ಮುಪಾಸಾ - ಒಂದು ವ್ಯಕ್ತಿ ಚಿತ್ರ

ಮುಪಾಸಾ - ಒಂದು ವ್ಯಕ್ತಿ ಚಿತ್ರ 


ಸಿ ಪಿ ರವಿಕುಮಾರ್ 
ಮಿಲಿ ಜೋಲಾ ನಂತರ ಫ್ರೆಂಚ್ ಸಾಹಿತ್ಯದಲ್ಲಿ ಪ್ರಸಿದ್ಧಿಯ ತುದಿಯನ್ನೇರಿದವನು ಸಣ್ಣಕತೆಗಾರ ಗಿ ಡಿ ಮುಪಸಾ. ಮುನ್ನೂರಕ್ಕೂ ಹೆಚ್ಚು ಸಣ್ಣಕತೆಗಳನ್ನು ಮುಪಸಾ ಬರೆದ. ಸಣ್ಣಕತೆಗಳ ಸಾಮ್ರಾಜ್ಯದ ಅನಭಿಷಕ್ತ ಸಾಮ್ರಾಟ ಎಂದು ಅವನನ್ನು ಕರೆಯುತ್ತಾರೆ.  ಸಣ್ಣಕತೆಗಳಲ್ಲದೆ ಸುಮಾರು ಇನ್ನೂರು ಲೇಖನಗಳು, ಆರು ಕಾದಂಬರಿಗಳು ಮತ್ತು ಮೂರು ಪ್ರವಾಸಕಥನಗಳು ಇವನ ಲೇಖನಿಯಿಂದ ಹೊರಬಿದ್ದವು.

ಮುಪಾಸಾ ಹುಟ್ಟಿದ್ದು ಶ್ರೀಮಂತ ಕುಟುಂಬದಲ್ಲಿ (ಆಗಸ್ಟ್ 5, 1850). ತಾಯಿ ಲಾರಾ ಅಂದಿನ ಪ್ರಸಿದ್ಧ ಲೇಖಕ ಫ್ಲಾಬರ್ಟ್ ನ ಬಾಲ್ಯ ಸ್ನೇಹಿತೆ. ಹೀಗಾಗಿ  ಮನೆಯಲ್ಲಿ ಸಾಹಿತ್ಯಕ ವಾತಾವರಣವಿತ್ತು.  ಆದರೆ ತಂದೆ ಗುಸ್ತಾವ್ ಗೆ ಲೌಕಿಕ ವ್ಯವಹಾರಗಳಲ್ಲಿ  ಹೆಚ್ಚು ಆಸಕ್ತಿ; ಸಾಹಿತ್ಯ-ಸಂಸ್ಕೃತಿಗಳ ಕಡೆ ಅಸಡ್ಡೆ. ಹೀಗಾಗಿ ಮುಪಸಾನ ತಂದೆ-ತಾಯಿ ಕ್ರಮೇಣ ದೂರವಾದರು. ಅವನು ಹದಿಮೂರು ವರ್ಷದ ಬಾಲಕನಾಗಿದ್ದಾಗ ಅವರು ವಿಚ್ಛೇದನ ಪಡೆದರು. ಬೋರ್ಡಿಂಗ್ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯಿತು.  ಬುದ್ಧಿವಂತ ಎಂಬ ಹೆಸರು ಗಳಿಸಿದರೂ ಅಸಭ್ಯ ಪದ್ಯ ಬರೆದ ಕಾರಣಕ್ಕೆ ಶಾಲೆಯಿಂದ ಮುಪಸಾನನ್ನು ಉಚ್ಚಾಟನೆ ಮಾಡಲಾಯಿತು.  ಆಗ ಅವನ ತಾಯಿ ರೂವೆನ್ ಪಟ್ಟಣಕ್ಕೆ ಬಂದು ಮಕ್ಕಳನ್ನು ಬೇರೊಂದು ಶಾಲೆಗೆ ದಾಖಲು ಮಾಡಿದಳು.

