ಗಾಂಧೀಜಿ, ಭಗವದ್ಗೀತೆ ಮತ್ತು ಬ್ರಾಹ್ಮಣರು

ಸಿ ಪಿ ರವಿಕುಮಾರ್ 

 
ಭಗವದ್ಗೀತೆಯನ್ನು ಕುರಿತು ವಿವಾದಿತ ವ್ಯಕ್ತಿ ಶ್ರೀ ಕೆ. ಎಸ್. ಭಗವಾನ್ ಆಗಾಗ ಹೇಳಿಕೆಗಳನ್ನು ಕೊಡುವುದನ್ನು ನಾವು ಕೇಳುತ್ತೇವೆ. ಹಾಗೇ ಬ್ರಾಹ್ಮಣವರ್ಗವನ್ನು ಕುರಿತು ಅವರು ಮತ್ತು ಇನ್ನೂ ಅನೇಕ ಸಾಹಿತಿಗಳು ಆಕ್ರೋಶ ವ್ಯಕ್ತ ಪಡಿಸುವುದನ್ನೂ ಪತ್ರಿಕೆಗಳಲ್ಲಿ ಆಗಾಗ ಓದುತ್ತೇವೆ.  ಭಗವದ್ಗೀತೆಯನ್ನು ಕುರಿತು ಮತ್ತು ಬ್ರಾಹ್ಮಣ್ಯವನ್ನು ಕುರಿತು ಗಾಂಧೀಜಿ ಏನು ಹೇಳುತ್ತಿದ್ದರು? ಇದನ್ನು ತಿಳಿಯುವ ಕುತೂಹಲದಿಂದ ನಾನು http://www.mkgandhi.org/ ವೆಬ್ ತಾಣದಲ್ಲಿ ಹುಡುಕಿದೆ. ಗಾಂಧೀಜಿಯವರ ಬರವಣಿಗೆಗಳಿಂದ ಆಯ್ದ ಭಾಗಗಳನ್ನು ಅವರು ಅಚ್ಚುಕಟ್ಟಾಗಿ ವಿಂಗಡಿಸಿದ್ದಾರೆ.  ಈ ಎರಡೂ ವಿವಾದಿತ ವಿಷಯಗಳನ್ನು ಕುರಿತ ಗಾಂಧೀಜಿಯವರ ಮಾತುಗಳನ್ನು ನಾನು ಅನುವಾದಿಸಿ ಕೆಳಗೆ ಕೊಡುತ್ತಿದ್ದೇನೆ.  ಇದನ್ನು ಓದುತ್ತಿದ್ದಾಗ   ಕೆ. ಎಸ್. ಭಗವಾನ್ ನಂಥವರು ಗಾಂಧೀಜಿಯ ಕಾಲದಲ್ಲೂ ಇದ್ದಿರಬಹುದು ಎನ್ನಿಸಿತು; ಮುಂದೆಯೂ ಇರುತ್ತಾರೆ. ಅವರಿಗೆ ಗಾಂಧೀಜಿಯ ಮಾತುಗಳು ಬೆಳಕು ನೀಡಲೆಂದು ಹಾರೈಸುತ್ತೇನೆ!

