ಎನ್ ಆರ್ ಎನ್ - ನೆನಪುಗಳು

 



ಭಾರತಕ್ಕೆ ಮರಳಿ ಬಂದಾಗ ಇನ್ಫೋಸಿಸ್ ಕಚೇರಿಯಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ಡೈರೆಕ್ಟರ್ ಆಫೀಸಿನಲ್ಲಿ ನಾರಾಯಣ ಮೂರ್ತಿ ಕೂಡುತ್ತಿದ್ದರು. ಅವರಿಗೆ ಮುಂಗೋಪ ಹೆಚ್ಚು. ಒಮ್ಮೊಮ್ಮೆ ಸೆಕ್ರೆಟರಿಯ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದರು. ಅವರ ಆಲೋಚನೆಯ ರೀತಿ ವಿಭಿನ್ನವಾಗಿತ್ತು.  ಭಾರತದಿಂದ ಪ್ರತಿಭಾವಂತರನ್ನು ಹೊರದೇಶಕ್ಕೆ ಕಳಿಸಿ ಅಲ್ಲಿ ಪ್ರಾಜೆಕ್ಟ್ ಮಾಡಿಸಿ ಹಣ ಮಾಡುವ ಕಂಪನಿಗಳಿಗೆ ಬಾಡಿ ಶಾಪರ್ಸ್ ಎಂದು ವ್ಯಂಗ್ಯದಿಂದ ಮಾತಾಡುತ್ತಿದ್ದ ಕಾಲದಲ್ಲಿ ಭಾರತದಲ್ಲೇ ಪ್ರಾಜೆಕ್ಟ್ ಮಾಡಿಸಬೇಕು ಎಂಬ ಆಸೆಯನ್ನು ಮೂರ್ತಿ ಹೊಂದಿದ್ದರು. 

 ಕೆ.ಎಸ್.ಆರ್.ಟಿ.ಸಿ.ಗೆ ಟಿಕೆಟಿಂಗ್ ವ್ಯವಸ್ಥೆಯ ತಂತ್ರಾಂಶವನ್ನು ಅವರು ನಿಶ್ಶುಲ್ಕವಾಗಿ ತಯಾರಿಸಿಕೊಟ್ಟರು. ಟ್ರಾಕ್ಸ್ ಎಂಬ ಹೆಸರಿನ ಈ ತಂತ್ರಾಂಶವನ್ನು ನಿರ್ಮಿಸಲು ಸಾಕಷ್ಟು ಇಂಜಿನಿಯರುಗಳು ಅನೇಕ ತಿಂಗಳು ದುಡಿದರು.  ಬಹುಶಃ ಇಂಥ ಪ್ರಯತ್ನಗಳು ಬೇರೆಡೆ ನಡೆದಿರಲಾರವು.  


ಸುಧಾ ಮೂರ್ತಿ ಒಮ್ಮೊಮ್ಮೆ ಆಫೀಸಿಗೆ ಬರುತ್ತಿದ್ದರು. ಬಹುಶಃ ಎರಡು ವರ್ಷ ವಯಸಾಗಿದ್ದ ಮಗನನ್ನು ಎತ್ತಿಕೊಂಡು ಬರುತ್ತಿದ್ದರು. ನಾವು ಮಗುವನ್ನು ಮಾತಾಡಿಸಿದರೆ ಮೂರ್ತಿ "ಇವನ ಜೊತೆ ಹುಷಾರು, ಇವನು ಮಹಾ ಅಪಾಯಕಾರಿ ವ್ಯಕ್ತಿ" ಎಂದು ತಮಾಷೆ ಮಾಡುತ್ತಿದ್ದರು. 


ಅಂದು ಗಣಕಯಂತ್ರಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಅಮೇರಿಕಾ ಮತ್ತು ಜಪಾನ್ ಮಾತ್ರ ಗಣಕಗಳನ್ನು ತಯಾರಿಸುತ್ತಿದ್ದವು. ಭಾರತದಂಥ ದೇಶಕ್ಕೆ ಗಣಕ ತಂತ್ರಜ್ಞಾನವನ್ನು ನೀಡಲು ಅಮೆರಿಕಾ ಹಿಂದೆಮುಂದೆ ನೋಡುತ್ತಿದ್ದ ಕಾಲವದು.  ಐಬಿಎಂ ಆಗ ಮೇನ್ ಫ್ರೇಂ ಎಂಬ ಗಣಕಗಳನ್ನು ತಯಾರಿಸುತ್ತಿತ್ತು.  ಡೆಕ್ ಅಥವಾ ಡಿಜಿಟಲ್ ಎಕ್ವಿಪ್ಮೆಂಟ್ ಕಾರ್ಪೊರೇಷನ್ ಮಿನಿಕಂಪ್ಯೂಟರ್ ಮಾರುಕಟ್ಟೆಗೆ ತಂದು ಜನಪ್ರಿಯಗೊಳಿಸಿತು. ಮಿನಿ ಕಂಪ್ಯೂಟರ್ ಗಾತ್ರದಲ್ಲಿ ಚಿಕ್ಕದು,  ಹೋಲಿಕೆಯಲ್ಲಿ ಬೆಲೆಯೂ ಕಡಿಮೆ. ಹೀಗಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳೂ ಗಣಕವನ್ನು ಹೊಂದುವ ಸಾಧ್ಯತೆ ಹುಟ್ಟಿಕೊಂಡಿತು.  ಡೆಕ್ ಕಂಪನಿಗೆ ಪ್ರತಿಸ್ಪರ್ಧಿಯಾಗಿ ಡೇಟಾ ಜೆನರಲ್ ಎಂಬ ಕಂಪನಿ ಸೂಪರ್ ಮಿನಿ ಕಂಪ್ಯೂಟರ್ ಯಂತ್ರಗಳನ್ನು ಮಾರುಕಟ್ಟೆಗೆ ತಂದಿತು.  ಡಿಜಿ ಎಂವಿ 4000 6000, 8000, 10000 ಎಂಬ ಸರಣಿಯನ್ನೇ ಬಿಡುಗಡೆ ಮಾಡಿತು.  ಡಿಜಿ ಎಂವಿ 8000 ಎಂಬ ಸೂಪರ್ ಮಿನಿ ಕಂಪ್ಯೂಟರನ್ನು ಮೈಕೋ ಕಂಪನಿಗೆ ಆಮದು ಮಾಡಿಕೊಡುವ ಪ್ರಾಜೆಕ್ಟನ್ನು ಮೂರ್ತಿಯವರು ಕಲ್ಪಿಸಿಕೊಂಡರು. ಗಣಕವನ್ನು ಸ್ಥಾಪಿಸುವುದು, ಅದನ್ನು ನೋಡಿಕೊಳ್ಳುವುದು, ಮೈಕೋ ಇಂಜಿನಿಯರುಗಳಿಗೆ ತರಬೇತಿ ಇವೆಲ್ಲವೂ ಇನ್ಫೋಸಿಸ್ ಜವಾಬ್ದಾರಿ. ಇದನ್ನು ಇನ್ಫೋಸಿಸ್ ಸಮರ್ಥವಾಗಿ ಮಾಡಿ ಒಳ್ಳೆಯ ಹೆಸರು ಪಡೆಯಿತು.  ಕಂಪ್ಯೂಟರಿಗಾಗಿ ಆಡುಗೋಡಿಯ ಮೈಕೋ ಆಫೀಸಿನಲ್ಲಿ ವಿಶೇಷ ಕೋಣೆಯನ್ನು ನಿರ್ಮಿಸಿದರು. ಎಸಿ ಆಗಿನ ಕಾಲಕ್ಕೆ ಬಹಳ ಅಪರೂಪ.  ಬಳಕೆದಾರರಿಗಾಗಿ ಟರ್ಮಿನಲ್ಗಳನ್ನು ಸ್ಥಾಪಿಸಿದ ಕೋಣೆಯಲ್ಲೂ ಎಸಿ ಇತ್ತು. ಕಂಪ್ಯೂಟರ್ ಮೇಲೆ ಕೆಲಸ ಮಾಡಬೇಕಾದವರಿಗೆ ಜಯನಗರದಿಂದ ಆಡುಗೋಡಿಗೆ ಮತ್ತು ಆಡುಗೋಡಿಯಿಂದ ಜಯನಗರಕ್ಕೆ ಆಟೋ ಚಾರ್ಜ್ ಕಂಪನಿ ಕೊಡುತ್ತಿತ್ತು.  ಆಡುಗೋಡಿಗೆ ಹೋಗುವ ರಸ್ತೆ ಆಗ ಬಹಳ ಕೆಟ್ಟುಹೋಗಿತ್ತು. ರಸ್ತೆಯಲ್ಲಿ ಹಳ್ಳಗಳಿದ್ದವು. ಆಟೋ ಡ್ರೈವರಿಗೆ ಓಡಿಸುವುದು ಕಷ್ಟ. ಹಿಂದೆ ಕೂತವರಿಗೆ ಬಿಟ್ಟಿ ರೋಲರ್ ಕೋಸ್ಟರ್ ಸವಾರಿ. ರಸ್ತೆ ರಿಪೇರಿಯಾಗಲು ಏನೋ ಕಾನೂನು ಸಮಸ್ಯೆ ಇತ್ತು. ವಿಮಾನ ನಿಲ್ದಾಣಕ್ಕೆ ಹೋಗಲು ಇದೇ ರಸ್ತೆ ಬಳಸಬೇಕಾಗಿತ್ತು. ಮುಂದೆ ನಟ ಅನಂತನಾಗ್ ಸಂಸದರಾದಾಗ ಈ ಸಮಸ್ಯೆಯನ್ನು ಪರಿಹರಿಸಿದರು. 


