ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)


ಸಿ ಪಿ ರವಿಕುಮಾರ್ 

ಮಾಡುವವರು ಆಡರು, ಆಡುವವರು ಮಾಡರು ಎನ್ನುವುದು ಹಳೆಯ ಕಾಲದ ಮಾತಾಯಿತು. ಇಂದು ಯಾವುದೇ ವಸ್ತುವನ್ನು (ತಯಾರು) ಮಾಡಿದವರು ಆsಡ್ ಮಾಡದಿದ್ದರೆ ಅವರನ್ನು ಯಾರು ಕೇಳುತ್ತಾರೆ ಹೇಳಿ?  ಉದಾಹರಣೆಗೆ  ಒಂದು ಉಪಾಹಾರಗ್ರಹವನ್ನೇ ತೆಗೆದುಕೊಳ್ಳಿ. ದೋಸೆಯ ಘಮಘಮ ಪರಿಮಳವನ್ನು ಆಸ್ವಾದಿಸಿ ಅಥವಾ ದೋಸೆಗೂ   ಹಂಚಿಗೂ ನಡೆಯುವ  ಚೊಂಯ್  ಎಂಬ ಪ್ರೇಮಸಲ್ಲಾಪದಿಂದ  ಆಕರ್ಷಿತರಾಗಿ ಜನ ಉಪಾಹಾರಗ್ರಹಗಳಿಗೆ ಮುತ್ತುತ್ತಿದ್ದ ಕಾಲ ಒಂದಿತ್ತು. ದೋಸೆ ಎಂದರೆ ಬರೀ ದೋಸೆ ಮಾತ್ರ ಆಗಿದ್ದ ಕಾಲವದು. ಇದು ಹೇಳಿ ಕೇಳಿ ಇನೊವೇಶನ್ ಯುಗ! ಒಂದು ತೊಂಬತ್ತೊಂಬತ್ತು ವಿಧದ ದೋಸೆಗಳಾದರೂ ಇಂದು ಇವೆ.  "ಚಿನ್ನದ ಬಣ್ಣ ಬರುವವರೆಗೂ ಕಾವಲಿಯ ಮೇಲೆ ಬೇಯಿಸಿ" ಎಂಬ ಸೂಚನೆಯನ್ನು ಹಿಂದೆ ಅಡುಗೆ ಸಾಹಿತ್ಯದಲ್ಲಿ ಕಾಣಬಹುದಿತ್ತು. ಇಂದು ಈ ಸೂಚನೆಗೆ ವಿಭಿನ್ನ ಅರ್ಥವಿದೆ! ಏಕೆಂದರೆ ಚಿನ್ನದ ಹಾಳೆಯನ್ನೇ  ಆಲೂಗಡ್ಡೆ ಪಲ್ಯದ ಮೇಲೆ ಏರಿಸಿ ಗೋಲ್ಡನ್ ದೋಸಾ ತಯಾರಿಸಿದ್ದಾರೆ!  ಕ್ಷಮಿಸಿ, ಮಾತು ಎಲ್ಲಿಗೋ ಹೋಯಿತು.  ಉಪಾಹಾರಗ್ರಹದಲ್ಲಿ  ಇಂಥ ಹೊಸಹೊಸ ಬಗೆಯ ದೋಸೆಗಳನ್ನು  ಮಾಡಿದವನು  ಅವುಗಳ ಬಗ್ಗೆ ಗಟ್ಟಿಯಾಗಿ ಆಡದಿದ್ದರೆ ಯಾರಿಗೆ ಗೊತ್ತಾಗುತ್ತದೆ? ತನಗೆ ಸಾಟಿಯೇ ಇಲ್ಲವೆಂದು ಜಂಬ ಪಡುತ್ತಿದ್ದ ಮಸಾಲೆದೋಸೆಗೆ ಜಬರ್ದಸ್ತ್ ಪೈಪೋಟಿಯಾಗಿ ಪೀಟ್ಜಾ, ಬರ್ಗರ್ ಬಂದಿವೆ! ಹೀಗಾಗಿ ಆsಡ್ ಇಲ್ಲದಿದ್ದರೆ ದೋಸೆ ಮಾಡಿದವನಿಗೆ "ಮಾಡಿದ್ದುಣ್ಣೋ ಮಹಾರಾಯ" ಎಂಬ ಗಾದೆಯು ಅಕ್ಷರಶಃ ಸಲ್ಲುತ್ತದೆ!