ಭಗವದ್ಗೀತೆ ಕುರಿತು ಗಾಂಧಿ 

  • ಭಗವದ್ಗೀತೆಯು ನಂಬಿಕೆ ಇಲ್ಲದವರಿಗೆ ಅಲ್ಲವೇ ಅಲ್ಲ (T-೨-೩೧೨)
  • ಭಗವದ್ಗೀತೆಯು ಬೆಳಕು ಮತ್ತು ಕತ್ತಲೆಗಳ ಶಕ್ತಿಗಳನ್ನು ಪ್ರತ್ಯೇಕಗೊಳಿಸಿ  ನೋಡುತ್ತದೆ ಮತ್ತು ಅವುಗಳ ನಡುವಿನ ಅಸಾಂಗತ್ಯವನ್ನು ತೋರಿಸುತ್ತದೆ (MM-೯೪)
  •  ಗೀತೆಯು ಒಂದು ಸೂತ್ರವಲ್ಲ, ಅದೊಂದು ಮಹಾನ್ ಧಾರ್ಮಿಕ ಕವಿತೆ  (T-೨-೩೧೨)
  • ಗೀತೆಯಲ್ಲಿ ಮುಕ್ತಿ ಎಂದರೆ ಪರಿಪೂರ್ಣ ಶಾಂತಿ (T-೨-೩೦೯)
  • ಗೀತೆಯನ್ನು ಅಕ್ಷರಶಃ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿವುದು ವಿರೋಧಾಭಾಸಗಳ ಸಾಗರವನ್ನು ಪ್ರವೇಶಿಸಿದಂತೆ (XXVI-೨೮೯)
  • ಗೀತೆಯ ಪ್ರಕಾರ ಪರಿತ್ಯಾಗವೆಂದರೆ ನಂಬಿಕೆಯನ್ನು ಕಠಿಣ ಪರೀಕ್ಷೆಗೆ ಗುರಿಪಡಿಸುವುದು (T-2-310)
  • ಗೀತೆಯ ಪ್ರಕಾರ ಸಂನ್ಯಾಸವೆಂದರೆ ಸದಾ ಕಾರ್ಯತತ್ಪರನಾಗಿದ್ದೂ ಯಾವ ಕಾರ್ಯದಲ್ಲೂ ತೊಡಗದಿರುವುದು (T-2-312)
  • ಗೀತೆಯ ಪ್ರಕಾರ ಸಂನ್ಯಾಸವೆಂದರೆ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸುವುದಲ್ಲ  (T-2-31)
  • ಗೀತೆಯ ಪ್ರಕಾರ ಭಕ್ತಿ ಎಂದರೆ ಮೃದು ಹೃದಯದ ಕೃತಾರ್ಥ ಭಾವನೆಯಲ್ಲ (T-2-309)
  • ಭಗವದ್ಗೀತೆ ಮತ್ತು ಕುರಾನ್ ಹೇಗೋ ಹಾಗೆ ನನಗೆ ಬೈಬಲ್ ಕೂಡಾ ಒಂದು ಧರ್ಮಗ್ರಂಥ (MM-98)
  • ಎಲ್ಲಾ ಶಾಸ್ತ್ರಗಳಂತೆ ಗೀತೆಯ ಧ್ಯೇಯವೂ ತಾನು ಯಾರೆಂಬುದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ  (MOG-4)
  • ಭಗವದ್ಗೀತೆಯ ಉದ್ದೇಶವು ಸ್ವಯಂ-ಸಾಕ್ಷಾತ್ಕಾರಕ್ಕೆ ಅತ್ಯುತ್ತಮ ಮಾರ್ಗವನ್ನು ತೋರಿಸುವುದೇ ಆಗಿದೆ ಎಂದು ನನ್ನ ಅನ್ನಿಸಿಕೆ (TIG-೯೮)
  • ಭಗವದ್ಗೀತೆಯ ಸಂದೇಶವು ಎರಡನೇ ಸರ್ಗದಲ್ಲಿದೆ - ಅಲ್ಲಿ ಕೃಷ್ಣನು ಮನಸ್ಸಿನ ಸಮತೋಲನ ಸ್ಥಿತಿಯ ಬಗ್ಗೆ ಮಾತಾಡುತ್ತಾನೆ (T-5-21)
