ಶಮ್ಮಿ ಕಪೂರ್ ನೆನಪು


ಇವತ್ತು ವಿಜಯದಶಮಿಯ ದಿವಸ ಹಿಂದಿ ಚಿತ್ರನಟ ದಿ| ಶಮ್ಮಿ ಕಪೂರ್ ಅವರ ಜನ್ಮ ದಿನ ಅಂತ ಯಾರೋ ನೆನಪಿಸಿದರು. ಶಮ್ಮಿ ಅನ್ನುವ ಹೆಸರಿಗೂ ಶಮೀ ಪತ್ರೆಯ ಹೆಸರಿಗೂ ಸಂಬಂಧವಿರಬಹುದೇ?  ಅದಿರಲಿ ವಿಜಯ ದಶಮೀ ಎಂಬುದು "ವಿಜಯದ ಶಮೀ" ಆಗಿರಬಹುದೇ ಎಂದೆಲ್ಲಾ ನನ್ನ ಮನವೆಂಬ ಮರ್ಕಟ ಆಲೋಚಿಸುತ್ತಿದೆ. ಅದು ಹಾಗಿರಲಿ!

ಶಮ್ಮಿ ಕಪೂರ್ ತಮ್ಮ ಕಾಲದ ಸ್ಟೈಲ್ ಕಿಂಗ್.  ಶಮ್ಮಿ ಕಪೂರ್ ಅಂದರೆ ನೆನಪಾಗುವುದು ಅವರ ನೃತ್ಯಗಳು ಮತ್ತು ಅವರ ಚಿತ್ರದಲ್ಲಿ ಮಹಮ್ಮದ್ ರಫಿ ಹಾಡಿದ ಹಾಡುಗಳು.  ಅಣ್ಣ ರಾಜ್ ಕಪೂರ್  ಆಗಲೇ ಪ್ರಸಿದ್ಧರಾಗಿದ್ದಾಗ ಅವರಿಗಿಂತ ಭಿನ್ನವಾಗಿ ನಟಿಸದೇ ಇದ್ದರೆ ಶಮ್ಮಿ ಕಪೂರ್ ಅವರಿಗೆ ತಮ್ಮದೇ ಸ್ಥಾನ ಸಿಕ್ಕುತ್ತಿರಲಿಲ್ಲ. ಶಮ್ಮಿ ಕಪೂರ್ ತಮ್ಮ ಆಂಗಿಕ ಚೇಷ್ಟೆ, ಹಾಸ್ಯ, ವಿದೇಶೀ ನೃತ್ಯಗಳು   ಇವುಗಳಿಂದ  ಭಿನ್ನವಾಗಿ ಕಂಡರು.  ಆದರೆ ಅವುಗಳನ್ನು ಕುರಿತು ನಾನು ಬರೆಯುವುದಿಲ್ಲ.

ಎಂಬತ್ತರ ದಶಕದಲ್ಲಿ ಪ್ರತಿ ಭಾನುವಾರ ಬೈಬಲ್ ಆಧಾರಿತ ಒಂದು ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. "ಟವರ್ ಆಫ್ ಬೇಬೆಲ್" ಕಥೆಯನ್ನು ನೋಡಿದ್ದು ನನಗೆ ನೆನಪಿದೆ. ಇದರಲ್ಲಿ ಶಮ್ಮಿ ಕಪೂರ್ ನಟಿಸಿದ್ದರು. 

