ಹರಿಣಿ ಮತ್ತು ಕಿರುಬಗಳು

ಕವಿತೆ: ಸಿ.ಪಿ. ರವಿಕುಮಾರ್

ಕಿರುಬಗಳು ನಿಂತಿದ್ದವು
ಕತ್ತಲಿನಲ್ಲಿ

ಹೊರಗೆ ಚಳಿ
ಉಸಿರಾಡಿದರೆ ಹೊಗೆ

ಕಣ್ಣುಗಳಲ್ಲಿ, ಒಡಲಲ್ಲಿ
ತಡೆಯಲಾರದ ಹಸಿವು

ಬಾಟಲಿಯಲ್ಲಿದ್ದ ದ್ರವ
ಹೆಚ್ಚಿಸಿತು ದಾಹ

ಬೀಡಿ ಹೊತ್ತಿಸಲು ಕಡ್ಡಿ ಕೊರೆದಾಗ
ಕಾಣಿಸಿದ್ದು ನಂಬಲಾಗದ ದೃಶ್ಯ

ಹರಿಣಿಯೊಂದು ಎಲ್ಲಿಂದಲೋ ಬಂದು
ಅತ್ತಿತ್ತ ನೋಡುತ್ತಿದೆ

ಅರ್ಬುದ ವ್ಯಾಘ್ರ
ಅಡ್ಡಗಟ್ಟಿದ ಹಾಗೆ
ಸುತ್ತುವರೆದವು ಕಿರುಬಗಳು

ಹೆದರಿದ ಹರಿಣಿ ಕೇಳಿತು ಕೈಜೋಡಿಸಿ
ಅಣ್ಣಂದಿರಾ,
ದಾರಿ ಕಳೆದುಕೊಂಡಿರುವೆ, ತೋರಿಸಿ

ಅರ್ಬುದನಿಗಿತ್ತು ಒಂದಿಷ್ಟು ಘನತೆ
ಹಸಿವನ್ನು ಹತ್ತಿಕ್ಕುವ ಕ್ಷಮತೆ

ಕಿರುಬಗಳಿಗೆ ಕಂಡಿದ್ದು ಹರಿಣಿಯ ಶರೀರ
ತಿಳಿದದ್ದು ಒಡಲಿನ ಅಸಾಧ್ಯ ಹಸಿವು
ಆತ್ಮವಿದ್ದರಲ್ಲವೇ ಕಾಣುವುದು
ಕಟುಕನಿಗೆ ಕೊಡಲಿ ಏಟಿನ ನೋವು

ಕಣ್ಣೀರು ಸುರಿಸುತ್ತಾಳೆ ಭಾರತಿ
ಕಂಡು ಕಾಡು ಸಂಸ್ಕೃತಿ
ಅವಳ ಕಣ್ಣೀರಿನಲ್ಲಿ ಕಾಣುತ್ತದೆ
ತನ್ನದೇ ಗತಸ್ಥಿತಿ

ಕಾಮೆಂಟ್‌ಗಳು

  1. ಈ ದುರ್ಘಟನೆ ಇಡೀ ದೇಶವೇ ತಲೆತಗ್ಗಿಸುವಂತಹುದು. ಕಾಮಾಂಧರೊ, ಮಾದಕದ್ರವ್ಯ ವ್ಯಸನಿಗಳೋ ಏನೇ ಆಗಿದ್ದರೂ ಅವರ ನಡವಳಿಕೆ ಮನುಷ್ಯತ್ವದ ಎಲ್ಲೆ ಮೀರಿದ್ದು. ಖಂಡಿಸಲು ಶಬ್ದಗಳೇ ಇಲ್ಲ. ಕವನ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  2. ನಿಜ, ಇವರಲ್ಲಿ ಈ ಆಮಾನುಷತೆ ಎಲ್ಲಿಂದ ಬಂತು?

    ಪ್ರತ್ಯುತ್ತರಅಳಿಸಿ
  3. ಇಲ್ಲ ಸರ್, ಒಟ್ಟಾರೆ ಸಮಾಜದ ಮಾನಸಿಕ ಆರೋಗ್ಯ ತೀರ ಕೆಟ್ಟಿದೆ.
    ಎಳೆಯರಿಗೆ ಸುಲಭ ಲಭ್ಯವಾದ ಪೋರ್ನ್,ಲೈಂಗಿಕತೆಯನ್ನು ಅತಿರಂಜಿತವಾಗಿ ಅನೈಜಿಕವಾಗಿ ಬಿಂಬಿಸುವ ಸಿನೆಮಾಗಳು.
    ಹೆತ್ತವರ, ಶಿಕ್ಷಕರ ವೈಫಲ್ಯ.
    ಹೀಗೇ...
    ಎಲ್ಲರೂ ಸೋತಿದ್ದೇವೆ, ಭಾರತಿಯನ್ನು ಸೋಲಿಸಿದ್ದೇವೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)