ಬೆಣ್ಣೆಮುದ್ದೆ - ಭಾಗ ೮

ಬೆಣ್ಣೆಮುದ್ದೆ - ಭಾಗ  ೮ 

ಮೂಲ ಫ್ರೆಂಚ್ ಕತೆ - ಗಿ ಡಿ ಮುಪಸಾ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 
(ಏಳನೇ ಭಾಗ ಇಲ್ಲಿ ಓದಿ)

ಗ ಶ್ರೀಮತಿ ಲುಸೆವೂ ತನ್ನ ನಾಲಿಗೆ ಹರಿಯಬಿಟ್ಟಳು. "ನಾವೇನು ಇಲ್ಲಿ ಮುದುಕರಾಗುವ ತನಕ ಇರಬೇಕಂತೇನು! ಈ ಹಲ್ಕಾ ಹೆಣ್ಣು ಎಂತೆಂಥವರ ಜೊತೆಗೋ ಹೋಗಿದ್ದಾಳೆ. ಇವನ ಜೊತೆ ಹೋಗೋದಕ್ಕೆ ಏನು ಬಿನ್ನಾಣವೋ ಕಾಣೆ! ರೂವೆನ್ ಪಟ್ಟಣದಲ್ಲಿ ಫ್ರೆಂಚ್ ಅಧಿಕಾರಿಗಳು ಹಾಗಿರಲಿ ಅವರ ಗಾಡಿ ಓಡಿಸುವವರ ಜೊತೆ ಕೂಡಾ ಇವಳ ಧಂಧೆ ನಡೆದಿದೆ! ಹೂಂ, ಯಾಕೆ ಹೇಳ್ತೀರಿ! ಪ್ರಿಫೆಕ್ಟ್ ನ ಗಾಡಿ ಓಡಿಸುವವನು! ಅವನ ಪರಿಚಯ ನನಗೆ ಚೆನ್ನಾಗಿದೆ. ಅವನು ವೈನ್ ಕೊಳ್ಳುವುದೇ ನನ್ನ ಮನೆಯಿಂದ! ಅಂಥಾ ಹಲ್ಕಾಹೆಣ್ಣಿನ ಕಾರಣ ನಾವು ಇಂಥಾ ಹೇಯ ಪರಿಸ್ಥಿತಿಗೆ ಸಿಕ್ಕಿಹಾಕಿಕೊಳ್ಳುವುದೇ! ನನ್ನ ಮಾತು ಕೇಳಿದರೆ ಈ ಆಫೀಸರ್ ನಡತೆ ಚೆನ್ನಾಗೇ ಇದೆ. ಅವನು ಬೇಕಾದರೆ ನಮ್ಮಲ್ಲಿ ಯಾರನ್ನಾದರೂ ಒಬ್ಬರನ್ನು ಕೇಳಬಹುದಾಗಿತ್ತು. ಆದರೆ ಅವನಿಗೂ ನಿಯತ್ತು ಅನ್ನೋದು ಒಂದು ಇದೆ ನೋಡಿ. ಮದುವೆ ಆದವರು, ಮರ್ಯಾದಸ್ಥರು ಅಂತ ನಮ್ಮ ತಂಟೆಗೆ ಬರಲಿಲ್ಲ. ಅವಳ ಹತ್ತಿರ ಹೋದ. ಅವನೇ ಇಲ್ಲಿಗೆ ಸರದಾರ ಅನ್ನೋದನ್ನು ನಾವು ಮರೆಯೋಕಾಗುತ್ಯೆ? ಅವನು ಒಂದು ಮಾತು ಅಂದರೆ ಅವನ ಸೈನಿಕರು ಬಂದು ನಮ್ಮನ್ನು ದರದರ ಅಂತ ಎಳೆದು ಕರೆದುಕೊಂಡು  ಹೋಗಿ ಅವನ ಮುಂದೆ ನಿಲ್ಲಿಸುತ್ತಾರೆ!"

