ನೆರಳು ಚಿತ್ರಗಳು
ಮೂಲ ಕವಿತೆ - ಮೇರಿ ಕಾರ್ನಿಶ್ (ಅಮೆರಿಕಾ ಸಂಯುಕ್ತರಾಷ್ಟ್ರ)
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಕಂದೀಲಿನ ಬಿಳಿ ಬೆಳಕಿನಲ್ಲಿ ಅಪ್ಪ ಕೈಚಾಚಿದಾಗ
ಹಸ್ತಗಳ ಜೋಡಿ ಕುದುರೆಯಾಗಿ ಕಿವಿ ನಿಮಿರಿಸಿ
ಕೆನೆಯುತ್ತಿತ್ತು ಮೇಲಕ್ಕೆ ಮೈ ಕೊಡವಿ;
ಕ್ಯಾನವಾಸ್ ಗೋಡೆಯ ಮೇಲೆ
ನಿದ್ದೆ ನಟಿಸುತ್ತಿದ್ದ ಮೊಸಳೆ
ಒಮ್ಮೆಲೇ ಮೇಲೆದ್ದು ತೆರೆದು ಮುಚ್ಚುತ್ತಿತ್ತು ಬಾಯಿ;
ಹಂಸವೊಂದು ಬಿಂಕದ ಕತ್ತನ್ನು ತಿರುಗಿಸಿ
ವೈಯ್ಯಾರದಿಂದ ಕೆಳಗಿಳಿಸಿ ಬೆರಳುಕೊಕ್ಕನ್ನು
ನಯವಾಗಿ ಬಾಚಿಕೊಳ್ಳತ್ತಿತ್ತು ಅಪ್ಪನ ಕೂದಲಗರಿ.
ನಮ್ಮ ಟೆಂಟ್ ಹೊರಗೆ ಕಾಡಿನಲ್ಲಿ
ಪ್ರತಿದಿನವೂ ಒಂದಿಷ್ಟು ಕ್ಷಯಿಸುವ ತಾರೆಗಳ ಕೆಳಗೆ
ಸರಸರ ಓಡಾಡುತ್ತಿದ್ದವು ಹೆಗ್ಗಣಾದಿ.
ತಾರಾಮಂಡಲದ ಒರಾಯನ್ ಖಡ್ಗದ ಆಳದಲ್ಲಿ
ಹರಡುವ ಬೆಳಕಿನಲ್ಲಿ ಹುಟ್ಟುತ್ತಿದ್ದವು ಲಕ್ಷಾಂತರ ಚುಕ್ಕಿ.
ಹಾರುತ್ತಿದ್ದವು ಒಂದರ ಹಿಂದೆ ಇನ್ನೊಂದು
ಅಪ್ಪನ ಕೈ ಹೆಬ್ಬೆರಳು
ತೆಕ್ಕೆ ಹಾಕಿಕೊಂಡ ಬಾನಾಡಿ.
ಟಿಪ್ಪಣಿ - ತನ್ನ ಬಾಲ್ಯದ ಘಟನೆಯೊಂದನ್ನು ಆಧರಿಸಿ ಕವಯಿತ್ರಿ ಈ ಕವಿತೆಯನ್ನು ರಚಿಸಿದ್ದಾಳೆ. ಮಕ್ಕಳು ರಜಾದಿನಗಳಲ್ಲಿ ಅಪ್ಪನೊಂದಿಗೆ ಕ್ಯಾಂಪಿಂಗ್ ಹೋಗಿದ್ದಾರೆ. ಕಾಡಿನ ಅಂಚಿನಲ್ಲಿ ಟೆಂಟ್ ನಿರ್ಮಿಸಿ ಅದರಲ್ಲಿ ಇರುವುದೇ ಒಂದು ರೋಮಾಂಚಕ ಅನುಭವ. ರಾತ್ರಿ ಕಂದೀಲಿನ ಬೆಳಕಿನಲ್ಲಿ ಅಪ್ಪ ಟೆಂಟ್ ಗೋಡೆಯ ಮೇಲೆ ಚಿತ್ರವಿಚಿತ್ರವಾದ ಪ್ರಾಣಿಗಳನ್ನು ತೋರಿಸುತ್ತಿದ್ದಾನೆ. ಕುದುರೆ, ಮೊಸಳೆ, ಹಂಸ. ಇವುಗಳ ನೆರಳುಚಿತ್ರಗಳನ್ನು ನೋಡುತ್ತಾ ಮಕ್ಕಳು ಮಂತ್ರಮುಗ್ಧರಾಗಿದ್ದಾರೆ. ಟೆಂಟ್ ಒಳಗಿನ ಜಗತ್ತು ಒಂದು ಮಾಯಾಲೋಕವಾಗಿದೆ. ಈ ಮಾಯಾಲೋಕವನ್ನು ಸೃಷ್ಟಿಸಿರುವುದು ನೆರಳುಗಳು! ಅವು ನಿಜವಲ್ಲ ಎಂದು ಗೊತ್ತಿದ್ದರೂ ಮಕ್ಕಳು ಅವನ್ನು ನಿಜವೆಂದೇ ನಂಬುತ್ತಿದ್ದಾರೆ. ಅತ್ತ ಟೆಂಟ್ ಹೊರಗಿನ ಜಗತ್ತಿನಲ್ಲಿ ಏನು ನಡೆಯುತ್ತಿದೆ? ಅಲ್ಲಿರುವುದು ಅಂಧಕಾರ. ಹೆಗ್ಗಣಗಳು ಮತ್ತು ನಿಶಾಚರಗಳು ಅಲ್ಲಿ ಓಡಾಡುತ್ತಿವೆ. ಮೇಲಿರುವ ತಾರೆಗಳು ಕೂಡಾ ಪ್ರತಿದಿನವೂ ಕ್ಷಯಿಸುವವು. ಇಷ್ಟಾದರೂ ನಮ್ಮ ಕಲ್ಪನೆಯ ಒರಾಯನ್ ದೇವತೆಯ ಖಡ್ಗದಲ್ಲಿ ಅನೇಕ ಚುಕ್ಕಿಗಳು ನಿತ್ಯವೂ ಹುಟ್ಟುತ್ತಿವೆ. (ಹೀಗೆ ಹುಟ್ಟುವುದು ಜನರ ಕಲ್ಪನೆಯಲ್ಲಿ ಕೂಡಾ ಇರಬಹುದು!) ತಂದೆಯು ಹೆಬ್ಬೆರಳಿನಿಂದ ಮಾಡಿದ ಹಕ್ಕಿಗಳ ಚಿತ್ರ ಯಾವುದರ ಸಂಕೇತ ಎಂದು ಯೋಚಿಸಿ. ಹೇಗೆ ನೆರಳುಚಿತ್ರಗಳಲ್ಲಿರುವ ಪ್ರಾಣಿಗಳು ನಿಜವಲ್ಲವೋ ನಭದಲ್ಲಿ ನಮಗೆ ಕಾಣುವ ತಾರಾಮಂದಲಗಳು ಕೂಡಾ ನಿಜವಲ್ಲ. ನಮ್ಮ ಅನುಭವಗಳಲ್ಲಿ ಎಷ್ಟು ನಿಜ, ಎಷ್ಟು ಬರಿಯ ನೆರಳು?
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