ಅಡಿಗರ "ಮಹಾಪೂರ"
ಅಡಿಗರಿಗೆ ನೂರರ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅವರ ಕವಿತೆ "ಮಹಾಪೂರ" ಕುರಿತು ಬರೆಯುವ ಮೂಲಕ ಅವರಿಗೆ ನನ್ನ ಗೌರವ ಅರ್ಪಿಸುತ್ತಿದ್ದೇನೆ. "ಮಹಾಪೂರ" ಎಂದರೆ ನೆರೆ. "ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು ಈ ಬಾಳಿಗಾ ಮಹಾಪೂರ!" ಎಂದು ಕವಿತೆ ಕೊನೆಗೊಳ್ಳುತ್ತದೆ. ಕವಿ ಯಾವ ಮಹಾಪೂರಕ್ಕಾಗಿ ಕಾಯುತ್ತಿದ್ದಾರೆ? ಕವಿತೆಯ ಪ್ರಾರಂಭದಲ್ಲೇ ಅದಕ್ಕೆ ಸುಳಿವಿದೆ. " ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ; " ಮನುಷ್ಯನ ಎದೆಯಿಂದ ಎದೆಗೆ ಒಂದು "ಅಮೃತವಾಹಿನಿ" ಹರಿಯುತ್ತಿದೆ. ಶೇಕ್ಸ್‌ಪಿಯರ್ ಕವಿಯ ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿ ಬರುವ ಸಾಲುಗಳು ಹೀಗಿವೆ. The quality of mercy is not strained, It droppeth as the gentle rain from heaven Upon the place beneath: ಅಡಿಗರು ಕೂಡಾ ಇದೇ ಅಮೃತವಾಹಿನಿಯನ್ನು ಕುರಿತೇ ಮಾತಾಡುತ್ತಿರುವುದು. ಮನುಷ್ಯತ್ವದ, ಕರುಣೆ-ಕಕ್ಕುಲಾತಿಗಳ ಅಮೃತವಾಹಿನಿ. ಯುದ್ಧಗಳ ಬಗ್ಗೆ ಓದಿದಾಗ, ಜಗತ್ತಿನಲ್ಲಿ ನಡೆಯುತ್ತಿರುವ ಕ್ರೌರ್ಯದ ಬಗ್ಗೆ ಓದಿದಾಗ ಇಂಥ ಅಮೃತವಾಹಿನಿಯು ಬತ್ತಿಹೋಗುತ್ತಿದೆಯೇ ಎಂದು ನಮಗೆ ಅನುಮಾನ ಬರುತ್ತದೆ. ಆದರೆ ಅಡಿಗರು ನಮಗೆ ಭರವಸೆ ನೀಡುತ್ತಾರೆ - " ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು; ಸುತ್ತುಮುತ್ತಲು ಮರಳು, ಮೇಲೆ ಪಾಚಿ ಮುತ್ತಿಕೊಂಡ...