್ಟ ದೋಣಿಯನ್ನು  ನೀರಿನಲ್ಲಿ ತೇಲಿಬಿಟ್ಟು ಮುಂದೆ ಸಾಗು ಎಂದು ನಾನು ಅಣತಿ ಮಾಡಿದೆ! ಇಲ್ಲ ದೋಣಿ ಸಾಗಲಿಲ್ಲ, ಮುಂದೆ ಮುಂದೆ ಹೋಗಲಿಲ್ಲ, ನಿಂತು ನನ್ನ ಅಣಕಿಸಿತು, ಮುಂದೆ ಕದಲದೆ! ನನ್ನ ಗೆಳತಿ ಸಪ್ಪೆ ಮೋರೆ ಹಾಕಿಕೊಂಡು ನೋಡಿದಳು, ದೋಣಿ ಏಕೆ ತೇಲದೆಂದು ಅವಳ ಕಾತುರ! ಕೈಗಳಿಂದ ನೀರು ಬಡಿದು ಅಲೆಯ ಮಾಡಿ ತಳ್ಳಿದಾಗ ದೋಣಿಯಲ್ಲಿ ಕಂಡು ಬಂತು ತೇಲುವಾತುರ! ಬೀಸಿತಾಗ ತಂಪು ಗಾಳಿ ಅಲುಗತೊಡಗಿ ದೋಣಿ ಹಾಯಿ ಕಾಣಬಂತು ಅದರ ನಡೆಯೊ- ಳೊಂದು ಸಂಭ್ರಮ! ದೋಣಿ ತೇಲುವುದನು ಕಂಡು ಚಪ್ಪಾಳೆಯ ತಟ್ಟಿ ನನ್ನ ಕೈಯ ಹಿಡಿದು ಮಾಡಿದಳು ಗೆಳತಿ, ನರ್ತನ!

ಬಣ್ಣದ ತುತ್ತೂರಿ

ಇಮೇಜ್
ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ ಪಿಪಿಪಿಪಿ ಪೀಪಿ ಊದಿದನು ಪೀಪೀಪೀಪೀ ಮಾಡಿದನು ಸಾಕೋ ನಿಲ್ಲಿಸು ಎಂದೆಲ್ಲಾ ಕೂಗಿ ಎಲ್ಲರಿಗೂ ಸುಸ್ತೂ ರೀ! ಕೋಪ ಬಂದಿತು ಅಪ್ಪನಿಗೆ ಬೆನ್ನಿಗೆ ಎರಡು ಬಿತ್ತೂ ರೀ! ಪೀಪೀ ಎಂದನು ಕಸ್ತೂರಿ ಗಳಗಳ ಅಳುತ್ತಾ ಕಸ್ತೂರಿ ಅಳುವ ಸದ್ದು ಕೇಳಿದವರೆಲ್ಲ "ಪೀಪೀ ಸದ್ದೇ ಚೆನ್ನಾಗಿತ್ತೂ ರೀ!"

