ಮಳೆಗಾಲದ ದಿವಸ


ಮೂಲ ಕವಿತೆ: ಎಚ್. ಡಬ್ಲ್ಯೂ. ಲಾಂಗ್ ಫೆಲೋ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್



ದಿನವಿಡೀ ಕವಿದ ಮೋಡ, ನಡುಕ ಹುಟ್ಟಿಸುವ ಚಳಿ,  
ಒಂದೇಸಮ ಬೀಳುವ ಮಳೆ, ಹುಯ್ಲಿಡುವ ರಭಸದ ಗಾಳಿ;
ಹೇಗೋ ಅಂಟಿಕೊಂಡಿದೆ ಬಳ್ಳಿ ಶಿಥಿಲ ಗೋಡೆಯಮೇಲೆ -
ಗಾಳಿ ಬೀಸಿದಾಗಲೆಲ್ಲಾ  ಉದುರಿಸುತ್ತದೆ ಹಣ್ಣೆಲೆ;
ದಿನವಿಡೀ ಕತ್ತಲು, ಮೇಲೆದ್ದರದು ನಿರುತ್ಸಾಹದ ಅಲೆ. 

ಹೀಗೇ ನನ್ನ ಬದುಕು: ಕತ್ತಲು, ನಿರುತ್ಸಾಹ, ಚಳಿ,
ಒಂದೇಸಮ ಬೀಳುವ ಮಳೆ, ಹುಯ್ಲಿಡುವ ರಭಸದ ಗಾಳಿ;
ಶಿಥಿಲ ಗತಕಾಲಕ್ಕೆ ಅಂಟಿಕೊಂಡರೂ ಆಲೋಚನೆಗಳು    
ಹೊಡೆತಕ್ಕೆ ಉದುರಿ ಬೀಳುವ ಯೌವ್ವನದ ಆಶಯಗಳು;
ಕತ್ತಲುಮಯ ದಿನಗಳು; ಕಟ್ಟಿಕೊಂಡಿದೆ ನಿರುತ್ಸಾಹದ ಬಲೆ. 

ಸಾಕು ದುಃಖಿ ಹೃದಯವೇ, ಇನ್ನು ಹಲುಬದಿರು .
ಮೋಡಗಳ ಹಿಂದೆ ಇನ್ನೂ ಹೊಳೆಯುತ್ತಿದೆ  ನೇಸರು. 
ಎಲ್ಲರಿಗೂ ದೊರೆತದ್ದೇ ದಕ್ಕಿದೆ ನಿನ್ನ ಪಾಲಿಗೂ 
ಇರಬೇಕು ಮಳೆಗಾಲ ಪ್ರತಿಯೊಂದು ಬಾಳಿಗೂ  
ಒಂದಷ್ಟು ದಿನ ಕವಿಯಲೇ ಬೇಕಲ್ಲವೆ  ಕತ್ತಲೆ?

(c) 2016, ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)