ಕಾಪಿ ಚಟ್ ಕಾರಾ ಬೂಂದಿ


 ಕಬೀರನ ಒಂದು ದ್ವಿಪದಿಯಲ್ಲಿ ಅವನು ಹೀಗೆ ಹೇಳಿದ್ದಾನೆ.


ಎಲ್ಲಿ ಹೆಸರಿದೆಯೋ ಅಲ್ಲಿ ಕೆಲಸವಿಲ್ಲ, ಎಲ್ಲಿ ಕೆಲಸವಿದೆಯೋ ಅಲ್ಲಿ ಇಲ್ಲ ಹೆಸರು

ಎಂದೂ ಸೇರವು ಒಂದೇ ಸ್ಥಳದಲ್ಲಿ ತಿಂಗಳು ಮತ್ತು  ನೇಸರು


ಬೇಂದ್ರೆ ಅವರ "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಎಂಬ ಸಾಲುಗಳು ನಿಮಗೆ ನೆನಪಾಗಿರಬಹುದು. ಸೂರ್ಯ ಮತ್ತು ಚಂದ್ರ ಒಂದು ಕಡೆ  ಹೇಗೆ ಸೇರುವುದಿಲ್ಲವೋ ಹಾಗೇ ಕೆಲಸ ಮತ್ತು ಹೆಸರು ಎಂದೂ ಒಂದೇ ಕಡೆ ಸೇರುವುದಿಲ್ಲ ಎನ್ನುವುದು ಕಬೀರನ ದ್ವಿಪದಿಯ ಸಾರಾಂಶ.  ಕೆಲಸ ಯಾರದೋ ಆದರೂ ಹೆಸರು ತೆಗೆದುಕೊಳ್ಳುವವರು ಬೇರೆ ಎಂಬ ವಿಷಯವನ್ನು ನೀವು ಪ್ರತಿನಿತ್ಯ ನೋಡುತ್ತೀರಿ.  ಯಾರೋ ಕಷ್ಟ ಪಟ್ಟು ಬರೆದದ್ದನ್ನು ಅನಾಯಾಸವಾಗಿ ಕಾಪಿ ಮಾಡಿ ತಮ್ಮ ಹೆಸರು ಹಾಕಿಕೊಳ್ಳುವುದು ಈಗ ಬಹಳ ಸಾಧಾರಣವಾಗಿದೆ.  ಇದಕ್ಕೆ ಪ್ಲೇಜಿಯರಿಸಮ್ ಎಂಬ ಒಂದು ಇಸಂ ಪದವಿದೆ.   ಆಲೆಕ್ಸ್ ಹೇಯ್ಲಿ ಎಂಬ ಅಮೆರಿಕನ್ ಮೂಲದ ಲೇಖಕ ರೂಟ್ಸ್  ಎಂಬ ಕಾದಂಬರಿ ಬರೆದ. ಕಪ್ಪು ಅಮೆರಿಕನ್ ಜನರ ಬೇರುಗಳನ್ನು ಶೋಧಿಸುವ ಈ ಕಾದಂಬರಿಯ ಸಂಕ್ಷಿಪ್ತ ರೂಪ ಬಹಳ ಹಿಂದೆ ರೀಡರ್ಸ್ ಡೈಜೆಸ್ಟ್ ಪತ್ರಿಕೆ ಪ್ರಕಟಿಸಿತು. ಆಗ ಅದನ್ನು ಓದಿ ಈ ಜನಾಂಗದವರು ಒಳಗಾದ ಶೋಷಣೆ ಕುರಿತು ನನ್ನ ಕಣ್ಣು ತೆರೆಯಿತು. ಮುಂದೆ ಈ ಕಾದಂಬರಿಯಲ್ಲಿ ಹೆರಾಲ್ಡ್ ಕೊರ್ಲಾಂಡರ್ ಎಂಬ ಲೇಖಕನ ದ ಆಫ್ರಿಕನ್ ಕೃತಿಯಿಂದ ಭಾಗಗಳನ್ನು ಕದಿಯಲಾಗಿದೆ ಎಂಬ ಆಪಾದನೆ ಬಂತು.  ನ್ಯಾಯಾಂಗ ಕೇಸ್ ದಾಖಲಾಯಿತು. ಹೇಯ್ಲಿ ತನ್ನ ತಪ್ಪನ್ನು ಒಪ್ಪಿಕೊಂಡ.   ಚಿತ್ರಗೀತೆಗಳ ರಾಗ ಸಂಯೋಜನೆಯಲ್ಲಿ ಕಾಪಿ ಮಾಡುವುದು ಬಹಳ ಸಾಮಾನ್ಯ ಸಂಗತಿ.  (ಕಾಪಿ ರಾಗ ಅಂತಲೇ ಒಂದು ರಾಗವೂ ಇದೆ! ಇದನ್ನು ಕಾಪಿ ಮಾಡಿದ್ದಾರೋ ಇಲ್ಲವೋ ತಿಳಿಯದು.)