ಅಜ್ಜಿಯ ವೇಷ

ಇಮೇಜ್
  ಉಡಿಸಮ್ಮಾ ಅಜ್ಜಿಯ ಜರಿಸೀರೆ! ತೊಡಿಸಮ್ಮಾ  ಕನ್ನಡಕ! ನಾನೂ ಹಾಕುವೆ ಅಜ್ಜಿಯ ವೇಷ ಧ್ವನಿಯಲಿ ನಟಿಸುತ ನಡುಕ! ಟವೆಲ್ ಸುತ್ತಿದರೂ ಪರವಾಗಿಲ್ಲ, ಸೀರೆಯು ತುಂಬಾ ಉದ್ದ! ಓಡಾಡಲು ತೊಂದರೆ ಆಗುವುದು ಬಿದ್ದರೆ ಅಯ್ಯೋ ಸದ್ಯ! ಮೂಗಿನ ಮೇಲೆ ಜಾರುವುದಮ್ಮಾ ಅಜ್ಜಿಯ ಹಳೇ ಚಷ್ಮಾ! ಮೇಲೇರಿಸಿ ದುರುಗುಟ್ಟುವೆ ನೋಡು, ಮುಂದಿದ್ಧವರು ಭಸ್ಮ! ಅಬ್ಬಾ ಏನು ಸೆಖೆ, ಸಾಕಾಯ್ತು, ನಿಂಬೆಯ ಪಾನಕ ಮಾಡೇ! ಬರುತಿದೆಯಲ್ಲೇ ಸುಟ್ಟ ವಾಸನೆ, ಹಾಲು ಉಕ್ಕಿತೋ ನೋಡೇ! ಮೂರು ಹೊತ್ತೂ ಈ ಹಾಳು ಮೊಬೈಲು ಎಲ್ಲಾ ಕೆಲಸ ಹಾಳು! ಕುಕ್ಕರ್ ಕೂಗಾಯಿತು ಮೂರು ಸಲ ಒಲೆ ಆರಿಸು ಮೇಲೇಳು! ಮೊಮ್ಮಗಳಿಗೆ ಮಲ್ಲಿಗೆಜಡೆ ಹಾಕಿ ನೋಡುವ ಆಸೆ ಇತ್ತು! ಯಾರು ಕೇಳುವರು ನಾ ಹೇಳಿದ್ದು ಮಾಡಿಕೊಂಡೆ ಬಾಬ್ ಕಟ್ಟು! ಉಡಿಸಮ್ಮಾ ಅಜ್ಜಿಯ ಜರಿಸೀರೆ! ತೊಡಿಸಮ್ಮಾ  ಕನ್ನಡಕ! ನಾನೂ ಹಾಕುವೆ ಅಜ್ಜಿಯ ವೇಷ ಧ್ವನಿಯಲಿ ನಟಿಸುತ ನಡುಕ!

ಜೀವನವೊಂದು ಕನಸು

ಇಮೇಜ್
 ಮೂಲ: ಲೂಯಿಸ್ ಕ್ಯಾರಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಹೊಳೆಯುವ ಸೂರ್ಯನ ಕೆಳಗೊಂದು ದೋಣಿ ಕನಸೋ ಎಂಬಂತೆ ಮುಂದೆ ಸಾಗುತ್ತಿದೆ ತೇಲಿ ಜುಲೈ ತಿಂಗಳ ಸಾಯಂಕಾಲದಲ್ಲಿ. ಮೂವರು ಮಕ್ಕಳು ಕೂಡುತ್ತಾರೆ ಹತ್ತಿರ ಕಣ್ಣಲ್ಲಿ ಕಿವಿಯಲ್ಲಿ ತುಂಬಿರುವ ಕಾತರ ಕತೆಯೊಂದನ್ನು ಕೇಳಬೇಕೆಂಬ ಆತುರ. ಇಂದು ಪೇಲವವಾಗಿದೆ ಅಂದು ಹೊಳೆದ ಆಕಾಶ ಶಾಂತವಾದಂತೆ ಪ್ರತಿಧ್ವನಿ, ಬರಿದಾದಂತೆ ಸ್ಮೃತಿಕೋಶ ಸತ್ತು ಬಿದ್ದಿದೆ ಜುಲೈ ತಾಳಲಾರದೆ ಶಿಶಿರದ ಆಕ್ರೋಶ. ನನ್ನನ್ನು ಅವಳು ಇನ್ನೂ ಕಾಡುತ್ತಾಳೆ ಭೂತವಾಗಿ, ಆಲಿಸ್, ಮೋಡಗಳಲ್ಲಿ ತೇಲುತ್ತಾ ಸಾಗಿ, ಜಾಗೃತ ಕಣ್ಣುಗಳಿಂದ ನೋಡಲಾಗದ ಹುಡುಗಿ. ಕಥೆ ಎಂದರೆ ಇನ್ನೂ ಆಸೆ ಮಕ್ಕಳಿಗೆ ಕಣ್ಣಲ್ಲಿ ಕುತೂಹಲ, ಅಮೃತ ಕಿವಿಗಳಿಗೆ, ಲಗುಬಗೆಯಿಂದ ಬಂದು ಕೂಡುವರು ಬಳಿಗೆ. ಕೌತುಕಲೋಕದಲ್ಲಿ ವಿಹರಿಸುವರು ಅವರು ಕನಸುಗಳ ಕಾಣುತ್ತ ದಿನವ ಕಳೆಯುವರು ಬೇಸಗೆಗಳು ಬಂದರೂ ಬೇಸಗೆಗಳು ಮುಗಿದರೂ. ತೇಲುತ್ತಾ ಸಾಗುವರು ತೊರೆಯ ಹರಿವಿನಲಿ, ಬಂಗಾರದ ಬೆಳಕನ್ನು ಸ್ವೀಕರಿಸಿ ಅರಿವಿನಲಿ, ಜೀವನವೊಂದು ಕನಸಲ್ಲದೇ ಬೇರೇನು ಹೇಳಿ!

