ಕೊನೆಯ ಎಲೆ
ಕೊನೆಯ ಎಲೆ ಹೊರಗೆ ಹಿಮಪಾತ, ಕೆಟ್ಟ ಚಳಿ ; ಬೆಳಗಿನಲ್ಲೂ ಹಾಕಿದ ಪರದೆ. ಮಲಗಿದಲ್ಲೇ ನಿಟ್ಟಿಸುವನು ಬರಿದೇ ಕಿಟಕಿಯ ಹೊರಗೆ ಹಬ್ಬಿದ ಬಳ್ಳಿ ರೋಗಿಯು ಕಲಾವಿದ; ಅವನ ಕಣ್ಣು ಕಾಣುವುದು ಬಳ್ಳಿಯಲ್ಲಿ ಬದುಕಿನ ಸಂಕೇತ; ಮೊನ್ನೆ ಬೀಸಿದ ಝಂಝಾವಾತ ಅಲ್ಲಾಡಿಸಿದೆ ನಿರ್ಬಲ ಬಳ್ಳಿಯನ್ನು. ಉದುರಿಹೋದವು ಬಹುಮಟ್ಟಿಗೆ ಎಲೆ ತನ್ನ ಬಾಳಿನ ವರ್ಷಗಳು ಉದುರಿದಂತೆ; ಬಾರಿಸುತ್ತಿದೆ ಅಪಾಯದ ಗಂಟೆ ಬತ್ತಿ ಹೋಗುತ್ತಿದೆ ಬಾಳ ಬಳ್ಳಿಯಲ್ಲಿ ಸೆಲೆ. ಕಲಾವಿದ ಮಲಗಿದ್ದಾನೆ, ತಪಿಸುವ ಜ್ವರದಲ್ಲಿ; ಬಡಬಡಿಸುತ್ತಾನೆ ಕನವರಿಕೆಯಲ್ಲಿ ಕೊನೆಯ ಎಲೆ ಉದುರಿಸಿದಾಗ ಬಳ್ಳಿ ವಿಲೀನವಾಗುವುದು ಪ್ರಾಣ ಕಾಲ ನಿರಂತರದಲ್ಲಿ... ಹಣೆಯ ಮೇಲೆ ತಣ್ಣೀರು ಪಟ್ಟಿ ಇಟ್ಟು ಅವನ ಶಿಷ್ಯೆ ಹೊದ್ದಿಸುತ್ತಾಳೆ ಬೆಚ್ಚನೆ ಹೊದಿಕೆ; ಏನೂ ಆಗದು ಬಳ್ಳಿಗೆ, ಯಾತಕ್ಕೆ ಹೆದರಿಕೆ! ಎಂದು ಶಾಂತ ಸ್ವರದಲ್ಲಿ ಆಶ್ವಾಸನೆ ಕೊಟ್ಟು. ಬಣ್ಣ ಕುಂಚಗಳನ್ನು ಹೊತ್ತು ಕಿಟಕಿಯ ಹೊರಗಡೆ ಚಜ್ಜದ ಮೇಲೆ ಹತ್ತಿ ಹಿಮವಂತ ಕುಳಿರ್ಗಾಳಿಯ ರಾತ್ರಿ ಬೆಳಕು ಬೀರುವ ಲಾಂದ್ರದ ದುರ್ಬಲ ಬತ್ತಿ: ಬಿಡಿಸುತ್ತಾಳೆ ಹಸಿರೆಲೆ ಉದುರಿದ ಎಲೆ ಇದ್ದೆಡೆ. ಬೆಳಕು ಹರಿದಾಗ ಕಲಾವಿದನು ಮೆಲ್ಲನೆ ತೆರೆದು ಕಣ್ಣು ಹರಿಸುತ್ತಾನೆ ಕಿಟಕಿಯ ಕಡೆಗೆ ದೃಷ್ಟಿ: ಉಳಿದುಕೊಂಡಿದೆ ಇನ್ನೂ! ಹಿಮವೃಷ್ಟಿ ವಿನಾಶಗೊಳಿಸಲಿಲ್ಲ ಬಳ್ಳಿಯ ಕೊನೆಯ ಹಸಿರನ್ನು! ಹಾಸಿಗೆಯಲ್ಲಿ ಮೆಲ್ಲನೆ ಮೇಲೆದ್ದು ಕುಳಿತ, ಜ್ವರ ಬಿಟ್ಟಿತ್ತು, ಮೈಯಲ್ಲಿ ...