ಪುಸ್ತಕ ಬಿಡುಗಡೆಯ ದಿವಸ
ಮೊದಲ ಓದಿಗೆ ದಕ್ಕದ ಈ ಕವಿತೆಯನ್ನು ಒಂದೆರಡು ಸಲ ಓದಿ ಅನಂತರ ಕೆಳಗಿರುವ ಟಿಪ್ಪಣಿಯನ್ನು ಓದಿ.
ಮೂಲ ಅಮೆರಿಕನ್ ಕವಿತೆ - ಫ್ರಾನ್ಜ್ ರೈಟ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ತನ್ನ ಪುಸ್ತಕವನ್ನು ಎಲ್ಲೋ ಒಂದೆಡೆ ಒಬ್ಬ
ಹೃದಯದಲ್ಲಿ ದಯೆಯಿರುವ ಬುದ್ದಿವಂತ ಓದುಗ
ಓದುತ್ತಿರಬಹುದೆಂಬ ಕಲ್ಪನೆ
ಬರೆಯುವುದರ ಕೆಲವೇ ಸಂತಸಗಳಲ್ಲಿ ಒಂದು.
ಉಳಿದವು ಯಾವುದೂ ಸದ್ಯಕ್ಕೆ ನೆನಪಿಗೆ ಬರುತ್ತಿಲ್ಲ.
ಅಂದಹಾಗೆ ಈಗ ನಾನು ಗಮನಿಸಿದ್ದು
ಇವತ್ತು ನನ್ನದೇ ಆದ ಒಂದು ಆಚರಣೆಯಿದೆ:
"ನನ್ನಕಂಡರೆ ನನಗೇ ಆಗದು, ನಾನು ಸತ್ತು ಹೋದರೆ ವಾಸಿ" ರಾಷ್ಟ್ರೀಯ ದಿನಾಚರಣೆ.
(ನಾಳೆ ಬದುಕನ್ನು ಅತೀವ ಪ್ರೀತಿಸುತ್ತಾ
ಅಮರನಾಗಬೇಕೆಂದು ಬಯಸುವೆನೆಂದೇ ಇದರರ್ಥ.)
ಈ ರಾತ್ರಿಯು ಹಗಲಿಡೀ ಚಳಿಯಿಂದ ಕೂಡಿರುತ್ತದೆ
ಮತ್ತು ಇಡೀ ಮಧ್ಯಾಹ್ನ ಕೂಡಾ
ಎನ್ನುತ್ತದೆ ಬಾಸ್ಟನ್ ಹವಾಮಾನ ಮುನ್ನೋಟ.
ಇಂದಿನಂತೆಯೇ ಇರುತ್ತದಂತೆ ನಾಳೆ,
ಇಂದಿಗಿಂತ ವಿಭಿನ್ನವಷ್ಟೇ.
ನಗರದ ಅಂಚಿನಲ್ಲಿರುವ ಸ್ಮಶಾನದಲ್ಲಿದ್ದೇನೆ ನಾನೀಗ.
ಹೇಗೆ ಬಂದೆನೋ ಇಲ್ಲಿಗೆ?
ಅಲ್ಲೊಂದು ಗುಬ್ಬಚ್ಚಿ ಕುಂಟುತ್ತಾ
ತನ್ನ ಮೂಳೆಗಳ ಪುಟ್ಟ ಊರುಗೋಲುಗಳನ್ನು ಹಿಡಿದು
ಹಾದುಹೋಗುವಾಗ ಹೇಳಿದ್ದು ಹೀಗೆ:
ನಾನು ಫ್ರೆಡೆರಿಕೋ ಗಾರ್ಸಿಯಾ ಲಾರ್ಕಾ
ಸತ್ತಮೇಲೆ ಮತ್ತೆ ಹುಟ್ಟಿ ಬಂದಿರುವೆ.
