ಮಾನಸ ರಾಮಚರಿತ
ಈಗೀಗ ಕೆಳಗೆ ಕೂಡಲಾಗದು ಅಜ್ಜನಿಗೆ ಪೂಜೆಗೆ
ಬಾಗಿ ನಮಿಸುವುದಂತೂ ಬಹಳ ದುಸ್ತರವಾಗಿದೆ
ನಾಗವಂದಿಗೆಯ ಮೇಲೆ ಇಟ್ಟುಕೊಂಡು ಹಳೆಯ ಗ್ರಂಥ
ರಾಗವಾಗಿ ಓದುತ್ತಿದ್ದರು ಅಜ್ಜ ಮಾನಸ ರಾಮಚರಿತ
ಆಗದು ನಿಮ್ಮ ಕೈಯಲ್ಲಿ ಇದೆಲ್ಲ! ಬಿದ್ದರೇನು ಗತಿ!
ಹೀಗೆ ಗದರಿದಾಗ ಅಪ್ಪ ಅಮ್ಮ ಮೂರನೆಯ ಸರತಿ
ಸಾಗುವಾನಿಯ ಕುರ್ಚಿಯ ಮೇಲೆ ಕುಳಿತು ಮಣಮಣ
ಸಾಗುತ್ತದೆ ಪೂಜೆ, ನಂತರ ರಾಮಕಥಾ ಪಠಣ
ಹೇಗೋ ತಾವೇ ಸರಿಸಿ ಕುರ್ಚಿಯನ್ನು ಮಡಿಬಟ್ಟೆ ಉಟ್ಟು
ತೇಗದ ಮತ್ತೊಂದು ಕುರ್ಚಿಯನ್ನು ಒರೆಸಿ ಮುಂದಿಟ್ಟು
ಓಘದೊಂದಿಗೆ ಓದುವರು ಶ್ರೀರಾಮಾಯಣ ತುಲಸಿ
ಮುಗಿದಾಗ ತಾವೇ ಸರಿಸಿಡಬೇಕು ಎರಡೂ ಕುರ್ಚಿ
ನೀಗಲು ಕುತೂಹಲ ನಾನೊಂದು ದಿನ ಕೇಳಿಯೇ ಬಿಟ್ಟೆ,
ಯಾಕೆ ಇಟ್ಟುಕೊಳ್ಳುತ್ತೀಯ ಖಾಲೀ ಕುರ್ಚಿಯನ್ನು ಮುಂದೆ!
"ರಾಘವನ ಕಥೆ ಓದುವಾಗ ಹನುಮಂತ ಬಂದು ಕೂತಿರುತ್ತಾನೆ
ಆಗತ್ತೇನೋ ನಾನು ಮೇಲೆ ಕೂತು ಅವನನ್ನು ಕೂಡಿಸಲು ಕೆಳಗೆ?"
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