ಹಕ್ಕಿ ಹಾಡುತಿದೆ ಕೇಳಿದಿರಾ!



"ಪಪೀಹಾ ರೇ ಪಿವ ಕೀ ಬಾಣೀ ನ ಬೋಲ್" ಎಂದು ಮೀರಾಬಾಯಿ ಹಕ್ಕಿಯನ್ನು ಕೇಳಿಕೊಂಡಳು. ಬೆದರಿಸಿದಳು ಎಂದರೂ ಸರಿ. ಏಕೆಂದರೆ ಅವಳು ಮುಂದುವರೆದು ನನ್ನ ಮಾತು ಕೇಳದಿದ್ದರೆ ನಿನ್ನ ಕೊಕ್ಕು ಕತ್ತರಿಸಿ ಕರಿ ಲವಣ ಉದುರಿಸುತ್ತೇನೆ ಎಂದು ಹೆದರಿಸುತ್ತಾಳೆ. ಅವಳು ಕೇಳಿದ್ದಾದರೂ ಏನು? ಪಪೀಹಾ ಎಂದರೆ ಪಕ್ಷಿಯ ಒಂದು ಜಾತಿ.  ಮಳೆಗಾಲಕ್ಕಾಗಿ ಕಾಯುವುದು ಮತ್ತು ಮಳೆಹನಿಗಾಗಿ ಪರಿತಪಿಸುವುದು ಅದರ ಜಾತಕದಲ್ಲಿ ಬ್ರಹ್ಮನೇ ಬರೆದಿರುವ ಕಾರಣ ಅದಕ್ಕೆ ಚಾತಕ ಪಕ್ಷಿ ಎಂದೇ ಹೆಸರು.  ಈ ಪಪೀಹಾ ಮಾಡುವ ಸದ್ದು ಚಿವ್ ಚೀವ್ ಎಂದೋ ಪೀವ್ ಪೀವ್ ಎಂದೋ ಹೇಳುವುದು ಕಷ್ಟ. ಮೀರಾಬಾಯಿಗೆ ಪೀವ್ ಪೀವ್ ಎಂದೇ ಕೇಳಿಸಿತು.  ಪೀವ್ ಎಂದರೆ ಪಿಯಾ ಅಥವಾ ಪ್ರಿಯಾ ಎಂಬುದರ ಗ್ರಾಮ್ಯ ರೂಪ.  ಪಪೀಹಾ ತನ್ನ ಪ್ರಿಯನನ್ನು ಕರೆದಾಗ ಮೀರಾಬಾಯಿಗೆ ತನ್ನ ಪ್ರಿಯನಾದ ಗಿರಿಧರನಾಗರನ ನೆನಪಾಗಿ ಪಕ್ಷಿಯ ಮೇಲೆ ಕೋಪ ಬರುವುದು ಸ್ವಲ್ಪ ಅಸಹಜ. ಆದರೂ ಏನೂ ಮಾಡುವಂತಿಲ್ಲ. ಪೊಯೆಟಿಕ್ ಲೈಸೆನ್ಸ್ ಎಂಬುದೊಂದು ಇದೆ ನೋಡಿ.   


