ಕತ್ತಲುದಾರಿ

ಸಿ ಪಿ ರವಿಕುಮಾರ್



ಅವನು ಊಟಕ್ಕೆ ಕುಳಿತಿದ್ದ. ಹೆಂಡತಿ ಬಡಿಸುತ್ತಿದ್ದಳು. ಊರಿನಿಂದ ಬಂದ ತಮ್ಮ ಈಗ ತನ್ನ ಮನೆಯಲ್ಲೇ ಇದ್ದು ಕೆಲಸ ಹುಡುಕುತ್ತಾನೆಂದು ಗೊತ್ತಾದಾಗ ಇಬ್ಬರಿಗೂ ಇರುಸುಮುರುಸಾಗಿತ್ತು. ಪುಟ್ಟಮನೆಯಲ್ಲಿ ತಮ್ಮ ಜೊತೆಗೆ ಇನ್ನೊಬ್ಬರು ಇರುವುದು ಅವಳಿಗೆ ಇಷ್ಟವಿಲ್ಲ. ಅವಳಿಗೆ ಇಷ್ಟವಿಲ್ಲದ್ದು ಇವನಿಗೂ ಕಹಿಯಾಗಿ ಮಾರ್ಪಡಲು ಎಷ್ಟು ದಿವಸ ಬೇಕು? ತಮ್ಮ ಎಷ್ಟು ದಿನಗಳಿಂದ ಕೆಲಸ ಹುಡುಕುತ್ತಿದ್ದಾನೆ ಎಂದು ಅವನು ಯೋಚಿಸಿದ. ಈಗಾಗಲೇ ಮೂರು ತಿಂಗಳಾದವು.  "ಸರಿಯಾಗಿ ಓದಲಿಲ್ಲ, ಬರೆಯಲಿಲ್ಲ. ಇವನಿಗೆ ದಿನಾಗಲೂ ಬಿಟ್ಟಿ ಕೂಳು ಹಾಕಬೇಕು!" ಎಂದು ಅವಳು ಗೊಣಗಿದಾಗ ಮೊದಲು ಇವನಿಗೆ ರೇಗಿತ್ತು. ಆದರೆ ಈಗ ಅವನಿಗೂ ಹಾಗೇ ಅನ್ನಿಸತೊಡಗಿದೆ. ಅವಳು ತಮ್ಮನಿಗೆ ಕೆಲಸಗಳನ್ನು ಹೇಳುವುದನ್ನು ಅವನು ಗಮನಿಸಿಯೂ ಗಮನಿಸದಂತೆ ಇರುತ್ತಾನೆ. ಹಾಸಿಗೆ ಸುತ್ತಿಡುವುದು, ತರಕಾರಿ ತರುವುದು, ಬಟ್ಟೆ ಒಗೆಯುವುದು, ಹೀಗೆ ಕ್ರಮೇಣ ಅನೇಕ ಕೆಲಸಗಳು ತಮ್ಮನ ಪಾಲಿಗೆ ಬರುತ್ತಿವೆ. ಈ ಕೆಲಸಗಳನ್ನು ಅವನು ಸ್ವಲ್ಪವೂ ಬೇಜಾರಿಲ್ಲದೆ ಮಾಡುವುದು ಇವನನ್ನು  ಇನ್ನಷ್ಟು ರೇಗಿಸುತ್ತದೆ. ತಾನು ಇಂಥ ಕೆಲಸಗಳನ್ನು ಎಂದೂ ಮಾಡಿಲ್ಲ ಎನ್ನುವುದು ಅವನನ್ನು ಚುಚ್ಚುತ್ತದೆ.

ತಾವಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ ಬೆಳೆದರೂ ಎಷ್ಟು ವಿಭಿನ್ನವಾಗಿದ್ದೇವೆ! ಅವನು ದೇಹವನ್ನು ದಂಡಿಸುತ್ತಾನೆ.  ಹೊಲ ಉಳುವುದು, ಬಾವಿಯಲ್ಲಿ ನೀರು ಸೇದುವುದು, ಮರ ಹತ್ತಿ ಕಾಯಿ ಕೀಳುವುದು, ಕಿತ್ತ ಕಾಯನ್ನು ಕೊಚ್ಚಿ ಎಳನೀರು ಕುಡಿಯಲು ಕೊಡುವುದು, ಎಲ್ಲದಕ್ಕೂ ಅವನು ಒಂದು ಕೈ ಮುಂದು. ಎಲ್ಲವನ್ನೂ ನಗುನಗುತ್ತಾ  ಮಾಡುತ್ತಾನೆ.  ಅಪ್ಪನಿಗೆ, ಅಮ್ಮನಿಗೆ  ತಮ್ಮನನ್ನು ಕಂಡರೆ ಹೆಚ್ಚು ಇಷ್ಟವೆಂದು ಇವನಿಗೆ ತೋರುತ್ತದೆ. ಅಪ್ಪ ತನ್ನನ್ನು ಎಲ್ಲರ ಮುಂದೆ ಹೊಗಳುತ್ತಾನೆ ಎನ್ನುವುದೇನೋ ನಿಜ. "ನಮ್ಮ  ರಾಜಣ್ಣ ಕಾಲೇಜಲ್ಲಿ ಪ್ರೊಫೆಸರ್" ಅಂತ ಅವನು ಬೀಗುತ್ತಾನೆ. ತನ್ನ ಹೆಸರು ಪತ್ರಿಕೆಗಳಲ್ಲಿ ಬಂದಾಗ ಅವನು ಎಲ್ಲರಿಗೂ ತೋರಿಸುತ್ತಾನೆ. ಇಷ್ಟಾದರೂ ಅವನು ತನ್ನ ಮನಸ್ಸನ್ನು ಬಿಚ್ಚಿಡುವುದು ತಮ್ಮನ ಹತ್ತಿರ ಮಾತ್ರ ಎನ್ನುವ ಗುಮಾನಿ ಇವನಿಗಿದೆ. ತಾನು ಊರಿಗೆ ಹೋದಾಗ ತನ್ನನ್ನು ಅತಿಥಿಯಂತೆ ಅವರು ಸತ್ಕರಿಸುವುದು ಇವನಿಗೆ ನುಂಗಲಾರದ ತುತ್ತು. ಪಟ್ಟಣದ ತನ್ನ ಹೆಂಡತಿ ಹಳ್ಳಿಗೆ ಹೋದಾಗ ಅವಳ ನಯ-ನಾಜೂಕು ನೋಡಿ ಹಳ್ಳಿಯ ಜನ ಬೆರಗಾಗುವುದು ಇವನಿಗೆ ಒಳಗೊಳಗೇ ಸಂತೋಷ ಕೊಟ್ಟರೂ ತಾನು ಭಿನ್ನನಾದೆ ಎನ್ನಿಸಿ ಕೋಪವೂ ಬರುತ್ತದೆ. ಉಳುವವನಿಗೇ ಭೂಮಿಯಾದರೆ ನಾಳೆ ಎಲ್ಲವೂ ತಮ್ಮನ ಪಾಲಾಗಬಹುದು ಎಂದು ಹೆಂಡತಿ ಹೇಳಿದ್ದು ಅವನನ್ನು ಕುಕ್ಕುತ್ತದೆ.

