ಗುರುವಿನ ದೃಷ್ಟಿ
(ಇವತ್ತು ಗುರು ನಾನಕ್ ಜಯಂತಿ. ಅವರ ಬಗ್ಗೆ ಹೇಳಲಾಗುವ ಒಂದು ಕಥೆಯನ್ನು ಕವಿತೆಯ ರೂಪದಲ್ಲಿ ನೀವು ಕೆಳಗೆ ಓದಬಹುದು)
ಕಾಡುದಾರಿಯಲ್ಲಿ ಬರುವಾಗ ಒಮ್ಮೆ ಗುರು ನಾನಕ್ ಮತ್ತು ಮರ್ದಾನಾ
ಕಾಡುದಾರಿಯಲ್ಲಿ ಬರುವಾಗ ಒಮ್ಮೆ ಗುರು ನಾನಕ್ ಮತ್ತು ಮರ್ದಾನಾ
ಬಾಡಿತು ಪಡುವಣದಲ್ಲಿ ಬೆಳಕು; ಇಳಿದುಕೊಳ್ಳಲು ಸಿಕ್ಕುವುದೇ ಸ್ಥಳವೆಂದು
ನೋಡತೊಡಗಿದ ಶಿಷ್ಯನಿಗೆ ಕಂಡಿತು ಒಂದು ಮಣ್ಣಿನ ಜೋಪಡಿ.
ಗೂಡಿನಲ್ಲಿ ವಾಸವಾಗಿದ್ದವನೊಬ್ಬ ನಿರ್ಗತಿಕ, ಗುರುಗಳ ಭಕ್ತ;
ಓಡಿ ಬಂದು ಕಾಲಿಗೆ ಬಿದ್ದು ಒಳಗೆ ಕರೆದೊಯ್ದು ಉಪಚರಿಸಿದ
ಮಾಡಿ ಬಡಿಸಿದ ಅಡುಗೆ ಮನೆಯಲ್ಲಿದ್ದ ಅಳಿದುಳಿದ ಆಹಾರ;
ಬೇಡಿಕೊಂಡ ಸ್ವೀಕರಿಸಿರಿ ಬಡವನ ಮನೆಯ ಆತಿಥ್ಯವೆಂದು ಕೈಮುಗಿದು
ಕೇಡೆನ್ನಿಸಿತು ಶಿಷ್ಯನಿಗೆ, ನುಂಗಲಾರದೆ ನುಂಗಿದ ತುತ್ತು
ನೋಡಿ ಶಿಷ್ಯನ ಕಡೆಗೆ ನಾನಕ್ ಮುಗುಳುನಗೆ ನಕ್ಕು
ಆದೇಶಿಸಿದರು "ಒಡೆದು ಬಿಡು ಅವನ ಮಣ್ಣಿನ ಪಾತ್ರೆ!"
ನಿರ್ವಾಹವಿಲ್ಲದೆ ಮರ್ದಾನಾ ಪಾಲಿಸಿದ ಆಜ್ಞೆ.
ಮೂಡಣವು ಕೆಂಪಾದಾಗ ಹೊರಟು ನಿಂತಾಗ ಗುರುಗಳು
"ಕೆಡವಿಬಿಡು ಅವನ ಗುಡಿಸಲು!" ಎಂದು ತೋರಿದರು ಬೆರಳು!
ಗೋಡೆಗಳನ್ನು ದೂಡಿ ಬೀಳಿಸಿದ ಶಿಷ್ಯ ಕಣ್ಣೀರು ಸುರಿಸುತ್ತ
ಗೂಢವೇನಿದೆಯೋ ಅರಿಯಲಾರದೆ ಗುರು ನಾನಕರ ಚಿತ್ತ.
ಆಡದೆ ಒಂದೂ ಮಾತು ಕೈಕಟ್ಟಿ ನಿಂತಿದ್ದ ಬಡವ! ಬೀಳ್ಕೊಟ್ಟ
ಪಾದಗಳಿಗೆ ಎರಗಿ ಸಾಷ್ಟಾಂಗ. ಹೊಳೆದಂತೆ ಕಾಣಿಸಿತು ಏನೋ ಅವನ ಕಣ್ಣಿಗೆ
ತೋಡಿದಾಗ ತಿಳಿಯಿತು ಗುಡಿಸಲು ನೆಲೆಯಾಗಿತ್ತು ಹೊನ್ನಿನ ಗಣಿಗೆ.
ರೋದಿಸುತ್ತಿದ್ದ ನೆನ್ನೆಯವರೆಗೂ ಅರಿಯದೇ ತನ್ನದೇ ಸಿರಿಸಂಪದ.
ಕಂಡಿತು ಗುರುವಿನ ಕಣ್ಣಿಗೆ ಮೇಲ್ನೋಟಕ್ಕೆ ಕಾಣದ ನಿಗೂಢ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