ಬೆಣ್ಣೆ ಮುದ್ದೆ - ಭಾಗ ೭

ಬೆಣ್ಣೆಮುದ್ದೆ - ಭಾಗ ೭

ಮೂಲ ಫ್ರೆಂಚ್ ಕತೆ - ಗಿ ಡಿ ಮುಪಸಾ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 

(ಆರನೇ ಭಾಗ ಇಲ್ಲಿ ಓದಿ)

ಈಗ ಎಲ್ಲರ ಬಾಯಿ ಕಟ್ಟಿಹೋಯಿತು. ಅಪಮಾನದ ಚಾಟಿ ಏಟು ಜೋರಾಗಿತ್ತು. ಕಾನ್ವುಡೇ ತನ್ನ ಮುಷ್ಟಿಯನ್ನು ಮೇಜಿಗೆ ಕೋಪದಿಂದ ಗುದ್ದಿದ. ಆ ರಭಸಕ್ಕೆ ಅವನ ಗಾಜಿನ ಲೋಟ ಕೆಳಗುರುಳಿ ಚೂರುಚೂರಾಯಿತು. ಎಲ್ಲರೂ ಜರ್ಮನ್ ಅಧಿಕಾರಿಗೆ ಶಾಪ ಹಾಕಿದರು. ಕೋಪದಲ್ಲಿ ಅವರು ಒಗ್ಗಟ್ಟಾದರು. ಜರ್ಮನ್ ಅಧಿಕಾರಿ ತಮ್ಮನ್ನೇ ವ್ಯಭಿಚಾರಕ್ಕೆ ಆಹ್ವಾನಿಸಿದಂತೆ ಅವರಿಗೆ ಅನ್ನಿಸಿತು. ಇದೆಂಥ ಬರ್ಬರ ಪದ್ಧತಿ ಎಂದು ಕೌಂಟ್ ಹರಿಹಾಯ್ದ. ಹೆಂಗಸರು ಅವಳನ್ನು ಸಮಾಧಾನ ಪಡಿಸಿ ಅವಳೊಂದಿಗೆ ಕರುಣೆ-ಸಹಾನುಭೂತಿಗಳೊಂದಿಗೆ ನಡೆದುಕೊಂಡರು. ಊಟದ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಸಾಧ್ವಿಗಳು ಮುಖ ಕೆಳಕ್ಕೆ ಹಾಕಿ ಮೌನವಾಗಿ ಕುಳಿತರು.

ಕೋಪದ ಅಲೆ ಶಮನವಾದ ನಂತರ ಅವರು ಊಟಕ್ಕೆ ಕುಳಿತರು. ಯಾರೂ ಹೆಚ್ಚು ಮಾತಾಡಲಿಲ್ಲ. ಎಲ್ಲರೂ ಆಲೋಚನೆಯಲ್ಲಿ ಮಗ್ನರಾಗಿದ್ದರು.

ಊಟವಾದ ನಂತರ ಹೆಂಗಸರು ಕೋಣೆಗಳಿಗೆ ತೆರಳಿದರು. ಗಂಡಸರು ಹೊಗೆಸೊಪ್ಪು ಸೇದುತ್ತಾ ಅಲ್ಲೇ ಇಸ್ಪೀಟ್ ಆಟಕ್ಕೆ ಕುಳಿತು ವಸತಿಗೃಹದ ಮಾಲೀಕನನ್ನೂ ಕೂಡಿಸಿಕೊಂಡರು. ಜರ್ಮನ್ ಅಧಿಕಾರಿಯನ್ನು ಗೆಲ್ಲುವುದು ಹೇಗೆ ಎಂಬ ಬಗ್ಗೆ  ಅವನಿಂದ ಏನಾದರೂ  ಸುಳಿವು ಸಿಕ್ಕಬಹುದೇ ಎಂಬುದು ಅವರ ಆಶಯ. ಆದರೆ ಅವನಿಗೆ ಮಾತಾಡುವುದಕ್ಕಿಂತ ಆಟದಲ್ಲಿ ಆಸಕ್ತಿ. ಅವರ ಪ್ರಶ್ನೆಗಳನ್ನು ಕಿವಿಗೇ ಹಾಕಿಕೊಳ್ಳದೆ ಮಾತುಮಾತಿಗೂ "ಆಟದ ಕಡೆ ಗಮನ ಕೊಡಿ, ಆಟ!" ಎಂದು ಪುನರುಚ್ಚರಿಸುತ್ತಿದ್ದ.  ಆಟದಲ್ಲಿ ಮುಳುಗಿದಾಗ ಅವನು ಕ್ಯಾಕರಿಸುವುದನ್ನೂ ಮರೆತುಬಿಟ್ಟ. ಅವನ ಎದೆಗೂಡಿನಿಂದ ಉಬ್ಬುಸದ ಚಿತ್ರವಿಚಿತ್ರವಾದ ಧ್ವನಿಗಳು ಕೇಳುತ್ತಿದ್ದವು. ಕೆಲವು ಸಲ ಒಲೆಯ ಮೇಲಿಟ್ಟ ಕೆಟಲ್ ಸಿಳ್ಳೆ ಹಾಕಿದಂತೆ, ಕೆಲವು ಸಲ ಕೋಳಿ ಕೂಗಿದಂತೆ.