ತನ್ನ ವಿದ್ಯಾಭ್ಯಾಸಕ್ಕೆ, ತನ್ನ ಮತ್ತು ತಂಗಿಯ ಮದುವೆಗೆ  ಅಪ್ಪ ಜಮೀನಿನ ಮೇಲೆ ಸಾಲ ಮಾಡಿದ್ದು ಅವನಿಗೆ ಗೊತ್ತಾಗುವ ಹೊತ್ತಿಗೆ ತೀರಾ ತಡವಾಗಿಹೋಯಿತು. ಬಹುಪಾಲು ಜಮೀನು ಕೈಯಿಂದ ಜಾರಿಹೋಯಿತು.  ಅವನ ತಮ್ಮ ತಾನೂ ಕೆಲಸ ಹುಡುಕಿಕೊಂಡು ಪಟ್ಟಣಕ್ಕೆ ಬಂದ. ಸಾಲ ಮಾಡಿದ್ದು ತನ್ನ ವಿದ್ಯಾಭ್ಯಾಸಕ್ಕೇ ಎಂಬ ಕಾರಣ ಯಾರನ್ನೂ ದೂಷಿಸುವ ಹಾಗಿಲ್ಲ. ತಾನು ಇಂಗ್ಲೆಂಡಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಬೇಕೆಂದು ಆಸೆ ಪಟ್ಟಾಗ ಅಪ್ಪ ಇಲ್ಲ ಅನ್ನಲಿಲ್ಲ.  ತಾನು ಈಗ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಹುದ್ದೆಯಲ್ಲಿ ಗಳಿಸುವುದು ತನ್ನ ಮತ್ತು ಹೆಂಡತಿಯ ಖರ್ಚಿಗೆ ಸಾಕು. ತನಗೆ ಇನ್ನೂ ಕನಸುಗಳಿವೆ. ಪುಸ್ತಕಗಳನ್ನು ಬರೆಯಬೇಕು, ವಿದೇಶಗಳಿಗೆ ಸಂಚಾರ ಮಾಡಬೇಕು. ಇವೆಲ್ಲದಕ್ಕೂ ತಮ್ಮ ಕಲ್ಲುಹಾಕುತ್ತಿದ್ದಾನೆ ಎಂದು ಅವನಿಗೆ ರೋಷವಿದೆ.

ಹೆಂಡತಿ ಇವನಿಗೆ ಮಾತ್ರ ತಟ್ಟೆ ಹಾಕಿ ಊಟ ಬಡಿಸುತ್ತಿದ್ದದ್ದು ತಮ್ಮನಿಗೆ ತಪ್ಪಾಗಿ ತೋರಲಿಲ್ಲ. "ಇವತ್ತು ಏನು ವಿಶೇಷ?" ಎಂದು ತಾನೇ ತಟ್ಟೆ ಹಾಕಿಕೊಂಡು ಪಕ್ಕದಲ್ಲಿ ಕುಳಿತಾಗ ಇವನಿಗೆ ಕೋಪ ಉಕ್ಕಿತು. ಅವನು ಗುರ್ರೆಂದು ತಮ್ಮನ ಕಡೆ ನೋಡಿದ. "ಇವತ್ತು ಹೋಗಿದ್ಯಲ್ಲ, ಆ ಕೆಲಸ ಸಿಕ್ತಾ?" ಎಂದು ಅಸಹನೆಯ ಧ್ವನಿಯಲ್ಲಿ ಕೇಳಿದ.  ತಮ್ಮ ಸುಮ್ಮನಿದ್ದ.

"ಸರಿ, ಇವನಿಗೆ ಊಟಕ್ಕೆ ಬಡಿಸು, ನನಗೆ ಸಾಕು," ಎಂದು ಇವನು ಎದ್ದುಬಿಟ್ಟ.

"ಅಯ್ಯೋ ಯಾಕೆ ಅರ್ಧಕ್ಕೇ ಎದ್ದಿರಿ?" ಎಂದು ಹೆಂಡತಿ ಕಣ್ಣಲ್ಲಿ ನೀರು ಹಾಕಿದಳು.

