ಬೆಣ್ಣೆ ಮುದ್ದೆ - ಭಾಗ ೫


ಬೆಣ್ಣೆ ಮುದ್ದೆ - ಭಾಗ ೫
ಫ್ರೆಂಚ್ ಕತೆ  - ಗಿ ಡಿ ಮುಪಸಾ 
ಕನ್ನಡಕ್ಕೆ  - ಸಿ ಪಿ ರವಿಕುಮಾರ್ 
(ನಾಲ್ಕನೇ ಭಾಗ ಇಲ್ಲಿ ಓದಿ)
ವರು ಹೋಟೆಲಿನ ವಿಶಾಲ  ಹಜಾರಕ್ಕೆ ಬಂದರು. ಜರ್ಮನ್ ಅಧಿಕಾರಿ ಅವರೆಲ್ಲರಿಂದ ಪ್ರಯಾಣ ಪತ್ರಗಳನ್ನು ಕೇಳಿ ಪಡೆದು ಕೂಲಂಕಷವಾಗಿ ನೋಡಿದ. ಪ್ರತಿಯೊಂದರಲ್ಲೂ ಮಹಾ ದಂಡನಾಯಕನ ರುಜು ಇದೆಯೇ,  ಹೆಸರು ಮತ್ತು  ವೃತ್ತಿ  ನಮೂದಿಸಲಾಗಿದೆಯೇ ಎಂದು ಖಾತರಿ ಮಾಡಿಕೊಂಡು "ಹೂಂ, ಅಡ್ಡಿಯಿಲ್ಲ" ಎಂದು ಹೊರಟ.

ಈಗ ಎಲ್ಲರೂ ಮುಕ್ತವಾಗಿ ಉಸಿರಾಡಿದರು.  ಅವರಿಗೆ ಇನ್ನೂ ಹಸಿವು ಇಂಗಿರಲಿಲ್ಲ. ಎಲ್ಲರೂ ರಾತ್ರಿಯ ಊಟಕ್ಕೆ ಕುಳಿತರು. ಅಡಿಗೆ ತಯಾರಾಗಲು ಇನ್ನೂ ಅರ್ಧ ಗಂಟೆ ಬೇಕಾಗುತ್ತದೆ ಎಂಬ  ಸುಳಿವು ಸಿಕ್ಕಿ ಅವರು ತಮ್ಮ ತಮ್ಮ ಕೋಣೆಗಳಿಗೆ ತೆರಳಿದರು. ಕೊನೆಗೂ ಅವರು ಊಟಕ್ಕೆಂದು ಮೇಜಿನ ಎದುರು ಕುಳಿತಾಗ ಹೋಟೆಲ್ ಮಾಲೀಕನೇ ಅವರನ್ನು ಕಾಣಲು ಆಗಮಿಸಿದ. ಮಿ। ಫೋಯೆನ್ವೀ ಒಂದು ಕಾಲದಲ್ಲಿ ಕುದುರೆಗಳ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿ. ಅವನಿಗೆ ಆಸ್ತಮಾ ಕಾಯಿಲೆ. ಉಸಿರಾಡಿದರೆ ಸೊಂಯ್ ಸೊಂಯ್ ಸದ್ದು ಕೇಳಿಸುತ್ತಿತ್ತು. ಅವನು "ಇಲ್ಲಿ ಮಿಸ್ ಎಲಿಜಬೆತ್ ರೂಸೋ ಯಾರು?" ಎಂದು ಪ್ರಶ್ನಿಸಿದ.

ಬೆಣ್ಣೆಮುದ್ದೆ ಬೆಚ್ಚಿ "ನಾನು - ಯಾಕೆ?" ಎಂದು ಕೇಳಿದಳು.

"ಪ್ರಷ್ಯನ್ ಅಧಿಕಾರಿ ನಿಮ್ಮ ಜೊತೆ ಮಾತಾಡಬೇಕಂತೆ - ಕೂಡಲೇ ಬರಹೇಳಿದ್ದಾರೆ."

