ವಾರ್ಡನ್ ಕಥನ




ನಾನು ದೆಹಲಿ ಐಐಟಿಯ ನೀಲಗಿರಿ ಹಾಸ್ಟೆಲಿಗೆ ವಾರ್ಡನ್ ಆಗಿ ನಿಯುಕ್ತನಾಗಿ ಕೊನೆಗೂ ಮನೆಯನ್ನು ಬದಲಾಯಿಸಿ ವಾರ್ಡನ್ ಮನೆಗೆ ಬಂದೆ. ಆ ಮನೆಯ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಮನೆಯ ಮುಂದೆ ಮತ್ತು ಹಿಂದೆ ಇದ್ದ ದೊಡ್ಡ ತೋಟ ನನಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ತೋಟಗಾರಿಕೆ ಮಾಡಲು ನನಗೆಲ್ಲಿ ಸಮಯವಿತ್ತು! ಮಗಳಿಗೆ ಆಗತಾನೇ ಒಂದು ವರ್ಷ ತುಂಬಿತ್ತು.  ಅವಳನ್ನು ಹಿಡಿಯುವುದೇ ಒಂದು ಸಾಹಸ. ಅವಳಿಗೆ ಅವಳ ಅಮ್ಮ ಹಿತ್ತಲಲ್ಲಿದ್ದ ಶೆಹತೂತ್ ಅಥವಾ ಹಿಪ್ಪುನೇರಳೆ ಮರದಲ್ಲಿ ಉಯ್ಯಾಲೆ ಹಾಕಿಕೊಟ್ಟಳು. ಇಬ್ಬರೂ ಈ ಉಯ್ಯಾಲೆಯಲ್ಲಿ ಬೇಕಾದಷ್ಟು ಆಡಿದರು. ದೆಹಲಿಯ ವಾಯುಮಾಲಿನ್ಯ ಆಗಲೂ ಹದಗೆಟ್ಟಿತ್ತು. ಮಗಳಿಗೆ ಹವಾಮಾನ ಬದಲಾವಣೆಯಾದಾಗಲೆಲ್ಲಾ ನೆಗಡಿ, ಕೆಮ್ಮು.

ಐಐಟಿಯ ದವಾಖಾನೆಯಲ್ಲಿ ಯಾವಾಗಲೂ ಗಿಜಿಗಿಜಿ ಜನ ತುಂಬಿರುತ್ತಿದ್ದ ಕಾರಣ ನಾವು ಹೊರಗಿನ ವೈದ್ಯರಿಗೆ ಶರಣಾದೆವು.  ಒಬ್ಬ ಹೋಮಿಯೋಪತಿ ವೈದ್ಯೆಯ ಪರಿಚಯವನ್ನು ಯಾರೋ ಹೇಳಿದರು. ಆಕೆಯ ಕ್ಲಿನಿಕ್ ದೂರದಲ್ಲಿತ್ತು. ನನ್ನ ಹೆಂಡತಿ ಟ್ಯಾಕ್ಸಿ ಮಾಡಿಕೊಂಡು ಅಲ್ಲಿಗೆ ಹೋಗಿಬರುತ್ತಿದ್ದಳು.  ಒಮ್ಮೆ ಹೋಮಿಯೋಪತಿಯ ಸಿಹಿಗುಳಿಗೆಗಳ ಬಾಟಲ್ ಮಗಳ ಕೈಗೆ ಸಿಕ್ಕಿ ಅವಳು ಅದರಲ್ಲಿದ್ದ ಸಿಹಿಯ ರುಚಿ ನೋಡಿದಳು..ಹೋಮಿಯೋಪತಿ ಔಷಧಕ್ಕೆ ಕಾಫಿ ಒಂದು ಆಂಟಿಡೋಟ್ ಅಥವಾ ಪ್ರತ್ಯೌಷಧ ಎಂದು ತಿಳಿದಿದ್ದ ನನ್ನ ಹೆಂಡತಿ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿ ಹೋದಳು.  ದೂರದ ಡಾಕ್ಟರ್ ಬಳಿ ಪದೇಪದೇ ಹೋಗುವುದು ಕಷ್ಟವೆನ್ನಿಸಿತು.  ನನ್ನ ಪಿಎಚ್.ಡಿ. ವಿದ್ಯಾರ್ಥಿಯೊಬ್ಬ ತನ್ನ ಮಕ್ಕಳನ್ನು ಹತ್ತಿರದ ಮದರ್ಸ್ ಆಸ್ಪತ್ರೆಯಲ್ಲಿದ್ದ ಡಾಕ್ಟರ್ ಒಬ್ಬರ ಹತ್ತಿರ ತೋರಿಸುತ್ತೇನೆಂದು ಹೇಳಿದ್ದು ಕೇಳಿ ನಾವೂ ಅಲ್ಲಿಗೆ ಹೋದೆವು. ಅಲ್ಲಿಯ ಡಾಕ್ಟರ್ ಮಗಳ ಕೆಮ್ಮಿಗೆ ಕೊಟ್ಟ ಔಷಧಗಳನ್ನು ನೋಡಿ ನಮಗೆ ಹೆದರಿಕೆಯೇ ಆಯಿತು. ಆಸ್ತಮಾಗೆ ಕೊಡುವ ಒಂದು ಔಷಧ ಕೂಡಾ ಇತ್ತು. ಆ ಬಿಳಿ ದ್ರಾವಣ ಅತ್ಯಂತ ಕಹಿ.   ಅದನ್ನು ಕುಡಿಸಲು ಹರಸಾಹಸ ಪಡಬೇಕಾಗಿತ್ತು.  ಕೆಮ್ಮುವ ಮಗುವಿಗೆ ನೆಬ್ಯುಲೈಸೇಷನ್ ಕೊಡಿಸುತ್ತಿದ್ದರು. ಇದೆಲ್ಲ ಯಾಕೋ ಅತಿಯಾಯಿತು ಎಂದು ನಮಗೆ ಭಯವಾಯಿತು.  ಕೆಲವು ತಿಂಗಳು ಈ ಅನುಭವವಾದ ನಂತರ ಮತ್ತೊಬ್ಬ ಡಾಕ್ಟರನ್ನು ಹುಡುಕಿದೆವು.