ಜರ್ಮನಿಯ ಹ್ಯಾನೋವರ್ ಎಂಬ ಕಡೆ ಆಗ ಪ್ರತಿವರ್ಷ ನಡೆಯುತ್ತಿದ್ದ ಬೃಹತ್ ಪ್ರದರ್ಶನದಲ್ಲಿ ಇನ್ಫೋಸಿಸ್ ಕಂಪನಿಯ ಪ್ರದರ್ಶನಿಯನ್ನು ಕಳಿಸುವ ಸಾಹಸವನ್ನು ಆಗಿನ ಕಾಲದಲ್ಲಿ ಮೂರ್ತಿಯವರು ತೋರಿದರು.  ಆಗ ಬೆಂಗಳೂರಿನಲ್ಲಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವೂ ಇರಲಿಲ್ಲ.  ಹ್ಯಾನೋವರ್ ಪ್ರದರ್ಶನಕ್ಕೆ ಬೇಕಾದ ಎಲ್ಲ ಸರಂಜಾಮುಗಳನ್ನು ಸಿದ್ಧಪಡಿಸಿ ಮುಂಬೈ ಮೂಲಕ ಅದನ್ನು ಜರ್ಮನಿಗೆ ಕಳಿಸಬೇಕು.  ಜಾನ್ಸನ್ ಎಂಬ ಹೆಸರಿನ ತರುಣ ಇಂಜಿನಿಯರೊಬ್ಬನನ್ನು ಪ್ರಾಜೆಕ್ಟ್ ಮ್ಯಾನೇಜರ್ ಸ್ಥಾನಕ್ಕೆ ನಿಯುಕ್ತಗೊಳಿಸಿ ಅವನಿಗೆ ಈ ಜವಾಬ್ದಾರಿ ವಹಿಸಿದ್ದರು.  ಪ್ರದರ್ಶನಿಯಲ್ಲಿರಿಸಲು ದೊಡ್ಡ ಗಾತ್ರದ ಚಿತ್ರಗಳನ್ನು ಮಾಡಿಸಬೇಕು. ಇದಕ್ಕಾಗಿ  ಮುಂಬೈನಿಂದ ಒಬ್ಬ ಪ್ರಸಿದ್ಧ ಫೋಟೋಗ್ರಾಫರ್ ತನ್ನ ತಂಡದೊಂದಿಗೆ ಆಗಮಿಸಿದ.  ಮೈಕೋ ಆಫೀಸಿನಲ್ಲಿ ಫೋಟೋಶೂಟ್ ಇರುತ್ತದೆಂದು ಕೆಲವರಿಗೆ ಆಹ್ವಾನ ಹೋಯಿತು. ಅವರಲ್ಲಿ ನಾನೂ ಒಬ್ಬ!  ನನ್ನ ಸಹೋದ್ಯೋಗಿಗಳಾದ ಶ್ರೀನಿವಾಸನ್ ರಾಘವನ್, ಶುಭಾ, ಸೂರ್ಯಪ್ರಕಾಶ್ ಮೊದಲಾದವರು ಕೂಡಾ ಇದ್ದರು. ಭಾನುವಾರ ಬೆಳಗ್ಗೆ ಒಂಬತ್ತಕ್ಕೆ ಮುಂಚೆಯೇ ನಾವು ಹಾಜರಾದೆವು. ಆದರೆ ಫೋಟೋಗ್ರಾಫರ್ ಇನ್ನೂ ನಾಪತ್ತೆ. ಕೊನೆಗೂ ಅವನ ತಂಡದವರು ಬಂದಾಗ ಹನ್ನೆರಡು ಸಮೀಪಿಸುತ್ತಿತ್ತು.  ಫೋಟೋಗ್ರಾಫರ್ ಎಲ್ಲೆಲ್ಲಿ ಎಷ್ಟು ಚಿತ್ರಗಳನ್ನು ತೆಗೆಯಬೇಕು ಎನ್ನುವುದನ್ನು ಪರಿಶೀಲಿಸಲು ತಮಗೆ ಸಮಯ ಬೇಕೆಂದು ಕೇಳಿದ.  