ಪೋಸ್ಟ್‌ಗಳು

ನವೆಂಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜೀವನಚಕ್ರ

ಬಂದು ಸೇರಿದಾಗಿನಿಂದಲೂ ಈ ಗ್ರಹವನ್ನು ಪಿಳಪಿಳನೆ ಮೊದಲಸಲ ಮೀಟಿದಾಗಿನಿಂದ  ಕಣ್ಣು ಎಷ್ಟೊಂದಿದೆ ನೋಡಲು, ನೋಡಿದಷ್ಟೂ ತೀರದು ಎಷ್ಟೊಂದಿದೆ ಮಾಡಲು, ಮಾಡಿ ಮುಗಿಸಲಾಗದು ಸಿಕ್ಕುತ್ತಲೇ ಇರುವುದಿಲ್ಲಿ ಸ್ವೀಕರಿಸಿದಷ್ಟೂ ದೊರೆಯುವುದು ಇಲ್ಲಿ ಹುಡುಕಿದಷ್ಟೂ ಅಲ್ಲಿ ಮೇಲೆ ಆಗಸದೊಳು ನೀಲ ಉರುಳುತ ಸಾಗುವ ಬೆಳಕಿನ ಗೋಲ ಹಿರಿಯ ಕಿರಿಯ ಎನ್ನದೆ ಎಲ್ಲರನೂ ಸುತ್ತಿಸುತಿದೆ ನಿಲ್ಲದ ಚಕ್ರದೊಳು ಸುತ್ತು ಇದು ಜೀವನ ಚಕ್ರ ನೂಕುವುದಿದು ನಮ್ಮೆಲ್ಲರನೂ ಹತಾಶೆ ಭರವಸೆಗಳ ಮೂಲಕ ಪ್ರೀತಿವಿಶ್ವಾಸಗಳ ಮೂಲಕ ತೆರೆದುಕೊಳ್ಳುವ ಹಾದಿಯಲ್ಲಿ ನಮ್ಮ ಸ್ಥಾನ ನಾವು ಕಂಡುಕೊಳ್ಳುವ ತನಕ ಈ ಜೀವನ ಚಕ್ರದಲ್ಲಿ. ಇದುವೇ ಜೀವನ ಚಕ್ರ ಮೂಲ: ಕಾರ್ಮೆನ್ ಟ್ವಿಲೀ (ದ ಲಯನ್ ಕಿಂಗ್)

ಬಸ್ ಪ್ರಯಾಣ

ಪ್ರಯಾಣವನು ದೀರ್ಘಗೊಳಿಸಿದೆ ಟ್ರಾಫಿಕ್ಕು ದೀರ್ಘತರಗೊಳಿಸಿದೆ ಫೇಸ್ ಬುಕ್ಕು ಎಷ್ಟು ಓದಲು ಸಾಧ್ಯ ಪತ್ರಿಕೆಯನು ಗೆಳೆಯಾ! ವಾರ್ತೆಗಾಗಿ ಬಿಡಿಸಬೇಕು ಅಭಿಪ್ರಾಯಗಳ ಸಿಕ್ಕು ನೋಡೋಣವೆಂದು ತೆರೆದರೆ ಮುಖಪುಸ್ತಕ ಎಷ್ಟು ನೋಡಲು ಸಾಧ್ಯ ಕಾಮಿಕ್ಕು ಗಿಮಿಕ್ಕು ಬ್ಯಾನ್ ಆದರೂ ಕಾಡುವುದೊಂದು ಭಯಂಕರ ಬ್ಯಾನೆ ಗುಡ್ ಮಾರ್ನಿಂಗ್ ಚಿತ್ರಕ್ಕೂ ಈಗ ಬಂದಿದೆ ಪ್ಲಾಸ್ಟಿಕ್ಕು ಹತ್ತಿರದ ಹೋಟೆಲಿನ ತಿಂಡಿಗಳ ಚಿತ್ರಗಳು ಹಸಿದು ಕುಳಿತವನನ್ನು ಕಾಡುತ್ತವೆ ಉದ್ದಕ್ಕೂ

ಗಾಂಧೀಸ್ತುತಿ (ಗಜಲ್)

ಅಂಚೆಚೀಟಿಯ ಮೇಲೆ ನಿನ್ನನ್ನು ಮುದ್ರಿಸಿದೆವು ಗಾಂಧಿ ಅಂಚಿಗೆ ನಿನ್ನನ್ನು ಮೆಲ್ಲಗೆ ತಳ್ಳಿದೆವು ಗಾಂಧಿ ನೋಟಿನ ಮೇಲೆ ನಿನ್ನನ್ನು ಮುದ್ರಿಸಿದೆವು ಗಾಂಧಿ ಗೀಟಿನಾಚೆಗೆ ನಿನ್ನ ನಿಲ್ಲಿಸಿದೆವು ಗಾಂಧಿ ಮೀಮ್‌ನಲ್ಲಿ ಜೂಮ್ ಮಾಡಿ ತೋರಿದೆವು ಗಾಂಧಿ ಜೂಮ್ ಔಟ್ ಮನದಲ್ಲಿ ಮಾಡಿದೆವು ಗಾಂಧಿ ಸತ್ಯದೊಂದಿಗೆ ನಿನ್ನ ಪ್ರಯೋಗಳು ಗಾಂಧಿ ಹತ್ಯೆಯದರದು ನಮ್ಮ ನಿತ್ಯಚರಿ ಗಾಂಧಿ ತಂದೆ ತಾತ ಎಂದೆಲ್ಲ ಮೆರೆಸುವುವು ಗಾಂಧಿ ಒಂದು ದಿನ ವರ್ಷಕ್ಕೆ ನೆನೆಯುವೆವು ಗಾಂಧಿ ರಜೆಯಿಲ್ಲದಿದ್ದರೆ ನಿನ್ನ ಜನ್ಮದಿವಸಕ್ಕೆ ಗಾಂಧಿ ನಜರಿನಲ್ಲಿ ನೀನು ಇರಲಾರೆ ಗಾಂಧಿ

ಸಾಕು ವಿವಾದಮಧು ಸುರಿದದ್ದು ಸಾಕಿ

ಎಷ್ಟು ಸುಲಭ ನಮಗೆಲ್ಲ ಕೀ ಕೊಡುವುದು ಟಿಪ್ಪು ಎಂದರೆ ಸಾಕು ಎಡದಿಂದ ಬಲಕ್ಕೆ ರಾಮ ಎಂದರೆ ಸಾಕು ಬಲದಿಂದ ಎಡಕ್ಕೆ ಎಷ್ಟು ಸುಲಭ ನಮಗೆಲ್ಲ ಕೀ ಕೊಡುವುದು ಎಲ್ಲಿ ಕಳೆದಿದೆ ಹುಡುಕಿ, ಹೆಜ್ಜೆ ಮುನ್ನಡೆಸುವ ಕೀ! ಸಾಕು ವಿವಾದಮಧು ಸುರಿದದ್ದು  ಸಾಕಿ ಎಷ್ಟು ಸುಲಭವಾಗಿ ಬಂತು ನಮಗೆ ಬಾಯಿಪಾಠದ ಮಾತು ಯಾರೋ ಬರೆದುಕೊಡುತ್ತಾರೆ ಸಂಭಾಷಣೆ ಒಪ್ಪಿಸುತ್ತೇವೆ ಚಕಚಕ ಅದನ್ನೇ ಕಿತನೇ ಆದ್ಮೀ ಥೇ ತೇರಾ ಕ್ಯಾ ಹೋಗಾ ಕಾಲಿಯಾ ಸಂಭಾಷಣೆಯಲ್ಲೇ ನಿಂತು ಹೋಗಿದೆ ಸಿನಿಮಾ ಮುಂದೆ ಹೋಗದು ಕತೆ, ಯಾರಾದರೂ ನೂಕಿ ಸಾಕು ವಿವಾದಮಧು ಸುರಿದದ್ದು, ಸಾಕಿ ಎಷ್ಟು ಸುಲಭ ನಮ್ಮನ್ನು ನಂಬಿಸುವುದು ಅದು ಸುಳ್ಳು ಇದು ಸತ್ಯ ಎಂದು ಬಿಂಬಿಸುವುದು ಕೇಳುವುದಿಲ್ಲ ಡೇಟಾ, ಪುರಾವೆ ಮೇಜುಕುಟ್ಟಿ ಮಾಡಿದರೆ ದಾವೆ ಹೌದೆಂದು ನಂಬಿಬಿಡುತೇವೆ ಬೋಧಿವೃಕ್ಷದ ಕೆಳಗೆ ಹಾಸಿಗೆ ಹಾಕಿ ಪಾನಮತ್ತನಾಗಿ ಮಲಗಿದ್ದಾನೆ  ವಿವೇಕಿ ಸಾಕು ಸುರಿದದ್ದು ವಿವಾದಮಧು, ಸಾಕಿ

ಕವಿಸಮಯ (ಗಜಲ್)

