ಮೈಸೂರುಪಾಕ್ ನೆನಪುಗಳು




ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನನಗೆ ರಾಂಕ್ ಬರಬಹುದು ಎಂದು ನ್ಯಾಷನಲ್ ಹೈಸ್ಕೂಲಿನ  ಕೆಲವು ಅಧ್ಯಾಪಕರು ಅಪೇಕ್ಷೆ ಇಟ್ಟುಕೊಂಡಿದ್ದರು. ನಾನು ಪ್ರಥಮ ಭಾಷೆ ಕನ್ನಡ ತೆಗೆದುಕೊಂಡ ಕಾರಣ ಇದು ಸುಲಭವಲ್ಲ ಎಂದು ಅವರಿಗೆ ತಿಳಿದಿತ್ತು. ಆಗ ಕನ್ನಡದಲ್ಲಿ ಹೆಚ್ಚು ಮಾರ್ಕ್ಸ್ ಕೊಡುತ್ತಿರಲಿಲ್ಲ.  ಎರಡು ಪರೀಕ್ಷೆಗಳು ಇರುತ್ತಿದ್ದವು. ಮುಖ್ಯ ಪಠ್ಯಪುಸ್ತಕವನ್ನು ಆಧರಿಸಿ ಮೊದಲ ಪರೀಕ್ಷೆ. ನಾನ್ ಡೀಟೇಲ್ಡ್ ಪಠ್ಯವನ್ನು ಆಧರಿಸಿ ಎರಡನೇ ಪರೀಕ್ಷೆ. ಇವು ಬೆಳಗ್ಗೆ ಮತ್ತು ಮಧ್ಯಾಹ್ನ ನಡೆಯುತ್ತಿದ್ದವು. ಎರಡನೇ ಭಾಗದಲ್ಲಿ ಪ್ರಬಂಧ, ಪತ್ರಲೇಖನ, ನಾವು ಹಿಂದೆ ಓದಿರದ ಕವಿತೆಯ ವಿಶ್ಲೇಷಣೆ ಇವೆಲ್ಲ ಇರುತ್ತಿದ್ದವು.   ಕನ್ನಡದಲ್ಲಿ ನನಗೆ ನೂರಾ ಐವತ್ತಕ್ಕೆ ನೂರಾ ಇಪ್ಪತ್ತೈದು ಅಂಕಗಳು ಬಂದವು. ಹೀಗಾಗಿ ಕನ್ನಡದ ಕಾರಣ ರಾಂಕ್ ತಪ್ಪಿತು ಎಂದು ಹೇಳಲು ಸಾಧ್ಯವಿರಲಿಲ್ಲ. ಸೋಷಿಯಲ್ ಸ್ಟಡೀಸ್ ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಬಂದು ನನಗೆ ನಲವತ್ತಮೂರನೇ ರಾಂಕ್ ಬಂತು. 


ಪ್ರಥಮ ಪಿಯುಸಿ ಪರೀಕ್ಷೆಗಳು ಮುಗಿದ ನಂತರ ನಮ್ಮ ತಾಯಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಗೈನಕಾಲಜಿ ಸಂಬಂಧದ ಚಿಕಿತ್ಸೆಗಾಗಿ  ಅವರು  ಮಾರ್ಥಾಸ್ ಆಸ್ಪತ್ರೆ ಸೇರಿದರು. ಅವರನ್ನು ಸೇರಿಸಲು ನಾನು ಮತ್ತು ನನ್ನ ದೊಡ್ಡಮ್ಮ ಇಂದಿರಮ್ಮ ಹೋಗಿದ್ದೆವು.  ನಮ್ಮ ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಅದಾದ ನಂತರ ಅವರಿಗೆ ಶುಶ್ರೂಷೆಯ ಅಗತ್ಯ ಇತ್ತು. ಹೆಣ್ಣು ಮಕ್ಕಳಿಲ್ಲದ ಕಾರಣ ಅವರ ಮೇಲೆ ಮನೆಗೆಲಸದ ಜವಾಬ್ದಾರಿ ಬೀಳುತ್ತದೆ, ವಿಶ್ರಾಂತಿ ದೊರಕುವುದಿಲ್ಲ ಎಂಬ ಕಾರಣಕ್ಕಾಗಿ ಅವರು ಒಂದು ತಿಂಗಳು ತಮ್ಮ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಇಂದಿರಮ್ಮ ಒತ್ತಾಯ ಮಾಡಿದರು. ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದಾಗ ನನಗೆ ಒಂಬತ್ತನೇ ರಾಂಕ್ ಬಂದಿತ್ತು. ದುರದೃಷ್ಟವಶಾತ್ ಈ ಸಲ ಕನ್ನಡದಲ್ಲಿ ನನಗೆ ನಾನು ನಿರೀಕ್ಷೆ ಪಟ್ಟಷ್ಟು ಅಂಕಗಳು ಬರಲಿಲ್ಲ.  ಇದು ನನಗೆ ಬೇಸರ ತಂದಿತು. ನಮ್ಮ ತಾಯಿ ಮನೆಯಲ್ಲಿ ಇರಲಿಲ್ಲ. ಅವರು ಇದ್ದಿದ್ದರೆ ಎಷ್ಟು ಸಂಭ್ರಮ ಪಡುತ್ತಿದ್ದರು ಎಂಬ ಆಲೋಚನೆ ಕೂಡಾ ಮಂಕುಗೊಳಿಸಿತು. ಫಲಿತಾಂಶ ತಿಳಿಸಲು ಇಂದಿರಮ್ಮ ಅವರ ಮನೆಗೆ ಹೋದೆ.  ಶಸ್ತ್ರಚಿಕಿತ್ಸೆಯ ನಂತರ ಮನೆಗೆ ಬಂದಮೇಲೆ ಅವರಿಗೆ ಯೂರಿನರಿ ಟ್ರಾಕ್ಟ್ ಇನ್ಫೆಕ್ಷನ್ ಆಗಿ ತುಂಬಾ ನೋವಿನಲ್ಲಿದ್ದರು. ನಾನು ಪೆಚ್ಚಾದೆ.  ನಮ್ಮ ತಾಯಿ ನನ್ನ ಫಲಿತಾಂಶ ಕೇಳಿ ನೋವಿನಲ್ಲೂ ಸಂತೋಷ ಪಟ್ಟರು. 


