ತಂತ್ರಜ್ಞಾನದ ನಡುವೆಯೂ ಒಂದು ಕರ್ನಾಟಕ ರಾಜ್ಯೋತ್ಸವ
ಸಿ ಪಿ ರವಿಕುಮಾರ್
ಸೆಪ್ಟೆಂಬರ್ ತಿಂಗಳಲ್ಲಿ ನಾನು ಬಿ. ಆರ್. ಲಕ್ಷ್ಮಣರಾವ್ ಅವರ "ಸಂವಾದ" ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರನ್ನು ನಮ್ಮ ಕಚೇರಿಯಲ್ಲಿ ನಡೆಯುವ ರಾಜ್ಯೋತ್ಸವ ಸಮಾರಂಭಕ್ಕೆ ಆಹ್ವಾನಿಸಬೇಕು ಎಂಬ ಉತ್ಸಾಹ ಉಂಟಾಯಿತು. ನನ್ನ ಸಹೋದ್ಯೋಗಿಗಳ ಬೆಂಬಲದಿಂದ ಇದು ಸಾಧ್ಯವಾಯಿತು. ನಮ್ಮ ಆಹ್ವಾನಕ್ಕೆ ಒಪ್ಪಿ ಕವಿ ಲಕ್ಷ್ಮಣರಾವ್ ನಮ್ಮ ಕಚೇರಿಗೆ ಬಂದು ನಮ್ಮೊಂದಿಗೆ ಎರಡೂವರೆ ಗಂಟೆ ಕಾಲ ಕಳೆದದ್ದು ನಮಗೆಲ್ಲಾ ಸಂತೋಷದ ವಿಷಯವಾಯಿತು.
ನಮ್ಮ ಕಚೇರಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್ ವೇರ್ ಪರಿಭಾಷೆಯೇ ಹೆಚ್ಚು ರೂಢಿಯಲ್ಲಿರುವ ಸ್ಥಿತಿ ಇದ್ದರೂ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ನಡೆಸುವ ರೂಢಿ ನಡೆದುಕೊಂಡು ಬಂದಿದೆ. ಹಿಂದೆ ಚಿತ್ರ ನಿರ್ದೇಶಕ ನಾಗಾಭರಣ, ಸಮಾಜ ಕಾರ್ಯಕರ್ತ ಎಚ್ ಸುದರ್ಶನ್, ಕವಿ ಎಚ್ ಎಸ್ ವೆಂಕಟೇಶಮೂರ್ತಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಬಂದಿದ್ದಾರೆ.
ಈ ಸಲದ ರಾಜ್ಯೋತ್ಸವ ನವೆಂಬರ್ ಐದನೇ ತಾರೀಕು ಸಂಪನ್ನವಾಯಿತು. ನಮ್ಮ ಕಚೇರಿಯಲ್ಲಿ ರಾಜ್ಯೋತ್ಸವದ ಹಿಂದಿನ ವಾರ ಮತ್ತು ಆಚರಣೆಯ ದಿವಸ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಕನ್ನಡೇತರರಿಗಾಗಿ ಕನ್ನಡ ಮಾತಾಡುವ ಸ್ಪರ್ಧೆ, ಛಾಯಾಚಿತ್ರ ಗ್ರಹಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಜನಪ್ರಿಯವಾಗಿವೆ. ಅದರಲ್ಲೂ ಕನ್ನಡೇತರರು ಭಾಗವಹಿಸುವ "ಸಂಭಾಷಣಾ ಸ್ಪರ್ಧೆ" ಸಾಕಷ್ಟು ಮನರಂಜನೆ ಒದಗಿಸಿತು. ಹೊರರಾಜ್ಯಗಳಿಂದ ಬೆಂಗಳೂರಿಗೆ ಬಂದು ನೆಲಸಿದವರ ಕನ್ನಡ ಮಾತಾಡುವ ಅನುಭವಗಳು ತಮಾಷೆಯಾಗಿದ್ದವು. ಒಬ್ಬ ಬೆಂಗಾಳಿ ಸಹೋದ್ಯೋಗಿ ನಮ್ಮ "ಬೆಂಗಾಳೂರಿಗೆ" ಬಂದು ಕನ್ನಡ ಕಲಿಯುವ ಸಾಹಸಕ್ಕೆ ಇಳಿದಿದ್ದಲ್ಲದೆ ಆಟೋ ಚಾಲಕನ ಜೊತೆ ಕನ್ನಡ-ಬೆಂಗಾಲಿ-ಸಂಸ್ಕೃತ ಇತ್ಯಾದಿ ಎಲ್ಲವನ್ನೂ ಮಿಶ್ರಣ ಮಾಡಿ ಮಾತಾಡಿದಾಗ ಅವನು ಬಹಳ ಸಮಾಧಾನದಿಂದ ಕೇಳಿಸಿಕೊಂಡು ಕೊನೆಗೆ ಮೆಲ್ಲಗೆ "ಸಾರ್, ನೀವು ಮಂಗಳೂರಿನವರಾ?" ಎಂದು ಪ್ರಶ್ನಿಸಿದನಂತೆ! ಇವರು ಕಂಗಾಲಾಗಿ 'ಹಾಗೆ ಯಾಕೆ ಕೇಳುತ್ತೀರಾ?" ಎಂದಿದ್ದಕ್ಕೆ "ಅವರೇ ಇಷ್ಟು ಅಪ್ಪಟ ಕನ್ನಡ ಮಾತಾಡುವುದು" ಎಂದನಂತೆ! ಕನ್ನಡೇತರರಲ್ಲಿ ಕೆಲವರು ಸಂಭಾಷಣೆ ಬದಲು ಹಾಡು ಹೇಳಿದರು. "ಅನಿಸುತಿದೆ ಯಾಕೋ ಇಂದು" ಇವರ ನಡುವೆ ಜನಪ್ರಿಯವಾದ ಗೀತೆ. ಹಾಗೇ ಸಂಭಾಷಣೆಯಲ್ಲಿ "ಮಗಾ" ಎನ್ನುವ ಸಂಬೋಧನೆ ತುಂಬಾ ಜನಪ್ರಿಯವಾದಂತೆ ಕಾಣುತ್ತದೆ. ಒಂದು ಕಾಲದಲ್ಲಿ 'ಗಮಗಮ" ಮೈಸೂರು ಮಲ್ಲಿಗೆಗೆ ಹೆಸರಾಗಿದ್ದ ನಮ್ಮ ಕನ್ನಡನಾಡು ಈಗ "ಮಗ ಮಗ" ಎನ್ನುತ್ತಿದೆ!
ನವೆಂಬರ್ ಐದರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಕವಿ ಲಕ್ಷ್ಮಣರಾವ್ ಸುಮಾರು ಇಪ್ಪತ್ತು-ಇಪ್ಪತ್ತೈದು ನಿಮಿಷ ಗಳ ಕಾಲ ಮಾತಾಡಿದರು. ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಚೇರಿಯಲ್ಲಿ ಕನ್ನಡದ ಅಭಿಮಾನವನ್ನು ಅವರು ಶ್ಲಾಘಿಸಿದರು. "ಮನಸ್ಸಿನಲ್ಲಿ ಭಾವನೆಗಳು ಇರುವವರೆಗೆ ಕವಿತೆಯೂ ಇರುತ್ತದೆ. ಹಾಗೇ ನಮ್ಮಲ್ಲಿ ಕನ್ನಡತನವು ಎಂದೂ ನಾಶವಾಗುವುದಿಲ್ಲ. ಭಾಷೆಯೊಂದೇ ಅಲ್ಲ, ಕನ್ನಡತನ ನಮ್ಮ ನಡೆಯಲ್ಲಿ , ನಮ್ಮ ಆಚಾರದಲ್ಲೂ ಇದೆ," ಎಂದರು. "ಕನ್ನಡ ಸಾಹಿತ್ಯವನ್ನು ಓದುವವರು ಕಡಿಮೆಯಾಗುತ್ತಿದ್ದಾರೆ ಎಂದು ಕೆಲವರು ವಿಷಾದ ವ್ಯಕ್ತ ಪಡಿಸುತ್ತಾರೆ - ಆದರೆ ಕನ್ನಡ ಸಾಹಿತ್ಯ ಇಂದು ಕಾಗದದ ಮೇಲಿನ ಮುದ್ರಣದ ಮಾಧ್ಯಮವನ್ನು ಮೀರಿ ಇಂಟರ್ ನೆಟ್ ಪ್ರವೇಶಿಸಿ ಅಲ್ಲಿ ತನ್ನ ಬೇರು ಬಿಡುತ್ತಿದೆ. ಫೇಸ್ ಬುಕ್, ಬ್ಲಾಗ್ ಮೂಲಕ ಅನೇಕ ಕವಿಗಳು ಬರೆಯುತ್ತಿದ್ದಾರೆ" ಎಂದು ಆಶಾವಾದ ವ್ಯಕ್ತಪಡಿಸಿದರು. ಅದೇ ಕಾರ್ಯಕ್ರಮದಲ್ಲಿ ಹಾಡಲಾದ "ಆಗು ಗೆಳೆಯ, ಆಗು ನೀನು ಭರವಸೆಯ ಪ್ರವಾದಿ" ಎಂಬ ಅವರ ಕವಿತೆಯೂ ಇದಕ್ಕೆ ಪೂರಕವಾಗಿಯೇ ಇದೆ ಅನ್ನಿಸಿತು.