ಕವಿಸಮಯ (ಗಜಲ್) ಕವಿಗಳಿಗೆ ಇಂಥದ್ದೆಂದೊಂದು ಉಂಟೇ ಹೇಳಿ ಸಮಯ ಸೂರ್ಯೋದಯ ಚಂದ್ರೋದಯ ಎಲ್ಲವೂ ಕವಿಸಮಯ! ತಂದಿರಿಸಿದ್ದಾರು ಬಿಂದು ಅಮೃತವೆಂಬ ಸೋಜಿಗ ಬೆಳ್ಳಂಬೆಳಗು ಇರುಳು ಚಂದ್ರನಲ್ಲಿ ಪೆಪ್ಪರಮಿಂಟ್ ಕಾಣಿಸುವ ಸಮಯ ಮಟಮಟಮಧ್ಯಾಹ್ನದಲ್ಲಿ ಸಮಾಧಾನ ಹೇಳಿ ಬರಿಗೊಡಳಿಗೆ ಸಂಜೀಯ ಜಾವಿಗೆ ಬಾವಿ ಹೊರಡುವ ಸಮಯ ಶ್ರಾವಣ ಬಂದರೂ ಕವನ, ಕಾಜಾಣ ಕೂಗಿದರೂ ಕವನ, ಸರ್ವಋತು ಬಂದರೂ ಬಾಗಿಲು ತೆರೆದಿಡುವ ಸಮಯ ನವಯುಗಾದಿಗೆ ಕವನ, ರಾಮನವಮಿಗೆ ಕವನ ದೀಪಾವಳಿಯೋ ಕವಿತೆಗಳ ಹಚ್ಚಿಡುವ ಸಮಯ ಪ್ರೇಮದೊರತೆ ಹರಿದಾಗಲೂ ಕವಿತೆ, ಬರಿದಾದರೆ  ವಿರಹಗೀತೆ! ಗೋಪಿ ಗ್ಯಾಂಡಲೀನಳಿಗಾಗಿ ಕನವರಿಸುವ ಸಮಯ! ಭಾಮಿನಿಯು ಮೂರ್ನಾಲ್ಕು ಬಾರಿ ಕೂಗಿ ಕರೆದಿರಬಹುದೆ ನಾರಣಪ್ಪನಿಗೆ ಮಿಂದುಟ್ಟ ಮಡಿ ಆರುವಷ್ಟೇ ಸಮಯ! ಕವಿಗೋಷ್ಠಿಯಲ್ಲಿ ಕವಿತೆ ಓದುತ್ತಾ ನಿಂತಾಗ ಹೇಗೆ ಜಾರಿತು ಹೊತ್ತು ಹೋಯಿತೆಲ್ಲಿ ಸಮಯ! ಸಿ.ಪಿ. ರವಿಕುಮಾರ್

ಓ ಫೇಸ್ ಬುಕ್

ಓ ಫೇಸ್ಬುಕ್, ನೀನು ಸರಸ್ವತಿಯ ಆಪ್.ಅವತಾರ ಮರುವರ್ಷ ನಿನಗೇ ಪೂಜೆ ಪುನಸ್ಕಾರ ಕೊಡಮ್ಮ ಬುದ್ಧಿ ಎಂದರೂ ಕೊಡಲಿಲ್ಲ ಶಾರದೆ ನಿನ್ನನ್ನು ನೋಡಾದರೂ ಕಲಿಯಬಾರದೇ ದಿನನಿತ್ಯವೂ ಸುದ್ದಿ ನವನವೋನ್ಮೇಷ ಕಲಿಗಳಿಗೂ ನಿನ್ನಿಂದ ಕಲಿಯುವಾವೇಶ ಹಿಸ್ಟರಿ, ಮೆಡಿಸಿನ್, ಎಕನಾಮಿಕ್ಸ್ ಎಲ್ಲಾ ನಿನ್ನಿಂದಲೇ ಕಲಿತುಬಿಟ್ಟಿರುವೆವಲ್ಲ! ಜಾಣಜಾಣೆಯರ ಪತ್ರಿಕೆ ತಂದ ಲಂಕೇಶ ನಿನ್ನ ಜಾಣ್ಮೆಯ ಮುಂದೆ ನೋಡುತಿದ್ರು ಆಕಾಶ ಈ ಈಕ್ವಲ್ಸ್ ಎಂಸೀಸ್ಕ್ವೇರ್ ಬರಿಯ ಸುಳ್ಳಂತೆ ಭೂಮಿ ಗೋಲಾಕಾರವೆಂಬಷ್ಟೇ ಬರಿ ಅಂತೆಕಂತೆ ನಿನ್ನಿಂದ ಬೆಳಕಾಗಿದೆ ಓ ಜ್ಞಾನದೀಪ್ತಿ! ನಿನ್ನಿಂದಲೇ ತಮಾಂಧಕಾರಕ್ಕೆ ಸಮಾಪ್ತಿ! ಹಳೆಯದೆಲ್ಲ ಸುಳ್ಳು ಎಂದು ಹೇಳಿಕೊಟ್ಟಿರುವೆ ಮಾತೆ ತೆರೆದಿರುವೆ ನಮ್ಮ ಬುದ್ಧಿಯೊಳಗೆ ಹೊಸ ಖಾತೆ ಓ ಫೇಸ್ಬುಕ್, ನೀನು ಸರಸ್ವತಿಯ ಜ್ಞಾನಭಂಡಾರ ಮರುವರ್ಷ ನಿನಗೇ ಪೂಜೆ ಪುನಸ್ಕಾರ