  • ಕಾಲ ಒಂದು ನಿಧಿ - ಇದನ್ನು ದುಂದು ಮಾಡುವವರನ್ನು ಕಾಲಯಮನು ನಾಶ ಮಾಡುತ್ತಾನೆ ಎನ್ನುತ್ತದೆ ಗೀತೆ (T-2-274)
  • ಗೀತೆಯ ಪ್ರಕಾರ ಯುದ್ಧವೂ ಮತ್ತು  ಫಲದ ನಿರಾಕರಣೆಯೂ ಪರಸ್ಪರ ಸಂಗತ ಎನ್ನಬಹುದು  (T-2-312)
  • ಭಕ್ತಿ, ಕರ್ಮ ಮತ್ತು  ಪ್ರೇಮವನ್ನು ಕುರಿತು ಗೀತೆಯಲ್ಲಿ ವಿಷದ ಪಡಿಸಿರುವುದನ್ನು ಓದಿದಾಗ ಮನುಷ್ಯನು ಮನುಷ್ಯನನ್ನು ದ್ವೇಷಿಸುವುದಕ್ಕೆ ಯಾವ ಕಾರಣವೂ ಇರುವುದಿಲ್ಲ (T-2-278)
  • ನಾವು ಯಾವುದನ್ನು ದೈನಂದಿನ ಕ್ರಿಯೆಗಳಲ್ಲಿ ಅನುಸರಿಸಲು ಸಾಧ್ಯವಿಲ್ಲವೋ ಅದನ್ನು ಧರ್ಮ ಎನ್ನುವುದು ಸಾಧ್ಯವಿಲ್ಲ ಎನ್ನುವುದನ್ನು ಗೀತೆ ಹೇಳುತ್ತದೆ  ಎನ್ನುವುದು ನನ್ನ ಅಭಿಪ್ರಾಯ (T-2-311)
  • ನನ್ನ ಪ್ರಕಾರ ಗೀತೆಯ ಒಂದು ಸಂದೇಶವೆಂದರೆ  ಒಳ್ಳೆಯ ಕೆಲಸ ಮಾಡಿದವನು ಕೆಟ್ಟವನಾಗಲಾರ (XXV-520) 
  • ಗೀತೆ ನನ್ನ ಬೈಬಲ್ ಅಷ್ಟೇ ಅಲ್ಲ, ನನ್ನ ಕುರಾನ್ ಅಷ್ಟೇ ಅಲ್ಲ, ಅದಕ್ಕಿಂತಲೂ ಮೀರಿದ್ದು - ಅದು ನನಗೆ ತಾಯಿ (MM-95)
  • ಏಸು ಬೆಟ್ಟದ ಮೇಲೆ ಕುಳಿತು ನೀಡಿದ ಪ್ರವಚನದಲ್ಲಿ ಸಿಕ್ಕದ ಶಾಂತಿಯನ್ನು ನಾನು ಭಗವದ್ಗೀತೆ ಮತ್ತು ಉಪನಿಷತ್ತುಗಳಲ್ಲಿ ಕಾಣುತ್ತೇನೆ ( MM-94)
  • ಜಗತ್ತಿನ ಶಾಸ್ತ್ರಗಳಿಗೆಲ್ಲಾ ಗೀತೆಯೇ  ನನ್ನ ಪಾಲಿಗೆ ಕೀಲಿಕೈಯಾಗಿದೆ (T-4-76)
  • ನನಗೆ ಹೇಗೋ ನಿಮಗೂ ಗೀತೆಯು ಒಂದು ವಜ್ರಗಳ ಗಣಿಯಾಗಲಿ - ನಿಮ್ಮ ಜೀವನಪಥದಲ್ಲಿ ಸದಾ ನಿಮ್ಮೊಡನಿರುವ ಮಿತ್ರನೂ ದಾರಿದೀಪವೂ ಆಗಿರಲಿ (T-2-307)
  • ನನ್ನ ಜೀವನದಲ್ಲಿ ಅದೆಷ್ಟೋ ಬಾಹ್ಯ ದುರಂತಗಳು ನಡೆದುಹೋಗಿವೆ. ಇವುಗಳು ನನ್ನ ಮೇಲೆ ಕಾಣುವಂಥ ಗಾಯದ ಕಲೆಗಳನ್ನು ಉಳಿಸಿಲ್ಲವಾದರೆ ಅದಕ್ಕಾಗಿ  ನಾನು ಭಗವದ್ಗೀತೆಯ ಓದಿಗೆ ಋಣಿ (MOG-40)
  • ಭಗವದ್ಗೀತೆಯಲ್ಲಿ ಕಾಣಬರುವ ಪರಿಪೂರ್ಣ ಮಾನವನ ಗುಣಗಳಲ್ಲಿ ನನಗಂತೂ ಭೌತಿಕ ಯುದ್ಧವೆನ್ನುವುದು ಎಲ್ಲೂ ಕಾಣಲಿಲ್ಲ ( MOG-3)
