ನಾಗಿರೆಡ್ಡಿ ಅವರನ್ನು ಮಾತಾಡಿಸಿದ್ದು
ನಾನು ಇನ್ನೂ ಆರನೇ ಅಥವಾ ಏಳನೇ ಕ್ಲಾಸಿನಲ್ಲಿದ್ದಾಗ ನಡೆದ ಘಟನೆ. ನಮ್ಮ ತಂದೆಗೆ ದೆಹಲಿಗೆ ವರ್ಗವಾಗಿದ್ದರಿಂದ ಐದು ವರ್ಷ ನಾವು ಅಲ್ಲಿ ವಾಸ ಮಾಡಬೇಕಾಯಿತು. ಮೊದಲು ಲೋಧಿ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಒಂದೇ ಕೋಣೆಯಲ್ಲಿ ಒಂದು ವರ್ಷ ವಾಸ ಮಾಡಿದ ನಂತರ ಜೋರ್ ಬಾಗ್ ಎಂಬಲ್ಲಿ ನಮಗೆ ಬಾಡಿಗೆ ಮನೆ ಸಿಕ್ಕಿತು. ನಮ್ಮ ತಂದೆಯವರ ಆಫೀಸಿಗಾಗಿ ಬಾಡಿಗೆ ಪಡೆದ ಕಟ್ಟಡದಲ್ಲಿ ಮೇಲಿನ ಎರಡು ಕೋಣೆಯ ಪುಟ್ಟ ಮನೆಯನ್ನು ನಮಗೆ ಸಬ್-ಲೆಟ್ ಮಾಡಿಕೊಟ್ಟರು. ಹೀಗೆ ಒಂದು ಕೋಣೆಯ ಮನೆಯಿಂದ ಎರಡು ಕೋಣೆಯ ಮನೆಗೆ ಪ್ರಗತಿ ಸಾಧಿಸಿದೆವು. ಇಲ್ಲಿ ಎರಡು ಕೋಣೆ ಎಂದರೆ ನೀವು ಟೂ ಬಿ.ಎಚ್.ಕೆ. ಎಂದೆಲ್ಲ ಕಲ್ಪಿಸಿಕೊಳ್ಳಬೇಡಿ. ಅಲ್ಲಿದ್ದದ್ದು ಎರಡೇ ಕೋಣೆ. ಒಂದು ನಮಗೆ ಲಿವಿಂಗ್ ರೂಮ್, ಬೆಡ್ ರೂಮ್, ಸ್ಟಡಿ ಎಲ್ಲವೂ ಆಗಿತ್ತು. ಇನ್ನೊಂದು ಕಿಚನ್, ಡೈನಿಂಗ್ ಹಾಲ್ ಆಗಿತ್ತು. ಆದರೆ ಮನೆಯ ಸುತ್ತಲೂ ಇದ್ದ ಬಿಸಿಲುಮಚ್ಚು ದೇಶೋವಿಶಾಲವಾಗಿತ್ತು. ಬೇಸಗೆ ದಿನಗಳಲ್ಲಿ ಅಲ್ಲಿ ಚಾರ್ ಪಾಯಿ ಹಾಕಿಕೊಂಡು ನಾವು ಮಲಗಿಕೊಳ್ಳುತ್ತಿದ್ದೆವು. ಚಳಿಗಾಲದಲ್ಲಿ ಮಾತ್ರ ಒಂದು ಕೋಣೆಯಲ್ಲಿ ರಜಾಯಿಯ ಕೆಳಗೆ ಸೇರಿಕೊಳ್ಳುತ್ತಿದ್ದೆವು.
