ಬೆಣ್ಣೆ ಮುದ್ದೆ - ಭಾಗ ೬

ಬೆಣ್ಣೆ ಮುದ್ದೆ - ಭಾಗ ೬ 

ಫ್ರೆಂಚ್ ಕತೆ - ಗಿ ಡಿ ಮುಪಸಾ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 

(ಐದನೇ ಭಾಗ ಇಲ್ಲಿ ಓದಿ)

ರುದಿನ ಬೆಳಗ್ಗೆ ಎಂಟುಗಂಟೆಗೆ ಹೊರಡುವ ನಿರ್ಧಾರವಾಗಿತ್ತು. ಎಲ್ಲರೂ ಹಜಾರದಲ್ಲಿ ಸೇರಿದರು. ಆದರೆ ಮೇಲೆಲ್ಲಾ ಮಂಜಿನಿಂದ ಆವೃತವಾಗಿದ್ದ ಗಾಡಿಗೆ ಇನ್ನೂ ಕುದುರೆಗಳನ್ನು ಕಟ್ಟಿರಲಿಲ್ಲ. ಗಾಡಿಯ ಚಾಲಕನ ಸುಳಿವೇ ಇರಲಿಲ್ಲ. ಮನೆಯಲ್ಲಿ ಎಲ್ಲಿ ಹುಡುಕಿದರೂ ಅವನ ಪತ್ತೆ ಇಲ್ಲ. ಅವನನ್ನು ಹುಡುಕಿಕೊಂಡು ಅವರು ಪಟ್ಟಣದ ಒಳಗೆ ಹೋದರು. ಅದೊಂದು ಚಿಕ್ಕ ಊರು. ಊರಿನ ನಡುವಿನ ಚೌಕದ ಒಂದು ಕಡೆ ಚರ್ಚ್ ಇತ್ತು. ಉಳಿದ ಮೂರೂ ಕಡೆ ಪುಟ್ಟ ಮನೆಗಳಿದ್ದವು.  ಅಲ್ಲಿ ಕೆಲವು ಪ್ರ್ಯಷ್ಯನ್ ಸೈನಿಕರು ಕಾಣಿಸಿದರು. ಒಬ್ಬ ಆಲೂಗಡ್ಡೆಗಳ ಸಿಪ್ಪೆ ತೆಗೆಯುತ್ತಿದ್ದ. ಇನ್ನೊಬ್ಬ ಕ್ಷೌರದಂಗಡಿಯನ್ನು ಶುಚಿ ಮಾಡುತ್ತಿದ್ದ. ಮೂರನೆಯವನೊಬ್ಬ ಕಂಕುಳಲ್ಲಿ ಅಳುವ ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡುತ್ತಿದ್ದ.  ಯುದ್ಧಕ್ಕೆ ಹೋಗಿದ್ದ ತಮ್ಮ ಗಂಡಂದಿರು ಮಾಡಬೇಕಾದ ಕೆಲಸಗಳನ್ನು ಹಳ್ಳಿಯ ಹೆಂಗಸರು ಈ ವಿಧೇಯ ಸೈನಿಕರಿಗೆ ಹಚ್ಚಿದ್ದರು.  ಸೌದೆ ಕಡಿಯುವುದು, ಸೂಪ್ ತಯಾರಿಸುವುದು, ಕಾಫಿಬೀಜ ಪುಡಿಮಾಡುವುದು, ಇತ್ಯಾದಿ ಇತ್ಯಾದಿ. ಒಬ್ಬನಂತೂ ಕೈಲಾಗದ ವಯಸ್ಸಾದ ಮನೆಯೊಡತಿಯ ಬಟ್ಟೆಗಳನ್ನೂ ಒಗೆಯುತ್ತಿದ್ದ.