ಕೋಣೆಗೆ ತೆರಳಿದ್ದ ಮಾಲೀಕನ ಹೆಂಡತಿ ರಾತ್ರಿ ಅವನನ್ನು ಹುಡುಕಿಕೊಂಡು ಬಂದಾಗಲೂ ಅವನು ಅವಳೊಂದಿಗೆ ಹೋಗಲಿಲ್ಲ. ಅವಳು ಬೆಳಗ್ಗೆ ಬೇಗ ಏಳುವ ಸ್ವಭಾವದವಳಾದ್ದರಿಂದ ಇವನಿಗೆ ಕಾಯದೆ ಹೊರಟುಹೋದಳು. ಇವನಾದರೋ ಗೂಬೆಯಂತೆ  ರಾತ್ರಿಯ ಹೊತ್ತು ಚಟುವಟಿಕೆಯಿಂದ ಇರುವವನು. "ಕೋಳಿಮಾಂಸದ ತುಂಡುಗಳನ್ನು ಬೆಂಕಿಯ ಮುಂದೆ ಇಟ್ಟಿರು, ನಾನು ಆಮೇಲೆ ಬರುತ್ತೇನೆ! " ಎಂದು ಹೆಂಡತಿಗೆ ಕೂಗಿ ಹೇಳಿದ. ಇವನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಗೊತ್ತಾದಾಗ ಪ್ರಯಾಣಿಕರಿಗೆ ಆಟದಲ್ಲಿ ಆಸಕ್ತಿ ಉಳಿಯಲಿಲ್ಲ.  "ಬಹಳ ಹೊತ್ತಾಯಿತು, ನಿದ್ದೆ ಬರುತ್ತಿದೆ" ಎಂದು ಆಟ ಮುಗಿಸಿ ಎದ್ದರು.


ಮರುದಿನ ಎಲ್ಲರೂ ಬೆಳಗ್ಗೆ ಬೇಗ ಎದ್ದರು. ಇಂದಾದರೂ ಇಲ್ಲಿಂದ ಹೊರಡಬಹುದೇನೋ ಎಂಬ ಅವ್ಯಕ್ತ ಆಸೆ ಅವರ ಮನಸ್ಸಿನಲ್ಲಿತ್ತು; ಇನ್ನೊಂದು ದಿನ ಈ ದರಿದ ವಸತಿಗೃಹದಲ್ಲಿ ಕಳೆಯಬೇಕಲ್ಲಾ ಎಂಬ ಬೇಸರವನ್ನು ಅದು ಇಮ್ಮಡಿಗೊಳಿಸಿತು. ದುರ್ದೈವವೇ! ಹೊರಗೆ ಬಂದು ನೋಡಿದಾಗ ಗಾಡಿಗೆ ಕುದುರೆಗಳನ್ನು ಇನ್ನೂ ಕಟ್ಟಿರಲಿಲ್ಲ.  ನೆನ್ನೆಯಂತೆ ಇಂದೂ ಚಾಲಕ ನಾಪತ್ತೆಯಾಗಿದ್ದ. ಬೇರೇನೂ ತೋರದೆ ಅವರು ಗಾಡಿಯ ಸುತ್ತ ಪ್ರದಕ್ಷಿಣೆ ಹಾಕಿದರು.

