ದೀಪಾವಳಿ ಮೈನಸ್ ಪಟಾಕಿ


"ಪಟಾಕಿ ಇಲ್ಲದೆ ದೀಪಾವಳಿ ಸಾಧ್ಯವೇ ಇಲ್ಲ," ಎಂದು ಸ್ನೇಹಿತರು ವಾದಿಸಿದರು. "ನಮ್ಮ ಸಂಪ್ರದಾಯಗಳನ್ನು ನಾವು ಯಾಕೆ ಬಿಡಬೇಕು? ಮಾಲಿನ್ಯ ಉಂಟಾಗುತ್ತದೆ ಎನ್ನುವ ಹೆದರಿಕೆ ಇದ್ದರೆ ನಾವು ಮೋಟಾರ್ ಕಾರ್ ಯಾಕೆ ಓಡಿಸಬೇಕು?"

ನನ್ನ ಸ್ನೇಹಿತರು ನಾನು ಬಲ್ಲ ಮೇಧಾವಿಗಳಲ್ಲಿ ಒಬ್ಬರು.  ಅವರು ಫೇಸ್ ಬುಕ್ ಮೇಲೆ ನನ್ನ ಬರಹಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದರು. ಪಟಾಕಿಯಿಂದ ಏನೇನು ಅನರ್ಥಗಳಾಗುತ್ತವೆ ಎನ್ನುವುದನ್ನು ನಾನು ಪಟ್ಟಿ ಮಾಡಿದ್ದೆ -

  1. ಬಾಲಕಾರ್ಮಿಕರನ್ನು ಪಟಾಕಿ ಮಾಡಲು ಬಳಸಲಾಗುತ್ತದೆ ಎನ್ನುವುದು ಈಗ ಸರ್ವವಿದಿತ 
  2. ಈಗಾಗಲೇ ವಾಯುಮಾಲಿನ್ಯದಿಂದ ದುಸ್ತರವಾದ ನಗರಜೀವನ - ಆಸ್ತಮಾ ಮೊದಲಾದ ಕಾಯಿಲೆಗಳಿಂದ ನರಳುವ ಜನ 
  3. ಪಟಾಕಿ ಸುಡಲು ಹೋಗಿ ಅಪಘಾತಗಳಿಗೆ ತುತ್ತಾದ ಜನ 
  4. ಪಟಾಕಿ ಸದ್ದಿಗೆ ಶ್ರವಣಶಕ್ತಿ  ಕಳೆದುಕೊಂಡವರು 
  5. ಪಟಾಕಿ ಸದ್ದಿಗೆ ಕಂಗಾಲಾಗುವ ಎಳೆಯ ಮಕ್ಕಳು, ಸಾಕುಪ್ರಾಣಿಗಳು 
ಇವೆಲ್ಲಾ ಹಾಗಿರಲಿ, ನಮ್ಮ ಸಂಪ್ರದಾಯ ನಮಗೆ ಮುಖ್ಯ ಎನ್ನುವವರಿಗೆ ಕೆಲವು ಪ್ರಶ್ನೆಗಳ ಮೂಲಕವೇ ಉತ್ತರಿಸಬೇಕಾಗುತ್ತಿದೆ. 

