ಅಡಿಗರ "ಮಹಾಪೂರ"
ಅಡಿಗರಿಗೆ ನೂರರ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅವರ ಕವಿತೆ "ಮಹಾಪೂರ" ಕುರಿತು ಬರೆಯುವ ಮೂಲಕ ಅವರಿಗೆ ನನ್ನ ಗೌರವ ಅರ್ಪಿಸುತ್ತಿದ್ದೇನೆ.
"ಮಹಾಪೂರ" ಎಂದರೆ ನೆರೆ. "ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು ಈ ಬಾಳಿಗಾ ಮಹಾಪೂರ!" ಎಂದು ಕವಿತೆ ಕೊನೆಗೊಳ್ಳುತ್ತದೆ. ಕವಿ ಯಾವ ಮಹಾಪೂರಕ್ಕಾಗಿ ಕಾಯುತ್ತಿದ್ದಾರೆ? ಕವಿತೆಯ ಪ್ರಾರಂಭದಲ್ಲೇ ಅದಕ್ಕೆ ಸುಳಿವಿದೆ.
"ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ;"
ಮನುಷ್ಯನ ಎದೆಯಿಂದ ಎದೆಗೆ ಒಂದು "ಅಮೃತವಾಹಿನಿ" ಹರಿಯುತ್ತಿದೆ. ಶೇಕ್ಸ್‌ಪಿಯರ್ ಕವಿಯ ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿ ಬರುವ ಸಾಲುಗಳು ಹೀಗಿವೆ.
The quality of mercy is not strained, It droppeth as the gentle rain from heaven Upon the place beneath:
ಅಡಿಗರು ಕೂಡಾ ಇದೇ ಅಮೃತವಾಹಿನಿಯನ್ನು ಕುರಿತೇ ಮಾತಾಡುತ್ತಿರುವುದು. ಮನುಷ್ಯತ್ವದ, ಕರುಣೆ-ಕಕ್ಕುಲಾತಿಗಳ ಅಮೃತವಾಹಿನಿ. ಯುದ್ಧಗಳ ಬಗ್ಗೆ ಓದಿದಾಗ, ಜಗತ್ತಿನಲ್ಲಿ ನಡೆಯುತ್ತಿರುವ ಕ್ರೌರ್ಯದ ಬಗ್ಗೆ ಓದಿದಾಗ ಇಂಥ ಅಮೃತವಾಹಿನಿಯು ಬತ್ತಿಹೋಗುತ್ತಿದೆಯೇ ಎಂದು ನಮಗೆ ಅನುಮಾನ ಬರುತ್ತದೆ. ಆದರೆ ಅಡಿಗರು ನಮಗೆ ಭರವಸೆ ನೀಡುತ್ತಾರೆ -
"ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು; ಸುತ್ತುಮುತ್ತಲು ಮರಳು, ಮೇಲೆ ಪಾಚಿ ಮುತ್ತಿಕೊಂಡರು ಲುಪ್ತವಾಗದೀ ಅಮೃತಧುನಿ ಕಿರಿದಾಗಿ, ಬರಿದಾಗಿ, ನೀರ ಗೆರೆಯಾಗಿ ತಳದೊಳೆಲ್ಲೋ ತಳುವಿ ಗುಳುಗುಳಿಸುತಿದೆ ಸೆಲೆಯು, ಏನನೋ ಕಾಯುತಿದೆ ಗುಪ್ತವಾಗಿ!"
(ಗ್ರೀಷ್ಮ = ಬೇಸಗೆ, ಲುಪ್ತ = ನಾಶ)
ಒಂದೆರಡು ಬೇಸಗೆ ಮಲೆಯಾಗದಿದ್ದರೂ ನದಿಗಳು ಬತ್ತಿಹೊಗುತ್ತವೆ. ಹೀಗಿರುವಾಗ ನೂರಾರು ಗ್ರೀಷ್ಮ (ಬೇಸಗೆ) ಋತುಗಳು ಬಂದರೂ ಮನುಷ್ಯತ್ವದ ಅಮೃತಧುನಿ ಬತ್ತಿಹೋಗುವುದಿಲ್ಲ. ಮರಳು, ಪಾಚಿಗಳು ಮುತ್ತಿಕೊಂಡರೂ ಅವುಗಳ ಕೆಳಗೆ ಈ ಸೆಲೆ ಜೀವಂತವಾಗಿದೆ. ಯಾವುದೋ ಒಂದರ ನಿರೀಕ್ಷೆಯಲ್ಲಿದೆ. ಅದು ಯಾವುದಕ್ಕಾಗಿ ಕಾಯುತ್ತಿದೆ?
