ಮಾಮ ಮಾಮು ಸಲ್ಲಾಪ

ಸಿ ಪಿ ರವಿಕುಮಾರ್ 

ಮಾಡರ್ನ್ ಮುದ್ದಣ ಮನೆಗೆ ಬಂದಾಗ ಮಾಡರ್ನ್ ಮನೋರಮೆ ಅವನಿಗೆ ತನಿವಾಲಂ ಕುಡಿಯಲು ಕೊಡುವ ಬದಲು ಅವನ ಮುಖದ ಮುಂದೆ ಒಂದು ಕನ್ನಡ ಜಾಹೀರಾತು ಹಿಡಿದಳಂತೆ.  ಆಗ ನಡೆದ ಕೆಳಕಂಡ ಸಲ್ಲಾಪವನ್ನು ಕದ್ದಾಲಿಸಿ ಬರೆದದ್ದಕ್ಕೆ ಕ್ಷಮೆ ಕೋರುತ್ತೇನೆ. ಇಲ್ಲಿ ಮಾಮ ಎಂದರೆ ಮಾಡರ್ನ್ ಮನೋರಮೆ ಮತ್ತು ಮಾಮು ಎಂದರೆ ಮಾಡರ್ನ್ ಮುದ್ದಣ.

ಮಳೆಗಾಲದ ಒಂದು ಸಂಜೆ. ಮಾಮು ತನ್ನ ಐಟಿ ಕೆಲಸ ಮುಗಿಸಿ ಹೈಟೀ ಸಿಕ್ಕಬಹುದೇ ಎಂಬ ಆಸೆಯಿಂದ ಟ್ರಾಫಿಕ್ಕಿನಲ್ಲಿ ಹೇಗೋ ಪರದಾಡುತ್ತಾ ಮನೆಗೆ ಬರುವುದನ್ನು ದೂರದಿಂದಲೇ ನೋಡಿದ ಮಾಮ ಮನೆಯೊಳಗೆ ಓಡಿಹೋಗಿ ಅವನ ಮುಂದೆ ಅಂದಿನ ನ್ಯೂಸ್ ಪೇಪರನ್ನು ಹಿಡಿಯುತ್ತಾಳೆ. 
ಮಾಮು: ಮನೋರಮೆ, ಎಲ್ಲಿ ನನ್ನ ತನಿವಣ್ಣು ಮತ್ತು ತನಿವಾಲು? ಅರ್ಥಾತ್ ಕೋಲ್ಡ್ ಫ್ರೂಟ್ ಅಂಡ್ ಕೋಲ್ಡ್ ಮಿಲ್ಕ್? 
ಮಾಮ: ಹಣ್ಣು ತನ್ನಿ ಅಂತ ಹೇಳಿಹೇಳಿ ಸಾಕಾಯ್ತು. ತನಿವಣ್ಣು ಅಂತ ನನ್ನೇ ಕೇಳ್ತೀರಲ್ರೀ.  
ಮಾಮು: ಹೋಗಲಿ ತನಿವಾಲು? 
ಮಾಮ: ಅದನ್ನು ಹುಡುಕಿಕೊಂಡೇ ಹೋಗಿದ್ದೆ ಇವತ್ತು ಸೂಪರ್ ಮಾರ್ಕೆಟ್ಟಿಗೆ. ಆಗ ಸಿಕ್ತು ನೋಡಿ ಈ ಆsಡು.  
ಮಾಮು: ಆsಡು! ಏನಿದು ಮಚ್ ಆಡೂ ಅಬೌಟ್ ನಥಿಂಗ್?  
ಮಾಮ: ಅದೇನೋ ಮೂಶೇಕ್ ಅಂತೆ, ಕುರ್ ಕುಮಿನ್ ಇದೆಯಂತೆ. ಈಗ ತಾನೆ ಹಾಲು ಸೂಪರ್ರಾಗಿದೆಯಂತೆ.   
ಮಾಮು: ಸರಿ ಬಿಡು, ಈ ಸಲ ಗಣೇಶ ಮೂಶೇಕವಾಹನನಾಗಿಯೇ ಬರುತ್ತಾನೆ.  
ಮಾಮ: (ಓದುತ್ತಾ) "ಮೂಶೇಕ್ ಗೆ ಹಲೋ ಅನ್ನಿ." 
ಮಾಮು: ಸರಿ ಬಿಡು, ಅನ್ನೋಣಂತೆ; ಭಾದ್ರಪದ ಚೌತಿಗೆ ಮೂಷಕವಾಹನನಾಗಿ ಗಜಮುಖ ಬಂದಾಗ ಹಲೋ ಅನ್ನೋಣ. ಲೌಡ್ ಸ್ಪೀಕರ್ ಸಂಗೀತ ಇನ್ನು ತಡಕೊಳ್ಳೋಕೆ ಆಗೋಲ್ಲ ಅನ್ನೋವಾಗ ಬೈ ಹೋಳೋಣ. ಇದರಲ್ಲೇನು ವಿಶೇಷ? 