"ಸುದ್ದಿ ಹೇಳಲು ಬರೀ ಕೈಯಲ್ಲಿ ಬಂದಿದ್ದೀಯಲ್ಲ" ಎಂದು ಇಂದಿರಮ್ಮ ಹಾಸ್ಯ ಮಾಡಿದರು.


ನಮ್ಮ ತಾಯಿ "ಈಗ ಎಲ್ಲರಿಗೂ ಹೋಗಿ ಸ್ವೀಟ್ ಕೊಟ್ಟು ಬರಬೇಕು" ಎಂದು ನನಗೆ ಹೇಳಿ ತಮ್ಮ ಅಕ್ಕನಿಗೆ "ನೀನೇ ಸ್ವೀಟ್ ಮಾಡಿಕೊಡಬೇಕು" ಎಂದು ಕೇಳಿಕೊಂಡರು. ಆಗ ಅಂಗಡಿಯಿಂದ ತರುವ ಆಲೋಚನೆಯೇ ಯಾರಿಗೂ ಬರುತ್ತಿರಲಿಲ್ಲ.


ಇಂದಿರಮ್ಮ ನಮ್ಮ ನೆಂಟರಿಷ್ಟರ ಮನೆಗಳಲ್ಲಿ ಯಾರ ಮನೆಯಲ್ಲಿ ಎಷ್ಟು ಜನ ಎಂದು ಹೇಳುತ್ತಾ ಹೋದರು. ನಾನು ಕೂಡುತ್ತಾ ಹೋದೆ. ಕೊನೆಗೆ ಇಷ್ಟು ಜನರಿಗೆ ಮೈಸೂರು ಪಾಕ್ ಮಾಡಲು ಎಷ್ಟು ತುಪ್ಪ, ಎಷ್ಟು ಸಕ್ಕರೆ ಮತ್ತು ಎಷ್ಟು ಕಡಲೆಹಿಟ್ಟು ತರಬೇಕು ಎಂದು ನನಗೆ ಲೆಕ್ಕ ಹಾಕಿಕೊಟ್ಟರು. ಅವರು ಹೀಗೆ ಅಂದಾಜು ಮಾಡಿದ್ದು ನನಗಂತೂ ಈಗಲೂ ಕೌತುಕ ಎನ್ನಿಸುವ ವಿಷಯ.


ನಾನು ಮಾರನೇ ದಿವಸ ಎಲ್ಲಾ ಪದಾರ್ಥಗಳನ್ನೂ ನಮ್ಮ ಮನೆಯ ಹತ್ತಿರದಲ್ಲೇ ಇದ್ದ ಅಂಗಡಿಯಿಂದ ಖರೀದಿಸಿ ತೆಗೆದುಕೊಂಡು ಹೋಗಿ ಕೊಟ್ಟೆ. ಇಂದಿರಮ್ಮ ತಮ್ಮ ಕಾರ್ಖಾನೆ ಪ್ರಾರಂಭಿಸಿದರು. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೈಸೂರು ಪಾಕ್ ಮಾಡುವುದು ಸುಲಭವೇ! ಆದರೂ ಅವರು ನನ್ನ ಮೇಲಿನ ಅಕ್ಕರೆಗಾಗಿ ಇದಕ್ಕೆ ಒಪ್ಪಿಕೊಂಡರು.  ಅಡುಗೆ ಮನೆಯ ಒಳಗಿನಿಂದ ಘಮಘಮ ಪರಿಮಳ ಬರುತ್ತಿತ್ತು.  ದೊಡ್ಡ ದೊಡ್ಡ ತಟ್ಟೆಗಳಲ್ಲಿ ಮೈಸೂರು ಪಾಕ್ ದ್ರಾವಣ ಸುರಿದು ಅದನ್ನು ಡೈಮಂಡ್ ಆಕಾರದಲ್ಲಿ ಕತ್ತರಿಸಿದರು. ನ್ಯೂಸ್ ಪೇಪರಿನ ಹಾಳೆಗಳನ್ನು ನೀಟಾಗಿ ಕತ್ತರಿಸಿ ಅವುಗಳಲ್ಲಿ ಇವರ ಮನೆಗೆ ಇಷ್ಟು ಎಂದು ಲೆಕ್ಕ ಹಾಕಿ ಇಟ್ಟು ಪೊಟ್ಟಣ ಕಟ್ಟಿಕೊಟ್ಟರು. ನಾನು ಇವನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ನೆಂಟರ ಮನೆಗಳಿಗೆ ಡೆಲಿವರಿ ಮಾಡಲು ಹೊರಟೆ. ಆಗ ಬೆಂಗಳೂರು ಇಷ್ಟು ದೊಡ್ಡದಾಗಿ ಬೆಳೆದಿರಲಿಲ್ಲ. ನಮ್ಮ ನೆಂಟರು ಎಲ್ಲರೂ ಜಯನಗರ, ಚಾಮರಾಜಪೇಟೆ ಈ ಎರಡು ಬಡಾವಣೆಗಳಲ್ಲಿದ್ದರು.  