ಪಪೀಹಾ ಹಕ್ಕಿಯ ಕೂಗಿನಲ್ಲಿ ಅನೇಕರಿಗೆ ಪ್ರೇಮದ ಆರ್ತತೆ ಕೇಳಿದೆ. ಅದಕ್ಕೆ ಲವ್ ಬರ್ಡ್ ಎಂದೇ ಹೆಸರು ಕೊಟ್ಟಿದ್ದಾರೆ. ಆಲ್ಫ್ರೆಡ್ ಹಿಚ್ ಕಾಕ್ ಚಿತ್ರೀಕರಿಸಿದ ಬರ್ಡ್ಸ್ ಎಂಬ ಚಿತ್ರದಲ್ಲಿ ನಾಯಕಿಗೆ ನಾಯಕ ಪಂಜರದಲ್ಲಿರುವ ಲವ್ ಬರ್ಡ್ಸ್ ಉಡುಗೊರೆ ಕೊಡುತ್ತಾನೆ. ಕಥೆ ನಡೆಯುವುದು ಒಂದು ದ್ವೀಪದಲ್ಲಿ.  ಅದೇಕೋ ಒಮ್ಮೆಲೇ ದ್ವೀಪದ ಹಕ್ಕಿಗಳಿಗೆ ರಾಕ್ಷಸೀ ಗುಣ ಬಂದು ಅವು ಮನುಷ್ಯರ ಮೇಲೆ ಆಕ್ರಮಣ ನಡೆಸಲು ಪ್ರಾರಂಭಿಸುತ್ತವೆ.  ಪಕ್ಷಿಗಳಲ್ಲಿ ಉಂಟಾದ ಈ ಅಂತರವೇ ಮುಂದೆ ಪಕ್ಷಾಂತರ ಎಂಬ ಪದಕ್ಕೆ ಎಡೆಮಾಡಿತು. ಪೀವ್ ಪೀವ್ ಎನ್ನುತ್ತಿದ್ದ ಲವ್ ಬರ್ಡ್ಸ್ ಕೂಡಾ "ರಕ್ತ ಪೀವ್" ಎಂದು ಉಚ್ಚರಿಸಲು ಪ್ರಾರಂಭಿಸುತ್ತವೆ!  ಈ ಕಾದಂಬರಿಯ ಸಂಕ್ಷಿಪ್ತ ರೂಪವನ್ನು ಹಿಂದೊಮ್ಮೆ ರೀಡರ್ಸ್ ಡೈಜೆಸ್ಟ್ ಪ್ರಕಟಿಸಿತು. ಅದನ್ನು ಓದಿದ ನಂತರ ಗುಬ್ಬಿಯನ್ನು ಕಂಡರೂ ಅದರ ಕೊಕ್ಕಿನಲ್ಲಿ ಏನೋ ಬ್ರಹ್ಮಾಸ್ತ್ರ ಇದೆಯೇನೋ ಎಂದು ನಾನು  ನೋಡುತ್ತಿದ್ದೆ.   ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬ ಗಾದೆ ಸುಮ್ಮನೇ ಬಂದಿರಲಾರದು. ಎಲ್ಲೋ ಹಿಂದೆ ನಮ್ಮಲ್ಲೂ ಗುಬ್ಬಿಗಳ ರೂಪದಲ್ಲಿ ಅಸುರರು ಬಂದೆರಗಿದಾಗ ಬ್ರಹ್ಮಾಸ್ತ್ರ ಬಳಸಿ ಅವುಗಳನ್ನು ಹೆದರಿಸಿ ಓಡಿಸಿರಬಹುರು. ಅನಂತರ ಇಲಿ, ಹೆಗ್ಗಣ, ಏನೇ ಬಂದರೂ ಅದಕ್ಕೆ ಹೆದರಿ ಬ್ರಹ್ಮಾಸ್ತ್ರ ತೋರಿಸುವುದನ್ನು ಕೆಲವರು ರೂಢಿ ಮಾಡಿಕೊಂಡರು. ಪುಕ್ಕಕ್ಕೆ ಹೆದರುವ ಇವರನ್ನು ಪುಕ್ಕಲು ಎಂದು ಕರೆಯಲಾಯಿತು  ಮತ್ತು ಬ್ರಹ್ಮಾಸ್ತ್ರವನ್ನು ಬ್ಯಾನ್ ಮಾಡಲಾಯಿತು. 


ಈ ಪಪೀಹಾ ತನ್ನ ಪಾಡಿಗೆ ಪೀವ್ ಪೀವ್ ಎಂದು ತನ್ನ ಜೋಡಿಯನ್ನು ಕರೆದರೂ ಅದರ ಮೇಲೆ ಕೋಪ ಮಾಡಿಕೊಳ್ಳುವುದು ನಮ್ಮ ಕವಿಗಳ ಪೆಟ್ ಪೀವ್.  ಕೆಲವು ಕವಿಗಳಿಗೆ ಪೀವ್ ಎಂದಾಗ ತವರಿಗೆ ಹೋದ ತಮ್ಮ ಪತ್ನಿಯ ಅಥವಾ ಅವಳು ವಾಪಸು ಬರುವ ದಿನ ಸಮೀಪಿಸುತ್ತಿದೆ ಎಂಬುದರ ನೆನಪಾಗಿ ಕೋಪ ಕೆರಳಿರಬಹುದು. ಅವಳು ಬಂದ ಕೂಡಲೇ "ಯಾಕೆ ಮನೆ ಗುಡಿಸಿಲ್ಲವಾ! ಗಿಡಕ್ಕೆ ನೀರು ಹಾಕದೆ ಎಷ್ಟು ದಿನ ಆಯಿತು? ಅಡುಗೆ ಮನೆಯ ಕಡೆ ಮುಖ ಮಾಡಿದಿರೋ ಇಲ್ಲವೋ?" ಎಂದೆಲ್ಲ ಪ್ರೇಮ ಸಂಭಾಷಣೆಯಲ್ಲಿ ತೊಡಗುವುದನ್ನು ಅವರಿಗೆ ನೆನಪಾಗಿರಬಹುದು. ಇನ್ನೂ ಕೆಲವು ಕವಿಗಳಿಗೆ ಪೀವ್ ಪೀವ್ ಎಂದಾಗ ಅದು "ಕುಡಿ, ಕುಡಿ!" ಎಂಬ ಸೂಚನೆಯಂತೆ ತೋರಿ ಕುಡಿಯಲು ಸೂಕ್ತ ಪಾನೀಯ ಸಿಕ್ಕದೇ  ಪಪೀಹಾಗಳನ್ನು ಓಡಿಸಲು ಬಾರ್-ಕೋಲು ಕೈಗೆ ಸೆಳೆದುಕೊಂಡಿರಬಹುದು.   ಆಗ ಹೆಂಡತಿಯು ಸಖೀ ರೀ ಸುನ್ ಬೋಲೇ ಪಪೀಹಾ ಉಸ್ ಪಾರ್ ಎಂದಿದ್ದು ಬಾರ್ ಎಂದೇ ಕೇಳಿಸಿ ಇನ್ನಷ್ಟು ಕೋಪ ಬಂದಿರಬಹುದು.  


