ಕೋಗಿಲೆ ಮತ್ತು ಇಂಟರ್ನೆಟ್ ವಿಷ್ಯ

Image result for koel indian

ಕೋಗಿಲೆ ಮತ್ತು ಇಂಟರ್ನೆಟ್ ವಿಷ್ಯ 

ಸಿ. ಪಿ. ರವಿಕುಮಾರ್ 

ಇಲ್ಲೊಂದು ಮರದಲ್ಲಿ ಒಂಟಿಯಾಗಿ ಕೂತಿದೆ
ಕಿಟಕಿ ಗಾಜಿನಿಂದ ಸ್ಪಷ್ಟ ಕಾಣುತ್ತದೆ, ಕೋಗಿಲೆ!
ಮೌನ ಧರಿಸಿ ಕುಳಿತ ಹಕ್ಕಿ ಯಾವುದೆಂದು ನೋಡಿದೆ:
ಅಚ್ಚಗಪ್ಪು ಬಣ್ಣವಿರುವ ಹಕ್ಕಿಯೇನು ಕಾಗೆಯೇ?

ಕಾಗೆ ಹೀಗೆ ಮೌನ ಧರಿಸಿ ಎಂದು ತಾನೇ ಕೂತಿದೆ?
ಕಾಗೆ ಸುತ್ತ ಅದರ ಬಳಗ ಕಾಕಾರವ ಮಾಡದೆ?
ಎಲಾ ಗಾನಕೋಗಿಲೆ, ಮೌನದ ಮೊರೆ ಹೋಗಿದೆ!
ಸುಬ್ಬುಲಕ್ಷ್ಮಿ ಹಾಡಿದ್ದನೆಲ್ಲಾದರೂ ಕೇಳಿತೆ?

ಯಾಕೆ ತನ್ನ ಕೂಹೂ ಕೂಹೂ ಮರೆತು ಸುಮ್ಮನಾಗಿದೆ?
ಪಾಪ ಚಳಿಗೆ ನೆಗಡಿಯಾಗಿ ಇದರ ದನಿಯು ಕಟ್ಟಿತೇ?
“ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ”
ಎಂಬ ಜಂಬವೆಲ್ಲಾ ಮರೆತಂತಿದೆ!

ಇಯರ್ ಫೋನ್ ಧರಿಸಿ ಇಂದು ರಸಿಕರ ಕಿವಿ ಮುಚ್ಚಿದೆ!
ಮುಚ್ಚಿಲ್ಲದವರ ಕಿವಿಯ ಸಿಟಿ ಗದ್ದಲ ಕಚ್ಚಿದೆ!
ಹಾಡುವುದೇ ಅನಿವಾರ್ಯ ಕರ್ಮವೆಂದ ಕೋಗಿಲೆ –
ಪಾಪ ಯಾಕೆ ಹೀಗೆ ಮೌನ ಧರಿಸಿ ಮಂಕಾಗಿದೆ!

ಸಂಗಾತಿ ಎಲ್ಲಿ? ಪಾಪ ಒಂಟಿ ಯಾಕೆ ಕುಳಿತಿದೆ?
ವ್ಯಾಲೆಂಟೈನ್ಸ್ ದಿವಸ ಬೇರೆ ಬರುವ ವಾರ ಬರಲಿದೆ!
ಬೇರಾರದೋ ಚಿತ್ರ ನೋಡಿ ಗೆಳತಿಯು ಬೆರಗಾದಳೆ?
ಚಾಕೊಲೆಟ್ ಗುಲಾಬಿಗುಚ್ಛ ನೋಡಿ ಮೋಡಿ ಹೋದಳೇ?
(ಪಾಪ ಅತ್ತು ಅತ್ತು ನೋಡಿ ಕಣ್ಣು ಕೆಂಪಾಗಿದೆ!)

ಮೌನ ಧರಿಸಿ ಕುಳಿತರಾಯ್ತೆ? ಏಳು, ಹಾಡು, ಕೋಗಿಲೆ!
ಇಂಟರ್ನೆಟ್ ಯುಗದಲ್ಲಿ ಮೌನಕ್ಕೆ ಬೆಲೆಯೆಲ್ಲಿದೆ?
ಸಾಮಾಜಿಕ ತಾಣದಲ್ಲಿ ನೋಡು ಅವಕಾಶಗಳೆಷ್ಟಿವೆ!
ಎಲೆಯ ಮರೆಯಲೇಕೆ ಹಾಡಿ ದಣಿಯಬೇಕು ಕೋಗಿಲೆ?

ಫೋಟೋ ಶಾಪ್ ಪ್ರೊಫೈಲ್ ಚಿತ್ರ ಬದಲಾಯಿಸು ಈಗಲೇ

ಹಂಚಿಕೋ ನಿನ್ನ ಹಾಡು-ಪಾಡು-ದರ್ದು-ದಾಖಲೆ!
ಮೌನ ಧರಿಸಿ ಕುಳಿತರಾಯ್ತೆ? ಏಳು, ಹಾಡು, ಕೋಗಿಲೆ!
ಇಂಟರ್ನೆಟ್ ಯುಗದಲ್ಲಿ ಮೌನಕ್ಕೆ ಬೆಲೆಯೆಲ್ಲಿದೆ?

(c) ೨೦೧೭, ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)