ಸುಲ್ತಾನನ ಸೋಲು (ಕಥನಕವನ)



ಸಿ. ಪಿ. ರವಿಕುಮಾರ್ 

ಬೇಹುಗಾರರು ಸುದ್ದಿ ತಂದರು ಲೋಧಿ ಇಬ್ರಾಹಿಂ ಸುಲ್ತಾನನಿಗೆ
ಸಾಧು ಒಬ್ಬನು ಬಂದು ಬೀಡುಬಿಟ್ಟಿದ್ದಾನೆ ದಿಲ್ಲಿ ಸಲ್ತನತ್ ಒಳಗೆ;
ಜಹಾಪನಾಹ್! ಕರೆಯುತ್ತಾರೆ ಅವನನ್ನು ಗುರು ನಾನಕ್ ಎಂದು,
ಸಹಚರರು ಹೆಚ್ಚು ಜನರಿಲ್ಲ, ಶಿಷ್ಯ ಮರ್ದಾನಾ ಒಬ್ಬನೇ ಬಂಧು;
ಬಹಳ ಜನ ಸೇರುತ್ತಾರೆ ಸೆಹರ್‌ನಿಂದಲೂ ಹುಜೂರ್!
ಸಹಗಾನ ನಡೆಯುತ್ತದೆ ಇಡೀ ದಿವಸ, ಎಲ್ಲರಿಗೂ ಬಾಬಾ
ಸಿಹಿನೀರು ಹಂಚುತ್ತಾನೆ ತಾನೇ ತೋಡಿದ ಬಾವಿಯಿಂದ
ಸಹಭೋಜನ ನಡೆಯುತ್ತದೆ ದಿನವೂ, ಬಡಿಸುತ್ತಾನೆ ಕೈಯಾರ!
ಮಹಿಮಾವಂತ! ಕರಾಮತ್ ನಡೆಸಿದನು ನಮ್ಮ ಕಣ್ಮುಂದೆ!

ಜಹರ್ ತಿಂದು ಸತ್ತು ಹೋಗಿತ್ತು ಒಬ್ಬ ಜಮೀನುದಾರನ ಆನೆ;
ಸ್ನೇಹದಿಂದ ಬಾಬಾ ನೇವರಿಸಿ "ಏಳು, ಸಾಕು ನಿದ್ದೆ" ಎಂದಾಗ
ಜೀ ಹುಜೂರ್! ಮೆಲ್ಲಗೆ ಕಣ್ತೆರೆದು ನೋಡಿ ಮೇಲೆದ್ದಿತು ಜನಾಬ್!

ಕುಹಕನಗೆ ನಕ್ಕ ಸುಲ್ತಾನ್ "ಕರೆತನ್ನಿ ಕರಾಮತಿ ಬಾಬಾನನ್ನು! ನೋಡುವ!
ಇಹಲೋಕ ಬಿಟ್ಟ ನನ್ನ ಮೆಚ್ಚಿನ ಕುದುರೆಗೆ ಕೊಡುವನೋ ಜೀವ"

ಚಹರೆಯಲ್ಲಿದ್ದ ಕಾಂತಿಯ ಕಂಡು ಬೆರಗಾದ ಲೋಧಿ. 
ಸ್ನೇಹದಿಂದ ಅವನೆಡೆಗೆ ನೋಡಿ ನಕ್ಕರು ಗುರು ನಾನಕ್ -
"ದೇಹ ತ್ಯಜಿಸಿದವರನ್ನು ಮತ್ತೆ ಕರೆತರಲು ಆದೀತೇ ಸುಲ್ತಾನ್!
ಇಹಪರದ ವ್ಯಾಪಾರಕ್ಕೆ ಲೆಕ್ಕ ಇಡುವವನು ಬೇರೊಬ್ಬ!
ರಹಸ್ಯ ಔಷಧ ಯಾವುದೂ ಇಲ್ಲ ಮೃತ್ಯುವಿಗೆ! ತಾವು 
ಸಹಿಸಿಕೊಳ್ಳಲೇ ಬೇಕು ಅಗಲಿಕೆಯ ನೋವು!"

