ಬೆಣ್ಣೆ ಮುದ್ದೆ - ಭಾಗ ೨
ಬೆಣ್ಣೆ ಮುದ್ದೆ - ಭಾಗ ೨
ಮೂಲ ಫ್ರೆಂಚ್ ಕತೆ - ಗಿ ಡಿ ಮುಪಸಾ
ಕನ್ನಡಕ್ಕೆ - ಸಿ ಪಿ ರವಿಕುಮಾರ್
[ಮೊದಲ ಭಾಗ ಇಲ್ಲಿ ಓದಿ]
ಹಿಂಭಾಗದ ಅತ್ಯಂತ ಸುಖಕರವಾದ ಆಸನದಲ್ಲಿ ಗ್ರಾಂ ಪಾಂ ಬೀದಿಯಲ್ಲಿ ಮದ್ಯದ ಸಾರಾಸಗಟು ವ್ಯಾಪಾರದ ಮಳಿಗೆ ನಡೆಸುತ್ತಿದ್ದ ಶೀಮಾನ್ ಲುವೆಸೂ ಮತ್ತು ಅವನ ಹೆಂಡತಿ ಒಬ್ಬರ ಎದುರಿಗೆ ಇನ್ನೊಬ್ಬರು ಕುಳಿತಲ್ಲೇ ನಿದ್ದೆ ಹೋಗಿದ್ದರು. ಮದ್ಯದ ವ್ಯಾಪಾರದಲ್ಲಿ ಕೈಸುಟ್ಟುಕೊಂಡ ಒಬ್ಬ ನತದೃಷ್ಟನಿಂದ ಮಳಿಗೆಯನ್ನು ಕೊಂಡು ಲುವೆಸೂ ಇಂದು ಶ್ರೀಮಂತನಾಗಿದ್ದ. ಅಂಗಡಿಗಳಿಗೆ ಕಳಪೆ ಮದ್ಯವನ್ನು ಒಳ್ಳೆಯ ಬೆಲೆಗೆ ಮಾರುತ್ತಿದ್ದ. ತನ್ನ ಬಂಧುಮಿತ್ರರ ನಡುವೆಯೂ ಒಬ್ಬ ಉಡಾಫೆಯ ಮನುಷ್ಯನೆಂದು ಹೆಸರು ಮಾಡಿದ್ದವನು. ರಕ್ತದಲ್ಲಿ ಮೋಸ ಮತ್ತು ಮೋಜು ಎರಡನ್ನೂ ತುಂಬಿಕೊಂಡಿದ್ದ ಇವನು ನಿಜವಾದ ನಾರ್ಮನ್. ಮಿ। ತುರ್ನೆಲ್ ಎಂಬ ಒಬ್ಬ ಪೋಲಿಸ್ ಅಧಿಕಾರಿಯ ಮನೆಯಲ್ಲಿ ಒಂದು ದಿನ ಸೇರಿದ್ದ ಕೆಲವು ಹೆಣ್ಣು ಅತಿಥಿಗಳು ಲುಸೆವೂ ಮಾಡುವ ಠಕ್ಕತನಗಳ ಬಗ್ಗೆ ಒಂದು ಹಾಡನ್ನೇ ಹೊಸೆದು ಅದು ಇಡೀ ಪಟ್ಟಣದಲ್ಲಿ ಎಲ್ಲರಿಗೂ ಕಂಠಪಾಠವಾಗಿತ್ತು. ಲುಸೆವೂಗೆ ತಮಾಷೆ ಎಂದರೆ ಇಷ್ಟ. ಎಲ್ಲರ ಜೊತೆ ಏನಾದರೂ ಒಳ್ಳೆಯದೋ ಕೆಟ್ಟದ್ದೋ ನಗೆಚಾಟಿಕೆ ಹರಟುತ್ತಿದ್ದ. ಎತ್ತರದ ಆಸಾಮಿ. ಹೊಟ್ಟೆ ಬಲೂನಿನ ಹಾಗೆ ಊದಿತ್ತು. ಆರೋಗ್ಯ ಸೂಸುವ ಕೆಂಪು ಮುಖದಲ್ಲಿ ಬೂದಿ ಬಣ್ಣದ ಗಡ್ಡ-ಮೀಸೆಗಳು ಬೆಳೆದಿದ್ದವು. ಅವನ ಹೆಂಡತಿ ಧಡೂತಿ ಹೆಂಗಸು. ಅವಳದ್ದು ಖಡಾಖಂಡಿತ ಮಾತು. ಮನೆಯಲ್ಲಿ, ವ್ಯಾಪಾರದಲ್ಲಿ ಲೆಕ್ಕಾಚಾರ ಇಡುವುದು ಅವಳೇ.