ನಾನು ಹೊರಟಿದ್ದು ಬಸ್ಸಿನಲ್ಲಿ. ಜಯನಗರದ ನಾಲ್ಕನೇ ಬ್ಲಾಕ್ ಬಸ್ ಸ್ಟಾಂಡಿನಿಂದ ಚಾಮರಾಜಪೇಟೆಯ ರೂಟ್ ನಂಬರ್ ಒನ್ ಇತ್ತು. ಬಸ್ಸುಗಳು ಆಗ ಯಾವ ನಿಯಮಗಳಿಗೆ ಬದ್ಧವಾಗಿರಲಿಲ್ಲ. ಹೊರಡಲು ಇಂಥದ್ದೇ ಸಮಯ ಎಂದೂ ಇರಲಿಲ್ಲ. ಹತ್ತು ಹದಿನೈದು ನಿಮಿಷ ತಡವಾದರೂ ಓಕೆ. ಒಮ್ಮೊಮ್ಮೆ ಟ್ರಿಪ್ ಕ್ಯಾನ್ಸಲ್ ಆಗುವುದು ಕೂಡಾ ನಡೆಯುತ್ತಿತ್ತು.  ಬಸ್ಸುಗಳು ಯಾವ ಅವಸರವೂ ಇಲ್ಲದೆ ಚಲಿಸುತ್ತಿದ್ದವು. ಜನ ಪಕ್ಕದಲ್ಲಿ ಕೂತವರ ಜೊತೆ ಹರಟೆ ಹೊಡೆಯುತ್ತಿದ್ದರು.  ನಿಮ್ಮ ತಂದೆಗೆ ಎಲ್ಲಿ ಕೆಲಸ, ನೀವು ಎಷ್ಟು ಜನ ಮಕ್ಕಳು ಇತ್ಯಾದಿ ಪ್ರಶ್ನೆಗಳನ್ನು ಅಪರಿಚಿತರು ಕೂಡಾ ಕೇಳುತ್ತಿದ್ದರು. ಎಷ್ಟು ಸಂಬಳ ಎಂಬ ಪ್ರಶ್ನೆ ಕೂಡಾ ಆಗ ಸಾಧುವಾದ ಪ್ರಶ್ನೆಯೇ ಆಗಿತ್ತು!


ಬಸ್ಸಿಗೆ ಕಾದು ಕೊನೆಗೂ ನಾನು ಸೀಟ್ ಹುಡುಕಿ ಕುಳಿತೆ. ನನಗೆ ಹೊಟ್ಟೆ ಚುರುಚುರು ಎನ್ನುತ್ತಿತ್ತು. ಬುಟ್ಟಿಯಲ್ಲಿ ಇದ್ದ ಮೈಸೂರು ಪಾಕುಗಳು ಘಮಘಮ ಎನ್ನುತ್ತಿದ್ದವು. ನನಗೆ ತಡೆಯಲಾಗದೆ ಒಂದು ಪೊಟ್ಟಣವನ್ನು ಮೆಲ್ಲನೆ ಬಿಡಿಸಿ ಡೈಮಂಡ್ ಆಕಾರವನ್ನು ಪೆಂಟಗನ್ ಆಕಾರ ಮಾಡುತ್ತಿದ್ದೇನೆ ಎಂಬ ಪರಿವೆಯೂ ಇಲ್ಲದೆ ಒಂದು ತುಂಡನ್ನು ಮುರಿದು ಬಾಯಿಗೆ ಹಾಕಿಕೊಂಡೆ. ಇಂದಿರಮ್ಮ  ಅವರ ಕೈರುಚಿಯ ಬಗ್ಗೆ ಎಲ್ಲರೂ ಕೊಂಡಾಡುತ್ತಿದ್ದುದು ಸುಮ್ಮನೇ ಅಲ್ಲ. ಮೈಸೂರು ಪಾಕ್ ನಿಜವಾಗಲೂ ರುಚಿಯಾಗಿತ್ತು.   ಮತ್ತು ನನ್ನ ಬಳಿ ಇನ್ನೂ ಅನೇಕ ಪೊಟ್ಟಣಗಳಿದ್ದವು! 


ನನ್ನ ಇನ್ನೊಬ್ಬ ದೊಡ್ಡಮ್ಮ ಸಾವಿತ್ರಮ್ಮ ಅವರದ್ದು ದೊಡ್ಡ ಕುಟುಂಬ. ಆಗ ಅವರೂ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು. ಆದರೂ ನೋವಿನಲ್ಲೇ ನನ್ನನ್ನು ಬಹಳ ಆದರಿಸಿದರು. ಬಹಳ ಸಂತೋಷ ಪಟ್ಟರು. ಮೈಸೂರು ಪಾಕ್ ಪೊಟ್ಟಣವನ್ನು ಅವರ ಕೈಗೆ ಕೊಟ್ಟೆ. ಅವರು ಮಗಳನ್ನು ಕರೆದು ಎಲ್ಲರಿಗೂ ಕೊಡಲು ಹೇಳಿದರು. ಇಂದಿರಮ್ಮ ಯಾಕೆ ಒಂದೊಂದು ಮೈಸೂರ್ ಪಾಕನ್ನು ಒಂದೊಂದು ಆಕಾರದಲ್ಲಿ ಕತ್ತರಿಸಿದ್ದಾರೆ ಎಂಬ ಪ್ರಶ್ನೆಯನ್ನು ಪುಣ್ಯವಶಾತ್ ಯಾರೂ ಕೇಳಲಿಲ್ಲ!