ಈಗಂತೂ ಹೋಂ ವರ್ಕ್, ಪಿಎಚ್. ಡಿ. ಪ್ರಬಂಧಗಳು, ಸಂಕಿರಣಗಳಲ್ಲಿ ಮಂಡಿಸಲಾಗುವ ಪ್ರಬಂಧಗಳು, ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ಪ್ರಬಂಧಗಳು, ಎಲ್ಲವೂ ಬಿಕರಿಗೆ ಬಂದುಬಿಟ್ಟಿವೆ. ಇಲ್ಲಿ ಕೆಲಸ ಯಾರದೋ ಹೆಸರು ಯಾರದೋ ಎಂಬ ಕಬೀರನ ವಾಣಿ ಅಕ್ಷರಶಃ ಸತ್ಯವಾಗಿದೆ.  ಮಕ್ಕಳಿಗೆ ಹೋಂ ವರ್ಕ್ ಕೊಡುವುದು ಈಗ ಕಷ್ಟದ ಕೆಲಸ. ಎಲ್ಲರೂ ಗೂಗಲ್ ಮೊರೆ ಹೋಗಿ ಎಲ್ಲರ ಹೋಂ ವರ್ಕ್ ಒಂದೇ ಬಗೆ. ಎಷ್ಟೋ ಜನ ತಾವು ಕಾಪಿ ಮಾಡಿದ್ದನ್ನು ಓದಿರುವುದೂ ಇಲ್ಲ. ಮೂಲದಲ್ಲಿ ತಪ್ಪಿದ್ದರೆ ಅದೂ ಕಾಪಿ!  ಯಾರಾದರೂ ಹೋಂ ವರ್ಕ್ ಕಾಪಿ ಮಾಡಿದರೆ ಕಾಪಿಚಟ್ ಕಾರಾ ಬೂಂದಿ ಎಂದು ನಾವು ಹೇಳುತ್ತಿದ್ದೆವು.  ಇಲ್ಲಿ  ಕಾಪಿ, ಚಾಟ್, ಕಾರಾ ಬೂಂದಿ ಎಲ್ಲವನ್ನೂ ನೆನೆದು ನೀವು ಜೊಲ್ಲು ಸುರಿಸಬೇಡಿ. ಕಾಪಿಕ್ಯಾಟ್ ಎಂಬ ಇಂಗ್ಲಿಷ್ ಪದವೇ ಕಾಪಿಚಟ್ ಆಯಿತೋ ಏನೋ.   ಕಾರಾಬೂಂದಿಗೂ ಕಾಫಿಗೂ ನೇರ ಸಂಬಂಧ ಇದೆಯಾದರೂ ಕಾರಾಬೂಂದಿ ಮತ್ತು ಕಾಪಿಗೂ ಏನು ಸಂಬಂಧವೋ!  ಕಾರಾ ಬೂಂದಿ ಕಾಳುಗಳು ಒಂದೊಂದೂ ಇನ್ನೊಂದರ ಕಾಪಿಯಂತೆ ಕಾಣುವುದು ಎಂದೋ? 


