ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಸಿ. ಪಿ. ರವಿಕುಮಾರ್ 

ಕರ್ನಾಟಕ ನಾಡಗೀತೆಯನ್ನು ಹಾಡುವವರಿಗೆ/ಕೇಳುವವರಿಗೆ  ಅದರ ಅರ್ಥ ತಿಳಿಯದೇ ಇದ್ದರೆ ಈ ಬ್ಲಾಗ್ ಬರಹವನ್ನು ಅವರು ಓದಬಹುದು. ಆದಷ್ಟೂ ಸರಳವಾಗಿ ಕವಿತೆಯ ಸಾರವನ್ನು ಹಿಡಿದಿಡಲು ಪ್ರಯತ್ನಿಸಿದ್ದೇನೆ.   ಈ ವಿಶಿಷ್ಟ ಕವಿತೆಯಲ್ಲಿ  ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ.  ಇದನ್ನು ಅವರು ರಚಿಸಿದ್ದು ತಮ್ಮ ಹದಿಹರೆಯದಲ್ಲಿ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲಿ ಸ್ತುತಿಸುವ ನಾಡಗೀತೆಯನ್ನು ಮತ್ತೊಮ್ಮೆ ಕೇಳಿ.

ಜೈ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ!
Kuvempu1.jpg
ಇಲ್ಲಿ ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲಿ ಸ್ತುತಿಸುವ ನಾಡಗೀತೆಯನ್ನು ಮತ್ತೊಮ್ಮೆ ಕೇಳಿ.

ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಕರ್ನಾಟಕದಲ್ಲಿ ಅದೆಷ್ಟು ಸುಂದರ ನದಿ-ವನಗಳಿವೆ! ಅದೆಷ್ಟು ಜನ ಕಲಾವಿದರಿಗೆ (ರಸಋಷಿಗಳಿಗೆ) ಕರ್ನಾಟಕಮಾತೆ ಜನ್ಮ ನೀಡಿದ್ದಾಳೆ! ಅಂಥ ಕರ್ನಾಟಕಮಾತೆಗೆ ಜಯವಾಗಲಿ!

ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಭಾರತವು ಭೂದೇವಿಯ ಕಿರೀಟದಲ್ಲಿನ ಒಂದು ಪ್ರಜ್ವಲಿಸುವ ಹೊಸ ಮಣಿಯಂತೆ. ಕರ್ನಾಟಕವೋ ಗಂಧದ ಗಣಿ, ಹೊನ್ನಿನ ಗಣಿ, ಚಂದದ ಗಣಿ!  ಶ್ರೀಗಂಧಕ್ಕೆ ಕರ್ನಾಟಕವು ಎಂದೆಂದೂ ಪ್ರಸಿದ್ಧ. ಒಮ್ಮೆ ಕೋಲಾರದಲ್ಲಿ ಚಿನ್ನದ ಗಣಿಗಳಿದ್ದವು. ಪ್ರಕೃತಿ ಸೌಂದರ್ಯಕ್ಕೆ ಕರ್ನಾಟಕವು ಎಂದೆಂದೂ ಹೆಸರುವಾಸಿಯಾಗಿದೆ.  ಶ್ರೀರಾಮ ಮತ್ತು ಶ್ರೀಕೃಷ್ಣರಂಥವರು ಜನಿಸಿದ ನಾಡು ಭಾರತ. ಅಂಥ ಭಾರತಮಾತೆಯ ಮಗಳಾದ ಕರ್ನಾಟಕ ಮಾತೆಗೆ ಜಯವಾಗಲಿ!

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,

ಭಾರತ ಜನನಿಯ ತನುಜಾತೆ !