ನಾನು ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಒಂಬತ್ತನೇ ರಾಂಕ್ ಗಳಿಸಿದ್ದ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ರಾಂಕ್ ಬರಬಹುದು ಎಂಬ ನಿರೀಕ್ಷೆ ಬಹಳ ಜನರಿಗೆ ಇತ್ತು.  ಪಿಯುಸಿ ಪರೀಕ್ಷೆಯ ಫಲಿತಾಂಶ ಬರಲು ಇನ್ನೊಂದು ದಿನ ಇತ್ತು.  ನಮ್ಮ ತಂದೆಗೆ ಒಬ್ಬರು ಪತ್ರಕರ್ತರು ಪರಿಚಯದವರು.  ನಮ್ಮ ಮನೆಯ ಹಿಂದಿನ ಬೀದಿಯಲ್ಲೇ ಅವರ ಮನೆ ಇತ್ತು.  ಪತ್ರಕರ್ತರಿಗೆ ರಾಂಕ್ ಪಟ್ಟಿ ಹಿಂದಿನ ದಿವಸವೇ ಸಿಕ್ಕುತ್ತದೆ ಅವರಿಗೆ ಹೇಳಿದರೆ ಹಿಂದಿನ ದಿವಸವೇ ನಮಗೆ ಫಲಿತಾಂಶ ತಿಳಿಯುತ್ತದೆ ಎಂದು ನಮ್ಮ ತಂದೆ ತರ್ಕಿಸಿ ಹಾಗೆ ಹೇಳಿಯೂ ಬಿಟ್ಟರು.  ನನ್ನ ಹೆಸರನ್ನು ಚೀಟಿಯ ಮೇಲೆ ಬರೆದು ರಾಂಕ್ ಬಂದಿದ್ದರೆ ಫೋನ್ ಮಾಡಿ ಎಂದು ಪಕ್ಕದ ಮನೆಯ ಫೋನ್ ನಂಬರ್ ಕೊಟ್ಟು ಬಂದರು! ನನಗೆ ಇದು ಸ್ವಲ್ಪವೂ ಇಷ್ಟವಿರಲಿಲ್ಲ.  "ಅದೆಲ್ಲ ಯಾಕೆ?" ಎಂದು ಸ್ವಲ್ಪ ಮುನಿಸಿಕೊಂಡೆ. 


ಈ ಪತ್ರಕರ್ತರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರು ಎಂದು ನೆನಪು. ಸಂಜೆಯಿಂದಲೇ ನಮ್ಮ ತಂದೆ ಏನಾದರೂ ಫೋನ್ ಬಂತಾ ಎಂದು ಪಕ್ಕದ ಮನೆಯವರನ್ನು ಒಂದೆರಡು ಬಾರಿ ಕೇಳಿದರು.  ಇಲ್ಲ ಎಂದು ಉತ್ತರ ಬಂತು.  ಆಗ  ಹತ್ತು ಗಂಟೆಗೆ ಎಲ್ಲರೂ ಮಲಗಿಬಿಡುತ್ತಿದ್ದರು. ಹತ್ತರಿಂದ ಪ್ರಾರಂಭವಾಗುವ ಛಾಯಾಗೀತ್ ಕಾರ್ಯಕ್ರಮ ಕೇಳಿ ನಾನು ಮಲಗಿಕೊಳ್ಳುತ್ತಿದ್ದೆ. ರಾಂಕ್ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ ಎಂದೇ ಪತ್ರಕರ್ತ ಮಿತ್ರರು ಫೋನ್ ಮಾಡಿಲ್ಲ ಎಂದು ನಾವು ಬಗೆದೆವು. "ರಾಂಕ್ ಬಂದರೇನು ಬಿಟ್ಟರೇನು?" ಎಂದು ನಮ್ಮ ತಾಯಿ ನನಗೆ ಸಮಾಧಾನ ಹೇಳಿದರು.


