ಎಲ್ಲ ಪ್ರಯತ್ನಗಳು ವ್ಯರ್ಥ ಎಂದೆನ್ನದಿರು,

 (ಎಷ್ಟೇ ಕಷ್ಟಪಟ್ಟರೂ ಆಗುತ್ತಿಲ್ಲ ಎಂದು ಹತಾಶರಾದವರಿಗೆ)



ಎಲ್ಲ ಪ್ರಯತ್ನಗಳು ವ್ಯರ್ಥ ಎಂದೆನ್ನದಿರು,

ಪಟ್ಟೆನೆಷ್ಟು ಕಷ್ಟ, ತೊಟ್ಟೆನೆಷ್ಟು ಗಾಯಗಳು

ಆದರೂ ಬೀಳಲೊಲ್ಲ ಶತ್ರು, ಕಾಣನು ಸೋಲು

ಎಲ್ಲವೂ ಯಥಾಸ್ಥಿತಿ, ಬದಲಾಗಿಲ್ಲ ಚೂರೂ.


ಭರವಸೆಗಳು ಹುಸಿಯಾದರೆ, ಭಯಗಳೂ ಹುಸಿ ಇರಬಹುದು

ನಿನಗೆ ಕಾಣದಂತೆ ಹೊಗೆಯ ಹಿನ್ನೆಲೆಯೊಳಗೆ

ನಿನ್ನ ಪಕ್ಷದವರು ಹಿಮ್ಮೆಟ್ಟಿಸಿ ಶತ್ರುಪಡೆ

ಆಗಲೇ ಮೈದಾನವನು ವ್ಯಾಪಿಸಿಕೊಂಡಿರಬಹುದು ಗೆದ್ದು.


ಇಲ್ಲಿ ಬಲಹೀನ ಅಲೆಗಳು ಯತ್ನಿಸಿ ಸೋತರೂ ಪೂರಾ

ಅಂಗುಲವೂ ಬಿಟ್ಟುಕೊಡದ ಮಹಾಪರ್ವತ

ಇನ್ನೆಲ್ಲೋ ಸೋತಿರಬಹುದು  ಕಣಿವೆಗಳಲ್ಲಿ, ತೀರ್ಥ

ಎಳೆಯಾಗಿ ಒಳನುಗ್ಗಿ ಉಂಟಾಗಿರಬಹುದು ಮಹಾಪೂರ.


ಪೂರ್ವಮುಖಿ ಕಿಟಕಿಗಳಿಂದಷ್ಟೆ ಬಾರದು ಬೆಳಕು

ಮೇಲೇರ ತೊಡಗಿದಾಗ ಸೂರ್ಯ ಒಳಬರುವ

ನಸುಬೆಳಕು, ಕಂಡರೂ ಕಾಣದಂತಿರುವ

ಬೆಳಕು, ನೋಡಲ್ಲಿ ಪಶ್ಚಿಮದಲ್ಲಿ ತಂದಿಹುದು ಬೆಳಗು.


ಮೂಲ: ಆರ್ಥರ್ ಹ್ಯೂ ಕ್ಲೋ

ಅನುವಾದ: ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)