ಕೌಂಟ್ ಇದನ್ನೆಲ್ಲಾ ನೋಡಿ ಆಶ್ಚರ್ಯಚಕಿತನಾಗಿ ಚರ್ಚಿನ ಬಳಿ ಎದುರಾದ ಒಬ್ಬ ಅರ್ಚಕನನ್ನು ಪ್ರಶ್ನಿಸಿದ. ವಯಸ್ಸಾಗಿದ್ದ ಅರ್ಚಕ, "ಓ, ಅದೇ!  ಇವರು ಯಾರೂ ಕೆಟ್ಟವರಲ್ಲ. ನಾವು ಕೇಳುವ ಕತೆಗಳಲ್ಲಿರುವ ದುಷ್ಟ ಪ್ರಷ್ಯನ್ ಸೈನಿಕರ ಹಾಗೆ ಇವರು ಯಾರೂ ಇಲ್ಲ. ಬಹಳ ದೂರದ ಪ್ರಾಂತ್ಯಗಳಿಂದ ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದ್ದಾರೆ. ತಮ್ಮ ಕುಟುಂಬಗಳನ್ನು ನೆನೆಸಿಕೊಂಡು ಇವರೂ ನಮ್ಮ ಹಾಗೇ ಕಣ್ಣೀರು ಹಾಕುತ್ತಾರೆ!  ಇಲ್ಲಿರುವ ಮನೆಗಳನ್ನು ತಮ್ಮದೇ ಎನ್ನುವ ಹಾಗೆ ನೋಡಿಕೊಳ್ಳುತ್ತಾರೆ. ಬಡವರು ಒಬ್ಬರಿಗೊಬ್ಬರು ಆಗಿಬರಬೇಕು. ಇದು ಯುದ್ಧ ಕಲಿಸುವ ಪಾಠ!" ಎಂದ.

ಕಾನ್ವುಡೇಗೆ ಇದು ಸಹನೆಯಾಗಲಿಲ್ಲ. ವಿಜೇತರಿಗೂ ಸೋತವರಿಗೂ ಈ ಬಗೆಯ ಒಪ್ಪಂದ ಸರಿದೋರದೆ ಅವನು ವಿಶ್ರಾಂತಿಗೃಹಕ್ಕೆ ಮರಳಿದ. ಲುಸೆವೂ, "ಇವರು ಇನ್ನೊಂದು ಹೊಸ ಜನಾಂಗವನ್ನೇ ಹುಟ್ಟು ಹಾಕುತ್ತಾರೆ, ನೋಡಿ! ಹೆ ಹೆ ಹೆ!" ಎಂದು ನಗೆಯಾಡಿದ. ಕಾರಿ-ಲೆಮಡಾನ್ ಗಂಭೀರವಾಗಿ "ಅವರ ಪಾಪಕ್ಕೆ ಇವರ ಪ್ರಾಯಃಶ್ಚಿತ್ತ," ಎಂದ.

ಗಾಡಿಯ ಚಾಲಕ ಮಾತ್ರ ಎಲ್ಲೂ ಕಾಣಲಿಲ್ಲ. ಕೊನೆಗೆ ಹಳ್ಳಿಯ ಒಂದು ಕೆಫೆಯಲ್ಲಿ ಒಬ್ಬ ಜರ್ಮನ್ ಅಧಿಕಾರಿಯೊಂದಿಗೆ ಸಲುಗೆಯಿಂದ ಮದ್ಯ ಕುಡಿಯುತ್ತಾ ಕುಳಿತಿರುವುದು ಕಣ್ಣಿಗೆ ಬಿತ್ತು. ಕೌಂಟ್ ಅವನನ್ನು ಉದ್ದೇಶಿಸಿ "ಏನಯ್ಯಾ? ಬೆಳಗ್ಗೆ ಎಂಟು ಗಂಟೆಗೆ ಗಾಡಿ ಸಿದ್ಧವಾಗಿರಬೇಕು ಅಂತ ಅಪ್ಪಣೆ ಮಾಡಿರಲಿಲ್ಲವೇ?" ಎಂದ.

"ಅದು ನಿಜ ಸ್ವಾಮಿ, ಆದರೆ ಅದರ ಮೇಲೆ ಇನ್ನೊಂದು ಅಪ್ಪಣೆಯಾಯಿತಲ್ಲ!"

"ಯಾರದು?!"

"ನಿಮ್ಮ ಆಣೆ! ಪ್ರಷ್ಯನ್ ದಂಡನಾಯಕನ ಅಪ್ಪಣೆ!"

"ಏನಂತ?"

"ಗಾಡಿ ಕಟ್ಟಬಾರದು ಅಂತ."

"ಯಾಕಂತೆ?"

"ಅದೇನೋ ನನಗೆ ತಿಳಿಯದು ಸ್ವಾಮೀ. ನೀವು ಅವರನ್ನೇ ಕೇಳಿ. ಅವರು ನನಗೆ ಅಪ್ಪಣೆ ಕೊಡಿಸಿದ್ದನ್ನು ನಾನು ಪಾಲಿಸಿದ್ದೇನೆ, ಅಷ್ಟೇ."