ಚೇಳಿನ ರಾತ್ರಿ

ಇಮೇಜ್
ಮೂಲ: ನಿಸ್ಸೀಮ್ ಎಳಿಕಿಯೆಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನೆನಪಿದೆ ನನಗೆ ನನ್ನ ತಾಯಿಯನ್ನು ಚೇಳು ಕಚ್ಚಿದ ರಾತ್ರಿ. ಹತ್ತು ಗಂಟೆ ನಿರಂತರ ಸುರಿದ ಮಳೆಗೆ ಬೇಸತ್ತು ಅಕ್ಕಿಯ ಚೀಲದ ಕೆಳಗೆ ಬಂದು ಸೇರಿಕೊಂಡಿತ್ತು. ಕೋಣೆಯ ಕತ್ತಲಿನಲ್ಲಿ  ತನ್ನ ಪೈಶಾಚಿಕ ಕೊಂಡಿಯಿಂದ ನೀಡಿ ವಿಷದ ಚುಚ್ಚುಮದ್ದು ಮತ್ತೊಮ್ಮೆ ಮಳೆಯನ್ನು ಎದುರಿಸಲು ನಿರ್ಧರಿಸಿತು. ನೊಣಗಳ ಹಿಂಡಿನ ಹಾಗೆ ಬಂದು ಸೇರಿದ ರೈತಾಪಿ ಜನ ಗುಂಯ್ ಗುಟ್ಟಿದರು ನೂರಾರು ಸಲ ದೇವರ ಹೆಸರನ್ನ ದುಷ್ಟಶಕ್ತಿಯನ್ನು ಮಾಡಲು ಶಮನ. ಕೈಯಲ್ಲಿ ಹಿಡಿದು ಲಾಂದ್ರ ಮೋಂಬತ್ತಿ ಮಣ್ಣಿನ ಗೋಡೆಯ ಮೇಲೆ ನಡೆದಾಡುತ್ತಿರಲು ಚೇಳುನೆರಳು  ಹೋದರು ಅದನ್ನು ಬೆಂಬತ್ತಿ ಯಾರಿಗಾದರೂ ಸಿಕ್ಕಿದ್ದರೆ ಕೇಳು. ಬಂದವರು ಲೊಚಗುಟ್ಟಿದರು. ಏನೇನೋ ಕತೆ ಕಟ್ಟಿದರು. ಚೇಳು ಓಡಾಡಿದಾಗೆಲ್ಲನಿನ್ನ ರಕ್ತದಲ್ಲೂ  ವಿಷ ಹರಡುವುದು ಎಂದರು. ಒಂದು ಕಡೆ ತೆಪ್ಪಗೆ ಬಿದ್ದಿದ್ದರೆ ಸಾಕು ಹಾಳಾದ್ದು! ನಿನ್ನ ಪೂರ್ವಜನ್ಮದ ಕರ್ಮ! ಸುಟ್ಟುಹೋಗಲಿ ಇಂದು! ಮುಂದಿನ ಜನ್ಮದ ನೋವು ಕಡಿಮೆಯಾಗುವುದು ಬಿಡು! ಜಗತ್ತಿನಲ್ಲಿದೆ ಕೆಟ್ಟದ್ದು ಒಳ್ಳೆಯದು ಎರಡೂ, ಕೆಟ್ಟದ್ದು ಒಂದಿಷ್ಟು ನಾಶವಾದೀತು!  ವಿಷವು ನಿನ್ನ ದೇಹವನ್ನು ಮಾಡಲಿ ಶುದ್ಧ, ನಶಿಸಲಿ ಮೋಹ,ಮತ್ಸರ,ಲೋಭ,ಕಾಮಕ್ರೋಧ! ಹೀಗೆ ಮಾತಾಡುತ್ತ ಕುಳಿತರು ಅಮ್ಮನ ಸುತ್ತ, ಅರಿವಿನಿಂದ ಶಾಂತವಾದಂತಿತ್ತು ಅವರ ಚಿತ್ತ. ಇನ್ನಷ್ಟು ಮೋಂಬತ್ತಿ, ಇನ್ನಷ್ಟು ಲಾಂದ್ರಗಳು, ಇನ್ನಷ...