ಭಾರತಮಾತೆಯು ತನ್ನ ಮಗಳಿಗಾಗಿ ಹಾಡಿದ ಜೋಗುಳ ಬೇರಾವುದೂ ಅಲ್ಲ, ವೇಧಘೋಷ! ಈ ಜೋಗುಳ ಕೇಳುತ್ತಾ ಮಗು ತನ್ನ ಶಿಶುಶಹಜ ಆವೇಶದಿಂದ ಕೆನೆದಾಗ ತಾಯಿಗೆ ಜೀವಸ್ಪರ್ಶವಾಗುತ್ತದೆ. (ಮಗಳಾದ) ಕರ್ನಾಟಕ ಮಾತೆಯ ಕೊರಳಿನಲ್ಲಿ ಹೊಳೆಯುತ್ತಿರುವ ಹಾರ ಬೇರೇನಲ್ಲ, ಹಸುರು ಹೊದ್ದ ಬೆಟ್ಟಗಳ ಸಾಲು!  ಕಪಿಲ-ಪತಂಜಲಿ-ಗೌತಮ ಬುದ್ಧ-ಜಿನ ಇವರೆಲ್ಲರಿಂದ ಪ್ರಶಂಸೆಗೆ ಪಾತ್ರಳಾದವಳು ಭಾರತಮಾತೆ. ಅಂಥ ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ!

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾ ನಂದ ಕಬೀರರ
ಜಯ ಹೇ ಕರ್ನಾಟಕ ಮಾತೆ!

ಶಂಕರಾಚಾರ್ಯ, ರಾಮಾನುಜಾಚಾರ್ಯ, ವಿದ್ಯಾರಣ್ಯ ಇಂಥ ಪುಣ್ಯಪುರುಷರನ್ನು ಪಡೆದದ್ದು ಭಾರತಮಾತೆಯ ಭಾಗ್ಯ. ಕರ್ನಾಟಕಮಾತೆಯೂ ಬಸವೇಶ್ವರ, ಮಧ್ಯಾಚಾರ್ಯರಂಥ ಪುಣ್ಯಪುರುಷರಿಗೆ ಜನ್ಮ ನೀಡಿದ್ದಾಳೆ. ಅದೆಷ್ಟು ಮಂದಿ ಕವಿಗಳು ಕರ್ನಾಟಕದಲ್ಲಿ ಹುಟ್ಟಿದ್ದಾರೆ - ರನ್ನ, ಷಡಕ್ಷರಿ, ಪೊನ್ನ, ಪಂಪ, ಲಕ್ಷ್ಮೀಶ, ಜನ್ನ, ಕುಮಾರವ್ಯಾಸ! ಈ ಕವಿಗಳು ಆಡಿದ ಮಂಗಳ ಧಾಮ (ಮನೆ) ಕರ್ನಾಟಕವನ್ನು ಕುವೆಂಪು ಕವಿ-ಕೋಗಿಲೆಗಳ ಗೂಡಿಗೆ ಹೋಲಿಸುತ್ತಾರೆ. ಅತ್ತ ಭಾರತಮಾತೆಯ ಹೊಟ್ಟೆಯಲ್ಲಿ ಗುರು ನಾನಕ್, ರಾಮಾನಂದ, ಕಬೀರರಂತಹ ಸಂತಕವಿಗಳು ಜನಿಸಿದ್ದಾರೆ. ಇಂಥ ಭಾರತಮಾತೆಯ ಪುತ್ರಿಯಾದ ಕರ್ನಾಟಕಮಾತೆಗೆ ಜಯವಾಗಲಿ!

ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ,

ಭಾರತ ಜನನಿಯ ತನುಜಾತೆ !


ಕರ್ನಾಟಕದ ಇತಿಹಾಸದಲ್ಲಿ ತೈಲಪರು, ಹೊಯ್ಸಳರ ಮೊದಲಾಗಿ ಅದೆಷ್ಟು ರಾಜವಂಶಗಳು ಆಳಿವೆ!   ಡಂಕಣಾಚಾರ್ಯ-ಜಕಣಾಚಾರ್ಯರಂತಹ ಅಮರಶಿಲ್ಪಿಗಳಿಗೆ ಕರ್ನಾಟಕ ನೆಲೆಯಾಗಿತ್ತು. ಕೃಷ್ಣಾ, ಶರಾವತಿ, ತುಂಗಾ, ಕಾವೇರಿಯಂಥ ಪುಣ್ಯನದಿಗಳಿಗೆ ಕರ್ನಾಟಕ ಬೀಡಾಗಿದೆ. ಶ್ರೀರಂಗಪಟ್ಟಣದಲ್ಲಿ ಕಾವೇರಿಯ ಮಡಿಲಲ್ಲಿ ಶ್ರೀರಂಗನಾಥನೂ ಇದಾನೆ.  ಭಾರತಮಾತೆಯ ಬಸಿರಿನಲ್ಲಿ ಚೈತನ್ಯ, ಪರಮಹಂಸ, ವಿವೇಕಾನಂಧರಂಥ ದಾರ್ಶನಿಕರು ಜನಿಸಿದರು. ಇಂಥ ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ!

