ಬೆಣ್ಣೆ ಮುದ್ದೆ - ಭಾಗ ೧
ಬೆಣ್ಣೆಮುದ್ದೆ - ಭಾಗ ೧
ಮೂಲ ಫ್ರೆಂಚ್ ಕತೆ - ಗಿ ಡಿ ಮುಪಸಾ
ಕನ್ನಡ ಅನುವಾದ - ಸಿ ಪಿ ರವಿಕುಮಾರ್
ಅನೇಕ ದಿನಗಳಿಂದ ಸೈನ್ಯದ ಕೊನೆಯ ತುಕಡಿಯೊಂದು ಊರಿನ ಮೂಲಕ ಹಾದುಹೋಗುತ್ತಿತ್ತು. ಅವರನ್ನು ಸೈನ್ಯದ ತುಕಡಿ ಎನ್ನುವದಕ್ಕಿಂತ ಬಿಡಿ ಸೈನಿಕರ ಪುಟ್ಟ ಗುಂಪುಗಳು ಎನ್ನುವುದು ಮೇಲು. ಈ ಸೈನಿಕರೆಲ್ಲರಿಗೂ ಉದ್ದದ ಅಸಹ್ಯವೆನ್ನಿಸುತ್ತಿದ್ದ ಗಡ್ಡ ಬೆಳೆದಿತ್ತು. ಅವರ ಪೋಷಾಕುಗಳು ಚಿಂದಿಯಾಗಿದ್ದವು. ಅವರು ನಡೆದುಕೊಂಡು ಹೋಗುವಾಗ ಸೈನಿಕರ ಶಿಸ್ತಾಗಲೀ ಅವರ ಕೈಯಲ್ಲಿ ಧ್ವಜವಾಗಲೀ ಕಾಣುತ್ತಿರಲಿಲ್ಲ. ಅವರೆಲ್ಲರೂ ಕಾದಾಟದಲ್ಲಿ ನಿತ್ರಾಣರಾದಂತೆ ತೋರುತ್ತಿತ್ತು. ಅಭ್ಯಾಸಬಲದಿಂದ ಅವರು ಕಾಲನ್ನು ಮೇಲಕ್ಕೆತ್ತಿ ಹಾಕುತ್ತಿದ್ದರೂ ಅವರ ನಡೆಯಲ್ಲಿ ಯಾವ ನಿರ್ಧಾರವಾಗಲೀ ಅಥವಾ ಹುರುಪಾಗಲೀ ಇರಲಿಲ್ಲ. ನಡೆಯುವುದನ್ನು ನಿಲ್ಲಿಸಿದಾಗ ತಾವು ಹಿಡಿದ ಬಂದೂಕಿನ ಭಾರವನ್ನು ಹೊರಲಾರದೆ ಅವರು ಸುಸ್ತಾಗಿ ನೆಲಕ್ಕೆ ಬೀಳುತ್ತಿದ್ದರು. ಸಣ್ಣ ಪ್ರಚೋದನೆಗೂ ವಿಚಲಿತರಾಗಿ ಕಾದಾಡುವ ಅಥವಾ ಹೆದರಿಕೊಂಡು ಓಡಿಹೋಗುವ ಮನಃಸ್ಥಿತಿ ಆ ಸೈನಿಕರದ್ದಾಗಿತ್ತು.
ಇವರ ನಡುವೆ ಕೆಲವು ಕೆಂಪು ಡ್ರೆಸ್ ತೊಟ್ಟವರೂ ಕಣ್ಣಿಗೆ ಬೀಳುವರು. ಅವರು ಯುದ್ಧದಲ್ಲಿ ಚೆದುರಿಹೋದ ಸೈನ್ಯದ ಅವಶೇಷ. ದೊಡ್ಡ ತುಪಾಕಿಗಳನ್ನು ಹೊತ್ತು ಹೋಗುವ ಸೈನಿಕರಲ್ಲಿ ಅಳಿದುಳಿದವರು ಸಾಮಾನ್ಯ ಪದಾತಿ ಸೈನಿಕರೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಸಾಮಾನ್ಯವಾಗಿ ಕುದುರೆ ಮೇಲೆ ಸಾಗಬೇಕಾದ ಸೈನಿಕರಲ್ಲಿ ಕೆಲವರು ಈ ಗುಂಪಿಗೆ ಸೇರಿಕೊಂಡಿದ್ದರು- ಅವರ ಹೊಳೆಯುವ ಶಿರಸ್ತ್ರಾಣಗಳಿಂದ ಅವರನ್ನು ಗುರುತಿಸಬಹುದಾಗಿತ್ತು; ತಮ್ಮ ಕುದುರೆಗಳನ್ನು ಕಳೆದುಕೊಂಡು ಇಂದು ಬಹಳ ಪ್ರಯಾಸದಿಂದ ಇತರರ ಜೊತೆ ನಡೆಯುತ್ತಿದ್ದರು. "ರಣಭಯಂಕರರು," "ಮಸಣದ ಮಾರ್ತಾಂಡರು," "ಸಾವಿನ ದೂತರು" ಇತ್ಯಾದಿ ಬಿರುದುಗಳನ್ನು ಹೊತ್ತ ವಿಶೇಷ ಸೈನಿಕ ಪಂಗಡಗಳ ಬದುಕುಳಿದ ಸೈನಿಕರು ಕೂಡಾ ಇಂದು ಊರಿನ ಪುಂಡರ ರೀತಿಯಲ್ಲಿ ನಡೆದುಹೋಗುತ್ತಿದ್ದರು.