ಇನ್ನು ಬೋಲೇ ರೇ ಪಪೀಹರಾ ಎಂಬ ಗೀತೆಯ ಕತೆಯನ್ನು ನಾನು ನಿಮಗೆ ಹೇಳಿದೆನೋ ಇಲ್ಲವೋ? ಒಂದಾನೊಂದು ಕಾಲದಲ್ಲಿ ಒಬ್ಬ ವರ್ತಕನು ಹಡಗನ್ನು ಹತ್ತಿ ವ್ಯಾಪಾರಕ್ಕೆ ಹೊರಟು ನಿಂತಾಗ ಮಗಳನ್ನು "ನಿನಗೆ ಏನು ಉಡುಗೊರೆ ತರಬೇಕು?" ಎಂದು ಕೇಳಿದನು. ಅವಳು "ಮಾತಾಡುವ ಗಿಳಿ ತನ್ನಿ" ಎಂಬ ಬೇಡಿಕೆ ಮುಂದಿಟ್ಟಳು.  ವ್ಯಾಪಾರಿ ತನ್ನ ಮನೆಗೆ ಹಿಂದಿರುಗುವ ಮುನ್ನ ಒಂದು ಪೆಟ್ ಶಾಪಿಗೆ ಭೇಟಿ ಕೊಟ್ಟು ಮಾತಾಡುವ ಗಿಣಿ ಬೇಕು ಎಂದು ಕೇಳಿದನು. "ಸ್ವಾಮೀ, ಗಿಳಿಗಳಿಗೆ ಈನಡುವೆ ಮಾತಾಡುವುದನ್ನು ಹೇಳಿಕೊಡುವುದೇ ಕಷ್ಟವಾಗಿದೆ.  ಅವುಗಳನ್ನು ಪಂಜರದಲ್ಲಿ ಇಟ್ಟು ಪಂಜರದಲ್ಲಿ ಮೊಬೈಲ್ ಫೋನ್ ಅಳವಡಿಸಿದ್ದು ದೊಡ್ಡ ಸಮಸ್ಯೆಯಾಗಿದೆ. ಮೂರೂ ಹೊತ್ತು ಮೊಬೈಲ್ ಫೋನ್ ನೋಡುತ್ತಾ ಕುಳಿತಿರುತ್ತವೆ.  ಕಾಳು ಹಾಕಿದರೆ ತಿನ್ನುವುದನ್ನು ಕೂಡಾ ಮರೆತುಬಿಡುತ್ತವೆ.  ಹೀಗಾಗಿ ನಾವು ಗಿಳಿಗಳನ್ನು ಮಾರುವುದನ್ನೇ ನಿಲ್ಲಿಸಿದ್ದೇನೆ" ಎಂದು ಪೆಟ್ ಶಾಪ್ ಓನರನು ದುಃಖದಿಂದ ಹೇಳಿದನು. 