  1. ಪಟಾಕಿ ದೀಪಾವಳಿಯ ಸಂಪ್ರದಾಯ ಎಂದು ಎಲ್ಲಿ ಹೇಳಿದೆ? ದೀಪಾವಳಿ ಎನ್ನುವ ಶಬ್ದದಲ್ಲಿ ದೀಪಗಳ ಸಾಲಿದೆ. ರಾಮನು ಅಯೋಧ್ಯೆಗೆ ಮರಳಿದಾಗ ಅಮಾವಾಸ್ಯೆಯ ದಿನವಾದ್ದರಿಂದ ನಗರದ ಜನ ದೀಪಗಳ ಸಾಲನ್ನು ಹಚ್ಚಿಟ್ಟು ರಾಮನಿಗೆ ಸ್ವಾಗತ ಕೋರಿದರು ಎನ್ನುವ ಕಥೆ ಇದೆ.  ಅಮಾವಾಸ್ಯೆಯ ದಿನ ಹುಟ್ಟಿದ ಲಕ್ಷ್ಮಿ ಬೆಳಕಿರುವ ಮನೆ ಹುಡುಕುತ್ತಾ ಹೊರಟಳು ಎನ್ನುವ ಕಥೆ ಇದೆ. ಪಟಾಕಿ ಸದ್ದನ್ನು ಕೇಳಿದ್ದರೆ ಅವಳು ಖಂಡಿತಾ ಹೆದರಿ ಓಡಿಹೋಗುತ್ತಿದ್ದಳು! ರಾಮನನ್ನು ಇದಿರುಗೊಳ್ಳಲು ಕೆಲವರು ಪಟಾಕಿ ಹೊಡೆದಿರಲೂ ಬಹುದು. ಆದರೆ ಅದನ್ನು ಸಂಪ್ರದಾಯ ಎಂದು ನಾವು ಆಚರಿಸಬೇಕೆ? ಲಕ್ಷ್ಮಿ ಯಾರ ಮನೆಗೆ ಹೋಗಿ ದೀಪದಲ್ಲಿ ಅಡಗಿದಳೋ ಆ ಶ್ರೇಷ್ಠಿಗೆ ಜೂಜಿನಲ್ಲಿ ಲಾಭವಾಯಿತೆಂದು ದೀಪಾವಳಿಯ ದಿವಸ ಜೂಜಾಡುವ ಸಂಪ್ರದಾಯವೂ ಇದೆ! ಆದರೆ ಜೂಜಾಡುವುದನ್ನು ನಮ್ಮ ಸರಕಾರ ನಿಷೇಧಿಸಿದ್ದು ಯಾಕೆ ಎಂದು ಯೋಚಿಸಿ. ನ್ಯಾಯವಾಗಿ ಮೇಲೆ ತಿಳಿಸಿದ ಎಲ್ಲಾ ಕಾರಣಗಳಿಗಾಗಿ ಪಟಾಕಿಗಳನ್ನೂ ನಮ್ಮ ಸರಕಾರ ನಿಷೇಧಿಸಬೇಕಾಗಿತ್ತು. ಆದರೆ ಅಷ್ಟೊಂದು ಧೈರ್ಯವನ್ನು ಯಾವ ಸರಕಾರವೂ ಮಾಡಿಲ್ಲ.  ಮೋಟಾರ್ ಕಾರುಗಳಿಂದಲೂ ವಾಯುಮಾಲಿನ್ಯವಾಗುತ್ತದೆ, ಹೀಗಾಗಿ ಮೋಟಾರುಕಾರುಗಳನ್ನು ನಾವೇಕೆ ನಿಲ್ಲಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ಕಷ್ಟವಲ್ಲ. ಬೆಳೆಯುತ್ತಿರುವ ನಗರಗಳಲ್ಲಿ ಮೋಟಾರ್ ವಾಹನಗಲಿಲ್ಲದೆ ಪ್ರಯಾಣ ಮಾಡಲು ಗಂಟೆಗಳೇ ಬೇಕಾಗಬಹುದು. ಸರಕಾರವು "ಅನಗತ್ಯ" ವಾಹನ ಬಳಕೆಗೆ ವಿರುದ್ಧ ಕಾನೂನು ತಂದರೆ ಅದರಲ್ಲಿ ಆಶ್ಚರ್ಯವಿಲ್ಲ. ಅದನ್ನು ನಾನಂತೂ ಸ್ವಾಗತಿಸುತ್ತೇನೆ. 