"ನನ್ನ ಜೊತೆಗಾ?"

"ಹೌದು - ನಿಮ್ಮ ಹೆಸರು ಎಲಿಜಬೆತ್ ರೂಸೋ ತಾನೇ?"

"ಹೌದು. ಆದರೆ ನಾನು ಹೋಗುವುದಿಲ್ಲ."

ಸುತ್ತಲೂ ಕುಳಿತಿದ್ದವರಲ್ಲಿ ಚಲನ ಉಂಟಾಯಿತು. ಇವಳನ್ನು ಜರ್ಮನ್ ಅಧಿಕಾರಿ ಬರಹೇಳಲು ಏನು ಕಾರಣವೋ ಎಂದು ಅವರೆಲ್ಲರೂ ಚಿಂತಿಸಿದರು. ಕೌಂಟ್ ಅವಳನ್ನು ಉದ್ದೇಶಿಸಿ ಮಾತಾಡಿದ:
"ಮದಾಂ, ನೀವು ತಪ್ಪು ಮಾಡುತ್ತಿದ್ದೀರಿ. ನೀವು ಹೋಗದೇ ಇದ್ದರೆ ನಿಮಗಷ್ಟೇ ಅಲ್ಲ, ನಿಮ್ಮ ಜೊತೆ ಬಂದಿರುವ ನಮಗೆ ಎಲ್ಲರಿಗೂ ತೊಂದರೆ ಆಗುತ್ತೆ. ಅಧಿಕಾರದಲ್ಲಿ ಇರುವವರನ್ನು ಎದುರು ಹಾಕಿಕೊಳ್ಳೋದು ಯಾವತ್ತೂ ಒಳ್ಳೆಯದಲ್ಲ. ನಿಮ್ಮ ಕಾಗದ-ಪತ್ರಗಳಲ್ಲಿ ಏನೋ ಸಣ್ಣ ದೋಷ ಇದೆಯೇನೋ - ಅದಕ್ಕೋಸ್ಕರ ನಿಮ್ಮನ್ನು ಕರೆಯುತ್ತಿದ್ದಾರೆ. ಹೋಗಿ ಬಂದರೇನು ನಷ್ಟ?"

ಎಲ್ಲರಿಗೂ ಅವನ ಮಾತು ಉಚಿತವೆನ್ನಿಸಿತು. ಎಲ್ಲರೂ ಅವಳಿಗೆ ಹೋಗಿಬಾ  ಎಂದು ದುಂಬಾಲು ಬಿದ್ದರು. ಅವಳ ಅವಿಧೇಯತೆ ಎಲ್ಲರಿಗೂ ಆಪತ್ತು ತರುತ್ತದೆ ಎಂದು ಅವಳನ್ನು ನಂಬಿಸಿದರು. ಕೊನೆಗೆ ಅವಳು "ಸರಿ, ನಿಮಗೋಸ್ಕರವಾದರೂ ಹೋಗಿ ನೋಡುತ್ತೇನೆ," ಎಂದು ಒಪ್ಪಿದಳು.

ಕೌಂಟೆಸ್ ಅವಳ ಕೈ ಹಿಡಿದುಕೊಂಡು "ಇದಕ್ಕಾಗಿ ನಾವು ನಿನಗೆ ಎಂದಿಗೂ ಕೃತಜ್ಞರಾಗಿರುತ್ತೇವೆ," ಎಂದಳು. ಬೆಣ್ಣೆಮುದ್ದೆ ಅಲ್ಲಿಂದ ಎದ್ದು ಹೊರಟಳು. ಉಳಿದವರು ಮೇಜಿನ ಮುಂದೆ ಕಾಯುತ್ತಾ ಕುಳಿತರು.  ಮೂಗಿನ ತುದಿಯ ಮೇಲೇ ಕೋಪವಿರುವ ಇಂಥ ಹುಡುಗಿಯ ಬದಲು ತಮ್ಮನ್ನು ಬರಹೇಳಿದ್ದರೆ! ಈಗ ಏನು ಆಪತ್ತು ಕಾದಿದೆಯೋ ಎಂದು ಅವರೆಲ್ಲರೂ ಪೇಚಾಡಿದರು.