ಇದನ್ನು ಕೇಳಿ ಇನ್ನಿಬ್ಬರು ಮಹಿಳೆಯರಿಗೆ ನಡುಕ ಹುಟ್ಟಿತು. ಚೆಲುವೆಯಾಗಿದ್ದ ಶ್ರೀಮತಿ ಕಾರಿ-ಲೆಮಡಾನ್ ಮುಖ ಬಿಳಿಚಿತು. ತನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗುವುದನ್ನು ಅವಳು ಕಲ್ಪಿಸಿಕೊಂಡಳೇನೋ. ಗಂಡಸರು ತಮ್ಮತಮ್ಮಲ್ಲೇ ಮಾತಾಡಿಕೊಂಡರು. ಲುಸೆವೂಗೆ ಕೆಂಡಾಮಂಡಲ ಕೋಪ ಬಂದಿತ್ತು. "ಹಾಳಾದವಳನ್ನು  ಹೆಡೆಮುರಿ ಕಟ್ಟಿ ನಾವೇ ಒಪ್ಪಿಸಿ ಬರೋಣ," ಎಂದು ಕೂಗಾಡಿದ. ಕೌಂಟ್ ಸಂಭಾವಿತ. ಅವನ ಹಿಂದಿನ ಮೂರು ತಲೆಮಾರುಗಳಿಂದಲೂ ಅವನ ಪೂರ್ವಜರು ರಾಜಸೇವಾಸಕ್ತರು. ಮುಳ್ಳನ್ನು ತೆಗೆಯುವ ಕೆಲಸಕ್ಕೆ ನಾಜೂಕು ಬೇಕು ಎಂಬುದು ಅವನಿಗೆ ಗೊತ್ತು.  "ಸರಿ, ಏನಾದರೂ ನಿರ್ಧಾರ ತೊಗೊಳ್ಳೋಣಂತೆ," ಎಂದ.

ಅವರು ಗುಪ್ತಸಭೆ ನಡೆಸಿದರು. ಹೆಂಗಸರು ನಡುನಡುವೆ ತಗ್ಗಿದ ಧ್ವನಿಯಲ್ಲಿ ಮಾತಾಡುತ್ತಾ ತಮ್ಮ ಸಲಹೆ ಕೊಟ್ಟರು. ಅವರ ಚರ್ಚೆಯಲ್ಲಿ ಈಗ ಪರ-ವಿರೋಧಗಳಿರಲ್ಲಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದರು. ಹೆಂಗಸರು ಅಸಾಧಾರಣ ವಿಷಯಗಳನ್ನು ಹೇಳಲು ಅತ್ಯಂತ ನಾಯನಾಜೂಕಿನ ಮನೋಹರ ಪದಗುಚ್ಛಗಳನ್ನು ಬಳಸಿ ಮಾತಾಡಿದರು. ಹೊರಗಿನವರು ಅವರ ಮಾತುಗಳನ್ನು ಕೇಳಿಸಿಕೊಂಡರೆ ಅವರಿಗೆ ಅರ್ಥವೇ ಆಗದು - ಹಾಗೆ ಅಳೆದು ತೂಗಿ ಆಡಿದ ಸುತ್ತು ಬಳಸಿನ ಮಾತುಗಳು.  ಜಗತ್ತಿನ ಪ್ರತಿಯೊಂದು ಹೆಣ್ಣಿಗೂ ದೈವದತ್ತವಾದ ವಿನಮ್ರತೆ ಎಂಬ ಮುಳ್ಳುಬೇಲಿ ಇಂಥ ಕಳಂಕಪೂರ್ಣ ಸಾಹಸದ ಸನ್ನಿವೇಶದಲ್ಲಿ ಅರಳುತ್ತದೆ.  ಆಗ ಅವರಿಗೆ ಎಲ್ಲಿಲ್ಲದ ಸಡಗರ.   ತಮ್ಮ ಅಂತಃಶಕ್ತಿಯನ್ನೆಲ್ಲಾ ತೊಡಗಿಸಿಕೊಂಡು ಪಾಲ್ಗೊಳ್ಳುತ್ತಾರೆ - ಒಬ್ಬ ಹೊಟ್ಟೆಬಾಕ ಅಡುಗೆಯವನು ತನ್ನ ಮಾಲೀಕನಿಗೆ ಅಡುಗೆ ಮಾಡುವಾಗ ತೋರುವ ಉತ್ಸಾಹವನ್ನೇ ಅದು ಹೋಲುತ್ತದೆ.