"ಯಾವಾಗ ಅಪ್ಪಣೆ ಕೊಡಿಸಿದ್ದು?"

"ನೆನ್ನೆ ರಾತ್ರಿ. ನಾನು ಮಲಗುವ ಮುಂಚೆ."

ಅವರು ವಿಚಲಿತರಾಗಿ ವಿಶ್ರಾಂತಿಗೃಹಕ್ಕೆ ಮರಳಿದರು. ಮಿ। ಫೋಯೆನ್ವೀ  ಎಲ್ಲೂ ಕಾಣಲಿಲ್ಲ. ಅವರು ಹತ್ತುಗಂಟೆಗೆ ಮುಂಚೆ ಏಳುವುದಿಲ್ಲವೆಂದೂ, ಮನೆಗೆ ಬೆಂಕಿ ಬಿದ್ದ ಪ್ರಮೇಯವಿಲ್ಲದಿದ್ದರೆ ನಡುವೆ ಎಬ್ಬಿಸಬಾರದೆಂದು ಕಟ್ಟಪ್ಪಣೆ ಮಾಡಿದ್ದಾರೆ ಎಂದೂ ಮನೆಯ ಆಳು ತಿಳಿಸಿದ.  ಜರ್ಮನ್ ಅಧಿಕಾರಿಯೊಂದಿಗೆ ಮಾತನಾಡಲು ಅವರು ಇಚ್ಛಿಸಿದರು. ಅಧಿಕಾರಿ ಅದೇ ವಿಶ್ರಾಂತಿಗೃಹದಲ್ಲಿ ತಂಗಿದ್ದರೂ ಮಿ। ಫೋಯೆನ್ವೀ  ಹೊರತು ಬೇರಾರಿಗೂ ಅವರೊಂದಿಗೆ ನೇರವಾಗಿ ಮಾತಾಡುವ ಅಧಿಕಾರವಿಲ್ಲ ಎಂಬ ಉತ್ತರ ಬಂತು.  ಕಾಯದೆ ವಿಧಿಯಿರಲಿಲ್ಲ. ಹೆಂಗಸರು ತಮ್ಮ ಕೋಣೆಗಳಿಗೆ ಮರಳಿ ಯಾವುದೋ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿದರು.



ಕಾನ್ವುಡೇ ಅಡಿಗೆಮನೆಯಲ್ಲಿ ಹೊಗೆಕೊಳವೆಯ ಬಳಿ ಕುಳಿತುಕೊಂಡ.  ಅಡಿಗೆ ಮನೆಯಲ್ಲಿ ಬೆಂಕಿ  ದೊಡ್ಡದಾಗಿ ಉರಿಯುತ್ತಿತ್ತು.  ಕೆಫೆಯಿಂದ ಒಂದು ಕುರ್ಚಿಯನ್ನು ಅಲ್ಲೇ ತಂದು ಹಾಕುವಂತೆ ಅಪ್ಪಣೆ ಮಾಡಿ ಒಂದು ಹೂಜಿ ಬಿಯರ್ ತರಿಸಿಕೊಂಡು ಬಾಯಲ್ಲಿ ಪೈಪ್ ಇಟ್ಟುಕೊಂಡು ಆಸೀನನಾದ. ಪ್ರಜಾಸತ್ತೆಯ ಅನುಯಾಯಿಗಳಿಗೆ ಪೈಪ್ ಎನ್ನುವುದು ಅವರ ದೇಹದ ಇನ್ನೊಂದು ಅಂಗದಂತೆ - ಏಕೆಂದರೆ ಅವರಿಗೆ ಸೇವೆ ಮಾಡುವ ನೆಪದಲ್ಲಿ ಪೈಪ್ ದೇಶಸೇವೆಯೂ ಮಾಡುತ್ತಿತ್ತು. ಅವನ ಬಳಿಯಿದ್ದದ್ದು ಬೆಲೆಬಾಳುವ ಹೊಗೆಕೊಳವೆ. ಅದರ ಬಣ್ಣ ಅವನ ಹಲ್ಲುಗಳಷ್ಟೇ ಕಪ್ಪು. ಘಮಘಮ ಎಂಬ ಹೊಗೆಸೊಪ್ಪಿನ ಪರಿಮಳ ಸೂಸುವ, ಬಾಗಿದ, ಮಿರಿಮಿರಿ ಮಿಂಚುವ, ಕೈಯಲ್ಲಿ ಹಿಡಿಯಲು ಹಗುರವಾದ  ಪೈಪ್ ಅವನ ದೇಹದ ಭಾಗವೇ ಆಗಿಹೋಗಿತ್ತು. ಅವನು ನಿಶ್ಚಲನಾಗಿ ಕುಳಿತಿದ್ದ. ಅವನ ಕಣ್ಣುಗಳು ಕೆಲವೊಮ್ಮೆ ಒಲೆಯ ಬೆಂಕಿಯ ಕಡೆ, ಕೆಲವೊಮ್ಮೆ ಅವನು ಹೀರುತ್ತಿದ್ದ  ಬಿಯರ್ ಮೇಲ್ಗಡೆ ಗೋಪುರವಾಗಿ ಕೂಡಿಕೊಂಡಿದ್ದ ನೊರೆಯ ಮೇಲೆ ಕೇಂದ್ರೀಕೃತವಾಗುತ್ತಿತ್ತು.  ಒಂದು ಗುಟುಕು ಹೀರಿ  ತನ್ನ ತೆಳ್ಳಗಿನ ಬಿಳಿಗೂದಲುಗಳ ಮೂಲಕ ಬೆರಳಾಡಿಸಿ ಅನಂತರ ಬಿಯರ್ ನೊರೆಯಲ್ಲಿ ತೊಯ್ದ ತನ್ನ ಮೀಸೆಯ ಮೇಲೆ ನಾಲಿಗೆ ಸವರಿಕೊಳ್ಳುತ್ತಾ ಅವನು ಸಂತೃಪ್ತಿಯಿಂದ ಕುಳಿತಿದ್ದ.

