ಬೆಣ್ಣೆಮುದ್ದೆ - ಭಾಗ ೩



ಬೆಣ್ಣೆ ಮುದ್ದೆ - ಭಾಗ ೩
ಫ್ರೆಂಚ್ ಕತೆ - ಗಿ ಡಿ ಮುಪಸಾ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 

(ಎರಡನೇ ಭಾಗವನ್ನು ಇಲ್ಲಿ ಓದಿ)
ಗಾಡಿ ತೀರಾ ನಿಧಾನವಾಗಿ ಚಲಿಸುತ್ತಿತ್ತು. ಬೆಳಗಿನ ಹತ್ತು ಗಂಟೆಯಾದಾಗ ಅವರಿನ್ನೂ ನಾಲ್ಕು ಗಾವುದ ಕೂಡಾ ಸಾಗಿರಲಿಲ್ಲ. ಮೂರು ಸಲ ಏರು ಪ್ರದೇಶಗಲ್ಲಿ ಗಂಡಸರು ಕೆಳಗಿಳಿದು  ಕಾಲ್ನಡಿಗೆಯಿಂದ ಹತ್ತಿದ್ದಾಗಿತ್ತು. ಅವರ ಬೆಳಗಿನ ಉಪಾಹಾರದ ಸಮಯ ಮೀರಿದ್ದರಿಂದ ಅವರಿಗೆ ಇರುಸುಮುರುಸಾಗಿತ್ತು.   ಇಷ್ಟು ನಿಧಾನವಾಗಿ ಸಾಗಿದರೆ ಉಪಾಹಾರಕ್ಕೆ ಯಾವುದಾದರೂ ಕೆಫೆಗೆ ಹೋಗಿ ತಲುಪುವುದು ರಾತ್ರಿಯೇ ಎಂಬ ಚಿಂತೆಯಿಂದ ಅವರು ಕಂಗಾಲಾಗಿದ್ದರು. ಇದು ಸಾಲದೆಂಬಂತೆ ಒಂದು ಕಡೆ ಕೆಸರಿನಲ್ಲಿ ಗಾಡಿಯ ಚಕ್ರಗಳು ಸಿಕ್ಕಿಕೊಂಡು ಅದನ್ನು ಮೇಲೆತ್ತಲು ಎರಡು ಗಂಟೆ ಬೇಕಾಯಿತು. ಎಲ್ಲರೂ ಅತ್ತ ಇತ್ತ ಇಣುಕುತ್ತಾ ಯಾವುದಾದರೂ ವಿಶ್ರಾಂತಿಧಾಮ ಗೋಚರಿಸುತ್ತದೆಯೋ ಎಂದು ಹುಡುಕಾಡುತ್ತಿದ್ದರು.

ಹಸಿವೆಯಿಂದ ಅವರು ಕಂಗೆಟ್ಟಿದ್ದರು. ಒಂದಾದರೂ ಅಂಗಡಿಯಾಗಲಿ, ಭೋಜನಾಲಯವಾಗಲಿ ಅವರಿಗೆ ಸಿಕ್ಕಲಿಲ್ಲ.  ಪ್ರಷ್ಯನ್ ಸೈನಿಕರ ಹಾವಳಿ ತಾಳಲಾರದೆ ದಾರಿ ಬದಿಯ ಅಂಗಡಿಗಳು ಮುಚ್ಚಿದ್ದವು. ಹೊಲ-ಮನೆ ಕಂಡಾಗ ಗಂಡಸರು ಕೆಳಗಿಳಿದು ಓಡಿದರು; ಆದರೆ ಅಲ್ಲಿ ಒಂದು ಬ್ರೆಡ್ ಕೂಡಾ ಸಿಕ್ಕಲಿಲ್ಲ. ಸೈನಿಕರು ಏನೂ ತಿನ್ನಲು ಸಿಕ್ಕದಾದಾಗ  ಕಾಳನ್ನೇ ದೋಚುತ್ತಾರೆ ಎಂಬ ಭಯದಿಂದ ದಿನಸಿ ಪದಾರ್ಥಗಳನ್ನೂ ಜನ ಬಚ್ಚಿಟ್ಟಿದ್ದರು.

ಮಧ್ಯಾಹ್ನ ಒಂದುಗಂಟೆಗೆ ತನ್ನ ಹೊಟ್ಟೆ ಪಾತಾಳಕ್ಕೆ ಹೋಗಿದೆ ಎಂದು ಲುಸೆವೂ ಘೋಷಿಸಿದ. ಎಲ್ಲರ ಸ್ಥಿತಿಯೂ ಅದೇ ಆಗಿತ್ತು.  ಹಸಿವೆಯ ಕಾರಣ ಅವರ ನಡುವೆ ಈಗ ಸಂಭಾಷಣೆಯೂ ನಡೆಯುತ್ತಿರಲಿಲ್ಲ. ಆಗಾಗ ಯಾರಾದರೂ ಆಕಳಿಸಿದರೆ ಇನ್ನೊಬ್ಬರು ಅದನ್ನು ಅನುಕರಿಸುವರು.  ಎಲ್ಲರೂ ತಮ್ಮ ತಮ್ಮ ಸಾಮಾಜಿಕ ಸ್ತರಕ್ಕೆ ತಕ್ಕಂತೆ ಬಾಯನ್ನು ಅಗಲಿಸಿ ಕೈಯನ್ನು ಅಡ್ಡ ಹಿಡಿದು ಆಕಳಿಸುವರು. ಬಾಯಿಂದ ಹೊಗೆ ಮೇಲೇಳುವುದು.

ಬೆಣ್ಣೆಮುದ್ದೆ ಹಲವು ಸಲ ತಾನು ಕುಳಿತ ಪೀಠದ ಕೆಳಗೆ ತಡಕಾಡಿ ಕೊನೆಗೆ ಪೂರ್ತಿ ಬಗ್ಗಿ ಹುಡುಕಿದಳು. ಒಂದೆರಡು ಕ್ಷಣ  ತನ್ನ ಸುತ್ತಲೂ ಕುಳಿತಿದ್ದವರ ಕಡೆ ಅನುಮಾನ ಪಡುತ್ತಾ ನೋಡಿದಳು. ಅನಂತರ ಮೇಲೆದ್ದು ಸಮಾಧಾನದಿಂದ ಕುಳಿತುಕೊಂಡಳು. ಗಾಡಿಯಲ್ಲಿ ಇದ್ದವರ ಮುಖಗಳು ಸಪ್ಪೆಯಾಗಿದ್ದವು. ಲುಸೆವೂ "ಒಂದು ತುಂಡು ಹಂದಿಮಾಂಸ ಸಿಕ್ಕರೆ ಅದಕ್ಕೆ ನಾನು ಸಾವಿರ ಫ್ರಾಂಕ್ ಕೊಟ್ಟೇನು," ಎಂದ. ಅವನ ಹೆಂಡತಿ "ಸುಮ್ಮನಿರಿ, ಮಹಾ ಶ್ರೀಮಂತರು ನೀವು" ಎನ್ನುವಂತೆ ಅವನ ಕಡೆ ನೋಡಿ ಆಮೇಲೆ ಸುಮ್ಮನಾದಳು. ಅವಳಿಗೆ ವೃಥಾ ಹಣ ಪೋಲು ಮಾಡುವವರನ್ನು ಕಂಡರೆ ಆಗದು. ಕೌಂಟ್ "ನನಗೆ ಹೊರಡುವಾಗ ಒಂದಷ್ಟು ತಿಂಡಿ-ತೀರ್ಥ ತೆಗೆದುಕೊಂಡು ಬರಬೇಕು ಅಂತ ಹೊಳೆಯಲಿಲ್ಲವಲ್ಲ" ಎಂದು ಪೇಚಾಡಿದ. ಉಳಿದವರೂ ಇದಕ್ಕೆ ದನಿಗೂಡಿಸಿದರು.

