ಬೆಣ್ಣೆ ಮುದ್ದೆ - ಭಾಗ ೯

ಬೆಣ್ಣೆ ಮುದ್ದೆ - ಭಾಗ ೯
ಫ್ರೆಂಚ್ ಕತೆ - ಗಿ ಡಿ ಮುಪಸಾ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 

(ಇದು ಕಡೆಯ ಭಾಗ - ಎಂಟನೇ ಭಾಗವನ್ನು ಇಲ್ಲಿ ಓದಿ

ವರು ಇಡೀ ಮಧ್ಯಾಹ್ನ ಅವಳಿಗೆ ಯೋಚಿಸಲು ಅವಕಾಶ ಮಾಡಿಕೊಟ್ಟರು. ಆದರೆ ಅವಳನ್ನು "ಮದಾಂ"   ಎಂದು ಸಂಬೋಧಿಸುವ ಬದಲು "ಮದಮೊಸೆಲ್" ಎಂದು ಸಂಬೋಧಿಸಿದರು. ತಮ್ಮ ದೃಷ್ಟಿಯಲ್ಲಿ ಅವಳು ಒಂದು ಅಂಗುಲ ಗಾತ್ರ  ಕೆಳಕ್ಕಿಳಿದಿದ್ದಾಳೆ ಎಂದು ಸೂಕ್ಷ್ಮವಾಗಿ ಬೊಟ್ಟು ಮಾಡಿದಂತೆ ತೋರಿತು.

ಸಂಜೆಯ ಉಪಾಹಾರ ಬಡಿಸಿದ ನಂತರ ವಸತಿಗೃಹದ ಮಾಲೀಕ ಪ್ರತ್ಯಕ್ಷನಾಗಿ ಮತ್ತೆ ಅದೇ ಹಾಡು ಹಾಡಿದ - "ಮಿಸ್ ಎಲಿಜಬೇತ್ ರೂಸೋ ತಮ್ಮ ನಿಲುವು ಬದಲಾಯಿಸಿದ್ದಾರೆಯೇ ಎಂದು ಕೇಳಲು ಪ್ರಷ್ಯನ್ ಅಧಿಕಾರಿ ನನ್ನನ್ನು ಕಳಿಸಿದ್ದಾರೆ."

ಬೆಣ್ಣೆಮುದ್ದೆ ಅಷ್ಟೇ ಒಣಕಲು ಸ್ವರದಲ್ಲಿ "ಇಲ್ಲ," ಎಂದಳು.

ರಾತ್ರಿಯ ಊಟದ ವೇಳೆ ಪ್ರಯಾಣಿಕರ ಮೈತ್ರಿಕೂಟ ಸ್ವಲ್ಪ ಬಡವಾದಂತೆ ಕಂಡಿತು. ಲುಸೆವೂ ಒಂದಲ್ಲ ಮೂರು ಸಲ ಕಹಿಯಾಗಿ ಮಾತಾಡಿದ. ಪ್ರತಿಯೊಬ್ಬರೂ ಹೆಣ್ಣಿನ ತ್ಯಾಗದ ಹೊಸ ನಿದರ್ಶನಕ್ಕಾಗಿ ತಮ್ಮ ಸ್ಮೃತಿಪಟಲಗಳಲ್ಲಿ ವ್ಯರ್ಥವಾಗಿ ಹುಡುಕಾಡಿದರು. ಕೌಂಟೆಸ್ ಗೆ ಒಮ್ಮೆಲೇ ಅದೇಕೋ ಧರ್ಮವನ್ನು ಕುರಿತು ಸ್ವಲ್ಪ ಜಿಜ್ಞಾಸೆ ಮಾಡುವ ಹಂಬಲ ಉಂಟಾಗಿ ಸಾಧ್ವಿಗಳನ್ನು "ಸಂತರು ಮಾಡಿದ ಯಾವುದಾದರೂ ಕಾರ್ಯಗಳ ವಿಷಯ ಹೇಳಿ" ಎಂದು ಕೇಳಿಕೊಂಡಳು. ಅವರು ಹೇಳಿದ ಕತೆಗಳನ್ನು ಕೇಳಿದರೆ ಭಯವಾಗುವಂತಿತ್ತು - ಸಂತರು ಮಾಡಿದ ಅನೇಕ ಕಾರ್ಯಗಳನ್ನು ಇಂದು ಯಾರಾದರೂ ಮಾಡಿದರೆ ಅವರು ಕಡುಶಿಕ್ಷೆಗೆ ಅರ್ಹರಾಗುತ್ತಾರೆ. ಆದರೆ "ದೇವರಿಗಾಗಿ ಮಾಡಿದ ತ್ಯಾಗ" ಎಂದೋ "ಎಲ್ಲರ ಒಳಿತಿಗಾಗಿ ಮಾಡಿದ ಕಾರ್ಯ" ಎಂದೋ ಚರ್ಚ್ ಅಂದಿನ ಕಾಲದಲ್ಲಿ ಈ ಕೃತ್ಯಗಳಿಗೆ ಧರ್ಮದ ಮೊಹರು ಹಾಕಿಬಿಟ್ಟಿತು.


ಈ ಕತೆಗಳ ಸಂದೇಶ ಪ್ರಬಲವಾಗಿತ್ತು. ಕೌಂಟೆಸ್ ಕೇಳುತ್ತಾ ತನ್ಮಯಳಾಗಿ ತಲೆದೂಗಿದಳು.  ಸಾಧುಸಂತರ ವಸ್ತ್ರಗಳನ್ನು ತೊಟ್ಟವರದ್ದು   ಮೌನಸಮ್ಮತಿಯ ವಿಷಯದಲ್ಲಿ ಪಳಗಿದ ಕೈ.  ಜಾಣ ನಿರ್ಲಕ್ಷ್ಯವೋ ಅಥವಾ ಆಪತ್ತಿನಲ್ಲಿ ಸಹಾಯಕ್ಕೆ ಬಂದ ದಡ್ಡತನವೋ, ಒಟ್ಟಿನಲ್ಲಿ ಕತೆಗಳನ್ನು ಹೇಳಿದ್ದ ಸಾಧ್ವೀಮಣಿ ಪ್ರಯಾಣಿಕರು ರೂಪಿಸಿದ ಸಂಚಿಗೆ ಭಯಂಕರವಾದ ಆಧಾರಪೀಠವನ್ನು ಹಾಕಿಕೊಟ್ಟಳು. ಆಕೆಯನ್ನು ಅವರೆಲ್ಲರೂ ಪುಕ್ಕಲು ಎಂದುಕೊಂಡಿದ್ದು ಸುಳ್ಳಾಯಿತು - ತಾನು ಧೈರ್ಯಸ್ಥೆ, ವಾಚಾಳಿ, ಸಾಕಷ್ಟು ಕ್ರೂರಿ ಕೂಡಾ ಎಂದು ಅವಳು ಸಾಬೀತುಪಡಿಸಿದಳು. ಧರ್ಮಸಂಕಟಕ್ಕೆ ಬಿದ್ದವರ ತೊಳಲಾಟ ಅವಳಲ್ಲಿ ಕಾಣಲಿಲ್ಲ. ಅವಳ ಮಾತು ಕಬ್ಬಿಣದ ಸಲಾಕೆಯಂತೆ ಪ್ರಹಾರ ಮಾಡಿತು. ಅವಳಿಗೆ ಒಮ್ಮೆಯೂ ಸಂದೇಹ ಉಂಟಾಗಲಿಲ್ಲ. ಅನುಮಾನವೆಂಬುದು ಅವಳ ವಿವೇಕದಲ್ಲಿ ಇರಲೇ ಇಲ್ಲ. ತನ್ನ ಮಗನನ್ನೇ ಬಲಿ ಕೊಡಲು ಸಿದ್ಧನಾದ ಅಬ್ರಹಾಂ ವಿಷಯದಲ್ಲಿ ಅವಳಿಗೆ ಎಳ್ಳಷ್ಟೂ ಸಂಶಯವಿಲ್ಲ - ದೇವರು ಆದೇಶವಿತ್ತರೆ ಅವಳೂ ತನ್ನ ತಾಯಿಯನ್ನೋ ತಂದೆಯನ್ನೋ ಕೊಲ್ಲಲು ಸಿದ್ಧಳು. ಸದುದ್ದೇಶದಿಂದ ಮಾಡಿದ ಯಾವ ಕಾರ್ಯಕ್ಕೂ ದೇವರು ಅಸಮ್ಮತಿ ಸೂಚಿಸುವುದಿಲ್ಲ ಎಂದು ಅವಳ ಬಲವಾದ ನಂಬಿಕೆ.  ಸಾಧ್ವಿಯ ವಾಣಿಯ ಬೆಂಬಲದಿಂದ ಕೌಂಟೆಸ್  "ಕಾರಣವು ಕಾರ್ಯವನ್ನು ನ್ಯಾಯಸಮ್ಮತಗೊಳಿಸುತ್ತದೆ" ಎಂಬ ಕ್ರೈಸ್ತನೀತಿಯನ್ನು ಎತ್ತಿಹಿಡಿದಳು.

