ಬೆಣ್ಣೆಮುದ್ದೆ - ಭಾಗ ೪

 ಬೆಣ್ಣೆಮುದ್ದೆ - ಭಾಗ ೪

ಫ್ರೆಂಚ್ ಕತೆ - ಗಿ ಡಿ ಮುಪಸಾ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 

(ಮೂರನೇ ಭಾಗ ಇಲ್ಲಿ ಓದಿ)

ಬಾಜಾರಿ ಹೆಂಗಸಿನ ತಿಂಡಿ-ತೀರ್ಥಗಳನ್ನು  ತಿಂದು ಅವಳ ಜೊತೆ ಮಾತಾಡದಿದ್ದರೆ ಹೇಗೆ? ಮೊದಲು ಉಪಚಾರಕ್ಕೆಂದು ಅವರು ಒಂದೆರಡು ಮಾತಾಡಿದರು. ಅವಳು ಸುಸಂಸ್ಕೃತಳಂತೆ ಉತ್ತರಿಸಿದಾಗ ಇನ್ನಷ್ಟು ಮುಕ್ತವಾಗಿ ಹರಟಿದರು.ಶ್ರೀಮತಿ  ಡಿ ಬ್ರೆವಿಲ್ಲ ಮತ್ತು ಶ್ರೀಮತಿ ಕಾರಿ-ಲೆಮಡಾನ್ ಇಬ್ಬರೂ ವ್ಯವಹಾರದಲ್ಲಿ ನಿಪುಣೆಯರು; ಉತ್ತಮ ಪಾಲನೆಯ ಹಿನ್ನೆಲೆಯುಳ್ಳ ಮಹಿಳೆಯರು.  ಅವರು ಯಾರ ಜೊತೆ ಬೇಕಾದರೂ ತಮ್ಮ ಮರ್ಯಾದೆಗೆ ಧಕ್ಕೆ ಬರದಂತೆ ಸುಲಲಿತವಾಗಿ ಹರಟಬಲ್ಲರು. ಅವರು ನಾಜೂಕಾಗಿ ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ ಮಾತಾಡಿದರು. ಲುಸೆವೂ ಹೆಂಡತಿ ಸಾಮಾನ್ಯವರ್ಗಕ್ಕೆ ಸೇರಿದವಳು - ಅವಳ ಮಾತು ಕಡಿಮೆ, ತುತ್ತು ದೊಡ್ಡದು.

ಸಹಜವಾಗಿ ಹರಟೆ ಯುದ್ಧವನ್ನು ಕುರಿತದ್ದೇ ಆಗಿತ್ತು. ಪ್ರಷ್ಯನ್ ಸೈನ್ಯದ ಭೀಭತ್ಸ ಕೃತ್ಯಗಳನ್ನು ಎಲ್ಲರೂ ವರ್ಣಿಸಿದರು. ಫ್ರೆಂಚ್ ಸೇನೆಯ ಸಾಹಸಗಳನ್ನು ಹೊಗಳಿದರು. ತಾವೆಲ್ಲರೂ ಪಟ್ಟಣ ಬಿಟ್ಟು ಓಡಿ ಹೊರಟವರಾದರೂ  ಹಿಂದೆ ಉಳಿದುಕೊಂದವರ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತನ್ನಾಡಿದರು. ಅನಂತರ ತಮ್ಮ ಅನುಭವಗಳನ್ನು ಕತೆಕಟ್ಟಿ ಹೇಳತೊಡಗಿದರು. ಬೆಣ್ಣೆಮುದ್ದೆ ತನ್ನಂಥ ಹುಡುಗಿಯರು ಇಂಥ ಸಂದರ್ಭದಲ್ಲಿ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಉಪಯೋಗಿಸಬಹುದಾದಂಥ ಮೊನಚಾದ ಭಾಷೆಯನ್ನು ಬಳಸಿ ತನ್ನ ಅನುಭವ ಹೇಳಿಕೊಂಡಳು:

"ಮೊದಲು ನಾನೂ ಹೇಗೋ ಇಲ್ಲೇ ಉಳಿದುಕೊಳ್ಳಬಹುದು ಅಂತ ಅಂದುಕೊಂಡಿದ್ದೆ - ಮನೆಯಲ್ಲಿ ಬೇಕಾದಷ್ಟು ದವಸ-ಧಾನ್ಯ ತುಂಬಿತ್ತು. ಒಂದು ನಾಲಕ್ಕು ಜನ ಸೈನಿಕರಿಗೆ ಊಟಕ್ಕೆ ಹಾಕಿದರೂ ಪರವಾಗಿಲ್ಲ, ಊರು-ದೇಶ ಬಿಟ್ಟು ಯಾಕೆ ಓಡಿಹೋಗಬೇಕು ಅಂದುಕೊಂಡೆ. ಆದರೆ ಅಯ್ಯಬ್ಬಾ! ಆ ಧಾಂಡಿಗರನ್ನು ನೋಡಿದರೇ ನನಗೆ ಸಾಕಾಯಿತು! ಕೋಪ, ಅವಮಾನ ಉಕ್ಕಿಬಂತು. ನನ್ನ ರಕ್ತ ಕುದಿಯಿತು. ಕೆಲವು ಸಲ ಇಡೀ ದಿನ ಅಳುತ್ತಾ ಕೂತುಬಿಡುತ್ತಿದ್ದೆ. ಅಯ್ಯೋ ನಾನು ಗಂಡಾಗಿ ಹುಟ್ಟಲಿಲ್ಲವೇ! ಚೂಪಾದ ಹೆಲ್ಮೆಟ್ ಹಾಕಿಕೊಂಡು ತಿರುಗಾಡುವ ಧಾಂಡಿಗರನ್ನು ನಾನು ಕಿಟಕಿಯಿಂದ ನೋಡುತ್ತಿದ್ದರೆ ಕೈಗೆ ಸಿಕ್ಕಿದ ಕುರ್ಚಿಯನ್ನೋ ಮೇಜನ್ನೋ ಅವರ ಮೇಲೆ ಎತ್ತಿ ಹಾಕಿಬಿಡಲೇ ಅನ್ನಿಸುತ್ತಿತ್ತು! ನನ್ನ ಮನೆಗೆಲಸದವಳು ನನ್ನನ್ನು ಬಲವಂತವಾಗಿ ಕೈ ಹಿಡಿದು ಹಿಂದಕ್ಕೆ ಜಗ್ಗುತ್ತಿದ್ದಳು. ಒಂದು ದಿನ ಒಬ್ಬ ನನ್ನ ಮನೆಗೂ ಬಂದ. ಅವನ ಕುತ್ತಿಗೆ ಹಿಸುಕಿ ಬಿಡೋಣ ಅಂತ ನಾನು ಅವನ ಕಡೆ ನುಗ್ಗಿದೆ,  ಹಾಳಾದವನನ್ನು ಸಾಯಿಸಿ ಬಿಡಬೇಕಾಗಿತ್ತು! ಆದರೆ ಅವನ ಜೊತೆ ಇದ್ದವರು ನನ್ನ ಕೂದಲು ಹಿಡಿದು ದರದರ ಹಿಂದಕ್ಕೆ ಎಳೆದುಹಾಕಿದರು. ಇದಾದ ಮೇಲೆ ನನ್ನ ಧೈರ್ಯ ಉಡುಗಿಹೋಯಿತು. ಸಮಯ ಕಾದು ಹೊರಟುಬಿಟ್ಟೆ!"