ಅಯೋಧ್ಯೆ

ಸಿ.ಪಿ. ರವಿಕುಮಾರ್ ಮುಗಿಸಿ ಊಟ ಹೊರಬಂದರೆ ಅವರಿಬ್ಬರೂ ಒಂಬತ್ತು ಎಂದು ಊಹಿಸಬಹುದು ವೇಳೆಯ ಜಗುಲಿಯ ಮೇಲೆ ಮಣೆ ಹಾಸಿ ಕುಳಿತು ಜಗಿಯುತ್ತಾರೆ ಮಡದಿ ಮಡಿಸಿಕೊಟ್ಟ ವೀಳೆಯ ಜಗಳವಾಡುತ್ತಾರೆ ಏನಾದರೂ ತೆಗೆದು ಸಗಣಿ ಎರಚುತ್ತಾರೆ ಪರಸ್ಪರರ ಮೇಲೆ ಸಿಗದು ಈ ದೇಶದಲ್ಲಿ ನ್ಯಾಯವೆಂದು ಉಗಿಯುತ್ತಾನೆ ಎಡಗಡೆಗೆ ಕುಳಿತವನು ನಗುತ್ತಾ ಬಲಗಡೆಗೆ ಕುಳಿತವನ ಉತ್ತರ ಮಗ್ಗುಲಿನ ದೇಶಕ್ಕೇಕೆ ಹೋಗಬಾರದು ಬಂಧು! "ಭಗ್ನಗೊಳಿಸಿದವರಿಗೆ ಬೇಡವೇ ಯಾವುದೇ ಶಿಕ್ಷ!" "ಭಗ್ನಗೊಳಿಸಿದ್ದು ಯಾರು ಹಂಪೆಯ ವಿರೂಪಾಕ್ಷ! ಹೀಗೆ ವಾದಕ್ಕೆ ಪ್ರತಿವಾದ, ಉತ್ತರಕ್ಕೆ ಕಾಯದೆ ಯುಗಯುಗಾದಿ ಕಳೆದರೂ ಮುಗಿಯದ ತಗಾದೆ

ಶಿಲಾಶಾಸನ

ಇಮೇಜ್
ಸಿ.ಪಿ. ರವಿಕುಮಾರ್ ಕೋಟೆಯ ಕಲ್ಲಿನ ಮೇಲೆ ಜನ ಕೆತ್ತಿದ್ದಾರೆ ತಮ್ಮ ಹೆಸರು ಬಾಲು ಪ್ಲಸ್  ಸಪ್ನಾ, ಹೃದಯ ಭೇದಿಸುವ ಬಾಣ. ಛೇ ಎಂಥಾ ಜನ! ಹಾಳು ಮಾಡಲೇ ಲಾಯಕ್ಕು ಎಂದು ಬೈದುಕೊಂಡೇ ಒಳಗೆ ಹೋದೆ. ಕೋಟೆಯ ಒಳಗೆ ಕಂಡವು ಭವ್ಯ ಕೆತ್ತನೆಗಳು, ಶಿಲಾಶಾಸನಗಳು, ಪುರಾತತ್ತ್ವ ಇಲಾಖೆಯ ಬೋರ್ಡು ಶಿಲಾಶಾಸನದ ಇತಿಹಾಸ: ಇಂಥವನೊಬ್ಬ ರಾಜ ಇಂಥವನೊಬ್ಬ ರಾಜನನ್ನು ಇಂಥ ಇಸವಿಯಲ್ಲಿ ಇಂಥ ಕಡೆ ನಡೆದ ಯುದ್ಧದಲ್ಲಿ ಸೋಲಿಸಿದಾಗ ಇಷ್ಟು ಜನ ಕೊಟ್ಟರು ತಮ್ಮ ಪ್ರಾಣ ಬಲಿದಾನ ಆಗ ಕಟ್ಟಿಸಿ ದೊಡ್ಡ ದೇವಸ್ಥಾನ ರಾಜ ಕೆತ್ತಿಸಿದ ಶಿಲಾಶಾಸನ. ಇದಕ್ಕಿಂತ ಬಾಲು ಸಪ್ನಾಗೆ ಕೊಟ್ಟ ಪ್ರೇಮದ ಬಲಿದಾನವೇ ಹೆಚ್ಚಲ್ಲವೇ ಎಂದು ಯಾರೋ ಕೇಳಿದರು ಮೆಲ್ಲನೆ. ಸುಮ್ಮನಿರಿ, ಇದು ನಮ್ಮ ಪುರಾತನ ಇತಿಹಾಸ! ಇವನು ದೊಡ್ಡ ರಾಜ, ಸಾಧಾರಣನಲ್ಲ! ಪ್ರೇಮಿಸುವುದೇನು ಮಹಾ ಸಾಧನೆ, ಅದಕ್ಕೇಕೆ ಶಿಲಾಶಾಸನ? ಇಷ್ಟಾಗಿ ಯಾರಿವರು ಯಃಕಶ್ಚಿತ್ ಜನ! ಎಂದು ಸುಮ್ಮನಾಗಿಸಿದೆ. ಅವರು ಮೌನವಾಗಿದ್ದು ಕಂಡು ಒಳಗೇ ಗೆದ್ದೆನೆಂದು ಬೀಗಿದೆ. ಅಲ್ಲೊಬ್ಬ ಫಾರಿನರ್ ಸಿಕ್ಕಿದಾಗ ಕೇಳಿ ಅವರ ಪಕ್ಕ ನಿಂತು ತೆಗೆದುಕೊಂಡೆ ಸೆಲ್ಫೀ ನಗುತ್ತಾ. "ಸರ್, ನಮ್ಮದು ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ, ಗೊತ್ತಾ?" ಕೋಟೆಯ ಕಲ್ಲಿನ ಮೇಲೆ ಜನ ಕೆತ್ತಿದ್ದಾರೆ ತಮ್ಮ ಹೆಸರು ಬಾಲು ಪ್ಲಸ್  ಸಪ್ನಾ, ಹೃದಯ ಮತ್ತು ಬಾಣ, ಲವ್‌ಲವಿಕೆಯ ಕಥನ. ಛೇ ಎಂಥಾ ಜನ!