ಮರುದಿನ ಬೆಳಗ್ಗೆ ಎಂದಿನಂತೆ ನಮ್ಮ ತಾಯಿ ಕಾಫಿ ಮಾಡಿ ಕೊಟ್ಟರು. ರೈತರಿಗೆ ಸಲಹೆ ಇತ್ಯಾದಿ ಕಾರ್ಯಕ್ರಮಗಳು  ರೇಡಿಯೋದಲ್ಲಿ  ಬರುತ್ತಿದ್ದವು. ಮನೆಯ ಮುಂದೆ ನ್ಯೂಸ್ ಪೇಪರ್ ಬಂದು ಬಿತ್ತು. ನಾನು ಹೋಗಿ ಕೈಗೆತ್ತಿಕೊಂಡೆ. ಅದನ್ನು ನನ್ನ ರೂಮಿಗೆ ತಂದೆ. ಇದ್ದ ಎರಡು ಪುಟ್ಟ ಕೋಣೆಗಳಲ್ಲಿ ಒಂದನ್ನು ನನಗೆ ಮತ್ತು ಇನ್ನೊಂದನ್ನು ಅಣ್ಣನಿಗೆ  ಬಿಟ್ಟುಕೊಟ್ಟಿದ್ದರು. ನನ್ನ ಕೋಣೆಯಲ್ಲಿ ಓದಿಕೊಳ್ಳಲು ಟೇಬಲ್ ಇತ್ಯಾದಿ ಇರಲಿಲ್ಲ. ಮಂಚ ಇತ್ತು. ಅದೇ ನನ್ನ ಟೇಬಲ್ ಆಗಿತ್ತು. ಅದರ ಮುಂದೆ  ಮೋಡಾ ಎಂಬ ಪುಟ್ಟ ಸಾಧನದ ಮೇಲೆ ಕೂತು ನಾನು ಓದಿಕೊಳ್ಳುತ್ತಿದ್ದೆ.  ನಾನು ಮಂಚದ ಮೇಲೆ ಪೇಪರ್ ಹರಡಿ ರಾಂಕ್ ಪಟ್ಟಿ ನೋಡಿದೆ. ಎರಡನೇ ರಾಂಕ್! ನಾನು ರಿಜಿಸ್ಟ್ರೇಷನ್ ನಂಬರನ್ನು ಮತ್ತೊಮ್ಮೆ ಓದಿ ಖಾತ್ರಿ ಪಡಿಸಿಕೊಂಡು "ಸೆಕೆಂಡ್ ರಾಂಕ್" ಎಂದು ಕೂಗಿದೆ.  ನಮ್ಮ ತಂದೆ ತಾಯಿಗೆ ಉಂಟಾದ ಸಂತೋಷವನ್ನು ಹೇಳಲು ಸಾಧ್ಯವಿಲ್ಲ.


ಸ್ವಲ್ಪ ಹೊತ್ತಿನಲ್ಲಿ ನಮ್ಮ ಸೋದರಮಾವ ಸತ್ಯಾಜಿರಾವ್ ಮೋಟರ್ ಬೈಕಿನಲ್ಲಿ ಬಂದರು. ಅವರ ಕೈಯಲ್ಲಿ ಸಿಹಿ ತಿಂಡಿಯ ಪ್ಯಾಕೆಟ್ ಇತ್ತು. ನನ್ನನ್ನು ಅಪ್ಪಿಕೊಂಡು ಕೈಕುಲುಕಿದರು.  ಅವರು ಆಚಾರ್ಯ ಪಾಠಶಾಲೆಯಲ್ಲಿ ಗಣಿತದ ಮೇಷ್ಟ್ರು. ಅವರು ಹೆಮ್ಮೆಯಿಂದ ಎಲ್ಲರಿಗೂ ನಮ್ಮ ಅಕ್ಕನ ಮಗ ಸೆಕೆಂಡ್ ರಾಂಕ್ ಎಂದು ಹೇಳಿಕೊಂಡರು.  ಈ ಸಲ ಸ್ವೀಟ್ ಮಾಡಿಕೊಡಲು ಅಮ್ಮ ಮನೆಯಲ್ಲೇ ಇದ್ದರು. ಇಂದಿರಮ್ಮ ಅವರ ಮನೆಗೆ  ಸ್ವೀಟ್ ತೆಗೆದುಕೊಂಡು ಹೋಗಿ ಕೊಟ್ಟೆ. ಈ ಸಲ ಎಲ್ಲಾ ಸ್ವೀಟ್ಸ್ ತಮ್ಮ ನೈಜಾಕಾರದಲ್ಲೇ ಇದ್ದವು.

* * *

ನಾನು ಇಂಜಿನಿಯರಿಂಗ್ ಮುಗಿಸಿ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಕೆಲವು ತಿಂಗಳ ನಂತರ ನನ್ನ ಜೊತೆಯ ಹಲವರನ್ನು ಅಮೆರಿಕಾಗೆ ಕಳಿಸುವ ನಿರ್ಧಾರವನ್ನು ಕಂಪನಿ ಪ್ರಕಟಿಸಿತು.  ನಾನು ಅರ್ಕನ್ಸಾಸ್ (ಅಥವಾ ಅಮೆರಿಕನ್ನರು ಹೇಳುವ ಹಾಗೆ ಅರ್ಕನ್ಸಾ) ಎಂಬ ರಾಜ್ಯದಲ್ಲಿ ಕ್ಯಾಪಿಟಲ್ ಮರ್ಕ್ಯುರಿ ಎಂಬ ಕಂಪನಿಗೆ ಕನ್ಸಲ್ಟೆಂಟ್ಸ್ ಆಗಿ ನಾವು ಹೋಗಬೇಕಾಗಿತ್ತು.  ಕೆಲವರು ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿದ್ದ ಇನ್ನೊಂದು ಪ್ರಾಜೆಕ್ಟ್ ಸೇರಲು ಹೊರಟರು.  ನಮ್ಮ ಪ್ರಾಜೆಕ್ಟ್ ಹೊಸದು. ಅರ್ಕನ್ಸಾಸ್ ರಾಜ್ಯದಲ್ಲಿ ಕೆಲಸ ಮಾಡಿ ಯಾವ ಡೈರೆಕ್ಟರಿಗೂ ಅನುಭವ ಇರಲಿಲ್ಲ. ಕ್ರಿಸ್ ಗೋಪಾಲಕೃಷ್ಣನ್ ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಬಂದರು.