ಅವರು  "ಒಳ್ಳೆ ಕೆಲಸ ಮಾಡಿದಿ" ಎಂದು ಹೊಗಳಿದರು. ಅವಳ ಬಗ್ಗೆ ಅವರ ಗೌರವ ಹೆಚ್ಚಿತು. ಏಕೆಂದರೆ ಅವರು ಯಾರೂ ಅವಳಂತೆ ಬಿಸಿರಕ್ತದ ಸಾಹಸಕ್ಕೆ ಇಳಿದವರಲ್ಲ. ಕಾನ್ವುಡೇ ಅವಳ ಮಾತುಗಳನ್ನು ಕೇಳುತ್ತಾ ಸಹಮತಿಯಿಂದ ತಲೆದೂಗಿದ - ಚರ್ಚಿನ ಪಾದ್ರಿ ಭಕ್ತನೊಬ್ಬನು ದೇವರ ಗುಣಗಾನ ಮಾಡಿದಾಗ ತಲೆದೂಗುವಂತೆ.  ಉದ್ದದ ಬಿಳಿ ಉಡುಪು ತೊಟ್ಟ ಪಾದ್ರಿಜನರಿಗೆ ಧರ್ಮ ಎಂಬುದನ್ನು ಕುರಿತು ಯಾವ ರೀತಿ ಏಕಸ್ವಾಮ್ಯವಿರುತ್ತದೋ ದೇಶಭಕ್ತಿ ಎಂಬುದು ಪ್ರಜಾಸತ್ತೆಯ ಅನುಯಾಯಿಗಳಿಗೆ ಮಾತ್ರ ಸೇರಿದ ಹಕ್ಕು. ತನ್ನ ಸರದಿ ಬಂದಾಗ ಕಾನ್ವುಡೇ ಒಂದು ಭಾಷಣವನ್ನೇ ಬಿಗಿದ. ದಾರಿಯ ಬದಿಯಲ್ಲಿ ಅಂಟಿಸಿದ ಘೋಷಣೆಗಳಲ್ಲಿ ಕಾಣಿಸುವ  ವಾಕ್ಯಗಳಂತೆ ಅವನ ಭಾಷಣವಿತ್ತು. ಮಾತು ಮುಗಿಸುವಾಗ "ರೌಡಿ  ಬಾದ್ಯೆಂಗೇ"ಗೆ  (ನೆಪೋಲಿಯನ್ನನ ಅಡ್ಡಹೆಸರು) ಅವನು ಸಾಕಷ್ಟು ಬೈದ.

ಇದು ಬೆಣ್ಣೆಮುದ್ದೆಯನ್ನು ಕೆರಳಿಸಿತು. ಅವಳು ನೆಪೋಲಿಯನ್ ಅನುಯಾಯಿ. ಅವಳ ಮುಖ ಚೆರ್ರಿಯಂತೆ ಕೆಂಪಾಯಿತು. ಕೋಪದಲ್ಲಿ ತೊದಲುತ್ತಾ "ನೆಪೋಲಿಯನ್ ಜಾಗದಲ್ಲಿ ನೀವು ಇದ್ದರೆ ಅದೇನು ಮಾಡಿಬಿಡುತ್ತಿದ್ದಿರೋ ನನಗೂ ನೋಡಬೇಕಾಗಿದೆ! ನೀವು ಅದೇನು ಕಟ್ಟೆ ಕಡಿದುಬಿಡುತ್ತಿದ್ದಿರೋ! ಅವನಿಗೆ ಮೋಸ ಮಾಡಿದವರೇ ನೀವು! ನಿಮ್ಮಂಥ  ಲುಚ್ಛಾಗಳು ಫ್ರಾನ್ಸ್ ದೇಶ ಆಳುತ್ತಿದ್ದರೆ ನಮಗೆ ದೇಶ ಬಿಟ್ಟು ಓಡಿಬರುವ ಪ್ರಮೇಯವೇ ಇರುತ್ತಿರಲಿಲ್ಲ!" ಎಂದು ಕಟುವಾಗಿ ನುಡಿದಳು.