ತಾಯಿಯ ಬಲವಂತದ ಕಾರಣ ಹದಿನೇಳು ವರ್ಷದವನಾಗಿದ್ದಾಗ ಮುಪಸಾ ಲೇಖಕ ಫ್ಲಾಬರ್ಟ್ ನನ್ನು ಭೇಟಿಯಾದ.  ಮುಪಸಾ ಹದಿನೆಂಟರ ಹೊಸ್ತಿಲಲ್ಲಿದ್ದಾಗ ಒಂದು ಘಟನೆ ನಡೆಯಿತು. ಈಜಲು ನಡೆಗೆ ಹೋದಾಗ ಅಲ್ಲಿ ಸುಳಿಗೆ ಸಿಕ್ಕಿಹಾಕಿಕೊಂಡಿದ್ದ ಒಬ್ಬ ಮನುಷ್ಯನನ್ನು ಅವನು ಕಾಪಾಡಿದ. ಆ ಮನುಷ್ಯ ಸ್ವಿನ್ ಬರ್ನ್ ಎಂಬ ಇಂಗ್ಲೀಷ್ ಕವಿ. ಕೃತಜ್ಞನಾದ ಕವಿ ಹುಡುಗನನ್ನು ಮನೆಗೆ ಆಹ್ವಾನಿಸಿದ.  ಕವಿಯ ವೈಭವೋಪೇತ ಜೀವನ ಮತ್ತು ವಿಕೃತ ಹವ್ಯಾಸಗಳನ್ನು ಕಂಡ ಯುವಕ ಮುಪಸಾ ಪ್ರಭಾವಿತನಾದ. ಅದೇ ವರ್ಷ ಬ್ಯೂರೆ ಎಂಬ ಇನ್ನೊಬ್ಬ ಬುದ್ಧಿಜೀವಿಯ ಪರಿಚಯವಾಯಿತು; ಆತ ನಗರದ ಗ್ರಂಥಾಲಯದ ಪಾಲಕ.  ಈ ಘಟನೆಗಳು ಮುಪಸಾನಿಗೆ ಬರವಣಿಗೆಯಲ್ಲಿ ಆಸಕ್ತಿ ಹುಟ್ಟಲು ಕಾರಣವಾದವು.

ಡಿಗ್ರಿ ಪರೀಕ್ಷೆ ಮುಗಿಸಿ ಪ್ಯಾರಿಸ್ ನಗರಕ್ಕೆ ಕಾನೂನು ಶಿಕ್ಷಣ ಪಡೆಯಲು ಬಂದ ಮುಪಸಾ ತಂದೆಯ ಜೊತೆ ವಾಸ ಮಾಡಲು ಪ್ರಾರಂಭಿಸಿದ.   ಆಗ ಫ್ರಾನ್ಸ್ ಜರ್ಮನಿಯ ವಿರುದ್ಧ ಯುದ್ಧ ಸಾರಿತು (1870 ಜುಲೈ). ಅವನು ಇಪ್ಪತ್ತು ವರ್ಷದ ತರುಣ. ಯುದ್ಧದಲ್ಲಿ ಭಾಗವಹಿಸಲು ಅವನನ್ನು ಲೆ ಆವ್ರೆ ಎಂಬ ಕಡೆ ಕಳಿಸಿದರು. ಸೇನೆಯಲ್ಲಿ ಕಾರಕೂನನಾಗಿ ಕೆಲಸ ಮಾಡಿದ.  ಯುದ್ಧದಲ್ಲಿ ಫ್ರಾನ್ಸ್  ಸೋಲತೊಡಗಿತು.  ಶತ್ರುಸೇನೆ ನಾರ್ಮಂಡಿ ಪ್ರದೇಶವನ್ನು ಆಕ್ರಮಿಸಿಕೊಂಡಿತು.  ಮುಪಸಾ ಯಾವ ಸೇನೆಯ ತುಕಡಿಯಲ್ಲಿ ಕೆಲಸಕ್ಕಿದ್ದನೋ ಅದು ಪ್ಯಾರಿಸ್ ನಗರಕ್ಕೆ ಪಲಾಯನ ಹೂಡಿತು. ಈ ಅವಧಿಯಲ್ಲಿ ಯುದ್ಧದ ಆಗುಹೋಗುಗಳನ್ನು ಮುಪಸಾ ಹತ್ತಿರದಿಂದ ನೋಡಿದ. ಇವು ಅವನ ಕತೆಗಳಿಗೆ ಸಾಮಾಗ್ರಿ ಒದಗಿಸಿದವು.  ಕೊನೆಗೂ ಯುದ್ಧ ಮುಗಿದು ಶಾಂತಿಸಂಧಾನವಾಗುವ ಹೊತ್ತಿಗೆ ಅವನ ಜೀವನ ಪಲ್ಲಟವಾಗಿತ್ತು. ತಂದೆ ನಡೆಸುತ್ತಿದ್ದ ವ್ಯಾಪಾರ ಯುದ್ಧದಲ್ಲಿ ನಾಶವಾಗಿತ್ತು.  ಹೀಗಾಗಿ ಶಿಕ್ಷಣ ಮುಂದುವರೆಸುವುದು ಅಸಾಧ್ಯವಾಯಿತು.  ಇಪ್ಪತ್ತೆರಡರ ತರುಣ ಸಿವಿಲ್ ಸರ್ವಿಸ್ ನಲ್ಲಿ ಸಂಬಳವಿಲ್ಲದೆ ಕಾರಕೂನನಾಗಿ ಕೆಲಸ ಪ್ರಾರಂಭಿಸಿದ.