  2. ಸಂಪ್ರದಾಯಗಳ ಮಾತು ಬಂತು - ಹಾಗೆಂದು ನಾವು ಎಷ್ಟು ಸಂಪ್ರದಾಯಗಳನ್ನು ಪಾಲಿಸುತ್ತಿದ್ದೇವೆ? ದೀಪಾವಳಿಯ ಹಿಂದಿನ ದಿವಸ ಮನೆಯನ್ನು ಸೆಗಣಿಯಿಂದ ಸಾರಿಸುವ ಸಂಪ್ರದಾಯವನ್ನು ನಾವೇಕೆ ಪ್ರಶ್ನಿಸದೆ ಬಿಟ್ಟೆವು? ಇನ್ನೂ ಆಕಾಶದಲ್ಲಿ ನಕ್ಷತ್ರಗಳು ಇರುವಾಗಲೇ ಎದ್ದು ಎಣ್ಣೆ ಸ್ನಾನ ಮಾಡುವ ಸಂಪ್ರದಾಯ ಎಷ್ಟು ಜನ ಪಾಲಿಸುತ್ತಿದ್ದಾರೆ? ಬಳಿ ಪಾಡ್ಯದ ದಿವಸ ಹೊಸಲಿಗೆ ಸೆಗಣಿಯಿಂದ ಸಾರಿಸಿ ಹೂಗಳಿಂದ ಅಲಂಕರಿಸುವ ಸಂಪ್ರದಾಯವನ್ನು ನಗರದಲ್ಲಿ ಅಪಾರ್ಟ್ ಮೆಂಟ್ ವಾಸಿಗಳು ಯಾಕೆ  ಪಾಲಿಸುತ್ತಿಲ್ಲ? ದೀಪಾವಳಿಗೆ ಅಂಗಡಿಯಿಂದ ಸಿಹಿ ತಿಂಡಿ ತರಬೇಕೆಂಬ ಸಂಪ್ರದಾಯ ಎಲ್ಲಿದೆ? ಮನೆಯಲ್ಲೇ ಸಿಹಿ ತಯಾರಿಸುವ ಸಂಪ್ರದಾಯ ಎಷ್ಟು ಜನ ಪಾಲಿಸುತ್ತಿದ್ದಾರೆ?  ವೈದ್ಯರು "ನಿಮಗೆ ಕಾಯಿಲೆ ಇದೆ, ಸಿಹಿ ತಿನ್ನಬೇಡಿ" ಎಂದರೂ "ಇಲ್ಲ, ಇದು ನಮ್ಮ ಸಂಪ್ರದಾಯ" ಎಂದು ಸಿಹಿ ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ.  
  3. ಇತ್ತೀಚೆಗೆ ಗಣೇಶನ ಹಬ್ಬ ಬಂದುಹೋಯಿತು. ಗೋಖಲೆ ಅವರು ಭಾರತದಲ್ಲಿ ಐಕ್ಯ ಭಾವನೆ ಉಂಟುಮಾಡಲು ಗಣೇಶನ ಹಬ್ಬದ ಸಾಮೂಹಿಕ ಆಚರಣೆಯನ್ನು ತಂದರು ಎಂದು ಇತಿಹಾಸ ಹೇಳುತ್ತದೆ. ಅದಕ್ಕೆ ಮುಂಚೆ ಸಂಪ್ರದಾಯ ಹೇಗಿತ್ತು? ಆಳೆತ್ತರದ ಗಣಪತಿ ಪ್ರತಿಮೆಗಳನ್ನು ಮಾಡಬಹುದು, ಸಿನಿಮಾದ ಬಾಹುಬಲಿ ಇತ್ಯಾದಿ ರೂಪಗಳಲ್ಲಿ ಗಣಪತಿಯ ವಿಗ್ರಹವನ್ನು ಮಾಡಬಹುದು, ಗಣಪತಿಯ ಎದುರು ಮೈಕಿನಲ್ಲಿ ಹಾಡು ಹಾಕಿಕೊಂಡು ನರ್ತಿಸಬಹುದು, ಪ್ಲಾಸ್ಟಿಕ್ ಬಟ್ಟಲುಗಳಲ್ಲಿ ಪ್ರಸಾದ ಹಂಚಬಹುದು - ಈ ಸಂಪ್ರದಾಯಗಳು ಹೇಗೆ ಹುಟ್ಟಿಕೊಂಡವು?