ಕಾವ್ನುಡೇ ಹತ್ತಿರ ಒಂದು ಫ್ಲಾಸ್ಕಿನಲ್ಲಿ ರಮ್ ಮದ್ಯವಿತ್ತು. ಅವನು ಅದನ್ನೇ ಉಳಿದವರ ಮುಂದೆ ಚಾಚಿದ. ಲುಸೆವೂ ಹೊರತು ಬೇರೆ ಯಾರೂ ಅದನ್ನು ಮುಟ್ಟಲಿಲ್ಲ. ಲುಸೆವೂ ಎರಡು ಗುಟುಕು ಕುಡಿದು "ಮೈ ಬೆಚ್ಚಗಿಡುತ್ತೆ, ಹಸಿವೂ ಹತೋಟಿಯಲ್ಲಿರುತ್ತೆ" ಎಂದ. ಮದ್ಯ ಹೊಟ್ಟೆಗೆ ಸೇರಿದ ಮೇಲೆ ಅವನು ಒಳ್ಳೆಯ ಖಯಾಲಿಯಲ್ಲಿದ್ದ. "ಒಂದು ಹಾಡಿದೆಯಲ್ಲ? ಹಡಗಿನಲ್ಲಿ ಹೀಗೇ ಹಸಿದ ಪ್ರಯಾಣಿಕರು ಅತ್ಯಂತ ದಪ್ಪಗಿದ್ದವನನ್ನು ಆರಿಸಿ ಅವನನ್ನೇ ತಿಂದರಂತೆ! ನಾವೂ ಹಾಗೇ ಮಾಡಬಹುದು!" ಎಂದ. ಪರೋಕ್ಷವಾಗಿ ಅವನು ಬೆಣ್ಣೆಮುದ್ದೆಯನ್ನು ಕುರಿತು ಮಾತಾಡಿದ್ದು ಉಳಿದವರನ್ನು ಪೇಚಿಗೆ ಸಿಲುಕಿಸಿತು. ಅವರು ಏನೂ ಹೇಳದೆ ಸುಮ್ಮನೆ ಕುಳಿತಿದ್ದರು. ಕಾವ್ನುಡೇ ಮಾತ್ರ ನಕ್ಕ. ಸಾಧ್ವಿಯರು ಈಗ ಮಂತ್ರ ಹೇಳಿಕೊಳ್ಳುವುದನ್ನು ನಿಲ್ಲಿಸಿದ್ದರು. ತಮ್ಮ ಕೈಗಳನ್ನು ಉಡುಪಿನ ಮುಂಗೈ ಸಂದಿಗಳಲ್ಲಿ ತೂರಿಸಿಕೊಂಡು ಅವರು ನೆಲವನ್ನೇ ನಿಟ್ಟಿಸುತ್ತಾ ಮೌನವಾಗಿದ್ದರು. ಬಹುಶಃ ಸ್ವರ್ಗವು ತಮಗೆ ತಂದಿತ್ತ ದುರ್ದೈವವನ್ನು ಅವರು ನೆನೆಯುತ್ತಿದ್ದರೇನೋ.

