ಒಂದು ಬೆಳಗ್ಗೆ
ಒಂದು ಬೆಳಗ್ಗೆ
ಮೂಲ ಅಮೆರಿಕನ್ ಕವಿತೆ - ಈಮನ್ ಗ್ರೆನನ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ವಿಚಿತ್ರ ಆಕಾರದ ಕಲ್ಲುಗಳಿಗಾಗಿ ಕಡಲ ತೀರದಲ್ಲಿ ಹುಡುಕಾಡುತ್ತ
ಕಣ್ಣಿಗೆ ಬಿತ್ತು ನೀರುನಾಯಿಯ ಕೊಳೆಯುವ ಶವ.
ಇಡೀ ದಿವಸ ಸಹಿಸಿಕೊಂಡಿದ್ದೆ ಈ ಬರ್ಬರ ಬೀಳ್ಕೊಡುಗೆಯ ನಾತ.
ಸಿಂಪಿಹಿಡುಕ ಹಕ್ಕಿಯೊಂದು ಕರ್ಕಶ ಧ್ವನಿಯಲ್ಲಿ ಕೂಗಿದ್ದು
ಪ್ರತಿಧ್ವನಿಸಿತು ಬಂಡೆ ಕೊರಕಲುಗಳ ನಡುವೆ -
ಎಲ್ಲಿ ನೀರುಕಾಗೆಯೊಂದು ಉಣ್ಣುತ್ತಾ
ಕೊಲ್ಲಿಯ ನೀರಲ್ಲಿ ಸಬ್ ಮರೀನ್ ರೀತಿಯಲ್ಲಿ ಮುಳುಗೇಳುತ್ತಿತ್ತೋ ಅಲ್ಲಿ.
ಎಲ್ಲೋ ಬಂಡೆಯೊಂದರ ಮೇಲೆ
ಅಗೋಚರವಾಗಿದ್ದ ಸಾರಸ ಪಕ್ಷಿಯೊಂದು ಮೇಲೆದ್ದು
ಅತ್ತಿತ್ತ ಸರಿದಾಡಿ ಮತ್ತೆ ತಟಸ್ಥವಾಯಿತು ಚಿತ್ರಬರಹದ ಹಾಗೆ
ಅಥವಾ ದೀರ್ಘಾಯುಷ್ಯವು ತನ್ನನ್ನೇ ಕುರಿತು ಧೇನಿಸುತ್ತಾ ನಿಂತ ಹಾಗೆ,
ಮೇಲೆ ಮೋಡ ಗಿಡಿದ ಆಕಾಶ ಮತ್ತು
ಕೆಳಗೆ ತುಸು ಕದಡಿದ ನೀರಿನ ನಡುವೆ.
ಇದು ನಡೆದದ್ದು ಯಾವಾಗ,
ನನ್ನದೇ ಮರಣದ ಸ್ವಪ್ನ ಕಂಡು ಬೆಚ್ಚಿದಾಗ ತಬ್ಬಿಕೊಂಡು
ಏನೂ ಆಗಿಲ್ಲವೆಂದು ಸಾಂತ್ವನ ಪಡೆದ ಮರುದಿನ.
ಚಿಟ್ಟೆಯೊಂದು ಕುಲುಕಾಡುತ್ತಾ ಹಾರಿಹೋಗುತ್ತದೆ
ಅಲೆ-ನುಣುಪು ಕಲ್ಲುಗಳ ಮೇಲೆ. ಹಿಂದಿರುಗಲು ನಾನು
ರಸ್ತೆಯ ಕಡೆ ಮುಖ ಮಾಡಿದಾಗ
ಇಬ್ಬರು ದಂಪತಿಗಳು ತಮ್ಮ ನೀಲಿಬಣ್ಣದ ವ್ಯಾನಿನಲ್ಲಿ ಕುಳಿತು
ಬೆಳಗಿನ ಕಾಫಿಯೊಂದಿಗೆ ಸಿಗರೆಟ್ ಸೇದುತ್ತಿದ್ದಾರೆ.
ಹರಡಿಕೊಂಡಿದೆ ಸಿಗರೆಟ್ ಧೂಮದ ನೀಲ ಗಂಧ,
ಮತ್ತು ತಾಜಾ ಕಾಫಿಯ ಗಟ್ಟಿ, ಗಾಢ ಸುಗಂಧ.
ಅವರು ಮಾತಾಡಿಕೊಳ್ಳುತ್ತಾರೆ ಮೆಲ್ಲಗಿನ ಧ್ವನಿಯಲ್ಲಿ.
ಒಬ್ಬರು ನಿಲ್ಲಿಸಿದಾಗ ಇನ್ನೊಬ್ಬರು ಮಾತಾಡುತ್ತಾರೆ.
ಹಿನ್ನೆಲೆಯಲ್ಲಿ ರೇಡಿಯೋ ಸುದ್ದಿ ಪ್ರಸಾರ ಮಾಡುತ್ತಿದೆ.
ಬೆಚ್ಚಗಿದೆ. ಎಲ್ಲವೂ ಶಾಂತವಾಗಿದೆ.
ನೀರಿನ ನಡುವೆ ಸೂರ್ಯ ಹುಟ್ಟುವುದನ್ನು ನಾನು ಅನುಭವಿಸುತ್ತೇನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