ಮ್ಯಾಡ್ ಆಡ್ ಎಂಬ ಒಂದು ವಿಶೇಷ ಪಂದ್ಯವನ್ನೇ ಇಂದು ಕಾಲೇಜುಗಳಲ್ಲಿ ಏರ್ಪಡಿಸುತ್ತಾರೆ. "ಮ್ಯಾಡ್ ಆಡ್" ಎಂಬುದರ ಅರ್ಥ "ಮಾಡಿ ನಂತರ ಆಡು" ಎಂದೋ ಅಥವಾ ಮಾಡುವುದಕ್ಕಿಂತಲೂ ಹೆಚ್ಚು ಮಾತನ್ನೇ ಆಡು ಎಂದೋ ಎಂಬ ಅನುಮಾನ ನನ್ನನ್ನು ಕಾಡುತ್ತದೆ. ಇದು ಆsಡ್ ಜಗತ್ತು! ಇಂದು ಆsಡ್ ದೇ ಎಲ್ಲ ಕಡೆ ವ್ಯಾಲ್ಯೂ ಆsಡು.  ಒಂದು ಕಾಲದಲ್ಲಿ  ದಿನಪತ್ರಿಕೆಯ ಒಳಪುಟಗಳಲ್ಲಿ ಸಿಕ್ಕುತ್ತಿದ್ದ ಜಾಹೀರಾತುಗಳು ಇಂದು ಮುಖಪುಟಕ್ಕೇ ಬಂದಿವೆ!  ರೇಡಿಯೋ  ತರಂಗಾಂತರಗಳಲ್ಲಿ ತರಂಗ ತರಂಗವಾಗಿ ಮೂಡಿಬರುತ್ತಿದ್ದ  ಸಂಗೀತ ವೈವಿಧ್ಯ ಇಂದು ಜಾಹೀರಾತುಗಳಿಗೆ ಎಡೆ ಮಾಡಿಕೊಟ್ಟು ತಾನು ನೇಪಥ್ಯಕ್ಕೆ ಸರಿದಿದೆ. ರೇಡಿಯೋ ಜಾಹೀರಾತುಗಳೇ ಇಂದು ಸಂಗೀತಮಯವಾಗಿವೆ! ಇನ್ನು ದೂರದರ್ಶನದಲ್ಲೋ ನಿಮಿಷಕ್ಕೊಮ್ಮೆ ಇಣುಕುವ ಆsಡ್ ಗಳ ನಡುವೆ ಹರಿದು ಬರುವ ಕಾರ್ಯಕ್ರಮಗಳನ್ನು ಜನ ಕಲ್ಲಿನ ನಡುವೆ ಅಕ್ಕಿಯನ್ನು ಆರಿಸಿಕೊಳ್ಳುವಂತೆ ಹೆಕ್ಕಿಕೊಳ್ಳಬೇಕಾಗಿದೆ.  ಕ್ರಿಕೆಟ್ ಮ್ಯಾಚ್ ನೋಡಲು ಕುಳಿತಿರಾ? ನೀವು ಹಸಿವಿನಲ್ಲಿ ಬಳಲಬಾರದೆಂದು ಅವರು ನೂಡಲ್ಸ್ ಜಾಹೀರಾತು ತೋರಿಸುತ್ತಿದ್ದಾರೆ. "ದೋ ಮಿನಟ್" ಎಂದು ಹೇಳಿ ಅಡುಗೆ ಮನೆಗೆ ತೆರಳುವ ತಾಯಿಯ ತರಹವೇ ಸಿಕ್ಸರ್ ಬೀಸಲು ಕೈ ಎತ್ತಿದ ಧೋನಿ ಕೂಡಾ "ದೋ ಮಿನಟ್" ಎಂದು ಮಾಯವಾಗಿಬಿಡುತ್ತಾನೆ!  ನೂಡಲ್ ಮಹಾತ್ಮೆ ಮುಗಿದ ನಂತರ ಧೋನಿ ಔಟಾದನೋ ಅಥವಾ ಚೆಂಡು ಆಟದ ಮೈದಾನದಿಂದ ಔಟ್ ಆಯಿತೋ ಎಂಬುದನ್ನು ನೀವು ರೀಪ್ಲೇ ನೋಡಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಇಷ್ಟಾದರೂ ಆsಡ್ ಗಳನ್ನೇ ಕಾದು ನೋಡುವ ಜನರೂ ಇದ್ದಾರೆ ಎಂದರೆ ನಂಬುತ್ತೀರಾ? ಆsಡ್ ಮೋಡಿ ಕೆಲವರಿಗೆ ಅಷ್ಟು ಹಿಡಿದು ಬಿಟ್ಟಿರುತ್ತದೆ! ಇವರನ್ನು ನೋಡಿ ತ್ಯಾಗರಾಜರ "ಆಡ ಮೋಡಿ" ಕೀರ್ತನೆ ನೆನಪಾಗುತ್ತದೆ!  