ಹರಿಣಿ ಮತ್ತು ಕಿರುಬಗಳು

ಇಮೇಜ್
ಕವಿತೆ: ಸಿ.ಪಿ. ರವಿಕುಮಾರ್ ಕಿರುಬಗಳು ನಿಂತಿದ್ದವು ಕತ್ತಲಿನಲ್ಲಿ ಹೊರಗೆ ಚಳಿ ಉಸಿರಾಡಿದರೆ ಹೊಗೆ ಕಣ್ಣುಗಳಲ್ಲಿ, ಒಡಲಲ್ಲಿ ತಡೆಯಲಾರದ ಹಸಿವು ಬಾಟಲಿಯಲ್ಲಿದ್ದ ದ್ರವ ಹೆಚ್ಚಿಸಿತು ದಾಹ ಬೀಡಿ ಹೊತ್ತಿಸಲು ಕಡ್ಡಿ ಕೊರೆದಾಗ ಕಾಣಿಸಿದ್ದು ನಂಬಲಾಗದ ದೃಶ್ಯ ಹರಿಣಿಯೊಂದು ಎಲ್ಲಿಂದಲೋ ಬಂದು ಅತ್ತಿತ್ತ ನೋಡುತ್ತಿದೆ ಅರ್ಬುದ ವ್ಯಾಘ್ರ ಅಡ್ಡಗಟ್ಟಿದ ಹಾಗೆ ಸುತ್ತುವರೆದವು ಕಿರುಬಗಳು ಹೆದರಿದ ಹರಿಣಿ ಕೇಳಿತು ಕೈಜೋಡಿಸಿ ಅಣ್ಣಂದಿರಾ, ದಾರಿ ಕಳೆದುಕೊಂಡಿರುವೆ, ತೋರಿಸಿ ಅರ್ಬುದನಿಗಿತ್ತು ಒಂದಿಷ್ಟು ಘನತೆ ಹಸಿವನ್ನು ಹತ್ತಿಕ್ಕುವ ಕ್ಷಮತೆ ಕಿರುಬಗಳಿಗೆ ಕಂಡಿದ್ದು ಹರಿಣಿಯ ಶರೀರ ತಿಳಿದದ್ದು ಒಡಲಿನ ಅಸಾಧ್ಯ ಹಸಿವು ಆತ್ಮವಿದ್ದರಲ್ಲವೇ ಕಾಣುವುದು ಕಟುಕನಿಗೆ ಕೊಡಲಿ ಏಟಿನ ನೋವು ಕಣ್ಣೀರು ಸುರಿಸುತ್ತಾಳೆ ಭಾರತಿ ಕಂಡು ಕಾಡು ಸಂಸ್ಕೃತಿ ಅವಳ ಕಣ್ಣೀರಿನಲ್ಲಿ ಕಾಣುತ್ತದೆ ತನ್ನದೇ ಗತಸ್ಥಿತಿ

ಮಗುವಿನ ಮೌನಸಂದೇಶ

ನೀಡಿ ನಮಗೂ ಒಂದೇ ಒಂದು ಅವಕಾಶ ರಚನೆ - ಸಿ. ಪಿ. ರವಿಕುಮಾರ್ ನೀಡಿ ನಮಗೂ ಒಂದೇ ಒಂದು ಅವಕಾಶ! ನಿಮ್ಮ ಧರ್ಮಗಳ ಜಾತಿಗಳ ಒಳಪಂಗಡಗಳಲ್ಲಿ ವಿಂಗಡಿಸಿ ಮೂಲೆಗುಂಪಾಗಿಸುವಿರೇಕೆ? ಗೋಡೆಗಳೇ ತುಂಬಿರುವ ಮನೆಯಲ್ಲಿ ಇನ್ನೆಷ್ಟು ಬಿಡಿಸುವಿರಿ ವಿಭಜಿಸುವ ಅಗ್ನಿರೇಖೆ? ಒಡೆದು ಉರುಳಿಸಿ ಭಿತ್ತಿ! ನೀಡಿ ಹಾರಲು ಮುಕ್ತಿ! ಕೈಬೀಸಿ ಕರೆಯುತ್ತಿಹುದು ಆಕಾಶ! ನೀಡಿ ನಮಗೂ ಒಂದೇ ಒಂದು ಅವಕಾಶ! ನಿಮ್ಮ ಕನಸುಗಳನ್ನು ಅರಸದಿರಿ ನಮ್ಮಲ್ಲಿ ಚಿಗುರುತ್ತಿದೆ ನಮ್ಮದೇ ಕನಸುಗಳ ಬಳ್ಳಿ! ಚಿಗುಟದಿರಿ ಎಳೆಯ ಕುಡಿ-ಮೊಗ್ಗು-ಹೀಚುಗಳನ್ನು ಹಬ್ಬಿಕೊಳ್ಳಲಿ ಕಲ್ಪನೆಯ ಆಧಾರದಲ್ಲಿ! ನಾನೂ ಒಬ್ಬ ವ್ಯಕ್ತಿ, ನನಗೂ ಇದೆ ಅಭಿವ್ಯಕ್ತಿ, ಕೇಳುತ್ತಿದೆಯೇ ನನ್ನ ಮೌನಸಂದೇಶ? ನೀಡಿ ನಮಗೂ ಒಂದೇ ಒಂದು ಅವಕಾಶ! ದೊಡ್ಡದೊಡ್ಡದು ನಿಮ್ಮ ಕಲ್ಪನಾಸಾಮ್ರಾಜ್ಯ ಅಲ್ಲಿ ಯಂತ್ರ, ತಂತ್ರಜ್ಞಾನಗಳ ರಾಜ್ಯ! ನನ್ನ ಮುಗ್ಧತೆ ಕಸಿಯುತ್ತಿದೆ ನಿಮ್ಮ ಏಐ ಕಿರಿದಾಗುತ್ತಿದೆ ನೋಡುತ್ತ ನೋಡುತ್ತ ಬಾಲ್ಯ! ನಮ್ಮ ಭೂಮಿ ಮಂತ್ರದ ಹಕ್ಕಿ, ನಿತ್ಯ ಚಿನ್ನದ ತತ್ತಿ ಕೊಟ್ಟರೂ ಏತಕ್ಕೆ ಕತ್ತಿ ಮಸೆಯುವ ಆವೇಶ! ನೀಡಿ ಭೂಮಿಗೂ ಒಂದೇ ಒಂದು ಅವಕಾಶ!