ಯುದ್ಧದಲ್ಲಿ ಈ ಸೈನಿಕರಿಗೆ ಮುಂದಾಳುಗಳಾಗಿದ್ದವರು ಹಿಂದೆ ಬಟ್ಟೆಯೋ ದಿನಸಿಯೋ ಸಾಬೂನೋ ವ್ಯಾಪಾರ ಮಾಡುತ್ತಿದ್ದ ಅಂಗಡಿಕಾರರು. ಪರಿಸ್ಥಿತಿ ಅವರನ್ನು ಯುದ್ಧಕ್ಕೆ ಕರೆತಂದಿತ್ತು. ಅವರು ಕೈಯಲ್ಲಿ ಹಿಡಿದಿದ್ದ ಗುರಾಣಿಗಳ ಆಧಾರದ ಮೇಲೋ ಅಥವಾ ಅವರ ಮೀಸೆಗಳು ಎಷ್ಟು ಉದ್ದವಾಗಿದ್ದವು ಎನ್ನುವುದರ ಮೇಲೋ ಅವರಿಗೆ ನಾಯಕರ ಪಟ್ಟ ಕಟ್ಟಲಾಗಿತ್ತು. ಅವರು ಮೆಲುದನಿಯಲ್ಲಿ ಪರಸ್ಪರ ಯುದ್ಧದ ಯೋಜನೆ ಬಗ್ಗೆ ಮಾತಾಡಿಕೊಳ್ಳುತ್ತಾ ಸಾಗುತ್ತಿದ್ದರು. ದುಃಖತಪ್ತ ಫ್ರಾನ್ಸ್ ದೇಶವನ್ನು ತಮ್ಮದೇ ಹೆಗಲುಗಳ ಮೇಲೆ ಹೊತ್ತುಕೊಂಡಿದ್ದಾರೇನೋ ಎಂಬಂತೆ ನಾಟಕವಾಡುವ ಅವರಿಗೆ ತಮ್ಮ ಸೈನಿಕರೇ ತಮಗೆ ಏನಾದರೂ ಹಾನಿ ಮಾಡಬಹುದೇನೋ ಎಂಬ ಭಯವೂ ಕಾಡುತ್ತಿತ್ತು. ಯುದ್ಧದಲ್ಲಿ ಸೈನಿಕರಾಗಿ ಹೋರಾಡಲು ಜೈಲುಗಳಿಂದ ಕೈದಿಗಳನ್ನೂ ಬಿಡುಗಡೆ ಮಾಡಿ ತರಲಾಗಿತ್ತು; ಮೊದಮೊದಲು ಇವರು ತಮ್ಮ ಶೌರ್ಯದ ಪ್ರದರ್ಶನ ಮಾಡಿದರೂ ಕ್ರಮೇಣ ತಮ್ಮ ನಿಜವಾದ ನೀಚತನವನ್ನು ತೋರಿಸಿಯೇ ತೀರುವರು.
ಪ್ರಷ್ಯನ್ ಸೈನಿಕರು ರೂವೋನ್ ಪಟ್ಟಣವನ್ನು ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು.
ಕಳೆದ ಎರಡು ತಿಂಗಳಿನಿಂದ ಕಾಡುಪ್ರದೇಶಗಳಲ್ಲಿ ಕಣ್ಣಿನಲ್ಲಿ ಕಣ್ಣಿಟ್ಟುಕೊಂಡು ಪ್ರಷ್ಯನ್ ಸೈನಿಕರು ಬಂದಾರೇನೋ ಎಂದು ಹುಡುಕುತ್ತಾ, ಪೊದೆಯಲ್ಲಿ ಒಂದು ಕಾಡುಪ್ರಾಣಿ ಅಲ್ಲಾಡಿದರೂ ಗುಂಡು ಹಾರಿಸಿ, ಎಷ್ಟೋ ಸಲ ತಮ್ಮ ಕಾವಲುಗಾರರನ್ನೇ ಕೊಂದುಹಾಕಿದ ರೂವೋನ್ ನಗರದ ನ್ಯಾಷನಲ್ ಗಾರ್ಡ್ ಸೈನಿಕರು ಈಗ ಒಲೆಯ ಮುಂದೆ ಹೋಗಿ ಕುಳಿತಿದ್ದರು. ಎಲ್ಲೆಡೆ ಫ್ರೆಂಚ್ ಜನರ ಹೃದಯದಲ್ಲಿ ಭಯ ಬಿತ್ತಿದ್ದ ಅವರ ಲಾಂಛನಗಳು, ಪೋಷಾಕುಗಳು, ಕೊಲ್ಲುವ ಭೀಭತ್ಸಕರ ಆಯುಧಗಳು ಈಗ ಮಾಯವಾಗಿದ್ದವು.
ಬಾಕಿ ಉಳಿದ ಫ್ರೆಂಚ್ ಸೈನಿಕರು ಸೆನ್ ನದಿಯನ್ನು ದಾಟಿ ಸಾಂತ್ ಸುವೇರ್ ಮತ್ತು ಬೂರ್ಗಾಷಾ ಜಿಲ್ಲೆಗಳ ಮೂಲಕ ಉದ್ಮೇರ್ ಸೇತುವೆಯನ್ನು ಬಂದು ಮುಟ್ಟಿದರು. ಇವರ ಹಿಂದೆ ತನ್ನ ಇಕ್ಕೆಲಗಳಲ್ಲಿ ಕೇವಲ ಇಬ್ಬರು ಪದಾತಿ ಸೈನಿಕರನ್ನು ಇಟ್ಟುಕೊಂಡು ಕಾಲುನಡೆಯಲ್ಲಿ ಬಂದವನು ಸೇನೆಯ ದಂಡನಾಯಕ. ಈ ಹರಕಲು ಅಬ್ಬೇಪಾರಿಗಳನ್ನು ಕಟ್ಟಿಕೊಂಡು ತಾನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಹತಾಶೆ ಅವನ ಹೆಗಲಿನ ಮೇಲಿತ್ತು. ಗೆಲ್ಲುವುದನ್ನೇ ರೂಢಿ ಮಾಡಿಕೊಂಡಿದ್ದ ಜನ ಸೋಲು ಎದುರಾದಾಗ ಚೆದುರಿಹೋಗಿದ್ದನ್ನು ಕಂಡು ಅವನು ದಿಕ್ಕೆಟ್ಟಿದ್ದ. ಅವನ ಧೈರ್ಯಶೌರ್ಯಗಳು ಮನೆಮಾತಾಗಿದ್ದರೂ ಅವನು ಹಿಗ್ಗಾಮುಗ್ಗಾ ಸೋಲಿಗೊಳಗಾಗಿದ್ದ.