ನಮಗೆ ಕಾದು ಬೋರಾಗಿತ್ತು. ಹೊಟ್ಟೆ ಹಸಿದಿತ್ತು. ಮೂರ್ತಿಯವರು ನಮ್ಮನ್ನು ಕರೆದು "ನೀವು ಎಂಜಿ ರೋಡಿನಲ್ಲಿ ಊಟ ಮಾಡಿಕೊಂಡು ಬನ್ನಿ. ನಿಮ್ಮ ಆಟೋ ಚಾರ್ಜ್ ಮತ್ತು ಊಟದ ಖರ್ಚನ್ನು ಕಂಪನಿ ಕೊಡುತ್ತದೆ ಎಂದು ಘೋಷಿಸಿದರು. ಇದೆಲ್ಲ ಆಗ ಹೊಸತು. ನಾವು ಖುಷಿಯಾಗಿ ಎಂಜಿ ರೋಡಿನ (ಬಹುಶಃ ಸಿಸ್ಲರ್ ಎಂಬ) ಹೋಟೆಲಿಗೆ ಹೋಗಿ ಊಟ ಮಾಡಿ ಹಿಂತಿರುಗಿದೆವು. ಫೋಟೋಗ್ರಾಫರ್ ಇನ್ನೂ ಸಿದ್ಧನಾಗಿರಲಿಲ್ಲ! ಎಸಿ ರೂಮಿನಲ್ಲಿ ಕಾಯುತ್ತಾ ನಾವು ಹರಟೆ ಹೊಡೆದೆವು. ಸಂಜೆಯೂ ಆಯಿತು. ಮೂರ್ತಿ ಎಲ್ಲರಿಗೂ ಕಾಫಿ ತರಿಸಿದರು.  ನಂತರ ಊಟವೂ ಬಂತು.  ಕೊನೆಗೂ ಎಂಟು ಗಂಟೆ ಸುಮಾರಿಗೆ ಫೋಟೋಶೂಟ್ ಪ್ರಾರಂಭ. ಒಂದೊಂದಾಗಿ ಫೋಟೋ ತೆಗೆಯಲು ಸಾಕಷ್ಟು ಸಮಯ ವ್ಯಯವಾಗುತ್ತಿತ್ತು. ಪ್ರಖರವಾದ ಬೆಳಕನ್ನು ಬೀರುವ ಉಪಕರಣಗಳನ್ನು ವ್ಯವಸ್ಥೆ ಮಾಡಿದ್ದರು. ನಮಗೆ ಪೌಡರ್ ಇತ್ಯಾದಿಗಳಿಂದ ಮೇಕಪ್ ಕೂಡಾ ಆಯಿತು.   ನಮ್ಮ ಸರದಿ ಬಂದಾಗ ನಾನು ಟೇಪ್ ಡ್ರೈವ್ ಮುಂದೆ ನಿಂತು ಟೇಪ್ ಬದಲಾಯಿಸುತ್ತಿರುವಂತೆ ನಟಿಸಬೇಕು!  ಸಹೋದ್ಯೋಗಿ ಶುಭಾ ನನಗೆ ಸಹಾಯ ಮಾಡುತ್ತಿರುವಂತೆ ನಟಿಸಿದಳು! ಕೊನೆಗೂ ಈ ಸಂಭ್ರಮವೆಲ್ಲ ಮುಗಿದಾಗ ರಾತ್ರಿ ಹನ್ನೆರಡು ಸಮೀಪಿಸಿತ್ತು. ಆಗ ನಮ್ಮ ಮನೆಯಲ್ಲಿ ಫೋನ್ ಇರಲಿಲ್ಲ. ಹೀಗಾಗಿ ಅವರಿಗೆ ತಡವಾಗುತ್ತದೆಂದು ತಿಳಿಸಿಯೂ ಇರಲಿಲ್ಲ!  ಮೂರ್ತಿಯವರು ನನ್ನನ್ನು ಮತ್ತು ಜಯನಗರದಲ್ಲಿದ್ದ ಮತ್ತೂ ಕೆಲವರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಬಂದು ಮನೆಯವರೆಗೂ ಬಿಟ್ಟರು. ನನ್ನ ತಂದೆ ಮತ್ತು ತಾಯಿ ಹೊರಗೆ ಕಾದು ನಿಂತಿದ್ದರು.  