ಸುಲ್ತಾನನ ಸೋಲು (ಕಥನಕವನ)

ಇಮೇಜ್
ಸಿ. ಪಿ. ರವಿಕುಮಾರ್  ಬೇಹುಗಾರರು ಸುದ್ದಿ ತಂದರು ಲೋಧಿ ಇಬ್ರಾಹಿಂ ಸುಲ್ತಾನನಿಗೆ ಸಾಧು ಒಬ್ಬನು ಬಂದು ಬೀಡುಬಿಟ್ಟಿದ್ದಾನೆ ದಿಲ್ಲಿ ಸಲ್ತನತ್ ಒಳಗೆ; ಜಹಾಪನಾಹ್! ಕರೆಯುತ್ತಾರೆ ಅವನನ್ನು ಗುರು ನಾನಕ್ ಎಂದು, ಸಹಚರರು ಹೆಚ್ಚು ಜನರಿಲ್ಲ, ಶಿಷ್ಯ ಮರ್ದಾನಾ ಒಬ್ಬನೇ ಬಂಧು; ಬಹಳ ಜನ ಸೇರುತ್ತಾರೆ ಸೆಹರ್‌ನಿಂದಲೂ ಹುಜೂರ್! ಸಹಗಾನ ನಡೆಯುತ್ತದೆ ಇಡೀ ದಿವಸ, ಎಲ್ಲರಿಗೂ ಬಾಬಾ ಸಿಹಿನೀರು ಹಂಚುತ್ತಾನೆ ತಾನೇ ತೋಡಿದ ಬಾವಿಯಿಂದ ಸಹಭೋಜನ ನಡೆಯುತ್ತದೆ ದಿನವೂ, ಬಡಿಸುತ್ತಾನೆ ಕೈಯಾರ! ಮಹಿಮಾವಂತ! ಕರಾಮತ್ ನಡೆಸಿದನು ನಮ್ಮ ಕಣ್ಮುಂದೆ! ಜಹರ್ ತಿಂದು ಸತ್ತು ಹೋಗಿತ್ತು ಒಬ್ಬ ಜಮೀನುದಾರನ ಆನೆ; ಸ್ನೇಹದಿಂದ ಬಾಬಾ ನೇವರಿಸಿ "ಏಳು, ಸಾಕು ನಿದ್ದೆ" ಎಂದಾಗ ಜೀ ಹುಜೂರ್! ಮೆಲ್ಲಗೆ ಕಣ್ತೆರೆದು ನೋಡಿ ಮೇಲೆದ್ದಿತು ಜನಾಬ್! ಕುಹಕನಗೆ ನಕ್ಕ ಸುಲ್ತಾನ್ "ಕರೆತನ್ನಿ ಕರಾಮತಿ ಬಾಬಾನನ್ನು! ನೋಡುವ! ಇಹಲೋಕ ಬಿಟ್ಟ ನನ್ನ ಮೆಚ್ಚಿನ ಕುದುರೆಗೆ ಕೊಡುವನೋ ಜೀವ" ಚಹರೆಯಲ್ಲಿದ್ದ ಕಾಂತಿಯ ಕಂಡು ಬೆರಗಾದ ಲೋಧಿ.  ಸ್ನೇಹದಿಂದ ಅವನೆಡೆಗೆ ನೋಡಿ ನಕ್ಕರು ಗುರು ನಾನಕ್ - "ದೇಹ ತ್ಯಜಿಸಿದವರನ್ನು ಮತ್ತೆ ಕರೆತರಲು ಆದೀತೇ ಸುಲ್ತಾನ್! ಇಹಪರದ ವ್ಯಾಪಾರಕ್ಕೆ ಲೆಕ್ಕ ಇಡುವವನು ಬೇರೊಬ್ಬ! ರಹಸ್ಯ ಔಷಧ ಯಾವುದೂ ಇಲ್ಲ ಮೃತ್ಯುವಿಗೆ! ತಾವು  ಸಹಿಸಿಕೊಳ್ಳಲೇ ಬೇಕು ಅಗಲಿಕೆಯ ನೋವು!"