ಬೆಳಗಿನ ಉಪಾಹಾರ ಯಾರಿಗೂ ರುಚಿಸಲಿಲ್ಲ. ರಾತ್ರಿ ಬೆಣ್ಣೆಮುದ್ದೆಯನ್ನು ಸಮಾಧಾನಗೊಳಿಸಿ ಸಹಾನುಭೂತಿ ವ್ಯಕ್ತಪಡಿಸಿದವರು ಈಗ ಅವಳನ್ನು ಸೂಕ್ಷ್ಮವಾಗಿ ಉಪಲಕ್ಷಿಸುವಂತೆ ತೋರಿತು. ಎಷ್ಟಾದರೂ ಒಂದು ರಾತ್ರಿಯ ನಿದ್ರೆ ಮನುಷ್ಯನಿಗೆ ಸರಿಯಾದ ಮಾರ್ಗದರ್ಶನ ತೋರುತ್ತದೆ. ಅವರ ನಿರ್ಣಯಗಳು ಈಗ ಬದಲಾದಂತೆ ತೋರಿದವು. ಅವಳೊಂದಿಗೆ ರಾತ್ರಿ ಕಳೆದ ಪ್ರಷ್ಯನ್ ಅಧಿಕಾರಿ ಇವತ್ತು ತಮಗೆ ಮುಗುಳುನಗುತ್ತಾ ವಿದಾಯ ಹೇಳುವ ದೃಶ್ಯವನ್ನು ಅವರು ಮನಸ್ಸಿನಲ್ಲೇ ಕಲ್ಪಿಸಿಕೊಂಡರು. ಸಮಸ್ಯೆಗೆ ಇದಕ್ಕಿಂತ ಸರಳ ಪರಿಹಾರ ಸಾಧ್ಯವೇ ಎಂದು ಅವರು ಯೋಚಿಸಿದರು.  ಇಷ್ಟಾಗಿ ಈ ವಿಷಯ ಬೇರೆ ಯಾರಿಗೂ ತಿಳಿಯಬೇಕಾದ ಪ್ರಮೇಯವಿಲ್ಲ. ತಾನು ಪ್ರಯಾಣಿಕರ ಕಷ್ಟ ನೋಡಲಾರದೆ ಇದಕ್ಕೆ ಸಮ್ಮತಿಸಿದೆ ಎಂದು ಅವಳು ತನ್ನ ಮರ್ಯಾದೆ ಕಾಪಾಡಿಕೊಳ್ಳಬಹುದು. ಇಷ್ಟಕ್ಕೂ ಅವಳಿಗೆ ಇದರಿಂದ ಆಗುವ ನಷ್ಟವಾದರೂ ಏನು?

ಆದರೆ ಅವರು ಯಾರೂ ತಮ್ಮ ಆಲೋಚನೆಗಳನ್ನು ಬಹಿರಂಗಗೊಳಿಸಲಿಲ್ಲ.

ಮಧ್ಯಾಹ್ನದ ಹೊತ್ತಿಗೆ ಅವರಿಗೆ ಬೇಸರ ಕಳೆಯುವುದು ಸಾಕುಸಾಕಾಯಿತು. ಹಳ್ಳಿಯಲ್ಲಿ ಒಂದು ಸುತ್ತು ಹಾಕಿಕೊಂಡು ಬರೋಣ ಎಂದು ಕೌಂಟ್ ಸಲಹೆಯಿತ್ತ. ಎಲ್ಲರೂ ಬೆಚ್ಚಗೆ ಉಣ್ಣೆಯ ಬಟ್ಟೆಗಳನ್ನು ತೊಟ್ಟು ಹೊರಟರು. ಕಾನ್ವುಡೇ ತಾನು ಬರುವುದಿಲ್ಲವೆಂದು ಹೇಳಿ ಎಂದಿನಂತೆ ಬೆಂಕಿ ಕಾಯಿಸಿಕೊಳ್ಳುತ್ತಾ  ಕುಳಿತ. ಸಾಧ್ವಿಗಳು ಹಳ್ಳಿಯ ಚರ್ಚಿಗೆ ಹೋಗಿ ಪ್ರಾರ್ಥನೆಗಳಲ್ಲಿ ತೊಡಗಿದರು.