ಅವಳು ಸಾಧ್ವಿಯನ್ನು "ಅಕ್ಕಾ, ದೇವರು ಪವಿತ್ರವಾದ ಉದ್ದೇಶದಿಂದ ಮಾಡಿದ ಯಾವುದೇ ಕಾರ್ಯವನ್ನು ಕ್ಷಮಿಸುತ್ತಾನೆ, ಅಲ್ಲವೇ?" ಎಂದು ಕೇಳಿದಳು.

"ಅದರಲ್ಲಿ ಸಂಶಯ ಪಡುವುದು ಏನಿದೆ ತಾಯಿ? ಮನುಷ್ಯನು ಮಾಡುವ ಒಂದು ಕಾರ್ಯವನ್ನು ಪ್ರತ್ಯೇಕವಾಗಿ ನೋಡದೆ ಉದ್ದೇಶದ ಹಿನ್ನೆಲೆಯಲ್ಲಿ ನೋಡಿದಾಗಲೇ ಅದರ ಗುಣವನ್ನು ತಿಳಿಯುವುದು ಸಾಧ್ಯ"

ಅವರ ಮಾತುಗಳು ಹೀಗೆ ಮುಂದುವರೆದವು. ದೇವರ ಚಿತ್ತ, ದೇವರ ನಿರ್ಧಾರ ಇತ್ಯಾದಿ ತಾವು ಎಂದೂ ಗಮನಿಸದ ಧರ್ಮಸೂಕ್ಷ್ಮಗಳನ್ನು ಇಂದು ಅವರು ಅತ್ಯಾಸಕ್ತಿಯಿಂದ ಚರ್ಚಿಸಿದರು.  ಪ್ರತ್ಯಕ್ಷವಾಗಿ ಏನನ್ನೂ ಹೇಳದಿದ್ದರೂ ಈ ಮಾತುಗಳು ಮುಸುಕಿನ ಒಳಗೇ ಕೊಟ್ಟ ಗುದ್ದುಗಳಂತೆ ಬೆಲೆವೆಣ್ಣಿನ ವಿರೋಧವನ್ನು ಸ್ವಲ್ಪಸ್ವಲ್ಪವೇ ಹಿಮ್ಮೆಟ್ಟಿಸಿದವು.  ಇದಾದ ನಂತರ ಮಾತು ದಿಕ್ಕು ಬದಲಾಯಿಸಿತು. ಹಿರಿಯ ಸಾಧ್ವಿ  ತನ್ನ ಮಠದ ಬಗ್ಗೆ ಮಾತಾಡಿದಳು. ಮಠದ ಗುರು-ಮಾತೆ, ಮಠದ ಇನ್ನಿತರ ಸಾಧ್ವಿಯರು, ಅತ್ಯಂತ ಪ್ರಿಯಳಾದ ಸಾಧ್ವಿ ನಿಸೆಫೋರ್ ಮೊದಲಾದವರ ಬಗ್ಗೆ ಹೇಳಿದಳು. ತಮ್ಮ ಪ್ರಯಾಣದ ಉದ್ದೇಶವನ್ನು ಹೊರಗೆಡಹಿದಳು. ಆವ್ರೆ ಪಟ್ಟಣದ ಆಸ್ಪತ್ರೆಗಳಿಗೆ ಸೇವೆಗಾಗಿ ಅವರನ್ನು ಕರೆಯಲಾಗಿತ್ತು. ಅಲ್ಲಿ ನೂರಾರು ಫ್ರೆಂಚ್ ಯೋಧರು ದಡಾರದ ಪಿಡುಗಿಗೆ ತುತ್ತಾಗಿದ್ದರು. ಈ ಭಯಂಕರ ರೋಗದ ಯಾತನೆಯನ್ನು ಸಾಧ್ವಿಯರು ವರ್ಣಿಸಿದರು. ಒಬ್ಬ ಪ್ರಷ್ಯನ್ ಅಧಿಕಾರಿಯ ತೀಟೆಯ ಕಾರಣ ತಾವು ಹೋಗುವುದು ತಡವಾದರೆ ಅದೆಷ್ಟು ಜನ ಫ್ರೆಂಚ್ ಯೋಧರು ಸಾಯುವರೋ! ಅವರ ಪ್ರಾಣಗಳನ್ನು ತಾವು ಉಳಿಸಬಹುದಾಗಿತ್ತು! ಯೋಧರ ಶುಶ್ರೂಷೆಯಲ್ಲಿ ಹಿರಿಯ ಸಾಧ್ವಿ  ಪಳಗಿದವಳು. ಯೋಧರ ಸೇವೆಗಾಗಿ ಅವಳು  ಕ್ರಿಮಿಯಾ, ಇಟಲಿ, ಆಸ್ಟ್ರಿಯಾ ಮೊದಲಾದ ಕಡೆಗಳಿಗೆ ಪ್ರಯಾಣ ಮಾಡಿದ್ದಾಳೆ. ತನ್ನ ಸಾಧನೆಗಳನ್ನು ಅವಳು ವೈಭವೋಪೇತವಾಗಿ ವರ್ಣಿಸಿದಳು. ಆಕೆ ಒಬ್ಬ ದಿಟವಾದ ಸಾಧಕಿ. ಆಕೆಯ ಮುಖದಲ್ಲಿದ್ದ ಅಸಂಖ್ಯ ಕಲೆಗಳು ಯುದ್ಧದ ಅಸಂಖ್ಯ ಅತ್ಯಾಚಾರಗಳಂತೆ ತೋರುತ್ತಿದ್ದವು.

ಆಕೆಯ ಮಾತು ಮುಗಿದ ಮೇಲೆ ಬೇರೆ ಯಾರಿಗೂ ಮಾತಾಡುವ ಮನಸ್ಸಾಗಲಿಲ್ಲ. ಅವಳ ಮಾತುಗಳು ಅಷ್ಟು ಪ್ರಭಾವಶಾಲಿಯಾಗಿದ್ದವು.

ಊಟ ಮುಗಿದ ಕೂಡಲೇ ಅವರು ತಮ್ಮ ಕೋಣೆಗಳಿಗೆ ತೆರಳಿದರು. ಮರುದಿನ ಮಧ್ಯಾಹ್ನದವರೆಗೂ ಅವರು ಕೆಳಗಿಳಿಯಲಿಲ್ಲ.

