ಮಗುವಿನ ಮೌನಸಂದೇಶ

ನೀಡಿ ನಮಗೂ ಒಂದೇ ಒಂದು ಅವಕಾಶ
ರಚನೆ - ಸಿ. ಪಿ. ರವಿಕುಮಾರ್

ನೀಡಿ ನಮಗೂ ಒಂದೇ ಒಂದು ಅವಕಾಶ!


ನಿಮ್ಮ ಧರ್ಮಗಳ ಜಾತಿಗಳ ಒಳಪಂಗಡಗಳಲ್ಲಿ
ವಿಂಗಡಿಸಿ ಮೂಲೆಗುಂಪಾಗಿಸುವಿರೇಕೆ?
ಗೋಡೆಗಳೇ ತುಂಬಿರುವ ಮನೆಯಲ್ಲಿ ಇನ್ನೆಷ್ಟು
ಬಿಡಿಸುವಿರಿ ವಿಭಜಿಸುವ ಅಗ್ನಿರೇಖೆ?
ಒಡೆದು ಉರುಳಿಸಿ ಭಿತ್ತಿ! ನೀಡಿ ಹಾರಲು ಮುಕ್ತಿ!
ಕೈಬೀಸಿ ಕರೆಯುತ್ತಿಹುದು ಆಕಾಶ!

ನೀಡಿ ನಮಗೂ ಒಂದೇ ಒಂದು ಅವಕಾಶ!


ನಿಮ್ಮ ಕನಸುಗಳನ್ನು ಅರಸದಿರಿ ನಮ್ಮಲ್ಲಿ
ಚಿಗುರುತ್ತಿದೆ ನಮ್ಮದೇ ಕನಸುಗಳ ಬಳ್ಳಿ!
ಚಿಗುಟದಿರಿ ಎಳೆಯ ಕುಡಿ-ಮೊಗ್ಗು-ಹೀಚುಗಳನ್ನು
ಹಬ್ಬಿಕೊಳ್ಳಲಿ ಕಲ್ಪನೆಯ ಆಧಾರದಲ್ಲಿ!
ನಾನೂ ಒಬ್ಬ ವ್ಯಕ್ತಿ, ನನಗೂ ಇದೆ ಅಭಿವ್ಯಕ್ತಿ,
ಕೇಳುತ್ತಿದೆಯೇ ನನ್ನ ಮೌನಸಂದೇಶ?

ನೀಡಿ ನಮಗೂ ಒಂದೇ ಒಂದು ಅವಕಾಶ!


ದೊಡ್ಡದೊಡ್ಡದು ನಿಮ್ಮ ಕಲ್ಪನಾಸಾಮ್ರಾಜ್ಯ
ಅಲ್ಲಿ ಯಂತ್ರ, ತಂತ್ರಜ್ಞಾನಗಳ ರಾಜ್ಯ!
ನನ್ನ ಮುಗ್ಧತೆ ಕಸಿಯುತ್ತಿದೆ ನಿಮ್ಮ ಏಐ
ಕಿರಿದಾಗುತ್ತಿದೆ ನೋಡುತ್ತ ನೋಡುತ್ತ ಬಾಲ್ಯ!
ನಮ್ಮ ಭೂಮಿ ಮಂತ್ರದ ಹಕ್ಕಿ, ನಿತ್ಯ ಚಿನ್ನದ ತತ್ತಿ
ಕೊಟ್ಟರೂ ಏತಕ್ಕೆ ಕತ್ತಿ ಮಸೆಯುವ ಆವೇಶ!

ನೀಡಿ ಭೂಮಿಗೂ ಒಂದೇ ಒಂದು ಅವಕಾಶ!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)