ಮಾನಸ ರಾಮಚರಿತ

ಇಮೇಜ್
ಈಗೀಗ ಕೆಳಗೆ ಕೂಡಲಾಗದು ಅಜ್ಜನಿಗೆ ಪೂಜೆಗೆ ಬಾಗಿ ನಮಿಸುವುದಂತೂ  ಬಹಳ ದುಸ್ತರವಾಗಿದೆ ನಾಗವಂದಿಗೆಯ ಮೇಲೆ ಇಟ್ಟುಕೊಂಡು ಹಳೆಯ ಗ್ರಂಥ ರಾಗವಾಗಿ ಓದುತ್ತಿದ್ದರು ಅಜ್ಜ ಮಾನಸ ರಾಮಚರಿತ ಆಗದು ನಿಮ್ಮ ಕೈಯಲ್ಲಿ ಇದೆಲ್ಲ! ಬಿದ್ದರೇನು ಗತಿ! ಹೀಗೆ ಗದರಿದಾಗ ಅಪ್ಪ ಅಮ್ಮ  ಮೂರನೆಯ ಸರತಿ ಸಾಗುವಾನಿಯ ಕುರ್ಚಿಯ ಮೇಲೆ ಕುಳಿತು ಮಣಮಣ ಸಾಗುತ್ತದೆ  ಪೂಜೆ, ನಂತರ ರಾಮಕಥಾ ಪಠಣ ಹೇಗೋ ತಾವೇ ಸರಿಸಿ ಕುರ್ಚಿಯನ್ನು ಮಡಿಬಟ್ಟೆ ಉಟ್ಟು ತೇಗದ ಮತ್ತೊಂದು ಕುರ್ಚಿಯನ್ನು ಒರೆಸಿ ಮುಂದಿಟ್ಟು ಓಘದೊಂದಿಗೆ ಓದುವರು ಶ್ರೀರಾಮಾಯಣ ತುಲಸಿ ಮುಗಿದಾಗ ತಾವೇ ಸರಿಸಿಡಬೇಕು ಎರಡೂ ಕುರ್ಚಿ ನೀಗಲು ಕುತೂಹಲ ನಾನೊಂದು ದಿನ ಕೇಳಿಯೇ ಬಿಟ್ಟೆ, ಯಾಕೆ ಇಟ್ಟುಕೊಳ್ಳುತ್ತೀಯ ಖಾಲೀ ಕುರ್ಚಿಯನ್ನು ಮುಂದೆ! "ರಾಘವನ ಕಥೆ ಓದುವಾಗ ಹನುಮಂತ ಬಂದು ಕೂತಿರುತ್ತಾನೆ ಆಗತ್ತೇನೋ ನಾನು ಮೇಲೆ ಕೂತು ಅವನನ್ನು ಕೂಡಿಸಲು ಕೆಳಗೆ?"