ಚಿಂತೆಯೇ ಬೇಡ,
ಸಾಹಿತ್ಯ ಸೋಲುತ್ತದೆ, ಸೂರ್ಯರಶ್ಮಿ ಗೆಲ್ಲುತ್ತದೆ.
ಟಿಪ್ಪಣಿ : ಕವಿತೆಯ ಹೆಸರು (ಪಬ್ಲಿಕೇಷನ್ ಡೇಟ್) ಈ ಕವಿತೆಯನ್ನು ಅರ್ಥೈಸಿಕೊಳ್ಳಲು ಇರುವ ಏಕೈಕ ಸುಳಿವು. ಮರುದಿವಸ ಕವಿಯ ಒಂದು ಪುಸ್ತಕದ ಬಿಡುಗಡೆ ಇದೆ. ಹಿಂದಿನ ದಿವಸ ಕವಿಗೆ ಎಲ್ಲಿಲ್ಲದ ತಲ್ಲಣ ಪ್ರಾರಂಭವಾಗಿದೆ. ತಾನು ಯಾಕೆ ಈ ಪುಸ್ತಕ ಪ್ರಕಟಿಸುತ್ತಿದ್ದೇನೆ ಎಂದು ಕವಿ ಯೋಚಿಸುತ್ತಾನೆ. ಎಲ್ಲಾದರೂ ಒಂದು ಮೂಲೆಯಲ್ಲಿ ತನ್ನ ಬರವಣಿಗೆಯನ್ನು ಯಾರೋ ಒಬ್ಬರು ಓದಿ ಅರ್ಥ ಮಾಡಿಕೊಂಡು ಮೆಚ್ಚಬಹುದು ಎಂಬ ಆಸೆಯೊಂದರ ಹೊರತು ಅವನಿಗೆ ಬೇರೇನೂ ಹೊಳೆಯುತ್ತಿಲ್ಲ! ಪ್ರಕಟಿಸುವ ತನ್ನ ನಿರ್ಧಾರದ ಬಗ್ಗೆ ಮತ್ತು ತನ್ನ ಬಗ್ಗೆ ಅವನಿಗೆ ಜಿಗುಪ್ಸೆ ಉಂಟಾಗುತ್ತಿದೆ. ಇಂದೇ ತನಗೆ ಸಾವು ಬರಬಾರದೇ ಎಂದು ಯೋಚಿಸುವಾಗ ಇದು ಬಾಲಿಶವಾದ ವರ್ತನೆ, ನಾಳೆ ತಾನು ಬದುಕನ್ನು ಪ್ರೀತಿಸುತ್ತೇನೆ ಎಂಬ ಭರವಸೆಯೂ ಕವಿಗಿದೆ! (ತನ್ನ ಪುಸ್ತಕವನ್ನು ಜನ ಇಷ್ಟ ಪದಬಹುದೆಂಬ ಆತ್ಮವಿಶ್ವಾಸವನ್ನು ಇದು ಸೂಚಿಸುತ್ತದೆ.) ಆದರೂ ಅವನ ಮನಃಸ್ಥಿತಿ ಬಾಸ್ಟನ್ ನಗರದ ಕೆಟ್ಟ ಚಳಿಯಂತಿದೆ. "ಈ ರಾತ್ರಿಯು ಹಗಲಿಡೀ ಮತ್ತು ಮಧ್ಯಾಹ್ನ ಕೂಡಾ ಚಳಿಯಿಂದ ಕೂಡಿರುತ್ತದೆ" ಎಂಬುದರಲ್ಲಿ ಅಸಂಗತ ಹಾಸ್ಯದ ಲೇಪವಿದೆ. ಜೊತೆಗೆ ಇಡೀ ರಾತ್ರಿ ತನ್ನನ್ನು ಶರತ್ಕಾಲದ ಖಿನ್ನತೆ ಕಾಡಲಿದೆ ಎಂಬುದರ ಸೂಚನೆಯೂ ಇದೆ. ನಾಳೆಯೂ ಇಂದಿನಂತೆಯೇ ಇರುತ್ತದೆ, ಆದರೆ ವಿಭಿನ್ನ ಎನ್ನುವಲ್ಲಿ ಮತ್ತೆ ಕವಿಯ ಮಾನಸಿಕ ದ್ವಂದ್ವ ವ್ಯಕ್ತವಾಗುತ್ತಿದೆ. "ತಾನು ಸತ್ತುಹೋದರೆ ವಾಸಿ" ಎಂದುಕೊಂಡಿದ್ದ ಕವಿ ಒಮ್ಮೆಲೇ ಸ್ಮಶಾನವನ್ನು ಕುರಿತು ಯೋಚಿಸುತ್ತಿದ್ದಾನೆ. ಅಲ್ಲಿ ಸ್ಪಾನಿಷ್ ಕವಿ ಫ್ರೆಡೆರಿಕೋ ಲಾರ್ಕಾ ಗೋರಿಯ ಮುಂದೆ ನಿಂತಿದ್ದಾನೆ. ಲಾರ್ಕಾ (೧೮೯೮-೧೯೩೬, ಕೇವಲ ೩೮ ವರ್ಷಗಳ ಬದುಕು) ಸ್ಪಾನಿಷ್ ಭಾಷೆಯ ಮುಖ್ಯ ಕವಿ. ದೇಶದಲ್ಲಿ ಸಿವಿಲ್ ಯುದ್ಧ ನಡೆದಾಗ ಗುಂಡಿಗೆ ಬಲಿಯಾದವನು. ವಿಚಿತ್ರವೆಂದರೆ ಅವನ ಶವ ಸಿಕ್ಕಲೇ ಇಲ್ಲವಂತೆ. ಅವನ ಗೋರಿಯಲ್ಲಿ ಹೂತಿರುವ ಶವದ ಕುರಿತು ವಾಗ್ವಾದಗಳಿದ್ದವು. ೨೦೦೮ರಲ್ಲಿ ಗೋರಿಯನ್ನು ಮತ್ತೆ ಅಗೆಯಲಾಯಿತು. ಅಲ್ಲಿ ಯಾವುದೇ ಮಾನವ ಅವಶೇಷಗಳಿರಲಿಲ್ಲ. ಪ್ರಸ್ತುತ ಕವಿತೆಯಲ್ಲಿ ತನ್ನ ಪುಸ್ತಕದ ಬಗ್ಗೆ ಆತಂಕವಿರುವ ಕವಿಗೆ ಲಾರ್ಕಾನ ಗೋರಿಯಿಂದ ಒಂದು ಹಕ್ಕಿ ಹೊರಬಂದಂತೆ ಕನಸಾಗುತ್ತದೆ. ಅದು ಕುಂಟುವ ಹಕ್ಕಿ (ಸಾಹಿತ್ಯಕಾರರನ್ನು ಕುರಿತು ಇದು ಏನನ್ನು ಸೂಚಿಸುತ್ತದೆ?) "ಸಾಹಿತ್ಯ ಸೋಲುತ್ತದೆ, ಆದರೆ ಸೂರ್ಯರಶ್ಮಿ ಗೆಲ್ಲುತ್ತದೆ" ಎಂದು ಹಕ್ಕಿ ಘೋಷಿಸುತ್ತದೆ (ತಮ್ಮ ಸೃಷ್ಟಿಯನ್ನು ಕುರಿತು ಸಾಹಿತ್ಯಕಾರರಿಗಿರುವ ಅನುಮಾನವನ್ನು ಇದು ಸೂಚಿಸುತ್ತಿರಬಹುದು). ನಿರಾಶೆ ಮತ್ತು ಆಶಾವಾದಗಳ ಅನೇಕ ರೂಪಕಗಳನ್ನು ಒಳಗೊಂಡ ಈ ಕವಿತೆ ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