ಅತ್ಯಂತ ಎತ್ತರದ ಒಂದು ಮೀನಾರವನ್ನು ನಿರ್ಮಿಸಲು ನಿಮ್ರೋಡ್ ಎಂಬ  ಒಬ್ಬ ರಾಜನ ನಿರ್ದೇಶನದಲ್ಲಿ ಹೀಬ್ರೂ ಜನರು ತೊಡಗುತ್ತಾರೆ.  ನೀಮ್ರೋಡ್ ಒಬ್ಬ ದುಷ್ಟ ರಾಜ, ದುರಹಂಕಾರಿ.  ತನ್ನ ಅಹಂಕಾರ ಮೆರೆಯಲು ರಾಜ ಮೀನಾರದ ಎತ್ತರವನ್ನು ಏರಿಸುತ್ತಾ ಹೋಗುತ್ತಾನೆ.  ಸ್ವರ್ಗದವರೆಗೂ ಹೋಗಿ ತಲುಪುವ ಮೀನಾರವನ್ನು ಇಟ್ಟಿಗೆಗಳನ್ನು ಬಳಸಿ ಕಟ್ಟುವುದು ರಾಜನ ಉದ್ದೇಶ.   ಆಗ ಎಲ್ಲರೂ ಒಂದೇ ಭಾಷೆ ಮಾತಾಡುತ್ತಿದ್ದರು ಎಂದು ಬೈಬಲ್ ಕಥೆ ಹೇಳುತ್ತದೆ.  .ಮನುಷ್ಯನ  ಅಹಂಕಾರವನ್ನು ಮುರಿಯಬೇಕೆಂಬ ಉದ್ದೇಶದಿಂದ ದೇವರು ಈ ಮೀನಾರವನ್ನು ನಾಶ ಮಾಡುತ್ತಾನೆ.  "ಒಂದೇ ಭಾಷೆ ಮಾತಾಡುತ್ತಾ ಒಟ್ಟಿಗೆ ಕೆಲಸ ಮಾಡುವುದರಿಂದಲೇ ಇವರು ಹೀಗೆ ದುಸ್ಸಾಹಸ ಮಾಡಲು ಹೊರಟರು," ಎಂದು ತನ್ನ ಮಾಯೆಯಿಂದ ಅವರ ಭಾಷೆಗಳನ್ನು ಬದಲಾಯಿಸಿಬಿಡುತ್ತಾನೆ. ಒಬ್ಬರು ಮಾತಾಡಿದ್ದು ಇನ್ನೊಬ್ಬರಿಗೆ ಅರ್ಥವಾಗುವುದಿಲ್ಲ! ಹೀಗಾಗಿ ಮೀನಾರದ ನಿರ್ಮಾಣ ಮುಂದಕ್ಕೆ ಸಾಗುವುದಿಲ್ಲ.  ಇದು ಬಲಿ ಚಕ್ರವರ್ತಿಯ ಕಥೆಯನ್ನು ನೆನಪಿಗೆ ತರುತ್ತದೆ.  
ರಾಜ ನಿಮ್ರೋಡ್ ಪಾತ್ರದಲ್ಲಿ ಶಮ್ಮಿ ಕಪೂರ್ ನಟಿಸಿದ್ದರು. ಅವರ ಸ್ಥೂಲಕಾಯ ಈ ಪಾತ್ರಕ್ಕೆ ಒಪ್ಪುತ್ತಿತ್ತು. ಅವರು ಪಾತ್ರ ವಹಿಸುವಾಗ ಕಥೆಯಲ್ಲಿ ತಲ್ಲೀನರಾಗುತ್ತಿದ್ದುದರಿಂದ ಅವರ ನಟನೆ ಸಹಜವೆನ್ನಿಸುತ್ತಿತ್ತು. 

ಅಂದಹಾಗೆ "ಯಾಹೂ!" ಎಂಬ ಉದ್ಗಾರ ಅವರು ನಟಿಸಿದ  "ಜಂಗ್ಲಿ" ಚಿತ್ರದ ಒಂದು ಹಾಡಿನಲ್ಲಿ ಬರುತ್ತದೆ.  ಹಾಡನ್ನು ರಫಿ ಹಾಡಿದರೂ ಉದ್ಗಾರಕ್ಕೆ ಅವರೇ ಧ್ವನಿ ನೀಡಿದ್ದಾರೆ.  ಈಗ ಯಾಹೂ ಮತ್ತು ಜಂಗ್ಲಿ ಎರಡೂ ಪ್ರಸಿದ್ಧ ಕಂಪನಿಗಳು!

- ಸಿ ಪಿ ರವಿಕುಮಾರ್, ವಿಜಯದಶಮಿ, 2015 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)