ಇವರಿಬ್ಬರ ಪಕ್ಕದಲ್ಲಿ ಮಿ। ಕಾರಿ-ಲೆಮಾಡೋನ್ ತಾನು ಉತ್ತಮ ಜಾತಿಯವನು ಎನ್ನುವ ಹಾಗೆ ಬಿಗಿ ಮುಖ ಹಾಕಿಕೊಂಡು ಗರ್ವದಿಂದ ಕುಳಿತಿದ್ದ. ಅವನು ಮೂರು ಹತ್ತಿ ಮಿಲ್ಗಳ ಮಾಲೀಕ. ಇವನು ಲೀಜನ್ ಆಫ್ ಆನರ್ ನಲ್ಲಿ ಅಧಿಕಾರಿ. ದೊಡ್ಡ ಮನುಷ್ಯ. ಚಕ್ರವರ್ತಿಯ ಆಡಳಿತದಲ್ಲಿ ಇವನು ವಿರೋಧಿಗಳ ಪಂಗಡದ ಮುಖ್ಯಸ್ಥನಾಗಿದ್ದ. ಆಗ ಚಕ್ರವರ್ತಿಯನ್ನು ಸಾಕಷ್ಟು ಹಣ್ಣು ಮಾಡಿದ್ದಾಗಿ ತಾನೇ ಜಂಬ ಕೊಚ್ಚಿಕೊಳ್ಳುತ್ತಿದ್ದ. ಅವನ ಎದುರು ಕುಳಿತಿದ್ದ ಅವನ ಹೆಂಡತಿ ವಯಸ್ಸಿನಲ್ಲಿ ಅವನಿಗಿಂತ ಸಾಕಷ್ಟು ಕಿರಿಯಳು. ನಾಜೂಕು ಗೊಂಬೆ. ಗಾಡಿಯ ಒಳಗನ್ನು ಖಿನ್ನ ನೋಟದಿಂದ ಗಮನಿಸುತ್ತಾ ಕುಳಿತಿದ್ದಳು.
ಅವಳ ಪಕ್ಕದಲ್ಲಿ ಕುಳಿತಿದ್ದವರು ಕೌಂಟ್ ಯುಬೇ ಡಿ ಬ್ರೆವಿಲ್ಲ ಮತ್ತು ಅವನ ಪತ್ನಿ. ನಾರ್ಮಂಡಿಯ ಅತ್ಯಂತ ಗೌರವಸ್ಥ ಕುಟುಂಬಕ್ಕೆ ಸೇರಿದವರು. ವಯಸ್ಸಾಗಿದ್ದ ಕೌಂಟ್ ಉತ್ತಮ ದೇಹ ಧಾರ್ಡ್ಯ ಉಳ್ಳವನು. ಶೃಂಗಾರ ಸಾಧನಗಳಿಂದ ತನ್ನ ರೂಪವನ್ನು ಇನ್ನಷ್ಟು ತೀಡಿಕೊಂಡಿದ್ದ. ಅವನು ನೋಡಲು ದೊರೆ ನಾಲ್ವಡಿ ಹೆನ್ರಿಯಂತೆ ಕಾಣುತ್ತಿದ್ದ. ಈ ದೊರೆ ಹಿಂದೆ ಡಿ ಬ್ರೆವಿಲ್ಲ ಕುಟುಂಬಕ್ಕೆ ಸೇರಿದ ಒಬ್ಬ ಹೆಂಗಸಿನ ಜೊತೆ ಸಂಬಂಧ ಹೊಂದಿದ್ದನಂತೆ. ಅದೇ ಕಾರಣಕ್ಕೆ ಆಕೆಯ ಗಂಡನಿಗೆ ಕೌಂಟ್ ಪದವಿ ಕೊಡಲಾಯಿತೆಂದು