ಮಧ್ಯಾಹ್ನದ ಮೂರು ಗಂಟೆಯಾದರೂ ಒಂದಾದರೂ ಹಳ್ಳಿ ಅವರಿಗೆ ಎದುರಾಗಲಿಲ್ಲ ಅವರ ಹಸಿವಿನ ಬೇನೆ ಇನ್ನು ತಾಳಲಾರದಾಯಿತು. ಬೆಣ್ಣೆಮುದ್ದೆ ಒಮ್ಮೆಲೇ ಕೆಳಕ್ಕೆ ಬಗ್ಗಿ ತನ್ನ ಪೀಠದ ಕೆಳಗೆ ಇಟ್ಟುಕೊಂಡಿದ್ದ ದೊಡ್ಡ ಬುಟ್ಟಿ ಹೊರಗೆ ತೆಗೆದಳು. ಅದನ್ನು ಬಿಳಿಬಣ್ಣದ ಕರವಸ್ತ್ರದಿಂದ ಮುಚ್ಚಲಾಗಿತ್ತು.  ಬುಟ್ಟಿಯಿಂದ ಅವಳು ಒಂದು ಪಿಂಗಾಣಿಯ ತಟ್ಟೆ ಮತ್ತು ಬೆಳ್ಳಿಯ ಬಟ್ಟಲನ್ನು ಹೊರಗೆ ತೆಗೆದಳು.  ನಂತರ ಒಂದು ದೊಡ್ಡ ಪಿಂಗಾಣಿಯ ಪಾತ್ರೆ ಹೊರಗೆ ಬಂತು. ಅದರಲ್ಲಿ ಎರಡು ಕೋಳಿಗಳನ್ನು ಕತ್ತರಿಸಿ ತಯಾರಿಸಿದ ಮಾಂಸದ ವ್ಯಂಜನವಿತ್ತು.  ಬುಟ್ಟಿಯಲ್ಲಿ ಇನ್ನಷ್ಟು ಒಳ್ಳೊಳ್ಳೆಯ ತಿಂಡಿಗಳು ಕಂಡವು - ಚಟ್ನಿಗಳು, ಹಣ್ಣುಗಳು, ಸಿಹಿತಿಂಡಿಗಳು, ಇನ್ನಿತರ ಆಹಾರ ಪದಾರ್ಥಗಳು. ಮೂರು ದಿನಗಳವರೆಗೆ ಎಲ್ಲೂ ಊಟ-ವಸತಿ ಸಿಕ್ಕದಿದ್ದರೆ ಬೇಕಾಗುವಷ್ಟು ಸಾಮಾಗ್ರಿಯನ್ನು ಅವಳು ತಂದಿದ್ದಳು. ಇವುಗಳ ನಡುವೆ ನಾಲ್ಕು ವೈನ್ ಶೀಶೆಗಳು ಕೂಡಾ ಕಾಣಿಸಿದವು.

ಅವಳು ಕೋಳಿಯ ಒಂದು ರೆಕ್ಕೆಯ ಭಾಗವನ್ನು ಕೈಗೆತ್ತಿಕೊಂಡು ನಾಜೂಕಾಗಿ ತಿನ್ನತೊಡಗಿದಳು. ಅದರ ಜೊತೆಗೆ "ರಾಜಭೋಗ" ಎಂದು ನಾರ್ಮಂಡಿಯಲ್ಲಿ ಪ್ರಸಿದ್ಧವಾಗಿದ್ದ ಬಿಸ್ಕತ್ತನ್ನು ಕೈಗೆತ್ತಿಕೊಂಡಳು. ಎಲ್ಲರ ದೃಷ್ಟಿಯೂ ಅವಳ ಕಡೆಗೆ ತಿರುಗಿತು. ಆಹಾರದ ಪರಿಮಳ ಎಲ್ಲೆಡೆಗೆ ಹರಡಿದಾಗ ಮೂಗಿನ ಹೊಳ್ಳೆಗಳು ಅರಳಿದವು. ಬಾಯಿಗಳಲ್ಲಿ ನೀರೂರಿತು. ಈ ವೈಯ್ಯಾರದ ಹೆಣ್ಣನ್ನು ಕುರಿತು ಉಳಿದ ಹೆಂಗಸರಿಗೆ ಇದ್ದ ಅಸಡ್ಡೆ ಒಮ್ಮೆಲೇ ಭುಗಿಲೆದ್ದಿತು - ಅವಳನ್ನು ಕೊಂದು ಅವಳ ಬೆಳ್ಳಿ ಬಟ್ಟಲು, ಬುಟ್ಟಿ ಮತ್ತಿತರ ಸರಂಜಾಮುಗಳೊಂದಿಗೆ ಅವಳನ್ನು ಗಾಡಿಯಿಂದ ಎಸೆದೇ ಬಿಡುವರೇನೋ ಎನ್ನುವ ಹಾಗೆ  ಅವರ ಮುಖದಲ್ಲಿ ರೋಷ  ಕುದಿಯಿತು. ಲುಸೆವೂ ಮಾತ್ರ ಅವಳು ಕೈಯಲ್ಲಿ ಹಿಡಿದಿದ್ದ ಕೋಳಿಯ ಮಾಂಸವನ್ನು ಕಣ್ಣಿನಿಂದಲೇ ಭಕ್ಷಿಸುತ್ತಾ "ದೈವವಶಾತ್ ಮದಾಂ ನಮಗಿಂತ ಹೆಚ್ಚು ಮುಂದಾಲೋಚನೆಯಿಂದ ಕೆಲಸ ಮಾಡಿದ್ದಾರೆ. ಕೆಲವರು ಹಾಗೇ - ಮುಂದಾಲೋಚನೆ ಹೆಚ್ಚು!" ಎಂದು ನಡುವೆ ಬಾಯಿ ಹಾಕಿದ.