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ

ಭಾರತವು  ಒಂದು ಶಾಂತಿವನ - ಅಲ್ಲಿ ಅನೇಕ ಧರ್ಮಗಳ ಹೂಗಳು ಅರಳಿ ರಸಿಕರ ಕಣ್ಮನಗಳನ್ನು ಸೆಳೆಯುತ್ತಿವೆ - ಹಿಂದೂ ಧರ್ಮ, ಕ್ರೈಸ್ತ ಧರ್ಮ, ಮುಸಲ್ಮಾನ ಧರ್ಮ, ಪಾರಸೀ ಧರ್ಮ, ಜೈನಧರ್ಮ - ಈ ಎಲ್ಲಾ ಧರ್ಮಗಳ ಉದ್ಯಾನವನ ಭಾರತ! ಭಾರತದಲ್ಲಿ ಜನಕರಾಜನಂಥ ಜನಾನುರಾಗಿ ದೊರೆಗಳಿದ್ದಾರೆ.  ಭಾರತಮಾತೆಯ ಮಕ್ಕಳು ರಸಿಕರು -  ಗಾಯಕರಿಗೆ, ವೈಣಿಕರಿಗೆ, ಕಲೆಯ ಆರಾಧಕರಿಗೆ ಭಾರತ ಒಂದು ಸುಖದ ಬೀಡಾಗಿದೆ. 

ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!

ಇಂಥ ಭಾರತಮಾತೆಯ ಮಗಳಾದ ಕರ್ನಾಟಕಮಾತೆ ಕನ್ನಡನುಡಿ ಕುಣಿದಾಡುವ ಗೃಹವಾಗಿದ್ದಾಳೆ.  ಕನ್ನಡ ಮಾತಾಡುವ ತನ್ನ ಮಕ್ಕಳಿಗೆ ತನ್ನ ಸರ್ವಸ್ವವನ್ನೂ ನೀಡಿದ್ದಾಳೆ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ!  ಭಾರತವು ತಾಯಿಯಾಗಿ ಕರ್ನಾಟಕವು ಮಗಳಾದಾಗ ಅಲ್ಲಿ ವೈಮನಸ್ಯಕ್ಕೆ ಕಾರಣವಿಲ್ಲ. ಭಾರತವು ಎಷ್ಟೇ ಹಿರಿಮೆಯುಳ್ಳ ದೇಶವಾಗಲಿ, ಅಲ್ಲಿ ಕರ್ನಾಟಕಕ್ಕೆ ತನ್ನದೇ ಆದ ಸ್ಥಾನವಿದೆ, ಎಲ್ಲಾ ವಿಷಯಗಳಲ್ಲೂ ಕರ್ನಾಟಕವು ಭಾರತಮಾತೆಯ ಪ್ರತಿಬಿಂಬದಂತೆ ಅಷ್ಟೇ ಹಿರಿಮೆಯಿಂದ ಕಂಗೊಳಿಸುತ್ತಿದ್ದಾಳೆ ಎಂಬುದು ಕವಿತೆಯ ಧ್ವನಿ. 


ಕಾಮೆಂಟ್‌ಗಳು

  1. ಭಾವಾರ್ಥ ತಿಳಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು......

    ಪ್ರತ್ಯುತ್ತರಅಳಿಸಿ
  2. ಹೌದು, ಸರ್ ನೀವು ಹೊಳಿಸಿದ ಸರಿ ಎಲ್ಲ ಗುಣಗಳು ಕರ್ನಾಟಕ ಮಾತೆಯನ್ನು ಹೋಲುತ್ತದೆ,
    Your really great sir

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)