ಒಂದಿಷ್ಟು ಅಡ್ಡಾಡಿ ಬರುವ ನೆಪದಲ್ಲಿ ಲುಸೆವೂ ಹಳ್ಳಿಯ ಮದ್ಯದ ಅಂಗಡಿಗಳಿಗೆ ಭೇಟಿಯಿತ್ತು ತನ್ನ ವ್ಯಾಪಾರ ಕುದುರಿಸಿದ.  ಕೌಂಟ್ ಮತ್ತು ಉದ್ಯಮಿ ರಾಜಕಾರಣದ ಬಗ್ಗೆ ಹರಟೆ ಹೊಡೆದರು. ಅವರ ದೂರದೃಷ್ಟಿಗೆ ಫ್ರಾನ್ಸ್ ಭವಿಷ್ಯ ಸ್ಪಷ್ಟವಾಗಿ ಕಾಣುತ್ತಿತ್ತು. ರಾಜಮನೆತನದ ಯಾರಾದರೂ ನಾಯಕ ಮೇಲೆದ್ದು ಫ್ರಾನ್ಸ್ ದೇಶವನ್ನು ರಕ್ಷಿಸುತ್ತಾನೆ ಎಂದು ಒಬ್ಬರ ಅಭಿಮತ. ಜನಸಾಮಾನ್ಯರಲ್ಲೇ ಯಾರೋ ಒಬ್ಬ ನಾಯಕತ್ವ ವಹಿಸಿಕೊಳ್ಳುತ್ತಾರೆ - ಜೋನ್ ಆಫ್ ಆರ್ಕ್ ಉದಾಹರಣೆ ಇಲ್ಲವೇ - ಎಂದು ಇನ್ನೊಬ್ಬರ ಅಭಿಮತ. ಅಥವಾ ನೆಪೋಲಿಯನ್ ಮಾದರಿಯ ಇನ್ನೊಬ್ಬ ನಾಯಕ ಹುಟ್ಟಬಹುದೇನೋ! ಅಯ್ಯೋ ನಮ್ಮ ರಾಜಕುಮಾರ ಅಷ್ಟು ಚಿಕ್ಕ ಹುಡುಗನಾಗಿಲ್ಲದೇ ಹೋಗಿದ್ದರೆ!

ಕಾನ್ವುಡೇ ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಾ 'ಅಯ್ಯೋ ಭವಿಷ್ಯ ನನಗೆ ಗೊತ್ತು' ಎನ್ನುವ ಹಾಗೆ ಮುಗುಳ್ನಗುತ್ತಾ ಕುಳಿತಿದ್ದ. ಅವನ ಹೊಗೆಕೊಳವೆಯಿಂದ ಹೊರಟ ಪರಿಮಳ ಎಲ್ಲಾ ಕಡೆ ಹರಡಿತ್ತು.

