ನಡೆದು ಮನೆಗೆ ಹೋಗುವಾಗ

ಈ ಕವಿತೆಯನ್ನು ಒಂದೆರಡು ಸಲ ಓದಿದ ನಂತರ ಕೆಳಗಿನ ಟಿಪ್ಪಣಿ ಓದಿ. ನಿಮಗೆ ಈ ಕವಿತೆಯಲ್ಲಿ ಬೇರೇನಾದರೂ ಸ್ವಾರಸ್ಯ ಕಂಡರೆ ತಿಳಿಸಿ.
Image result for winter white dead tree wiki

ನಡೆದು ಮನೆಗೆ ಹೋಗುವಾಗ 

ಮೂಲ ಅಮೆರಿಕನ್ ಕವಿತೆ - ಮರೀ ಹೋವಿ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

ಎಲ್ಲವೂ ಸಾಯುತ್ತದಲ್ಲ ಎಂದೆ ನಾನು.  ಅದು ಯಾವಾಗ ಪ್ರಾರಂಭವಾಯಿತೋ?
ಒಂದು ಮರದಿಂದಲೋ? ಶರತ್ಕಾಲದಿಂದಲೋ? ನನ್ನಿಂದಲಂತೂ ಅಲ್ಲ ಎಂದಳು ಅವಳು.

ಓ ಹಾಗೋ ಸಮಾಚಾರ ಎಂದೆ ನಾನು. ಅದಕ್ಕವಳು ನಾನು ಪುನರ್ಜನ್ಮ ಪಡೆಯುತ್ತೇನೆ ಎಂದಳು.
ಇನ್ನೊಂದು ಕೆಲವು ಸಾವಿರ ವರ್ಷದಲ್ಲಿ ಸಂಧಿಸೋಣ! ಎಂದು ನಕ್ಕಳು.  

ವರ್ಷಗಳು ಯಾಕೆ? ನಿಮಿಷಗಳಲ್ಲಿ ಆಗೋಲ್ಲವೇ? ಹೋಗಲಿ ದಿನಗಳಲ್ಲಿ?
ಈ ಮಾತಿಗೆ  ಹೊಟ್ಟೆ ಹುಣ್ಣಾಗುವಷ್ಟು ನಕ್ಕಳು. 

ವರ್ಷಗಳು ಬೇಕು, ಎಂದಳು ನಿರ್ಧಾರದ ಧ್ವನಿಯಲ್ಲಿ. 
ನಮ್ಮಿಬ್ಬರದೂ ಹಲವು ಜನ್ಮಗಳ ನಂಟಿರಬಹುದೇನೋ ಅಂದೆ.

ನಾನು ಈ ಭೂಮಿಯ ಮೇಲೆ ಒಮ್ಮೆಯೂ ಆತ್ಮ ಪಡೆದಿಲ್ಲ ಎಂದಳು. 
(ತುಂಬಾ ಚಳಿಯಿತ್ತು. ನಾವು ಹಸಿದಿದ್ದೆವು.) ಮುಂದಿನ ಸಲ ನೀನು ಅಮ್ಮ ಆಗು, ನಾನೆಂದೆ.

ಸಾಧ್ಯವೇ ಇಲ್ಲ ಜೋಸೇ ಎಂದವಳು ಅನ್ನುವುದಕ್ಕೂ   
ನಾವು ಚಳಿಗಾಳಿಯ ಕೊನೆಯ ತಿರುವಿಗೆ ಬರುವುದಕ್ಕೂ ತಾಳೆಯಾಯಿತು.

ಟಿಪ್ಪಣಿ: 
ಕುತೂಹಲಕರವಾದ ಈ ಕವಿತೆಯನ್ನು ಹೇಗೆ ಅರ್ಥೈಸಿಕೊಳ್ಳುವುದು? ಈ ಸಂಭಾಷಣೆ ಒಬ್ಬ ಹುಡುಗಿ ಮತ್ತು ಅವಳ ಅಣ್ಣ/ತಮ್ಮನ ನಡುವೆ ಆಗಿರಬಹುದಾದ ತಮಾಷೆಯ ಸಂಭಾಷಣೆ ಎನ್ನುವ ಅನುಮಾನ ಬರುತ್ತದೆ (ಕೊನೆಯಿಂದ ಎರಡನೇ ಮತ್ತು ಮೂರನೇ ಸಾಲು ಗಮನಿಸಿ. ತಾಯಿ ಮತ್ತು ಮಗಳ ನಡುವಣ ಸಂಭಾಷಣೆ ಇರಬಹುದೇನೋ ಎಂದು ನಾನು ಮೊದಲು ತರ್ಕಿಸಿದೆ. ಆದರೆ ಜೋಸೇ ಎಂಬುದು ಸಾಮಾನ್ಯವಾಗಿ ಗಂಡುಮಕ್ಕಳ ಹೆಸರು. ಅಲ್ಲದೆ ತಾಯಿಯನ್ನು ಹೆಸರು ಹಿಡಿದು ಕರೆಯುವುದು ಅಪರೂಪ.) 