ಮಧ್ಯಾಹ್ನದ ಭೋಜನ ಮಾತಿಲ್ಲದೆ ಸಾಗಿತ್ತು. ತಾವು ಬಿತ್ತಿದ ಬೀಜ ಮೊಳೆತು ಹೂ ಬಿಡಲು ಸಮಯ ಬೇಕೆಂದು ಅವರಿಗೆ ಗೊತ್ತಿತ್ತು.  ಊಟ ಮುಗಿದ ನಂತರ ವಾಯುವಿಹಾರಕ್ಕೆ ಹೋಗೋಣವೇ ಎಂದು ಕೌಂಟೆಸ್ ಕೇಳಿದಳು. ಕೌಂಟ್ ಬಹಳ ವಾತ್ಸಲ್ಯದಿಂದ ಬೆಣ್ಣೆಮುದ್ದೆಯ ತೋಳಿನಲ್ಲಿ ತೋಳು ಹಾಕಿ ಉಳಿದವರ ಹಿಂದೆ ನಡೆದ. ಅವಳ ಜೊತೆ ಮಾತಾಡುತ್ತಿದ್ದ ರೀತಿ ತನ್ನ ಮನೆಯ ಪರಿಚಾರಕಿಯ ಜೊತೆ ಮಾತಾಡುತ್ತಿರುವ ಹಾಗೆ ಸ್ವಲ್ಪ ಉಪೇಕ್ಷೆಯಿಂದ ಕೂಡಿತ್ತು. ತನ್ನ ಸಾಮಾಜಿಕ ಸ್ಥಾನದ ಎತ್ತರವನ್ನು ಪ್ರದರ್ಶಿಸುತ್ತಾ "ಮಗೂ" ಇತ್ಯಾದಿಯಾಗಿ ಅವಳನ್ನು ಸಂಬೋಧಿಸುತ್ತಿದ್ದ.  ಅವನು ನೇರವಾಗಿ ಮುಖ್ಯವಾದ ಪ್ರಶ್ನೆಗೆ ಬಂದ:


"ಹಾಗಾದರೆ ನಮ್ಮನ್ನು ಇಲ್ಲೇ ಈ ಅಪಾಯದ ಸನ್ನಿವೇಶದಲ್ಲಿ ಬಿಟ್ಟುಹೋಗುವ ಇರಾದೆಯೇ? ನೀನು ಜೀವನದಲ್ಲಿ  ಎಷ್ಟೋ ಜನರಿಗೆ ಕೊಟ್ಟಿರುವ ಸುಖವನ್ನು ಇನ್ನೂ ಒಬ್ಬನಿಗೆ ಕೊಡಲು ಹಿಂಜರಿಕೆಯೇ?"

ಬೆಣ್ಣೆಮುದ್ದೆ ಮೌನವಾಗಿದ್ದಳು. ಈಗ ಅವನು ನಯ-ವಿನಯ, ತರ್ಕ ಮತ್ತು  ಭಾವೋದ್ವೇಗಗಳ ಮೂಲಕ ಅವಳನ್ನು ಅಲ್ಲಾಡಿಸಲು ಪ್ರಯತ್ನಿಸಿದ. ಇನ್ನೊಬ್ಬರನ್ನು ಹೊಗಳುವಾಗಲೂ ಅವರ ಜೊತೆ ಸ್ನೇಹದಿಂದ ಮಾತಾಡುವಾಗಲೂ ತನ್ನ "ಕೌಂಟ್" ಎಂಬ ಬಿರುದಿಗೆ ಚ್ಯುತಿ ಬರದಿರುವಂತೆ, ತಾನು ಒಂದು ಮೆಟ್ಟಿಲು ಕೆಳಗಿಳಿಯದಂತೆ ಇರುವುದು ಅವನಿಗೆ ಸಿದ್ಧಿಸಿತ್ತು. ತಮಗೆ ಅವಳು ಮಾಡಬಹುದಾದ ಉಪಕಾರದ ಮಹತ್ತ್ವವನ್ನು ಅವನು ಹಾಡಿ ಹೊಗಳಿದ. ಕೊನೆಗೆ "ಮಗೂ, ಅವನು ಪುಣ್ಯ ಮಾಡಿರಬೇಕು, ನಿನ್ನಂಥ ಚೆಲುವೆಯೊಬ್ಬಳು ಸಿಕ್ಕುವುದಕ್ಕೆ! ಅವನ ದೇಶದಲ್ಲಿ ಎಲ್ಲಿ ಸಿಕ್ಕಾರು, ಬಿಡು!" ಎಂದು ಸೇರಿಸಿದ.

ಬೆಣ್ಣೆಮುದ್ದೆ ಇದಕ್ಕೂ ಏನೂ ಉತ್ತರ ಹೇಳದೆ ಮುಂದೆ ಸಾಗಿ ಉಳಿದವರನ್ನು ಕೂಡಿಕೊಂಡಳು. ಅವರು ಮನೆ ಸೇರಿದ ಕೂಡಲೇ ಅವಳು ತನ್ನ ಕೋಣೆಗೆ ತೆರಳಿದವಳು ಆ ದಿನ ಮತ್ತೆ ಕಾಣಿಸಿಕೊಳ್ಳಲಿಲ್ಲ.  ಅವರ ಆತಂಕ ಗಗನಕ್ಕೇರಿತು.  ಅವಳು ಹೀಗೆ ಹಠ ಹಿಡಿದು ಕೂತರೆ ಅವರು ಏನು ತಾನೇ ಮಾಡಬಲ್ಲರು?

ಊಟದ ಸಮಯವಾಯಿತು.  ಅವರು ಅವಳಿಗಾಗಿ ವೃಥಾ ಕಾದು ಕುಳಿತರು.  ಕೊನೆಗೆ ವಸತಿಗೃಹದ ಮಾಲೀಕ ಬಂದು "ಮಿಸ್ ರೂಸೋ ಅಸ್ವಸ್ಥಳಾಗಿರುವುದರಿಂದ ತಾವು ಯಾರೂ ಕಾಯಬಾರದು " ಎಂದು ಘೋಷಿಸಿದ.  ಎಲ್ಲರ ಕಿವಿ ನೆಟ್ಟಗಾಯಿತು.

ಕೌಂಟ್ ವಸತಿಗೃಹದ ಮಾಲೀಕನ ಬಳಿಸಾರಿ "ಅವನು ಒಳಗಿದ್ದಾನೆಯೇ?" ಎಂದು ಮೆಲುದನಿಯಲ್ಲಿ ಕೇಳಿದ.

"ಹೂಂ" ಎಂಬ ಉತ್ತರ ಬಂತು.

ಕೌಂಟ್ ಗಟ್ಟಿಯಾಗಿ ಏನೂ ಹೇಳದಿದ್ದರೂ ತನ್ನ ಸಂಗಾತಿಗಳ ಕಡೆ ನೋಡಿ ಸೂಕ್ಷ್ಮವಾಗಿ ತಲೆ ಅಲ್ಲಾಡಿಸಿದ.  ಒಮ್ಮೆಲೇ ಅವರೆಲ್ಲರ ಎದೆಗಳಿಂದ ದೊಡ್ಡ ಸಮಾಧಾನದ ನಿಟ್ಟುಸಿರು ಹೊರಹೊಮ್ಮಿತು. ಅವರ ಕಣ್ಣುಗಳಲ್ಲಿ ಬೆಳಕು ಹಿಂದಿರುಗಿತು.

ಲುಸೆವೂ "ಓ ಪವಿತ್ರ ಕ್ರಿಸ್ಟೊಫ಼ರ್! ಇವತ್ತಿನ ವೈನ್ ವೆಚ್ಚ ನನ್ನದು! ಎಲ್ಲಿ, ತನ್ನಿ ನೋಡೋಣ ವೈನ್ ಇದ್ದರೆ!" ಎಂದು ಕೂಗಿದ.   ಮನೆಯ ಮಾಲೀಕ ನಾಲ್ಕು ವೈನ್ ಬಾಟಲಿಗಳನ್ನು ಹೊತ್ತು ತಂದಾಗ ಶ್ರೀಮತಿ ಲುಸೆವೂ ಮುಖ ಕಪ್ಪಿಟ್ಟಿತು.