ಕಟ್ಟುವೆನು ನಾನು

ಇಮೇಜ್
ಸ್ಫೂರ್ತಿ: ರಾಬರ್ಟ್ ಲೂಯಿ ಸ್ಟೀವನ್ಸನ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್ ನೋಡಿ ನಾನು ಮನೆಯಲ್ಲೇ ಏನೇನು ಕಟ್ಟಬಲ್ಲೆ! ಅರಮನೆ, ದೇವಸ್ಥಾನ, ಕೋಟೆ ಕೊತ್ತಲ ಕಿಲ್ಲೆ! ಸುರಿದುಕೊಳ್ಳಲಿ ಎಷ್ಟು ಸುರಿಯುತ್ತದೋ ಮಳೆ, ನಾನಂತೂ ಕಟ್ಟುವ ಆಟ ಆಡುವೆ ಮನೆಯಲ್ಲೇ! ಮೇಜು ಕುರ್ಚಿಗಳೆಲ್ಲ ಆಗಿ ಬೆಟ್ಟದ ಸಾಲು, ಕೆಳಗೆ ಹಾಸಿದ ಚಾಪೆ ಆಗುವುದು ಕಡಲು! ಗೋಡೆ ಕಟ್ಟುವೆ ಸುತ್ತ ಪುಸ್ತಕಗಳ ಪೇರಿಸಿ, ಕಟ್ಟುವೆನು ಗುಡಿಗೋಪುರ, ಧ್ವಜವ ಮೇಲಿರಿಸಿ! ನಾಲ್ಕು ಕಂಬಗಳಿವೆ ನನ್ನ ಪುಸ್ತಕದರಮನೆಗೆ, ಚಾದರದ ಗೋಪುರವನೆಬ್ಬಿಸುವೆ ಕೊನೆಗೆ, ಮೇಲಿಂದ ರಾಜ ಮೆಟ್ಟಿಲು ಇಳಿಯುತ್ತಾ ಬಂದರೆ, ಸಿದ್ಧವಾಗಿದೆ ಕೆಳಗೆ ಜಹಜುಗಳ ಬಂದರೇ! ಅಮ್ಮನ ಪಾತ್ರೆಗಳೆಲ್ಲವೂ ನನ್ನ ಪಾಲು! ಸಾಲಾಗಿ ನಿಂತಿರುವ ಜಹಜುಗಳ ಸಾಲು! ಕಡಲಲ್ಲಿ ತೇಲುತ್ತಿವೆ ಒಂದೆರಡು ಬೋಟು, ಒಂದು ಅಕ್ಕನ ಪರ್ಸ್, ಒಂದು ತಾತನ ಕೋಟು!! ಗುಡಿಯ ಸುತ್ತಲೂ ದೀಪ ಹಚ್ಚಿಟ್ಟ ಹಾಗೆ ಹೇಗೆ ಮಾಡುವುದೆಂದು ಹೊಳೆದದ್ದೇ ನನಗೆ ತಂದು ಅಜ್ಜಿಯ ಭಾರೀ ಜರತಾರಿ ಸೀರೆ ಸುತ್ತಿರುವೆ, ನೋಡೋಣ ಏನನ್ನುತಾರೆ! ಮುಗಿಯಿತಲ್ಲ ಆಟ,ಕಟ್ಟಿದ್ದು ಸಾಕು ಈಗ ಕಟ್ಟಿದ್ದನ್ನು ಕೆಡವಲೇ ಬೇಕು ಕಟ್ಟಲು ಬೇಕಾಯಿತು ಒಂದೆರಡು ಗಂಟೆ ಕೆಡವಲು ಅಷ್ಟೆಲ್ಲಾ ವ್ಯವಧಾನ ಉಂಟೇ! ಕೋಣೆಯ ತುಂಬಾ ಬಿದ್ದಿರುವ ರಾಶಿ  ಸಾಮಾನು, ನೋಡುತ್ತಾ ಕಲ್ಪಿಸಿಕೊಳ್ಳುವೆ ಕಟ್ಟಬಹುದು ಬೇರೇನು, ನಡೆದೇ ಇರುತ್ತದೆ ಕೆಡವಿ ಕಟ್ಟುವ ಆಟ,  ಹೊಟ್ಟೆ ಹಾಕುತ್ತಿದೆ ತಾಳ, ಕರೆಯುತ...

ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ

ಇಮೇಜ್
 ಮೂಲ ಕವಿತೆ: ಶೆಲ್ ಸಿಲ್ವ್ವರ್ಸ್ಟೀನ್ ಅನುವಾದ: ಸಿ. ಪಿ. ರವಿಕುಮಾರ್ ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ ಚಿಟ್ಟೆಹುಳು ಹೇಳಿದ್ದೆಲ್ಲ ಅರ್ಥವಾಗುತ್ತಿತ್ತು ನನಗೆ ಕಾಜಾಣಗಳ ಹರಟೆಗೆ ಸೂಸುತ್ತಿದ್ದೆ ಗುಪ್ತನಗೆ ಮಲಗಿದ್ದಲ್ಲೇ ಹರಟುತ್ತಿದ್ದೆ ನೋಣವೊಂದರ ಜೊತೆಗೆ. ಜೀರುಂಡೆಯ ಎಲ್ಲ ಪ್ರಶ್ನೆಗಳಿಗೂ ಉತ್ತರವಿತ್ತು ನನ್ನಲ್ಲಿ ದನಿಗೂಡಿಸುತ್ತಿದ್ದೆ ಬೀಳುವ ಹಿಮಕಣಗಳ ಆರ್ತನಾದಕ್ಕೆ  ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ ಹೇಗಿತ್ತಪ್ಪ ಅದು, ಹೇಗಿತ್ತಪ್ಪ, ಮರೆತೇಹೋಯ್ತಲ್ಲ ಛೇ!

ಎಲ್ಲಿ ಮುಗಿಯುವುದೋ ಕಾಲ್ದಾರಿ

ಇಮೇಜ್
 ಮೂಲ ಕವಿತೆ: ಶೆಲ್ ಸಿಲ್ವರ್ಸ್ಟೀನ್ ಅನುವಾದ : ಸಿ. ಪಿ. ರವಿಕುಮಾರ್ ಎಲ್ಲಿ ಮುಗಿಯುವುದೋ ಕಾಲ್ದಾರಿ  ಮತ್ತು ಎಲ್ಲಿ ಮೊದಲಾಗುವುದೋ ಹೆದ್ದಾರಿ ಬೆಳೆವುದು ಮಕಮಲ್ ಹುಲ್ಲು ಅವುಗಳ ನಡುವಣ ಸ್ಥಳದಲ್ಲಿ ಸೂರ್ಯನು ಕೆಂಪಗೆ ಬೆಳಗುವನು ಆ ಸ್ಥಳದಲ್ಲಿ ಅಲ್ಲಿ ಸುಳಿದಾಡುವ ಮಲ್ಲಿಗೆಯ ಗಾಳಿಯಲ್ಲಿ  ಚಕ್ರವಾಕವು ನಿಂತು ದಣಿವಾರಿಸಿಕೊಳ್ಳುವುದು. ಕಪ್ಪು ಹೊಗೆ ಬುಸುಗುಡುವ ಈ ಸ್ಥಳವನ್ನು ಬಿಟ್ಟು ಹಾವಿನಂತೆ ಸುತ್ತುವ ಕತ್ತಲುದಾರಿಯನ್ನು ತೊರೆದು ಸಿಮೆಂಟ್ ಹೂಗಳು ಬೆಳೆವ ಹಳ್ಳಕೊಳ್ಳಗಳ ದಾಟಿ ನಡೆಯೋಣ ಮೆಲ್ಲಮೆಲ್ಲಗೆ ಹೆಜ್ಜೆಗಳನ್ನು ಊರುತ್ತಾ ಅಳೆದು ಗಮನಿಸುತ್ತಾ ಯಾವ ದಿಕ್ಕಿನ ಕಡೆಗೆ ಬೆರಳನ್ನು ತೋರುತ್ತಿವೆ  ಬಿಳಿ ಸೀಮೆಸುಣ್ಣದ ಬಾಣಗಳು ಕಾಲ್ದಾರಿ ಕೊನೆಗೊಳ್ಳುವ ಸ್ಥಳದ ಕಡೆಗೆ. ಹೌದು, ನಡೆವೆವು ನಾವು  ಹೆಜ್ಜೆಗಳನ್ನು  ಅಳೆದು ಇಡುತ್ತಾ ಮೆಲ್ಲಗೆ ಹೋಗುವೆವು ಬಿಳಿ ಸೀಮೆಸುಣ್ಣದ ಗೆರೆಗಳು ಹೋಗುವ ಕಡೆಗೆ ಏಕೆಂದರೆ ಮಕ್ಕಳು ಎಳೆಯುವರು ಗೆರೆ ಏಕೆಂದರೆ ಮಕ್ಕಳಿಗೆ ಗೊತ್ತು  ಎಲ್ಲಿ ಮುಗಿಯುವುದೋ ಕಾಲ್ದಾರಿ ಎಂದು.

