ಬೆಳಕಿನ ಕಾವಲುಗಾರ್ತಿ

ಮೂಲ ಕವಿತೆ - ಮಿಷೆಲ್ ವುಲ್ಫ್  (ಅಮೇರಿಕಾ ಸಂಯುಕ್ತರಾಷ್ಟ್ರ)
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

















ಪುಟ್ಟವಳು ಕೇಳಿಸಿಕೊಂಡರೂ ಎಂದಿಗೂ ಬಿಟ್ಟುಕೊಡುವುದಿಲ್ಲ 
ತನಗೆ ಗೊತ್ತಿರುವುದನ್ನು. ಬೆಳಗಿನ ಹೊತ್ತು  
ಅವಳು ನಿಯಂತ್ರಿಸುತ್ತಾಳೆ 
ಛಾವಣಿಗಳ ಮೂಲಕ ಸೋಸಿ  ಮರಗಳ ಮೂಲಕ ಹಾದು 
ನೆರಿಗೆಗಟ್ಟಿದ ಮುಖಗಳ ಮೇಲೆ ಬಿದ್ದ ಬೆಳಕಿನ ಪ್ರಮಾಣ. 
ಒಬ್ಬಂಟಿಯಾಗಿ ಎದ್ದವಳು ತೆರೆಯುತ್ತಾಳೆ ಬೆಳಕಿನ ಪೆಟ್ಟಿಗೆಗಳನ್ನು 
ಒಂದೊಂದಾಗಿ.  ಇಂಥವರಿಗೆ ಇಷ್ಟೇ ಎಂದು 
ಎಚ್ಚರಿಕೆಯಿಂದ ಹಂಚುತ್ತಾಳೆ.  
ಗಂಭೀರ ಮುಖದಿಂದ ಆಲಿಸುತ್ತಾಳೆ  
ಇನ್ನಷ್ಟು ಬೆಳಕಿಗಾಗಿ ಜನರು ನೀಡಿದ ಮೊರೆ. ಎಂಥ ಕೆಲಸವಪ್ಪ. 
ಎಷ್ಟು ಜಾಗರೂಕತೆ ವಹಿಸಿದರೂ ಸಾಲದು.
ಸ್ವಲ್ಪ ದಿನಗಳ ಹಿಂದೆ ಉತ್ಸಾಹದ ಭರದಲ್ಲಿ 
ಇದ್ದಬದ್ದ ಬೆಳಕನ್ನೆಲ್ಲಾ ಹಂಚಿಬಿಡುತ್ತಿದ್ದಳು. 

ಫೋನ್ ಗಳು ಒಂದೇ ಸಮನೆ ಬಜಾಯಿಸುತ್ತವೆ.
ಅಬ್ಬಾ ಸೋಜಿಗವೇ. ಯಾರೋ ಅವಳಿಗೆ 
ಬೆಳಕಿಗಾಗಿ ಧನ್ಯವಾದ ತಿಳಿಸುತ್ತಾರೆ.
ಅವಳಿಗೆ ಕೂಡಲೇ ಕಟ್ ಮಾಡಬೇಕಾಗುತ್ತದೆ.
ಅವಳ ಗಲ್ಲಗಳು ಬಲೂನುಗಳಂತೆ
ಉಫ್ ಎಂದು ಊದಿಕೊಳ್ಳುತ್ತಾ, ಫುಸ್ ಎಂದು ಕುಗ್ಗುತ್ತಾ.
ಬೆದರಿದ ಮೀನೋ ಎಂಬಂತೆ.

ಪೊರಕೆ ಇಡುವ ಮೂಲೆಗೆ ಹೋಗಿ
ಫನಲ್ ಜೋಡಿಸುತ್ತಾಳೆ. ಅವಳ ಮುಖ ಹೊಳೆಯುತ್ತಿದೆ.
ಹೊಸದಾಗಿ ಉಕ್ಕಿದ ಸರಕನ್ನು ಜೋಪಾನವಾಗಿ ಶೇಖರಿಸಿಟ್ಟು
ಖಾಲೀ ಲೋಹದ ಪೆಟ್ಟಿಗೆಯಲ್ಲಿ ಬಚ್ಚಿಡುತ್ತಾಳೆ
ಮೇಜಿನ ಮೇಲಿರುವ ಪತ್ರಿಕೆಗಳ ಕೆಳಗೆ.
ಸದ್ಯ. ಯಾರೂ ಗಮನಿಸಿದಂತೆ ತೋರುತ್ತಿಲ್ಲ.
ಸುಸ್ತಾಗಿ ಅವಳು ಇಂದಿನ ಅಂಚೆ ನೋಡುತ್ತಾಳೆ.
ಅವಳ ಬಾಯಿಂದ ಹೊರಡುತ್ತದೆ ಒಂದು ನಿಟ್ಟುಸಿರ ಕೂಜನ.
ಅಬ್ಬಾ ಎಷ್ಟೊಂದು ಕೆಲಸ.  ಇಷ್ಟಾದರೂ ಸಹಾಯ ಮಾಡಲು ಯಾರಿಲ್ಲ. 
ಅವಳು ಮತ್ತೆ ಹೊರಟು ನಿಂತಾಗ 
ಜೋಡಿಸುತ್ತಾಳೆ ರಾತ್ರಿಗಳ ಚುಕ್ಕೆ, ಒಂದೊಂದೇ ಚುಕ್ಕಿ ಚುಕ್ಕಿ.
   