ಒಮ್ಮೆಲೇ ಎಲ್ಲರಿಗೂ ಮಾತಾಡುವ ಹುರುಪು ಬಂದುಬಿಟ್ಟಿತ್ತು.  ಹೇಳತೀರದ ಆನಂದ ಅವರ ಹೃದಯಗಳಲ್ಲಿ ಉಕ್ಕಿತು. ಶ್ರೀಮತಿ ಕಾರಿ-ಲೆಮಡಾನ್ ಎಷ್ಟು ಆಕರ್ಷಕಳಾದ ಮಹಿಳೆ ಎಂದು ಕೌಂಟ್ ಗೆ ಇದ್ದಕ್ಕಿದ್ದಂತೆ ಹೊಳೆಯಿತು. ಮಿ। ಕಾರಿ-ಲೆಮಡಾನ್ ಕೌಂಟೆಸ್ ಕಡೆ ನೋಡಿ ಅವಳ ಚೆಲುವನ್ನು ಹೊಗಳಿದ. ಎಲ್ಲರೂ ಸಣ್ಣಪುಟ್ಟ ಮಾತಿಗೂ ಒಬ್ಬರಿಗೊಬ್ಬರು ಶಹಭಾಸ್ ಹೇಳುತ್ತಾ ಊಟ ಮಾಡಿದರು.  ಒಮ್ಮೆಲೇ ಲುಸೆವೂ ಮುಖ ಗಂಭೀರವಾಯಿತು. ಅವನು ಕೈ ಮೇಲೆತ್ತಿ "ಸದ್ದು!" ಎಂದ. ಎಲ್ಲರೂ ಅವಾಕ್ಕಾದರು. ಅವರಿಗೆ ಮುಖದಲ್ಲಿ ದಿಗಿಲು ಕಾಣಿಸಿತು.  ಲುಸೆವೂ ಛಾವಣಿಯ ಕಡೆ ಬೆರಳು ಮಾಡಿ  "ಶ್!" ಎಂದು ಕಿವಿ ನಿಮಿರಿಸಿಕೊಂಡು ಆಲಿಸಿದ. ನಂತರ ತನ್ನ ಮಾಮೂಲು ಧ್ವನಿಯಲ್ಲಿ "ಇಲ್ಲ! ಎಲ್ಲಾ ಸರಿಯಾಗಿದೆ - ಯೋಚನೆ ಬೇಡ!" ಎಂದು ಸಂಭಾಷಣೆ ಮುಂದುವರೆಸಿದ.

ಅವರಿಗೆ ಮೊದಲು ಅವನ ಮಾತು ಅರ್ಥವಾಗಲಿಲ್ಲ. ಕ್ರಮೇಣ ಅವರಿಗೆ ಅದರ ಅಂತರಾರ್ಥ ಹೊಳೆದು ಗಟ್ಟಿಯಾಗಿ ನಕ್ಕರು. ಇದಾದ ಹದಿನೈದು ನಿಮಿಷಗಳ ನಂತರ ಅವನು ಮತ್ತೊಮ್ಮೆ ಅದೇ ಹುಚ್ಚಾಟವನ್ನು ಪುನರಾವರ್ತಿಸಿದ - ಸಂಜೆ  ಪೂರ್ತಿ ಅವನು ಅವರನ್ನು ಹೀಗೆ ಮತ್ತೆ ಮತ್ತೆ ನಗಿಸಿದ.  ಉಪ್ಪರಿಗೆಯ ಕಡೆ ನೋಡಿ ಅಲ್ಲಿರುವವನ ಜೊತೆ ಮಾತಾಡುವಂತೆ ಅಭಿನಯಿಸುತ್ತಾ ಅವನಿಗೆ ದ್ವಂದ್ವಾರ್ಧ ಬರುವ ಮಾತುಗಳಲ್ಲಿ ಸಲಹೆ ಕೊಡುವ ನಾಟಕವಾಡಿದ. "ಅಯ್ಯೋ ಆ ಹೆಣ್ಣಿನ ಗತಿ ಏನು! ಹಾಳು ಪ್ರಷ್ಯನ್!" ಎಂದು ಇಲ್ಲದ ಸಂತಾಪ ವ್ಯಕ್ತ ಪಡಿಸಿದ. ಸಂಭಾಷಣೆ ಬೇರೆ ಕಡೆ ತಿರುಗಿದಾಗ ಅವನು ಮತ್ತೆ  ಮೇಲೆ ನೋಡಿ "ಸಾಕು! ಸಾಕು!" ಎಂದು ಹುಸಿಕೋಪ ಪ್ರದರ್ಶಿಸುತ್ತಿದ್ದ. "ಅವಳನ್ನು ನಾವು ಮತ್ತೆ ನೋಡುತ್ತೇವೋ ಇಲ್ಲವೋ - ಹಾಳಾದವನು ಸಾಯಿಸಿಯೇ ಬಿಡುತ್ತಾನೆ ಅಂತ ಕಾಣುತ್ತೆ!" ಎಂದು ಹಲ್ಲು ಕಿರಿದ. ಈ ನಗೆಚಾಟಿಕೆಗಳು ಕೀಳು ಅಭಿರುಚಿಯವಾದರೂ ಅವರಿಗೆ ಮೋಜೆನ್ನಿಸಿದವು.  ಯಾರೂ ಆಕ್ಷೇಪಿಸಲಿಲ್ಲ.  ಬೇರೆ ಸಂದರ್ಭದಲ್ಲಿ ಅವರು ಮುನಿಸಿಕೊಳ್ಳುತ್ತಿದ್ದರೇನೋ - ಆದರೆ ಅಲ್ಲಿ ಸೃಷ್ಟಿಯಾಗಿದ್ದ ಕಾಮುಕತೆಯ ವಾತಾವರಣದಲ್ಲಿ ಅವರಿಗೆ ಕೋಪ ಬರಲಿಲ್ಲ.


ಊಟದಲ್ಲಿ ಸಿಹಿತಿಂಡಿ ಬಡಿಸುವ ಹೊತ್ತಿಗೆ ಹೆಂಗಸರೂ ಕೆನ್ನೆ ಊದಿಸಿಕೊಂಡು ನವಿರುಹಾಸ್ಯಕ್ಕೆ ಇಳಿದರು. ಅವರ ಕಣ್ಣುಗಳು ಹೊಳೆದವು. ಅವರು ಧಾರಾಳವಾಗಿ ಮದ್ಯ ಸೇವಿಸಿದರು. ಸಾಮಾನ್ಯವಾಗಿ ತನ್ನ ಘನತೆಯನ್ನು ಮರೆಯದ ಕೌಂಟ್ ಕೂಡಾ ಅಸಭ್ಯವಾದ ನಗೆಹನಿಯನ್ನಾಡಿದ.   ಲುಸೆವೂ ಗೆ ಸ್ಫೂರ್ತಿ ಉಕ್ಕಿ ಮದ್ಯದ ಬಟ್ಟಲನ್ನು ಮೇಲೆತ್ತಿ "ಇಗೋ! ನಮ್ಮ ಮುಕ್ತಿಗಾಗಿ ನಾನು ಕುಡಿಯುತ್ತೇನೆ" ಎಂದು ಘೋಷಿಸಿದ. ಎಲ್ಲರೂ ಮೇಲೆದ್ದು "ಇಗೋ! ಇಗೋ!" ಎಂದು ಮಾರ್ದನಿಸಿದರು. ಎಂದೂ ಮದ್ಯವನ್ನು ಹೀರದ ಸಾಧ್ವಿಯರು ಕೂಡಾ ಇಂದು ಸೇವಿಸಿ "ಏನಿಲ್ಲ, ನಿಂಬೆ ಪಾನಕದ ಹಾಗಿದೆ, ಸ್ವಲ್ಪ ಘಾಟಿದೆ, ಆದರೆ ಪಾನಕಕ್ಕಿಂತ ಎಷ್ಟೋ ಚೆನ್ನಾಗಿದೆ!" ಎಂದರು.

"ಇಲ್ಲಿ ಪಿಯಾನೋ ಇಲ್ಲ, ಇಲ್ಲದಿದ್ದರೆ ನಾವು ಸಂಗೀತಸಭೆ ನಡೆಸಬಹುದಾಗಿತ್ತು!" ಎಂದು ಲುಸೆವೂ ನಿರಾಸೆಗೊಂಡ.  ಕಾನ್ವುಡೇ ಒಂದೂ ಮಾತಾಡದೆ ಕತೆಯಾಡದೆ ಸುಮ್ಮನೆ ಕುಳಿತಿದ್ದ. ಅವನು ಯಾವುದೋ ಗಹನವಾದ ಆಲೋಚನೆಯಲ್ಲಿ ಮುಳುಗಿದ್ದಂತೆ ತೋರಿತು.  ಕೆಲವೊಮ್ಮೆ ಅವನು ರೋಷದಲ್ಲಿ ಬಲವಾಗಿ ತಲೆಕೊಡಹುತ್ತಿದ್ದ.  ಮಧ್ಯರಾತ್ರಿಯಾದಾಗ ಲುಸೆವೂ ತೂರಾಡುತ್ತಾ ಅವನನ್ನು  ಸಮೀಪಿಸಿ ಅವನ ಹೊಟ್ಟೆಗೆ ಬೆರಳಿನಿಂದ ಚುಚ್ಚಿ ತೊದಲುತ್ತಾ "ಯಾಕ್ ಒಂಥರಾ ಗುಂ ಅಂತ ಇದ್ದೀಯಾ?"   ಎಂದಾಗ  ಕಾನ್ವುಡೇ ಬುಸುಗುಡುತ್ತಾ ಮೇಲೆದ್ದು "ನಾಚಿಕೆಗೇಡು! ನಾಚಿಕೆಯಾಗಬೇಕು ನಿಮಗೆ!" ಎಂದು ದಾಪುಗಾಲು ಹಾಕುತ್ತಾ ಎದ್ದುಹೋದ.