ಇದೆಲ್ಲ ಯಾಕೆ ಹೇಳಲು ಹೊರಟೆ ಎಂದರೆ ನಿಮಗೆ ಮುಂದೆ ಹೇಳಲು ಹೊರಟಿರುವ ಕಥೆಗೆ ಪೀಠಿಕೆ, ಅಷ್ಟೇ. ನಮ್ಮ ತಂದೆಯವರ ಆಫೀಸ್ ಅದೇ ಕಟ್ಟಡದ ಗ್ರೌಂಡ್ ಫ್ಲೋರಿನಲ್ಲಿತ್ತು. ಅಲ್ಲಿ ಒಂದು ಗೆಸ್ಟ್ ರೂಮ್ ಕೂಡಾ ಇತ್ತು. ಬೆಂಗಳೂರಿನಲ್ಲಿ ನಮ್ಮ ತಂದೆಯವರ ಆಫೀಸಿನ ಮುಖ್ಯ ಕಚೇರಿ ಇದ್ದ ಕಾರಣ ಕೆಲವೊಮ್ಮೆ ಅಲ್ಲಿಂದ ಆಫೀಸರುಗಳು ಬರುತ್ತಿದ್ದರು. ಆಗ ಅವರಿಗೆ ತಂಗಲು ಗೆಸ್ಟ್ ರೂಮ್ ಇತ್ತು. ಗೆಸ್ಟ್ ರೂಮಿಗೆ ಹೊಂದಿಕೊಂಡಂತೆ ಇದ್ದ ಅಡುಗೆ ಮನೆಯಲ್ಲಿ ಮಹಾರಾಜ್ ಇದ್ದ. ಮಹಾರಾಜ್ ಎಂದರೆ ಅಡುಗೆಯವನು! ಅವನು ಕೇರಳದಿಂದ ಬಂದವನು. ಮೀನು ಇತ್ಯಾದಿ ತಯಾರಿಸುತ್ತಿದ್ದ. ಹೀಗಾಗಿ ಕೆಳಗೆ ಇಳಿದು ಬಂದಾಗ ನಮ್ಮ ತಾಯಿ ಮೂಗು ಮುಚ್ಚಿಕೊಂಡೇ ಬರುತ್ತಿದ್ದರು.
ಎಲ್ಲಿ ಗೆಸ್ಟ್ ರೂಮ್ ಇದೆಯೋ ಅಲ್ಲಿ ಗೆಸ್ಟ್ ಇದ್ದೇ ಇರುತ್ತಾರೆ. ಕೆಲವೊಮ್ಮೆ ಯಾವುದೋ ಶಿಫಾರಸಿನ ಮೇಲೆ ಕೆಲವು ವಿಐಪಿಗಳಿಗೂ ಈ ಗೆಸ್ಟ್ ರೂಮಿನಲ್ಲಿ ತಂಗಲು ಅವಕಾಶ ಸಿಕ್ಕುತ್ತದೆ. ಒಂದು ಬೇಸಗೆ ರಜೆಯಲ್ಲಿ ಹೀಗೆ ಒಬ್ಬರು ವಿಐಪಿ ಬಂದು ಗೆಸ್ಟ್ ಹೌಸಿನಲ್ಲಿ ಬಂದು ಇಳಿದುಕೊಂಡಿದ್ದರು. ಬೇಸಗೆ ರಜೆಯಲ್ಲಿ ಹೊರಗೆ ಆಡಿಕೊಳ್ಳಲು ನನಗೆ ಅಲ್ಲಿ ಸ್ನೇಹಿತರಿರಲಿಲ್ಲ. ಏಕೆಂದರೆ ಅಲ್ಲಿ ಸುತ್ತಲೂ ಇದ್ದದ್ದು ಆಫೀಸುಗಳು, ಎಂಬೆಸಿಗಳು! ಒಬ್ಬ ಫಾರಿನರ್ ಹುಡುಗ ಅದೇ ಬೀದಿಯಲ್ಲಿದ್ದ. ಅವನ ಮನೆಯಲ್ಲಿ ಬಹಳ ಎತ್ತರದ ಜೂಲು ನಾಯಿ ಇತ್ತು. ನಾನು ಒಂದು ದಿನ ಸ್ಕೂಲಿನಿಂದ ಮನೆಗೆ ಬರುವಾಗ ಅದು ನನ್ನ ಹತ್ತಿರವೇ ಓಡಿ ಬಂತು. ನಾನು ಕಂಗಾಲಾಗಿ ಓಡಿ ಮನೆ ಸೇರಿಕೊಂಡೆ. ಅಂದಿನಿಂದ ಆ ಫಾರಿನರ್ ಹುಡುಗನಿಗೆ ನನ್ನನ್ನು ಹೆದರಿಸುವುದೇ ಒಂದು ಮೋಜಾಯಿತು. ನಾನು ಬರುವುದು ಕಂಡರೆ ಅವನು ನಾಯಿಯನ್ನು ಛೂ ಬಿಡುತ್ತಿದ್ದ! ಆ ನಾಯಿ ಏನೂ ಮಾಡುವುದಿಲ್ಲ ಎಂದು ನನಗೆ ಎಲ್ಲರೂ ಸಮಾಧಾನ ಮಾಡಿದರೂ ಆ ವಿಷಯ ಆ ನಾಯಿಗೆ ಗೊತ್ತೋ ಇಲ್ಲವೋ ಎಂದು ನನಗೆ ಅನುಮಾನವಿತ್ತು. ಕೊನೆಗೆ ನಮ್ಮ ತಂದೆ ಆ ಫಟಿಂಗನ ತಂದೆಯ ಜೊತೆ ಮಾತಾಡಿದ ನಂತರ ಈ ಕಾಟ ತಪ್ಪಿತು.
ಬೇಸಗೆಯ ರಜದಲ್ಲಿ ಮನೆಯಲ್ಲಿ ಏನು ಮಾಡಲೂ ತೋರದೆ ನಾನು ಕೆಳಗೆ ಬಂದೆ. ಅಂದು ಭಾನುವಾರವಾದ್ದರಿಂದ ಆಫೀಸ್ ಇರಲಿಲ್ಲ. ನಾನು ಕುತೂಹಲದಿಂದ ಕೆಳಗೆ ಓಡಾಡಿದೆ. ಗೆಸ್ಟ್ ಹೌಸಿನಲ್ಲಿ ಟಿವಿ ಇತ್ತು. ಆಗ ಟಿವಿ ಎಲ್ಲರ ಮನೆಯಲ್ಲೂ ಇರುತ್ತಿರಲಿಲ್ಲ. ಲೋಧಿ ಕಾಲನಿಯ ಮನೆಯಲ್ಲಿದ್ದಾಗ ನಮ್ಮ ಬಡಾವಣೆಯಲ್ಲಿ ಒಬ್ಬರ ಮನೆಯಲ್ಲಿ ಟಿವಿ ಇತ್ತು. ಭಾನುವಾರ ಆರು ಗಂಟೆಗೆ ಒಂದು ಸಿನಿಮಾ ತೋರಿಸುತ್ತಿದ್ದರು. ಅದನ್ನು ನೋಡಲು ಏನಿಲ್ಲವೆಂದರೂ 25-30 ಮಕ್ಕಳು ಅವರ ಮನೆಯಲ್ಲಿ ಸೇರುತ್ತಿದ್ದರು! ಪಾಪ ಅವರು ಏನೂ ಅನ್ನುತ್ತಿರಲಿಲ್ಲ. ಸಿನಿಮಾ ಮಧ್ಯೆ ನ್ಯೂಸ್ ಬ್ರೇಕ್ ಬರುತ್ತಿತ್ತು. ಆಗ ಅವರು ತಮ್ಮ ಫ್ರಿಜ್ ತೆಗೆದು ಕೋಕಾಕೋಲಾ ಇತ್ಯಾದಿ ಸೇವಿಸುತ್ತಿದ್ದರು. ಹೊರಗಿನಿಂದ ಬಂದ ಮಕ್ಕಳು ತಮ್ಮ ಪಾಡಿಗೆ ತಾವು ಏನೋ ಮಾಡಿಕೊಂಡಿರುತ್ತಿದ್ದರು! ನಾನೂ ಅವರ ಟಿವಿಯಲ್ಲಿ ಒಂದೆರಡು ಸಿನಿಮಾ ನೋಡಿದ ನೆನಪಿದೆ. ಮುಂದೆ ಬೇರೆ ಹುಡುಗರು ಕೂತಿದ್ದರಿಂದ ನನಗೆ ಕಾಣುತ್ತಿದ್ದದ್ದು ಕಡಿಮೆ. ನೌನಿಹಾಲ್, ಸಾತ್ ಹಿಂದೂಸ್ತಾನಿ ಎಂಬ ಚಿತ್ರಗಳನ್ನು ಬಹುಶಃ ನಾನು ಅಲ್ಲೇ ನೋಡಿದ್ದು. ನಾನು ಜೋರ್ ಬಾಗಿಗೆ ಬಂದ ಮೇಲೆ ನಮಗೆ ಪರಿಚಯವಾದ ಶ್ರೀ ನರಸಿಂಗರಾವ್ ಅವರ ಮನೆಯಲ್ಲಿ ಟಿವಿ ಇದ್ದಿದ್ದರಿಂದ ನಮಗೆ ಪ್ರತಿ ಭಾನುವಾರ ಅವರ ಮನೆಯಿಂದ ಆಹ್ವಾನವಿರುತ್ತಿತ್ತು. ಅವರ ಹೆಂಡತಿ ಮಕ್ಕಳು ಬರುತ್ತಾರೆ ಎಂದು ನಮಗೆ ಚಕ್ಕುಲಿ ಕೋಡುಬಳೆ ಮುಚ್ಚೋರೆ ಮುಂತಾದ್ದನ್ನೆಲ್ಲಾ ಮಾಡಿಡುತ್ತಿದ್ದರು. ಅವರ ಮನೆಯಲ್ಲಿದ್ದ ಪೊಮೆರೇನಿಯನ್ ನನ್ನನ್ನು ಕಂಡ ಕೂಡಲೇ ಸಹಸ್ರ ನಾಮಾರ್ಚನೆ ಪ್ರಾರಂಭಿಸುತ್ತಿತ್ತು. ಅದರ ಹೆಸರು ಚಾರ್ಲಿ. ಅದು ಯಾಕೋ ಚಾರ್ಲಿಗೆ ನನ್ನನ್ನು ಗುರುತಿಸಲು ಆಗಲೇ ಇಲ್ಲ. ಒಂದು ಭಾನುವಾರ ಅವರ ಮನೆಗೆ ಹೋದಾಗ ಚಾರ್ಲಿಯ ಸ್ವಾಗತ ಸಿಕ್ಕಲಿಲ್ಲ. ಅವರು 'ನಮ್ಮ ಚಾರ್ಲಿ ಹೋಗಿ ಬಿಟ್ಟ' ಎಂದು ಕಣ್ಣೀರು ತಂದುಕೊಂಡು ಹೇಳಿದರು. ಬೆಳಗಿನ ವಾಕಿಂಗ್ ಸಮಯದಲ್ಲಿ ಚಾರ್ಲಿ ಯಾವುದೋ ಕಾರ್ ಕೆಳಗೆ ಸಿಕ್ಕಿಹಾಕಿಕೊಂಡುಬಿಟ್ಟಿತ್ತು.
