ಎಷ್ಟೊಂದು ನೀಡುವಳು ಭೂಮಿತಾಯಿ!

ಮೂಲ ಹಿಂದಿ ಕವಿತೆ - ಸುಮಿತ್ರಾನಂದನ್ ಪಂತ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 
Image result for green bean vine wiki

ಚಿಕ್ಕಂದಿನಲ್ಲಿ ನಾನು ಮಾಡಿದ ಸಾಹಸ ಹೀಗಿತ್ತು:
ನೆಲದಲ್ಲಿ ಒಂದೆರಡು ನಾಣ್ಯಗಳ ಬಿತ್ತು
ಪ್ರತಿದಿನವೂ ನೀರೆರೆದು ಮಾಡಿದ್ದೆ ಪ್ರಾರ್ಥನೆ
ನಾಣ್ಯಗಳ ಫಸಲನ್ನು ಕಂಡಿತ್ತು ಕಲ್ಪನೆ!
ಹೂವಿನಲಿ ಕಾಯಲ್ಲಿ ಹಣ್ಣಲ್ಲಿ ನಾಣ್ಯ!
ಝಣಝಣತ್ಕಾರದ ಸದ್ದು ಅಸಾಮಾನ್ಯ!
ಆದರೆ ಬಂಜರು ಭೂಮಿ ಏನೂ ಕೊಡಲಿಲ್ಲ!
ಕೊಡ ನೀರು ಸುರಿದರೂ ಕುಡಿ ಚಿಗುರಲಿಲ್ಲ!
ಮುರಿದುಬಿದ್ದಿತ್ತು ನನ್ನ ಶ್ರೀಮಂತಿಕೆಯ ಕನಸು!
ಒಂದೆರಡು ದಿನ ಹತಾಶೆಯಲ್ಲಿ ಬೆಂದಿತ್ತು ಮನಸು!
ಸರಿ ಇರಲಿಲ್ಲ ನಾನು ಬಿತ್ತ ಬೀಜಗಳು ಅಷ್ಟೇ!
ಮೋಹವನ್ನು ಬಿತ್ತಿದ್ದೆ, ನೀರೆರೆದಿದ್ದೆ ದಾಹಕ್ಕೆ!



ಇದಾಗಿ ಕಳೆದುಹೋಯಿತು ಅರ್ಧ ಶತಮಾನ
ಕಳೆದುಹೋದವು ಸಿಹಿಕಹಿ ಋತುಮಾನ
ಗ್ರೀಷ್ಮಗಳು ಕುದ್ದವು, ವರ್ಷಋತುಗಳು ತೂಗಿದವು,
ಶರದೃತುಗಳು ಮುಗುಳ್ನಕ್ಕವು
ಗಡಗಡ ನಡುಗಿದವು ಹೇಮಂತಗಳು,
ವನಗಳಲ್ಲಿ ಅರಳಿದವು ವಸಂತಗಳು!
ಮತ್ತೊಮ್ಮೆ ಗಾಢ ಲಾಲಸೆ ಹೊತ್ತು
ಕಡುಗಪ್ಪು ಮೋಡಗಳು ಸುರಿಸಿದಾಗ ಮುತ್ತು
ಅಂಗಳದ ಒದ್ದೆ ಭೂಮಿಯಲ್ಲಿ ಹಾಗೇ ಸುಮ್ಮನೇ
ಬೆರಳಾಡಿಸಿ ಒಂದಷ್ಟು ಹುರುಳಿಯ ಬೀಜಗಳನ್ನು ಔಕಿದೆನು ಮೆಲ್ಲನೆ.
ಮರೆತುಬಿಟ್ಟೆ ಅನಂತರ ಈ ಮಾತನ್ನು ಪೂರಾ
ವಿಶೇಷವೇನಿದೆ ನೆನಪಿಟ್ಟುಕೊಳ್ಳಲೂ ಕೂಡಾ!
ಆದರೆ ಮುಂದೊಂದು ದಿನ ಅಂಗಳದಲ್ಲಿ ನಾನು
ಓಡಾಡುತ್ತಿರುವಾಗ ಕಂಡುದಾದರೂ ಏನು!
ಹರ್ಷವಿಮೂಢನಾದೆ ನೋಡುತ್ತಾ
ಮಾತೇ ಹೊರಡದ ನಾನು ಪೂರ್ಣ ಮೂಕವಿಸ್ಮಿತ!


