ಹುಲ್ಲುಗಾವಲು
ಹುಲ್ಲುಗಾವಲು
ಮೂಲ - ಕೇಟ್ ನ್ಯಾಪ್ ಜಾನ್ಸನ್
(ಕವಿತೆಯನ್ನು ಒಂದೆರಡು ಸಲ ಓದಿ ಅನಂತರ ಕೆಳಗಿನ ಟಿಪ್ಪಣಿಯನ್ನು ಓದಿ.)
ಅರ್ಧದಿನವೇ ಕಳೆದುಹೋಯಿತು
ಕಿಟಕಿಯಿಂದ ಹೊರಗಿಣುಕುತ್ತಾ.
ನಾನು ತಿಳಿಯಬಯಸಿದ್ದು
ಒಂದೇ ಒಂದು ಸತ್ಯ
ಆತ್ಮವನ್ನು ಕುರಿತು, ಆದರೆ
ಆಲೋಚನಾ ಪಥದ ನಡುವೆಯೇ
ನಾನು ತ್ಯಜಿಸಿ ಆಲೋಚನೆ
ಈಗ ಎರಡು ಅಂಗುಲ ಹಿಮಪಾತವಾಗಿದೆ
ಹುಲ್ಲುಗಾವಲಿನ ಮೇಲೆ. ಎಲ್ಲಿ ಹೋಗಿದ್ದೆ ನಾನು
ಎಷ್ಟು ಹೊತ್ತು ಹುಡುಕುತ್ತಿದ್ದೆ ಹೊರಗೆ
ನಿನಗಾಗಿ? ನನ್ನನ್ನು ಎಂದೂ ಬಿಡದ
ನನ್ನ ಇಹವೇ, ನನ್ನ ಇರವೇ?
ಟಿಪ್ಪಣಿ: ಬಹಳ ಸರಳವಾದ ಪದಗಳಲ್ಲಿ ಕಟ್ಟಲಾದ ಕವಿತೆಯಲ್ಲಿ ಒಂದು ಅನುಭವದ ಕಥನವಿದೆ. ಹೊರಗೆ ಹಿಮಪಾತವಾಗಲು ಪ್ರಾರಂಭವಾಗಿದೆ. ಕಿಟಕಿಯ ಹತ್ತಿರ ಬಂದು ನಿಂತ ಕವಯಿತ್ರಿ ಹೊರಗೆ ನೋಡುತ್ತಾ ಆಲೋಚನೆಯಲ್ಲಿ ಮುಳುಗಿದ್ದಾಳೆ. ಶರತ್ಕಾಲದಲ್ಲಿ ಮಂಜು ಸುರಿಯುವುದನ್ನು ನೋಡುವುದೇ ಒಂದು ಸುಂದರ ಅನುಭವ. ನೋಡುತ್ತಾ ನೋಡುತ್ತಾ ಅರ್ಧ ದಿನವೇ ಕಳೆದುಹೋಗಿದೆ ಎಂಬುದರ ಅರಿವು ಲೇಖಕಿಗೆ ಒಮ್ಮೆಲೇ ಆಗುತ್ತದೆ. ಅವಳು ಕಿಟಕಿಯ ಬಳಿ ನಿಂತಾಗ ಅವಳ ಮನಸ್ಸಿನಲ್ಲಿದ್ದ ಆಲೋಚನೆ ಆತ್ಮವನ್ನು ಕುರಿತದ್ದಾಗಿತ್ತು. ಆತ್ಮವೆಂಬುದು ಇದೆಯೇ? ಅದನ್ನು ಹುಡುಕುವುದು ಹೇಗೆ? ಆದರೆ ಹೊರಗಿನ ಹಿಮಪಾತ ನೋಡುತ್ತಾ ಮೂಲ ಪ್ರಶ್ನೆಯ ಮೇಲೂ ಹಿಮಪಾತವಾಗಿ ಅದು ಅಳಿಸಿಹೋದಂತಿದೆ! ಅವಳ ಆಲೋಚನಾ ಪಥದ ಮೇಲೂ ಹಿಮಪಾತವಾಗಿ ಅವಳು ಕಳೆದುಹೋಗಿದ್ದಾಳೆ. ಆದರೂ ಅವಳನ್ನು ಈ ಗಾಢ ಸುಪ್ತಸ್ಥಿತಿಯಿಂದ ಎಬ್ಬಿಸುವ ಒಂದು ಶಕ್ತಿ ಇದೆ. ಅದು ಅವಳನ್ನು ಕಳೆದುಹೋಗಲು ಬಿಡುವುದಿಲ್ಲ. ತಡವಾದರೂ ಅವಳನ್ನು ಬಿಡದೆ ಎಚ್ಚರಿಸುತ್ತದೆ. ತನ್ನಲ್ಲಿ ಇಂಥದೊಂದು ಎಬ್ಬಿಸುವ ಶಕ್ತಿ ಇದೆ ಎಂಬುದರ ಅರಿವು ಲೇಖಕಿಗೆ ಆಗುತ್ತದೆ. ತಾನು ಹುಡುಕುತ್ತಿದ್ದ ಆತ್ಮವು ತನ್ನನ್ನು ಎಂದೂ ಬಿಟ್ಟೇ ಇರಲಿಲ್ಲ ಎಂದು ಕವಯಿತ್ರಿ ಯೋಚಿಸುತ್ತಾಳೆ. ಒಂದೆರಡು ಪ್ರಶ್ನೆಗಳು. ಆಲೋಚನೆಯನ್ನು ತ್ಯಜಿಸಿದ್ದು ಯಾರು? ಕಿಟಕಿ ಎಂಬುದು ಯಾವುದರ ಸಂಕೇತ? ಹಿಮಪಾತವಾದ ಹುಲ್ಲುಗಾವಲು ಯಾವುದರ ಸಂಕೇತ?
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