ಕ್ಯಾಲ್ಕ್ಯುಲಸ್ ಎಂಬ ಕ್ಷೇತ್ರ ಸ್ಥಾಪಿಸಿದ್ದು ಯಾರು ಎಂಬ ಕುರಿತಾಗಿ ನ್ಯೂಟನ್ ಮತ್ತು ಲೆಬ್ನಿಜ್ ಎಂಬ ಘಟಾನುಘಟಿ ಗಣಿತಜ್ಞರ ಮತ್ತು ಅವರ ಹಿಂಬಾಲಕರ ನಡುವೆ ಒಂದು ರಕ್ತರಹಿತ ಯುದ್ಧವೇ ನಡೆಯಿತು.   ಆಗ ಇಂದಿನಂತೆ ವಿಜ್ಞಾನ ನಿಯತಕಾಲಿಕೆಗಳು ಇರಲಿಲ್ಲ. ವಿಜ್ಞಾನಿಗಳು ಮತ್ತು ಗಣಿತಜ್ಞರು ತಾವು ಕಂಡುಹಿಡಿದ ಸೂತ್ರಗಳನ್ನು ಇನ್ನಿತರರಿಗೆ ತೋರಿಸಿ ಮತ್ತು/ಅಥವಾ ಅವರಿಗೆ ಪತ್ರ ಬರೆದು ತಮ್ಮ ಧ್ವಜ ಸ್ಥಾಪಿಸಬೇಕಿತ್ತು. ಒಮ್ಮೆ ಲೆಬ್ನಿಜ್ ತಾನು ಕಂಡುಹಿಡಿದ ಕ್ಯಾಲ್ಕ್ಯುಲೇಟರ್ ಮಾದರಿಯನ್ನು ರಾಬರ್ಟ್ ಹುಕ್ ಎಂಬ ವಿಜ್ಞಾನಿಗೆ ತೋರಿಸಿದ. ಹುಕ್ ಅದನ್ನು ತೆರೆದು ನೋಡಿ ಅಧ್ಯಯನ ಮಾಡಿದ. ಕೆಲವು ದಿನಗಳ ನಂತರ ಲೆಬ್ನಿಜನ ಯಂತ್ರವನ್ನು ಟೀಕಿಸಿ ತಾನು ಅದಕ್ಕಿಂತ ಸರಳ ಯಂತ್ರವನ್ನು ನಿರ್ಮಿಸಬಲ್ಲೆ ಎಂದು ತೋರಿಸಿದ. ಇದನ್ನು ಲೆಬ್ನಿಜ್ ಕ್ಷಮಿಸಲಿಲ್ಲ. ಹುಕ್ ಮಾಡಿದ್ದು ನೀತಿಬಾಹಿರ ಎಂದು ಟೀಕಿಸಿದ. ಮುಂದೆ ಲೆಬ್ನಿಜ್ ತಿರುಗುಬಾಣ ಎದುರಿಸಬೇಕಾಯಿತು. ಅವನ ಮೇಲೆ ಕದ್ದ ಆರೋಪ ಮಾಡಲಾಯಿತು. ಅವನು ತನ್ನ ನೋಟ್ ಪುಸ್ತಕವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಈ ಆರೋಪದಿಂದ ಮುಕ್ತನಾದ.  ನ್ಯೂಟನ್ ಕೂಡಾ ಲೆಬ್ನಿಜ್ ವಿರುದ್ಧ ಕೆಂಡ ಕಾರಿದ.  ಕ್ಯಾಲ್ಕ್ಯುಲಸ್ ಕ್ಷೇತ್ರದ ಸ್ಥಾಪಕನ ಹೆಸರು ತನಗೇ ಸಲ್ಲಬೇಕು ಎಂದೂ "ದ್ವಿತೀಯ ಆವಿಷ್ಕಾರಕ್ಕೆ" ಈ ಹಕ್ಕು ಇಲ್ಲವೆಂದೂ ವಾದಿಸಿದ.


ಈಗಂತೂ ಕಾಪಿ ಮಾಡುವುದು ಒಂದು ಕಲೆ ಆಗಿದೆ. ಒಮ್ಮೆ ನಾವು ಶಾಂಘಾಯ್  ನಗರಕ್ಕೆ ಕೆಲಸದ ಮೇಲೆ ಪ್ರವಾಸಕ್ಕೆ ಹೋದಾಗ ನಮ್ಮ ಸಹೋದ್ಯೋಗಿನಿಯರು ಅಲ್ಲಿ ಬ್ರಾಂಡೆಡ್ ಜಂಬದ ಚೀಲಗಳ ನಕಲುಗಳನ್ನು ಮುಗಿಬಿದ್ದು ಕೊಂಡರು. ಈಗಂತೂ ರೆಪ್ಲಿಕಾ ಎಂಬ ಹೆಸರಿನಲ್ಲಿ ಇವನ್ನು ರಾಜಾರೋಷವಾಗಿ ಆನ್ಲೈನ್ ಮಾರಾಟ ಮಾಡಲಾಗುತ್ತಿದೆ.  ರಾಜಾ ರವಿರ್ಮನ ಚಿತ್ರಗಳನ್ನು ಅದೆಷ್ಟು ಜನ ಪ್ರತಿ ಮಾಡಿದ್ದಾರೋ! ಲಿಯೋನಾರ್ಡೋ ಡ ವಿಂಚಿಯ ಮೋನಾ ಲೀಸಾ ಅದೆಷ್ಟು ಸಲ ನಕಲು ನಗೆ ನಕ್ಕಿದ್ದಾಳೋ!