ವರ್ತಕನು "ನನ್ನ ಮಗಳು ನನಗೆ ಮಾತಾಡುವ ಗಿಳಿ ತರಲು ಹೇಳಿದ್ದಾಳಲ್ಲ!" ಎಂದು ಪೇಚಾಡಿದನು. ಆಗ ಓನರನು "ನನ್ನ ಬಳಿ ಒಂದು ನಾಯಿಮರಿ ಇದೆ. ಬಹಳ ಮುದ್ದಾಗಿದೆ. ಅದನ್ನು ನಿಮ್ಮ ಮಗಳಿಗೆ ಕೊಟ್ಟರೆ ಅವಳಿಗೆ ಸಂತೋಷವಾಗುತ್ತದೆ" ಎಂದು ಕಳೆದ ವಾರವೇ ಹುಟ್ಟಿದ್ದ ನಾಯಿಮರಿಯನ್ನು ತೋರಿಸಿದನು. ಅದನ್ನು ನೋಡಿ ವರ್ತಕನು "ಆಗಲಿ, ಹಾಗೇ ಮಾಡುತ್ತೇನೆ" ಎಂದು ನಾಯಿಮರಿಯನ್ನು ಖರೀದಿಸಿ ಹೊರಟನು. ಅವನ ಮಗಳು ಎಂದೂ ಗಿಣಿಯನ್ನು ನೋಡಿರಲೇ ಇಲ್ಲ. ವರ್ತಕನು ನಾಯಿಮರಿಗೆ ಹಸಿರು ಬಣ್ಣವನ್ನು ಬಳಿದು ಅದನ್ನೇ ಗಿಣಿ ಎಂದು ಮಗಳಿಗೆ ಕೊಟ್ಟನು. ಅವಳು ಅತ್ಯಂತ ಸಂತೋಷದಿಂದ ಅದನ್ನು ಮಾತಾಡಿಸಿದಳು. ಆ ನಾಯಿಮರಿ ಬರೀ ಕುಂಯ್ ಕುಂಯ್ ರಾಗ ಹಾಡಿತೇ ವಿನಾ ಮಾತಾಡಲಿಲ್ಲ. "ಮುಂದೆ ಅದು ಮಾತು ಕಲಿಯುತ್ತದೆ. ನೀನೂ ಹುಟ್ಟಿದಾಗ ಮಾತಾಡುತ್ತಿರಲಿಲ್ಲ" ಎಂದು ವರ್ತಕ ಸಮಾಧಾನ ಮಾಡಿದನು. 


ವರ್ತಕನ ಮಗಳು ದಿನನಿತ್ಯವೂ ನಾಯಿಮರಿಗೆ ಪಾಠ ಹೇಳುತ್ತಿದ್ದಳು. ಪ್ರತಿದಿನ ಮಲಗುವ ಮುನ್ನ ದೇವರಲ್ಲಿ "ನನ್ನ ಪಪ್ಪಿ ಬೇಗ ಮಾತಾಡಲಿ ದೇವರೇ" ಎಂದು ಬೇಡುತ್ತಿದ್ದಳು. ಒಂದು ದಿನ ಶಿವ ಮತ್ತು ಪಾರ್ವತಿ ಆಕಾಶಮಾರ್ಗದಲ್ಲಿ  ಹೋಗುವಾಗ ಇವಳ ಪ್ರಾರ್ಥನೆ ಕೇಳಿ ಅವರ ಮನಸ್ಸು ಕರಗಿತು. ಕೂಡಲೇ ಸರಸ್ವತಿಗೆ ಕಾಲ್ ಮಾಡಿ ವಿಷಯ ತಿಳಿಸಿದರು. ಸರಸ್ವತಿಯು "ನಾನು ನಾಯಿಮರಿಗೆ ಮನುಷ್ಯವಾಣಿ ನೀಡಲಾರೆ. ಆದರೆ ಮಗುವಿಗೆ ನಾಯಿಯ ಭಾಷೆ ಅರ್ಥವಾಗುವ ವರ ಕೊಡುತ್ತೇನೆ" ಎಂದಳು. ಮರುದಿನ ವರ್ತಕನ ಮಗಳು ಎದ್ದಾಗ ನಾಯಿಮರಿ ಬೊಗಳಿದ್ದು  ಕೇಳಿ "ಓ, ನಿನಗೆ ಹಸಿವಾಯಿತಾ?" ಎಂದು ಅಡುಗೆಮನೆಗೆ ಹೋಗಿ ನಾಯಿಗೆ ರೊಟ್ಟಿ ತಂದು ಕೊಟ್ಟಳು. ತನ್ನ ನಾಯಿಮರಿ ಈಗ ಮಾತಾಡುತ್ತಿದೆ ಎಂದು ಅಪ್ಪ ಅಮ್ಮನಿಗೆ ಸಂಭ್ರಮದಿಂದ ಹೇಳಿದಳು. ಹಾಗೆ ಹೇಳುವಾಗ "ಬೋಲೇ ರೇ ಪಪ್ಪಿ ಹರಾ" ಎಂದು ಹೇಳಿದ್ದು ಮುಂದೆ ಒಂದು ಪ್ರಸಿದ್ಧ ಗೀತೆಗೆ ಸ್ಫೂರ್ತಿ ಆಯಿತು. ಮುಂದೆ ಆ ನಾಯಿಮರಿ ಏನೇನು ಮಾತಾಡಿತು ಎಂಬ ವಿಷಯವನ್ನೆಲ್ಲ ನಿಮಗೆ ಹೇಳಿದರೆ "ದ ಗ್ರೀನ್ ಪಪ್ಪಿ" ಸಿನಿಮಾ ನಿರ್ಮಾಪಕರು ನನ್ನನ್ನು ಸುಮ್ಮನೇ ಬಿಡುವರೇ? ಹಾಗಾಗಿ ಇದನ್ನು ಇಲ್ಲಿಗೇ ಮೊಟಕು ಮಾಡಿ ಮುಗಿಸುವೆ.


ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)