ಅವಳು ಅವನತ್ತ ತಿರುಗಿ "ಸರ್, ನೀವೂ ಸ್ವಲ್ಪ ತೊಗೋತೀರಾ? ಬೆಳಗಿನ ಉಪಾಹಾರವಿಲ್ಲದೆ ಎಷ್ಟು ಹೊತ್ತು ಇರಲು ಸಾಧ್ಯ?" ಎಂದಳು. ಅವನು ಅವಳಿಗೆ ಸೆಲ್ಯೂಟ್ ಹೊಡೆದು "ಇಲ್ಲ ಎನ್ನುವಷ್ಟು ಸಂಕೋಚ ಉಳಿದಿಲ್ಲ ಮದಾಂ - ಇನ್ನು ತಡೆದುಕೊಳ್ಳುವ ಶಕ್ತಿ ನನಗಿಲ್ಲ. ಯುದ್ಧದಲ್ಲಿ ಎಲ್ಲಾ ಹೊರಟುಹೋಗುತ್ತೆ, ಅಲ್ಲವೇ ಮದಾಂ?" ಎಂದ. ಅನಂತರ "ಇಂಥ ಕಾಲದಲ್ಲೂ ಇನ್ನೊಬ್ಬರಿಗೆ  ಆಗಿ ಬರುವ ಜನ ಇದ್ದಾರಲ್ಲ ಅನ್ನುವುದೇ ಒಂದು ಸಂತೋಷ!" ಎಂದು ಸೇರಿಸಿದ.  ಅವನು ತನ್ನ ಮಂಡಿಗಳ ಮೇಲೆ ಒಂದು ದಿನಪತ್ರಿಕೆಯ ಹಾಳೆಯನ್ನು ಮಡಿಸಿಟ್ಟು ತನ್ನ ಜೋಬಿನಲ್ಲಿ ತಾನು ಯಾವಾಗಲೂ ಇಟ್ಟುಕೊಂಡಿರುತ್ತಿದ್ದ ಚೂರಿಯಿಂದ ಒಂದು ದೊಡ್ಡ ತುಂಡು ರಸಮಯವಾದ ಕೋಳಿ ಮಾಂಸವನ್ನು ಚುಚ್ಚಿ ತೆಗೆದುಕೊಂಡು ಅತ್ಯಂತ ಆನಂದದಿಂದ ಅದನ್ನು ತಿನ್ನತೊಡಗಿದಾಗ ಉಳಿದವರ ಬಾಯಿಗಳಿಂದ ವೇದನೆಯ ಉದ್ಗಾರ ಹೊರಟಿತು.