ಪ್ರತೀತಿ. ಸರಕಾರೀ ಕಚೇರಿಯಲ್ಲಿ ಕೌಂಟ್ ಮಿ। ಕಾರಿ-ಲೆಮಾಡೋನನ ಸಹೋದ್ಯೋಗಿ. ಇಂಥ ಭಾರೀ ಕುಲದವನು ಒಬ್ಬ ಸಾಮಾನ್ಯ ಸೇನಾಧಿಕಾರಿಯ ಮಗಳನ್ನು ಹೇಗೆ ಮದುವೆಯಾದ ಎಂಬುದು ಎಂದಿಗೂ ಒಂದು ರಹಸ್ಯ. ಆದರೆ ಕೌಂಟೆಸ್ ತಾನು ಜನ್ಮಜಾತ ದೊರೆಸಾನಿ ಎಂಬಂತೆ ನಡೆದುಕೊಳ್ಳುತ್ತಿದ್ದಳು. ಅವಳು ನಡೆಸುತ್ತಿದ್ದ ಶೃಂಗಾರ ಪ್ರಸಾಧನ ಗೃಹ ಅಪಾರ ಜನಪ್ರಿಯತೆ ಪಡೆದಿತ್ತು. ಬ್ರೆವಿಲ್ಲ ದಂಪತಿಗಳಿಗೆ ವರ್ಷಕ್ಕೆ ಐನೂರು ಸಾವಿರ ಫ್ರಾಂಕ್ ಗಳ ವರಮಾನವಿದೆ ಎಂಬ ವದಂತಿ ಇತ್ತು.
ಹೀಗೆ ಗಾಡಿಯಲ್ಲಿ ಕುಳಿತಿದ್ದ ಈ ಆರು ಜನರೂ ಗೌರವಾನ್ವಿತ ವ್ಯಕ್ತಿಗಳು. ಸಮಾಜದಲ್ಲಿ ಬೇರೂರಿದವರು. ಧ್ಯೇಯ-ಧರ್ಮ ಉಳ್ಳ ಜನ.
ಕಾಕತಾಳೀಯ ಎಂಬಂತೆ ಹೆಂಗಸರು ಒಟ್ಟಿಗೆ ಕುಳಿತಿದ್ದರು. ಕೌಂಟೆಸ್ ಪಕ್ಕದಲ್ಲಿ ಇಬ್ಬರು ಕ್ರೈಸ್ತ ಸಾಧ್ವಿಯರು ಕುಳಿತಿದ್ದರು; ಅವರು ಮಣಿಮಾಲೆಯನ್ನು ತಿರುಗಿಸುತ್ತಾ ತಮ್ಮ ಪಾಡಿಗೆ ಮಂತ್ರಗಳನ್ನು ಹೇಳಿಕೊಳ್ಳುತ್ತಿದ್ದರು. ಇವರಲ್ಲಿ ಒಬ್ಬಳು ವಯಸ್ಸಾದವಳು. ಅವಳ ಮುಖಕ್ಕೆ ಯಾರಾದರೂ ಗುಂಡಿನ ಮಳೆಗರೆದರೇನೋ ಎಂಬಂತೆ ದಡಾರದ ಕಲೆಗಳು ತುಂಬಿದ್ದವು. ಇನ್ನೊಬ್ಬಳು ಚಿಕ್ಕ ವಯಸ್ಸಿನವಳು; ಅವಳಿಗೆ ಅರ್ಬುದ ರೋಗವಿತ್ತು. ಇವುಗಳ ಕಾರಣದಿಂದ ಇವರಿಬ್ಬರ ತ್ಯಾಗ ಇನ್ನೂ ದೊಡ್ಡದಾಗಿ ಕಾಣುತ್ತಿತ್ತು.
ಸಾಧ್ವಿಗಳ ಎದುರಿಗೆ ಕುಳಿತಿದ್ದ ಗಂಡಸು ಮತ್ತು ಅವನ ಪಕ್ಕ ಕುಳಿತಿದ್ದ ಹೆಂಗಸು ಎಲ್ಲರ ಗಮನ ಸೆಳೆಯುವಂತಿದ್ದರು. ಆತನ ಹೆಸರು ಕಾವ್ನುಡೇ. ಅವನು ಪ್ರಜಾಪ್ರಭುತ್ವವಾದಿ. ಅವನ ಹೆಸರು ಕೇಳಿದರೇ ಗೌರವಾನ್ವಿತರು ಹೆದರುತ್ತಿದ್ದರು. ಇಪ್ಪತ್ತು ವರ್ಷಗಳಿಂದ ಅವನು ಕೆಫೆಗಳಲ್ಲಿ ತನ್ನ ಮಿತ್ರ-ಅನುಯಾಯಿಗಳ ಜೊತೆ ವೈನ್ ಹೀರುತ್ತಾ ತನ್ನ ತಂದೆ ಸಿಹಿತಿಂಡಿಗಳ ವ್ಯಾಪಾರದಲ್ಲಿ ಗಳಿಸಿದ ಹಣವನ್ನು ಪೋಲು ಮಾಡಿದ. ಯಾವಾಗ ರಿಪಬ್ಲಿಕ್ ಸ್ಥಾಪನೆಯಾಗುತ್ತದೋ, ಯಾವಾಗ ತಾನು ಮಾಡಿದ ವೆಚ್ಚಕ್ಕೆ ಪ್ರತಿ ಸಂಭಾವನೆಯಾಗಿ ಸೂಕ್ತ ಪದವಿ ಸಿಕ್ಕುತ್ತದೋ ಎಂದು ಅವನು ಅಸಹನೆಯಿಂದ ಎದುರುನೋಡುತ್ತಿದ್ದ. ಸೆಪ್ಟೆಂಬರ್ ನಾಲ್ಕನೇ ತಾರೀಕು ಯಾರದೋ ಕುಚೇಷ್ಟೆಯ ಪರಿಣಾಮವಾಗಿ ತಾನು ಪ್ರಧಾನಿಯ ಹುದ್ದೆಗೆ ಆಯ್ಕೆಯಾದೆನೆಂದು ಭ್ರಮಿಸಿ ಆತ ಹುದ್ದೆ ಸ್ವೀಕರಿಸಲು ತೆರಳಿದನಂತೆ. ಕಚೇರಿಯ ಗುಮಾಸ್ತರು ಅವನನ್ನು ಗುರುತು ಹಿಡಿಯದೆ ಅಲ್ಲಿಂದ ಹೊರಗಟ್ಟಿದರು. ಆದರೂ ಅಪಾರ್ಥ ಮಾಡಿಕೊಳ್ಳದೆ ಅವನು ಪ್ರಷ್ಯನ್ ಸೈನಿಕರ ವಿರುದ್ಧ ಯುವಕರ ದಂಡನ್ನು ಕಟ್ಟುವುದರಲ್ಲಿ ತೊಡಗಿಕೊಂಡ. ಬಯಲುಗಳಲ್ಲಿ ಅವರೊಂದಿಗೆ ಸೇರಿಕೊಂಡು ಕಂದಕಗಳನ್ನು ಅಗೆದು ಮೇಲೆ ಕಾಡಿನಿಂದ ಕಡಿದು ತಂದ ಸೊಪ್ಪುಸದೆಗಳನ್ನು ಹರಡಿ ಶತ್ರುಗಳನ್ನು ಹಿಡಿಯಲು ಜಾಲ ತಯಾರಿಸಿದ. ಶತ್ರುಗಳು ಯಾವಾಗ ನಿಜವಾಗಿ ಬಂದರೋ ಇವನು ಓಡಿ ಪಟ್ಟಣದ ಒಳಕ್ಕೆ ಸೇರಿಕೊಂಡ. ಈಗ ಅವನು ಆವ್ರೆ ಪಟ್ಟಣಕ್ಕೆ ಓಡಿಹೋಗಿ ಅಲ್ಲಿ ಜಾಲಗಳನ್ನು ನಿರ್ಮಿಸುವ ಯೋಚನೆ ಹೊಂದಿದ್ದಾನೆ.