ಕಾನ್ವುಡೇ ಅಪ್ರತಿಭನಾಗದೇ ತನ್ನ ದೊಡ್ಡಸ್ತಿಕೆಯ ಮುಗುಳ್ನಗು ತೊಟ್ಟಿದ್ದರೂ ಉಳಿದವರಿಗೆ ಮಾತು ಯಾಕೋ ಅಡ್ಡದಾರಿ ಹಿಡಿಯಿತು ಎನ್ನಿಸಿತು. ಕೌಂಟ್ ಸ್ವಲ್ಪ ಪ್ರಯಾಸ ಪಟ್ಟು ಉತ್ತೇಜಿತಳಾದ ಹುಡುಗಿಯನ್ನು ಸಮಾಧಾನ ಮಾಡಿದ. "ಅವರವರ ಅನ್ನಿಸಿಕೆ ಅವರವರಿಗೆ - ಇನ್ನೊಬ್ಬರ ಭಾವನೆಗೆ ನಾವು ಬೆಲೆ ಕೊಡಬೇಕು" ಎಂದು ಅವನು ಸ್ವಲ್ಪ ಗಡುಸಾಗೇ ಹೇಳಬೇಕಾಯಿತು. ಆದರೆ ಕೌಂಟೆಸ್ ಮತ್ತು ಶ್ರೀಮತಿ ಕಾರಿ-ಲೆಮಡಾನ್ ಇಬ್ಬರಿಗೂ ವೇಶ್ಯೆಯ ಮಾತುಗಳು ಮೆಚ್ಚುಗೆಯಾದವು. ಅವರಿಗೂ ಪ್ರಜಾಸತ್ತೆಯ ರಿಪಬ್ಲಿಕ್ ಸರಕಾರದ ಬೆಂಬಲಿಗರನ್ನು ಕುರಿತು ಅಷ್ಟೇ ತಿರಸ್ಕಾರವಿತ್ತು. ವೈಭವೋಪೇತ ಸರ್ವಾಧಿಕಾರಿ ಆಡಳಿತದ ಬಗ್ಗೆ ಎಲ್ಲಾ ಹೆಂಗಸರಿಗೂ ಇರುವ ಒಲವಿನ ಭಾವನೆ ಅವರಲ್ಲೂ ಇತ್ತು. ತಮ್ಮ ಹಾಗೇ ಆಲೋಚಿಸುವ ಈ ಧೀಮಂತ ಹುಡುಗಿಯ ಬಗ್ಗೆ ಅವರಿಗೆ ಅಭಿಮಾನ ಹುಟ್ಟಿತು.

ಈಗ ಆಹಾರದ ಬುಟ್ಟಿ ಬರಿದಾಗಿತ್ತು. ಹತ್ತು ಗಂಟೆ ಹೊಡೆಯುವ ಹೊತ್ತಿಗೆ ಏನೂ ಉಳಿದಿರಲಿಲ್ಲ. ತಿಂಡಿಗಳು ಮುಗಿದೇಹೋದವೇ   ಎಂದು ಎಲ್ಲರೂ ಪೇಚಾಡಿಕೊಂಡರು.  ಸಂಭಾಷಣೆ ಮುಂದುವರೆದರೂ ಅವರು ಈಗ ಬಾಯಾಡಿಸುವುದು ನಿಂತದ್ದರಿಂದ ಮಾತುಗಳು ಹೆಚ್ಚು ಔಪಚಾರಿಕವಾಗತೊಡಗಿದವು.

ರಾತ್ರಿಯಾಯಿತು. ಮಸುಕಾಗಿದ್ದ ಕತ್ತಲು ಕ್ರಮೇಣ ಗಾಢವಾಗುತ್ತಾ ಹೋಯಿತು. ತಿಂದದ್ದು ಅರಗುವಾಗ ಚಳಿಹವೆ ಇನ್ನಷ್ಟು ಬಾಧಿಸಿತು. ದಪ್ಪ ಶರೀರವುಳ್ಳವಳಾಗಿಯೂ ಬೆಣ್ಣೆಮುದ್ದೆಗೆ ನಡುಕ ಬಂತು. ಮದಾಂ ಡಿ ಬ್ರೆವಿಲ್ಲ ತನ್ನ ಕಾಲಡಿಯ ಅಗ್ಗಿಷ್ಟಿಕೆಯನ್ನು ಅವಳ ಕಡೆ ಸರಿಸಿದಳು. ಈಗಾಗಲೇ ಅದೆಷ್ಟು ಸಲ ಆ ಅಗ್ಗಿಷ್ಟಿಕೆಯನ್ನು ಹೊತ್ತಿಸಿದ್ದಾಗಿತ್ತೋ!  ತನ್ನ ಕಾಲುಗಳು ಮರಗಟ್ಟಿ ಹೋಗುತ್ತಿದ್ದುದರಿಂದ ಮರುಮಾತಿಲ್ಲದೆ ಬೆಣ್ಣೆಮುದ್ದೆ ಈ ಸಹಾಯವನ್ನು ಸ್ವೀಕರಿಸಿದಳು. ಶ್ರೀಮತಿ ಕಾರಿ-ಲೆಮಡಾನ್ ಮತ್ತು ಶ್ರೀಮತಿ ಲುಸೆವೂ ತಮ್ಮ ಅಗ್ಗಿಷ್ಟಿಕೆಗಳನ್ನು ಸಾಧ್ವಿ ಹೆಂಗಸರ ಜೊತೆ ಹಂಚಿಕೊಂಡರು.