ಮಾಮ: ನಿಮಗೆ ಯಾವಾಗಲೂ ಹುಡುಗಾಟ! ಇದರಲ್ಲಿ ಅರಿಸಿನದ ಸಾರದ ಉತ್ತಮಿಕೆ ಇದೆಯಂತೆ - - ಅದಕ್ಕೆ ಕುರ್ ಕುಮಿನ್ ಅಂತಾರಂತೆ.  
ಮಾಮು; ಅಹುದೇ! ಕುರ್ ಕುರೇದಲ್ಲಿ ಏನಿದೆಯಂತೆ? 
ಮಾಮ: (ಅಲಕ್ಷಿಸಿ) ಸೂಪರ್ ಹೆಲ್ದಿಯಂತೆ ರೀ.  
ಮಾಮು; ಹಲ್ದಿ ಇದ್ದಮೇಲೆ ಹೆಲ್ದಿನೇ ಅಲ್ಲವಾ?  ಚೆನ್ನಾಗಿ ಹೇಳ್ದಿ. ಅದಕ್ಕೇ ನಾನು ಕುರ್ ಕುರ್ ಅಂತಾ ಹಲ್ದಿರಾಮ್ಸ್ ಚೌಚೌ ತಿನ್ನೋದು.   
ಮಾಮ: (ಅಲಕ್ಷಿಸಿ) ರೀ, ಆಯ್ಕೆ ಮಾಡಲು ನಾಲ್ಕು ಯಮ್ಮಿ ಸ್ವಾದಗಳಿವೆಯಂತೆ.  
ಮಾಮು: ಯಮ್ಮಿ ಯಮ್ಮಿ ಯಮ್ಮಿ ಯಮ್ಮೀ! ಹೌದಾ? 
ಮಾಮ: ಮಕ್ಕಳಿಗೂ ವಯಸ್ಕರಿಗೂ ಬಹಳ ಪ್ರಿಯವಾಗಿದೆಯಂತೆ ರೀ. 
ಮಾಮು: ಮನೋರಮೆ! ಹೀಗೋ ಸಮಾಚಾರ! ಈ ಸಿಹಿ ಸುದ್ದಿ ತಿಳಿಸಲು ಇಷ್ಟೊಂದು ಸುತ್ತು-ಬಳಸೇಕೆ? 
ಮಾಮ: ಶಾಂತಂ! ಶಾಂತಂ! ನಿಮ್ಮ ಕಲ್ಪನೆಗೆ ಬ್ರೇಕ್ ಹಾಕಿ.  
ಮಾಮು: (ಪೆಚ್ಚಾಗಿ) ಮೊದಲು ವಯಸ್ಕರಿಗೆ ಮಾತ್ರ ಅಂತಿರ್ತಿತ್ತು - ಈಗ ಎಲ್ಲಾ ಕೆಟ್ಟುಹೋಯ್ತು. 
ಮಾಮ: (ಓದುತ್ತಾ) ಮಕ್ಕಳಿಗೂ ವಯಸ್ಕರಿಗೂ ಬಹಳ ಪ್ರಿಯವಾಗಿದೆ. ಹೋಗಿ ಒಂದನ್ನು ಕೈಗೆತ್ತಿಕೊಳ್ಳಿ 
ಮಾಮು: ಈಗ ಬೇಗ ನನಗೇನಾದರೂ ಹೊಟ್ಟೆಗೆ ಗ್ರಾಸ ತರದಿದ್ದರೆ ಖಂಡಿತ ಎತ್ತಿಕೊಳ್ತೀನಿ, ಪ್ರಿಯೆ. 
ಮಾಮ:  ನಿಮ್ಮ ಸಪ್ತಾಕ್ಷರಿ ಮಂತ್ರದಿಂದ ಹೊಟ್ಟೆಗೆ Grass ಅಲ್ಲದೆ ಬೇರೇನು ಸಿಕ್ಕುತ್ತೆ 
ಮಾಮು: ಅದೇ ಆಗಲಿ. ಗ್ರಾಸ್ ತಿಂದೇ ಅಲ್ಲವೇ ಕೌ ಮಿಲ್ಕ್ ಕೊಡೋದು?  
ಮಾಮ: ಈ ಆsಡು ಓದುತ್ತಾ ಮೆಲ್ಕ್ ಹಾಕ್ತಾ ಇರಿ.  ಅಡುಗೆಮನೆಯಲ್ಲಿ ಗ್ರಾಸ್ ಏನಾದರೂ ಸಿಕ್ಕುತ್ತಾ ಹುಡುಕಿ ತರ್ತೀನಿ (ನಿರ್ಗಮನ). 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)