  • "ನನ್ನ ದರ್ಶನಶಾಸ್ತ್ರ" ಎಂಬುದರಲ್ಲಿ ಗೀತೆಯ ಬೋಧನೆಯ ನಿಜಾರ್ಥವೇ ಇರಬಹುದೇ ಎಂಬ ಅನುಮಾನ ನನ್ನನ್ನು ಕಾಡುತ್ತದೆ ( XXVI-140)
  • ಭಗವದ್ಗೀತೆಯು ನಮ್ಮ ದೈವೀಗ್ರಂಥವೇ ಆಗಿದ್ದರೆ ಅಸ್ಪೃಶ್ಯತೆಯು ಒಂದು ಪಾಪವೆಂದೇ ನಾನು ವಾದಿಸುತ್ತೇನೆ (XXVI-349)
  • ಜ್ಞಾನವು ವಿಧ್ವಂಸಕಾರಿಯಾಗಬಾರದು ಎಂಬ ಕಾರಣಕ್ಕಾಗಿ ಭಗವದ್ಗೀತೆಯ ಕರ್ತೃವು ಅದರೊಂದಿಗೆ ಭಕ್ತಿಯೂ ಇರಬೇಕೆನ್ನುತ್ತಾನೆ - ಅಷ್ಟೇ ಅಲ್ಲ, ಭಕ್ತಿಗೆ ಮೊದಲ ಸ್ಥಾನ ಕಲ್ಪಿಸುತ್ತಾನೆ. (T-2-309)
  • ಝಾರತುಷ್ಟ್ರ, ಏಸು ಮತ್ತು ಮೊಹಮ್ಮದ್ - ಇವರ ಜೀವನವನ್ನು ನಾನು ಅರ್ಥ ಮಾಡಿಕೊಂಡ ಬಗೆಯು ಭಗವದ್ಗೀತೆಯ ಎಷ್ಟೋ ಶ್ಲೋಕಗಳ ಮೇಲೆ ಬೆಳಕು ಬೀರಿದೆ (T-3-181)
  • ಭಗವದ್ಗೀತೆಯಲ್ಲಿ ನಾವು ಕಾಣುವ ಕೃಷ್ಣ ಪರಿಪೂರ್ಣತೆಯ ಮತ್ತು ಉಚಿತವಾದ ಜ್ಞಾನದ ಪ್ರತಿಬಿಂಬ - ಆದರೆ ಬಿಂಬವು ಕಾಲ್ಪನಿಕ (TIG-98)
  • ರಾಮನ ಭಕ್ತನು ಗೀತೆಯ ಸ್ಥಿತಪ್ರಜ್ಞನಂತೆ  (ಇರಬೇಕು) ಎನ್ನಬಹುದು (TIG-111)
  • ಜ್ಞಾನಾರ್ಥಿಯು ಭಗವದ್ಗೀತೆ ಎಂಬ ಗಣಿಯಲ್ಲಿ  ತನಗೆ ಬೇಕಾದ ಅರ್ಥಗಳನ್ನು ಶೋಧಿಸಿಕೊಂಡು ತನ್ಮೂಲಕ  ಜೀವನದಲ್ಲಿ ಅದರ ಮಖ್ಯ ಬೋಧನೆಯನ್ನು ಅಳವಡಿಸಿಕೊಳ್ಳಬೇಕು (T-2-312) 
  • ಗೀತೆಯ ಅಂತರಾತ್ಮವನ್ನು ಯಾರು ಅರ್ಥೈಸಿಕೊಳ್ಳುತ್ತಾರೋ ಅವರಿಗೆ ಗೀತೆಯು ಅಹಿಂಸೆಯನ್ನು ಬೋಧಿಸುತ್ತದೆ ಎಂಬುದರ ಅರಿವಾಗುತ್ತದೆ, ತನ್ನ ಶರೀರದ ಮೂಲಕ ತನ್ನತನವನ್ನು ಪ್ರಕಟಿಸುವ ರಹಸ್ಯ ಹೇಳಿಕೊಡುತ್ತದೆ ಎಂಬುದರ ಅರಿವಾಗುತ್ತದೆ MOG-16)
  • ಏಸುವಿನ ಬೆಟ್ಟದ ಮೇಲಿನ ಬೋಧನೆಯು ಚಿತ್ರಗಳ ಮೂಲಕ ಕಟ್ಟಿಕೊಡುವುದನ್ನು ಭಗವದ್ಗೀತೆ ಒಂದು ವೈಜ್ಞಾನಿಕ ಫಾರ್ಮುಲಾದಂತೆ ಕಟ್ಟಿಕೊಡುತ್ತದೆ  (MM-68)

ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಕುರಿತು ಗಾಂಧಿ 