ನಗರದಲ್ಲಿ ಎಲ್ಲೆಡೆಗೂ ಇನ್ನೇನು ಏನೋ ನಡೆಯಲಿದೆ ಎಂಬ ನಿರೀಕ್ಷೆಯ ಭೀಕರ ಮೌನ ಕವಿದುಕೊಂಡಿತ್ತು. ಹಣದಿಂದ ಕೊಬ್ಬಿದ್ದ ನಗರದ ಅನೇಕ ಘಟಾನುಘಟಿಗಳು ವಿಜಯ ಹೊಂದಿದ ಶತ್ರುಸೈನ್ಯದ ಆಗಮನವನ್ನು ಕಾತರದಿಂದ ಕಾಯುತ್ತಿದ್ದರು - ತಮ್ಮ ಅಡುಗೆ ಕತ್ತಿಗಳು ಮತ್ತು ಮಾಂಸ ಪೋಣಿಸಿ ಬೇಯಿಸುವ ಕಬ್ಬಿಣದ ಸಲಾಕೆಗಳನ್ನು ಆಯುಧಗಳೆಂದು ಶತ್ರು ಅಪಾರ್ಥ ಮಾಡಿಕೊಳ್ಳಬಹುದೇ ಎಂದು ಒಳಗೊಳಗೇ ನಡುಗುತ್ತಿದ್ದರು.
ಜನಜೀವನ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಅಂಗಡಿ-ಮುಗ್ಗಟ್ಟುಗಳು ಮುಚ್ಚಿದ್ದವು. ಬೀದಿಗಳು ಬಿಕೋ ಎನ್ನುತ್ತಿದ್ದವು. ಅಕಸ್ಮಾತ್ ಯಾರಾದರೂ ದಾರಿಹೋಕ ಬಂದರೂ ಈ ಸ್ಮಶಾನ ಮೌನಕ್ಕೆ ಹೆದರಿ ಬೀದಿಯ ಪಕ್ಕದ ಗೋಡೆಯ ಬಳಿಸಾರಿ ಬೇಗಬೇಗ ನಡೆದು ಹೋಗುತ್ತಿದ್ದ. ಶತ್ರುವಿಗಾಗಿ ಕಾಯುವುದಕ್ಕಿಂತ ಶತ್ರು ಬಂದೇಬಿಟ್ಟರೆ ಮೇಲು ಎಂದು ಎಲ್ಲರಿಗೂ ಅನ್ನಿಸತೊಡಗಿತು.
ಫ್ರೆಂಚ್ ಸೈನ್ಯ ನಿರ್ಗಮಿಸಿದ ಮರುದಿನ ಮಧ್ಯಾಹ್ನದ ಹೊತ್ತು. ಅದೆಲ್ಲಿಂದಲೋ ಕೆಲವು ಕುದುರೆ ಸವಾರರು ವೇಗವಾಗಿ ನಗರದ ಮೂಲಕ ಹಾದುಹೋದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಕಾರ್ಮೋಡವೊಂದು ಸಂತ ಕ್ಯಾಥರೀನ್ ಇಗರ್ಜಿಯ ಹತ್ತಿರ ಬಂದಿಳಿಯಿತು. ಇದಾದ ಸ್ವಲ್ಪ ಹೊತ್ತಿನಲ್ಲಿ ಡಾರ್ನೆಟಲ್ ಮತ್ತು ಬಾಯ್ಗಿಲಾಮೆ ಎಂಬ ಸ್ಥಳಗಳಿಗೆ ಹೋಗುವ ದಾರಿಗಳಲ್ಲೂ ಇನ್ನೆರಡು ಶತ್ರುಗಳ ತುಕಡಿಗಳು ಕಾಣಿಸಿಕೊಂಡವು. ಈ ಮೂರೂ ತುಕಡಿಗಳು ಮುಂಬರಿಯುತ್ತಾ ಏಕಕಾಲಕ್ಕೆ ಹೊಟೆಲ್ ಡಿ ವಿಲ್ ಚೌಕಕ್ಕೆ ಆಗಮಿಸಿದವು. ಹೀಗೆ ಪ್ರಾರಂಭಿಸಿ ಜರ್ಮನ್ ಸೈನ್ಯ ಎಲ್ಲಾ ಕಡೆ ಹರಡಿತು. ಸೈನಿಕರು ಶಿಸ್ತಾಗಿ ನಡೆದು ಹೋದಾಗ ರಸ್ತೆಗಳ ಮೇಲೆ ಅವರ ದಾಪುಗಾಲುಗಳ ಸದ್ದು ಮಾರ್ದನಿಸಿತು. ಜರ್ಮನ್ ಸೈನ್ಯದ ನಾಯಕ ತನ್ನ ಆಳವಾದ ಧ್ವನಿಯಲ್ಲಿ ಕೂಗಿ ಏನೋ ಆದೇಶ ನೀಡುವುದು ಕೇಳಿತು. ಮುಚ್ಚಿದ ಬಾಗಿಲುಗಳ ಹಿಂದಿನಿಂದಲೇ ಕಣ್ಣುಗಳು ಇವೆಲ್ಲವನ್ನೂ ನೋಡುತ್ತಿದ್ದವು. "ಗೆದ್ದವರ ಹಕ್ಕು" ಎಂಬ ಹಕ್ಕಿನ ಆಧಾರದ ಮೇಲೆ ನಗರದ ಹೊಸ ಅಧಿಕಾರಿಗಳು ಜನರ ಬದುಕಿನ ಮೇಲೆ, ಜನರ ಭಾಗ್ಯದ ಮೇಲೆ ಅಧಿಕಾರ ಚಲಾಯಿಸುವುದನ್ನು ಗಮನಿಸುತ್ತಿದ್ದವು. ತಮ್ಮ ಮನೆಗಳಲ್ಲಿ ಅಡಗಿದ್ದ ಜನರ ಮೈಗಳಲ್ಲಿ ವಿದ್ಯುತ್ ಸಂಚಾರವಾಯಿತು. ಒಂದು ಪ್ರವಾಹವೋ ಭೂಕಂಪವೋ ಉಂಟಾದಾಗ ಹೇಗೆ ನಮ್ಮೆಲ್ಲಾ ಶಕ್ತಿಗಳು ನಿರರ್ಥಕವಾಗುತ್ತವೋ ಹಾಗೆ ಜನರು ಕೈಚೆಲ್ಲಿದರು. ಈಗ ಯಾವ ಗೆರೆ ದಾಟಬಾರದು ಎಂಬುದಕ್ಕೆ ಯಾವ ಕಟ್ಟುಪಾಡುಗಳೂ ಇರಲಿಲ್ಲ. ಸುರಕ್ಷತೆ ಎಂಬುದಿರಲಿಲ್ಲ. ಮನುಷ್ಯನನ್ನು ಅರ್ಥಹೀನ ಬರ್ಬರತೆಯಿಂದ ರಕ್ಷಿಸಲು ಏನೂ ಇರಲಿಲ್ಲ. ಭೂಮಿ ಕಂಪಿಸಿದಾಗ ಮನೆಗಳು ಬಿದ್ದುಹೋಗುತ್ತವಲ್ಲ, ನದಿಯು ತನ್ನ ಪಾತ್ರವನ್ನು ಮೀರಿ ಉಬ್ಬಿ ಹರಿದಾಗ ಮುಳುಗಿದವರ ಹೆಣಗಳನ್ನೂ ಉರುಳಿದ ಮನೆಗಳನ್ನೂ ಕೊಚ್ಚಿಕೊಂಡು ಹೋಗುತ್ತದಲ್ಲ, ಆಗ ಜಗತ್ತಿನಲ್ಲಿ ನ್ಯಾಯನೀತಿ ಎಂಬುದಿದೆ ಎಂಬುದರ ಬಗ್ಗೆ ಹೇಗೆ ಅಪನಂಬಿಕೆ ಉಂಟಾಗುತ್ತದೋ ಅದೇ ರೀತಿ ಸೈನ್ಯವು ಲಗ್ಗೆ ಇಟ್ಟು ಮನಸೋ ಇಚ್ಛೆ ಲೂಟಿ ಮಾಡಿದಾಗ, ಕತ್ತಿ-ಬಂದೂಕುಗಳ ಭೀಕರ ಕ್ರೌರ್ಯವನ್ನು ನೋಡಿದಾಗ ನಮ್ಮನ್ನು ಕಾಯುವ ಶಕ್ತಿಯೊಂದಿದೆ, ಮನುಷ್ಯನಿಗೆ ತರ್ಕಿಸುವ ಸಾಮರ್ಥ್ಯವಿದೆ ಎಂಬುದರ ಬಗ್ಗೆ ನಂಬಿಕೆ ಅಳಿಸಿಹೋಗುತ್ತದೆ. ಸೈನಿಕರು ಮನೆಗಳ ಬಾಗಿಲು ಬಡಿದು ಒಳಗೆ ಸೇರಿಕೊಂಡರು. ಗೆದ್ದವರು ನಾವು, ಈ ಮನೆ ನಮ್ಮದೇ ಎಂಬ ಹಕ್ಕು ಚಲಾಯಿಸಿದರು. ಸೋತವರಿಗೆ ಈಗ ಗೆದ್ದವರನ್ನು ಉಪಚರಿಸಿ ತಮ್ಮ ಕೃತಜ್ಞತೆಯನ್ನು ಮೆರೆಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.
ಕ್ರೌರ್ಯದ ಮೊದಲ ಅಲೆ ಶಾಂತವಾದಾಗ ಒಮ್ಮೆಲೇ ಜನಜೀವನ ಮತ್ತೆ ಯಥಾಸ್ಥಿತಿಗೆ ಮರಳುತ್ತದೆ. ವ್ಯತ್ಯಾಸವೆಂದರೆ ಎಷ್ಟೋ ಮನೆಗಳಲ್ಲಿ ಮೇಜಿನ ಮುಂದೆ ಒಬ್ಬ ಪ್ರಷ್ಯನ್ ಅಧಿಕಾರಿ ಕುಳಿತು ಊಟ ಮಾಡುತ್ತಿದ್ದಾನೆ. ಅವನು ಉತ್ತಮ ಸಂಸ್ಕಾರ ಉಳ್ಳವನಾಗಿದ್ದರೆ ಮನೆಯವರ ಜೊತೆ ಸಂಭಾವಿತನಂತೆ ನಡೆದುಕೊಳ್ಳುತ್ತಾನೆ. ಫ್ರಾನ್ಸ್ ಕುರಿತು ಸಹಾನುಭೂತಿ ವ್ಯಕ್ತಪಡಿಸುತ್ತಾನೆ. ತಾನು ಇಂಥ ಕೆಲಸಕ್ಕೆ ಇಳಿಯಬೇಕಾದದ್ದು ತನ್ನ ದುರದೃಷ್ಟ ಎಂದು ಲೊಚಗುಟ್ಟುತ್ತಾನೆ. ಆಗ ಮನೆಯವರು ಅವನಿಗೆ ಕೃತಜ್ಞತೆ ಸಲ್ಲಿಸದೆ ಬೇರೆ ದಾರಿ ಎಲ್ಲಿದೆ? ಮುಂದೆ ಎಂದಾದರೂ ಅವನೇ ಅವರನ್ನು ರಕ್ಷಿಸುವ ಸಂದರ್ಭ ಬರಬಹುದು. ಅವನನ್ನು ಚೆನ್ನಾಗಿ ನೋಡಿಕೊಂಡರೆ ಮನೆಗೆ ಇನ್ನಷ್ಟು ಜನರು ನುಗ್ಗುವುದು ತಪ್ಪಬಹುದು. ನೀರಿನಲ್ಲಿದ್ದುಕೊಂಡು ಮೊಸಳೆಯೊಂದಿಗೆ ವೈರ ಕಟ್ಟಿಕೊಳ್ಳುವುದು ಶೌರ್ಯವಲ್ಲ, ಹುಚ್ಚುಸಾಹಸ. ಈಗ ರೂವೋನ್ ಪಟ್ಟಣದ ಯಾವ ಜನಸಾಮಾನ್ಯನಲ್ಲೂ ಈ ಪಟ್ಟಣಕ್ಕೆ ಹಿಂದೊಮ್ಮೆ ಕೀರ್ತಿ ತಂದುಕೊಟ್ಟ ಹುಚ್ಚುಸಾಹಸವೆಂಬ ದೋಷ ಉಳಿದಿಲ್ಲ. ರೋವೋನ್ ನಾಗರೀಕರು ಕೊನೆಗೆ ಒಂದು ಒಪ್ಪಂದಕ್ಕೆ ಬಂದರು. ಮನೆಯಲ್ಲಿ ಜರ್ಮನ್ ಅಧಿಕಾರಿಯನ್ನು ಗೌರವದಿಂದಲೇ ಕಾಣುವುದು; ಮನೆಯ ಹೊರಗಡೆ ಅವನು ಪರಿಚಿತನಂತೆ ವರ್ತಿಸುವುದು. ಮನೆಯಲ್ಲಿ ಅವನ ಜೊತೆ ಆರಾಮವಾಗಿ ಹರಟೆ ಹೊಡೆಯುತ್ತಿದ್ದರೆ ಜರ್ಮನ್ ಸೈನಿಕ ಇನ್ನಷ್ಟು ದಿವಸ ತಮ್ಮ ರಕ್ಷಕನಾಗಿ ತಮ್ಮ ಮನೆಯಲ್ಲೇ ಉಳಿಯಬಹುದು.