ಒಂದು ಕ್ಷಣ ಎಲ್ಲರಿಗೂ ತಣ್ಣೀರು ಎರಚಿದ ಹಾಗಾಯಿತು. ಲುಸೆವೂ ಸ್ತಂಭೀಭೂತನಾಗಿ ನಿಂತ. ಆದರೆ ಮರುಕ್ಷಣವೇ ಸಾವರಿಸಿಕೊಂಡು "ಹೊಟ್ಟೆಕಿಚ್ಚು ಕಣ್ರೀ! ಅವನಿಗೆ ಹೊಟ್ಟೆ ಕಿಚ್ಚು!" ಎಂದ. ಅವರಿಗೆ ಅರ್ಥವಾಗದೇ ಹೋದಾಗ ತಾನು ಮೊನ್ನೆ ರಾತ್ರಿ ಕಂಡ ಘಟನೆಯನ್ನು ಉಪ್ಪುಕಾರ ಬೆರೆಸಿ ವರ್ಣಿಸಿದ.  ಅವರ ವಿನೋದಗೋಷ್ಠಿಗೆ  ಮತ್ತೊಮ್ಮೆ ಕಳೆಯೇರಿತು. ಹೆಂಗಸರು ಹುಚ್ಚುಹುಚ್ಚಾಗಿ ಆಡಿದರು. ಕೌಂಟ್ ಮತ್ತು ಮಿ| ಕಾರಿ-ಲೆಮಡಾನ್ ಬಿದ್ದೂಬಿದ್ದೂ ನಕ್ಕು ತಡೆಯಲಾರದೆ ಅತ್ತರು. ಅವರಿಗೆ ಲುಸೆವೂ ಮಾತಿನಲ್ಲಿ ನಂಬಿಕೆ ಬರಲಿಲ್ಲ.

"ಏನಂದ್ರಿ? ನಿಜವೇ ನೀವು ಹೇಳೋದು?"

"ನಾನು ಕಣ್ಣಾರ ನೋಡಿದೆ!"

"ಅವಳು ಬೇಡ ಹೋಗು ಅಂದಳೇ?!"

"ಹೂಂ! ಪ್ರಷ್ಯನ್ ಆಫೀಸರ್ ಪಕ್ಕದ ಕೋಣೆಯಲ್ಲೇ ಇದ್ದಾನೆ ಅಂತ ಸಬೂಬು ಹೇಳಿದಳು!"

"ಸಾಧ್ಯವೇ ಇಲ್ಲ!"

"ನನ್ನ ಆಣೆ!"

ಕೌಂಟ್ ಹುಚ್ಚಾಪಟ್ಟೆ ನಕ್ಕ. ಅವನ  ಉಸಿರು  ಕಟ್ಟಿತು. ಮಿ| ಕಾರಿ-ಲೆಮಡಾನ್ ಪಕ್ಕೆ ಹಿಡಿದುಕೊಂಡು ನಕ್ಕ.

ಲುಸೆವೂ "ಈಗ ಅರ್ಥವಾಯಿತೋ! ಅವನಿಗೆ ಇವತ್ತು ಯಾಕೆ ನಗು ಬರಲಿಲ್ಲ ಅಂತ?" ಎಂದಾಗ ಎಲ್ಲರೂ  ಮತ್ತೊಮ್ಮೆ ಗಹಗಹಿಸಿ ನಕ್ಕರು.  ನಕ್ಕೂನಕ್ಕೂ ಅವರಿಗೆ ಸಾಕಾಗಿಹೋಗಿತ್ತು.

ಎಲ್ಲರೂ ವಿದಾಯ ಹೇಳಿ ತಮ್ಮ ಕೋಣೆಗಳಿಗೆ ತೆರಳಿದರು. ದುಷ್ಟ ಸ್ವಭಾವದ ಶ್ರೀಮತಿ ಲುಸೆವೂ ಮಲಗಿಕೊಳ್ಳುವಾಗ ಶ್ರೀಮತಿ ಕಾರಿ-ಲೆಮಡಾನ್ ಬಗ್ಗೆ ಗಂಡನಿಗೆ ಚಾಡಿ ಹೇಳಿದಳು - "ಅವಳ ಮುಖ ನೋಡಿದಿರಾ? ಹೊಟ್ಟೆಕಿಚ್ಚಿನಿಂದ ಕಪ್ಪಾಗಿ ಹೋಗಿತ್ತು! ಕೆಲವು ಹೆಂಗಸರಿಗೆ ಪೋಷಾಕು ನೋಡಿದರೆ ಅದೇನು ಕಾಮನೆಯೋ! ಗಂಡಸು ಫ್ರೆಂಚ್ ಆದರೇನು, ಪ್ರಷ್ಯನ್ ಆದರೇನು! ಥೂ ಹೇಸಿಗೆ!" ಎಂದು ಕುಟುಕಿದಳು.

ಅಂದು ರಾತ್ರಿ ಅವರು ಯಾರಿಗೂ ಬೇಗ ನಿದ್ರೆ ಬರಲಿಲ್ಲ. ಅವರ ಕೋಣೆಗಳಿಂದ ಪಿಸುಗುಟ್ಟುವ, ಬರಿಗಾಲಿನಲ್ಲಿ ಓಡಾಡುವ, ಕಿರಿಗುಟ್ಟುವ ಸದ್ದುಗಳು ಕೇಳಿಬಂದವು. ಬಹಳ ಹೊತ್ತಿನವರೆಗೆ ಕೋಣೆಗಳಲ್ಲಿ ದೀಪಗಳು ಉರಿಯುತ್ತಿದ್ದವು. ಅವರು ಹೀರಿದ ಶಾಂಪೇನ್ ಮದ್ಯ ಅವರ ಮೇಲೆ ಪರಿಣಾಮ ಮಾಡಿತ್ತು.


ಬೆಳಗಾಯಿತು. ಚಳಿಗಾಲದ ಶುಭ್ರಾಕಾಶದಲ್ಲಿ ಸೂರ್ಯ ಹೊಳೆಯುತ್ತಿದ್ದ.  ಎಲ್ಲೆಡೆ ಬಿದ್ದಿದ್ದ ಹಿಮ ಸೂರ್ಯರಶ್ಮಿಯಲ್ಲಿ ಮಿಂಚಿತು. ಕುದುರೆ ಕಟ್ಟಿದ ಗಾಡಿ ಬಾಗಿಲ ಬಳಿಯಲ್ಲೇ ಕಾದಿತ್ತು.  ಕುದುರೆಗಳ ಕಾಲುಗಳ ಬಳಿ ಪಾರಿವಾಳಗಳ ದೊಡ್ಡ ಹಿಂಡು
 ಓಡಾಡುತ್ತಿತ್ತು. ಅವುಗಳ ಪುಕ್ಕಗಳು ದಟ್ಟವಾಗಿದ್ದವು. ಗುಲಾಬಿ ಬಣ್ಣದ ಕಣ್ಣುಗಳ ನಡುವೆ ಕಪ್ಪು ಚುಕ್ಕೆ ಹೊಳೆಯುತ್ತಿತ್ತು.  ಕುದುರೆಗಳ ಲದ್ದಿಯಲ್ಲಿ ತಮ್ಮ ಜೀವನಾಧಾರವನ್ನು ಅವು ಹೆಕ್ಕಿಕೊಳ್ಳುತ್ತಿದ್ದವು.