ಕಾಪಿರೈಟ್ ಎಂಬ ಪದವಿದೆ. ನಮಗೆ ಮಕ್ಕಳಾಗಿದ್ದಾಗ ಇದರ ಅರ್ಥ ಗೊತ್ತಿರಲಿಲ್ಲ. ಕಾಪಿ ಮಾಡಿದ್ದನ್ನು ಕಾಪಿರೈಟ್ ಎಂದೇ ತಿಳಿದುಕೊಂಡಿದ್ದೆವು! ಎಷ್ಟೋ ಜನರಿಗೆ ಇದರ ಅರ್ಥ ಗೊತ್ತಿಲ್ಲ. ರೈಟ್ ಎಂದರೆ ಹಕ್ಕು ಎಂದು. ಕಾಪಿರೈಟ್ ಎಂದರೆ ನಕಲು ಮಾಡುವ ಹಕ್ಕು. ನಾನು ಒಂದು ಚಿತ್ರವನ್ನೋ ಕತೆಯನ್ನೋ ಬರೆದರೆ ಅದರ ಪ್ರತಿ ಮಾಡುವ ಹಕ್ಕು ನನ್ನದು. ಬೇರೆ ಯಾರಾದರೂ ಅದನ್ನು ಪ್ರತಿ ಮಾಡಿದರೆ ಅವರು ನನ್ನ ಹಕ್ಕಿಗೆ ಚ್ಯುತಿ ತರುವ ಮೂಲಕ ಅಪರಾಧ ಮಾಡಿದ್ದಾರೆ ಎಂದೇ ಅರ್ಥ.  ತಂತ್ರಜ್ಞಾನ ಕ್ಷೇತ್ರದಲ್ಲಿ ಲೇಖನಗಳನ್ನು ಪ್ರಕಟಿಸಲು ಅನೇಕ ನಿಯತಕಾಲಿಕೆಗಳು ಈಗ ಇವೆ. ಈ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡ ಬರಹಗಳನ್ನು ಪ್ರಕಾಶಕ ಸಂಸ್ಥೆ ಮಾರಾಟ ಮಾಡಿ ಹಣ ಮಾಡುತ್ತದೆ. ನಿಯತಕಾಲಿಕೆಯಲ್ಲಿ ಪ್ರಕಟಿಸುವ ಮುಂಚೆ ಅವರು ಲೇಖಕರ ನಕಲುಹಕ್ಕನ್ನು ತಮಗೆ ಸ್ಥಳಾಂತರಿಸಿಕೊಳ್ಳುತ್ತಾರೆ. ಹೀಗಾಗಿ ಮುಂದೆ ತನ್ನದೇ ಪ್ರಕಟಿತ ಲೇಖನದ ಪ್ರತಿಗಳನ್ನು ಹಂಚಲು ಅಥವಾ ಲೇಖನದಿಂದ ಚಿತ್ರ ಇತ್ಯಾದಿಗಳನ್ನು ಮರುಬಳಸಲು ಲೇಖಕನೇ  ಪ್ರಕಾಶಕರಿಂದ ಪರವಾನಗಿ ಪಡೆಯಬೇಕು! 