ಬೆಳಗಿನ ಹತ್ತು ಗಂಟೆಯಾಯಿತು. ವಸತಿಗೃಹದ ಮಾಲೀಕ ಕಾಣಿಸಿಕೊಂಡ. ಅವರು ಅವನಿಗೆ ಮುಗಿಬಿದ್ದು ಪ್ರಶ್ನೆಗಳ ಮಳೆಗರೆದರು. ಆದರೆ ಅವನು ಪದೇಪದೇ ಹೇಳಿದ್ದು ಇಷ್ಟೇ - "ಜರ್ಮನ್ ಅಧಿಕಾರಿ ರಾತ್ರಿ ಬಂದು ನನಗೆ  ಅಪ್ಪಣೆ ಕೊಟ್ಟು ಹೋದ.  ಈ ಅತಿಥಿಗಳು ನನ್ನ ಅನುಮತಿ ಇಲ್ಲದೆ ನಾಳೆ ಹೊರಡುವ ಹಾಗಿಲ್ಲ. ಹಾಗೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಆಜ್ಞೆ ಮಾಡಿದ್ದಾನೆ. ನನಗೆ ಗೊತ್ತಿರುವುದು ಇಷ್ಟೇ."

ತಾವು ಅಧಿಕಾರಿಯನ್ನು ಭೇಟಿಯಾಗಬಹುದೇ ಎಂದು ಅವರು ಕೇಳಿದರು.  ಕೌಂಟ್ ಅಧಿಕಾರಿಗೆ ತನ್ನ ಕಾರ್ಡ್ ಕಳಿಸಿದ. ಅದರ ಮೇಲೆ ಕಾರಿ-ಲೆಮಡಾನ್ ತನ್ನ ಹೆಸರು ಮತ್ತು ಬಿರುದುಗಳನ್ನು ಬರೆದ.  ಜರ್ಮನ್ ಅಧಿಕಾರಿ ಇವರಿಗೆ ಮರುಸಂದೇಶ ಕಳಿಸಿದ. "ತಮ್ಮನ್ನು ನಾನು ಉಪಾಹಾರದ ನಂತರ ಭೇಟಿಯಾಗುತ್ತೇನೆ - ಸುಮಾರು ಒಂದು ಗಂಟೆಯ ಸಮಯಕ್ಕೆ ಎಂದುಕೊಳ್ಳಿ."

ಹೆಂಗಸರು ಅಡುಗೆಮನೆಗೆ ಬಂದು ತಿನ್ನುವ ಮನಸ್ಸಿಲ್ಲದಿದ್ದರೂ ಉಪಾಹಾರದ ಶಾಸ್ತ್ರ ಮಾಡಿದರು. ಬೆಣ್ಣೆಮುದ್ದೆಯ ಆರೋಗ್ಯ ಹದಗೆಟ್ಟಂತೆ ತೋರಿತು. ಅವಳ ಮುಖ ಬಾಡಿತ್ತು. ಅವರು ತಿಂಡಿ ಮುಗಿಸಿ ಕಾಫಿ ಕುಡಿಯುತ್ತಿದ್ದಾಗ ಜರ್ಮನ್ ಅಧಿಕಾರಿ ಕೌಂಟ್ ಮತ್ತು ಕಾರಿ-ಲೆಮಡಾನ್ ಅವರನ್ನು ಈಗ ಕಾಣಲು ಸಿದ್ಧನೆಂಬ ಸಂದೇಶ ಬಂತು.  ಈ ಇಬ್ಬರೊಂದಿಗೆ ಲುಸೇವೂ ಕೂಡಾ ಹೊರಟ. ಕಾನ್ವುಡೇ ಕೂಡಾ ತಮ್ಮ ಜೊತೆ ಬಂದರೆ ಮೇಲೆಂದು  ಅವನನ್ನು ಕರೆದಾಗ ಅವನು ತನಗೆ ಜರ್ಮನ್ ಜನರೊಂದಿಗೆ ಯಾವ ಸಂಬಂಧವೂ ಬೇಡ ಎಂದು ಖಡಾಖಂಡಿತವಾಗಿ ನಿರಾಕರಿಸಿದ. ತಾನು ಕುಳಿತಿದ್ದ ಸ್ಥಾನಕ್ಕೇ ತೆರಳಿ ಇನ್ನೊಂದು ಬಿಯರ್ ತರಲು ಅಪ್ಪಣೆ ಕೊಟ್ಟು ಪೈಪ್ ಹೊತ್ತಿಸಿಕೊಂಡು ಕುಳಿತುಬಿಟ್ಟ.