ಗುರುವಿನ ದೃಷ್ಟಿ

ಇಮೇಜ್
(ಇವತ್ತು ಗುರು ನಾನಕ್ ಜಯಂತಿ. ಅವರ ಬಗ್ಗೆ ಹೇಳಲಾಗುವ ಒಂದು ಕಥೆಯನ್ನು ಕವಿತೆಯ ರೂಪದಲ್ಲಿ ನೀವು ಕೆಳಗೆ ಓದಬಹುದು) ಕಾಡುದಾರಿಯಲ್ಲಿ ಬರುವಾಗ ಒಮ್ಮೆ ಗುರು ನಾನಕ್ ಮತ್ತು ಮರ್ದಾನಾ ಬಾಡಿತು ಪಡುವಣದಲ್ಲಿ ಬೆಳಕು; ಇಳಿದುಕೊಳ್ಳಲು ಸಿಕ್ಕುವುದೇ ಸ್ಥಳವೆಂದು ನೋಡತೊಡಗಿದ ಶಿಷ್ಯನಿಗೆ ಕಂಡಿತು ಒಂದು ಮಣ್ಣಿನ ಜೋಪಡಿ. ಗೂಡಿನಲ್ಲಿ ವಾಸವಾಗಿದ್ದವನೊಬ್ಬ ನಿರ್ಗತಿಕ, ಗುರುಗಳ ಭಕ್ತ; ಓಡಿ ಬಂದು ಕಾಲಿಗೆ ಬಿದ್ದು ಒಳಗೆ ಕರೆದೊಯ್ದು ಉಪಚರಿಸಿದ ಮಾಡಿ ಬಡಿಸಿದ ಅಡುಗೆ ಮನೆಯಲ್ಲಿದ್ದ ಅಳಿದುಳಿದ ಆಹಾರ; ಬೇಡಿಕೊಂಡ ಸ್ವೀಕರಿಸಿರಿ ಬಡವನ ಮನೆಯ ಆತಿಥ್ಯವೆಂದು ಕೈಮುಗಿದು ಕೇಡೆನ್ನಿಸಿತು ಶಿಷ್ಯನಿಗೆ, ನುಂಗಲಾರದೆ ನುಂಗಿದ ತುತ್ತು ನೋಡಿ ಶಿಷ್ಯನ ಕಡೆಗೆ ನಾನಕ್ ಮುಗುಳುನಗೆ ನಕ್ಕು  ಆದೇಶಿಸಿದರು "ಒಡೆದು ಬಿಡು ಅವನ ಮಣ್ಣಿನ ಪಾತ್ರೆ!" ನಿರ್ವಾಹವಿಲ್ಲದೆ ಮರ್ದಾನಾ ಪಾಲಿಸಿದ ಆಜ್ಞೆ. ಮೂಡಣವು ಕೆಂಪಾದಾಗ ಹೊರಟು ನಿಂತಾಗ ಗುರುಗಳು  "ಕೆಡವಿಬಿಡು ಅವನ ಗುಡಿಸಲು!" ಎಂದು ತೋರಿದರು ಬೆರಳು! ಗೋಡೆಗಳನ್ನು ದೂಡಿ ಬೀಳಿಸಿದ ಶಿಷ್ಯ ಕಣ್ಣೀರು ಸುರಿಸುತ್ತ ಗೂಢವೇನಿದೆಯೋ ಅರಿಯಲಾರದೆ ಗುರು ನಾನಕರ ಚಿತ್ತ. ಆಡದೆ ಒಂದೂ ಮಾತು ಕೈಕಟ್ಟಿ ನಿಂತಿದ್ದ ಬಡವ!  ಬೀಳ್ಕೊಟ್ಟ ಪಾದಗಳಿಗೆ ಎರಗಿ ಸಾಷ್ಟಾಂಗ.  ಹೊಳೆದಂತೆ ಕಾಣಿಸಿತು ಏನೋ ಅವನ ಕಣ್ಣಿಗೆ ತೋಡಿದಾಗ ತಿಳಿಯಿತು ಗುಡಿಸಲು ನೆಲೆಯಾಗಿತ್ತು ಹೊನ್ನಿನ ಗ

ಇಂದು ಹೋಗದಿರು, ತೊರೆದು

ಇಮೇಜ್
ಮೂಲ ಗಜಲ್: ಆಜ್ ಜಾನೇ ಕೀ ಜಿದ್ ನಾ ಕರೋ ರಚನೆ - ಫಯ್ಯಾಡ್ ಹಾಶ್ಮಿ  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ (ಈ ಪ್ರಸಿದ್ಧ ರಚನೆಯನ್ನು ಹಲವು ಕಲಾವಿದರು ಹಾಡಿದ್ದಾರೆ (ಉದಾಹರಣೆಗೆ ಈ ಲಿಂಕ್ ನೋಡಿ) ಇಂದು ಹೋಗದಿರು, ತೊರೆದು, ಹೀಗೇ ಪಕ್ಕದಲ್ಲೇ ಕುಳಿತಿರು ಮುನಿಸಿಕೊಳ್ಳದಿರು, ಉರಿದು ಬೀಳದಿರು, ನನ್ನ ಮಾತಲ್ಲಿ ಕೊಲ್ಲದಿರು ಇಂದು ಹೋಗದಿರು, ತೊರೆದು ಕೇಳಿಕೋ ನಿನ್ನನೇ, ತಡೆಯುತಿರುವೆನು ಏಕೆ, ಎದ್ದು ಹೊರಟಾಗ ಬರುವುದು ಜೀವಕ್ಕೇ ನಿನಗೆ ನನ್ನಾಣೆ, ಓ ನನ್ನ ಮನದನ್ನೆ, ಕೇಳು ನನ್ನ ಮಾತನ್ನೊಮ್ಮೆ ಇಂದು ಹೋಗದಿರು, ತೊರೆದು ಕಾಲದ ಬಂಧನದಲ್ಲಿದೆ ಜೀವನ, ಸಿಕ್ಕ ಒಂದೆರಡು ಮುಕ್ತ ಕ್ಷಣ ಕಳೆದುಕೊಂಡೇತಕೆ ಕೊರಗುವೆ ದಿನ-ದಿನ? ಇಂದು ಹೋಗದಿರು, ತೊರೆದು ಇಂದು ಗಾಳಿಯೊಳು  ತೇಲುತ್ತಿದೆ ಮುಗ್ಧತೆ,  ಅರಳಿ ನಿಂತಿಹುದು ಪ್ರೇಮಲತೆ ನಾಳೆಯನ್ನು  ಯಾರು  ಕಂಡವರು ಹೇಳು, ತಡೆ ರಾತ್ರಿಯು ಉರುಳದಂತೆ ಇಂದು ಹೋಗದಿರು ತೊರೆದು