ಸಾಕು ವಿವಾದಮಧು ಸುರಿದದ್ದು ಸಾಕಿ

ಎಷ್ಟು ಸುಲಭ ನಮಗೆಲ್ಲ ಕೀ ಕೊಡುವುದು
ಟಿಪ್ಪು ಎಂದರೆ ಸಾಕು
ಎಡದಿಂದ ಬಲಕ್ಕೆ
ರಾಮ ಎಂದರೆ ಸಾಕು
ಬಲದಿಂದ ಎಡಕ್ಕೆ
ಎಷ್ಟು ಸುಲಭ ನಮಗೆಲ್ಲ ಕೀ ಕೊಡುವುದು
ಎಲ್ಲಿ ಕಳೆದಿದೆ ಹುಡುಕಿ,
ಹೆಜ್ಜೆ ಮುನ್ನಡೆಸುವ ಕೀ!
ಸಾಕು ವಿವಾದಮಧು ಸುರಿದದ್ದು  ಸಾಕಿ

ಎಷ್ಟು ಸುಲಭವಾಗಿ ಬಂತು
ನಮಗೆ ಬಾಯಿಪಾಠದ ಮಾತು
ಯಾರೋ ಬರೆದುಕೊಡುತ್ತಾರೆ ಸಂಭಾಷಣೆ
ಒಪ್ಪಿಸುತ್ತೇವೆ ಚಕಚಕ ಅದನ್ನೇ
ಕಿತನೇ ಆದ್ಮೀ ಥೇ
ತೇರಾ ಕ್ಯಾ ಹೋಗಾ ಕಾಲಿಯಾ
ಸಂಭಾಷಣೆಯಲ್ಲೇ ನಿಂತು ಹೋಗಿದೆ ಸಿನಿಮಾ
ಮುಂದೆ ಹೋಗದು ಕತೆ, ಯಾರಾದರೂ ನೂಕಿ
ಸಾಕು ವಿವಾದಮಧು ಸುರಿದದ್ದು, ಸಾಕಿ

ಎಷ್ಟು ಸುಲಭ ನಮ್ಮನ್ನು ನಂಬಿಸುವುದು
ಅದು ಸುಳ್ಳು ಇದು ಸತ್ಯ ಎಂದು ಬಿಂಬಿಸುವುದು
ಕೇಳುವುದಿಲ್ಲ ಡೇಟಾ, ಪುರಾವೆ
ಮೇಜುಕುಟ್ಟಿ ಮಾಡಿದರೆ ದಾವೆ
ಹೌದೆಂದು ನಂಬಿಬಿಡುತೇವೆ
ಬೋಧಿವೃಕ್ಷದ ಕೆಳಗೆ ಹಾಸಿಗೆ ಹಾಕಿ
ಪಾನಮತ್ತನಾಗಿ ಮಲಗಿದ್ದಾನೆ  ವಿವೇಕಿ
ಸಾಕು ಸುರಿದದ್ದು ವಿವಾದಮಧು, ಸಾಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)