ಮುಪಸಾ ಹತ್ತಿರ ಹಣವಿರಲಿಲ್ಲ. ಒಂಟಿತನ ಅವನನ್ನು ಕಾಡುತ್ತಿತ್ತು.  ಸಾನ್ ನದಿಯಲ್ಲಿ ವಿಹಾರ ಮಾಡುವುದನ್ನು ಬಿಟ್ಟರೆ ಬೇರೆ ಯಾವ ಮನರಂಜನೆಯೂ ಇರಲಿಲ್ಲ.  ಬೇಸರ ಕಳೆಯಲು ಅವನು ಬರವಣಿಗೆಯಲ್ಲಿ ತೊಡಗಿದ.  ಲೇಖಕರಾದ ಫ್ಲಾಬರ್ಟ್ ಮತ್ತು ಜೋಲಾ ಅವರ ಪ್ರಭಾವವಲಯದಲ್ಲಿ ಮುಪಸಾ ಬೆಳೆದ.  ಯುವಲೇಖಕ ಬರೆದದ್ದನ್ನೆಲ್ಲಾ ತಾಳ್ಮೆಯಿಂದ ಓದಿ ಫ್ಲಾಬರ್ಟ್ ವಿಮರ್ಶಿಸಿದ. ಉತ್ತಮ ಸಾಹಿತ್ಯದ ಗುಣಗಳೇನು ಎಂಬುದನ್ನು ಶಿಷ್ಯನಿಗೆ ಧಾರೆ ಎರೆದ.  ಈ ಅವಧಿಯಲ್ಲಿ ಮುಪಸಾ  ಬರೆದ ಒಂದು ಅಸಭ್ಯ ಕವಿತೆ ವಿವಾದಕ್ಕೆ ಒಳಗಾಯಿತು!  ಫ್ಲಾಬರ್ಟ್ ಈ ಕವಿತೆಯನ್ನು ಕುರಿತು ತನ್ನ ಶಿಷ್ಯನನ್ನು ವಹಿಸಿಟ್ಟುಕೊಂಡು ಬರಬೇಕಾಯಿತು!

ಜೋಲಾ ಮತ್ತು ಅವನ ಪ್ರಭಾವಕ್ಕೆ ಸಿಲುಕಿದ ಯುವಲೇಖಕರು ಸೇರಿ ಒಂದು ಕಥಾಸಂಗ್ರಹ ಪ್ರಕಟಿಸಿದರು. ಇದರ ಹೆಸರು "ಯುದ್ಧಕಾಲದ ಕತೆಗಳು." ಮುಪಸಾನ ಮೊದಲ ಕತೆ "ಬೆಣ್ಣೆಯ ಮುದ್ದೆ" (Boule de Suif) ಇದರಲ್ಲಿ ಪ್ರಕಟವಾಯಿತು. ಕತೆ ಒಮ್ಮೆಲೇ ಪ್ರಖ್ಯಾತಿ ಪಡೆದುಕೊಂಡಿತು.  ಫ್ಲಾಬರ್ಟ್ ಈ ಕತೆಯನ್ನು "ಎಂದಿಗೂ ಉಳಿಯುವ ಮೇರುಕೃತಿ" ಎಂದು ವರ್ಣಿಸಿದ. ಒಮ್ಮೆಲೇ ಮುಪಸಾನ ಕೀರ್ತಿ ಮೇಲೇರಿತು. ಅವನ ಕತೆಗಳಿಗೆ ಅಪಾರ ಬೇಡಿಕೆ ಬರತೊಡಗಿತು. ಮೇಲ್ವರ್ಗದ ಓದುಗರಿಗೆ ಅವನ ಕತೆಗಳು ರುಚಿಸಿದವು.  ಬರವಣಿಗೆಯಿಂದಲೇ ಜೀವನ ಮಾಡಬಹುದು ಎಂದು ಮುಪಸಾ ತನ್ನ ಕೆಲಸ ಬಿಟ್ಟ.  ಅವನು ವರ್ಷಕ್ಕೆ ಎರಡು, ಕೆಲವೊಮ್ಮೆ ನಾಲ್ಕು, ಕಥಾ ಸಂಕಲನಗಳನ್ನು ಪ್ರಕಟಿಸಿದ! ಮೊದಲ ಸಂಗ್ರಹ ಪ್ರಕಟವಾದಾಗ (1881) ಎರಡೇ ವರ್ಷಗಳಲ್ಲಿ ಅದು ಹನ್ನೆರಡು ಮುದ್ರಣ ಕಂಡಿತು. ಅವನ ಮೊದಲ ಕಾದಂಬರಿಯ  ಇಪ್ಪತ್ತೈದು ಸಾವಿರ ಪ್ರತಿಗಳು ಒಂದೇ ವರ್ಷದಲ್ಲಿ ಖರ್ಚಾದವು. ಅವನ ಎರಡನೇ ಕಾದಂಬರಿ ನಾಲ್ಕು ತಿಂಗಳಲ್ಲಿ ಮೂವತ್ತೇಳು ಮುದ್ರಣ ಕಂಡಿತು!