ಮೂವರು ಗಂಡಸರು ಮೆಟ್ಟಿಲು ಹತ್ತಿ ಮೇಲಿನ ಕೋಣೆಗೆ ಹೋದರು. ಇಡೀ ವಸತಿಗೃಹದಲ್ಲಿ ಇದು ಅತ್ಯಂತ ಆಕರ್ಷಕವಾಗಿದ್ದ ಕೊಠಡಿ. ಜರ್ಮನ್ ಅಧಿಕಾರಿ ಒಂದು ಮೆತ್ತನೆಯ ಆಸನದ ಮೇಲೆ ವಿರಾಜಮಾನನಾಗಿದ್ದ. ತನ್ನ ಕಾಲುಗಳನ್ನು ಎದುರಿಗಿದ್ದ ಮೇಜಿನ ಮೇಲೆ ಇಟ್ಟುಕೊಂಡಿದ್ದ. ಅವನ ಕೈಯಲ್ಲಿ ಪಿಂಗಾಣಿಯ ಉದ್ದನೆಯ ಪೈಪ್ ಇತ್ತು.   ಗಾಢ ಬಣ್ಣದ ಗೌನ್ ತೊಟ್ಟಿದ್ದ; ಹಳ್ಳಿಯ ಯಾರದೋ ಮನೆಯಿಂದ ಅದನ್ನು ಬಲವಂತವಾಗಿ ಹೊತ್ತು ತರಲಾಗಿದೆ ಎಂದು ಯಾರಿಗಾದರೂ ಗೊತ್ತಾಗುವಂತಿತ್ತು. ಇವರು ಬಂದಾಗ ಅವನು ಏಳಲೂ ಇಲ್ಲ, ಸ್ವಾಗತಿಸಲೂ ಇಲ್ಲ. ಅವರ ಕಡೆ ನೋಡಲೂ ಇಲ್ಲ.  ಯಾರೋ ಒಬ್ಬ ತುಚ್ಛ  ಆಸಾಮಿಗೆ  ಅಧಿಕಾರ ಸಿಕ್ಕಾಗ ಹೇಗೆ ವರ್ತಿಸುತ್ತಾನೆ ಎಂಬುದಕ್ಕೆ ಉದಾಹರಣೆಯಂತಿತ್ತು ಅವನ ನಡವಳಿಕೆ.

ಒಂದೆರಡು ನಿಮಿಷ ಸುಮ್ಮನಿದ್ದು "ಏನು ಬೇಕಾಗಿತ್ತು?" ಎಂದ.

ಅವರ ಪರವಾಗಿ ಕೌಂಟ್ ಮಾತಾಡಿದ. "ನಾವು ನಮ್ಮ ಪ್ರಯಾಣ ಮುಂದುವರೆಸಬೇಕು, ಸ್ವಾಮೀ."

"ಅದು ಆಗದು."

"ಯಾಕೆ ಎಂದು ಕೇಳಬಹುದೇ?"

"ಯಾಕೆಂದರೆ ಅದು ನನಗೆ ಇಷ್ಟವಿಲ್ಲ."

"ಸ್ವಾಮೀ, ನೀವು ನಮ್ಮ ಮೇಲೆ ಹೀಗೆ ಯಾಕೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತಿದ್ದೀರೋ ನಾವು ಕಾಣೆವು. ನಿಮಗೆ ಗೊತ್ತಿರುವಂತೆ ನಿಮ್ಮ ಮಹಾದಂಡನಾಯಕರೇ ಕಾಗದಪತ್ರಗಳ ಮೇಲೆ ರುಜು ಹಾಕಿದ್ದಾರೆ."

"ನನಗೆ ಇಷ್ಟವಿಲ್ಲ, ಅಷ್ಟೇ - ನೀವು ಈಗ ಹೋಗಬಹುದು."