ಹತ್ತು ನಿಮಿಷಗಳ ನಂತರ ಅವಳು ಹಿಂದಿರುಗಿದಾಗ ಅವಳ ಮುಖ ಕೆಂಪಾಗಿತ್ತು.  "ರಾಕ್ಷಸ! ರಾಕ್ಷಸ!" ಎಂದು ಬುಸುಗುಟ್ಟಿದಳು. ಅವರೆಲ್ಲರೂ ಅವಳ ಸುತ್ತ ನೆರೆದು ಏನಾಯಿತೆಂದು ಪದೇಪದೇ ಕೇಳಿದರೂ ಅವಳು ಏನೂ ಹೇಳದೇ ಸುಮ್ಮನಿದ್ದಳು. ಕೌಂಟ್ ಸ್ವಲ್ಪ ಒತ್ತಾಯದ ಧ್ವನಿಯಲ್ಲಿ ಅವಳು ಹೇಳಲೇಬೇಕು ಎಂದಾಗ ಅವಳು "ಇದಕ್ಕೂ ನಿಮಗೂ ಸಂಬಂಧ ಇಲ್ಲ," ಎಂದುಬಿಟ್ಟಳು. ಎಲ್ಲರೂ ತಮ್ಮ ಸ್ಥಾನಕ್ಕೆ ಮರಳಿದರು.


ಬಿಸಿಬಿಸಿಯಾದ ಸೂಪ್ ನಿಂದ  ಎಲೆಕೋಸಿನ ಪರಿಮಳ ಘಂ ಎನ್ನುತ್ತಿತ್ತು. ಆತಂಕದ ನಡುವೆಯೂ ಅವರಿಗೆ ಊಟ ರುಚಿಸಿತು. ಬೆಲೆ ಕಡಿಮೆ ಎಂದು ಲುಸೆವೂ ಮತ್ತು ಸಾಧ್ವಿಯರು ತರಿಸಿದ ಸೈಡರ್ ಪಾನೀಯ ಸ್ವಾದಿಷ್ಟವಾಗಿತ್ತು. ಉಳಿದವರು ವೈನ್ ತರಿಸಿಕೊಂಡಿದ್ದರು. ಕಾನ್ವುಡೇ ತನಗೆ ಬಿಯರ್ ಹೇಳಿದ್ದ. ಅವನು ಶೀಶೆಯ ಮೇಲಿದ್ದ ಬಿರಡೆ ತೆಗೆದು ಜೋಕೆಯಿಂದ ನೊರೆಯುಕ್ತ ಬಿಯರ್ ಬಗ್ಗಿಸಿಕೊಂಡು ಗ್ಲಾಸನ್ನು ಮೇಲೆತ್ತಿ ದೀಪದ ಬೆಳಕಿನಲ್ಲಿ ಮದ್ಯದ ಬಣ್ಣ ಹೇಗಿದೆ ಎಂದು ಪರಿಶೀಲಿಸಿದ. ಅವನು ಒಂದು ಗುಟುಕು ಹೀರಿ ಚಪ್ಪರಿಸಿದಾಗ ಅವನ ಉದ್ದನೆಯ ಗಡ್ದವೂ ಸಂತೃಪ್ತಿಯಿಂದ ಅಲ್ಲಾಡಿತು. ಕಣ್ಣುಗಳನ್ನು ಸಣ್ಣದು ಮಾಡಿ ಮದ್ಯದ ಗ್ಲಾಸಿನ ಕಡೆಗೆ ತಾನು ಜನ್ಮ ತಳೆದದ್ದೇ ಈ ಕೆಲಸ ಮಾಡಲು ಎಂಬ ತೃಪ್ತಿಯ ನೋಟ ಬೀರಿದ. ಅವನಿಗೆ ಜಗತ್ತಿನಲ್ಲಿ ಪ್ರಿಯವಾದ ವಸ್ತುಗಳು ಎರಡು  - ಮದ್ಯ ಮತ್ತು ಪ್ರತಿಭಟನೆ. ಒಂದನ್ನು ಅನುಭವಿಸುವಾಗ ಅವನು ಇನ್ನೊಂದನ್ನು ಕುರಿತು ಯೋಚಿಸದೆ ಇರಲಾರ.