ಅಂಗಳದ ಮೂಲೆಯಲ್ಲಿ ಕೆಲವು ನವಜಾತ ಶಿಶುಗಳು
ನಗುನಗುತ್ತಾ ಕೊಡೆ ಹಿಡಿದು ನಿಂತಿದ್ದವು!
ಕೊಡೆಗಳೋ ಅಥವಾ ಜೀವನ ವಿಜಯ ಪತಾಕೆಗಳೋ 

ಮುದ್ದುಮುದ್ದಾದ ಮುಂಗೈ ಚಾಚಿಕೊಂಡಿದ್ದ ಮಕ್ಕಳೋ!
ಪಚ್ಚೆಬಣ್ಣದ ಪುಟ್ಟ ಉತ್ಸಾಹದ ಕುಡಿಗಳೋ,
ರೆಕ್ಕೆ ಬೀಸಿ ಹಾರಾಡಲು ಸಿದ್ಧವಾದ ಮರಿಗಳೋ!
ರೆಪ್ಪೆ ಮಿಟುಕಿಸದೆ ನೋಡಿದೆ ಒಂದೆರಡು ಕ್ಷಣ!
ಒಮ್ಮೆಲೇ ಮರಳಿತು ಮರವೆಯಾಗಿದ್ದ ಸ್ಮರಣ!
ನಾನೇ ಅಲ್ಲವೇ ಇಲ್ಲಿ ಬಿತ್ತಿದ್ದು ಹುರುಳಿ?
ಅದರ ಪ್ರತಿಫಲವೆಂಬಂತೆ ಈ ಹಸಿರು ಸೈನ್ಯ ಅರಳಿ
ತಿಳಿಹಸಿರು ಸಮವಸ್ತ್ರ ಟೊಪ್ಪಿಗೆಯ ತೊಟ್ಟು
ಮುನ್ನಡೆಯಲು ಸಿದ್ಧವಾಗಿದೆ ಪುಟ್ಟ ಹೆಜ್ಜೆಯಿಟ್ಟು


ಗಮನಿಸುತ್ತಲೇ ಹೋದೆ ಪುಟ್ಟ ಸಸಿಗಳು ದಿನೇದಿನೇ
ರಭಸದಿಂದ ಬೆಳೆಯುತ್ತಾ ಹಬ್ಬುತ್ತಾ ಹೋಗುವುದನ್ನೇ
ಎಲೆಗಳಿಂದ ತುಂಬಿಕೊಡವು ಬಳ್ಳಿ
ಹರಡಿಕೊಳ್ಳುತ್ತಾ ಅಂಗಳದಲ್ಲಿ
ಪಡೆದುಕೊಂಡು ಮೂಲೆಯಲ್ಲಿ ಬೊಂಬಿನ ಆಧಾರ
ಗಗನದತ್ತ ಚಿಮ್ಮಿತು ಪಚ್ಚೆ ಕಾರಂಜಿ ಧಾರಾಕಾರ
ದಂಗಾದೆ ನಾನು ಬಳ್ಳಿಗಳ ಬೆಳವಣಿಗೆ ಕಂಡು!
ಪುಟ್ಟ ಹೂಗಳಲ್ಲಿ ಫಳಫಳ ಹೊಳೆವ ಹಿಮಬಿಂದು
ಪುಟ್ಟ ನಕ್ಷತ್ರಗಳಂತೆ ಕಡುಹಸಿರು ಬಾನ್ ಬೆರಗಿನಲ್ಲಿ,
ಬುಟ್ಟದ ಚುಕ್ಕಿಗಳಂತೆ ರೇಷ್ಮೆ ಸೀರೆಯ ಸೆರಗಿನಲ್ಲಿ!