ವಾರ್ಡನ್ ಕೆಲಸ ನನಗೆ ಹೊಸತು.  ಅಲ್ಲಿಯ ಸಿಬ್ಬಂದಿಯನ್ನು ನಾನು ಪರಿಚಯ ಮಾಡಿಕೊಂಡೆ. ಮೆಸ್ ಅಥವಾ ಊಟದಮನೆಯ ಮೇಲ್ವಿಚಾರಕನ ಹೆಸರು ಭಟ್. ಆತನನ್ನು ಎಲ್ಲರೂ ಭಟ್ ಜೀ ಎಂದು ಕರೆಯುತ್ತಿದ್ದರು. ಆತ ಉಡುಪಿಯ ಭಟ್ಟನೇನೂ ಅಲ್ಲ.  ಉತ್ತರಾಖಂಡದ ಭಟ್. ಅವನಿಗೊಬ್ಬ ಅಸಿಸ್ಟೆಂಟ್ ಇದ್ದ. ಲೆಕ್ಕಪತ್ರವನ್ನೆಲ್ಲ ಅಸಿಸ್ಟೆಂಟ್ ನೋಡಿಕೊಳ್ಳುತ್ತಿದ್ದ. ಹಾಸ್ಟೆಲಿನ ದುರಸ್ತಿಯನ್ನು ನೋಡಿಕೊಳ್ಳಲು ಒಬ್ಬ ಕೇರ್ ಟೇಕರ್ ಇದ್ದ. ಅವನಿಗೊಬ್ಬ ಅಸಿಸ್ಟೆಂಟ್. ಕೇರ್ ಟೇಕರ್ ಒಬ್ಬ ಹಳೇ ಹುಲಿ. ಅವನಿಗೆ ಆಗಲೇ ನಿವೃತ್ತಿ ಸಮೀಪಿಸಿತ್ತು.  ಎಷ್ಟೋ ಜನ ವಾರ್ಡನ್ನುಗಳು ನೋಡಿದ್ದ. ನನ್ನನ್ನು ಭೇಟಿ ಮಾಡಿದಾಗ "ನೋಡಿ, ನೀವು ಹಾಸ್ಟೆಲ್ ಕೆಲಸವನ್ನು ನಮಗೆ ಬಿಟ್ಟುಬಿಡಿ. ಅದರಿಂದ ನೀವು ಎಷ್ಟು ದೂರ ಇರುತ್ತೀರೋ ಅಷ್ಟು ಒಳ್ಳೆಯದು!" ಎಂದು ನಯವಾಗಿ ಎಚ್ಚರಿಸಿದ!! ನನಗೆ ಏನೂ ಹೇಳಲು ತೋರಲಿಲ್ಲ.


ಕೆಲವೇ ದಿನಗಳಲ್ಲಿ ಅದೇ ಕೇರ್ ಟೇಕರ್ ನನಗೆ ಫೋನ್ ಮಾಡಿ "ನಿಮ್ಮ ಹಾಸ್ಟೆಲಿಗೆ ನೀವು ಕೂಡಲೇ ಬರಬೇಕು" ಎಂದಾಗ ನನಗೆ ಒಂದು ಕ್ಷಣ ಗಲಿಬಿಲಿ. ಒಮ್ಮೆಲೇ ಇದು ನನ್ನ ಹಾಸ್ಟೆಲ್ ಹೇಗಾಯಿತು ಎಂಬ ಆಲೋಚನೆ ಸುಳಿದುಹೋಯಿತು. ಏನಾಯಿತು ಎಂದು ಕೇಳಿದೆ.  "ಅದನ್ನು ಫೋನ್ ಮೇಲೆ ಹೇಳಲು ಸಾಧ್ಯವಿಲ್ಲ. ನೀವು ಕೂಡಲೇ ಬನ್ನಿ.  ನಿಮ್ಮ ಹಾಸ್ಟೆಲಿನ ಮಾನವನ್ನು ಉಳಿಸಿಕೊಳ್ಳುವುದು ನಿಮ್ಮ ಕರ್ತವ್ಯ"  ಎಂದ. ನನಗೆ ಕಕ್ಕಾಬಿಕ್ಕಿಯಾಯಿತು.  ನನ್ನ ಕೆಲಸವನ್ನೆಲ್ಲ ಬದಿಗಿಟ್ಟು ಹೊರಟೆ.  ಸಂಜೆಯ ನಾಲ್ಕು ಗಂಟೆ. ನಾನು ವಾರ್ಡನ್ ಆಗಿ ಸೇರಿದ್ದು ಸೆಪ್ಟೆಂಬರ್ ತಿಂಗಳಲ್ಲಿ, ದಸರಾ ಹಬ್ಬದ ದಿನಗಳಲ್ಲಿ.  ಹಾಸ್ಟೆಲ್ ಮುಂದಿದ್ದ ದೊಡ್ಡ ಮೈದಾನದಲ್ಲಿ ರಾವಣ ದಹನ ನಡೆದದ್ದನ್ನು ನನ್ನ ಮಗಳಿಗೆ ತೋರಿಸಿದ್ದು ಇನ್ನೂ ನೆನಪಿದೆ.  ಉತ್ತರಭಾರತದಲ್ಲಿ ನವರಾತ್ರಿಯಲ್ಲಿ ರಾಮಲೀಲಾ ನಾಟಕ ಒಂಬತ್ತು ದಿನ ನಡೆಯುತ್ತದೆ. ವಿಜಯದಶಮಿಯ ದಿನ ರಾವಣನ ವಧೆ ಮೈದಾನದಲ್ಲಿ ನಡೆಯುತ್ತದೆ. ರಾವಣನ ದೊಡ್ಡ ಪುತ್ಥಳಿಯಲ್ಲಿ ಪಟಾಕಿ ತುಂಬಿಸಿಡುತ್ತಾರೆ. ರಾಮನ ಪಾತ್ರಧಾರಿ ಬೆಂಕಿ ಹಚ್ಚಿದ ಬಾಣವನ್ನು ಈ ಪುತ್ಥಳಿಯತ್ತ ಹಾರಿಸುತ್ತಾನೆ. ಮಕ್ಕಳಿಗೆ ಢಮಢಮ ಸಿಡಿಯುತ್ತಾ ರಾವಣನ ಪುತ್ಥಳಿ ಬೀಳುವುದನ್ನು ನೋಡುವ ಸಡಗರ. ಮಕ್ಕಳಿಗಿಂತ ಅವರ ತಂದೆ ತಾಯಿಯರಿಗೆ! 


ಈಗ ದೀಪಾವಳಿ ಸಮೀಪಿಸುತ್ತಿತ್ತು.  ನನ್ನ ಆಫೀಸಿನಿಂದ ಹಾಸ್ಟೆಲಿಗೆ ಐದಾರು ನಿಮಿಷದ ನಡಿಗೆ. ನಾನು ಬಂದಾಗ ಹಾಸ್ಟೆಲ್ ಎದುರಿಗೆ ಪೊಲೀಸ್ ವ್ಯಾನ್ ನಿಂತಿತ್ತು. ಎಲ್ಲರೂ ನಾನು ಬರುವುದನ್ನೇ ಎದುರುನೋಡುತ್ತಿದ್ದರು. ವಾರ್ಡನ್ ಸಾಬ್ ಆಗಯೇ ಎಂದು ಪಿಸಿಪಿಸಿ ಮಾತಾಡಿಕೊಂಡರು. ಪೊಲೀಸ್ ಜೀಪಿನಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಕೆಳಗಿಳಿದು ಇವನೇನು ವಾರ್ಡನ್ ಎಂಬ ಪ್ರಾಣಿ ಎಂಬ ರೀತಿಯಲ್ಲಿ ನನ್ನನ್ನು ಮೇಲಿನಿಂದ ಕೆಳಗಿನವರೆಗೂ ನೋಡಿದರು.