ಅಂದು ಭಾನುವಾರ ನಾನು ಟಿವಿ ನೋಡುವ ಆಸೆಯಿಂದ ಗೆಸ್ಟ್ ರೂಮಿಗೆ ಹೋದೆ. ಅಲ್ಲಿ ಒಬ್ಬರು ಅತಿಥಿಗಳು ತಂಗಿದ್ದು ನನಗೆ ತಿಳಿಯದು! ಅವರಿಗೆ ವಯಸ್ಸಾಗಿತ್ತು. ಶುಭ್ರ ಬಿಳಿ ಬಟ್ಟೆ ತೊಟ್ಟು ಚಿನ್ನದ ಬಣ್ಣದ ಕಟ್ಟಿರುವ ಕನ್ನಡಕ ಹಾಕಿಕೊಂಡಿದ್ದರು. ಟಿವಿ ನೋಡುತ್ತಿದ್ದರು. ನನ್ನ ಕಡೆ ಆಸಕ್ತಿಯಿಂದ ನೋಡಿ ಯಾರು ನೀನು ಎಂದು ಕೇಳಿದರು. ನಾನು ಹೇಳಿದೆ. ಅವರು ನನ್ನ ಜೊತೆ ಸ್ವಲ್ಪ ಹೊತ್ತು ಮಾತಾಡಿದರು. ನಂತರ ನನಗೆ ಏನೂ ತೋರದೆ ನಾನು ಮನೆಗೆ ಬಂದೆ. ನಡೆದದ್ದನ್ನು ಹೇಳಿದಾಗ ನಮ್ಮ ತಂದೆ "ನೀನು ಯಾಕೆ ಅಲ್ಲೆಲ್ಲಾ ಹೋಗಿದ್ದೆ! ಅವರು ಯಾರು ಗೊತ್ತಾ! ಅವರು ದೊಡ್ಡ ಸಿನಿಮಾ ನಿರ್ದೇಶಕರು, ನಾಗಿರೆಡ್ಡಿ!" ಎಂದು ಗದರಿಸಿದರು. ನನಗೆ ಈ ಹೆಸರು ತಿಳಿದಿರಲಿಲ್ಲ.
ಶ್ರೀ ನಾಗಿರೆಡ್ಡಿ ಅವರ ಕೆಲವು ತೆಲುಗು ಚಿತ್ರಗಳ ಪ್ರದರ್ಶನವನ್ನು ದೆಹಲಿಯ ಒಂದು ಕಲಾಮಂದಿರದಲ್ಲಿ ಏರ್ಪಡಿಸಲಾಗಿತ್ತು. ಅದು ಯಾವ ಸ್ಥಳವೆನ್ನುವುದು ಮರೆತಿದೆ. ಅಲ್ಲಿಗೆ ಹೋಗಲು ನಮಗೆ ಪಾಸ್ ಸಿಕ್ಕಿತು. ಪೂಜಾಫಲಂ ಎಂಬ ಭಾವಪ್ರಧಾನ ಚಿತ್ರ. ಅದರ ಕಥೆ ನನಗೆ ಮರೆತಿದೆ. ನಾಗೇಶ್ವರರಾವ್ ಚಿತ್ರದ ಮುಖ್ಯಪಾತ್ರಧಾರಿ. ಇಬ್ಬರೋ ಮೂವರೋ ನಟಿಯರು ಇದ್ದರೆಂದು ನೆನಪು. ಚಿತ್ರ ಮುಗಿದ ನಂತರ ನಾಗಿರೆಡ್ಡಿ ಅವರು ಕಾರಿನಲ್ಲಿ ಹೊರಟರು. ನಮ್ಮ ತಂದೆ ಅವರಿಗೆ ಪರಿಚಿತರಾದ್ದರಿಂದ ನೀವೂ ಇದೇ ಕಾರಿನಲ್ಲಿ ಬನ್ನಿ ಎನ್ನುವ ಸೌಜನ್ಯ ತೋರಿದರು. ಆಗೆಲ್ಲಾ ಕಾರಿನಲ್ಲಿ ಓಡಾಡುವುದು ಅಪರೂಪ. ಅಂಬಾಸಿಡರ್ ಕಾರಿನಲ್ಲಿ ಒಬ್ಬ ಪ್ರಸಿದ್ಧ ಚಿತ್ರ ನಿರ್ದೇಶಕರೊಂದಿಗೆ ಪ್ರಯಾಣ ಮಾಡುವ ಅನುಭವ ನನ್ನದಾಯಿತು. ಅವರು ನನ್ನ ತಂದೆಯವರ ಹತ್ತಿರ ಮಾತಾಡುತ್ತಾ "ಈ ಚಿತ್ರದಲ್ಲಿ ನಾನು ಪ್ರೀತಿಯ ಮೂರು ಮಗ್ಗುಲುಗಳನ್ನು ತೋರಿಸಿದ್ದೇನೆ" ಎಂದು ಏನೋ ಹೇಳುತ್ತಿದ್ದದ್ದು ಕೇಳಿಸಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