ಗಾಡಿಯ ಚಾಲಕ ಚಿಮಣಿ ದೀಪಗಳನ್ನು ಹೊತ್ತಿಸಿದ. ಅವುಗಳು ಉಜ್ಜ್ವಲವಾಗಿ ಹೊಳೆಯುತ್ತಾ ಗಾಡಿಯ ಸುತ್ತಲೂ ಕವಿದುಕೊಂಡಿದ್ದ ಮಂಜಿನ ಪರದೆಯನ್ನು ಬೆಳಗಿದವು. ಕುದುರೆಗಳ ಬೆನ್ನಮೇಲಿನ ಬೆವರು ಕಾಣಿಸಿತು. ದೀಪಗಳ ಬೆಳಕಿನಲ್ಲಿ ಗಾಡಿಯ ಎರಡೂ ಬದಿ ಹಿಮ ಹಿಂಬದಿಗೆ ಜಾರಿ ಹೋಗುತ್ತಿದ್ದಂತೆ ಕಂಡಿತು.

ಗಾಡಿಯ ಒಳಗೆ ಸ್ಪಷ್ಟವಾಗಿ ಏನೂ ಕಾಣುತ್ತಿರಲಿಲ್ಲ. ಒಮ್ಮೆಲೇ ಬೆಣ್ಣೆಮುದ್ದೆ ಮತ್ತು ಕಾನ್ವುಡೇ ಮಧ್ಯೆ ಒಂದು ಚಲನ ಕಂಡಂತಾಯಿತು. ಲುಸೆವೂ ಕತ್ತಲಿನಲ್ಲಿ ಕಣ್ಣು ಅಗಲಿಸಿಕೊಂಡು ನೋಡಿದ. ಯಾರೋ ತನಗೆ ನಿಶ್ಶಬ್ದವಾಗಿ ಬಲವಾದ ಏಟು ಕೊಟ್ಟಂತೆ ಗಡ್ಡಧಾರಿ ಕಾನ್ವುಡೇ ಹಿಂದಕ್ಕೆ ವಾಲಿದಂತೆ ಅವನಿಗೆ ತೋರಿತು. ಅನಂತರ ಗಾಡಿಯ ಎದುರುದಿಕ್ಕಿನಿಂದ ಮಿಣುಕುದೀಪಗಳು ಗೋಚರಿಸಿದವು.

ಟೋಟಸ್ ಪಟ್ಟಣ!  ಅವರು ಹನ್ನೊಂದು ಗಂಟೆಗಳ ಪ್ರಯಾಣ ಮುಗಿಸಿದ್ದರು. ಇದಲ್ಲದೆ ಕುದುರೆಗಳಿಗೆ ಮೇವು ಕೊಟ್ಟು ಅವುಗಳ ವಿಶ್ರಾಂತಿಗೆಂದು ವ್ಯಯವಾದ ಎರಡು ಗಂಟೆಗಳೂ ಸೇರಿದರೆ ಹದಿಮೂರು. ಅವರ ಗಾಡಿ ಪಟ್ಟಣ ಸೇರಿ ಒಂದು ಹೋಟಲ್ ಎದುರು ನಿಂತಿತು.


ಗಾಡಿಯ ಬಾಗಿಲು ತೆರೆಯಿತು! ಪರಿಚಿತವಾದ ಧ್ವನಿಯೊಂದು ಗಾಡಿಯಲ್ಲಿದ್ದವರನ್ನು ಬೆಚ್ಚಿ ಬೀಳುವಂತೆ ಮಾಡಿತು. ಕತ್ತಿಯ ಹೊರಗವಚ ನೆಲಕ್ಕೆ ಕುಟ್ಟಿದ ಸದ್ದು. ಕತ್ತಲಿನಲ್ಲಿ ಜರ್ಮನ್ ಧ್ವನಿಯೊಂದು ಮಾತಾಡಿತು.

