"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು


ಸಿ ಪಿ ರವಿಕುಮಾರ್ 



"ಬಾರಿಸು ಕನ್ನಡ ಡಿಂಡಿಮವ" ಎನ್ನುವುದು ಕನ್ನಡ ಪ್ರಚಾರಗೀತೆ ಎನ್ನುವಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಕವಿತೆಯನ್ನು ಪೂರ್ಣವಾಗಿ ಓದಿದರೆ ಅದು ಕುವೆಂಪು ಅವರು ಕನ್ನಡಿಗರ ಜಾಯಮಾನಕ್ಕೆ ನೊಂದು, ಬದಲಾವಣೆಗಾಗಿ ಪ್ರಾರ್ಥನಾರೂಪದಲ್ಲಿ  ಬರೆದ ಪದ್ಯ ಎಂಬ ತಿಳುವಳಿಕೆ ಮೂಡುತ್ತದೆ.

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ!

ಕರ್ನಾಟಕದ ಹೃದಯ ಮಿಡಿಯಬೇಕಾದದ್ದು ಕನ್ನಡಕ್ಕೆ. ಆದರೆ ಅಲ್ಲಿ ಬೇರೆ ಭಾಷೆಗಳ ಮಿಡಿತವೇ ಹೆಚ್ಚು. ಕುವೆಂಪು ಅವರ ಕಾಲದಲ್ಲೂ ಇದು ಹಾಗೇ ಇತ್ತು, ಈಗಲೂ ಹಾಗೇ ಇದೆ!    ಹೇಗೆ ಶಿವ ತನಗೆ ಸಹಜವಾದ ಡಿಂಡಿಮ ಬಾರಿಸಬೇಕೋ ಹಾಗೇ ಕರ್ನಾಟಕದ ಹೃದಯ-ಶಿವ ಕನ್ನಡವೆಂಬ ಡಿಂಡಿಮ ಬಾರಿಸಬೇಕು ಎಂಬುದು ಕವಿಯ ನೊಂದ ಮನದ ಮೊರೆ. "ಬಾರಿಸು ಕನ್ನಡ ಡಿಂಡಿಮವ "ಎಂಬಲ್ಲಿ "ಕನ್ನಡ" ಶಬ್ದಕ್ಕೆ ಒತ್ತು. 


ಸತ್ತಂತಿಹರನು ಬಡಿದೆಚ್ಚರಿಸು!

ಕಚ್ಚಾಡುವರನು ಕೂಡಿಸಿ ಒಲಿಸು!
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು!
ಒಟ್ಟಿಗೆ ಬಾಳುವ ತೆರದಲಿ ಹರಸು!

ಕನ್ನಡ ಜನರಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು  ಕುವೆಂಪು ಮನಗಂಡಿದ್ದರು. ಏಕೀಕರಣದ ಸಮಯದಲ್ಲಿ ಕೂಡಾ ಒಡಕು ಧ್ವನಿಗಳಿದ್ದವು.  "ಅಖಂಡ ಕರ್ನಾಟಕ" ಪದ್ಯದಲ್ಲಿ ಇಂಥ ಒಡಕು ಧ್ವನಿಗಳನ್ನು ಎತ್ತುವ ಜನನಾಯಕರ ಬಗ್ಗೆ ಕುವೆಂಪು "ಮುಚ್ಚು ಬಾಯಿ" ಎಂಬ ರೀತಿಯಲ್ಲಿ ಗುಡುಗಿದ್ದಾರೆ. ಆದರೆ "ಬಾರಿಸು ಕನ್ನಡ ಡಿಂಡಿಮವ" ಪದ್ಯದಲ್ಲಿ ಅವರು ಮೊರೆ ಹೋಗುತ್ತಿರುವುದು ಕರ್ನಾಟಕದ ಜನಸಾಮಾನ್ಯರನ್ನು.  ನಮ್ಮ ಜನ ಯಾಕೆ ಸತ್ತಂತಿದ್ದಾರೆ ಎಂದು ಕವಿಗೆ ಅನ್ನಿಸಿದೆ. ಇವರನ್ನು ಎಚ್ಚರಿಸಲು ವೀಣೆಯಲ್ಲ, ಡಿಂಡಿಮವೇ ಬೇಕು! ಒಗ್ಗಟ್ಟಿಲ್ಲದೆ ಸದಾ ಕಚ್ಚಾಡುತ್ತಿರುವುದನ್ನು ಇವತ್ತೂ ನೋಡುತ್ತೇವೆ. ಇಬ್ಬರ ಜಗಳ, ಮೂರನೆಯವನಿಗೆ ಲಾಭ ಎನ್ನುವುದು ಕರ್ನಾಟಕದಲ್ಲಿ ಮತ್ತೆ ಮತ್ತೆ ಸಿದ್ಧವಾಗುತ್ತಿರುವ ಉಕ್ತಿ. ಡಿಂಡಿಮದ ಸದ್ದಿಗಾದರೂ ಅವರು ಒಟ್ಟಿಗೆ ಹೆಜ್ಜೆ ಹಾಕಬಹುದೆಂಬುದು ಕವಿಯ ಆಸೆ. ಇನ್ನು  ಹೊಟ್ಟೆಕಿಚ್ಚಿನ ಮಾತಂತೂ ಬೇಡವೇ ಬೇಡ! ಪತ್ರಿಕೆ ತೆರೆದರೆ ಸಾಕು, ನಮ್ಮ ಸಾಹಿತಿಗಳು/ರಾಜಕಾರಣಿಗಳು  ಪರಸ್ಪರ ಹೊಟ್ಟೆಕಿಚ್ಚಿನಿಂದ ಧಗಧಗ ಉರಿದು ಬೀಳುವುದನ್ನು ನೋಡುತ್ತೇವೆ. ಇದಕ್ಕೆ ಕಣ್ಣೀರು ಸುರಿಸುವುದಲ್ಲದೆ ಬೇರೆ ಪರಿಹಾರ ಕುವೆಂಪು ಅವರಿಗೂ ತೋರಲಿಲ್ಲ. "ಒಟ್ಟಿಗೆ ಬಾಳುವ ಹಾಗೆ ಹರಸು" ಎಂಬ ಪ್ರಾರ್ಥನೆ ಮಾತ್ರ ಕವಿಗೆ ಸಾಧ್ಯ.