ಆಯಿಯೇ ಡಾಕ್ಟರ್ ಸಾಬ್ ಎಂದು ಕೇರ್ ಟೇಕರ್ ನನ್ನನ್ನು ಹಾಸ್ಟೆಲಿನ ಬೈಠಕ್ಕಿಗೆ ಕರೆದುಕೊಂಡು ಹೋದ. ಭಟ್ ಜೀ ಕೂಡಾ ಅಲ್ಲೇ ಇದ್ದರು. ಅವರೂ ದೇಶಾವರಿ ನಗೆ ಬೀರಿ ನನ್ನನ್ನು ಹಿಂಬಾಲಿಸಿದರು. ಜೊತೆಗೆ ಇತರ ಸಿಬ್ಬಂದಿಯವರೂ ಬಂದರು. ಹುಡುಗರು ಕುತೂಹಲದಿಂದ ನಮ್ಮಕಡೆಗೆ ನೋಡುತ್ತಿದ್ದರು.  "ಬನ್ನಿ" ಎಂದು ನಾನು ಸಬ್ ಇನ್ಸ್ಪೆಕ್ಟರನ್ನು ಒಳಗೆ ಕರೆದೆ.  


 ಐಐಟಿಯಲ್ಲಿ ಪ್ರೊಫೆಸರ್ ಆದವರಿಗೆ ಡಾಕ್ಟರ್ ಸಾಬ್ ಎನ್ನುವುದು ಸಾಮಾನ್ಯ.  ನಾವು ಮೆಡಿಕಲ್ ಡಾಕ್ಟರಲ್ಲದಿದ್ದರೂ ನಮಗೆ ಈ ಮರ್ಯಾದೆ ಮಾಡಿಸಿಕೊಂಡು ರೂಢಿಯಾಗಿದೆ. ನನಗೆ ಲ್ಯಾಬ್ ಅಸಿಸ್ಟೆಂಟ್ ಆಗಿದ್ದ ಶರ್ಮಾ ಜೀ ಅವರನ್ನು ಒಮ್ಮೆ ನಾನು ಬೆಂಗಳೂರಿಗೆ ರೈಲ್ವೆ ಟಿಕೆಟ್ ಕಾದಿರಿಸಲು ಕಳಿಸಿದೆ. ಆತ ನನ್ನ ಹೆಸರಿಗೆ ಡಾಕ್ಟರ್ ಹಚ್ಚುವುದನ್ನು ಮರೆಯಲಿಲ್ಲ. ಪ್ರಯಾಣದ ರಾತ್ರಿ ಯಾರೋ ನನ್ನನ್ನು ಬಂದು ಡಾಕ್ಟರ್ ಸಾಬ್ ಎಂದು ಎಚ್ಚರಿಸಿದರು. ನನ್ನನ್ನು ಎಬ್ಬಿಸಿದ್ದು ಟಿಸಿ. ಪಕ್ಕದ ಡಬ್ಬಿಯಲ್ಲಿ ಒಬ್ಬರಿಗೆ ಹಾರ್ಟ್ ಪ್ರಾಬ್ಲೆಮ್ ಇದೆ, ಕೂಡಲೇ ಬನ್ನಿ ಎಂದು ಕರೆದ. ನನಗೆ ತಬ್ಬಿಬ್ಬಾಯಿತು. ನಾನು ಡಾಕ್ಟರ್ ಅಲ್ಲವಲ್ಲ ಎಂದೆ. "ಇದೇನು ಡಾಕ್ಟರ್ ಸಾಬ್ ಹೀಗೆ ಹೇಳ್ತೀರಿ, ನಿಮ್ಮ ಹೆಸರು ಹುಡುಕಿಕೊಂಡೇ ನಾನು ಬಂದಿರೋದು" ಎಂದ.  ನಾನು ಪಿಎಚ್.ಡಿ. ಡಾಕ್ಟರ್ ಕಣಪ್ಪ ಎಂದು ಅವನಿಗೆ ತಿಳಿಸಿ ಹೇಳಲು ಸಾಕುಬೇಕಾಯಿತು.  ಟಿಸಿ ನಿರಾಶನಾಗಿ ಬೇರೊಬ್ಬ ಡಾಕ್ಟರನ್ನು ಹುಡುಕಿಕೊಂಡು ಹೋದ. 