ಬೆಣ್ಣೆಮುದ್ದೆ ಈಗ ಸಾಧ್ವಿಗಳ ಕಡೆ ತಿರುಗಿ ನೀವೂ ಸ್ವಲ್ಪ ಸ್ವೀಕರಿಸಬೇಕೆಂದು ಕೇಳಿಕೊಂಡಾಗ ಅವರು ಒಮ್ಮೆಲೇ ಒಪ್ಪಿಕೊಂಡು ಧನ್ಯವಾದಗಳನ್ನು ತೊದಲಿ ತಿನ್ನುವುದರಲ್ಲಿ ಮಗ್ನರಾದರು.   ಪಕ್ಕದಲ್ಲಿ ಕುಳಿತಿದ್ದ ಕಾನ್ವುಡೇ ಕೂಡಾ ಪ್ರತಿಭಟಿಸದೇ ದಿನಪತ್ರಿಕೆಯ ಹಾಳೆಯನ್ನು ಮೂರೂ ಜನರ ಮಂಡಿಗಳ ಮೇಲೆ ಹಾಸಿ ತಾನೂ ತಿನ್ನತೊಡಗಿದ.  ಬಾಯಿಗಳು ಬಿಡುವಿಲ್ಲದೆ ಅಗಿದವು.  ನಾಲಗೆಗಳು ರುಚಿ ನೋಡಿದವು. ಗಂಟಲುಗಳು ನುಂಗಿದವು. ಲುಸೆವೂ ತಿನ್ನುವ ಕಾರ್ಯವನ್ನು ಭರದಿಂದ ಮುಂದುವರೆಸಿ  ತನ್ನ ಹೆಂಡತಿಗೆ "ನೀನೂ ಒಂದಿಷ್ಟು ತಿನ್ನಬಾರದೇ?" ಎಂದು ಮೆಲುದನಿಯಲ್ಲಿ ಪುಸಲಾಯಿಸುತ್ತಿದ್ದ. ಅವಳು ಬಹಳ ಹೊತ್ತು ಬೇಡವೆಂದು ನಿರಾಕರಿಸಿದರೂ ಕೊನೆಗೆ ಮಣಿದಳು. ಲುಸೆವೂ ತಮ್ಮ "ವಿಶಿಷ್ಟ ಸಂಗಾತಿಯ" ಕಡೆ ತಿರುಗಿ "ಮದಾಂ, ನನ್ನ ಹೆಂಡತಿಗೂ ಒಂದು ಚೂರು ಸಿಕ್ಕುತ್ತದೆಯೇ?" ಎಂದು ಕೇಳಿದ.

ಅವಳು "ಅಯ್ಯೋ ಅದಕ್ಕೇನು, ತೊಗೊಳ್ಳಿ," ಎಂದು ಮುಗುಳ್ನಗುತ್ತಾ ಅವನ ಮುಂದೆ ಭರಣಿಯನ್ನು ಹಿಡಿದಳು. ಮೊದಲ ಬುರ್ದೆವೂ ವೈನ್ ಶೀಶೆಯನ್ನು ಅವರು ತೆರೆದಾಗ ಒಂದು ಇಕ್ಕಟ್ಟು ಎದುರಾಯಿತು. ಇದ್ದದ್ದು ಒಂದೇ ಮದ್ಯದ ಬಟ್ಟಲು. ಅದರಲ್ಲೇ ಒಬ್ಬರು ಕುಡಿದ ನಂತರ ಇನ್ನೊಬ್ಬರು ಕುಡಿಯಬೇಕು. ಕಾನ್ವುಡೇ ತನ್ನ ಬಳಿ ಕುಳಿತಿದ್ದ ಆಕರ್ಷಕ ಸಂಗಾತಿ ಬಟ್ಟಲಿನ ಮೇಲೆ ಎಲ್ಲಿ ತುಟಿಗಳನ್ನಿಟ್ಟು ಎಂಜಲು ಮಾಡಿದ್ದಳೋ ಅದೇ ಜಾಗದಿಂದ ಮದ್ಯವನ್ನು ಹೀರಿದ; ಇದಕ್ಕೆ ಸಜ್ಜನಿಕೆಯಲ್ಲದೆ ಬೇರೇನು ಕಾರಣವಿರಲು ಸಾಧ್ಯ?