ಮಿ\ ಫೋಯೇನ್ವೀ ಮತ್ತು ಅವನ ಹೆಂಡತಿ ಮೇಜಿನ ಒಂದು ತುದಿಯಲ್ಲಿ ಕುಳಿತು ಊಟ ಮಾಡಿದರು. ದಮ್ಮಿನ ಕಾರಣ ಮಾಲೀಕನಿಗೆ ಮಾತಾಡುವುದು ಕಷ್ಟವಾಗುತ್ತಿತ್ತು. ಆದರೆ ಅವನ ಹೆಂಡತಿ ಎಡಬಿಡದೆ ಮಾತಾಡಿದಳು. ಪ್ರಷ್ಯನ್ ಜನರ ಬಗ್ಗೆ ತನ್ನ ಅಭಿಪ್ರಾಯ, ಪ್ರಷ್ಯನ್ ಸೈನಿಕರು ಏನು ಮಾಡಿದರು, ಏನು ಅಂದರು,  ಅವರ ಕಾರಣ ತನಗೆ ವ್ಯಾಪಾರದಲ್ಲಿ ಎಷ್ಟು ನಷ್ಟವಾಗಿದೆ, ತನ್ನ ಇಬ್ಬರು ಗಂಡುಮಕ್ಕಳು ಯುದ್ಧಕ್ಕೆ ಹೋಗಿರುವುದು - ಇದೆಲ್ಲವನ್ನೂ ಕುರಿತು ಅವಳು ಹರಟಿದಳು. ಅವಳು ಹೆಚ್ಚಾಗಿ ಕೌಂಟೆಸ್ ಉದ್ದೇಶಿಸಿ ಮಾತಾಡಿದಳು - ಅಂಥ ದೊಡ್ಡ ಮನೆತನದವರು ತನ್ನ ವಿಶ್ರಾಂತಿಗೃಹಕ್ಕೆ ಬಂದದ್ದು ಅವಳಿಗೆ ಹೆಮ್ಮೆಯ ವಿಷಯವಾಗಿತ್ತು. ಅವಳು ದನಿ ತಗ್ಗಿಸಿ ಯಾವುದೋ ಗುಟ್ಟಿನ ವಿಷಯ ಹೇಳಲು ಹೋದಾಗ ಆಕೆಯ ಗಂಡ ಮಧ್ಯ ಬಾಯಿ ಹಾಕಿ "ನೀನು ಸುಮ್ಮನೇ ಇರಬಾರದೇ?" ಎಂದ.  ಅವಳು ಲೆಕ್ಕಿಸದೆ ಮುಂದುವರೆಸಿದಳು.