ಸಂಪ್ರದಾಯ ಎನ್ನುವುದು ನಿಂತ ನೀರಲ್ಲ. ಅದನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಹೋಗುವುದರಲ್ಲಿ ಜಾಣ್ಮೆ ಇದೆ. ಮದುವೆ ಮನೆಯ ಖರ್ಚು ಉಳಿಸಲು ಮಾಗಲ್ಯಧಾರಣೆಗೆ ಮುನ್ನವೇ ರಿಸೆಪ್ಷನ್ ನಡೆಸುವ ಸಂಪ್ರದಾಯ ಎಲ್ಲಿತ್ತು? ರಿಸೆಪ್ಷನ್ ಸಂಪ್ರದಾಯ ಎಲ್ಲಿತ್ತು? ಬಫೆ ಸಂಪ್ರದಾಯ ಎಲ್ಲಿತ್ತು? 

ಪಟಾಕಿಗಳು ಮಕ್ಕಳಿಗೆ ಇಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೂಕಡ್ಡಿ, ಮತಾಪು, ಭೂಚಕ್ರ - ಇವುಗಳನ್ನು ಸುಲಭವಾಗಿ ಬಿಡಲು ಯಾರಿಗೂ ಮನಸ್ಸು ಬರುವುದಿಲ್ಲ.  ಆದರೆ ಹೇಗೆ "ಪ್ರಾಕ್ಟಿಕಲ್" ಕಾರಣಗಳಿಗಾಗಿ ಮದುವೆ ಸಂಪ್ರದಾಯಗಳಲ್ಲಿ ಬದಲಾವಣೆ ತಂದೆವೋ ಅದೇ ಬಗೆಯ ಪ್ರಾಕ್ಟಿಕಲ್ ಕಾರಣಗಳಿಗಾಗಿ ನಾವು ದೀಪಾವಳಿ ಮತ್ತಿತರ ಹಬ್ಬಗಳಲ್ಲೂ ಬದಲಾವಣೆ ತರಬೇಕಾಗಿದೆ. ಒಂದು ಕಾಲದಲ್ಲಿ ಪಟಾಕಿ ಬಿಟ್ಟರೆ ದೀಪಾವಳಿ ಸಮಯದಲ್ಲಿ ಬೇರೆ ಮನರಂಜನೆ ಇರಲಿಲ್ಲ. ಇವತ್ತು ಮನರಂಜನೆಗೆ ಏನು ಕೊರತೆ ಇದೆ? ಬೇಕಿದ್ದರೆ ಮನೆಯಲ್ಲಿ ಟಿ.ವಿ. ಪರದೆಯ ಮೇಲೆ ನಾವು ದೀಪಾವಳಿ ದೃಶ್ಯಗಳನ್ನು ನೋಡಿ ಕೂಡಾ ಸಂತೋಷ ಪಡಬಹುದು! ಹೊಗೆ ಇಲ್ಲದ, ಬೆಂಕಿ ಇಲ್ಲದ, ಬೆಳಕನ್ನು ಮಾತ್ರ ಬೀರುವ ಹೊಸಬಗೆಯ ಎಲೆಕ್ಟ್ರಾನಿಕ್ ಪಟಾಕಿಗಳನ್ನು ಕುರಿತು ಯೋಚಿಸಬಹುದು!  

"ಪಟಾಕಿ ಬೇಡ" ಎನ್ನುವುದು ನಮ್ಮ ನೈರ್ಮಲ್ಯ, ಆರೋಗ್ಯ ಮತ್ತು ಸುರಕ್ಷತೆತೆಯ ದೃಷ್ಟಿಯಿಂದ ಸಾಧುವಾದ ನಿರ್ಣಯ. ಇದು ಮುಂದೆ ಕಡ್ಡಾಯವಾದ ನಿಯಮವೂ ಆಗಬಹುದು. ಕೇವಲ ದೀಪಾವಳಿ ಯಾಕೆ, ದಸರಾ, ಕ್ರಿಸ್ ಮಸ್, ಹೊಸವರ್ಷ, ಈ ಎಲ್ಲಾ ಹಬ್ಬಗಳ ಆಚರಣೆಯನ್ನು ಕುರಿತು ಕೂಡಾ ನಾವು ಪುನಃ ಯೋಚಿಸಬೇಕು.  ಕಾಲ ಕಳೆದಂತೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಲೇ ಬೇಕು. 






ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)