ಈಗ ಅವರೆಲ್ಲರ ಮುಖದಲ್ಲಿ ಕಳೆ ಬಂತು. ಈವರೆಗೆ ನಡೆದ ಕತೆಯಲ್ಲಿ ಈಗ ಅವರಿಗೆ ಹಾಸ್ಯದ ಎಳೆಗಳು ಕಾಣತೊಡಗಿದವು.  ಅವರು ಪರಸ್ಪರ ನಗೆಹನಿಗಳನ್ನು ಹಂಚಿಕೊಂಡರು. ಕೌಂಟ್ ಗೆ ಇವುಗಳಲ್ಲಿ ಕೆಲವು ಅಸಭ್ಯ ಎನ್ನಿಸಿದರೂ ಮುಗುಳ್ನಗದೇ ಇರುವುದು ಅಸಾಧ್ಯವಾಯಿತು. ಲುಸೆವೂ ಇನ್ನೂ ರಸಮಯವಾದ ಕತೆಗಳನ್ನು ಹೇಳಿದ. ಆಗಲೂ ಯಾರೂ ಆಕ್ಷೇಪಿಸಲಿಲ್ಲ.  ಅವನ ಹೆಂಡತಿ ಹೇಳಿದ ಮಾತು ಅವರೆಲ್ಲರ ಮನಸ್ಸುಗಳನ್ನು ಆಕ್ರಮಿಸಿಕೊಂಡಿತು - "ಅವಳ ಧಂಧೆಯೇ ಇದಾಗಿರುವಾಗ ಬರೀ ಒಬ್ಬನಿಗೆ ನಿರಾಕರಿಸುವುದೇಕೆ?" ನಮ್ರ ಸ್ವಭಾವದ ಶ್ರೀಮತಿ ಕಾರಿ-ಲೆಮಡಾನ್ ತಾನು ಅವಳ ಸ್ಥಾನದಲ್ಲಿ ಇದ್ದಿದ್ದರೆ ಬೇರೆಯವರನ್ನು ನಿರಾಕರಿಸುವುದಕ್ಕಿಂತ ಸ್ವಲ್ಪ ಕಡಿಮೆ ನಿರಾಕರಿಸುತ್ತಿದ್ದೆ ಎಂದುಕೊಂಡಳು.