ಗಾಡಿಯ ಚಾಲಕ ಕುರಿತುಪ್ಪುಟದ ಹೊದ್ದಿಕೆ ಹೊದ್ದು ಹೊಗೆಸೊಪ್ಪು ಸೇದುತ್ತಾ ಕುಳಿತಿದ್ದ. ಪ್ರವಾಸಿಗರು  ಲಗುಬಗೆಯಿಂದ ಉಳಿದ ಪ್ರಯಾಣಕ್ಕೆ ಬೇಕಾದ ಊಟ-ತಿಂಡಿಗಳನ್ನು ಹೊಂದಿಸಿಕೊಳ್ಳುತ್ತಿದ್ದರು. ಇದೆಲ್ಲಾ ಮುಗಿದಾಗ ಅವರು ಬೆಣ್ಣೆಮುದ್ದೆ ಬರುವುದನ್ನೇ ಎದುರುನೋಡುತ್ತಿದ್ದರು. ಅವಳು ಕೊನೆಗೂ ಕಾಣಿಸಿಕೊಂಡಳು.

ಅವಳು ವಿಚಲಿತಳಾದಂತೆ, ಅಪಮಾನಿತಳಾದಂತೆ ಕಂಡಳು. ಅಂಜುತ್ತಾ ಅವಳು ತನ್ನ ಸಹಪ್ರಯಾಣಿಕರತ್ತ ಹೆಜ್ಜೆ ಹಾಕಿದಳು. ಅವರು ಅವಳನ್ನು ನೋಡದವರಂತೆ ಮುಖ ತಿರುಗಿಸಿಕೊಂಡರು. ಕೌಂಟ್ ಗರ್ವದಿಂದ ತನ್ನ ಹೆಂಡತಿಯ ಕಂಕುಳಲ್ಲಿ ಕೈಹಾಕಿ ಎಳೆದುಕೊಂಡು ಅವಳನ್ನು ಅಪವಿತ್ರ ಸ್ಪರ್ಶದಿಂದ ಕಾಪಾಡಿದ.

ಸ್ಥೂಲಕಾಯದ ಹುಡುಗಿ ಸ್ತಂಭೀಭೂತಳಾಗಿ ಒಂದು ಕ್ಷಣ ನಿಂತುಬಿಟ್ಟಳು. ಅನಂತರ ಧೈರ್ಯ ತಂದುಕೊಂಡು ಉದ್ಯಮಿಯ ಹೆಂಡತಿಯ ಕಡೆ ತಿರುಗಿ "ಶುಭ ಮುಂಜಾನೆ, ಮದಾಂ" ಎಂದಳು. ಆಕೆ ಶ್ರೀಮದ್ ಗಾಂಭೀರ್ಯದಿಂದ ಕಂಡೂ ಕಾಣದಂತೆ ತಲೆಬಾಗಿಸಿದಳು. ಅನೈತಿಕತೆಯ ವಿರುದ್ಧದ ಪ್ರತಿಭಟನೆ ಅವಳ ಕಣ್ಣುಗಳಲ್ಲಿ  ಮಿಂಚಿತು. ಎಲ್ಲರೂ ತುಂಬಾ ಕಾರ್ಯವ್ಯಸ್ತರಂತೆ ನಟಿಸಿದರು. ಅವಳಿಗೆ ಯಾವುದೋ ಭಯಾನಕವಾದ ರೋಗ ಬಂದು ಬಡಿದುಕೊಂಡಿದೆಯೇನೋ ಎಂಬಂತೆ ಅವಳಿಂದ ಅವರು ದೂರ ಸರಿದರು.  ಎಲ್ಲರೂ ಬೇಗಬೇಗ ಗಾಡಿಯನ್ನು ಹತ್ತಿಕೊಂಡರು. ಅವಳು ಎಲ್ಲರಿಗಿಂತ ಕಡೆಯವಳಾಗಿ ತಾನು ಹಿಂದೆ ಕುಳಿತಿದ್ದ ಸ್ಥಳದಲ್ಲೇ ಕುಳಿತಳು.

ತಮಗೆ ಅವಳ ಪರಿಚಯವೇ ಇಲ್ಲದವರಂತೆ ಅವರು ನಟಿಸಿದರು. ಶ್ರೀಮತಿ ಲುಸೆವೂ ಅವಳ ಕಡೆಗೆ ಕಡೆನೋಟ ಬೀರಿ "ಸದ್ಯ, ನಾನು ಅವಳ ಪಕ್ಕದಲ್ಲಿ ಕೂತುಕೋಬೇಕಾಗಿಲ್ಲ!" ಎಂದು ಗಂಡನ ಕಿವಿಯಲ್ಲಿ ಉಸುರಿದಳು.

ಭಾರವಾದ ಗಾಡಿ ಅಲುಗಾಡಿತು. ಪ್ರಯಾಣ ಮುದುವರೆಯಿತು.  ಮೊದಮೊದಲು ಯಾರೂ ಮಾತೇ ಆಡಲಿಲ್ಲ.  ಬೆಣ್ಣೆಮುದ್ದೆಗಂತೂ ಕಣ್ಣು ಮೇಲೆತ್ತಿ ನೋಡಲೂ ಧೈರ್ಯ ಸಾಲದಾಯಿತು.  ಅವಳು ವ್ಯಗ್ರಳಾಗಿದ್ದಳು. ತನ್ನನ್ನು ಪ್ರಷ್ಯನ್ ಅಧಿಕಾರಿಯ ಬಾಹುಗಳಿಗೆ ದೂಡಿದ ಆಷಾಢಭೂತಿಗಳ ಬಗ್ಗೆ ಕೋಪ ಒಂದುಕಡೆ; ತಾನು ಪ್ರಷ್ಯನ್ ಅಧಿಕಾರಿಯ ಚುಂಬನಗಳಿಗೆ ಮಣಿಯಬೇಕಾಯಿತಲ್ಲ ಎಂಬ ಅಪಮಾನ ಇನ್ನೊಂದು ಕಡೆ.

ಕೌಂಟೆಸ್ ಕೊನೆಗೂ ಭಾರವಾದ ಮೌನವನ್ನು ಮುರಿದಳು. ತನ್ನ ಪತಿಯನ್ನು ಉದ್ದೇಶಿಸಿ "ನಿಮಗೆ ಮದಾಂ ದೇತ್ರೆಲೆ ಗೊತ್ತು ತಾನೇ?" ಎಂದಳು.

"ಓ ಗೊತ್ತು! ಅವಳದ್ದು ಚಿತ್ತಾಕರ್ಷಕ ವ್ಯಕ್ತಿತ್ವ!"

"ಒಪ್ಪಿದೆ! ಎಂಥ ಸುಶೀಲೆ! ಸುಶಿಕ್ಷಿತೆ! ಅಲ್ಲದೆ ಉತ್ತಮ ಕಲಾವಿದೆ! ಅವಳು ಸೊಗಸಾಗಿ ಹಾಡುತ್ತಾಳೆ, ಚಿತ್ರ ಬಿಡಿಸುವುದರಲ್ಲಂತೂ ಅವಳು ನಿಪುಣೆ!"

ಉದ್ಯಮಪತಿ ಕೌಂಟ್ ಜೊತೆ ಹರಟೆ ಹೊಡೆದ. ಗಾಡಿಯ ಗಡಗಡ ಅಲ್ಲಾಟದ ನಡುವೆ ಅವರ ಸಂಭಾಷಣೆಯ ತುಣುಕುಗಳು ಕೇಳುತ್ತಿದ್ದವು - "ಕೂಪನ್," "ಮುಂಗಡ," "ಶತಾಂಶ," "ಗಡುವು" ಇತ್ಯಾದಿ.

ಲುಸೆವೂ ವಸತಿಗೃಹದಿಂದ ಇಸ್ಪೀಟ್ ಎಲೆಗಳ ಕಟ್ಟನ್ನು ಹಾರಿಸಿ ತಂದಿದ್ದ. ಗಲೀಜು ಮೇಜುಗಳ ಜೊತೆ ನಿರಂತರ  ಒಡನಾಟದಿಂದ  ಎಲೆಗಳು ಹಳದಿಯಾಗಿದ್ದವು. ಅವನು ಹೆಂಡತಿಯೊಂದಿಗೆ ಇಸ್ಪೀಟ್ ಆಟ ಪ್ರಾರಂಭಿಸಿದ.

