ಕರುಣೆ


ಮೂಲ - ಶೇಕ್ಸ್‌ಪಿಯರ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 




(ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿ ನ್ಯಾಯಾಧೀಶನ ವೇಷದಲ್ಲಿ ಪೋರ್ಷಿಯಾ ಮಾಡುವ ಭಾಷಣ)

ಕರುಣೆಯು ಲುಪ್ತವಾಗಿಹೋಗಿಲ್ಲ.  
ಅದು ಮೆಲ್ಲಮೆಲ್ಲನೆ ಉದುರುತ್ತದೆ ನೆಲಕ್ಕೆ 
ಮೇಲಿನ ಸ್ವರ್ಗದಿಂದ.  
ಅದರ ಲಾಭ ದ್ವಿಗುಣ. 
ಪಡೆದುಕೊಂಡವನಿಗೆ ಲಾಭ ಸಿಕ್ಕುವುದು ಸಹಜ,
ಕರುಣೆ ತೋರಿದವನಿಗೂ ಲಭಿಸುತ್ತದೆ ಅದರ ಆಶೀರ್ವಾದ. 
ಬಲಗಳಲ್ಲಿ ಅತಿದೊಡ್ಡ ಬಲವೇ ಕರುಣೆ. 
ಸಿಂಹಾಸನದ ಮೇಲೆ ಕುಳಿತ ರಾಜನಿಗೆ 
ಕರುಣೆಯೇ ಕಿರೀಟಕ್ಕಿಂತಲೂ ಹೆಚ್ಚು ಶೋಭಿಸುವ ಸಿಂಗಾರ. 
ಅವನ ಖಡ್ಗ  ತತ್ಕಾಲದ ಅಧಿಕಾರದ ಸಂಕೇತ,
ಜನರಲ್ಲಿ ಬೆರಗು ಹುಟ್ಟಿಸುವುದಷ್ಟೇ ಅದರ ಗುಣ,
ಖಡ್ಗವನ್ನು ಕಂಡು ಹೆದರಿ ನಡುಗುತ್ತಾರೆ ಜನ.  
 ಕರುಣೆಯ ಸ್ಥಾನ ಖಡ್ಗಕ್ಕಿಂತ ಎಷ್ಟೋ ಮೇಲು,
ಅದು ನೆಲೆಸುವುದು ರಾಜನ ಹೃದಯಸಿಂಹಾಸನದಲ್ಲಿ.
ಸ್ವಯಂ ದೇವತೆಗಳ ಬಳಿ ಇರುವ ಆಭರಣ.
ಭೂಮಿಯ ಮೇಲೆ ನಡೆದ ಕರುಣಾಪೂರ್ಣ ನ್ಯಾಯದಾನಕ್ಕೆ 
ಸಿಕ್ಕುತ್ತದೆ ದೈವತ್ವದ ಮೆರುಗು. 
ಹೀಗಾಗಿ, ಓ ವರ್ತಕ! ನ್ಯಾಯ ನಿನ್ನ ಪರವಾಗಿದ್ದರೂ 
ಯೋಚಿಸಿ ನೋಡು. ಈ ನ್ಯಾಯದಿಂದ ಯಾರದೂ ಉದ್ಧಾರವಿಲ್ಲ.
ನಾವು ನಿನ್ನಲ್ಲಿ ಬೇಡುವುದು ಕರುಣೆ.
ನಾನು ಇಷ್ಟು ಮಾತಾಡಿದ್ದು  ನೀನು ಕೋರಿದ ಶಿಕ್ಷೆಯನ್ನು ಒಂದಷ್ಟು ಮೆತ್ತಗಾಗಿಸಲು,
ನೀನು ಕೋರಿದ್ದನ್ನು ಅಕ್ಷರಶಃ ಪಾಲಿಸಿದರೆ 
 ವೆನಿಸ್ ನಗರದ ನ್ಯಾಯಾಲಯವು 
ಅಗೋ ಅಲ್ಲಿರುವ ವರ್ತಕನ ಮೇಲೆ ಮಾಡಬೇಕಾಗುತ್ತದೆ ಪ್ರಹಾರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)