ಮಿದುಳು ತಿನ್ನುವ ಅಮೀಬಾ
ಸಿ ಪಿ ರವಿಕುಮಾರ್ "ಕೇಳಿದಿರಾ? ಇನ್ನೊಂದು ಆಘಾತಕರ ಸುದ್ದಿ!" ಎಂದು ಮಿಸೆಸ್ ಶಾಂತಾ ಏದುಸಿರು ಬಿಡುತ್ತಾ ಮನೆಯನ್ನು ಪ್ರವೇಶಿಸಿದಾಗ ಮಿಸೆಸ್ ತಾರಾ ಅವರೆಕಾಯಿ ಬಿಡಿಸುತ್ತಾ ಕೂತಿದ್ದರು. "ಏನಾಯ್ತು? ಈರುಳ್ಳಿ ಬೆಲೆ ಮತ್ತೆ ಹಂಡ್ರೆಡ್ ದಾಟಿತಾ?" ಎಂದು ಮಿಸೆಸ್ ತಾರಾ ಆತಂಕದಿಂದ ಕೇಳಿದರು. ಅಂದು ಈರುಳ್ಳಿ ಸಾಂಬಾರ್ ಮಾಡುವುದು ಎಂದು ತೀರ್ಮಾನ ಮಾಡಿದ್ದರಲ್ಲ? "ಇಲ್ಲಾ ಇಲ್ಲಾ ಈರುಳ್ಳಿ ಈಸ್ ಓಕೆ. ಪ್ರಾಬ್ಲಂ ಬಂದಿರೋದು ಅಮೀಬಾ ಇಂದ" "ಯಾರು ಅಮೀಬಾ ಅಂದರೆ? ಕಸ್ತೂರಿಬಾ ವಿನೋಬಾ ಕೇಳಿದೀನಿ. ಅಮೀಬಾ ಯಾರು, ಅಮೀರ್ ಖಾನ್ ಹೆಂಡ್ತಿ ಏನ್ರೀ?" "ಅಯ್ಯೋ ನೀವು ಬಯಾಲಜಿ ಓದಲಿಲ್ವಾ ತಾರಾ? ಅಮೀಬಾ, ದ ಸಿಂಗಲ್ ಸೆಲ್ಯುಲರ್ ಆರ್ಗಾನಿಸಂ." "ಓಹ್ ಹೌದಲ್ವಾ! ಈಗ ನೆನಪಿಗೆ ಬರ್ತಾ ಇದೆ. ಅದೇನೋ ನ್ಯೂಕ್ಲಿಯಸ್, ಪ್ಲಾಸ್ಮಾ ಅಂತ ಏನೋ ಚಿತ್ರ ಬರೆದು ಲೇಬಲ್ ಮಾಡಿದ್ದು." "ಪ್ಲಾಸ್ಮಾ ಅಲ್ಲ, ಸೈಟೋಪ್ಲಾಸಂ. ಅಯ್ಯೋ ಅದಿರಲಿ, ಸುದ್ದಿ ಕೇಳಿ. ಸೌತ್ ಕೊರಿಯಾದಲ್ಲಿ ಒಂದು ಭಯಂಕರ ಅಮೀಬಾ ಕಾಣಿಸಿಕೊಂಡಿದೆ ಕಣ್ರೀ." "ಅಯ್ಯ, ಈ ಕೊರೊನಾಗಿಂತಲೂ ಏನ್ರೀ? ನೀವು ಸುಮ್ಮನೆ ಹೆದರ್ತೀರಿ. ಮೊದಲು ಆ ಮಾಸ್ಕ್ ತೆಗೀರಿ. ಕಾಫಿ ಕೊಡ್ತೀನಿ." ಕಾಫಿ ಹೀರುತ್ತಾ ಮಿಸೆಸ್ ಶಾಂತಾ "ಸೌತ್ ಕೊರಿಯಾದಲ್ಲಿ ಈ ಅಮೀಬಾ ಸಿಕ್ಕಿದೆಯಂತೆ ಕಣ್ರೀ. ಅದು ಬ್ರೇನ್ ತಿಂದುಬಿಡತ್ತಂತೆ!...