ಇಂದಲ್ಲ ನಾಳೆ ಹೊಸ ಬಾನು ಬಗೆತೆರೆದೀತು ಕರಗೀತು ಮುಗಿಲ ಬಳಗ; ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ, ತೊಳೆದೀತು ಒಳಗು-ಹೊರಗ.
(ಸೊದೆ = ಸುಧೆ = ಅಮೃತ)
ಮರಳುಪಾಚಿಗಳಿಂದ ಆವೃತವಾದ ಬತ್ತಿಹೋದ ನದೀಪಾತ್ರವು ಮಳೆಗಾಗಿ ಕಾಯುತ್ತಿದೆ. ಇಂದಿನ ಬಾನು ಕಠಿಣಹೃದಯಿಯಾಗಿರಬಹುದು. ಇಂದಿನ ಮುಗಿಲುಗಳು ಮಳೆಗರೆಯದೆ ಇರಬಹುದು. ಆದರೆ ಮುಂದೊಂದು ದಿನ ಹೊಸಬಾನು ತನ್ನ ಮನದ ಬಾಗಿಲನ್ನು ತೆರೆದೇ ತೆರೆಯುತ್ತದೆ ಎಂಬ ಭರವಸೆಯಿಂದ ಅಮೃತವಾಹಿನಿಯು ಕಾಯುತ್ತಿದೆ. ಅಹಲ್ಯೆಯು ಕಲ್ಲಾಗಿ ನಿಂತಿದ್ದಳು. ಶ್ರೀರಾಮನ ಪಾದ ಸೋಂಕಿದಾಗ ಅವಳಿಗೆ ಶಾಪವಿಮೋಚನೆಯಾಯಿತು ಎಂಬ ಕಥೆ ರಾಮಾಯಣದಲ್ಲಿದೆ. ಅಹಲ್ಯೆ ಕಲ್ಲಾಗಿದ್ದಳು ಎಂಬುದು ಒಂದು ಚಿತ್ರಣ ಅಷ್ಟೇ. ಅವಳು ನಿಜವಾಗಿಯೂ ಕಲ್ಲಾಗಿರಲಿಲ್ಲ. ಕಲ್ಲಿನ ಮನಸ್ಸು ಮಾಡಿಕೊಂಡಿದ್ದಳು. ಸ್ವಂತ ಗಂಡನೇ ಅವಳ ಚಾರಿತ್ರ್ಯವನ್ನು ಶಂಕಿಸಿದ. ಹೀಗಾಗಿ ಖಿನ್ನತೆ ಅವಳನ್ನು ಆವರಿಸಿಕೊಂಡಿರಬಹುದು. ಇಡೀ ಸಮಾಜ ಅವಳನ್ನು ಬಹಿಷ್ಕರಿಸಿರಬಹುದು. ಆದರೆ ಅವಳಲ್ಲಿರುವ ಭರವಸೆಯ ಅಮೃತಸೆಲೆ ಆರಿಹೋಗಲಿಲ್ಲ. ಅವಳು ಕೂಡಾ ಕಾದಿದ್ದಳು. ಶ್ರೀರಾಮನು ಅವಳ ಮನೆಯನ್ನು ಹೊಕ್ಕು ಅವಳ ಆತಿಥ್ಯ ಸ್ವೀಕರಿಸಿದಾಗ, ಅವಳನ್ನು ಒಪ್ಪಿಕೊಂಡಾಗ ಕಲ್ಲಾಗಿದ್ದ ಅವಳ ಬದುಕು ಮತ್ತೆ ಹರಿಯತೊಡಗಿರಬಹುದು. ರಾಮಲಕ್ಷ್ಮಣರಂತೆ ಇತರರೂ ಆಕೆಯನ್ನು ಒಪ್ಪಿಕೊಂಡಿರಬಹುದು. ಸ್ವತಃ ಅವಳ ಪತಿಯೇ ಅವಳನ್ನು ಸ್ವೀಕರಿಸಲು ಮುಂದೆ ಬಂದಿರಬಹುದು.