ದಿನೇದಿನೇ ಹೆಚ್ಚುತ್ತಿದ್ದ ಚಳಿ ಅವರ ಕಿವಿಮೂಗುಗಳನ್ನು ಕಚ್ಚಿತು. ಅವರ ಕಾಲುಗಳು ಮರಗಟ್ಟಿ ಹೆಜ್ಜೆ ಇಡುವುದೇ ಪ್ರಯಾಸವಾಯಿತು. ಒಂದು ಹೊಲದ ಬಳಿಗೆ ಬಂದಾಗ ಬೆಳ್ಳಗಿನ ಹಿಮದಿಂದ ಆವೃತವಾದ ಮೈದಾನವನ್ನು ಕಂಡು ಅವರಿಗೆ ವಿಪರೀತ ವ್ಯಸನವಾಗಿ ಕೂಡಲೇ ಮನೆಗೆ ಹಿಂತಿರುಗಿದರು. ಅವರ ಹೃದಯಗಳು ಜರ್ಝರಿತವಾಗಿದ್ದವು; ಆತ್ಮಗಳು ಹೆಪ್ಪುಗಟ್ಟಿದ್ದವು.

ಹೆಂಗಸರು ಮುಂದೆ ನಡೆಯುತ್ತಿದ್ದರು. ಮೂವರು ಗಂಡಸರು ಹಿಂದೆ ನಡೆಯುತ್ತಿದ್ದರು. ಪರಿಸ್ಥಿತಿ ಅರ್ಥ ಮಾಡಿಕೊಂಡ ಲುಸೆವೂ ಒಮ್ಮೆಲೇ "ಈ ಹುಡುಗಿ ಇನ್ನೂ ಎಷ್ಟು ದಿನ ನಮ್ಮನ್ನು ಇಂಥ ಜಾಗದಲ್ಲಿ ಕೊಳೆಹಾಕುತ್ತಾಳೋ!" ಎಂದ.  ಸಂಭಾವಿತನಾದ ಕೌಂಟ್, "ಒಬ್ಬ ಹೆಂಗಸಿನಿಂದ ನಾವು ಅಷ್ಟೊಂದು ದೊಡ್ಡ ತ್ಯಾಗ ಬಯಸುವುದು ಸಾಧ್ಯವೇ? ಅವಳಾಗಿ ಒಪ್ಪಿದರೆ ಅದು ಬೇರೆ ಮಾತು" ಎಂದ.  ಕಾರಿ-ಲೆಮಡಾನ್ "ಫ್ರೆಂಚ್ ಸೇನೆ ಜೆಪ್ ಪ್ರಾಂತ್ಯದ ಮೂಲಕ ಹಾದುಹೋದರೆ ಟೋಟಸ್ ಪಟ್ಟಣದಲ್ಲಿ ಯುದ್ಧ ನಡೆಯುವುದು ಖಂಡಿತ," ಎಂದ. ಇದನ್ನು ಕೇಳಿ ಉಳಿದವರಿಗೆ ಕಳವಳವಾಯಿತು.

"ನಾವು ನಡೆದುಕೊಂಡೇ ಪ್ರಯಾಣ ಮಾಡುವ ಹಾಗೆ ಇದ್ದಿದ್ದರೆ!" ಎಂದ ಲುಸೆವೂ.

"ಇಂಥ ಹವೆಯಲ್ಲಿ ಅದನ್ನು ಊಹಿಸಿಕೊಳ್ಳುವ ಹಾಗೂ ಇಲ್ಲ! ಅದೂ ನಮ್ಮ ಹೆಂಡತಿಯರನ್ನು ಕಟ್ಟಿಕೊಂಡು!" ಎಂದ ಕೌಂಟ್.

"ಹಾಗೆ ಹೊರಟರೂ ಹತ್ತೇ ನಿಮಿಷದಲ್ಲಿ ಹಿಡಿದುಹಾಕುತ್ತಾರೆ! ಆಗ ನಾವು ಸೈನ್ಯದ ಅತಿಥಿಗಳಾಗುತ್ತೇವೆ, ಅಷ್ಟೇ!"