ನಾನು ವೀಸಾ ಪಡೆಯಲು ಆಗ ಮುಂಬಯಿಗೆ ಹೋಗಬೇಕಾಗಿತ್ತು. ಆಗ ಇನ್ನೂ ಬಾಂಬೆ ಎಂಬ ಹೆಸರೇ ಚಾಲ್ತಿತಲ್ಲಿತ್ತು. ನಾನು ವೀಸಾ ಪಡೆದು ಮರಳಿದಾಗ ಮನೆಗೆ ಬೀಗ ಹಾಕಿತ್ತು. ನಾನು ಮುಂದಿನ ಮನೆಯಲ್ಲಿದ್ದ ರಾಜಮ್ಮ ಅವರನ್ನು ವಿಚಾರಿಸಿದೆ. ಅವರು "ನಿಮ್ಮ ತಾಯಿ ಅವರ ಅಕ್ಕನ ಮನೆಗೆ ಹೋಗಿದ್ದಾರೆ" ಎಂದು ಬೀಗದ ಕೈ ಕೊಟ್ಟರು.  ನಾನು ಬರುವ ವಿಷಯ ಗೊತ್ತಿದ್ದರೂ ನಮ್ಮ ತಾಯಿ ಹೀಗೆ ಹೊರಡುವುದು ಅಸಾಧಾರಣ ವಿಷಯವೇ. ರಾಜಕ್ಕ ನನ್ನ ಕಡೆ ನೋಡುತ್ತಾ "ನಿಮ್ಮ ದೊಡ್ಡಮ್ಮ ಸಾವಿತ್ರಮ್ಮ ತೀರಿಕೊಂಡರು" ಎಂದರು.  ನನಗೆ ಆಘಾತವಾಯಿತು.  ಸಾವಿತ್ರಮ್ಮ ನನ್ನನ್ನು ತುಂಬಾ ಅಕ್ಕರೆಯಿಂದ ಕಾಣುತ್ತಿದ್ದರು.  ಅವರದ್ದು ಬಹಳ ಕಷ್ಟದ ಜೀವನ. ಎರಡನೆಯ ಮದುವೆ.  (ಕಾಲವಾದ) ಮೊದಲ ಹೆಂಡತಿಯ ಮೂರು ಹೆಣ್ಣು ಮಕ್ಕಳ ಜೊತೆಗೆ ತಮ್ಮ ಆರು ಜನ ಮಕ್ಕಳನ್ನು ಬೆಳೆಸಿದವರು.  ತಾಳ್ಮೆ, ಸಹಿಷ್ಣುತೆ ಎಂದರೆ ಅವರನ್ನು ಉದಾಹರಣೆಯಾಗಿ ನೀಡಬಹುದು.  ಬಡತನದ ಜೊತೆಗೆ ಅನೇಕ ಕಷ್ಟಗಳು. ತಮ್ಮ ಮಲಮಕ್ಕಳನ್ನು ತಮ್ಮದೇ ಮಕ್ಕಳಂತೆ ಬೆಳೆಸಿದರು. ಅವರಲ್ಲಿ ಕಿರಿಯ ಮಗಳಿಗೆ ಕಿವುಡು. ಇನ್ನೊಬ್ಬ ಮಗಳ ಪತಿ ಅಪಘಾತದಲ್ಲಿ ತೀರಿಕೊಂಡ. ಆಗ ಮಗಳು ಎರಡನೇ ಮಗುವಿಗೆ ಗರ್ಭಿಣಿ. ಈ ಎಲ್ಲ ಕಷ್ಟಗಳನ್ನೂ ಅವರು ಅದು ಹೇಗೆ ಸಹಿಸಿದರೋ. ಜೊತೆಗೆ ಅನೇಕ ಕಾಯಿಲೆಗಳು.  ಇಷ್ಟಾದರೂ ನಗುನಗುತ್ತಾ ನಮ್ಮನ್ನು ಆದರಿಸುತ್ತಿದ್ದರು.  ಅವರ ಮಕ್ಕಳು ಮನೆ ಕಟ್ಟಿಸಿದಾಗ ತುಂಬಾ ಸಂಭ್ರಮಪಟ್ಟರು.  ಅವರ ಮನೆ ಈಗ ನಮ್ಮ ಮನೆಯ ಹತ್ತಿರದಲ್ಲೇ ಇತ್ತು.  ಆದರೆ ಸ್ವಂತ ಮನೆಯಲ್ಲಿ ಹೆಚ್ಚು ದಿನ ಕಳೆಯುವ ಭಾಗ್ಯವನ್ನು ಅವರು ಪಡೆಯಲಿಲ್ಲ.  


ನಾನು ಅವರ ಪಾರ್ಥಿವ ಶರೀರವನ್ನು ನೋಡಲು ಹೋದೆ. ಸತ್ತಾಗ ಅವರಿಗೆ ಬಹುಶಃ ಐವತ್ತೈದು ವರ್ಷ ಆಗಿರಬಹುದು, ಅಷ್ಟೇ.  