ಬಹಳ ಹಿಂದೆ ಲಿರಿಲ್ ಸಾಬೂನಿನ ಜಲಕನ್ಯೆಯನ್ನು ನೋಡಲು ಕೆಲವರು ತವಕದಿಂದ ಕಾಯುತ್ತಿದ್ದರು. ಇಂದು ಕ್ರಿಕೆಟ್ ಮ್ಯಾಚ್ ನಡುವೆ ತೋರಿಸುವ ಜೋಜೋ ಎಂಬ ಪಾತ್ರವು ಕೆಲವರಿಗೆ ಪರಮಾನಂದವನ್ನು ತಂದುಕೊಡುತ್ತದೆ.  "ಧಾರಾವಾಹಿಗಳನ್ನು ನೋಡುತ್ತಾ ನೋಡುತ್ತಾ ನಮ್ಮ ಮಹಿಳೆಯರು ಮಂಕಾಗಿ ಹೋಗಿದ್ದಾರೆ" ಎಂದು ಇತ್ತೀಚಿಗೆ ಒಬ್ಬ ಮಹಿಳಾ ಬುದ್ಧಿಜೀವಿ ಅಭಿಪ್ರಾಯ ಪಟ್ಟಿದ್ದಾರೆ. "ಧಾರಾವಾಹಿ ಮಾತ್ರ ನೋಡುತ್ತಾ ಅವರಿಗೆ ಲೋಕಸಭಾ ಚುನಾವಣೆ ಯಾವಾಗ ಎಂಬುದು ಕೂಡಾ ಗೊತ್ತಿಲ್ಲ!" ಎಂದು ಈ ಬುದ್ಧಿಜೀವಿ ವ್ಯಥೆ ಪಟ್ಟಿದ್ದಾರೆ. ನಿಜವಾದ ವಿಷಯ ಅವರಿಗೆ ಗೊತ್ತಿಲ್ಲ. ನಿಜಕ್ಕೂ  ಧಾರಾವಾಹಿಗಳು ಧಾರಾ ರೂಪದಲ್ಲಿ ಪ್ರವಹಿಸುತ್ತಿಲ್ಲ - ಜಾಹೀರಾತುಗಳ ಬಂಡೆಗಳ ನಡುವೆ ಸಿಕ್ಕಿ ಹಾಕಿಕೊಂಡು ಕಾರ್ಪೊರೇಷನ್ ನಲ್ಲಿಯಲ್ಲಿ ಬರುವ ನೀರಿನಂತೆ ತೊಟ್ಟಿಕ್ಕುತ್ತಿವೆ. ಮಹಿಳೆಯರು ಜಾಹೀರಾತು ಬಂದಾಗ ಅಡುಗೆ ಮನೆಗೆ ಹಾರಿ ತಮ್ಮ ಅಡುಗೆಯನ್ನೂ ಧಾರಾವಾಹಿಯ ಸ್ವರೂಪದಲ್ಲೇ ಮಾಡುತ್ತಿದ್ದಾರೆ. ಇಂಥ ಕಷ್ಟಕರ ಸಿಂಕ್ರೊನೈಸೇಷನ್ ಕಾರ್ಯವನ್ನು ಛಲ ಬಿಡದೇ ಮಾಡಿ ವಿಕ್ರಮ ಸಾಧಿಸುತ್ತಿರುವ ಮಹಿಳೆಯರನ್ನು ಮಂಕ್ ಕ್ಯಾಟೆಗರಿಗೆ ಸೇರಿಸುವುದು ಸರಿಯೇ!

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯನ್ನು ಕನ್ನಡಿಗರು ಬಹಳ ಹಿಂದೆಯೇ ಮಾಡಿದ್ದಾರೆ. "ದಂಟಿನ ಸೊಪ್ಪು, ಅರಿವೆ ಸೊಪ್ಪು, ಚಿಲುಕರಿವೆ ಸೊಪ್ಪು ..." ಇತ್ಯಾದಿ ರಾಗವಾಗಿ ಸೊಪ್ಪುಗಳಿಗೆ ಆsಡ್ ಹಾಡುತ್ತಾ  ಬರುತ್ತಿದ್ದ ಸೊಪ್ಪಿನ ಮಾರಾಟಗಾತಿಯನ್ನು ನೋಡಿಯೇ ಈ ಗಾದೆ ಹುಟ್ಟಿತೇ ಎಂದು ನಾನು ಒಮ್ಮೆ ನನ್ನ ಮಡದಿಯನ್ನು ಪ್ರಶ್ನಿಸಿದೆ. ಅದಕ್ಕೆ ಅವಳು ಸೊಪ್ಪು ಹಾಕದೆ ತನಗೆ ಇಷ್ಟವಾದ ಆsಡ್ ನೋಡುವುದರಲ್ಲಿ ಮಗ್ನಳಾದಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