ಈ ಸೆಲೆಗೆ ಆ ಮಳೆಯೂ ಎದೆಗೆ ಎದೆ ಎದೆ ಹೊಳೆಯು ಸೇರದಿರೆ ಇಲ್ಲ ನಿಸ್ತಾರ: ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು ಈ ಬಾಳಿಗಾ ಮಹಾಪೂರ!
ರಾಮನ ಎದೆಯಲ್ಲಿದ್ದ ಕರುಣೆಯ ಹನಿಗಳು ಅಹಲ್ಯೆಯ ಹೃದಯದಲ್ಲಿ ಬತ್ತದೆ ಉಳಿದಿದ್ದ ಕರುಣೆಯತ್ತ ಹರಿದಾಗ ಒಂದು ಮಹಾಪೂರವೇ ಸೃಷ್ಟಿಯಾಯಿತು. ಕಳಿಂಗದ ರಣರಂಗದಲ್ಲಿ ರಕ್ತದ ಮಹಾಪೂರವನ್ನೇ ಹರಿಸಿದ ಅಶೋಕನ ಮನಸ್ಸಿನಲ್ಲಿ ಬತ್ತಿಯೇ ಹೋದಂತಿದ್ದ ಮಾನವತ್ವವು ಮತ್ತೊಮ್ಮೆ ಜಾಗೃತವಾಯಿತು. ಅವನು ಅಹಿಂಸೆಯ ಮಾರ್ಗವನ್ನು ಅನುಸರಿಸಿದ್ದಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಅಹಿಂಸೆಯನ್ನು ಸ್ಥಾಪಿಸಲು ಮುಂದಾದ. ದಾರಿಹೋಕರನ್ನು ಕೊಂದು ಅವರ ಬೆರಳುಗಳನ್ನು ಕತ್ತರಿಸಿ ಮಾಲೆ ಮಾಡಿಕೊಂಡು ಹೆಮ್ಮೆಯಿಂದ ಧರಿಸುತ್ತಿದ್ದ ಅಂಗುಲಿಮಾಲನ ಮನಸ್ಸಿನಲ್ಲೂ ಮಾನವತೆಯು ಸಂಪೂರ್ಣವಾಗಿ ಬತ್ತಿಹೋಗಿರಲಿಲ್ಲ. ಬುದ್ಧನ ಆಗಮನದಿಂದ ಅದು ಮತ್ತೊಮ್ಮೆ ಸೆಲೆಯಾಗಿ ಹರಿಯತೊಡಗಿತು. ಅವನ ಮನಸ್ಸಿನಲ್ಲಿದ್ದ ಕರುಣೆಯನ್ನು ಬುದ್ಧನ ಮನಸ್ಸಿನಲ್ಲಿದ್ದ ಕರುಣೆ ಜಾಗೃತಗೊಳಿಸಿತು. ಕ್ರೂರಿಗಳು ಹುಟ್ಟುತ್ತಲೇ ಕ್ರೂರಿಗಳಾಗಿರಲಿಲ್ಲ. ಸಮಾಜದಲ್ಲಿದ್ದ ಕ್ರೌರ್ಯವು ಅವರತ್ತ ಹರಿದುಬಂದು ಮಡುಗಟ್ಟಿತು. ಆದರೆ ಈ ಕ್ರೌರ್ಯದ ಮರಳು-ಪಾಚಿಗಳ ಕೆಳಗೆ ಒಳ್ಳೆಯತನದ ಅಮೃತಧುನಿ ಹಾಗೇ ಇದೆ. ಅದು ಕಾಯುತ್ತಿರುವುದು ಕರುಣೆಗಾಗಿ. ಕರುಣೆಯಿಂದ ಮಾತ್ರ ಕ್ರೌರ್ಯವನ್ನು ಗೆಲ್ಲಬಹುದು. ಇಂಗ್ಲಿಷ್ ಭಾಷೆಯಲ್ಲಿ killing by kindness ಎಂಬ ಪ್ರಯೋಗವಿದೆ. ಕ್ರೂರಿಗೆ ಯಾರೂ ಒಂದು ಒಳ್ಳೆಯ ಮಾತಾಡುವುದಿಲ್ಲ. ಅವನನ್ನು ಕಂಡರೆ ಎಲ್ಲರಿಗೂ ಹೆದರಿಕೆ, ಹೇವರಿಕೆ. ಆದರೆ ಅವನಲ್ಲಿನ ಒಳ್ಳೆಯತನವನ್ನು ಗುರುತಿಸಿ ಅದನ್ನು ಓಗೊಡುವಂತೆ ಕರೆಯಲು ಅಸಾಮಾನ್ಯರಿಗೆ ಮಾತ್ರ ಸಾಧ್ಯ. ಬಹುಶಃ ಅವತಾರ ಎಂಬುದರ ಅರ್ಥವೇ ಇದು.
ಜಗತ್ತಿನಲ್ಲಿ ಕ್ರೌರ್ಯವು ಇಂದು ಅತಿದೊಡ್ಡ ಸಮಸ್ಯೆ. ಅಡಿಗರು ಈ ಕವಿತೆ ಬರೆದಾಗಲೂ ಅದು ಸಮಸ್ಯೆಯಾಗಿತ್ತು. ದ್ವಿತೀಯ ಮಹಾಯುದ್ಧದಲ್ಲಿ ಹಿಟ್ಲರ್ ನಡೆಸಿದ ಕ್ರೌರ್ಯ ಯಾವುದಕ್ಕೆ ಕಡಿಮೆ ಇತ್ತು? ಇಂದು ಅನೇಕ ರಾಷ್ಟ್ರಗಳು ಕ್ರೌರ್ಯದ ಬೆಂಕಿಯಲ್ಲಿ ಹೊತ್ತಿಕೊಂಡು ಉರಿಯುತ್ತಿವೆ. ಧರ್ಮ, ಜಾತಿಗಳು ಮನುಷ್ಯನನ್ನು ಕುರುಡು ಮಾಡಿವೆ. ಆದರೆ ಮನುಷ್ಯತ್ವವು ನಾಶವಾಗಿಲ್ಲ. ನಾಶವಾಗುವುದೂ ಇಲ್ಲ. ಇಂದೂ ಜಗತ್ತು ಒಂದು ಮಹಾಪೂರಕ್ಕಾಗಿ ಎದುರು ನೋಡುತ್ತಿದೆ. "ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು, ಈ ಬಾಳಿಗಾ ಮಹಾಪೂರ!"
"ಮಹಾಪೂರ" ಎಂದರೆ ನೆರೆ. "ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು ಈ ಬಾಳಿಗಾ ಮಹಾಪೂರ!" ಎಂದು ಕವಿತೆ ಕೊನೆಗೊಳ್ಳುತ್ತದೆ. ಕವಿ ಯಾವ ಮಹಾಪೂರಕ್ಕಾಗಿ ಕಾಯುತ್ತಿದ್ದಾರೆ? ಕವಿತೆಯ ಪ್ರಾರಂಭದಲ್ಲೇ ಅದಕ್ಕೆ ಸುಳಿವಿದೆ.
"ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ;"
ಮನುಷ್ಯನ ಎದೆಯಿಂದ ಎದೆಗೆ ಒಂದು "ಅಮೃತವಾಹಿನಿ" ಹರಿಯುತ್ತಿದೆ. ಶೇಕ್ಸ್‌ಪಿಯರ್ ಕವಿಯ ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿ ಬರುವ ಸಾಲುಗಳು ಹೀಗಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