ರೋವೋನ್ ನಗರ ಕ್ರಮೇಣ ಯಥಾಸ್ಥಿತಿಗೆ ಮರಳತೊಡಗಿತು. ಫ್ರೆಂಚ್ ಜನ ಈಗ ಹೊರಗೆ ಹೋಗುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿತ್ತು. ಆದರೆ ಬೀದಿಗಳಲ್ಲಿ ಪ್ರಷ್ಯನ್ ಸೈನಿಕರ ಉಪಟಳ ಜೋರಾಗಿತ್ತು. ನೀಲಿ ಉಡುಪು ತೊಟ್ಟು ಹಿಂದೆ ಕುದುರೆಗಳ ಮೇಲೆ ಜಬರ್ದಸ್ತಾಗಿ ಹೋಗುತ್ತಿದ್ದ ಫ್ರೆಂಚ್ ಸೇನಾಧಿಕಾರಿಗಳ ಕಡೆಗೆ ಈಗ ಜನ ಉಪೇಕ್ಷೆಯಿಂದ ನೋಡುತ್ತಿದ್ದರು.
ಗಾಳಿಯಲ್ಲಿ ಅಗೋಚರವಾದದ್ದು ಏನೋ ಒಂದು ಮನೆ ಮಾಡಿಕೊಂಡಿತ್ತು. ಸೂಕ್ಷ್ಮವಾಗಿದ್ದರೂ ಸಹಿಸಲು ಅಸಾಧ್ಯವಾದದ್ದು ಏನೋ ಮನೆಗಳಲ್ಲಿ, ಸಾರ್ವಜನಿಕ ಸ್ಥಾನಗಳಲ್ಲಿ, ಎಲ್ಲಾ ಕಡೆ ಹರಡಿಕೊಂಡಿತ್ತು. ಅದರಿಂದ ಉಣ್ಣುವ ಊಟದ ರುಚಿ ಬದಲಾಗಿತ್ತು. ಯಾವುದೋ ದೂರದೇಶದ ಪುರಾತನ ಕಾಲದ ದುಷ್ಟ ಬರ್ಬರ ಜನಾಂಗದವರೊಡನೆ ಪ್ರಯಾಣಕ್ಕೆ ಹೊರಟ ಅನುಭೂತಿ ಉಂಟಾಗುತ್ತಿತ್ತು.
ಗೆದ್ದವರು ಜನರಿಂದ ಬೇಕಾದಷ್ಟು ಹಣ ವಸೂಲಿ ಮಾಡಿದರು. ಜನ ಕೊಟ್ಟರು. ಕೊಡುವ ಸಾಮರ್ಥ್ಯ ಅವರಲ್ಲಿತ್ತು. ಆದರೆ ವ್ಯಾಪಾರಿಯ ಕೈಗೆ ಹಣ ಬಂದಷ್ಟೂ ಅವನ ಹೊಟ್ಟೆಯ ಕಿಚ್ಚು ಇನ್ನಷ್ಟು ಭುಗಿಲೇಳುತ್ತದೆ. ಆ ಇನ್ನೊಬ್ಬನಿಗೆ ಹೋದ ಹಣ ತನ್ನದಾಗಬಹುದಾಗಿತ್ತಲ್ಲಾ ಎಂಬ ಆಲೋಚನೆ ಅವನ ನಿದ್ದೆ ಕೆಡಿಸುತ್ತದೆ. ಹೀಗಾಗಿ ನಗರದಿಂದ ಎರಡು ಮೂರು ಗಾವುದ ದೂರದಲ್ಲಿರುವ ಕ್ವಾಸೇ ಅಥವಾ ಬೀಸರ್ಟ್ ಪ್ರದೇಶದ ಮೀನುಗಾರರಿಗೆ ಕೆಲವೊಮ್ಮೆ ನದಿಯಲ್ಲಿ ಊದಿಕೊಂಡ ಶವ ದೊರೆಯುವುದು. ಕತ್ತಿಯಿಂದ ಚುಚ್ಚಿ ಅಥವಾ ತಲೆಯ ಮೇಲೆ ಕಲ್ಲಿನಿಂದ ಹೊಡೆದು ಅಥವಾ ಸೇತುವೆಯ ಮೇಲಿನಿಂದ ನದಿಗೆ ನೂಕಿ ಕೊಲೆ ಮಾಡಿದ ಜರ್ಮನ್ ಸೈನಿಕನ ಶವ. ನದಿಯ ನೊರೆ ಮತ್ತು ಪಾಚಿ ಇಂಥ ಅದೆಷ್ಟು ಪ್ರತೀಕಾರಗಳನ್ನು ಬಚ್ಚಿಟ್ಟುಕೊಂಡಿದೆಯೋ! ಬರ್ಬರವೆನ್ನಿಸಿದರೂ ನ್ಯಾಯಸಮ್ಮತವಾದ ಈ ಸಾಹಸಗಾಥೆಗಳು ಯುದ್ಧದಲ್ಲಿ ಬೆಳ್ಳಂಬೆಳಕಿನಲ್ಲಿ ನಡೆಯುವ ಹತ್ಯೆಗಳಿಗಿಂತ ಭೀಕರವಾದರೂ ಅವುಗಳನ್ನು ಯಾರೂ ಹಾಡಿ ಹೊಗಳುವುದಿಲ್ಲ.