ತನ್ನ ಕತೆಗಳು ತಂದುಕೊಟ್ಟ ಹಣವನ್ನು ಮುಪಸಾ ನೀರಿನ ಹಾಗೆ ಪೋಲು ಮಾಡಿದ - ಹೆಣ್ಣುಗಳ ಮೇಲೆ, ಮದ್ಯದ ಮೇಲೆ, ತನ್ನ ಪ್ರೀತಿಯ ಹವ್ಯಾಸವಾದ ದೋಣಿವಿಹಾರದ ಮೇಲೆ. ಅವನು ಸಿಫಿಲಿಸ್ ರೋಗಕ್ಕೆ ತುತ್ತಾದದ್ದು ಈ ಅವಧಿಯಲ್ಲೇ.  ಅವನ ಕತೆಯಲ್ಲಿ ಜರ್ಮನ್ ಯೋಧರ ಸಂಗದಲ್ಲಿ ಈ ರೋಗಕ್ಕೆ ತುತ್ತಾದ ಒಬ್ಬ ವೇಶ್ಯೆಯ ವಿಷಯ ಬರುತ್ತದೆ.

ಅವನ ಬರವಣಿಗೆ ಮುಂದುವರೆಯಿತು. ಆಗ ಹೊಸಪ್ರಕಾರವಾಗಿದ್ದ ಧಾರಾವಾಹಿ ಕಾದಂಬರಿಗಳು ಅವನಿಗೆ ಇನ್ನಷ್ಟು ಪ್ರಸಿದ್ಧಿ ತಂದುಕೊಟ್ಟವು.  ಈ ಕಾಲದಲ್ಲಿ ಮುಪಸಾನ ನೆಚ್ಚಿನ ಸೇವಕನೊಬ್ಬ ತನ್ನ ದಣಿ ಆಗಾಗ ವಿಕೃತವಾಗಿ ವರ್ತಿಸುವುದನ್ನು ಗಮನಿಸಿದ.  ಮುಪಸಾನಿಗೆ ಈ ಕಾಲದಲ್ಲಿ ಮನೋರೋಗಗಳ ಬಗ್ಗೆ ಅತೀವ ಆಸಕ್ತಿ ಮೂಡಿತು; ಅವುಗಳನ್ನು ಕುರಿತು ಅವನು ಸಾಕಷ್ಟು ಓದಿದ.

ರೋಗಗಳ ಕಾರಣ "ಜಗಳಗಂಟ" ಎಂಬ ಪ್ರತೀತಿ ಬರುವ ಮಟ್ಟಿಗೆ ಅವನ ನಡವಳಿಕೆ ಬದಲಾಯಿತು. 1887 ಇಸವಿಯಲ್ಲಿ ಪ್ಯಾರಿಸ್ ನಗರದಲ್ಲಿ ಐಫೆಲ್ ಟವರ್ ನಿರ್ಮಾಣದ ಬಗ್ಗೆ ಸರಕಾರ ಯೋಚಿಸುತ್ತಿತ್ತು.  ಇದನ್ನು ವಿರೋಧಿಸಿ ಮುಪಸಾ ಲೆ ಟೆಂಪ್ಸ್  ದಿನಪತ್ರಿಕೆಯ ಸಂಪಾದಕರಿಗೆ ಪತ್ರ ಬರೆದ.  "ಐಫೆಲ್ ಟವರ್ ನಿರ್ಮಾಣ ಆಧುನಿಕ ಅಸಭ್ಯತೆಯ ಸಂಕೇತ" ಎಂದು ಪ್ರತಿಭಟಿಸಿದ.  ಆಗ ಅವನ ವಾರ್ಷಿಕ ವರಮಾನ ಒಂದೂಕಾಲು ಲಕ್ಷ ಫ್ರಾಂಕ್ ಗಳಷ್ಟಿತ್ತು.