ಸಮಯ ಬಂದಾಗ ಬಳ್ಳಿಯಲ್ಲಿ ಉಕ್ಕಿದವು ಕಾಯಿಗಳು!
ಮುದ್ದುಮುದ್ದಾಗಿ ಕಣ್ ಕುಕ್ಕಿದವು ಕಾಯಿಗಳು!
ತೆಳ್ಳಗಿನ ಚಪ್ಪಟೆ ಆಕಾರದ
ಹಸಿರುಡುಗೆ ತೊಟ್ಟ ಪುಟ್ಟ ದಳವಾಯಿಗಳು!
ಮಕ್ಕಳ ಪುಟ್ಟ ಬೆರಳುಗಳಂತೆ,
ಕಾಗದದ ಸಾಲುತೋರಣದಂತೆ,
ಗೊಂಚಲುಗೊಂಚಲಾಗಿ ಗಿಲಕಿಗಳಂತೆ,
ನೀಳಜಡೆಯಲ್ಲಿ ಕುಚ್ಚುಗಳಂತೆ
ಜೋತುಬಿದ್ದ ಕಾಯಿಗಳು ಮೆರೆದವು ಸಮೃದ್ಧಿ!
ತಿಂದದ್ದು ನಾವಾದರೂ ಕಾಯಿಗಳದೇ ಅಭಿವೃದ್ಧಿ!
ತಿಂದದ್ದೇ ತಿಂದದ್ದು ಚಳಿಗಾಲದ ಪೂರ್ತಿ,
ಬಂಧುಬಳಗಕ್ಕೂ ಬುಟ್ಟಿಗಳ ಭರ್ತಿ,
ಅಕ್ಕಪಕ್ಕದವರಿಗೆ, ಸಿಕ್ಕಸಿಕ್ಕ ಜನರಿಗೆ
ದಾನ ಮಾಡಿದೆವು ಸಾಕು ಸಾಕೆನ್ನುವವರೆಗೆ!
ಸುಸ್ತಾದವು ತಿನ್ನುತ್ತ ಬಾಯಿಗಳು!
ಆದರೂ ಉಕ್ಕುತ್ತಲೇ ಇದ್ದವು ಬಳ್ಳಿಗಳಲ್ಲಿ ಕಾಯಿಗಳು!


ಎಷ್ಟೊಂದು ನೀಡುವಳು ಭೂಮಿತಾಯಿ!
ಎಷ್ಟೊಂದು ನೀಡುವಳು ತನ್ನ ಮುದ್ದು ಮಕ್ಕಳಿಗಾಗಿ!
ನನಗೆ ಅರ್ಥವಾಗಿದ್ದು ಈಗಲೇ,
ಸ್ವಾರ್ಥ, ಲೋಭಗಳಿಗಾಗಿ ಹಿಂದೊಮ್ಮೆ
ಹಣವನ್ನು ಹೂತು ಹುಡಿಮಣ್ಣಲ್ಲಿ
ಭೂಮಿಯನ್ನು ಬಂಜೆಯೆಂದು ಬೈದಿದ್ದ ನನಗೆ!
ಈಗ ಬಂದಿದೆ ಈ ಭೂಮಿ ರತ್ನಪ್ರಸಾದಿನಿ ಎಂಬ ತಿಳಿವಳಿಕೆ!
ಇಲ್ಲಿ ನಾವು ಬಿತ್ತಬೇಕಾದದ್ದು ನಿಜವಾದ ಸಮತೆ.
ನಾವು ಬಿತ್ತಬೇಕಾದದ್ದು ಜನರ ಕ್ಷಮತೆ.
ನಾವು ಬಿತ್ತಬೇಕಾದದ್ದು ಮಾನವ ಮಮತೆ.
ಆಗ ಬೆಳೆಯುತ್ತದೆ ಮಣ್ಣಲ್ಲಿ
ಮಾನವತೆಯ ಬಂಗಾರದ ಫಸಲು,
ಮಾನವ ಪರಿಶ್ರಮದಿಂದ ನಗುತ್ತವೆ ಹತ್ತೂ ದಿಕ್ಕುಗಳು.
ನಾವು ಬಿತ್ತಿದ್ದೇ ನಮಗೆ ಬೆಳೆದು ದಕ್ಕುವುದು.


(c) C.P. Ravikumar, 2018

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)