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.

"ಚೈತ ಶಿವೇತರ ಕೃತಿ ಕೃತಿಯಲ್ಲಿ" ಎಂಬ ಸಾಲನ್ನು ಅರ್ಥ ಮಾಡಿಕೊಳ್ಳುವುದು ನನಗೆ ಸ್ವಲ್ಪ ಕಷ್ಟವಾಯಿತು.  "ಚೈತ" ಎಂಬ ಪದ "ಚೈತನ್ಯ" ಅಥವಾ "ಚೈತ್ಯ" ಎರಡನ್ನೂ ಪ್ರತಿನಿಧಿಸಬಹುದು. ಎರಡು ಅರ್ಥಗಳು ಹೊಳೆಯುತ್ತವೆ. "ಡಿಂಡಿಮ ಬಾರಿಸುತ್ತಿರುವ ಶಿವನ ಚೈತನ್ಯ ನಮ್ಮ ಪ್ರತಿಯೊಂದು ಕೃತಿಯಲ್ಲೂ ಕಾಣಲಿ" ಎಂಬುದು ಒಂದು ಅರ್ಥ. "ಚೈತ್ಯ" ಎಂದರೆ ಬೌದ್ಧವಿಹಾರ. ಬುದ್ಧನ ಸ್ವಭಾವ ಶಾಂತ. ಡಿಂಡಿಮಕ್ಕೂ ಅವನಿಗೂ ಬಹಳ ದೂರ! ಅವನು ತಪಸ್ಸು ಮಾಡಿ ಜ್ಞಾನೋದಯ ಪಡೆದವನು. ಶಿವನೋ ಭೋಳೇ ಶಂಕರ!  ಅವನಲ್ಲಿರುವುದು ಕುಣಿಯುವ ಚೈತನ್ಯ. ಇವರಿಬ್ಬರ ಚೈತನ್ಯವೂ ನಮಗೆ ಬೇಕು ಎನ್ನುವುದು ಕುವೆಂಪು ಅವರ ಪ್ರಾರ್ಥನೆಯಾಗಿರಬಹುದು.  "ಮೂಡಲಿ ಮಂಗಳ ಮತಿಮತಿಯಲ್ಲಿ" ಎಂಬ ಸಾಲು ಕೂಡಾ ಇದಕ್ಕೆ ಪುಷ್ಟಿ ನೀಡುತ್ತದೆ.  ಬುದ್ಧಿ ಮತ್ತು ದೇಹ ಎರಡೂ ಬೆಳವಣಿಗೆಯಾದಾಗಲೇ ತಾನೇ ಸರ್ವತೋಮುಖ ಬೆಳವಣಿಗೆ?