ಅವರು ಒಂದು ಯೋಜನೆಯನ್ನು ಸಿದ್ಧಪಡಿಸಿಕೊಂಡರು. ತಾವು ಒಂದು ಕೋಟೆಯನ್ನು ಮುತ್ತಿಗೆಗೆ ಹಾಕಲು ಹೋಗುತ್ತಿದ್ದೇವೇನೋ ಎಂಬಂತೆ ತಮ್ಮ ಒಂದೊಂದೂ ನಡೆಯನ್ನು ಕರಾರುವಾಕ್ಕಾಗಿ ನಿರ್ಧರಿಸಿಕೊಂಡರು.  ಯಾರು ಯಾವಾಗ ಎಲ್ಲಿ ಏನು ಹೇಳಬೇಕು, ಹೇಗೆ ಹೇಳಬೇಕು, ಯಾವ ಮಾತಿಗೆ ಎಲ್ಲಿ ಎಷ್ಟು ಒತ್ತು ಕೊಡಬೇಕು ಮೊದಲಾದ ಸಣ್ಣಪುಟ್ಟ ವಿವರಗಳನ್ನೂ ಮನಸ್ಸಿನಲ್ಲೇ ಮನನ ಮಾಡಿಕೊಂಡರು. ಕಾನ್ವುಡೇ ಈ ನಾಟಕದಲ್ಲಿ ಭಾಗಿಯಾಗಲಿಲ್ಲ; ತನ್ನ ಪಾಡಿಗೆ ತಾನು ಇದ್ದುಬಿಟ್ಟ.  ತಮ್ಮ ತಯಾರಿಯಲ್ಲಿ ಅವರು ಎಷ್ಟರಮಟ್ಟಿಗೆ ಮುಳುಗಿದ್ದರೆಂದರೆ ಬೆಣ್ಣೆಮುದ್ದೆ ಒಳಗೆ ಬಂದಾಗ ಅವರು ಗಮನಿಸಲೇ ಇಲ್ಲ. ಕೌಂಟ್ "ಶ್!" ಎಂದು ಮೆತ್ತಗೆ ಎಚ್ಚರಿಸಿದಾಗ ಅವರೆಲ್ಲರ ಗಮನ ಅವಳ ಕಡೆಗೆ ತಿರುಗಿತು. ಆಗೋ ಅವಳು ಬಂದು ನಿಂತಿದ್ದಳು. ಮಿಕ್ಕವಿರಿಗಿಂತ ನಟನೆಯಲ್ಲಿ ಹೆಚ್ಚು ಪಳಗಿದ ಕೌಂಟೆಸ್ ಅವಳನ್ನು ಉದ್ದೇಶಿಸಿ "ಬ್ಯಾಪ್ಟಿಸಂ ಹೇಗೆ ನಡೆಯಿತು?" ಎಂದು ಕೇಳಿದಳು.