ಹಸಿದವನನ್ನು ಊಟದ ಪರಿಮಳ ಇನ್ನಷ್ಟು ಕೆಣಕುತ್ತದೆ. ತಮ್ಮ ಸುತ್ತಲೂ ಕುಳಿತಿದ್ದವರು ತಿನ್ನಲು ಪ್ರಾರಂಭಿಸಿದಾಗ ಕೌಂಟ್ ಮತ್ತು ಅವನ ಮಡದಿಯ ಪಾಡು ಏನಾಗಿರಬೇಡ? ಕೌಂಟೆಸ್ ಅಷ್ಟು ಹೊತ್ತು ತಡೆದುಕೊಂಡಿದ್ದವಳು ಒಮ್ಮೆಲೇ ಜೋರಾಗಿ ನಿಟ್ಟುಸಿರು ಬಿಟ್ಟಳು. ಎಲ್ಲರ ಮುಖಗಳು ಅವಳ ಕಡೆಗೆ ತಿರುಗಿದವು.   ಅವಳು ಹಿಮದಂತೆ ಬಿಳಿಚಿಕೊಂಡು ಕುಳಿತಲ್ಲೇ ಮೂರ್ಛೆ ಹೋಗಿದ್ದಳು. ಅವಳ ಪತಿರಾಯ  ವಿಪರೀತ ಗಾಬರಿಯಾಗಿ ಏನು ಮಾಡಲೂ ತೋರದೆ ಒದ್ದಾಡಿದ. ಸಾಧ್ವಿಯರಲ್ಲಿ ಹಿರಿಯಳಾದವಳು ಬೆಣ್ಣೆಮುದ್ದೆಯ ಬಟ್ಟಲಿನಲ್ಲಿ ಮದ್ಯವನ್ನು ಬಗ್ಗಿಸಿಕೊಂಡು ಮೂರ್ಛಿತಳಾದವಳ ಬಾಯಲ್ಲಿ ಒಂದಷ್ಟು ಸುರಿದಾಗ ಅವಳು ಚೇತರಿಸಿಕೊಂಡಳು. ಸಣ್ಣ ದನಿಯಲ್ಲಿ "ನನಗೆ ಏನೂ ಆಗಿಲ್ಲ" ಎಂದು ಉಳಿದವರ ಕಡೆ ಪೆಚ್ಚಾಗಿ ನೋಡಿದಳು.  ಹಿರಿಯ ಸಾಧ್ವಿ  ಅವಳಿಗೆ ಒತ್ತಾಯದಿಂದ ಒಂದು ಇಡೀ ಬಟ್ಟಲು  ವೈನ್ ಕುಡಿಸಿ "ಹಸಿವೆಗೆ ಬವಳಿ ಬಂತು, ಇನ್ನೇನಿಲ್ಲ" ಎಂದು ಸಮಾಧಾನ ಹೇಳಿದಳು.