ಅವನ ಪಕ್ಕದಲ್ಲಿ ಕುಳಿತಿದ್ದ ವೈಯ್ಯಾರದ ಹೆಣ್ಣಿಗೆ ಅವಳ ಶರೀರದ ಮಾಟದ ಕಾರಣದಿಂದ "ಬೆಣ್ಣೆಮುದ್ದೆ" ಎಂಬ ಅಡ್ಡ ಹೆಸರಿತ್ತು. ಕುಬ್ಜವಾದ ಗುಂಡುಗುಂಡಾದ ದೇಹ. ಊದಿಕೊಂಡಿದ್ದ ಕೈಬೆರಳುಗಳು. ಕಾಂತಿಯುತವಾದ ಚರ್ಮ. ಅವಳ ಉಡುಗೆಯ ಒಳಗೇ ಕುಲುಕಾಡುವ ಅಗಾಧವಾದ ವಕ್ಷಗಳು. ಅವಳ ಮುಖ ಗುಂಡಗಿನ ಸೇಬಿನ ಹಣ್ಣಿನಂತೆ, ಇನ್ನೇನು ಅರಳಿ ಮುಗುಳ್ನಗುವ ಡೇರೆ ಹೂವಿನಂತೆ ಕಾಣುತ್ತಿತ್ತು. ದೊಡ್ಡದೊಡ್ಡ ಕಣ್ಣುಗಳು. ಕಾಡಿಗೆಯಿಂದ ತೀಡಿದ ಹುಬ್ಬುಗಳು. ಕೆಳಗೆ ಚುಂಬನಕ್ಕೆ ಸಿದ್ಧವಾದ ರಸಭರಿತ ತುಟಿಗಳು. ಅಕ್ಕಿಕಾಳಿನಂತಹ ಹಲ್ಲುಗಳ ಸಾಲು. ಅವಳನ್ನು ನೋಡಿದರೆ ಮನಸ್ಸು ಮುದಗೊಳ್ಳುವುದು. ಅವಳು ಗುಣವಂತೆ ಎಂಬ ಪ್ರತೀತಿ ಇತ್ತು. ಅವಳ ಬೆಡಗಿಗೆ ಮಾರುಹೋಗಿ ಅವಳನ್ನು ಬಯಸಿ ಹೋಗುವವರು ಬಹಳಷ್ಟು ಮಂದಿ.
ಅವಳು ಯಾರೆಂದು ಗುರುತು ಸಿಕ್ಕ ಕೂಡಲೇ ಗಾಡಿಯಲ್ಲಿದ್ದ ಉಳಿದ ಮರ್ಯಾದಸ್ಥ ಹೆಂಗಸರು ಗುಸುಗುಸು ಮಾತಾಡಿಕೊಂಡರು. "ಸೂಳೆ," "ನಾಚಿಕೆಗೇಡು" ಇತ್ಯಾದಿ ಮಾತುಗಳು ಜೋರಾಗಿಯೇ ಕೇಳಿಬಂದವು. ಆಗ ಅವಳು ಕತ್ತು ಮೇಲೆತ್ತಿ ಸುತ್ತಲೂ ಇದ್ದವರ ಕಡೆಗೆ ಬೀರಿದ ವೈಯ್ಯಾರದ, ಗತ್ತಿನ ನೋಟ ಎಲ್ಲರನ್ನೂ ಮೌನಕ್ಕೆ ತಳ್ಳಿತು. ಲುಸೆವೂ ಹೊರತಾಗಿ ಬೇರೆಲ್ಲರೂ ನೆಲದತ್ತ ನೋಡುತ್ತಾ ಕುಳಿತರು. ಅವನಲ್ಲಿ ಮಾತ್ರ ಉತ್ಸಾಹದ ಬುಗ್ಗೆ ಎದ್ದಂತೆ ತೋರಿತು.
ಈ ಬೆಡಗಿಯ ಉಪಸ್ಥಿತಿ ಇನ್ನುಳಿದ ಹೆಂಗಸರನ್ನು ಒಮ್ಮೆಲೇ ಒಟ್ಟುಗೂಡಿಸಿತು. ಅವರು ಪರಸ್ಪರ ಗಾಢ ಮಿತ್ರರೋ ಎಂಬಂತೆ ಸಂಭಾಷಣೆಯಲ್ಲಿ ತೊಡಗಿದರು. ತಮ್ಮ ವೈವಾಹಿಕ ಗೌರವವನ್ನು ಒಟ್ಟುಗೂಡಿಸಿ ಈ ವೈಯ್ಯಾರದ ಪುತ್ಥಳಿಯೊಂದಿಗೆ ಸೆಣಸುವ ನಿರ್ಧಾರಕ್ಕೆ ಹೆಂಗಸರು ಬಂದಂತಿತ್ತು. ಗಂಡಸರ ಸ್ವಭಾವ ಅವರಿಗೆ ಗೊತ್ತಿಲ್ಲದೇ ಏನಿಲ್ಲ. ಮನೆಯಲ್ಲಿ ಬಿಟ್ಟಿಯಾಗಿ ಸಿಕ್ಕುವ ಪ್ರೇಮಕ್ಕೆ ಉಪೇಕ್ಷೆ; ಹೊರಗೆ ಬೆಲೆಗೆ ಸಿಕ್ಕುವ ಪ್ರೇಮಕ್ಕೆ ಅಪೇಕ್ಷೆ.