ಅವರು ಬಾಗಿ ನಮಸ್ಕರಿಸಿ ಹೊರಟರು. ಪ್ರಯಾಣಿಕರ ಪಾಡು ಈಗ  ಹೇಳತೀರದು. ಜರ್ಮನ್ ಅಧಿಕಾರಿಯ ಮೊಂಡುತನ ಅವರಿಗೆ ಬಿಡಿಸಲಾರದ ಗಂಟು.  ಅವನ ವರ್ತನೆಗೆ ಅವರು ಏನೇನೋ ಅರ್ಥ ಕೊಟ್ಟು ಅದರಿಂದ ಇನ್ನಷ್ಟು ಕಂಗೆಟ್ಟರು. ಎಲ್ಲರೂ ಅಡುಗೆಮನೆಯಲ್ಲೇ ಬಿಡಾರ ಹೂಡಿ ಪದೇಪದೇ ಅದೇ ವಿಷಯವನ್ನೇ ಚರ್ಚಿಸಿದರು. ತಮ್ಮನ್ನು ಯುದ್ಧದ ಕೈದಿಗಳನ್ನಾಗಿ ಮಾಡಿ ಬಂಧಿಸುವ ಆಲೋಚನೆ ಇದೆಯೇನೋ? ತಮ್ಮನ್ನು ಅಪಹರಿಸಿ ಬದಲಾಗಿ ಹಣ ಕೀಳುವ ಯೋಜನೆ ಇದೆಯೇನೋ? ಈ ಯೋಚನೆ ಅವರನ್ನು ಅಧೀರರನ್ನಾಗಿ ಮಾಡಿತು.  ಅವರಲ್ಲಿ ಅತ್ಯಂತ ಹಣವಂತರು ಎಲ್ಲರಿಗಿಂತ ಹೆಚ್ಚು ಚಿಂತೆಗೀಡಾದರು.  ತಮ್ಮ ಪ್ರಾಣ ಉಳಿಸಿಕೊಳ್ಳಲು ಥೈಲಿಗಟ್ಟಲೆ ಚಿನ್ನದ ನಾಣ್ಯಗಳನ್ನು ಈ ದುಷ್ಟ ಅಧಿಕಾರಿಗೆ ಕೊಡಬೇಕಾಗುತ್ತದೇನೋ ಎಂದು ಕಲ್ಪಿಸಿಕೊಂಡು ವಿಹ್ವಲರಾದರು. ತಮ್ಮ ಆಸ್ತಿಯ ವಿವರಗಳನ್ನು ಹೇಗೆ ಮರೆಮಾಚುವುದು, ತಾವು ಬಡವರು, ತೀರಾ ನಿರ್ಗತಿಕರು ಎಂದು ಹೇಗೆ ತೋರಿಸಿಕೊಳ್ಳುವುದು ಎಂದು ಅವರು ಗಂಭೀರವಾಗಿ ಮನಸ್ಸಿನಲ್ಲೇ ಗುಣಾಕಾರ ಹಾಕತೊಡಗಿದರು. ಲುಸೆವೂ ತಾನು ತೊಟ್ಟಿದ್ದ ಬೆಲೆಬಾಳುವ ಗಡಿಯಾರವನ್ನು ಕಿಸೆಯಲ್ಲಿ ಬಚ್ಚಿಟ್ಟುಕೊಂಡ.



ಹೊರಗೆ ಕತ್ತಲಾಗುತ್ತಿದ್ದಂತೆ ಅವರ ದಿಗಿಲು ಇನ್ನೂ ಹೆಚ್ಚಾಯಿತು. ಮನೆಯ ದೀಪಗಳನ್ನು ಹಚ್ಚಲಾಯಿತು. ರಾತ್ರಿಯ ಊಟಕ್ಕೆ ಇನ್ನೂ ಎರಡು ಗಂಟೆ ಸಮಯವಿತ್ತು. ಶ್ರೀಮತಿ ಲುಸೆವೂ ಹೊತ್ತು ಕಳೆಯಲು ಇಸ್ಪೀಟ್ ಆಟ ಆಡುವ ಪ್ರಸ್ತಾಪವಿಟ್ಟಳು. ಎಲ್ಲರೂ ಒಪ್ಪಿಕೊಂಡರು. ಪೈಪ್ ಸೇದಿ ಮುಗಿಸಿದ್ದರಿಂದ ಕಾನ್ವುಡೇ ಕೂಡಾ ಆಟಕ್ಕೆ ಸೇರಿಕೊಂಡ. ಕೌಂಟ್ ಎಲೆಗಳನ್ನು ಕಲಸಿ ಹಂಚಿದ.  ಮೊದಲ ಆಟದಲ್ಲಿ ಬೆಣ್ಣೆಮುದ್ದೆಗೆ ಮೂವತ್ತೊಂದು ಬಂತು. ಒಮ್ಮೆಲೇ ಅವರಿಗೆ ಆಟದಲ್ಲಿ ಉತ್ಸಾಹ ಬಂದು ತಮ್ಮ ಆಪತ್ತನ್ನು ಸ್ವಲ್ಪಕಾಲ ಮರೆತರು. ಲುಸೆವೂ ಅನೇಕ ಇಸ್ಪೀಟ್ ಎಲೆಗಳ ಚಮತ್ಕಾರಗಳನ್ನು ಮಾಡಿ ತೋರಿಸಿದ.