ಕಾಪಿಯಂತ್ರ ಬರುವ ಮುನ್ನ ಪ್ರಮುಖ ದಾಖಲೆಗಳನ್ನು ಕೈಯಲ್ಲೇ ಬರೆದು ಕಾಪಿ ಮಾಡಬೇಕಾಗಿತ್ತು. ನಮ್ಮ ತಂದೆ ಮನೆ ಕಟ್ಟಿಸಿದಾಗ ದಾಖಲೆಗಳನ್ನು ಕಾಪಿ ಮಾಡುವ ಕೆಲಸವನ್ನು ಯಾರಿಗೆ ವಹಿಸಿದರು ಎಂದುಕೊಂಡಿರಿ! ಅವರು ಇಸವಿ .... ಎಂದು ಓದಿದರೆ ನಾನು ಸಾವಿರದ ಇತ್ಯಾದಿ ಬರೆದು ಅವರಿಂದ ನಗುಪಾಟಲು ಆಗಿದ್ದನ್ನು ಮರೆಯಲು ಸಾಧ್ಯವೇ! ಇಂಥ ಕಾಪಿಗಳನ್ನು ಅದು ಮೂಲದ ನಿಜಪ್ರತಿ ಅಥವಾ ಟ್ರೂ ಕಾಪಿ ಎಂದು ಯಾರಾದರೂ ಗೆಜೆಟೆಡ್ ಆಫೀಸರ್ ಕೈಯಲ್ಲಿ ಬರೆಸಿಕೊಳ್ಳಬೇಕಾಗಿತ್ತು. ಇದಕ್ಕೆ ಅಟೆಸ್ಟೇಶನ್ ಎಂಬ ದೊಡ್ಡ ಹೆಸರಿತ್ತು. ಅಮೆರಿಕಾದಲ್ಲಿ ಇದಕ್ಕೆ ನೋಟರೈಜ್ ಎಂಬ ಪದ ಬಳಸುತ್ತಾರೆ. ನೋಟರಿಗಳು ಐವತ್ತೋ ನೂರೋ ಡಾಲರ್ ನೋಟುಗಳನ್ನು ಪಡೆದು ಮುದ್ರೆ ಒತ್ತುವ ದಂಧೆಯೇ ಅಲ್ಲಿದೆ!  ಫೋಟೋ ಪ್ರತಿಯ ಮೇಲೂ ಇವರ ಮುದ್ರೆ ಬೇಕು!  ನಾನು ಡಾಕ್ಟೊರೇಟ್ ಮುಗಿಸಿ ಅಮೆರಿಕಾದಿಂದ ವಾಪಸ್ ಬರುವ ಮುನ್ನ ನನಗೆ ಅಲ್ಲಿಂದ ಏನಾದರೂ ವಾಪಸು ತರಬೇಕು ಎಂದರೆ ಆ ವಸ್ತುವನ್ನು ನಾನು ನನ್ನ ಸ್ವಂತ ಉಪಯೋಗಕ್ಕಾಗಿ ಅಲ್ಲೇ ಕೊಂಡದ್ದು ಎಂದು ಪುರಾವೆ ತೋರಿಸಿ ನೋಟರಿಯ ಹತ್ತಿರ ಒಂದು ಸರ್ಟಿಫಿಕೇಟ್ ಪಡೆದು ಅದನ್ನು ಭಾರತೀಯ ಕಾನ್ಸಲೇಟ್ ಬಳಿ ಖುದ್ದಾಗಿ ಹೋಗಿ ಪಾಸ್ ಪೋರ್ಟ್ ಮೇಲೆ ಸ್ಟಾಂಪ್ ಹಾಕಿಸಿಕೊಂಡು ಬರಬೇಕು ಎಂದು ಗೊತ್ತಾಯಿತು. ಇದಕ್ಕಾಗಿ ನಾನು ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕೆ ಪ್ರಯಾಣ ಮಾಡಬೇಕಾಯಿತು! ನಮ್ಮ ತಂದೆಗಾಗಿ ಕೊಂಡ ಟೈಪ್ ರೈಟರ್ ಭಾರತಕ್ಕೆ ತರಲು ಇಷ್ಟೆಲ್ಲಾ ಮಾಡಬೇಕಾಯಿತು!

ಈಗ ಇವೆಲ್ಲಾ ಸರಳಗೊಂಡಿವೆ ಎಂದು ಭಾವಿಸುತ್ತೇನೆ. 


ಇದನ್ನು ನಾನು ಎಲ್ಲಿಂದಲೋ ಕಾಪಿ ಮಾಡಿಲ್ಲ ಮತ್ತು ಇದರ ಕಾಪಿರೈಟ್ ನನ್ನದೇ ಎಂದು ಘೋಷಿಸಿ ಇಲ್ಲಿಗೆ ಮುಗಿಸುವೆ.


ಸಿ. ಪಿ.. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)