ಬೆಣ್ಣೆಮುದ್ದೆ ನಾಚಿಕೆಯಿಂದ ಕೆಂಪಾಗಿ ಉಪವಾಸ ಕುಳಿತಿದ್ದ ನಾಲ್ವರನ್ನು ಕುರಿತು "ಕ್ಷಮಿಸಿ, ನಿಮಗೆ ಕೊಡಲು ನನಗೆ ಧೈರ್ಯ ಬರಲಿಲ್ಲ" ಎಂದಳು. ಅವರು ಏನಾದರೂ ಕಟಕಿಯಾಡುವರೇನೋ ಎಂಬ ಭಯದಿಂದ ಸುಮ್ಮನಾದಳು.  ಲುಸೇವೂ   ಮಾತ್ರ  "ಅಯ್ಯೋ! ಇಂಥ ಹೊತ್ತಿನಲ್ಲಿ ಎಲ್ಲರೂ ಸೋದರ-ಸೋದರಿಯರೇ! ಒಬ್ಬರಿಗೊಬ್ಬರು ಆಗಬೇಕಾದದ್ದೇ! ನೀವು ಹೆಂಗಸರು ಇನ್ನು ನಿಮ್ಮ ಬಿಂಕ ಸಾಕು ಮಾಡಿ. ತೊಗೊಳ್ಳಿ, ಬಾಯಿಗೆ ಹಾಕಿಕೊಳ್ಳಿ. ಇವತ್ತು ರಾತ್ರಿ ನಮ್ಮ ಗತಿ ಏನಾಗುತ್ತದೋ? ತಂಗಲು ಒಂದು ಮನೆಯಾದರೂ ಸಿಕ್ಕುತ್ತದೋ ಇಲ್ಲವೋ? ನಾವು ಹೀಗೆ ನಿಧಾನವಾಗೇ ಸಾಗಿದರೆ ನಾಳೆ ಮಧ್ಯಾಹ್ನದವರೆಗೆ  ಟೋಟಸ್ ತಲುಪಿದರೆ ಹೆಚ್ಚು!" ಎಂದ. ಹೆಂಗಸರು ಇನ್ನೂ "ಹೂಂ" ಎನ್ನಲು ಧೈರ್ಯ ಸಾಲದೇ ಸುಮ್ಮನಿದ್ದರು. ಅವನು ಈಗ ಭಯಭೀತಳಾಗಿದ್ದ ಹುಡುಗಿಯ ಕಡೆ ತಿರುಗಿ ಮಹಾತ್ಯಾಗ  ಮಾಡುವವರ ಧ್ವನಿಯಲ್ಲಿ "ನಾವು ಕೃತಜ್ಞತೆಯಿಂದ ಸ್ವೀಕರಿಸುತ್ತೇವೆ, ಮದಾಂ" ಎಂದ.


ನಾಚಿಕೆ, ಸಂಕೋಚ ಇವೆಲ್ಲಾ ಸಂಯಮದ ಕಟ್ಟೆ ಒಡೆಯುವವರೆಗೂ ಅಷ್ಟೆ. ಈಗ ಎಲ್ಲರೂ ನಿಸ್ಸಂಕೋಚವಾಗಿ ಊಟಕ್ಕೆ ತಯಾರಾದರು. ಬುಟ್ಟಿಯನ್ನು ಬಿಚ್ಚಲಾಯಿತು. ಅಲ್ಲಿ ಬಾತುಕೋಳಿಯ ಯಕೃತ್ತಿನಿಂದ ತಯಾರಿಸಿದ ವ್ಯಂಜನ, ಲಾರ್ಕ್ ಹಕ್ಕಿಗಳ ಮಾಂಸದ ವ್ಯಂಜನ,  ಸಕ್ಕರೆ ಪಾಕದಲ್ಲಿ ಅದ್ದಿಟ್ಟ ಪೇರ್ ಹಣ್ಣುಗಳು, ಗಟ್ಟಿ ಬ್ರೆಡ್ ನ ಒಂದು ಪೂರ್ತಿ ಕೊಂತ, ತೆಳ್ಳನೆಯ ಬಿಸ್ಕತ್ತುಗಳು, ಎಲ್ಲಾ ಹೆಂಗಸರಂತೆ ಬೆಣ್ಣೆಮುದ್ದೆಗೂ ಪ್ರಿಯವಾದ ತೊಂಡೆಕಾಯಿ ಮತ್ತು ಈರುಳ್ಳಿಯ ಉಪ್ಪಿನಕಾಯಿಯ ಒಂದು ಜಾಡಿ - ಇವೆಲ್ಲಾ ಇದ್ದವು.

(ಮುಂದಿನ ಭಾಗ ಇಲ್ಲಿ ಓದಿ)
(c) C.P. Ravikumar, Kannada translation of 'Ball-of-Fat' (Boule de Suif) by Guy De Maupassant.
I acknowledge the English translation which I have used from here. I also acknowledge the images that I have used from different sources - these are all identified as reusable by Google.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)