ನಾನು ಅಮೆರಿಕಾಗೆ ಹೊರಟಿರುವ ವಿಷಯವನ್ನು ಎಲ್ಲಾ ನೆಂಟರಿಗೂ ಹೋಗಿ ತಿಳಿಸಬೇಕು ಎಂದು ನಮ್ಮ ಅಮ್ಮನ ಇಂಗಿತವಾಗಿತ್ತು. ಆಗ ಹೊರದೇಶಕ್ಕೆ ಹೋಗುವುದು ಅಪರೂಪದ ವಿಷಯ. ನಮ್ಮ ತಂದೆಯ ಅಣ್ಣ ರಾಮರಾವ್ ಶಿವಮೊಗ್ಗದಲ್ಲಿದ್ದರು. ಅವರು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು.  ನಮ್ಮ ತಂದೆಯ ಅಕ್ಕ ರಾಜಿ  ಶಿವಮೊಗ್ಗದ ಹತ್ತಿರದ ಒಂದು ಹಳ್ಳಿಯಲ್ಲಿ ಇದ್ದರು.  


ರಾಜಿ ಅವರದ್ದೂ ಬಹಳ ಕಷ್ಟದ ಜೀವನ. ತಮ್ಮ ಪತಿ ರಂಗಪ್ಪ ಅವರ ಜೊತೆ ಅವರು ತುಂಬಾ ಸಂತೋಷವಾಗೇ ಇದ್ದರಂತೆ. ರಂಗಪ್ಪ ಅವರಿಗಿಂತ ವಯಸ್ಸಿನಲ್ಲಿ ಚಿಕ್ಕವರಂತೆ! ಪತಿಯ ಬಗ್ಗೆ ಮಾತಾಡುವಾಗ ಅವರು ಏಕವಚನದಲ್ಲಿ ಮಾತಾಡುತ್ತಿದ್ದರು! ಇದೆಲ್ಲ ಆಗಿನ ಕಾಲದಲ್ಲಿ ಸ್ವಲ್ಪ ಅಪರೂಪವೇ! ರಂಗಪ್ಪ ಅವರಿಗೆ ಹೊಲ ಇತ್ತು.  ಹೀಗಾಗಿ ಏನೂ ಸಮಸ್ಯೆ ಇರಲಿಲ್ಲ. ಆದರೆ ಪಕ್ಕದ ಹಳ್ಳಿಗೆ ಯಾವುದೋ ಸಮಾರಂಭಕ್ಕೆ ಹೋದವರು ಒಮ್ಮೆಲೇ ಕಾಯಿಲೆ ಬಿದ್ದು ತೀರಿಕೊಂಡರು. ಒಮ್ಮೆಲೇ ಅವರ ಸಂಸಾರ ಡೋಲಾಯಮಾನ ಸ್ಥಿತಿಗೆ ಬಂದುಬಿಟ್ಟಿತು. ಉಳುವವನಿಗೆ ಹೊಲ ಕಾನೂನು ಬಂದಾಗ ಅವರ ಜಮೀನು ಕೈಬಿಟ್ಟಿತು. ಸರಕಾರದ ಪಿಂಚಣಿಯ ಮೇಲೆ ಜೀವನ ನಡೆಯಬೇಕು. ಇರುವ ಒಬ್ಬ ಮಗ ಕಿವುಡ, ಮೂಕ. ಅವನಿಗೆ ಮದುವೆಯಾಯಿತು. ಅವನ ಪತ್ನಿ ಮನೆಯನ್ನು ಸಂಭಾಳಿಸಿಕೊಂಡರು.


ನಾನು ಮತ್ತು ನನ್ನ ತಂದೆ ಇಬ್ಬರೂ ಬಸ್ಸಿನಲ್ಲಿ ಹೊರಟೆವು. ನಮ್ಮ ತಂದೆಯ ಜೊತೆ ಹೀಗೆ ಒಬ್ಬನೇ ಊರಿಂದ ಊರಿಗೆ ಪ್ರಯಾಣ ಮಾಡಿದ್ದು ಅದೊಂದೇ ಸಲ. ಅವರಿಗೂ ವಯಸ್ಸಾಗುತ್ತಿತ್ತು.  


ಹಳ್ಳಿಯ ಸ್ಟಾಪ್ ಬಂದಾಗ ನಮ್ಮ ತಂದೆ ಹಳೆಯ ಪರಿಚಯದಿಂದ ಮನೆಯನ್ನು ಹುಡುಕಿದರು. ಆಗ ಊರುಗಳಲ್ಲಿ ಹೆಚ್ಚು ಬದಲಾವಣೆಗಳು ಆಗುತ್ತಲೇ ಇರಲಿಲ್ಲ. ಜನರೂ ಅಷ್ಟೇ.


ರಾಜಿ ಅವರನ್ನು ನೋಡಲು ನನಗೆ ಸ್ವಲ್ಪ ಕಷ್ಟವಾಗುತ್ತಿತ್ತು. ಏಕೆಂದರೆ ಅವರು ಮಾತೆತ್ತಿದರೆ ಅಳುತ್ತಿದ್ದರು.  ಅಂದು ಕೂಡಾ ಅತ್ತರು. "ನಾವು ಬಡವರು ಅಂತ ನಮ್ಮ ಮನೆಗೆ ಬರುವುದಿಲ್ಲ" ಎಂದು ಏನೋ ಹೇಳಿದರು. ನಮ್ಮ ತಂದೆ ಅವರಿಗೆ ಹಾಗೆಲ್ಲ ಮಾತಾಡಬಾರದು ಎಂದು  ಬೈದರು.  ನಾನು ಬೇರೆ ದೇಶಕ್ಕೆ ಹೊರಟಿದ್ದೇನೆ ಎಂದು ಅವರಿಗೆ ತಿಳಿಸಿದರು. ಅವರಿಗೆ ಅದು ಎಷ್ಟು ಅರ್ಥ ಆಯಿತೋ ತಿಳಿಯದು. ನಮಗೆ ಸ್ನಾನ ಮಾಡಲು ಹೇಳಿ ನಂತರ  ಊಟ ಬಡಿಸಿದರು.  ನಮಗೆ ಸಂಜೆ ಶಿವಮೊಗ್ಗದ ಬಸ್ ಹಿಡಿಯುವ ಕಾರ್ಯಕ್ರಮ ಇತ್ತು. ಮಧ್ಯಾಹ್ನ ಊಟ ಮಾಡಿದ ನಂತರ ನಮ್ಮ ತಂದೆ ನಿದ್ದೆ ಮಾಡಿದರು. ನಾನು ಎದ್ದಿದ್ದೆ. 