ಸಾಧ್ವಿಗಳು ತಮ್ಮ ಮಣಿಮಾಲೆಗಳನ್ನು ಹೊರತೆಗೆದು ಗಾಳಿಯಲ್ಲೇ ಕ್ರಾಸ್ ಆಕಾರವನ್ನು ಬರೆದು ಪಿಟಿಪಿಟಿ ಮಂತ್ರೋಚ್ಚಾರಣೆ ಪ್ರಾರಂಭಿಸಿದರು. ಅವರು ಇಡೀ ಬೈಬಲ್ ಗ್ರಂಥವನ್ನೇ ಪಠಣ ಮಾಡಲು ಹಟತೊಟ್ಟಂತಿತ್ತು.  ಆಗಾಗ ಅವರು ಕ್ರಾಸ್ ಗೆ ಮುತ್ತಿಟ್ಟು ಗಾಳಿಯಲ್ಲಿ ಕ್ರಾಸ್ ಬರೆದು ಮತ್ತೊಮ್ಮೆ ಧಾವಂತದಿಂದ ಮಂತ್ರ ಹೇಳಲು ಪ್ರಾರಂಭಿಸುತ್ತಿದ್ದರು.

ಕಾನ್ವುಡೇ ಮಾತ್ರ ಸುಮ್ಮನೆ ಕುಳಿತು ಯೋಚನೆಯಲ್ಲಿ ಮುಳುಗಿದ್ದ.

ಮೂರು ಗಂಟೆಗಳ ನಂತರ ಲುಸೆವೂ ಇಸ್ಪೀಟ್ ಎಲೆಗಳನ್ನು ಒಗೆದು "ನನಗೆ ಹಸಿವಾಯಿತು" ಎಂದ. ಅವನ ಹೆಂಡತಿ ಒಂದು ಪೊಟ್ಟಣವನ್ನು ಹೊರಕ್ಕೆ ತೆಗೆದು ಅದರಲ್ಲಿದ್ದ ಕರುವಿನ ಮಾಂಸವನ್ನು ತೆಳ್ಳಗೆ ಕತ್ತರಿಸಿದಳು. ಇಬ್ಬರೂ ಮೆಲ್ಲತೊಡಗಿದರು.

"ನಾವೂ ಊಟ ಮಾಡಬಹುದೇನೋ," ಎಂದಳು ಕೌಂಟೆಸ್.

ಗಂಡನ ಒಪ್ಪಿಗೆ ಬಂದಾಗ ಅವಳು ತಾನು ತಂದಿದ್ದ ಬುತ್ತಿ ಬಿಚ್ಚಿದಳು. ಮುಚ್ಚಳದ ಮೇಲೆ ಮೊಲದ ಚಿತ್ರವುಳ್ಳ ಡಬ್ಬಿಯಲ್ಲಿ ಮೊಲದ ಮಾಂಸದ ವ್ಯಂಜನವಿತ್ತು. ಇದಲ್ಲದೆ ಅವಳು ಹಂದಿಮಾಂಸದಿಂದ ತಯಾರಿಸಿದ ಒಂದು ಅಪರೂಪದ ಶ್ರೀಮಂತಿಕೆ ಸೂಸುವ ಆಹಾರವನ್ನು ತಂದಿದ್ದಳು.  ಗುಹಿಯೇ ಎಂಬ ಬೆಲೆಬಾಳುವ ಗಿಣ್ಣನ್ನು ಹಳೆಯ ದಿನಪತ್ರಿಕೆಯ ಹಾಳೆಯಲ್ಲಿ ಪೊಟ್ಟಣ ಕಟ್ಟಲಾಗಿತ್ತು.

ಸಾಧ್ವಿ ಹೆಂಗಸರು ಸಾಸೇಜ್ ಹೊರತೆಗೆದರು. ಬೆಳ್ಳುಳ್ಳಿಯ ಪರಿಮಳ ಹರಡಿತು.  ಕಾನ್ವುಡೇ ತನ್ನ ಕೋಟಿನ ಆಳವಾದ ಜೋಬಿನಲ್ಲಿ ತಡಕಾಡಿ ನಾಲ್ಕು ಬೆಂದ ಮೊಟ್ಟೆಗಳನ್ನೂ ಒಂದು ತುಂಡು ಬ್ರೆಡ್ ಅನ್ನೂ ಹೊರಕ್ಕೆ ತೆಗೆದ.  ಮೊಟ್ಟೆಗಳ ಮೇಲಿನ ಸಿಪ್ಪೆಯನ್ನು ಬೇರ್ಪಡಿಸಿ ಅವನು ಕಾಲ ಕೆಳಗಿದ್ದ ಹುಲ್ಲಿನಲ್ಲಿ ಚೆಲ್ಲಿದ. ಅವನು ಮೊಟ್ಟೆಗಳನ್ನು ತಿನ್ನುವಾಗ ಅದರ ಹಳದಿ ಭಾಗದ ತುಣುಕುಗಳು  ಅವನ ಗಡ್ಡಕ್ಕೆ ಮೆತ್ತಿಕೊಂಡು ಆಗಸದಲ್ಲಿ ಹೊಳೆಯುವ ತಾರೆಗಳಂತೆ ಕಂಡವು.

ಹೊರಡುವ ಆತುರ ಮತ್ತು ಸ್ಥಿಮಿತವಿಲ್ಲದ ಮನಸ್ಸಿನ ಕಾರಣ ಬೆಣ್ಣೆಮುದ್ದೆ ಬುತ್ತಿ ತರುವುದನ್ನು ಮರೆತಿದ್ದಳು. ಅವರು ತಮ್ಮಪಾಡಿಗೆ ಮೆಲ್ಲುತ್ತಾ ಆಹಾರವನ್ನು ಸವಿಯುವುದನ್ನು ನೋಡುತ್ತಾ ಅವಳ ರೋಷ ಉಕ್ಕಿತು. ಅವರ ಮೇಲೆ ಕೂಗಾಡಿ ಅವರ ಜನ್ಮ ಜಾಲಾಡಬೇಕೆಂದು ಬಾಯಿ ತೆರೆದರೆ ಮಾತೇ ಹೊರಡಲಿಲ್ಲ. ಕೋಪದಿಂದ ಅವಳ ಬಾಯಿ ಕಟ್ಟಿತು.

ಅವಳ ಕಡೆ ಯಾರೂ ನೋಡಲೂ ಇಲ್ಲ,  ಅವಳ ವಿಷಯ ತಲೆಗೆ ಹಚ್ಚಿಕೊಳ್ಳಲೂ ಇಲ್ಲ.  ತನ್ನನ್ನು ಮೊದಲು ಬಲಿಗೇರಿಸಿ ಅನಂತರ ತಾನೊಂದು ಕೆಲಸಕ್ಕೆ ಬಾರದ ವಸ್ತುವೋ ಎಂಬಂತೆ ನಿಕೃಷ್ಟ ಮಾಡಿದ ಈ ಪ್ರಾಮಾಣಿಕ ದುಷ್ಟರ ತಾತ್ಸಾರದಲ್ಲಿ ತಾನು ಮುಳುಗಿಹೋಗುತ್ತಿದ್ದೇನೆ ಎನ್ನಿಸತೊಡಗಿತು. ತಾನು ತಂದಿದ್ದ ಬಾಸ್ಕೆಟ್ ಅವಳಿಗೆ ನೆನಪಾಯಿತು. ಅದರಲ್ಲಿದ್ದ ಚಟ್ನಿ, ಉಪ್ಪಿನಕಾಯಿ, ಪಿಯರ್ ಹಣ್ಣುಗಳು, ರಸದಲ್ಲಿ ತೊಯ್ದ ಕೋಳಿಮಾಂಸ, ನಾಲ್ಕು ಬಾಟಲಿ ಬುರ್ದೆವೂ ವೈನ್ ಎಲ್ಲವೂ ನೆನಪಾದವು. ಬಿಗಿಯಾಗಿ ಎಳೆದು ಕಟ್ಟಿದ ದಾರ ಕಡಿದುಹೋಗುವಂತೆ ಅವಳ ಕೋಪ ಒಮ್ಮೆಲೇ ಇಳಿದು ಅವಳಿಗೆ ಅಳು ಬಂತು. ಅಳಬಾರದೆಂದು ಅವಳು ಪ್ರಯಾಸ ಪಟ್ಟಳು. ಒಳಗಡೆಯಿಂದ ಉಕ್ಕಿ ಬರುತ್ತಿದ್ದ ಬಿಕ್ಕಳಿಕೆಯನ್ನು ಮಕ್ಕಳು ಮಾಡುವ ಹಾಗೆ ನುಂಗಿಕೊಳ್ಳಲು ಪ್ರಯತ್ನಿಸಿದಳು. ಮುಖವನ್ನು  ಕಿವಿಚಿದಳು. ಆದರೂ ಕಣ್ಣ ತುದಿಯಲ್ಲಿ ಅಶ್ರುಗಳು ಮಿಂಚಿದವು. ಎರಡು ದಪ್ಪ ಹನಿಗಳು ಕೆನ್ನೆಯ ಮೇಲೆ ಮೆಲ್ಲಗೆ ಜಾರಿ ಬಂಡೆಗಳ ನಡುವೆಯೂ ನುಗ್ಗಿಬರುವ ನದಿಯ ನೀರಿನ ಪ್ರವಾಹದಂತೆ ಹರಿದು ಅವಳ ವಕ್ಷಸ್ಥಲದ ಮೇಲೆ ಬಿದ್ದವು.