ದಹಿಸಿತು ಕೋಪದಿಂದ ಸುಲ್ತಾನನ ಮುಖ! "ಯಾರಲ್ಲಿ! ಬಂಧಿಸಿ!
ಸಹಿಸಿಕೊಳ್ಳಲಿ ಇವನು ಕಾರಾಗೃಹವಾಸ!" ಎಂದು ಕೂಗಿದನು ನಿಂದಿಸಿ. 

ಭಟರು ಬಂಧಿಸುವ ಮುನ್ನವೇ ಮುಂದೆ ನಡೆದರು ಗುರು
ಕಠಿಣ ಸೆರೆವಾಸದ ಶಿಕ್ಷೆ ಸಹಿಸಿಕೊಂಡರು ನಗುತ್ತ
ಪಠಣ ಮಾಡಿದರು ಶಬದ್ ಕೈದಿಗಳೊಂದಿಗೆ
ಊಟ ಬಡಿಸಿದರು ಎಲ್ಲರಿಗೂ ತಾವೇ ಮಾಡಿ ಅಡುಗೆ,
ಹಿತವಚನ ಬೋಧಿಸುತ್ತ ಕಾಣುತ್ತಾ ಮಕ್ಕಳಂತೆ 
ಕಟುಕರೆದೆಯಲ್ಲೂ ಬಿತ್ತಿದರು ಮಾನವತೆ. 

ಘಟಿಸಿತು ದೆಹಲಿಯಲ್ಲಿ ದೊಡ್ಡ ಅವಘಡವೊಂದು
ಸುಡುಬೇಸಗೆ, ಜುಲೈ ಮೂರು, ಸನ್ ಸಾವಿರದ ಐನೂರೈದರಂದು
ಸ್ಫೋಟವಾದಂತೆ ಎಲ್ಲೋ ಬ್ರಹ್ಮಾಂಡದಲ್ಲಿ ಕಂಪಿಸಿತು ಭೂಮಿ
ಪುತಪುತ ಉದುರಿ ಧರೆಯನ್ನಪ್ಪಿದವು ಕಟ್ಟಡಗಳು, ವೃಕ್ಷಗಳು,
ನತದೃಷ್ಟರು ಸಹಸ್ರಾರು ಜೀವಂತ ಸಮಾಧಿ ಹೊಂದಿದರು. 

ಸ್ಥಿತಿಗೆ ಹೆದರಿದ ಲೋಧಿಯ ಭಟರು ಮೊರೆಯಿಟ್ಟರು ದೊರೆಯಲ್ಲಿ
ಘಾತವಾಯಿತು ಜಹಾಪನಾಹ್! ಮಾತಾಡುತ್ತಿದ್ದಾರೆ ಜನರೆಲ್ಲ
ತಟ್ಟಿರಬಹುದು ಅಮಾಯಕ ಗುರುವಿನ ಶಾಪ ನಗರಕ್ಕೆ
ಬಿಟ್ಟುಬಿಡಿ ಅವನನ್ನು ಅವನ ಪಾಡಿಗೆ
ಇಷ್ಟಾಗಿ ಅವನು ವಿಗ್ರಹಗಳನ್ನು ಪೂಜಿಸುವುದಿಲ್ಲವಂತೆ
ದುಷ್ಟ ಕೈದಿಗಳನ್ನೂ ಮಾರ್ಪಡಿಸಿದ್ದಾನೆ ಮಾನವರಂತೆ
ಸಂತ ಚಿಷ್ತಿಯೂ ದೊರೆಯ ಮನ ಒಲಿಸಿದರು. 
ಅತಂತ್ರನಾದ ಲೋಧಿ ಆಜ್ಞಾಪಿಸಿದ ಬಿಡುಗಡೆಗೆ
ಸ್ವತಂತ್ರ ಗುರುವೊಂದಿಗೆ  ಕೈದಿಗಳೂ ಹಾಕಿದರು ಹೆಜ್ಜೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)