ಕನಸು

ಇಮೇಜ್
 ಮೂಲ ಕವಿತೆ:  ವಿಲಿಯಂ ವರ್ಡ್ಸ್ವರ್ತ್ ಅನುವಾದ: ಸಿ. ಪಿ. ರವಿಕುಮಾರ್ ಎನ್ನೆದೆ ಕುಣಿದಾಡುವುದು ಕಂಡಾಗ ಕಾಮನಬಿಲ್ಲು! ಇದೇನು ಇಂದಿನ ಮಾತಲ್ಲ, ಚಿಕ್ಕಂದಿನಿಂದಲೂ ಮುಂದುವರೆದಿದೆ ನಾನೀಗ ಎತ್ತರದ ಆಳಾದರೂ ಇದು ಹೀಗೇ ಇರಲಿ ನೆರೆತಾಗ ತಲೆಗೂದಲು: ಇಲ್ಲದಿದ್ದರೆ ದೇವ ಕರುಣಿಸಲಿ ಸಾವು! ಮಾನವನ ತಂದೆಯಲ್ಲವೆ ಶಿಶು? ನನ್ನೆದೆಯಲ್ಲಿ ಬೆಳಕು ಬೀರುವುದೊಂದು ಕನಸು:  ಬೆಸೆದುಕೊಂಡಿರಲಿ ನನ್ನ ದಿನಗಳು ಒಂದಕ್ಕೊಂದು ಮಾನವಸಹಜ ಭಕ್ತಿಯಿಂದ ಎಂದು.