ಬೈಠಕ್ಕಿನಲ್ಲಿ ಕುಳಿತು ಏನಾಯಿತು ಎಂದೆ. ಭಟ್ ಜೀ ಅಷ್ಟರಲ್ಲಿ "ಸಾಬ್ ಜೀ, ಎಲ್ಲರಿಗೂ ಚಾಯ್ ಹೇಳುತ್ತೇನೆ" ಎಂದ. ನಾನು ಆಗಲಿ ಎಂದೆ. ಭಟ್ ಜೀ ತನ್ನ ಕೆಲಸಗಾರರನ್ನು ಕರೆದು ಫಟಾಫಟ್ ಚಾಯ್ ಲಾವೋ ಎಂದು ಆರ್ಡರ್ ಮಾಡಿದ. ಜೊತೆಗೆ ಗರ್ಮಾಗರಮ್ ಪಕೋಡಾ ಕೂಡಾ ತನ್ನಿ ಎಂದು ತಾಕೀತು ಮಾಡಿದ.


ಆಗಿದ್ದೇನು ಎಂದು ಸಬ್ ಇನ್ಸ್ಪೆಕ್ಟರ್ ವಿವರಿಸಿದರು. ಹಾಸ್ಟೆಲಿನ ಮೆಸ್  ಸಿಬ್ಬಂದಿಗಳು ದೀಪಾವಳಿಯ ಮುನ್ನ ಜೂಜಾಟದಲ್ಲಿ ತೊಡಗಿದ್ದರಂತೆ. ಅದೂ ನಮ್ಮ ಹಾಸ್ಟೆಲಿನ ಮೆಸ್ ಹಿಂಭಾಗದಲ್ಲಿ.  ಪಾತ್ರೆ ತೊಳೆಯುವ ಸ್ಥಳದಲ್ಲಿ.  ಯಾರೋ ಅನಾಮಧೇಯ ಕರೆ ಮಾಡಿ ಪೊಲೀಸ್ ಸ್ಟೇಷನ್ನಿಗೆ ಕರೆ ಮಾಡಿದರು. ಪೊಲೀಸರು ಬಂದರೆಂದು ಗೊತ್ತಾದಾಗ ಒಬ್ಬನು ಯಾರೋ ಸಾಹಸಿ ಮೋಟು ಗೋಡೆಯನ್ನು  ಹಾರಿ ಓಡಿ ಹೋದನಂತೆ. ಉಳಿದವರು ನಾಲ್ಕೈದು ಜನ ಸಿಕ್ಕಿಬಿದ್ದರು.  "ನೋಡಿ, ಇವರನ್ನು ನಾವು ಹಿಡಿದೆವು!" ಎಂದು ಇನ್ಸ್ಪೆಕ್ಟರ್ ಹೆಮ್ಮೆಯಿಂದ ಹೇಳಿಕೊಂಡು ಮೀಸೆ ತಿರುವಿದ. ನಾನು ಸಿಬ್ಬಂದಿಯ ಕಡೆ ನೋಡಿದೆ. ಅವರಲ್ಲಿ ನಮ್ಮ ಹಾಸ್ಟೆಲಿನ ಒಂದಿಬ್ಬರೂ ಇದ್ದರು. ಅವರು ಅಪರಾಧಿ ಭಾವನೆಯಿಂದ ತಲೆತಗ್ಗಿಸಿ ನಿಂತಿದ್ದರು.


ಹೇಳಿ ಕೇಳಿ ಐಐಟಿ ಸರಕಾರದ ಕೃಪಾಪೋಷಿತ ಸಂಸ್ಥೆ. ಅಲ್ಲಿ ಈ ಬಗೆಯ ವರ್ತನೆಯೇ! "ಇದೆಲ್ಲ ಐಐಟಿಯಂಥ ಕಡೆ ನಡೆಯಬಾರದು ಡಾಕ್ಟರ್ ಸಾಬ್!" ಎಂದು ಇನ್ಸ್ಪೆಕ್ಟರ್ ಮತ್ತೊಮ್ಮೆ ಮೀಸೆ ತಿರುವಿದ.  


"ಈಗ ಏನು ಮಾಡೋದು ಅಂತೀರಾ?" ಎಂದೆ.