ಇದು ನಿಜವೇ ಆಗಿದ್ದರಿಂದ ಈ ಸಂಭಾಷಣೆ ಅಲ್ಲಿಗೇ ಮುಕ್ತಾಯವಾಯಿತು. ಹೆಂಗಸರು ತಮ್ಮ ವಸ್ತ್ರವಿನ್ಯಾಸಗಳ ವಿಷಯ ಮಾತಾಡಿದರು. ಆದರೆ ಅವರೂ ಈಗ ಮನಸ್ಸು ಬಿಚ್ಚಿ ಮಾತಾಡುತ್ತಿರಲಿಲ್ಲ. ದಾರಿಯ ತುದಿಯಲ್ಲಿ ಒಮ್ಮೆಲೇ ಅವರಿಗೆ ಅಧಿಕಾರಿ ಕಾಣಿಸಿಕೊಂಡ. ಬೆಳ್ಳನೆಯ ಹಿಮದ ಹಿನ್ನೆಲೆಯಲ್ಲಿ ಮಿಲಿಟರಿ ಉಡುಪಿನಲ್ಲಿದ್ದ ಅವನ ತೆಳ್ಳನೆಯ ಉದ್ದನೆಯ ಶರೀರ ಒಂದು ಜೇನುನೊಣದಂತೆ ಕಂಡಿತು. ಅವನು ಮಂಡಿಗಳನ್ನು ಅಗಲಿಸಿಕೊಂಡು ನಡೆಯುತ್ತಿದ್ದ. ಮಿಲಿಟರಿ ಮಂದಿಯಲ್ಲಿ ಇದು ಸಾಮಾನ್ಯ - ತಾವು ಬಹಳ ಕಷ್ಟಪಟ್ಟು ಪಾಲಿಷ್ ಹಾಕಿದ ಬೂಟುಗಳು ಕೊಳೆಯಾಗದಿರಲಿ ಎಂದು ಅವರು ಹಾಗೆ ನಡೆಯುತ್ತಾರೆ. ಅವನು ಹೆಂಗಸರಿಗೆ ಬಾಗಿ ನಮಿಸಿದ. ಗಂಡಸರ ಕಡೆ ತಿರಸ್ಕಾರಪೂರ್ಣ ದೃಷ್ಟಿ ಬೀರಿದ. ಅವರು ಬೇರೆ ಕಡೆ ದೃಷ್ಟಿ ಹೊರಳಿಸಿ ತಮ್ಮ ಮರ್ಯಾದೆ ಕಾಪಾಡಿಕೊಂಡರು. ಲುಸೆವೂ ಮಾತ್ರ ತನ್ನ ಹ್ಯಾಟ್ ಮೇಲೆತ್ತಿ ಗೌರವ ಸೂಚಿಸಿದ.

ಬೆಣ್ಣೆಮುದ್ದೆಯ ಮುಖ ಕೆಂಪಾಯಿತು.  ಹೀಗೆ ಅವಳೊಂದಿಗೆ ಇರುವಾಗ ತಾವು ಅವನ ಕಣ್ಣಿಗೆ ಬಿದ್ದಿದ್ದು  ಉಳಿದ ಮೂವರು ಹೆಂಗಸರಿಗೆ ಸಹಿಸಲಾರದಾಯಿತು. ಆದರೂ ಅವರು ಅವನ ಶರೀರದ ಬಗ್ಗೆ, ಅವನ ಮುಖದ ಬಗ್ಗೆ ಚರ್ಚಿಸಿದರು. ಅನೇಕ ಅಧಿಕಾರಿಗಳ ಪರಿಚಯವುಳ್ಳ ಶ್ರೀಮತಿ ಕಾರಿ-ಲೆಮಡಾನ್ "ಚೆಲುವ! ಇವನು ಫ್ರೆಂಚ್ ಆಗಿರಬೇಕಾಗಿತ್ತು -   ಕುದುರೆ ಏರಿ ಬಂದರೆ ನಮ್ಮ ಹೆಣ್ಣುಗಳು ಕರಗಿಹೋಗುತ್ತಿದ್ದರು!" ಎಂದಳು.

ಮನೆಗೆ ಹಿಂದಿರುಗಿದ ಮೇಲೆ ಅವರಿಗೆ ಏನು ಮಾಡುವುದೆಂದು ತೋಚಲಿಲ್ಲ. ಸಣ್ಣ ಪುಟ್ಟ ಕಾರಣಗಳಿಗೆ ಅವರು ರೇಗಾಡಿದರು. ರಾತ್ರಿಯ ಊಟದ ಸಮಯದಲ್ಲಿ ಒಬ್ಬರೂ ಮಾತಾಡಲಿಲ್ಲ. ಊಟ ಮುಗಿದ ಮೇಲೆ ನಿದ್ದೆ ಮಾಡಿಯಾದರೂ ಸಮಯ ದೂಡಬಹುದೆಂದು ಎಲ್ಲರೂ ತಮ್ಮತಮ್ಮ ಕೋಣೆಗಳಿಗೆ ತೆರಳಿದರು.