ರೂಪಾಯಿಗೆ ಇಪ್ಪತ್ತು

ಇಮೇಜ್
 "ರೂಪಾಯಿಗೆ ಇಪ್ಪತ್ತು" ಮೂಲ: ಟಾಮ್ ಬಾರ್ಲೋ ಅನುವಾದ: ಸಿ. ಪಿ. ರವಿಕುಮಾರ್ ಐದುಪೈಸೆಯ ನಾಣ್ಯಗಳ ಬಗ್ಗೆ ಯೋಚಿಸುತ್ತಿದ್ದೆ ಹುಡುಗರ ಜೋಬುಗಳಲ್ಲಿ ಝಣಝಣ ಎನ್ನುತ್ತ ಅಂಗಡಿಯ ಮುಂದೆ  ಹೋಗಿ ನಿಲ್ಲಲು ಧೈರ್ಯ ತುಂಬುತ್ತಿದ್ದವಲ್ಲ ಪೆಪ್ಪರಮಿಂಟು, ಹಾಲುಖೋವಾ, ಚಿಕ್ಕಿ, ಮಾವಿನಕಾಯಿ ವಾರದ ಸಂಬಳ ಪಡೆದ ದಿನಗೂಲಿ ಕೆಲಸಗಾರ  ಅಡ್ಡಾಡುವಂತೆ ಅಂಗಡಿಯಿಂದ ಅಂಗಡಿಗೆ. ಇವತ್ತು ದಾರಿಯಲ್ಲಿ ಬಿದ್ದಿತ್ತು ಐದುಪೈಸೆಯ ನಾಣ್ಯ, ಯಾರೋ ಎಂದೋ ಕಳೆದುಕೊಂಡದ್ದು, ಬಹಳ ದಿನಗಳಿಂದ ಅಲ್ಲೇ ಇದ್ದಿರಬಹುದು, ಧೂಳು ಸೇರಿಕೊಂಡಿತ್ತು. ನಾನು ಅಲ್ಲೇ ಬಿಟ್ಟು ನಡೆದೆ. ರೂಪಾಯಿಗೆ ಇಪ್ಪತ್ತು ಸಿಕ್ಕುತ್ತವೆ ಕೈತುಂಬಾ ಭಿಕ್ಷೆಯವನೂ ಮೂಸಿ ನೋಡದ ವಸ್ತು. ಅವನಿಗೆ ಗೊತ್ತು ಐದುಪೈಸೆಯ ನಾಣ್ಯದ ಬೆಲೆ ಏನಿದ್ದರೂ ಅಲ್ಲಾಡುವ ಮೇಜಿನ ಅಡಿಯಲ್ಲಿಡಲು ಅಷ್ಟೇ. ನಾನು ಇಟ್ಟುಕೊಂಡಿರುತ್ತೇನೆ ಒಂದನ್ನು ನನ್ನ ಬಳಿ, ಇಂದೇನು ಕುಡಿಯಲಿ ಗಾಳಿಯನ್ನೋ ಔಷಧವನ್ನೋ ಇತ್ಯಾದಿ ಮುಖ್ಯ ನಿರ್ಧಾರಗಳನ್ನು  ಕೈಗೊಳ್ಳಲು. ಕಾಲಾಂತರದಲ್ಲಿ ನಾವೆಲ್ಲರೂ ಕುಗ್ಗುತ್ತೇವೆ, ಹುಡುಗನ ಬೊಗಸೆಯಿಂದ ನಡುಗುವ ಕೈಗಳಿಗೆ. ಕೈಗಳಿಂದ ಜಾರಿಹೋಗುತ್ತವೆ ನಾಣ್ಯಗಳು ಜಾರಿ ಉರುಳಿ ಬೀದಿಯಲ್ಲಿ ಎಲ್ಲೋ ಮಾಯವಾಗುತ್ತವೆ.

ಸ್ನೇಹಿತರು (ಮಕ್ಕಳ ಕವಿತೆ)

ಇಮೇಜ್
ಮೂಲ ಕವಿತೆ - ಆಬಿ ಫಾರ್ವೆಲ್ ಬ್ರೌನ್ ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ ಎಷ್ಟು ಚೆನ್ನ ಒಂದಷ್ಟು ಹೊತ್ತು ಈ ಮರದ ಕೆಳಗೆ ಅಂಗತ್ತ ಮಲಗಿ ಮೇಲ್ಗಡೆಯ ಹಸಿರು ಚಪ್ಪರವ ಕಣ್ಣುಮುಚ್ಚಿ ನೋಡುತ್ತ ಹಸಿರು ಚಪ್ಪರದ ಮೇಲೆ ಕಾಣುವುದು ಸ್ವಚ್ಛ ನೀಲ ಆಕಾಶ ನನ್ನ ಕಡೆಗೆ ನೋಡುತ್ತ ಬೀರುತಿದೆ ನಭನೀಲ ಮಂದಹಾಸ ಚಪ್ಪರದ ನಡುವೆ ತೂರುತ್ತ ಬಂದ ಹೊಂಗಿರಣ  ನವಿಲುಗರಿಯಂತೆ ಮುಖವನ್ನು  ಸವರಿ ಮುತ್ತಿಟ್ಟು ತೋರುವುದು ತಾಯ ಪ್ರೇಮ-ಮಮತೆ! ತಂಬೆಲರು ಹಾಡುವ ಮಧುರಗಾನ ಸವಿದಂತೆ ಮಧುರ  ಜೇನು ಕಾಣದಿದ್ದರೂ ರೂಪ, ಕಾಣುವೆನು ಅದರ ಪ್ರೀತಿ, ಒಲವನ್ನು ಇಷ್ಟೆಲ್ಲ ಸ್ನೇಹಿತರು ತೋರುತಿರುವಾಗ ಮಮಕಾರ, ಕರುಣೆ, ಪ್ರೀತಿ ಯಾವ ಮಗುವನೂ ಕಾಡಲಾರದು ಯಾವ ಬಗೆಯ ಭೀತಿ  (c) ಸಿ. ಪಿ. ರವಿಕುಮಾರ್, ೨೦೧೯