ಮುಂದೆ ಚಿತ್ರಗಳ ಬೃಹತ್ ಪ್ರತಿಗಳನ್ನು ತೆಗೆದು ಮೌಂಟ್ ಮಾಡಿಸಿ ಅವನ್ನು ಹ್ಯಾನೋವರಿಗೆ ಕಳಿಸಿದರು. ಇನ್ಫೋಸಿಸ್ ತನ್ನ ಚರಿತ್ರೆಯನ್ನು ದಾಖಲಿಸಿ ತಯಾರಿಸಿದ ಸಾಕ್ಷಿಚಿತ್ರದಲ್ಲಿ ಮೇಲೆ ಹೇಳಿದ ನನ್ನ ಚಿತ್ರವೂ ಸೇರಿದೆ!


ಐಐಎಸ್ಸಿಯಲ್ಲಿ ಎಂ.ಟೆಕ್ ಮಾಡುವ ನನ್ನ ಕನಸಿನ ಬಗ್ಗೆ ನಾನು ಮೂರ್ತಿಯವರಿಗೆ ತಿಳಿಸಿದೆ.  ಇದು ನನಗೆ ಸುಲಭವಾಗಿರಲಿಲ್ಲ. ಇನ್ಫೋಸಿಸ್ ಬಿಟ್ಟು ಮತ್ತೆ ವಿದ್ಯಾರ್ಥಿ ಜೀವನ ಪ್ರವೇಶಿಸುವುದು ಸುಲಭದ ನಿರ್ಧಾರವಲ್ಲ. ಮೂರ್ತಿಯವರು ನನ್ನ ಮಾತು ಕೇಳಿಸಿಕೊಂಡು "ನೀನು ಮುಂದೆ ಓದುವುದು ನನಗೂ ಪ್ರಿಯವಾದದ್ದು. ಆದರೆ ಐಐಎಸ್ಸಿ ಯಾಕೆ? ಐಐಟಿ ಕಾನ್ಪುರದಲ್ಲಿ ಕಂಪ್ಯೂಟರ್ ಸೈನ್ಸ್ ಚೆನ್ನಾಗಿದೆ. ಅಲ್ಲಿಗೆ ಹೋಗು" ಎಂದರು. ನಾನು "ಗೇಟ್ ಎಕ್ಸಾಂ ಬರೆಯುವಾಗ ಐಐಎಸ್ಸಿಯನ್ನೇ ಆರಿಸಿಕೊಂಡಿದ್ದೇನೆ. ಈಗ ಬದಲಾಯಿಸಲು ಆಗದು" ಎಂದೆ. ಅವರು "ಇನ್ನೊಮ್ಮೆ ಗೇಟ್ ಬರೆದರಾಯಿತು" ಎಂದು ಮುಗುಳುನಗೆ ನಕ್ಕರು. ನಾನು ಕೂಡಾ ಮುಗುಳುನಗುವಿನ ಉತ್ತರ ನೀಡಿದೆ. ಅವರು "ಸರಿ, ನೀನು ನಿರ್ಧರಿಸಿದ್ದರೆ ಹಾಗೇ ಆಗಲಿ. ನಿನಗೆ ನಾನು ಒಂದೂವರೆ ವರ್ಷ ಲೀವ್ ಕೊಡಬಲ್ಲೆ. ನೀನು ಬಾಂಡ್ ಕೊಡಬೇಕು. ಮರಳಿ ಬಂದಾಗ ನಿನ್ನ ಸೀನಿಯಾರಿಟಿ ಹಾಗೇ ಇರುತ್ತೆ"  ಎಂದರು. ನಾನು ಏನೂ ಉತ್ತರಿಸಲಿಲ್ಲ. ಇದನ್ನು ನಾನು ಅಪೇಕ್ಷಿಸಿರಲಿಲ್ಲ. ಅವರು "ಈ ನಿರ್ಧಾರ ನಿನ್ನದು. ಈಗಲೇ ತಿಳಿಸಬೇಕಾಗಿಲ್ಲ"  ಎಂದರು. 


