ಕುವೆಂಪು ಅವರ ವೀಣಾವಂದನೆ

ಸಿ ಪಿ ರವಿಕುಮಾರ್ 



ಕುವೆಂಪು ಅವರ ಶ್ರೀರಾಮಾಯಣದರ್ಶನಂ ಪ್ರಾರಂಭದಲ್ಲಿ ಬರುವ ಸರಸ್ವತೀ ವಂದನೆಯನ್ನು ಕೆಳಗೆ ಕೊಟ್ಟಿದ್ದೇನೆ, ಓದಿ. ಮಹಾಕಾವ್ಯದ ರಚನೆಗೆ ಮುಂಚೆ ಕವಿಗಳು ಸರಸ್ವತಿಯನ್ನು, ಗಣೇಶನನ್ನು ಪ್ರಾರ್ಥಿಸುವುದು ಒಂದು ಸಂಪ್ರದಾಯ. ಮಹಾಕಾವ್ಯ ರಚಿಸಲು ಅನೇಕ ವರ್ಷಗಳೇ ಬೇಕಾಗಬಹುದು. ಈ ಅವಧಿಯಲ್ಲಿ ಕಾವ್ಯಸ್ಫೂರ್ತಿ ನಿರಂತರವಾಗಿ ಹರಿಯಬೇಕು. ಬೇರೆ ಯಾವ ಕಾರಣಕ್ಕಾಗಿಯೂ ಕಾವ್ಯರಚನೆಯಲ್ಲಿ ಬಾಧೆಯಾಗಬಾರದು.
ಏಳು, ವೀಣೆಯೆ; ಏಳು, ವಾಕ್ಸುಂದರಿಯ ಕಯ್ಯ
ತ್ರೈಭುವನ ಸಮ್ಮೋಹಿನಿಯೆ, ಕವನ ಕಮನೀಯೆ!
ಮಂತ್ರದಕ್ಷಿಗಳಿಂದೆ ನೋಳ್ಪ ನೀಂ ಸರ್ವಕ್ಕೆ
ಸಾಕ್ಷಿ. ಕಂಡುದನೆಮಗೆ ಗಾನಗೆಯ್ ಶ್ರೀಕಂಠದಿಂ
ಶತತಂತ್ರಿಯಾ. ಪ್ರತಿಭೆ ತಾಂ ಪ್ರಜ್ವಲಿಸುಗೆಮ್ಮೆರ್ದೆಗೆ
ನಿನ್ನ ದರ್ಶನವೆಮ್ಮ ದರ್ಶನಂ ತಾನಪ್ಪವೋಲ್ !
ನಾರಣಪ್ಪಂಗಂತೆ ರನ್ನಂಗೆ ಮೇಣ್ ಪಂಪರಿಗೆ,
ನಾಗವರ್ಮಗೆ ರಾಘವಾಂಕಗೆ ಲಕುಮಿಪತಿಗೆ,
ವಾಲ್ಮೀಕಿ ವ್ಯಾಸರಿಗೆ ಹೋಮರಗೆ ಮಿಲ್ಟನಗೆ
ದಾಂತೆ ಮೊದಲಹ ಮಹಾಕವಿಗಳಿಗೆ ನೀನೊಸೆದು                      ೧೦
ಕೃಪೆಗೈದ ವೈದ್ಯುತಪ್ರತಿಭೆಯಂ, ಹೇ ದೇವಿ,
ಕಲ್ಪನಾಶಕ್ತಿಯಂ ವಾಙ್ಮಂತ್ರದುಕ್ತಿಯಂ
ಆಯುರಾರೋಗ್ಯಮಂ ಶಾಂತಿ ಸೌಭಾಗ್ಯಮಂ
ದಯಪಾಲಿಸೌ ನಿನ್ನ ಕನ್ನಡ ಕಂದನೀತಂಗೆ,
ಸುರುಳಿಗುರುಳಂದಮೆಸೆವಾತ್ಮಸೌಂದರ್ಯಮಂ
ಮುಡಿಪನರ್ಚಿಸಿ ಮಣಿಯುವೀ ಕವಿ ಕುವೆಂಪುವಿಗೆ !

ಕುವೆಂಪು ಅವರ ಪ್ರಾರ್ಥನೆ ಸ್ವಲ್ಪ ವಿಭಿನ್ನವಾಗಿದೆ! ಇಲ್ಲಿ ಕವಿ ಸರಸ್ವತಿಯ ವೀಣೆಗೆ ಪ್ರಾರ್ಥನೆ ಸಲ್ಲಿಸುತ್ತಾರೆ. "ಎಲ್ಲವನ್ನೂ ನಿನ್ನ ಮಾಯಾ ಕಣ್ಣುಗಳಿಂದ ನೋಡುತ್ತಾ ಸಾಕ್ಷಿಯಾಗಿರುವ ನೀನು ಕಂಡಿದ್ದನ್ನು ನನಗೆ ನಿನ್ನ ನೂರು ತಂತಿಗಳ ಗಾನದ ಮೂಲಕ ತಿಳಿಸು!" ಎಂದು ಕವಿ ಪ್ರಾರ್ಥಿಸುತ್ತಾರೆ. "ಹಿಂದೆ ನೀನು ಅದೆಷ್ಟೋ ಕವಿಗಳಿಗೆ ಒಲಿದಂತೆ ನನಗೂ ಒಲಿ," ಎನ್ನುವಾಗ ಕವಿ ಕುಮಾರವ್ಯಾಸ, ರನ್ನ, ಪಂಪ, ನಾಗವರ್ಮ, ರಾಘವಾಂಕ, ಲಕ್ಷ್ಮೀಶ - ಈ ಕನ್ನಡ ಕವಿಗಳನ್ನು ಮೊದಲು ನೆನೆಯುತ್ತಾರೆ! ಆನಂತರ ವಾಲ್ಮೀಕಿ, ವ್ಯಾಸರ ಸರದಿ! ತದನಂತರ ಹೋಮರ್, ಮಿಲ್ಟನ್, ದಾಂತೆ! "ಇವರಿಗೆಲ್ಲಾ ನೀನು ಕೊಟ್ಟ ವಿದ್ವತ್ ಪ್ರತಿಭೆ, ಕಲ್ಪನಾ ಶಕ್ತಿ, ಆಯುರಾರೋಗ್ಯ, ಶಾಂತಿ, ಸೌಭಾಗ್ಯಗಳನ್ನು ಈ ಕನ್ನಡದ ಕಂದನಿಗೂ ದಯಪಾಲಿಸು," ಎಂದು ಕೇಳಿಕೊಳ್ಳುತ್ತಾರೆ. ಅವರು ಸರಸ್ವತಿಗೆ ನೀಡುವ ಕಾಣಿಕೆ ಏನು ಗೊತ್ತೇ? ತಮ್ಮ ಸುರುಳಿ ಕೂದಲಿನ ಅಂದ ಮತ್ತು ಅಷ್ಟೇ ಅಂದವಾದ ತಮ್ಮ ಆತ್ಮ ಸೌಂದರ್ಯ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)