ಟಿಪ್ಪಣಿ:  ಎಳೆಯ ಮಗುವನ್ನು ಎತ್ತಿ ಆಡಿಸಿದವರಿಗೆ ಈ ಕವಿತೆ ಸುಲಭವಾಗಿ ದಕ್ಕುತ್ತದೆ.  ಮಗು ಮನೆಗೆ ಬೆಳಕನ್ನು ತರುವ ಸಾಧನ!  ನೆರಿಗೆಗಟ್ಟಿದ ಮುಖಗಳಲ್ಲೂ ಬೆಳಕು ತರಬಲ್ಲ ಸಾಮರ್ಥ್ಯ ಮಕ್ಕಳಿಗೆ ಮಾತ್ರ ಇರುತ್ತದೆ! ಮಗುವನ್ನು ಸುತ್ತುವರಿದ ಜನ ಈ ಬೆಳಕಿಗಾಗಿ ನಾ ಮುಂದು ತಾ ಮುಂದು ಎಂದು ಮುಗಿ ಬೀಳುತ್ತಾರೆ. ಬೆಳಕಿನ ಡಿಮ್ಯಾಂಡ್ ಇಷ್ಟು ಹೆಚ್ಚಾಗಿರುವುದರಿಂದ ಅದರ ಬೆಲೆಯೂ ಹೆಚ್ಚು! ಬೆಳಕನ್ನು ಪ್ರತಿದಿವಸ ಇಷ್ಟೆಂದು ತಯಾರಿಸುವ ಮಗು ಅದನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತದೆ. ಎಲ್ಲರಿಗೂ ಇಷ್ಟಿಷ್ಟು ಹಂಚುತ್ತದೆ. ಮಕ್ಕಳು ಮಾಡುವ ಎಲ್ಲ ಚೇಷ್ಟೆಗಳೂ ಬೆಳಕನ್ನು ಉತ್ಪಾದಿಸುವ ಕ್ರಿಯೆಗಳು. ಪೊರಕೆ ಇಡುವ ಸ್ಥಾನದಲ್ಲಿ ಹೇಗೋ ನುಗ್ಗಿ ಪೊರಕೆಯನ್ನು ಎಳೆದು ತಂದರೆ ಈ ಸಾಹಸ ಅದೆಷ್ಟು ಬೆಳಕನ್ನು ಸೃಷ್ಟಿಸುತ್ತದೆ! ಇಷ್ಟೆಲ್ಲಾ ದುಡಿಯುವ ಮಗುವಿಗೆ  ಯಾರಿಂದಲೂ ಸ್ವಲ್ಪವೂ ಸಹಾಯವಿಲ್ಲ! ಎಲ್ಲರೂ ಇನ್ನಷ್ಟು ಬೆಳಕಿಗೆ ಅರ್ಜಿ ನೀಡುವವರೇ! ಬೆಳಕಿನ ಸೃಷ್ಟಿ ಮತ್ತು ವಿತರಣೆ ಮಾಡುತ್ತಾ ಸುಸ್ತಾಗಿ ಮಗು ಕೊನೆಗೂ ದಿನದ ಕೆಲಸ ಮುಗಿಸಿ ಹೊರಟಾಗಲೂ ಅವಳಿಗೆ ಬಿಡುವಿಲ್ಲ. ಅವಳು ರಾತ್ರಿಗಳ ಚುಕ್ಕೆಗಳನ್ನು ಜೋಡಿಸುತ್ತಾ ಸಾಗುತ್ತಾಳೆ (ದಿನರಾತ್ರಿಗಳನ್ನು ಕಳೆಯಲು ಅವಳದೇ ಆಧಾರವಾಗಿದೆ ಎಂಬ ಅರ್ಥ).
ಕೆಲವು ಸ್ವಾರಸ್ಯಗಳು : ಮಗು ಕೇಳಿದವರಿಗೆಲ್ಲಾ ಬೆಳಕನ್ನು ದಯಪಾಲಿಸುವುದಿಲ್ಲ. ಅವಳು ಗಂಭೀರವಾಗಿ ಅವರ ಮೊರೆಯನ್ನು ಕೇಳಿಸಿಕೊಂಡರೂ ಅವರಿಗೆ ನಸೀಬು ಇದ್ದರೆ ಮಾತ್ರ ಬೆಳಕು ಸಿಕ್ಕುತ್ತದೆ! ಮಗು "ಫನಲ್ ಜೋಡಿಸುತ್ತದೆ" ಎಂಬುದರ ಅರ್ಥವೇನು? ಫನಲ್ ಮೂಲಕ ಮಗು ಏನನ್ನು ಅಳೆದು ವಿತರಿಸಲಿದೆ? ಮಗುವಿಗೆ ಬರುವ "ಫೋನ್ ಕರೆಗಳು"  ಯಾರದಿರಬಹುದು? ಮಗು "ಫೋನ್ ಕಟ್ ಮಾಡುವುದು" ಎಂದರೇನು?


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)