ಅವರು ಊಟಕ್ಕೆಂದು ಸಿದ್ಧರಾಗುತ್ತಿದ್ದಾಗ ವಸತಿಗೃಹದ ಮಾಲೀಕ ಪ್ರತ್ಯಕ್ಷನಾಗಿ ತನ್ನ ಉಬ್ಬುಸದ ನಡುವೆ ಪ್ರಯಾಸ ಪಡುತ್ತಾ "ಜರ್ಮನ್ ಅಧಿಕಾರಿ ಮಿಸ್ ಎಲಿಜಬೆತ್ ರೂಸೋ ಅವರಿಗೆ ಸಂದೇಶ ಕಳಿಸಿದ್ದಾರೆ. ಮಿಸ್ ರೂಸೋ ತಮ್ಮ ನಿರ್ಧಾರ ಬದಲಿಸಿದರೇ ಎಂದು ಕೇಳಿಕೊಂಡು ಬರಲು ನನ್ನನ್ನು ಕಳಿಸಿದ್ದಾರೆ," ಎಂದು ಘೋಷಿಸಿದ.

ಬೆಣ್ಣೆಮುದ್ದೆಯ ಚೆಹರೆ ಬಿಳಿಚಿಕೊಂಡಿತು. ಅವಳು ನಿಂತೇ ಇದ್ದಳು.  ಅವಳ ಮುಖಕ್ಕೆ ರಕ್ತ ನುಗ್ಗಿತು. ಅಸಾಧ್ಯವಾದ ಕೋಪದಿಂದ ಅವಳಿಗೆ ಮಾತೇ ಹೊರಡಲಿಲ್ಲ. ಕೊನೆಗೆ ಸಾವರಿಸಿಕೊಂಡು "ಅದೊಂದು ಹೊಲಸು ತಿನ್ನುವ ಪ್ರಾಣಿ! ಹೋಗಿ ಆ ಮೂರ್ಖ ಪ್ರಷ್ಯನ್ ಅಧಿಕಾರಿಗೆ ಹೇಳಿ - ನಾನು ಎಂದೂ ಮನಸ್ಸು ಬದಲಾಯಿಸೋದಿಲ್ಲ. ಎಂದೆಂದಿಗೂ ಇಲ್ಲ!" ಎಂದು ಬೆಂಕಿ ಕಾರಿದಳು.

ಮಾಲೀಕ ಅಲ್ಲಿಂದ ತೆರಳಿದ. ಕೂಡಲೇ ಎಲ್ಲರೂ ಬೆಣ್ಣೆಮುದ್ದೆಯ ಸುತ್ತ ಘೇರಾಯಿಸಿ ವಿಷಯ ಏನೆಂದು ಪ್ರಶ್ನೆಗಳ ಮಳೆಗರೆದರು. ಅವಳು ಮೊದಮೊದಲು ಬಾಯಿಬಿಡಲು ನಿರಾಕರಿಸಿದಳು.  ಕೊನೆಗೆ ಇವರ ಕಾಟ ತಡೆಯಲಾರದೇ "ಅವನಿಗೆ ಏನು ಬೇಕು ಅಂತ ಕೇಳುತ್ತೀರಾ? ಕೇಳಿ! ಹಾಳಾದವನು ನನ್ನ ಜೊತೆ ಮಲಗಬೇಕಂತೆ!" ಎಂದು ವಿಹ್ವಲಳಾಗಿ ನುಡಿದಳು.

(ಮುಂದಿನ ಭಾಗ ಇಲ್ಲಿ ಓದಿ)
(c) C.P. Ravikumar, Kannada translation of 'Ball-of-Fat' (Boule de Suif) by Guy De Maupassant.
I acknowledge the English translation which I have used from here. I also acknowledge the images that I have used from different sources - these are all identified as reusable by Google.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)