ಅವಳು ನೇರವಾಗಿ ಕುಳಿತಿದ್ದಾಳೆ. ಅವನ ನೋಟ ಶೂನ್ಯದಲ್ಲಿ ನೆಟ್ಟಿದೆ. ಮುಖ ನಿರ್ಭಾವವಾಗಿದೆ. ತನ್ನ ಕಡೆ ಯಾರೂ ನೋಡದಿರಲಿ ಎಂದು ಅವಳು ಪ್ರಾರ್ಥಿಸುತ್ತಾಳೆ.  ಆದರೆ ಅವಳ ಮೌನ ರೋದನ ಕೌಂಟೆಸ್ ಕಣ್ಣಿಗೆ ಬೀಳುತ್ತದೆ. ತನ್ನ ಗಂಡನ ಕಡೆ ನೋಡಿ ಅವಳು ಸನ್ನೆ ಮಾಡುತ್ತಾಳೆ. ಅವನು "ಅದಕ್ಕೆ ನಾನೇನು ಮಾಡಲಿ? ನನ್ನ ತಪ್ಪೇ?" ಎಂಬಂತೆ ಭುಜ ಹಾರಿಸಿ ಸುಮ್ಮನಾಗುತ್ತಾನೆ.

ಶ್ರೀಮತಿ ಲುಸೆವೂ ನಿಶ್ಶಬ್ದವಾಗಿ ವಿಜಯದ ನಗೆ ನಗುತ್ತಾ "ನಾಚಿಕೆ ತಾಳಲಾರದೇ ಅಳುತ್ತಿದ್ದಾಳೆ," ಎಂದಳು.

ತಾವು ತಿಂದು ಮಿಕ್ಕಿದ ಸಾಸೇಜ್ ಮತ್ತೆ ಕಾಗದದಲ್ಲಿ ಪೊಟ್ಟಣ ಕಟ್ಟಿಟ್ಟು ಸಾಧ್ವಿಯರು ಮಂತ್ರಪಠಣ ಮುಂದುವರೆಸಿದರು.  ತಾನು ತಿಂದ ಕೋಳಿಮೊಟ್ಟೆಗಳನ್ನು ಅರಗಿಸಿಕೊಳ್ಳುತ್ತಾ  ಕಾನ್ವುಡೇ  ಎದುರು ಬದಿಯ ಸೀಟಿನ ಮೇಲೆ ಕಾಲು ಚಾಚಿ ಒಳ್ಳೆಯ ನಾಟಕವೊಂದನ್ನು ನೋಡಿ ಬಂದವನಷ್ಟೇ ಸಂತುಷ್ಟನಾಗಿ ಫ್ರೆಂಚ್ ರಾಷ್ಟ್ರಗೀತೆಯನ್ನು ಸಿಳ್ಳೆ ಹಾಕತೊಡಗಿದ.  ಅವನ ಸಹಪ್ರಯಾಣಿಕರಿಗೆ ಇದು ಇಷ್ಟವಾಗಲಿಲ್ಲ ಎಂದು ಅವರ ಮುಖದಲ್ಲಿ ಕಂಡಿತು. ಅವರಿಗೆ ಭಯ ಮತ್ತು ಕೋಪ ಎರಡೂ ಉಂಟಾದವು. ಕರ್ಕಶವಾದ ಸದ್ದು ಕೇಳಿದಾಗ ನಾಯಿಗಳು ಹೆದರಿ  ಊಳಿಡುವಂತೆ ಇತ್ತು ಅವರ ಪರಿಸ್ಥಿತಿ.  ಅವನಿಗೆ ಇದು ಅರಿವಿಗೆ ಬಂದರೂ ನಿಲ್ಲಿಸದೆ ಮುಂದುವರೆಸಿದ. ಕೆಲವೊಮ್ಮೆ ಸಿಳ್ಳೆಯ ನಡುವೆ ಅವನು ಹಾಡಿನ ಸಾಲುಗಳನ್ನು ಬಾಯಲ್ಲೂ ಗುನುಗಿದ.

ಪವಿತ್ರವಾದದ್ದು ದೇಶಭಕ್ತಿ
ಬಲಗೊಳಿಸು ನಿನ್ನನ್ನು ರಕ್ಷಿಸುವ ತೋಳನ್ನು!
ಸ್ವಾತಂತ್ರ್ಯಕ್ಕಾಗಿ, ಸಿಹಿ ಸ್ವಾತಂತ್ರ್ಯಕ್ಕಾಗಿ,
ಹೆದರದೇ ಮುನ್ನುಗ್ಗಿ ಎಂದೆಂದಿಗೂ ಹೋರಾಡು!
ಮಂಜು ಗಟ್ಟಿಯಾಗಿದ್ದರಿಂದ ಅವರ ಪ್ರಯಾಣ ಬೇಗ ಸಾಗಿತು. ಅವರು ಡಿಯೆಪ್ ಪಟ್ಟಣ ಮುಟ್ಟುವವರೆಗೂ, ಉದ್ದವಾದ ದುಃಖಕರ ಪ್ರಯಾಣದ ಉದ್ದಕ್ಕೂ, ರಸ್ತೆಯಲ್ಲಿ ಏರುತಗ್ಗುಗಳಲ್ಲಿ ಗಾಡಿ ಗಡಗಡ ಎನ್ನುತ್ತಾ ಸಾಗಿದಾಗ, ಗಾಡಿಯೊಳಗೆ ಕವಿದ   ದಟ್ಟವಾದ ಕತ್ತಲಿನಲ್ಲಿ ಕಾನ್ವುಡೇ ತನ್ನ ಹಾಡನ್ನು ಹಠ ಹಿಡಿದವರಂತೆ ಮುಂದುವರೆಸಿದ.  ತನ್ನ ಸಹಪ್ರಯಾಣಿಕರಿಗೆ ಮನದಟ್ಟಾಗುವಂತೆ ಹಾಡಿನ ಒಂದೊಂದು ಚರಣವನ್ನೂ ಮತ್ತೆ ಮತ್ತೆ ಹಾಡಿದ.

ಬೆಣ್ಣೆಮುದ್ದೆ ಒಂದೇ ಸಮನೆ ಅಳುತ್ತಿದ್ದಳು. ಎರಡು ಸಾಲುಗಳಲ್ಲಿ ಕುಳಿತವರ ನಡುವೆ ಕೆಲವೊಮ್ಮೆ ಅವಳು ಬಿಕ್ಕಿದ ಧ್ವನಿ  ಮಾರ್ದನಿಸುತ್ತಿತ್ತು.

(ಮುಗಿಯಿತು)


(c) C.P. Ravikumar, Kannada translation of 'Ball-of-Fat' (Boule de Suif) by Guy De Maupassant.
I acknowledge the English translation which I have used from here. I also acknowledge the images that I have used from different sources - these are all identified as reusable by Google.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)