ಆತ ಇಷ್ಟು ನೇರಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ. ಗಂಟಲು ಸರಿಪಡಿಸಿಕೊಂಡು "ಇವರನ್ನು ಸ್ಟೇಷನ್ನಿಗೆ ಕರೆದುಕೊಂಡು ಹೋಗಬೇಕಾಗತ್ತೆ! ಅವರ ಸ್ಟೇಟ್ಮೆಂಟ್ ತೊಗೋಬೇಕಾಗತ್ತೆ!" ಎಂದ. ಕೇರ್ ಟೇಕರ್ ಕೆಮ್ಮುತ್ತಾ ನನ್ನ ಕಡೆ ನೋಡಿದ. ನನಗೆ ಅವನ ಇಂಗಿತ ಅರ್ಥವಾದರೂ ತೋರಿಸದೆ "ಸರಿ,  ಹೋಗೋಣ!" ಎಂದೆ. ಭಟ್ ಜೀ ಪಕೋಡಾ ಮತ್ತು ಚಾಯ್ ಸರಬರಾಜು ಮಾಡಿಸುತ್ತಿದ್ದರು. ಪೊಲೀಸ್ ಪೇದೆಗೆ, ಜೀಪ್ ಡ್ರೈವರಿಗೆ ಮತ್ತು ಇನ್ಸ್ಪೆಕ್ಟರಿಗೆ ಗರ್ಮಾಗರಮ್ ಪಕೋಡಾ ಮತ್ತು ಚಾಯ್ ಆತಿಥ್ಯವಾಯಿತು. ಸಿಬ್ಬಂದಿ ಕೆಳಗೆ ಮುಖ ಹಾಕಿಕೊಂಡು ನಿಂತೇ ಇದ್ದರು. ಸಂಜೆಯ ಊಟದ ಸಮಯ ಸಮೀಪಿಸುತ್ತಿತ್ತು. ಅವರಿಗೆ ಸಂಜೆಯ ಕೆಲಸಕ್ಕೆ ಹಾಜರಾಗಬೇಕೆಂಬ ಆತಂಕದ ಜೊತೆಗೆ ಮುಂದೇನು ಆಗುತ್ತದೋ ಎಂಬ ಭಯವೂ ಸೇರಿತ್ತು. 


ನಾನು ಅವರೊಂದಿಗೆ ಬರಬಹುದು ಎಂಬ ಕಲ್ಪನೆ ಅವರಿಗೆ ಇರಲಿಲ್ಲ. ನಾನೂ ಪೊಲೀಸ್ ಜೀಪ್ ಹತ್ತಿ ಕುಳಿತೆ. ವಾರ್ಡನ್ ಕೆಲಸಕ್ಕೆ ಸೇರಿ ಇದೂ ಅನುಭವವಾಯಿತಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಜೀಪ್ ಹಾಜ್ ಖಾಸ್ ಪೊಲೀಸ್ ಸ್ಟೇಷನ್ನಿನ ಮುಂದೆ ಬಂದು ನಿಂತಿತು. ನಂತರ ಯಾವುದೋ ಮಾಯದಲ್ಲಿ ನನ್ನನ್ನು ಮತ್ತು ಸಿಬ್ಬಂದಿಯವರನ್ನು ಪ್ರತ್ಯೇಕಿಸಿಬಿಟ್ಟರು. ನನ್ನನ್ನು ಇನ್ಸ್ಪೆಕ್ಟರ್ ತಮ್ಮ ಜೊತೆ ತಮ್ಮ ಆಫೀಸಿಗೆ ಕರೆದುಕೊಂಡು ಹೋದರು. 