ಕಾವ್ನುಡೇ ಮುಖದರ್ಶನದಿಂದ ಅಪ್ರತಿಭರಾಗಿದ್ದ ಮೂವರು ಗಂಡಸರು ಕೂಡಾ ಈಗ ಒಂದಾಗಿ ಬಡವರನ್ನು ಕುರಿತು ತಿರಸ್ಕಾರದ ಭಾವದಿಂದ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತಾಡತೊಡಗಿದರು. ಕೌಂಟ್ ಯುಬೇ ಪ್ರಷ್ಯನ್ ಸೈನಿಕರು ತನ್ನ ಜಾನವಾರುಗಳನ್ನು ಅಪಹರಿಸಿ ಬೆಳೆಗಳನ್ನು ನಾಶ ಮಾಡಿದ್ದರಿಂದ ತನಗೆ ಉಂಟಾದ ನಷ್ಟದ ವಿವರಗಳನ್ನು ಕೊಡತೊಡಗಿದ. ಆದರೆ ತನ್ನ ಅಗಾಧ ಶ್ರೀಮಂತಿಕೆಯ ಕಾರಣ ಈ ನಷ್ಟಗಳಿಂದ ತಾನು ಒಂದು ವರ್ಷದಲ್ಲಿ ಚೇತರಿಸಿಕೊಳ್ಳುತ್ತೇನೆ ಎಂದು ಹೇಳಿಕೊಂಡ. ಮಿ। ಕಾರಿ-ಲೆಮಾಡೋನ್ ಯುದ್ಧದ ವೆಚ್ಚಕ್ಕೆಂದು ತಾನು ಇಂಗ್ಲೆಂಡ್ ದೇಶಕ್ಕೆ ಆರು ಲಕ್ಷ ಫ್ರಾಂಕ್ ಕಳಿಸಿದ್ದನ್ನು ತಿಳಿಸಿದ. ಲುಸೆವೂ ಫ್ರೆಂಚ್ ಆಧಿಪತ್ಯಕ್ಕೆ ತನ್ನ ಬಳಿ ಇದ್ದ ಅಷ್ಟೂ ವೈನ್ ಮಾರಿಬಿಡಲು ಅನುಮತಿ ಕೊಟ್ಟುಬಿಟ್ಟಿದ್ದ; ಇದರಿಂದ ತನಗೆ ಸರಕಾರದಿಂದ ಭಾರೀ ಮೊತ್ತದ ಬರಬೇಕಾಗಿದೆ, ಅದನ್ನು ವಸೂಲು ಮಾಡಲು ತಾನು ಆವ್ರೆ ಪಟ್ಟಣಕ್ಕೆ ಹೊರಟಿದ್ದೇನೆ ಎಂದು ತಿಳಿಸಿದ. ಈ ಮಾತು ಮುಗಿದ ಮೇಲೆ ಅವರೆಲ್ಲರೂ ಪರಸ್ಪರ ಸ್ನೇಹದ ನೋಟ ಬೀರಿದರು. ನಾವು ಬೇರೆ ಬೇರೆಯಲ್ಲ, ಧನದ ಪಾಶ ತಮ್ಮನ್ನು ಒಂದುಗೂಡಿಸಿದೆ ಎಂಬ ಭಾವ ಆ ನೋಟದಲ್ಲಿತ್ತು.

(ಮುಂದಿನ ಭಾಗ ಇಲ್ಲಿ ಓದಿ)
(c) C.P. Ravikumar, Kannada translation of 'Ball-of-Fat' (Boule de Suif) by Guy De Maupassant.
I acknowledge the English translation which I have used from here. I also acknowledge the images that I have used from different sources - these are all identified as reusable by Google.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