ಪರದೇಶದ ಜನರ ಬಗ್ಗೆ ಅಸಹನೆ ಕೆಲವು ಧೈರ್ಯಶಾಲಿಗಳನ್ನು ಇಂಥ ಕೆಲಸಕ್ಕೆ ಪ್ರಚೋದಿಸುತ್ತದೆ. ತಾವು ಸತ್ತರೂ ಪರವಾಗಿಲ್ಲ ಎಂದು ಅವರು ಇಂಥ ಕೆಲಸಕ್ಕೆ ಇಳಿಯುತ್ತಾರೆ. ಕೊನೆಗೂ ಲಗ್ಗೆ ಹಾಕಿದ ಶತ್ರು ನಗರದಲ್ಲಿ ಭಯಭೀತಿ ಹುಟ್ಟಿಸಿ ಅದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಕ್ರಮೇಣ ಪಟ್ಟಣಿಗರು ಹೊರಗೆ ಬರುವ ಧೈರ್ಯ ಮಾಡತೊಡಗಿದರು. ಎಲ್ಲರೂ ಮನೆಯಲ್ಲಿ ಕುಳಿತರೆ ಅಂಗಡಿ-ಮುಗ್ಗಟ್ಟುಗಳು ನಡೆಯಬೇಡವೆ? ಕೆಲವು ವ್ಯಾಪಾರಿಗಳ ವಹಿವಾಟು ಇದ್ದದ್ದು ಹಾವರ್ ಪಟ್ಟಣದಲ್ಲಿ; ಅದಿನ್ನೂ ಫ್ರೆಂಚ್ ಸೈನ್ಯದ ಆಧಿಪತ್ಯದಲ್ಲಿತ್ತು. ಅಲ್ಲಿಗೆ ಹೋಗಲು ಅವರು ತಮಗೆ ಪರಿಚಯವಿದ್ದ ಜರ್ಮನ್ ಸೇನಾಧಿಕಾರಿಯ ಮೊರೆ ಹೋಗಿ ಹೇಗೋ ಗಡಿ ಪಾರುಮಾಡಲು ಜರ್ಮನ್ ಮಹಾದಂಡನಾಯಕನ ಅನುಮತಿ ಪಡೆದುಕೊಂಡು ಬಂಡಿಯಲ್ಲಿ ಕುಳಿತು ದಿಯೆಪ್ ಪ್ರದೇಶದ ಮೂಲಕ ಹಾವರ್ ಪಟ್ಟಣಕ್ಕೆ ಹೋಗುವ ನಿರ್ಧಾರಕ್ಕೆ ಬಂದರು. ನಾಲ್ಕು ಕುದುರೆಗಳನ್ನು ಕಟ್ಟಿದ ಗಾಡಿಯನ್ನು ಇದಕ್ಕಾಗಿ ಅವರು ಹೊಂದಿಸಿಕೊಂಡರು. ಹತ್ತು ಜನ ಈ ಗಾಡಿಯಲ್ಲಿ ಸ್ಥಾನ ದಕ್ಕಿಸಿಕೊಂಡರು. ಮಂಗಳವಾರ ಬೆಳಗ್ಗೆ ನಸುಕು ಹರಿಯುವ ಮುನ್ನವೇ ಯಾರ ಕಣ್ಣಿಗೂ ಬೀಳದಂತೆ ಹೊರಟು ಪ್ರಯಾಣ ಬೆಳೆಸುವುದು ಎಂಬ ನಿರ್ಧಾರವಾಯಿತು.
ಈಗ ಕೆಲವು ದಿನಗಳಿಂದ ನೆಲದ ಮೇಲೆ ಮಂಜು ಗಟ್ಟಿಯಾಗುತ್ತಾ ಸಾಗುತ್ತಿತ್ತು. ಸೋಮವಾರ ಮಧ್ಯಾಹ್ನ ಮೂರು ಗಂಟೆಗೆ ಆಕಾಶದಲ್ಲಿ ಉತ್ತರದಿಕ್ಕಿನಿಂದ ಬಂದು ನೆರೆದ ಕಾರ್ಮೋಡಗಳು ಎಡಬಿಡದೆ ಮಂಜು ಸುರಿಸಿದವು. ಸಂಜೆ ಕಳೆದು ರಾತ್ರಿಯಾದರೂ ಹಿಮಪಾತ ನಿಲ್ಲಲಿಲ್ಲ. ಬೆಳಗ್ಗೆ ನಾಲ್ಕೂವರೆ ಗಂಟೆಗೆ ಹೋಟೆಲ್ ನಾರ್ಮಂಡಿಯ ಅಂಗಳದಲ್ಲಿ ಪ್ರಯಾಣಿಕರು ಬಂದು ಸೇರಿದರು. ಅವರ ಕಣ್ಣುಗಳಲ್ಲಿ ಇನ್ನೂ ಗಾಢ ನಿದ್ರೆ ಇಣುಕುತ್ತಿತ್ತು. ಹೊದ್ದಿಕೆಯ ಕೆಳಗಡೆ ಅವರು ಗಡಗಡ ನಡುಗುತ್ತಿದ್ದರು. ಕತ್ತಲಿನಲ್ಲಿ ಅವರಿಗೆ ಪರಸ್ಪರ ಅಸ್ಪಷ್ಟವಾಗಿ ಕಾಣುತ್ತಿದ್ದರು. ಒಂದರ ಮೇಲೊಂದು ಚಳಿಗಾಲದ ಉಣ್ಣೆ ಬಟ್ಟೆಗಳನ್ನು ತೊಟ್ಟ ಅವರು ದೊಗಲೆ ಉಡುಪು ಹಾಕಿಕೊಂಡ ಇಗರ್ಜಿಯ ಅರ್ಚಕರ ಹಾಗೆ ತೋರುತ್ತಿದ್ದರು. ಇವರಲ್ಲಿ ಇಬ್ಬರಿಗೆ ಮಾತ್ರ ಪರಸ್ಪರರ ಪರಿಚಯವಿತ್ತು. ಮೂರನೆಯವನೊಬ್ಬ ಅವರನ್ನು ಕೂಡಿಕೊಂಡಾಗ ಸಂಭಾಷಣೆ ಪ್ರಾರಂಭವಾಯಿತು. "ನಾನು ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದೇನೆ," ಎಂದ ಒಬ್ಬ. "ನಾನೂ ಅಷ್ಟೆ," ಎಂದ ಇನ್ನೊಬ್ಬ. ಮೂರನೆಯವನೂ ತಲೆದೂಗಿದ. ಮೊದಲನೆಯವನು "ನಾವು ರೋವೋನ್ ಗೆ ಇನ್ನು ವಾಪಸ್ ಬರುವುದಿಲ್ಲ. ಪ್ರಷ್ಯನ್ನರು ಹಾವರ್ ಗೂ ಬಂದರೆ ನಾವು ಇಂಗ್ಲೆಂಡಿಗೆ ಹೊರಟುಹೋಗುತ್ತೇವೆ," ಎಂದ. ಉಳಿದ ಇಬ್ಬರ ಮನಸ್ಸಿನಲ್ಲೂ ಇದೇ ಇತ್ತು; ಅವರೆಲ್ಲರ ಆಲೋಚನಾ ರೀತಿ ಒಂದೇ ರೀತಿಯದಾಗಿತ್ತು.