"ಇವತ್ತು ನಮ್ಮ ದಿವಾಲಿ ಪಾರ್ಟಿ ಇದೆ ಡಾಕ್ಟರ್ ಸಾಬ್" ಎಂದು ಇನ್ಸ್ಪೆಕ್ಟರ್ ದೇಶಾವರಿ ನಗೆ ಬೀರಿ ನನ್ನನ್ನು ಕುಳಿತುಕೊಳ್ಳಲು ಹೇಳಿದರು. ಕೆಲವೇ ನಿಮಿಷಗಳಲ್ಲಿ ಪಾರ್ಟಿಯ ಲಕ್ಷಣಗಳು ಕಾಣಿಸಿಕೊಂಡವು. ಮಿಠಾಯಿ ಸಮೋಸಾ ಇತ್ಯಾದಿಗಳನ್ನು ಪೇರಿಸಿದ ಅಲ್ಯೋಮಿನಿಯಂ ಫಾಯಿಲ್ ತಟ್ಟೆಗಳು ಕಾಣಿಸಿಕೊಂಡವು. ಆಪ್ ಭೀ ಲೀಜಿಯೇ ಡಾಕ್ಟರ್ ಸಾಬ್ ಎಂದು ಇನ್ಸ್ಪೆಕ್ಟರ್ ಹುರಿದುಂಬಿಸಿದರು. "ನಮ್ಮ ಹಾಸ್ಟೆಲ್ ಸ್ಟಾಫ್ ..." ಎಂದು ನಾನು ಅನುಮಾನಿಸಿದೆ. "ನೀವು ನಿಶ್ಚಿಂತೆಯಿಂದಿರಿ, ಅವರನ್ನು ನಾವು ಸ್ಟೇಟ್ಮೆಂಟ್ ಬರೆಸಿಕೊಂಡು ಕಳಿಸಿಬಿಡುತ್ತೇವೆ" ಎಂದು ಅವರು ನಕ್ಕರು. ನಾನು ನಗಲಿಲ್ಲ. ಲೀಜಿಯೇ ಲೀಜಿಯೇ ಡಾಕ್ಟರ್ ಸಾಬ್ ಎಂದು ಅವರ ಬಲವಂತಕ್ಕೆ ನಾನು ಸಿಹಿಯ ತುಂಡನ್ನು.ಬಾಯಲ್ಲಿಟ್ಟುಕೊಂಡೆ. ನನಗೂ ಆತಂಕವಾಗಿತ್ತು. ಈ ಪ್ರಕರಣ ಹೇಗೆ ಬೆಳೆಯುತ್ತದೋ! 


ಪಾರ್ಟಿ ಒಂದು ಅರ್ಧಗಂಟೆಯಲ್ಲಿ ಮುಗಿಯಿತು. ಎಲ್ಲರೂ ಅವರವರ ಸ್ಥಾನಕ್ಕೆ ಹಿಂತಿರುಗಿದರು. ಇನ್ಸ್ಪೆಕ್ಟರ್ "ಡಾಕ್ಟರ್ ಸಾಬ್ ಕೋ ಹಾಸ್ಟೆಲ್ ಪರ್ ಪಹುಂಚಾದೋ" ಎಂದು ನನ್ನನ್ನು ಜೀಪಿನಲ್ಲಿ ಹತ್ತಿಸಿದರು. "ನಿಮ್ಮ ಸಿಬ್ಬಂದಿಯನ್ನು ಈಗಾಗಲೇ ಹಾಸ್ಟೆಲಿಗೆ ಕಳಿಸಾಯಿತು, ನೀವು ನಿಶ್ಚಿಂತರಾಗಿರಿ, ಹ್ಯಾಪಿ ದಿವಾಲಿ ಡಾಕ್ಟರ್ ಸಾಬ್" ಎಂದು ಇನ್ಸ್ಪೆಕ್ಟರ್ ಬೀಳ್ಕೊಂಡರು.


ನಾನು ಹಾಸ್ಟೆಲಿಗೆ ಬಂದಾಗ ಕೇರ್ ಟೇಕರ್ ಕಾಯುತ್ತಿದ್ದ. ಅವನು ಸಾಮಾನ್ಯವಾಗಿ ಐದು ಗಂಟೆಗೆಲ್ಲ ಹೊರಟುಬಿಡುವ ಆಸಾಮಿ. ಅವನ ಮನೆ ಎಲ್ಲೋ ಯಮುನಾ ನದಿಯ  ಹತ್ತಿರ ಇತ್ತು. ಬಸ್ ಹಿಡಿದು ಹೋಗುತ್ತಿದ್ದ. ಇವತ್ತು ಸಂಜೆ ಏಳು ಸಮೀಪಿಸಿದ್ದರೂ ಕಾಯುತ್ತಿದ್ದ. 


ಸಿಬ್ಬಂದಿ ವಾಪಸ್ ಬಂದರೇ ಎಂದು ಕೇಳಿದೆ. ಅವನು "ಬಂದರು, ಕೆಲಸ ಮಾಡುತ್ತಿದ್ದಾರೆ" ಎಂದ.


"ಅವರ ಹತ್ತಿರ ಏನು ಸ್ಟೇಟ್ಮೆಂಟ್ ಬರೆಸಿಕೊಂಡರು?"


"ಡಾಕ್ಟರ್ ಸಾಬ್, ಇವರಿಗೆ ಬರೆಯಲು ಏನು ಬರುತ್ತೆ!  ಅವರು ಬರೆದುಕೊಟ್ಟಿದ್ದಕ್ಕೆ ಇವರು ಸಹಿ ಹಾಕಿದರು."


"ಏನಂತ?"


"ಡಾಕ್ಟರ್ ಸಾಬ್, ತಪ್ಪು ಇವರದ್ದೇ. ಐಐಟಿಯಲ್ಲಿ ಜೂಜು ಆಡಿದ್ದು ತಪ್ಪು."