"ಹೌದು ಮದಾಂ, ಈ ಅಧಿಕಾರಿಗಳು ಇಲ್ಲಿ ಬಿಟ್ಟಿ ಊಟ ಹೊಡೆಯುತ್ತಾರೆ! ದೊಡ್ಡ ಅಧಿಕಾರಿಗಳು  ಅಂತ ಹೆಸರಿಗೆ. ಅವರು ಮಾಡುವ ಲುಚ್ಛಾ ಕೆಲಸಗಳ ಬಗ್ಗೆ ಏನು ಹೇಳಲಿ!  ನೀವು ಗೌರವಸ್ಥರು - ನಿಮ್ಮ ಜೊತೆ ಇಂಥ ಮಾತೆಲ್ಲಾ ಸಲ್ಲದು. ಪ್ರತಿದಿನ ಇವರಿಗೆ ಕವಾಯತು ಮಾಡುವುದೇ ಒಂದು ಕೆಲಸ. ಬಯಲಿನಲ್ಲಿ ಇವರು ಆಕಡೆ ಈಕಡೆ ತಿರುಗುತ್ತಾ ಗಂಟೆಗಟ್ಟಲೆ ಕವಾಯತು ಮಾಡುವುದನ್ನು ನೀವು ನೋಡಬೇಕು. ಅದರಿಂದ ಏನು ಪ್ರಯೋಜನ ಹೇಳಿ! ಒಂದು ಕೆಲಸವೇ ಬೊಗಸೆಯೇ! ನಮ್ಮಂಥ ಬಡಪಾಯಿಗಳು ದುಡಿದು ಇವರ ಹೊಟ್ಟೆ ತುಂಬಿಸಬೇಕು! ಇಲ್ಲದಿದ್ದರೆ ನಮ್ಮ ಪ್ರಾಣಕ್ಕೇ ಸಂಚಕಾರ! ನಾನು ಓದು ಬರಹ ಇಲ್ಲದ ಹೆಂಗಸು, ನಿಜ. ಆದರೆ ನನಗೆ ಅನ್ನಿಸೋದನ್ನು ಹೇಳುತ್ತೇನೆ, ನೀವು ಏನಾದರೂ ಹೇಳಿ!   ಇವರು ಇಡೀ ದಿನ ಹೀಗೆ ಕವಾಯತು ಮಾಡುತ್ತಾ ಆಯಸ್ಸು ಸವೆಸೋದರಿಂದ ಏನು ಸಾಧಿಸಿದ ಹಾಗಾಯಿತು? ಒಂದು ಉದ್ಯೋಗ ಅಂತ ಇಲ್ಲದೆ ವ್ಯರ್ಥವಾಗಿ ಕಾಲಹರಣ ಮಾಡೋ ಜನ ಬೇಕಾದಷ್ಟು ಇದ್ದಾರೆ. ಆದರೆ ಇವರಿಗೆ ಕಾಲಹರಣವೇ ಉದ್ಯೋಗ! ಕೊಲ್ಲುವುದು ಮಹಾಪಾಪ ಅಲ್ಲವೇ? ಪ್ರಷ್ಯನ್ ಆದರೇನು, ಇಂಗ್ಲಿಷ್ ಆದರೇನು, ಪೋಲಿಷ್ ಆದರೇನು, ಫ್ರೆಂಚ್ ಆದರೇನು! ಜಗಳದಲ್ಲಿ ಒಬ್ಬ ಮನುಷ್ಯ ಇನ್ನೊಬ್ಬನ ಮೇಲೆ ಕೈ ಮಾಡಿದರೆ ಅವನಿಗೆ ಶಿಕ್ಷೆ ಕೊಟ್ಟು ಜೈಲಿಗೆ ಕಳಿಸುತ್ತಾರೆ. ಇಲ್ಲಿ ನೋಡಿ, ಯಾರು ಹೆಚ್ಚು ಜನರನ್ನು ಕೊಲ್ಲುತ್ತಾರೋ ಅವರಿಗೆ ಬಿರುದು ಬಾವಲಿಗಳು! ಬಹುಮಾನ! ಇದಕ್ಕೆ ಏನನ್ನೋಣ!"