ಸ್ಥೂಲಕಾಯದ ಹುಡುಗಿಗೆ ಭಾವೋತ್ಕಟತೆಯಿಂದ ಎದೆ ತುಂಬಿ ಬಂತು. ಚರ್ಚ್ ನಲ್ಲಿ ತಾನು ಕಂಡ ದೃಶ್ಯಗಳನ್ನು ಸುದೀರ್ಘವಾಗಿ ವಿವರಿಸಿ "ಕೆಲವೊಮ್ಮೆ ಪ್ರಾರ್ಥಿಸುವುದು ಕೂಡಾ ಒಳ್ಳೆಯದು" ಎಂದಳು.  ಊಟದ ವೇಳೆಯವರೆಗೆ ಹೆಂಗಸರು ಅವಳ ಜೊತೆ ಸ್ನೇಹದಿಂದಲೇ ವರ್ತಿಸಿದರು. ಅವಳಿಗೆ ತಮ್ಮ ಬಗ್ಗೆ ಅನುಮಾನ ಬಾರದಿರಲಿ, ತಮ್ಮ ಮಾತನ್ನು ಅವಳು ಕೇಳಲಿ ಎಂಬುದು ಅವರ ಉದ್ದೇಶ. ಊಟದ ಮೇಜಿನ ಮೇಲೆ ಅವರ ನಾಟಕ ಪ್ರಾರಂಭವಾಯಿತು.  ಭಕ್ತಿಯ ಬಗ್ಗೆ ಯಾವುದೋ ಅಸ್ಪಷ್ಟವಾದ ಸಂಭಾಷಣೆಯಿಂದ ಅದು ಮೊದಲಾಯಿತು.  ಪುರಾಣಗಳಿಂದ, ಇತಿಹಾಸದಿಂದ ಅವರು ಉದಾಹರಣೆಗಳನ್ನು ಕೊಟ್ಟರು. ಜೂಡಿತ್ ಮತ್ತು ಹೊಲೋಫರ್ನೀಸ್ ಕತೆಯನ್ನು ನೆನೆದರು. ಅಸೀರಿಯಾದಿಂದ ಬಂದ ಯೋಧ ಹೊಲೋಫರ್ನೀಸ್ ಜೂಡಿತ್ ನ ತವರೂರಾದ ಬೆತುಲಿಯಾ ಪಟ್ಟಣವನ್ನು ನಾಶ ಮಾಡಬೇಕೆಂದಿದ್ದಾಗ ಅವಳನ್ನು ಕಂಡು ಮೋಹಿತನಾದ. ಅವನು ಅವಳ ನಿರೀಕ್ಷೆಯಲ್ಲಿ ತನ್ನ ಡೇರೆಯಲ್ಲಿ ಮದ್ಯಪಾನದ ಅಮಲಿನಲ್ಲಿದ್ದಾಗ ಜೂಡಿತ್ ಪ್ರವೇಶಿಸಿ ಅವನ ತಲೆ ಕತ್ತರಿಸಿದಳು. ಲೂಕ್ರಿಸ್ ಮತ್ತು ಸೆಕ್ಸ್ಟಸ್ ಕತೆ ಕೂಡಾ ಸಂಭಾಷಣೆಯಲ್ಲಿ ನುಸುಳಿತು.  ರೋಮ್ ಚಕ್ರವರ್ತಿಯ ಮಗ ಸೆಕ್ಸ್ಟಸ್ ರಾಜ್ಯಾಧಿಕಾರಿ ಕೋಲೇಟಿನಸ್ ಎಂಬುವನ ಹೆಂಡತಿಯನ್ನು ಬಲಾತ್ಕಾರ ಮಾಡಿದ. ಅವಳು ಅಪಮಾನದಿಂದ ಆತ್ಮಹತ್ಯೆಗೆ ಶರಣಾದಳು. ಅವಳ ದೇಹವನ್ನು ಮೆರವಣಿಗೆ ಮಾಡಿದಾಗ ರೊಚ್ಚಿಗೆದ್ದ ಜನ ಚಕ್ರವರ್ತಿಯ ವಿರುದ್ಧ ದಂಗೆ ಎದ್ದರು. ಕ್ಲಿಯೋಪಾತ್ರ ಕೂಡಾ ತನ್ನ ನಾಡು ಈಜಿಪ್ಟ್ ಸಲುವಾಗಿ ಜೂಲಿಯಸ್ ಸೀಸರ್ ಮತ್ತು ಅವನ ಹತ್ಯೆಯ ನಂತರ ಮಾರ್ಕ್ ಆಂಟನಿಯನ್ನು ವರಿಸಿದಳು. ಶತ್ರುಸೈನ್ಯದ ದಂಡನಾಯಕರನ್ನು ತನ್ನ ಹಾಸಿಗೆಯಲ್ಲಿ ತೃಪ್ತಿಪಡಿಸಿ ಅವರನ್ನು ಗುಲಾಮರನ್ನಾಗಿ ಮಾಡಿಕೊಂಡಳು.