"ಅವರು ಹಾಗೆ ಆಡುತ್ತಿದ್ದದ್ದು ಉಳಿದ ಎಲ್ಲರಿಗೂ ಗೊತ್ತಿರಲಿಲ್ಲವಾ!"


"ಡಾಕ್ಟರ್ ಸಾಬ್, ಇದೆಲ್ಲಾ ಆಗೋ ಸಂಗತಿಗಳೇ. ದಿವಾಲಿ ಹಿಂದಿನ ದಿನ ಜೂಜು ಆಡುವುದು ಇವರ ಜಾಯಮಾನ.  ಎಲ್ಲರೂ ಆಡಿದರು. ಇದು.ಇವತ್ತಿನದಲ್ಲ. ಮೂರು ದಿನದಿಂದ ನಡೀತಿದೆ.  ನೆನ್ನೆ ಗೆದ್ದವರು ಇವತ್ತು ಮುಂದುವರೆಸುತ್ತಾರೆ. ಯಾರೋ ಒಬ್ಬ ಹಣ ಕಳೆದುಕೊಂಡ. ಇಡೀ ತಿಂಗಳ ಸಂಬಳ ಕಳೆದುಕೊಂಡ. ಹೊಟ್ಟೆಉರಿಗೆ  ಪೊಲೀಸ್ ಸ್ಟೇಷನ್ನಿಗೆ ಫೋನ್ ಮಾಡಿದ. ಅವರು ತಮ್ಮ ಕೆಲಸ ಮಾಡಿದರು. ಇವರೆಲ್ಲರ ಹತ್ತಿರ ಐನೂರು ಐನೂರು ಇಸಕೊಂಡು ಬಿಟ್ಟುಬಿಟ್ಟರು."


"!!"


"ಇವರೂ ಏನು ಸಾಮಾನ್ಯರಲ್ಲ. ಪೊಲೀಸ್ ಬಂದರು ಅಂತ ಗೊತ್ತಾದ ತಕ್ಷಣ ಒಬ್ಬ ಹಣ ಬಾಚಿಕೊಂಡು ಗೋಡೆ ಹಾರಿ ಪರಾರಿಯಾದ. ಹಣದ ಜೊತೆ ಸಿಕ್ಕಿದ್ದರೆ ಯಾರಿಗೂ ಚಿಕ್ಕಾಸು ಸಿಕ್ಕುತ್ತಿರಲಿಲ್ಲ."


ನಾನು ಮೂಕನಾಗಿ ನಿಂತಿದ್ದೆ. ಮೆಸ್ಸಿನಲ್ಲಿ ಊಟ ಬಡಿಸುವ ಡ್ರೆಸ್ ಹಾಕಿಕೊಂಡು ಒಬ್ಬ ಸಿಬ್ಬಂದಿ ನಮ್ಮ ಮುಂದೆ ಹಾದುಹೋದ. ನನ್ನನ್ನು ನೋಡಿ ಸಲಾಂ ಮಾಡಿದ.


ನಾನು ಹಾಸ್ಟೆಲ್ ಸಿಬ್ಬಂದಿಯ ಜೊತೆ ಸ್ಟೇಷನ್ನಿಗೆ ಹೋಗಿದ್ದು ಸಿಬ್ಬಂದಿಗೆ ಬಹಳ ಹೆಮ್ಮೆಯ ವಿಷಯವಾಗಿತ್ತು ಎಂದು ಕೇರ್ ಟೇಕರ್ ನನಗೆ ತಿಳಿಸಿದ.  "ಅವರಿಗೆ ನೀವೇ ತಂದೆ ಇದ್ದಹಾಗೆ. ನೀವು ಅವರನ್ನು ಎಲ್ಲರ ಮುಂದೆ ನಿಂದಿಸಲಿಲ್ಲ. ಅವರ ಪರವಾಗಿದ್ದಿರಿ. ಆಷ್ಟಕ್ಕೇ ಅವರು ಸಂತೋಷ ಪಡುತ್ತಾರೆ. ಸರಿ ಡಾಕ್ಟರ್ ಸಾಬ್, ನಾನು ಹೊರಡುತ್ತೇನೆ. ಇವತ್ತು ಮನೆ ತಲುಪಲು ಹತ್ತು ಗಂಟೆಯೇ ಆಗಬಹುದು" ಎಂದು ಹೊರಟ. ನಾನು ಮೌನವಾಗಿ ಮನೆಯ ಕಡೆಗೆ ಹೆಜ್ಜೆ ಹಾಕಿದೆ.


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)