ಮರುದಿನ ಬೆಳಗ್ಗೆ ಅವರು ಉಪಾಹಾರಕ್ಕೆಂದು ಕೆಳಗಿಳಿದು ಬಂದಾಗ ಯಾರೊಬ್ಬರ ಮುಖದಲ್ಲೂ ಕಳೆಯಿರಲಿಲ್ಲ.  ಹೆಂಗಸರು ಯಾರೂ ಬೆಣ್ಣೆಮುದ್ದೆಯನ್ನು ಮಾತಾಡಿಸಲಿಲ್ಲ.  ಹೊರಗಡೆ ಚರ್ಚಿನ ಗಂಟೆ ಬಾರಿಸುವುದು ಕೇಳಿತು. ಅಂದು ಚರ್ಚಿನಲ್ಲಿ ಒಂದು ಮಗುವಿನ ಬ್ಯಾಪ್ಟಿಸಂ ಶಾಸ್ತ್ರ ನಡೆಯುವುದಿತ್ತು. ಇದನ್ನು ಕೇಳಿ ಹುಡುಗಿಯ ಮನಸ್ಸು ಕರಗಿತು. ಅವಳಿಗೂ ಒಂದು ಮಗುವಿತ್ತು. ಅದು ಅವಳಿಂದ ದೂರ ಹಳ್ಳಿಯಲ್ಲಿ ಬೆಳೆಯುತ್ತಿತ್ತು.  ಒಂದು ವರ್ಷದಿಂದ ಅವಳು ಮಗುವನ್ನು ನೋಡಿರಲಿಲ್ಲ. ಈ ಸಂದರ್ಭದಲ್ಲಿ ಒಮ್ಮೆಲೇ ಅವಳ ತಾಯಿಯ ಕರುಳು ಚುರ್ರೆಂದಿತು. "ನಾನು ಬ್ಯಾಪ್ಟಿಸಂ ನೋಡಿಕೊಂಡು ಬರುತ್ತೇನೆ" ಎಂದು ಎದ್ದುಹೋದಳು.



ಅವಳು ಕಣ್ಮರೆಯಾದ ಕೂಡಲೇ ಎಲ್ಲರೂ ಒಬ್ಬರ ಕಡೆ ಒಬ್ಬರು ನೋಡಿದರು.  ಎಲ್ಲರೂ ಅಕ್ಕಪಕ್ಕದಲ್ಲಿ ಕುರ್ಚಿಗಳನ್ನು ಎಳೆದುಕೊಂಡು ಕುಳಿತರು. ಇಂದು ಏನಾದರೂ ಇತ್ಯರ್ಥ ಆಗಲೇ ಬೇಕು ಎಂಬುದು ಎಲ್ಲರ ಆಶಯವಾಗಿತ್ತು. ಲುಸೆವೂಗೆ ಒಂದು ಆಲೋಚನೆ ಹೊಳೆಯಿತು - ಬೆಣ್ಣೆಮುದ್ದೆಯನ್ನು ಇಲ್ಲೇ ಬಿಟ್ಟು ಉಳಿದವರು ಹೊರಡಲು ಅನುಮತಿ ಕೇಳುವುದು. ಈ ಮಾತನ್ನು ಅವರು ಮಾಲೀಕನ ಮೂಲಕ ಅಧಿಕಾರಿಗೆ ಹೇಳಿಕಳಿಸಿದರು. ಅವನು ಹಾಗೆ ಹೋದವನು ಹೀಗೆ ಬಂದ. ಜರ್ಮನ್ ಅಧಿಕಾರಿಗೆ ಮನುಷ್ಯರ ಸ್ವಭಾವ ಚೆನ್ನಾಗಿ ಗೊತ್ತಿತ್ತು. ತನ್ನ ಮನದ ಆಸೆ ಪೂರೈಸುವವರೆಗೂ ಯಾರನ್ನೂ ಹೋಗಲು ಬಿಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಕಳಿಸಿದ್ದ.

(ಮುಂದಿನ ಭಾಗ ಇಲ್ಲಿ ಓದಿ)

(c) C.P. Ravikumar, Kannada translation of 'Ball-of-Fat' (Boule de Suif) by Guy De Maupassant.
I acknowledge the English translation which I have used from here. I also acknowledge the images that I have used from different sources - these are all identified as reusable by Google.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)