  • ಬ್ರಾಹ್ಮಣ ಹಿಂದೂ ಧರ್ಮದ ಮತ್ತು ಮಾನವತ್ವದ ಅತ್ಯುತ್ತಮ ಪುಷ್ಪ - ಅದನ್ನು ಬಾಡಿಸುವಂಥ ಯಾವ ಕೆಲಸವೂ ಕೂಡದು (XXVI ೩೩೧)
  • ಭೂಮಿಯ ಮೇಲೆ ಬ್ರಾಹ್ಮಣರು ಹುಟ್ಟುತ್ತಾರೆಯೇ ವಿನಾ ಬ್ರಾಹ್ಮಣ್ಯವಲ್ಲ; ಬ್ರಾಹ್ಮಣ್ಯ ಎನ್ನುವುದು ಒಂದು ಗುಣ, ಅದನ್ನು ನಮ್ಮ ನಡುವಿನ ಅತ್ಯಂತ ದಲಿತರೂ ಕೂಡಾ ಪಡೆಯಲು ಸಾಧ್ಯ. (XXVI ೩೩೧)
  • ನಿಜವಾದ ಬ್ರಾಹ್ಮಣನು ವಿನಯದ ಪ್ರತಿಮೆಯೇ ಆಗಿರಬೇಕು - ತನ್ನ ಜ್ಞಾನ ಮತ್ತು ವಿವೇಕಗಳ ಬಗ್ಗೆ ಅವನಿಗೆ ಗರ್ವ ಇರಬಾರದು (T-೩-೨೭೦)
  • ತನ್ನ ಸಂಕಲ್ಪಗಳನ್ನು ಕುರಿತು ಧೈರ್ಯವಿಲ್ಲದವನು ಬ್ರಾಹ್ಮಣನಾಗಲಾರ (T-೩-೨೭೦)
  • ಸಮಾಜದ ದೇಹದ ಶುದ್ಧಿಯನ್ನು ಕಾಪಾಡುವುದು ಜಾಡಮಾಲಿಯ ಕೆಲಸ ಹೇಗೋ ಹಾಗೆ ಸಮಾಜದ ಆತ್ಮದ ಶುದ್ಧಿಯನ್ನು ಕಾಪಾಡುವುದು ಬ್ರಾಹ್ಮಣನ ಕೆಲಸ (T-೪-೧೦೪)
  • ಇಂದು ನಿಜವಾದ ಬ್ರಾಹ್ಮಣ ಎಲ್ಲಿದ್ದಾನೆ? ಅತ್ಯಲ್ಪ ಗಳಿಕೆಯಿಂದಲೇ ಸಂತೃಪ್ತನಾಗಿ ತನ್ನೆಲ್ಲಾ ಸಮಯವನ್ನೂ ಓದುವ-ಬೋಧಿಸುವ ಕೆಲಸಗಳಲ್ಲಿ ತೊಡಗಿಕೊಳ್ಳುವವನು? (T-೫-೯೭)
  • ನನಗೆ ಬ್ರಾಹ್ಮಣ್ಯವನ್ನು ಕುರಿತು ಅಪಾರ ಗೌರವವಿದೆ - ಈ ವ್ಯವಸ್ಥೆಯಲ್ಲಿ ಪ್ರತಿಯೊಂದು ಪೀಳಿಗೆಯಲ್ಲೂ ಬಡತನವನ್ನು ಸ್ವಯಂ ಒಪ್ಪಿಕೊಂಡು ತಮ್ಮ ಸಮಯವನ್ನೆಲ್ಲಾ  ದೈವೀ ಜ್ಞಾನವನ್ನು ಅರಸುವುದರಲ್ಲಿ ತೊಡಗಿಕೊಳ್ಳುವ ಒಂದು ವರ್ಗವನ್ನು ಸೃಷ್ಟಿಸಲಾಗಿದೆ (T-೩-೧೯೫)
  • ಅಬ್ರಾಹ್ಮಣರು ಬ್ರಾಹ್ಮಣರ ನಾಶಕ್ಕಾಗಿ ಮೇಲೆದ್ದು ನಿಲ್ಲುವುದನ್ನು ನಾನು ಒಪ್ಪಲಾರೆ (XXVI-೩೩೧)
  • ನಿಮ್ಮ ಸಿಟ್ಟು ಏನಿದ್ದರೂ ಬ್ರಾಹ್ಮಣರ ವಿರುದ್ಧ ಇರಲಿ, ಬ್ರಾಹ್ಮಣ್ಯದ ವಿರುದ್ಧವಲ್ಲ (T-೨-೨೮೩)
  • ನನ್ನ ದೃಷ್ಟಿಯಲ್ಲಿ ಆದರ್ಶ ಜಾಡಮಾಲಿಯೊಬ್ಬ ಅತ್ಯುತ್ತ್ಯಮ ಬ್ರಾಹ್ಮಣನಾಗಿರುತ್ತಾನೆ, ಯಾಕೆ ಅಂಥವರನ್ನೂ ಮೀರಿಸಿರುತ್ತಾನೆ (T-4-104)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)