ನನ್ನ ಸಹೋದ್ಯೋಗಿಗಳ ಜೊತೆ ಈ ವಿಷಯ ಪ್ರಸ್ತಾಪಿಸಿದೆ. ಅವರು ಒಕ್ಕೊರಲಿನಲ್ಲಿ "ಬಾಂಡ್ ಎಲ್ಲ ಕೊಡಬೇಡ. ಬೇಕಾದರೆ ನೀನು ಮತ್ತೆ ಇಲ್ಲಿಗೆ ಬರಬಹುದು. ಆದರೆ ನೀನು ಎಂಇ ಮಾಡಲು ಹೋಗುತ್ತಿದ್ದೀಯ! ಅಲ್ಲಿ ನಿನ್ನ ಮುಂದೆ ಇನ್ನೂ ಬೇಕಾದಷ್ಟು ಮಾರ್ಗಗಳು ಎದುರಾಗುತ್ತವೆ" ಎಂದು ಸಲಹೆ ನೀಡಿದರು. ನನ್ನ ರಾಜೀನಾಮೆಯನ್ನು ಯಾವ ತಕರಾರಿಲ್ಲದೆ ಕಂಪನಿ ಮಂಜೂರು ಮಾಡಿತು. "ನಿನಗೆ ಇಲ್ಲಿ ಎಂದೂ ಸ್ವಾಗತ" ಎಂದು ಮೂರ್ತಿ ಶುಭ ಕೋರಿದರು.


ಎಂ.ಇ. ಮಾಡುವಾಗ ಐಐಎಸ್ಸಿಯಲ್ಲಿ ಕಂಪ್ಯೂಟರ್ ಸೆಂಟರಿನಲ್ಲಿ ಟರ್ಮಿನಲ್ ಸಿಕ್ಕಲು ನನ್ನ ಸರದಿಗೆ ಕಾಯಬೇಕಾಗಿತ್ತು. ಇದು ನನಗೆ ಕಠಿಣವೆನ್ನಿಸಿತು. ಕಂಪನಿಯಲ್ಲಿ ಯಾವಾಗ ಬೇಕಾದರೂ ಹೋಗಿ ಟರ್ಮಿನಲ್ ಮುಂದೆ ಕೂತು ಕೆಲಸ ಮಾಡಿ ರೂಢಿಯಾಗಿತ್ತು. ಒಮ್ಮೆ ಮೂರ್ತಿಯವರನ್ನು ಕೇಳೋಣ ಎಂದು ಅನ್ನಿಸಿತು. ನನ್ನ ಸಮಸ್ಯೆ ಕೇಳಿ ಕೂಡಲೇ "ನೀನು ಸಂಜೆ ಮತ್ತು ವೀಕೆಂಡ್ ಮೈಕೋದಲ್ಲಿ ಕೆಲಸ ಮಾಡಿಕೋ. ನಮಗೇನೂ ಅಭ್ಯಂತರವಿಲ್ಲ" ಎಂದು ನನಗೆ ಅಕೌಂಟ್ ಸಿಕ್ಕುವಂತೆ ವ್ಯವಸ್ಥೆ ಮಾಡಿದರು.  ನನ್ನ ಎಂಇ. ಥೀಸಿಸ್  ಬರೆಯತೊಡಗಿದಾಗಲೂ ಇದೇ ಸಮಸ್ಯೆ. ಆಗ ವರ್ಡ್ ಸಾಫ್ಟ್ ಎಂಬ ತಂತ್ರಾಂಶ ಬಳಸಿ ಥೀಸಿಸ್ ಸಿದ್ಧ ಪಡಿಸಬೇಕಿತ್ತು. ನನಗೆ ಜಯನಗರ ಆಫೀಸಿನಲ್ಲಿ ಥೀಸಿಸ್ ಕೆಲಸ ಮಾಡಲು ಮೂರ್ತಿಯವರು ಯಾವುದೇ ಸಂಕೋಚವಿಲ್ಲದೆ ಅನುಮತಿ ನೀಡಿದರು.  