ಶೀರ್ಷಿಕೆಯ ಆಧಾರದ ಮೇಲೆ ಅವರು ತಮ್ಮ ಮನೆಯತ್ತ ನಡೆದು ಬರುವಾಗ ಈ ಸಂಭಾಷಣೆ ನಡೆದಿರಬಹುದು ಎಂದು ಊಹಿಸಬಹುದು.  ಅಮೆರಿಕಾದ ಚಳಿಪ್ರದೇಶದಲ್ಲಿ ಕುಳಿರ್ಗಾಳಿಯಲ್ಲಿ ನಡೆದು ಹೋಗುವುದೇನು ಸುಲಭವಲ್ಲ. ಅದರಲ್ಲೂ ಹಸಿದಿದ್ದಾಗ! ಇಂಥ ಚಳಿಗಾಲದಲ್ಲಿ ಗಿಡಮರಗಳೆಲ್ಲಾ ಎಲೆಗಳನ್ನು ಉದುರಿಸಿ "ಸಾಯುತ್ತವೆ."  ಮರಗಿಡಗಳ ಮೇಲೆ ಹಿಮಪಾತವಾಗಿ ಎಲ್ಲವೂ ಬೆಳ್ಳಗೆ ತೋರುತ್ತದೆ. ಇಂಥ ಸನ್ನಿವೇಶದಲ್ಲಿ ನಡೆದು ಬರುವಾಗ ಸಾವಿನ ಮಾತು ಬಂದಿರಬಹುದು.  (ಹುಡುಗಿ )"ಸಾವು ನನ್ನಿಂದಲಂತೂ ಪ್ರಾರಂಭವಾಗಿಲ್ಲ" ಎಂದಾಗ (ಹುಡುಗ) "ಹೌದೋ?" ಎಂದು ಅನುಮಾನಿಸುತ್ತಾನೆ. (ಇದು "ನೀನು ಸತ್ತಿಲ್ಲ ಎಂದು ಹೇಗೆ ಗೊತ್ತು?" ಎಂಬ ಅರ್ಥದ ತುಂಟತನವೂ ಇರಬಹುದು.)  ಅದಕ್ಕೆ (ಹುಡುಗಿ) "ನಾನು ಪುನರ್ಜನ್ಮ ಪಡೆಯುತ್ತೇನೆ" ಎಂದು ಉತ್ತರಿಸುವುದು ಏನನ್ನು ಸೂಚಿಸುತ್ತದೆ? ಇವರು ತಮಾಷೆಗೆ ಹೀಗೆಲ್ಲಾ ಮಾತಾಡಿಕೊಳ್ಳುತ್ತಿರಬಹುದೇ? ಅಥವಾ ಅದಕ್ಕೂ ಗಂಭೀರವಾದ ಅರ್ಥವಿದೆಯೇ?   ಮುಂದಿನ ಸಾಲುಗಳನ್ನು ಕೂಡಾ ಸೋದರ ಸೋದರಿಯರ ಹುಚ್ಚುಚ್ಚಾರ ಸಂಭಾಷಣೆ ಎನ್ನುವ ಅರ್ಥದಲ್ಲಿ ನೋಡಬಹುದಾದರೂ ಕವಯಿತ್ರಿ ಇದನ್ನೆಲ್ಲಾ ಯಾಕೆ ಬರೆಯುತ್ತಿರಬಹುದು ಎಂಬ ಅನುಮಾನ ಬಂದೇ ಬರುತ್ತದೆ.  ಚಳಿಗಾಲದಲ್ಲಿ ಇಬ್ಬರು ಮನೆಗೆ ಹಿಂದಿರುಗುವ ಚಿತ್ರವು ಎರಡು ಆತ್ಮಗಳು ಪುನರ್ಜನ್ಮಕ್ಕಾಗಿ ಮತ್ತೆ ಭೂಮಿಯತ್ತ ಮರಳುತ್ತಿರುವ ಚಿತ್ರವನ್ನೂ ಕಣ್ಣಮುಂದೆ ತರುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)