ನಂತರ ಅವರು ತಮ್ಮದೇ ಸೃಷ್ಟಿಯಾದ ಇನ್ನೊಂದು ಅದ್ಭುತ ಕತೆಯನ್ನು ಹೇಳಿದರು.  ಹ್ಯಾನಿಬಾಲ್ ಎಂಬ ರಣಭಯಂಕರ ಸೇನಾನಾಯಕ ದಂಡೆತ್ತಿ ಬಂದಾಗ ರೋಮ್ ಪಟ್ಟಣದಿಂದ ಸ್ತ್ರೀಯರು ಕ್ಯಾಪುವಾ ನಗರಕ್ಕೆ ಬಂದು ಹ್ಯಾನಿಬಾಲ್ ಮತ್ತು ಅವನ ಸೈನಿಕರನ್ನು ತೃಪ್ತಿಪಡಿಸಿ ಅವರು ನಿದ್ದೆಯಲ್ಲಿದ್ದಾಗ ಕ್ಯಾಪುವಾ ಸೇನೆ ಯುದ್ಧ ಮಾಡಿದ ಕತೆ. ತಮ್ಮ ದೇಹಸೌಂದರ್ಯವನ್ನೇ ಒಂದು ಆಯುಧವನ್ನಾಗಿ ಬಳಸಿ ಯುದ್ಧದಲ್ಲಿ ಪಾಲ್ಗೊಂಡ ಎಲ್ಲಾ ಹೆಣ್ಣುಗಳ ಕತೆಗಳನ್ನೂ ಅವರು ಒಂದೊಂದಾಗಿ ಹೇಳಿದರು.  ಶತ್ರುವಿನ ಮುಯ್ಯಿ ತೀರಿಸಿಕೊಳ್ಳಲು  ಅಥವಾ ಶತ್ರುವನ್ನು ಸೋಲಿಸಲು ತಮ್ಮ ಪಾವಿತ್ರ್ಯವನ್ನೇ ಬಲಿ ನೀಡಿದ ಧೀರೋದಾತ್ತ ಮಹಿಳೆಯರನ್ನು ಹಾಡಿ ಹೊಗಳಿದರು. ನೆಪೋಲಿಯನ್ನನ್ನು ಕೊಲ್ಲಲು ಇಂಗ್ಲೆಂಡ್ ದೇಶದ ಒಬ್ಬ ಹೆಣ್ಣು ತನ್ನ ಶರೀರಕ್ಕೆ ಭಯಂಕರ ರೋಗದ ಲಸಿಕೆಯನ್ನು ಚುಚ್ಚಿಕೊಂಡು ಅವನಿಗೆ ರೋಗವನ್ನು ದಾಟಿಸಲು ಮಾಡಿದ ಸಂಚಿನ  ಕತೆಯೂ ಬಂತು. ದೈವವಶಾತ್ ನೆಪೋಲಿಯನ್ನನಿಗೆ ಆ ದಿನ ಇದ್ದಕ್ಕಿದ್ದಂತೆ ಆರೋಗ್ಯ ಕೆಟ್ಟು ಈ ಸಂಚು ವಿಫಲವಾಯಿತು.

ಕತೆಗಳನ್ನು ಅವರು ಸಮಾಧಾನಚಿತ್ತದಿಂದಲೇ ಹೇಳಿದರು. ಮಧ್ಯೆ ಮಧ್ಯೆ ನಾಟಕೀಯತೆಗಾಗಿ ಒಂದಷ್ಟು ಭಾವತೀವ್ರತೆಯನ್ನು ಅಭಿನಯಿಸಿದರು, ಅಷ್ಟೇ. ಅವರ ಮಾತುಗಳನ್ನು ಕೇಳಿದ ಯಾರಿಗಾದರೂ ಹೆಣ್ಣಿನ ಏಕಮಾತ್ರ ಕರ್ತವ್ಯವೆಂದರೆ ತ್ಯಾಗ ಮಾಡುವುದು ಮತ್ತು ಯೋಧರ ಬಯಕೆಗಳನ್ನು ತೀರಿಸುವುದು ಎನ್ನಿಸಬೇಕು.  ಇಬ್ಬರು ಸಾಧ್ವಿ ಮಹಿಳೆಯರು ಇದನ್ನೆಲ್ಲಾ ಕೇಳಿಸಿಕೊಂಡರೂ ಇಲ್ಲದಂತೆ ಏನೋ ಘನವಾದ ಆಲೋಚನೆಯಲ್ಲಿ ಮುಳುಗಿದ್ದರು. ಬೆಣ್ಣೆಮುದ್ದೆ ಮೌನವಾಗಿದ್ದಳು.

(ಮುಂದಿನ ಭಾಗವನ್ನು ಇಲ್ಲಿ ಓದಿ)

(c) C.P. Ravikumar, Kannada translation of 'Ball-of-Fat' (Boule de Suif) by Guy De Maupassant.
I acknowledge the English translation which I have used from here. I also acknowledge the images that I have used from different sources - these are all identified as reusable by Google.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)