ನಾನು ವೀಕೆಂಡ್ ದಿನಗಳಲ್ಲಿ ಐಐಎಸ್ಸಿ ಹಾಸ್ಟೆಲಿನಿಂದ ಮನೆಗೆ ಬರುತ್ತಿದ್ದೆ. ಸಂಜೆ ಊಟ ಮುಗಿಸಿ ಇನ್ಫೋಸಿಸ್ ಕಚೇರಿಗೆ ಹೋಗುತ್ತಿದ್ದೆ. ಆಗ ಕಚೇರಿ ಖಾಲಿಯಾಗಿರುತ್ತಿತ್ತು.  ನಾನು ಮಹಡಿಯ ಕೋಣೆಯಲ್ಲಿದ್ದ ಕಂಪ್ಯೂಟರ್ ಮೇಲೆ ಕೆಲಸ ಮಾಡುತ್ತಿದ್ದೆ. ಒಬ್ಬ ಸೆಕ್ಯೂರಿಟಿ ಗಾರ್ಡ್ ಕೆಳಗೆ ಇರುತ್ತಿದ್ದ. ನಾನು ಕೆಲಸ ಮುಗಿಸಲು ಒಮ್ಮೊಮ್ಮ ನಡುರಾತ್ರಿ ಮೀರುತ್ತಿತ್ತು.  ಚಳಿಯ ಕಾರಣ ನಾನು ಶಾಲ್ ಕೊಂಡೊಯ್ಯವುದನ್ನು ರೂಢಿ ಮಾಡಿಕೊಂಡೆ. ಅದು ಕೆಂಪು ಬಣ್ಣದ ಶಾಲ್.  ಅದನ್ನು ಹೊದ್ದು ಕೆಲಸ ಮಾಡುತ್ತಿದ್ದೆ. ಒಂದು ರಾತ್ರಿ ಕೆಲಸ ಮುಗಿಸಿ ಕೆಳಗೆ ಬಂದಾಗ ಗಾರ್ಡ್ ಗಾಢನಿದ್ರೆಯಲ್ಲಿ ಗೊರಕೆ ಹೊಡೆಯುತ್ತಿದ್ದ. ಅವನನ್ನು ಎಬ್ಬಿಸಲೇಬೇಕಾಗಿತ್ತು. ನಾನು ಎಷ್ಟೇ ಕರೆದರೂ ಅವನಿಗೆ ಎಚ್ಚರವಿಲ್ಲ. ಕೊನೆಗೆ ನಾನು.ಅವನನ್ನು ತಟ್ಟಿ ಎಬ್ಬಿಸಬೇಕಾಯಿತು. ಅವನು ಅರೆಗಣ್ಣು ಬಿಟ್ಟು ನೋಡಿ ಒಮ್ಮೆಲೇ ಕೆಟ್ಟದಾಗಿ ಚೀರಿದ.  "ಇಲ್ಲ, ಇಲ್ಲ, ನಾನು, ನಾನು ..."  ಎಂದು ನಾನು ತಡವರಿಸಿದೆ. ಅವನಿಗೆ ಕೊನೆಗೂ ಎಚ್ಚರವಾಗಿ ಮೇಲೆದ್ದು "ಸಾರಿ ಸಾರ್" ಎಂದು ಮುಖ ತಗ್ಗಿಸಿದ. ನನ್ನ ಕೆಂಪು ಶಾಲಿನಲ್ಲಿ ನಾನು ಅವನಿಗೆ ಹೇಗೆ ಕಾಣಿಸಿದೆನೋ!!


ನನ್ನ ಥೀಸಿಸ್ ಸಿದ್ಧವಾದಾಗ ಆದರ ಕಾಪಿಯನ್ನು ಮೂರ್ತಿಯವರಿಗೆ ಕೊಟ್ಟೆ.   ಅವರು ಅದರ ಮೇಲೆ ಕಣ್ಣಾಡಿಸಿದರು. "ಥೀಸಿಸ್ಸಿನಲ್ಲಿ ನಿಮಗೆ ಕೃತಜ್ಞತೆಗಳನ್ನು ತಿಳಿಸಿದ್ದೇನೆ" ಎಂದೆ. ಅವರು ನೋಡಿ ಮುಗುಳ್ನಕ್ಕರು. 


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)