ಈಗ ಕಾನ್ವುಡೇ ತನ್ನ ಧ್ವನಿ ಏರಿಸಿದ. "ತನ್ನ ಪಾಡಿಗೆ ತಾನಿದ್ದ ಪಕ್ಕದ ಮನೆಯವನ ಮೇಲೆ ಕೈ ಮಾಡುವುದು ಬರ್ಬರತೆ. ಆದರೆ ದೇಶದ ರಕ್ಷಣೆಗಾಗಿ ಮಾಡಿದ ಯುದ್ಧ ಪವಿತ್ರವಾದದ್ದು!"

ವೃದ್ಧ ಹೆಂಗಸು ತಲೆ ಕೆಳಗೆ ಹಾಕಿದಳು. "ಹೌದು, ತಮ್ಮನ್ನು ತಾನೇ ರಕ್ಷಿಸಿಕೊಳ್ಳಲು ಹೋರಾಡುವುದು ಬೇರೆ. ಆದರೆ ತಮ್ಮ ಖಯಾಲಿಗೋಸ್ಕರ ಯುದ್ಧಕ್ಕೆ ಹೊರಡುತ್ತಾರಲ್ಲ, ಅಂಥ ರಾಜರನ್ನು ಸಾಲಾಗಿ ನಿಲ್ಲಿಸಿ ಕಡಿದುಹಾಕಬೇಕು!"

ಕಾನ್ವುಡೇ ಕಣ್ಣುಗಳು ಮಿಂಚಿದವು.  ಅವನು "ಭೇಷ್! ಭೇಷ್! ಹಳ್ಳಿಯ ಹೆಣ್ಣೇ!". ಎಂದ.

ಶ್ರೀಮಾನ್ ಕಾರಿ-ಲೆಮಡಾನ್ ಯೋಚನೆಯಲ್ಲಿ ತೊಡಗಿದ. ಉದ್ಯಮಿಯಾದ ಅವನಿಗೆ ಹಳ್ಳಿ ಹೆಂಗಸಿನ ಜಾಣ್ಮೆಯ ಮಾತು ಹಿಡಿಸಿತು. ಕೆಲಸವಿಲ್ಲದ ಕೈಗಳು ತಾನೇ ಚೇಷ್ಟೆಗೆ ತೊಡಗುವುದು? ಅಂಥ ಕೈಗಳಿಗೆ ಕೆಲಸ ಕೊಟ್ಟರೆ ಹಾಲಿನ ಹೊಳೆ ಹರಿದೀತೋ ಏನೋ! ಕವಾಯತು ಮಾಡುವುದನ್ನೇ ಕೆಲಸ ಮಾಡಿಕೊಂಡ ಸೈನಿಕರು ಕಾರ್ಖಾನೆಗಳಲ್ಲಿ ಕೆಲಸಕ್ಕೆ  ತೊಡಗಿದರೆ! ನೂರಾರು ವರ್ಷಗಳಲ್ಲಿ ಆಗುವ ಕೆಲಸ ವರ್ಷದಲ್ಲೇ ಆದೀತು.

ಲುಸೆವೂ ತನ್ನ ಸ್ಥಳವನ್ನು ಬಿಟ್ಟೆದ್ದು ಮಿ। ಫೋಯೇನ್ವೀ ಬಳಿ ಹೋಗಿ ಸಣ್ಣ ಧ್ವನಿಯಲ್ಲಿ ಏನೋ ಹೇಳಿದ.  ಇವನ ಮಾತಿಗೆ, ನಗೆಚಾಟಿಕೆಗಳಿಗೆ ಮಾಲೀಕ ಘೊಳ್ಳೆಂದು ನಗತೊಡಗಿದ. ಅವನ ಅಗಾಧವಾದ ಶರೀರ ಕುಲುಕಾಡಿತು. ಅವನು ವಸಂತಮಾಸದಲ್ಲಿ  ಪ್ರಷ್ಯನ್ ಸೈನಿಕರು ತೆರಳಿದ ನಂತರ  ಲುಸೆವೂ ಬಳಿ  ಮದ್ಯದ ಆರು ಪೆಟ್ಟಿಗೆಗಳನ್ನು ಖರೀದಿಸಲು  ಕೂಡಲೇ ಒಪ್ಪಿಕೊಂಡ.