ಯಾರೂ ಕೆಳಗಿಳಿಯುವ ಸಾಹಸ ಮಾಡಲಿಲ್ಲ. ಹೊರಗೆ ಇಣುಕಿದರೂ ಯಾರಾದರೂ ತಮ್ಮನ್ನು ಕೊಲೆ ಮಾಡುತ್ತಾರೆಂಬ ಭಯ. ಕೊಂಚ ಹೊತ್ತಿನ ಬಳಿಕ ಗಾಡಿಯ ಚಾಲಕ ಕೈಯಲ್ಲಿ ಒಂದು ಚಿಮಣಿ ದೀಪವನ್ನು ಇಟ್ಟುಕೊಂಡು ಪ್ರತ್ಯಕ್ಷನಾದ. ಅವನ ದೀಪದ ಬೆಳಕಿನಲ್ಲಿ ಒಳಗೆ ಎರಡು ಸಾಲುಗಳಲ್ಲಿ ಎದುರು ಬದುರಾಗಿ ಕುಳಿತವರ ಭಯಭೀತ ಚೆಹರೆಗಳು ಕಂಡವು. ಅವರೆಲ್ಲರ ಬಾಯಿ ಆ ಎಂದು ತೆರೆದಿತ್ತು. ತೆರೆದ ಕಣ್ಣುಗಳಲ್ಲಿ ಭಯ ಮತ್ತು ಆಶ್ಚರ್ಯಗಳು  ಕುಣಿಯುತ್ತಿದ್ದವು.

ಗಾಡಿಯ ಚಾಲಕನ ಬಳಿಯಲ್ಲಿ ಅವರಿಗೆ ಒಬ್ಬ ಜರ್ಮನ್ ಅಧಿಕಾರಿ ಕಾಣಿಸಿದ.  ಕೋಲಿನಂತೆ ತೆಳ್ಳಗೆ ಎತ್ತರವಾಗಿದ್ದ ಹೊಂಬಣ್ಣದ ತಲೆಗೂದಲಿನ  ಯುವಕ. ತಲೆಯ ಮೇಲೆ ಅವನು ತೊಟ್ಟ ಟೋಪಿಯ ಕಾರಣದಿಂದ ಅವನು ಇಂಗ್ಲೆಂಡ್ ದೇಶದ ಹೋಟೆಲ್ ಪರಿಚಾರಕನಂತೆ ತೋರುತ್ತಿದ್ದ. ಅವನ ಉದ್ದ ಮೀಸೆ ಕ್ರಮೇಣ ತೆಳ್ಳಗಾಗುತ್ತಾ ಬಾಯ ತುದಿಯ ಬಳಿ ಚೂಪಾಗಿ ಒಂದು ದಾರದಂತೆ ಕೆನ್ನೆಯ ಮೇಲೆ ಕೆಳಗಿಳಿದು ಬಿದ್ದಿತ್ತು. ಜರ್ಮನ್ ಭಾಷೆಯ ಧಾಟಿಯಲ್ಲಿ ಫ್ರೆಂಚ್ ಮಾತಾಡುತ್ತಾ ಅವನು ಗಾಡಿಯಲ್ಲಿದ್ದವರನ್ನು ಉದ್ದೇಶಿಸಿ "ಮಾನ್ಯರೇ ಮತ್ತು ಮಾನಿನಿಯರೇ, ಕೆಳಗೆ ಇಳಿಯುತ್ತೀರಾ?" ಎಂದ.