ನಮ್ಮ ಜನರಿಗೆ ಆದರ್ಶವಾಗಬೇಕಾದದ್ದು ಯಾವುದು ಎಂಬುದರ ಬಗ್ಗೆ ಕುವೆಂಪು ಅವರಿಗೆ ಯಾವ ಸಂಶಯವೂ ಇರಲಿಲ್ಲ. ನಮಗೆ ಆದರ್ಶವಾಗಬೇಕಾದದ್ದು ರಾಜಕೀಯ ಸಿದ್ಧಾಂತಗಳು ಖಂಡಿತ ಅಲ್ಲ! ಅದು ಕವಿಗಳ, ಋಷಿಗಳ, ಸಂತರ ಆದರ್ಶದಲ್ಲಿಮಾತ್ರ ಕರ್ನಾಟಕದಲ್ಲಿ "ಸರ್ವೋದಯ"ವಾಗುವುದು ಸಾಧ್ಯ ಎಂದು ಕವಿಗೆ ಗೊತ್ತು. ರಾಜಕೀಯವೇನಿದ್ದರೂ ಕೆಲವರ ಉದಯಕ್ಕೆ! ಸರ್ವರ ಉದಯಕ್ಕೆ ಕವಿ, ಋಷಿ, ಸಂತರು ಮಾತ್ರ ಆಶಿಸುತ್ತಾರೆ!




ಕಾಮೆಂಟ್‌ಗಳು

  1. ಮಿತ್ರ ಸೀತಾರಾಂ ಅವರು ಇದಕ್ಕೆ ಕಳಿಸಿದ ಪ್ರತಿಕ್ರಿಯೆ -
    "ಬಾರಿಸು ಕನ್ನಡ ಡಿಂಡಿಮವ: ಒಂದು ಮರು ಓದು", ಅವಶ್ಯ-ಆದರೂ-ಅಪರೂಪ ಎನಿಸುವ ಮಾಹಿತಿಯನ್ನು ಕೊಡುವ ಒಂದು ಬಹಳ ಉಪಯುಕ್ತ ಲೇಖನವಾಗಿದೆ. ಸಾಧಾರಣ ಕನ್ನಡಿಗರಿರಲಿ, ಕನ್ನಡದ ಮುಖ್ಯವಾಹಿನಿಯ ಸಾಹಿತಿಗಳಲ್ಲೇ ಅನೇಕರಿಗೆ ಈ ಸ್ವಾರಸ್ಯಕರ ಸಂಗತಿಯು ತಿಳಿದಿರಲಾರದು ಎಂದುಕೊಳ್ಳುತ್ತೇನೆ. ಹಾಗಾಗಿ, ನೀವು ಈ ಲೇಖನದ ಮೂಲಕ ಒಂದು ಸಾರ್ಥಕ ಕಾರ್ಯವನ್ನು ಮಾಡಿದ್ದೀರಿ.
    ಇನ್ನು "ಡಿಂಡಿಮ" ಕುರಿತು ಹೇಳುವುದಾದರೆ, "ಡಿಂಡಿಮ" ಎಂಬುದೂ ಕಡೆಗೆ ಸಂಸ್ಕೃತ ಪದವೇ! ಈ ಮೂರೇ ಪದಗಳ ಕನ್ನಡಪರ ಕುರಿತ ಘೋಷಣೆಯಲ್ಲೂ ಒಂದು ಪದ "ಸಂಸ್ಕೃತದ್ದು" ಎನ್ನುವುದು ಗಮನಾರ್ಹವಷ್ಟೇ ಅಲ್ಲ ವಿಪರ್ಯಾಸವೂ ಎನಿಸುತ್ತದೆ. ದಯೆಯಿಟ್ಟು ಇದನ್ನು ಚೆಕ್ ಮಾಡಿ; ಚರ್ಚಿಸಿ. ["ದುಂದುಮೆ"? (tabor) ಎನ್ನುವುದು "ಡಿಂಡಿಮ" ಎಂಬುದಕ್ಕೆ ಹತ್ತಿರದ ಕನ್ನಡದ ಪದ ಆಗಬಹುದು.]

    ಪ್ರತ್ಯುತ್ತರಅಳಿಸಿ
  2. ಶಿವ ಎಂದರೆ ಮಂಗಳಕರನಾದವನು.
    ಶಿವೇತರ ಎಂದರೆ ಅಮಂಗಳ.
    ಅದಕ್ಕೇ ಕವಿಯು
    ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ ಎಂದಿದ್ದಾರೆ.
    ಚೈತ ಪದ ಪ್ರಯೋಗವಾಗಿಲ್ಲ.

    ಪ್ರತ್ಯುತ್ತರಅಳಿಸಿ
  3. ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೂ ಧನ್ಯವಾದಗಳು!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)