ಎಲ್ಲರಿಗೂ ಆಯಾಸವಾಗಿದ್ದರಿಂದ ಊಟ ಮುಗಿಯುತ್ತಿದ್ದ ಹಾಗೇ ಮಲಗಲು ಕೋಣೆಗಳಿಗೆ ತೆರಳಿದರು.



ಲುಸೆವೂ ಮಾತ್ರ ಮಲಗಲಿಲ್ಲ. ಅವನಿಗೆ ತಾನು ಗಮನಿಸಿದ ಸಂಗತಿ ನಿಜವೋ ಸುಳ್ಳೋ ಎಂದು ಪರೀಕ್ಷಿಸಿ ನೋಡುವ ಕುತೂಹಲ.   ಹೆಂಡತಿ ನಿದ್ದೆ ಹೋದ ಕೂಡಲೇ ತನ್ನ ಕೋಣೆಯ ಗೋಡೆಯಲ್ಲಿದ್ದ ಒಂದು ಗೂಡಿನಿಂದ ಹೊರಗಿನ ಹಜಾರದಲ್ಲಿ ನಡೆಯುವ ರಹಸ್ಯ ವಿದ್ಯಮಾನಗಳನ್ನು ನೋಡುತ್ತಾ ಕುಳಿತ.

ಸುಮಾರು ಒಂದು ತಾಸು ಕಳೆಯಿತು. ಅವನಿಗೆ ಯಾರೋ ತಡವರಿಸುತ್ತಾ ಹೊರಗೆ ನಡೆದ ಸದ್ದು ಕೇಳಿತು. ಗೂಡಿನಿಂದ ಇಣುಕಿದಾಗ ಅವನಿಗೆ ಕಾಣಿಸಿದ್ದು ಬೆಣ್ಣೆಮುದ್ದೆ.  ಅವಳು ನೀಲಿ ಬಣ್ಣದ ರಾತ್ರಿಯುಡುಗೆಯಲ್ಲಿ ಇನ್ನೂ ದಪ್ಪ ಕಾಣುತ್ತಿದ್ದಳು.  ಅವಳ ಕೈಯಲ್ಲಿ ಒಂದು ಮೇಣದ ಬತ್ತಿ ಇತ್ತು.   ಅವಳು ಹಜಾರದ ಕೊನೆಯಲ್ಲಿದ್ದ ಕೋಣೆಯತ್ತ ಸಾಗುತ್ತಿದ್ದಳು.  ಅಷ್ಟರಲ್ಲಿ ನಡುವೆ ಇದ್ದ ಇನ್ನೊಂದು ಕೋಣೆಯ ಬಾಗಿಲು ತೆರೆಯಿತು.  ರಾತ್ರಿಯುಡುಪಿನಲ್ಲಿದ್ದ ಕಾನ್ವುಡೇ  ಹೊರಗೆ ಬಂದ. ಅವರಿಬ್ಬರೂ ಮೆಲ್ಲನೆಯ ಧ್ವನಿಯಲ್ಲಿ ಏನೋ ಮಾತಾಡಿಕೊಂಡರು.  ಆಮೇಲೆ ಅವರು ಸುಮ್ಮನಾದಂತೆ ತೋರಿತು. ಬೆಣ್ಣೆಮುದ್ದೆಯ ಕೋಣೆಯ ಬಾಗಿಲನ್ನು ಯಾರೋ ತಳ್ಳುತ್ತಿದ್ದಂತೆ, ಅವಳು ಅದನ್ನು ಮುಚ್ಚಿಡಲು ಸಾಹಸ ಪಡುತ್ತಿದ್ದಂತೆ ತೋರಿತು. ದುರದೃಷ್ಟವಶಾತ್ ಲುಸೆವೂಗೆ ಅವರ ಸಂಭಾಷಣೆ  ಸರಿಯಾಗಿ ಕೇಳುತ್ತಿರಲಿಲ್ಲ.  ಕಾನ್ವುಡೇ ಸ್ವಲ್ಪ ಉತ್ತೇಜಿತನಾಗಿ ಜೋರುದನಿಯಲ್ಲಿ "ನೀನೊಬ್ಬ ಹುಚ್ಚಿ! ಇದಕ್ಕೆ ನಿನಗೇನು ಕಷ್ಟ?" ಎಂದಿದ್ದು ಕೇಳಿತು