ಯಾವಾಗಲೂ ತ್ಯಾಗಕ್ಕೆ ಸಿದ್ಧರಾಗೇ ಇರುತ್ತಿದ್ದ ಸಾಧ್ವಿಯರು ಇನ್ನೊಮ್ಮೆ ಹೇಳಿಸಿಕೊಳ್ಳದೆ ಪರಿಪಾಲಿಸಿದರು. ಕೌಂಟ್ ಮತ್ತು ಅವನ ಹೆಂಡತಿ, ನಂತರ ಕಾರಿ-ಲೆಮಡಾನ್ ಮತ್ತು ಅವನ ಹೆಂಡತಿ, ಕೊನೆಗೆ ತನ್ನ ಭಾರೀ ಶರೀರದ ಹೆಂಡತಿಯನ್ನು ಮುಂದಿಟ್ಟುಕೊಂಡು ಲುಸೇವೂ ಕೆಳಕ್ಕಿಳಿದರು. ಕೊನೆಗೆ ಇಳಿದ ಮನುಷ್ಯ ನೆಲಕ್ಕೆ ಕಾಲು ತಾಕುತ್ತಲೇ ಅಧಿಕಾರಿಗೆ ಶುಭ ಸಂಜೆ ಕೋರಿದ - ಅವನ ಹಾರೈಕೆಯಲ್ಲಿ ವಿನಮ್ರತೆಗಿಂತ ಹೆಚ್ಚು ವ್ಯವಹಾರಶೀಲತೆ ಕಂಡಿತು. ಜರ್ಮನ್ ಅಧಿಕಾರಿ ಅವನ ಕಡೆ ದರ್ಪದಿಂದ ನೋಡಿದನಷ್ಟೇ ಹೊರತು ಮಾತಾಡಲಿಲ್ಲ.

ಬೆಣ್ಣೆಮುದ್ದೆ ಮತ್ತು ಕಾನ್ವುಡೇ ಬಾಗಿಲಿನ ಹತ್ತಿರ ಕುಳಿತಿದ್ದರೂ ಎಲ್ಲರ ನಂತರ ಕೆಳಕ್ಕಿಳಿದರು. ಶತ್ರುವಿನ ಎದುರು ಅವರ ಮುಖಗಳು ಗಾಂಭೀರ್ಯದಿಂದ ಸೆಟೆದುಕೊಂಡಿದ್ದವು.  ಸ್ಥೂಲಕಾಯದ  ಹುಡುಗಿ ಉತ್ತೇಜಿತಳಾಗದಂತೆ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳಲು ಪ್ರಯಾಸ ಪಟ್ಟಳು. ಪ್ರಜಾಸತ್ತೆಯ ರಕ್ಷಕ ವಿಷಾದ ಭಾವದಿಂದ ತನ್ನ ಕೈಗಳನ್ನು  ಬೀಸಿದ. ಅವನ ಉದ್ದನೆಯ ಗಡ್ಡ ಮೆಲ್ಲಗೆ ಅಲ್ಲಾಡಿದಂತೆ, ಕ್ರಮೇಣ ಇನ್ನಷ್ಟು ಕೆಂಪಾದಂತೆ ಕಂಡಿತು. ತಮ್ಮ ದೇಶದ ಪ್ರತಿನಿಧಿಗಳಾಗಿ ಇಂಥ ಸಂದರ್ಭಗಳಲ್ಲಿ ತಮ್ಮ ಮರ್ಯಾದೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಅವರೆಲ್ಲರೂ ತಿಳಿದಿದ್ದರು.  ತನ್ನ ಜೊತೆಗಿದ್ದವರು ತೀರಾ ವಿನಮ್ರರಾಗಿ ನಡೆದುಕೊಳ್ಳುವುದನ್ನು ಕಂಡು ಬೆಣ್ಣೆಮುದ್ದೆಗೆ ಹೇಸಿಗೆಯಾಯಿತು. ತಾನಾದರೂ ಒಂದಿಷ್ಟು ಘನತೆ ತೋರಿಸಬೇಕು, ಇವರಿಗೆ ಮಾದರಿಯಾಗಬೇಕು ಎಂದು ಅವಳಿಗೆ ಅನ್ನಿಸಿ ಅವಳು ಬಿಗುಮಾನದ ಮುಖವಾಡ ಹಾಕಿಕೊಂಡಳು.

(ಮುಂದಿನ ಭಾಗ ಇಲ್ಲಿ ಓದಿ)
(c) C.P. Ravikumar, Kannada translation of 'Ball-of-Fat' (Boule de Suif) by Guy De Maupassant.
I acknowledge the English translation which I have used from here. I also acknowledge the images that I have used from different sources - these are all identified as reusable by Google.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)