ಅಡಿಗೆಮನೆಯಲ್ಲಿ ಏನೋ ಸದ್ದು ಕೇಳಿಸುತ್ತಿತ್ತು. ನಾನು ಧೈರ್ಯ ಮಾಡಿ ಅಲ್ಲಿಗೆ ಹೋದೆ. ರಾಜಿ ಮತ್ತು ಅವರ ಮಗ ಬಿಂದು ಇಬ್ಬರೂ ಏನೋ ಕಾರ್ಖಾನೆ ಪ್ರಾರಂಭಿಸಿದ್ದರು. "ನೀನು ಸುಮ್ಮನಿರೋ! ಮಹಾ ಇವನಿಗೆ ಎಲ್ಲಾ ತಿಳಿಯುತ್ತೆ!" ಎಂದು ಮಗನನ್ನು ತಾಯಿ ಗದರಿಸುತ್ತಿದ್ದರು. ಅವನೂ ತನ್ನ ಮೂಕ ಭಾಷೆಯಲ್ಲೇ ಏನೋ ಹೇಳುತ್ತಿದ್ದ. ನಂತರ ತಿಳಿದಿದ್ದು ಅವರು ಮೈಸೂರು ಪಾಕ್ ಮಾಡಲು ಹೊರಟಿದ್ದರು ಎಂದು. ಇಂದಿರಮ್ಮ ಅಷ್ಟೊಂದು ಮೈಸೂರು ಪಾಕನ್ನು ಬಹಳ ಚಾಕಚಕ್ಯತೆಯಿಂದ ಮಾಡಿದ್ದನ್ನು ನಾನು ನೋಡಿದ್ದೆ. ಇಲ್ಲಿ ಅದರ ತದ್ವಿರುದ್ದ! ತಾಯಿ ಮತ್ತು ಮಗ ಎಲ್ಲಾ ವಿಷಯದಲ್ಲೂ ಏನೋ ಜಗಳ ಮಾಡುತ್ತಿದ್ದರು! ಹಾಗಲ್ಲ, ಹೀಗೆ. ಹೀಗಲ್ಲ, ಹಾಗೆ.  ಇದನ್ನು ನೋಡುವುದೇ ಒಂದು ತಮಾಷೆಯಾಗಿತ್ತು.


ಕೊನೆಗೂ ಮೈಸೂರು ಪಾಕ್ ಸಿದ್ಧವಾಯಿತು. ಶಿವಮೊಗ್ಗದಲ್ಲಿ ಇದ್ದ ತಮ್ಮನಿಗೆ ಮತ್ತು ನಮ್ಮ ಮನೆಗೆ ಮೈಸೂರು ಪಾಕ್ ಪೊಟ್ಟಣಗಳು ಸಿದ್ಧವಾದವು!  ಅಷ್ಟೊಂದು ಜನರಿಗೆ ತುಪ್ಪ ಹಾಕಿ ಮೈಸೂರು ಪಾಕ್ ಮಾಡುವುದು ಬಡತನದಲ್ಲಿದ್ದ ಕುಟುಂಬಕ್ಕೆ ಸುಲಭ ಆಗಿರಲಾರದು. ಆದರೂ ಬಹಳ ಸಂತೋಷದಿಂದ ಮಾಡಿಕೊಟ್ಟರು. 


ನಾವು ಶಿವಮೊಗ್ಗಕ್ಕೆ ಹೋಗಿ ನಮ್ಮ ದೊಡ್ಡಪ್ಪನನ್ನು ಕಂಡು ಅವರ ಆಶೀರ್ವಾದ ಪಡೆದು ಬೆಂಗಳೂರಿಗೆ ಮರಳಿ ಬಂದೆವು. ಅದೇ ವರ್ಷ ನಮ್ಮ ತಂದೆಯ ಅಕ್ಕ ಮತ್ತು ಅಣ್ಣ ಇಬ್ಬರೂ ಕಾಲವಾದರು.  ಇದು ನನಗೆ ನಮ್ಮ ತಂದೆ ಬರೆದ ಪತ್ರಗಳ ಮೂಲಕ ತಿಳಿಯಿತು.

ಕಾಮೆಂಟ್‌ಗಳು

  1. ತುಂಬಾ ಚೆನ್ನಾಗಿ ಬರೆಯುತ್ತಿದ್ದೀರ. ಬಹಳ ಆಪ್ತವಾಗಿದೆ. ಮುಂದುವರೆಸಿ. ನಾನಂತೂ ಕುತೂಹಲದಿಂದ ಓದುತ್ತಿದ್ದೇನೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)