ಕುದುರೆಗಳನ್ನು ಇನ್ನೂ ಗಾಡಿಗೆ ಕಟ್ಟಿರಲಿಲ್ಲ. ಲಾಯದಲ್ಲಿ ಕೆಲಸ ಮಾಡುವ ಹುಡುಗನೊಬ್ಬನ ಕೈಯಲ್ಲಿದ್ದ ಒಂದು ಚಿಮಣಿದೀಪ ಹಿಡಿದು ಆಗಾಗ ಕುದುರೆ ಲಾಯದ ಒಂದು ಬಾಗಿಲಿನಲ್ಲಿ ಕಾಣಿಸಿಕೊಂಡು ಮಾಯವಾಗಿ ಇನ್ನೊಂದು ಬಾಗಿಲಿನಲ್ಲಿ ಪ್ರತ್ಯಕ್ಷವಾಗುತ್ತಿದ್ದ. ಕುದುರೆಗಳು ತಮ್ಮ ಕಾಲುಗಳಿಂದ ನೆಲಕ್ಕೆ ಬಡಿಯುವುದು ಕೇಳುತ್ತಿತ್ತು. ನೆಲದ ಮೇಲೆ ಹಾಸಿದ ಹುಲ್ಲಿನ ಕಾರಣದಿಂದ ಈ ಸದ್ದು ಕ್ಷೀಣವಾಗಿತ್ತು. ಒಳಗೆ ಯಾರೋ ಒಬ್ಬ ಕೆಲಸಗಾರ ಕುದುರೆಗಳ ಜೊತೆ ಸಂಭಾಷಣೆ ನಡೆಸಿದ್ದ. ಅವನು ಪ್ರಾಣಿಗಳ ಮೇಲೆ ಕೂಗಾಡುತ್ತಿದ್ದ. ಕೊನೆಗೆ ಗಂಟೆಗಳ ಕಿಂಕಿಣಿ ಸದ್ದು ಕೇಳಿದಾಗ ಕುದುರೆಗಳನ್ನು ಕಟ್ಟುತ್ತಿದ್ದಾರೆ ಎಂಬುದು ತಿಳಿಯಿತು. ಮಂದವಾಗಿದ್ದ ಈ ಸದ್ದು ಗಾಡಿ ಸಮೀಪಿಸಿದಂತೆ ಕ್ರಮೇಣ ಒಂದೇ ಸಮ ಹೊಡೆದುಕೊಳ್ಳುವ ನಿನಾದವಾಯಿತು. ಈ ಸದ್ದು ಕುದುರೆ ತಲೆ ಕೊಡಹಿಕೊಂಡು ನೆಲಕ್ಕೆ ಕಾಲಿನಿಂದ ಅಪ್ಪಳಿಸಿದ ಶಬ್ದದಲ್ಲಿ ಕೊನೆಗೊಂಡಿತು. ಈಗ ಎಲ್ಲೆಡೆ ಸಂಪೂರ್ಣ ನಿಶ್ಶಬ್ದತೆ ಕವಿಯಿತು. ಹಿಮದಿಂದ ಮರಗಟ್ಟಿದ ಪಟ್ಟಣದಲ್ಲಿ ಮೌನ ಆವರಿಸಿತು.
ಒಂದೇಸಮ ಸುರಿಯುವ ಹಿಮದ ಕಣಗಳ ತೆರೆ ಬೆಳಕು ಬಿದ್ದಾಗ ಮಿಂಚುತ್ತಿತ್ತು. ಬಿದ್ದ ಕಡೆಯೆಲ್ಲಾ ಬೆಳ್ಳಗಿನ ಹುಡಿ ಉದುರಿಸಿದಂತೆ ಹರಡುತ್ತಿತ್ತು. ಮಹಾನಿಶ್ಶಬ್ದದಲ್ಲಿ ಏನೂ ಕೇಳುತ್ತಿರಲಿಲ್ಲ. ಇಡೀ ಪಟ್ಟಣವೇ ಹೇಮಂತದ ತೆಕ್ಕೆಯಲ್ಲಿ ಮೌನವಾಗಿ ಮಲಗಿತ್ತು.
ಲಾಯದ ಹುಡುಗ ತನ್ನ ಚಿಮಣಿ ದೀಪ ಹಿಡಿದು ಬಂದು ಯಾವುದೋ ದುರದೃಷ್ಟದ ಪ್ರಾಣಿಗೆ ಕಟ್ಟಿದ್ದ ಹಗ್ಗ ಬಿಚ್ಚಿದ. ತಾನು ಸಂತೋಷವಾಗಿ ಬರುವುದಿಲ್ಲವೆಂದು ಕುದುರೆ ಕೆನೆಯಿತು. ಒಂದು ಕೈಯಲ್ಲಿ ದೀಪ ಹಿಡಿದು ಇನ್ನೊಂದು ಕೈಯಿಂದ ಕುದುರೆಯನ್ನು ಗಾಡಿಗೆ ಕಟ್ಟಲು ಅವನಿಗೆ ಸಾಕಷ್ಟು ಸಮಯ ಬೇಕಾಯಿತು. ಎರಡನೇ ಕುದುರೆಯನ್ನು ಕಟ್ಟುವ ಮುಂಚೆ ಅವನಿಗೆ ಪ್ರಯಾಣಿಕರು ಕಣ್ಣಿಗೆ ಬಿದ್ದರು. "ನೀವು ಗಾಡಿಯ ಒಳಗೆ ಹೋಗಿ ಕೂಡಬಾರದೆ? ಅಲ್ಲಿ ಏನಿಲ್ಲದಿದ್ದರೂ ತಲೆಯ ಮೇಲೆ ಒಂದು ಸೂರಾದರೂ ಇರುತ್ತೆ," ಎಂದ.