ತಮ್ಮ ಕವಿತೆಗಳಲ್ಲಿ ಆಯ್ದ ಭಾಗಗಳನ್ನು ಓದಿ ನಮ್ಮನ್ನು ರಂಜಿಸಿದರು. ತಮ್ಮ ಹನಿಗವಿತೆಗಳಿಂದ ಅನೇಕ ಹನಿಗಳನ್ನು ಒಂದು ಕಡೆ ಸೇರಿಸಿ ಅವರು ನಮಗೆ ಕಾವ್ಯಜೇನಿನ ರಸಾನುಭವ ಮಾಡಿಕೊಟ್ಟರು. ಇವುಗಳ ನಡುವೆಯೇ ಮಧ್ಯಮವರ್ಗದ ಕನಸುಗಳನ್ನು ಕುರಿತು ಬರೆದ ಒಂದು ಕವಿತೆಯನ್ನು ಹಾಡಿದರು ("ಹೋಗೋಣ ಜಂಬೂ ಸವಾರಿ') - ಈ ಕವಿತೆಯಲ್ಲಿ ಪ್ರಿಯಕರ ತನ್ನ ಪ್ರಿಯತಮೆಯನ್ನು ತನ್ನ ಹಳೇ ಸ್ಕೂಟರ್ ಮೇಲೆ ಜಂಬೂ ಸವಾರಿ ಕರೆದುಕೊಂಡು ಹೋಗುತ್ತಾನೆ - ಆದರೆ ಮಧ್ಯಮವರ್ಗದ ಅವರಿಗೆ ಯಾವ ವೈಭೋಗವೂ ಕೈಗೆಟುಕದೆ ಅವರು "ಬಂದ ದಾರಿಗೆ ಸುಂಕವಿಲ್ಲ" ಎಂಬಂತೆ ಏನೂ ಕೊಳ್ಳದೆ ಹಿಂದಿರುಗುತ್ತಾರೆ. ಇದೇ ರೀತಿ ಅವರ "ಅಂಕಲ್ ಮತ್ತು ಟ್ವಿಂಕಲ್" ಕವಿತೆಯಲ್ಲಿ ಒಬ್ಬ ಅಂಕಲ್ ಮತ್ತು ಒಬ್ಬ ಯುವತಿಯ ನಡುವೆ ಸಂಭಾಷಣೆ ನಡೆಯುತ್ತದೆ. ಅಂಕಲ್ ಅವಳನ್ನು ಹಿಂದಿನಿಂದ ಬಲ್ಲವರು. ಅವಳು ಮದುವೆಗೆ ಮುನ್ನ ಹೇಗೆ ಉತ್ಸಾಹದ ಬುಗ್ಗೆಯಾಗಿದ್ದಳು, ಮದುವೆಯಾದ ನಂತರ ಯಾಕೆ ಸಪ್ಪೆಯಾದಳು ಎನ್ನುವುದರ ಬಗ್ಗೆ ಅವಳನ್ನು ಪ್ರಶ್ನಿಸುತ್ತಾರೆ. ಅವಳಿಗೆ "ನೀನು ಯಾಕೆ ಡೈವೋರ್ಸ್ ತೊಗೋಬಾರದು?" ಎನ್ನುವಷ್ಟು ಮುಂದುವರೆಯುತ್ತಾರೆ. ಆದರೆ ಕವನದ ಟ್ವಿಂಕಲ್ "ನಿಮಗೂ ಒಬ್ಬ ಮಗನಿದ್ದಾನೆ" ಅನ್ನುವುದನ್ನು ಅವರಿಗೆ ಮಾರ್ಮಿಕವಾಗಿ ನೆನಪಿಸುತ್ತಾಳೆ - "ನೀವೇ ನನ್ನನ್ನು ಸೊಸೆಯಾಗಿ ಸ್ವೀಕರಿಸಲು ಏನು ಕಷ್ಟ?" ಎಂದು ಅವಳು ಪರೋಕ್ಷವಾಗಿ ನುಡಿದಂತೆ ಕೇಳುತ್ತದೆ. ಎಲ್ಲರಿಗೂ ಸುಲಭವಾಗಿ ಸಲಹೆ ಕೊಡುವವರು ತಮ್ಮ ಔಷಧವನ್ನು ತಾವೇ ಎಂದೂ ಸವಿದು ನೋಡಿರುವುದಿಲ್ಲ! ಲಕ್ಷ್ಮಣರಾವ್ ಅವರ ಹಾಸ್ಯಮಯ ಭಾಷಣ ಎಲ್ಲರಿಗೂ ತುಂಬಾ ಇಷ್ಟವಾಯಿತು. ಸಭಿಕರು ಸ್ವಯಂಪ್ರೇರಣೆಯಿಂದ ಆಗಾಗ ಚಪ್ಪಾಳೆ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪಾಸನಾ ತಂಡದ ಗಾಯಕಿಯರಾದ ವರ್ಷಾ ಸುರೇಶ್ ಮತ್ತು ರಮ್ಯಾ ಶಾಸ್ತಿ ಅನೇಕ ಭಾವಗೀತೆಗಳನ್ನು ಹಾಡಿದರು. ಕವಿಗಳಾದ ಬಿ ಆರ್ ಲಕ್ಷ್ಮಣರಾವ್, ಲಕ್ಷ್ಮೀನಾರಾಯಣ ಭಟ್ಟ, ಸುಬ್ರಾಯ ಚೊಕ್ಕಾಡಿ ಮೊದಲಾದವರ ಭಾವಗೀತೆಗಳನ್ನು ಅವರು ಹಾಡಿದರು. "ಈ ಸಂಗೀತ ತಂಡದವರ ವಿಶೇಷವೆಂದರೆ ಕನ್ನಡ ಭಾವಗೀತೆಗಳನ್ನು ಹೊರತಾಗಿ ಅವರು ಬೇರೆ ಯಾವ ಬಗೆಯ ಸಂಗೀತವನ್ನೂ ಹಾಡುವುದಿಲ್ಲ," ಎಂದು ಲಕ್ಷ್ಮಣರಾವ್ "ಉಪಾಸನಾ" ತಂಡದ ಕೊಡುಗೆಯನ್ನು ಮೆಚ್ಚಿಕೊಂಡರು.
ಅದೇ ದಿನ ಕಚೇರಿಯಲ್ಲಿ ಅನೇಕ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟದ ಕಾರ್ಯಕ್ರಮವನ್ನೂ ಆಯೋಜಿಸಲಾಯಿತು - ಕೈಮಗ್ಗದ ಬಟ್ಟೆಗಳು, ಕನ್ನಡ ಪುಸ್ತಕಗಳು, ಕನ್ನಡ ಟೀ-ಶರ್ಟ್, ಕನ್ನಡ ಗಣಕ ಪರಿಷತ್ತು ತಯಾರಿಸಿರುವ ಕನ್ನಡ ಸಿ.ಡಿ.ಗಳು ಹಾಗೂ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಜೋರಾಗಿ ನಡೆಯಿತು. ಕರ್ನಾಟಕ ಪದ್ಧತಿಯ ವಿಶೇಷ ಊಟದ ಏರ್ಪಾಟು ಮಾಡಲಾಗಿತ್ತು; ಇದೂ ಬಹಳ ಜನಪ್ರಿಯವಾಯಿತು! ಇದಲ್ಲದೆ ಕಾರ್ಯಕ್ರಮಕ್ಕೆ ಬಂದವರಿಗೆ ಹಂಚಲಾದ ಧಾರವಾಡ ಫೇಡ ಎಲ್ಲರ ಬಾಯಲ್ಲೂ ಮನದಲ್ಲೂ ಸಿಹಿ ಅನುಭವ ತಂದುಕೊಟ್ಟಿತು!

ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಭಾಷಣ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