1888. ಮುಪಸಾನ ಆರೋಗ್ಯ ಹದಗೆಟ್ಟಿತು.  ದೈಹಿಕ ರೋಗಗಳಲ್ಲದೆ ಮಾನಸಿಕ ರೋಗಕ್ಕೂ ಅವನಿಗೆ ಚಿಕಿತ್ಸೆ ಕೊಡಲಾಯಿತು.  ಅವನ ತಮ್ಮ ಹಾರ್ವಿಯೂ ಮನೋರೋಗಕ್ಕೆ ತುತ್ತಾಗಿ ಮಾನಸಿಕ ಚಿಕಿತ್ಸಾಲ್ಯದಲ್ಲೇ ಮೃತನಾದ.  ತಮ್ಮನ ಸಾವು ಅವನನ್ನು ಅಲ್ಲಾಡಿಸಿತು. ಮನೋರೋಗ ಇನ್ನಷ್ಟು ಉಲ್ಬಣಿಸಿತು.  ಎಲ್ಲರೊಂದಿಗೂ ಜಗಳವಾಡಿದ. ಗದ್ದಲ ಮಾಡುತ್ತಾರೆಂದು ನೆರೆಯವರ ಮೇಲೆ ಮೊಕದ್ದಮೆ. ಪ್ರಕಾಶಕ ಜಾಹೀರಾತಿನಲ್ಲಿ ತನ್ನ ಅನುಮತಿಯಿಲ್ಲದೆ ತನ್ನ ಚಿತ್ರ ಬಳಸಿದ ಎಂಬ ಕಾರಣಕ್ಕೆ ಅವನೊಂದಿಗೆ ಮನಸ್ತಾಪ. ತನ್ನ ನಾಟಕದ ನಿರ್ದೇಶಕನ ಜೊತೆ ಜಗಳ.

1892. ಅವನ ಆರೋಗ್ಯ ತೀರಾ ಹದಗೆಟ್ಟಿತು. ವೈದ್ಯರ ಸಲಹೆಯನ್ನು ಪಾಲಿಸದೆ ಅವನು ಬರವಣಿಗೆಯಲ್ಲಿ ತೊಡಗುತ್ತಿದ್ದುದು ಇದಕ್ಕೆ ಕಾರಣವಾಯಿತು.  ಸಿಫಿಲಿಸ್ ರೋಗ ಉಲ್ಬಣವಾಗಿತ್ತು. ಬಾಧೆ  ತಾಳಲಾರದೇ ಮುಪಸಾ ಆತ್ಮಹತ್ಯೆಗೆ ಪ್ರಯತ್ನಿಸಿದ.   1893 ಜುಲೈ ಆರು ಮುಪಸಾ ಕೊನೆಯುಸಿರೆಳೆದ. ಅವನ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಲೇಖಕ ಜೋಲಾ ಮಾತಾಡಿದ. 1897 ಇಸವಿಯಲ್ಲಿ ಮುಪಸಾನ ಶಿಲ್ಪಾಕೃತಿಯನ್ನು ಪ್ಯಾರಿಸ್ ಉದ್ಯಾನವೊಂದರಲ್ಲಿ ಸ್ಥಾಪಿಸಲಾಯಿತು. 1900 ಇಸವಿಯಲ್ಲಿ ರೂವೆನ್ ಪಟ್ಟಣದಲ್ಲಿ ಅವನಿಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲಾಯಿತು.


ಆಧಾರ

[1] ಇಂಗ್ಲಿಷ್  ವಿಕಿಪೀಡಿಯಾ
[2] ಡೇವಿಡ್ ಕವರ್ಡ್ ಅವರು "ಎ ಡೇ ಇನ್ ದ ಕಂಟ್ರಿ ಅಂಡ್ ಅದರ್ ಸ್ಟೋರೀಸ್" (ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್, 1990) ಪುಸ್ತಕಕ್ಕೆ ಬರೆದ ಮುನ್ನುಡಿ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)