ಅವರಿಗೆ ಈ ವಿಷಯ ಹೊಳೆದಿರಲಿಲ್ಲ. ಲಗುಬಗೆಯಿಂದ ಅವರು ಈ ಕಾರ್ಯದಲ್ಲಿ ತೊಡಗಿದರು. ಮೂರೂ ಜನ ಗಂಡಸರು ಮೊದಲು ತಮ್ಮ ಹೆಂಡತಿಯರನ್ನು ಹಿಂಭಾಗದಲ್ಲಿ ಕೂಡಿಸಿ ತಾವು ಅನುಮಾನಿಸುತ್ತಾ ಬೇರೆ ನಿರ್ವಾಹವಿಲ್ಲದೆ ಉಳಿದ ಜಾಗಗಳಲ್ಲಿ ಆಸೀನರಾದರು.
ಗಾಡಿಯಲ್ಲಿ ಕೆಳಗೆ ಒಣಗಿದ ಹುಲ್ಲು ಹಾಸಲಾಗಿತ್ತು. ಪ್ರಯಾಣಿಕರು ತಮ್ಮ ಕಾಲುಗಳನ್ನು ಹುಲ್ಲಿನಲ್ಲಿ ಹುದುಗಿಸಿಕೊಂಡರು. ಹೆಂಗಸರು ತಾವು ತಂದಿದ್ದ ತಾಮ್ರದ ಅಗ್ಗಿಷ್ಟಿಕೆಗಳಿಗೆ ಇದ್ದಿಲು ತುಂಬಿಸಿ ಹೊತ್ತಿಸಿದರು. ಈ ಸಾಧನದಿಂದ ಹೇಗೆ ಕಾಲುಗಳನ್ನು ಬೆಚ್ಚಗೆ ಇಟ್ಟುಕೊಳ್ಳಬಹುದು ಎಂದು ಎಲ್ಲರಿಗೂ ಗೊತ್ತಿದ್ದ ವಿಷಯವನ್ನೇ ಹೆಂಗಸರು ಮಾತಾಡಿಕೊಂಡರು.
ಕೊನೆಗೂ ಕುದುರೆ ಕಟ್ಟುವ ಕೆಲಸ ಮುಗಿಯಿತು. ಹವಾ ಕೆಟ್ಟದಾಗಿತ್ತು ಎಂಬ ಕಾರಣದಿಂದ ನಾಲಕ್ಕು ಕುದುರೆ ಕಟ್ಟುವ ಕಡೆ ಆರು ಕುದುರೆಗಳನ್ನು ಕಟ್ಟಲಾಗಿತ್ತು. ಒಂದು ಧ್ವನಿ "ಎಲ್ಲರೂ ಗಾಡಿ ಹತ್ತಿಕೊಂಡಿದ್ದು ಆಯಿತೆ?" ಎಂದು ಕೇಳಿತು. ಗಾಡಿಯ ಒಳಗಿನಿಂದ ಒಂದು ಧ್ವನಿ "ಹೂಂ, ಆಯಿತು," ಎಂದು ಉತ್ತರಿಸಿತು. ಅವರು ಹೊರಟರು. ಗಾಡಿ ಮೊದಲು ಬಹಳ ನಿಧಾನವಾಗಿ ಚಲಿಸಿತು. ಚಕ್ರಗಳು ಹಿಮದಲ್ಲಿ ಹೂತಿದ್ದವು. ಕುದುರೆಗಳು ಪ್ರಯಾಸದಿಂದ ಏದುಬ್ಬುಸ ಪಡುತ್ತಾ ಬಾಯಿಂದ ಹೊಗೆ ಉಗುಳುತ್ತಾ ಗಾಡಿ ಎಳೆದವು. ಗಾಡೀವಾನ ಪ್ರಾಣಿಗಳ ಬೆನ್ನಿನ ಮೇಲೆ ನಿರಂತರವಾಗಿ ಚಾಟಿ ಪ್ರಹಾರ ಮಾಡಿದ. ಸರ್ಪದ ಹಾಗಿದ್ದ ಚಾಟಿ ಒಮ್ಮೆ ಒಂದು ಕುದುರೆಯ ಮೇಲೆ ಒಮ್ಮೆ ಇನ್ನೊಂದರ ಮೇಲೆ ಹೊಯ್ದಾಡಿತು.
ಮೂಡಣದಲ್ಲಿ ಕ್ರಮೇಣ ಬೆಳಕು ಮೂಡತೊಡಗಿತು. ರೋವೋನ್ ಪಟ್ಟಣದವನೇ ಆದ ಒಬ್ಬ ಯಾತ್ರಿಕ "ಹತ್ತಿಯ ಹಾಗೆ" ಎಂದು ವರ್ಣಿಸಿದ ಹಿಮದ ಕಣಗಳು ಈಗ ಬೀಳುತ್ತಿರಲಿಲ್ಲ. ಮೋಡಗಳ ಮೂಲಕ ತೂರಿ ಬಂದ ಕ್ಷೀಣವಾದ ಬೆಳಕು ಹೊಲಗಳ ಮೇಲೆ, ಮರಗಳ ಸಾಲಿನ ಮೇಲೆ, ಮನೆಗಳ ಹೊಗೆಗೊಳವೆಗಳ ಮೇಲೆ ಕೌಚಿಕೊಂಡಿದ್ದ ಬೆಳ್ಳನೆಯ ಹಿಮದ ಹೊದಿಕೆಯನ್ನು ಇನ್ನಷ್ಟು ಉಜ್ವಲಗೊಳಿಸುತ್ತಿತ್ತು. ಗಾಡಿಯಲ್ಲಿದ್ದವರು ಮುಂಜಾವಿನ ಈ ಖಿನ್ನ ಬೆಳಕಿನಲ್ಲಿ ಒಬ್ಬರನ್ನೊಬ್ಬರು ಕುತೂಹಲದಿಂದ ನೋಡಿದರು.
[ಮುಂದಿನ ಭಾಗ ಇಲ್ಲಿ ಓದಿ]
ಕತೆಗಾರ ಮುಪಸಾನ ವ್ಯಕ್ತಿ ಚಿತ್ರ ಇಲ್ಲಿ ಓದಬಹುದು.
(c) C.P. Ravikumar, Kannada translation of 'Ball-of-Fat' (Boule de Suif) by Guy De Maupassant.
I acknowledge the English translation which I have used from here. I also acknowledge the images that I have used from different sources - these are all identified as reusable by Google.
Reads very well in Kannada without any strain! (HSK)
ಪ್ರತ್ಯುತ್ತರಅಳಿಸಿHSK, I have now posted all the 9 parts. Hope you get a chance to read them all.
ಅಳಿಸಿThanks HSK!
ಪ್ರತ್ಯುತ್ತರಅಳಿಸಿ