ಅವಳೂ ಕೋಪದಿಂದ "ಇಲ್ಲ! ಕೆಲವು ಸ್ಥಳಗಳಲ್ಲಿ ಕೆಲವು ವಿಷಯಗಳು ಒಪ್ಪಿತವಾಗುವುದಿಲ್ಲ. ಇಲ್ಲಂತೂ ಅದು ನಾಚಿಕೆಗೇಡು!" ಎಂದಳು.

ಕಾನ್ವುಡೇಗೆ ಅದು ಅರ್ಥವಾಗದೆ "ಅದು ಯಾಕೆ?" ಎಂದು ಪ್ರಶ್ನೆ ಹಾಕಿದ.

ಅವಳು ಇನ್ನೂ ಜೋರಾಗಿ ಕೂಗುತ್ತಾ "ಯಾಕಂತೆ ಯಾಕೆ! ಪ್ರಷ್ಯನ್ ಸೈನಿಕರು ಎಲ್ಲಾ ಕಡೆ ಇರುವುದು ಗೊತ್ತಿಲ್ಲವೇನು! ಪಕ್ಕದ ಕೋಣೆಯಲ್ಲೇ ಇರಬಹುದು!" ಎಂದಳು.

ಅವನು ಸುಮ್ಮನಿದ್ದ. ವೇಶ್ಯೆಯೊಬ್ಬಳು ದೇಶಪ್ರೇಮದ ಕಾರಣ ಗಿರಾಕಿಯನ್ನು ನಿರಾಕರಿಸುತ್ತಿರುವುದು ಅವನಲ್ಲಿ ಒಂದು ಪರಿವರ್ತನೆ ತಂದಂತೆ ಕಂಡಿತು. ಅವನು ಅವಳನ್ನು ಚುಂಬಿಸಿ ತನ್ನ ಕೋಣೆಯತ್ತ ಹೊರಟ. ಲುಸೆವೂ ಇದನ್ನೆಲ್ಲಾ ಕಂಡು ಉತ್ತೇಜಿತನಾದ. ಅವನು ತನ್ನ ರಾತ್ರಿ ಉಡುಪು ಧರಿಸಿ ಹಾಸಿಗೆಗೆ ತೆರಳಿ ಮಲಗಿದ್ದ ತನ್ನ ಹೆಂಡತಿಯನ್ನು ಚುಂಬಿಸಿದ.  ಇಡೀ ಮನೆಯಲ್ಲಿ ನಿಶ್ಶಬ್ದತೆ ಕವಿಯಿತು. ಯಾವುದೋ ಮೂಲೆಯ  ಕೋಣೆಯಿಂದ  ವಿಶ್ರಾಂತಿಗೃಹದ ಮಾಲೀಕ ಗಟ್ಟಿಯಾಗಿ ಗೊರಕೆ ಹೊಡೆಯುವುದು ಕೇಳಿಸಿತು.

(ಮುಂದಿನ ಭಾಗ ಇಲ್ಲಿ ಓದಿ)
(c) C.P. Ravikumar, Kannada translation of 'Ball-of-Fat' (Boule de Suif) by Guy De Maupassant.
I acknowledge the English translation which I have used from here. I also acknowledge the images that I have used from different sources - these are all identified as reusable by Google.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)