ಅವಳು ಈ ಘಟನೆಯನ್ನು ಪಕ್ಕದ ಮನೆಯವರ ಜೊತೆ ಪಿಸುಮಾತಿನಲ್ಲಿ ಮಾತಾಡುವಾಗ ಅದು ತಮ್ಮನ ಕಿವಿಗೆ ಬೀಳುತ್ತಿದೆ ಎಂಬುದರ ಅರಿವು ಅವಳಿಗಿತ್ತು. "ನಾವಾದರೂ ಎಷ್ಟು ದಿನ ಹೀಗೆ ಇಟ್ಟುಕೊಂಡು ಸಾಕೋದು? ಒಂದು ಕೆಲಸವಿಲ್ಲ, ಒಂದು ಬೊಗಸವಿಲ್ಲ. ವಯಸ್ಸು ಕಮ್ಮಿಯಾಯಿತಾ? ನಾಳೆ ಮದುವೆ ಮಾಡಬೇಕು ಅಂದರೆ ಹೆಂಡತಿಗೆ ಒಂದು ಹಿಡಿ ಅನ್ನ ಹಾಕುವ ತಾಕತ್ತು ಇಲ್ಲದಿದ್ದರೆ?" ಎನ್ನುವಾಗ ಪಿಸುಮಾತು ಪಿಸುಮಾತಾಗಿರಲಿಲ್ಲ.  ಆಗ ಮೈದುನ ತಾನೇ ಬಡಿಸಿಕೊಂಡು ಊಟ ಮಾಡುತ್ತಿದ್ದಾನೆಂಬುದು ಕೂಡಾ ಅವಳಿಗೆ ಗೊತ್ತಿತ್ತು.

ಅವನು ರೂಮಿನಲ್ಲಿ ಕೋಟ್ ಹಾಕಿಕೊಂಡು ನಿಲುವುಗನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳುತ್ತಿದ್ದ. ತನ್ನ ಗಡ್ಡವನ್ನು ಅವನು ಬಹಳ ಶ್ರದ್ಧೆಯಿಂದ ಬೆಳೆಸಿದ್ದಾನೆ. ತನ್ನ ಇಮೇಜಿಗೆ ಗಡ್ಡ ಬಹಳ ಸಹಾಯ ಮಾಡುತ್ತದೆ ಎಂಬುದು ಅವನಿಗೆ ಗೊತ್ತು. ತಲೆಗೂದಲನ್ನು ಬಾಚಿಕೊಳ್ಳುವಾಗ ಒಂದೆರಡು ಬೆಳ್ಳಿಬಣ್ಣದ ಕೂದಲುಗಳು ಮಿಂಚಿದವು.  ಅವನು ಮೇಜಿನ ಮೇಲೆ ತಾನು ಅರ್ಧರಾತ್ರಿಯವರೆಗೂ ಎದ್ದು ಕೂತು ಬರೆದ ಹಾಳೆಗಳನ್ನು ಬಾಚಿಕೊಂಡ. ಇಂದು ಅವನು ಮಂಡಿಸಬೇಕಾದ ಪ್ರಬಂಧ.

ಅವನು ಹಾಳೆಗಳನ್ನು ನೀಟಾಗಿ ಜೋಡಿಸಿ ಸ್ಟೇಪಲ್ ಹಾಕಿ ಭದ್ರಪಡಿಸಿದ. ಪ್ರಬಂಧದಲ್ಲಿ ತಾನು ಪ್ರೊ| ಸ್ವಾಮಿಯವರ ವಾದಸರಣಿಯನ್ನು ಟೀಕಿಸಿದ್ದು ನೆನಪಾಗಿ ಅವನಲ್ಲಿ ಹುರುಪು  ಮೂಡಿಸಿತು. ಪ್ರಬಂಧ ಮಂಡಿಸುವಾಗ ತನಗೆ ಎಷ್ಟು ಮನ್ನಣೆ ಸಿಕ್ಕಬಹುದು ಎಂದು ಯೋಚಿಸಿದಾಗ ಅವನ ಉತ್ಸಾಹ ಇಮ್ಮಡಿಸಿತು. ತನ್ನ ಎಷ್ಟೋ ಜನ ವಿದ್ಯಾರ್ಥಿಗಳು ತನ್ನನ್ನು ಆರಾಧ್ಯಭಾವದಿಂದ ನೋಡುತ್ತಾರೆ. ತಾನು ಫೇಸ್ ಬುಕ್ಕಿನಲ್ಲಿ ಮಾಡಿದ ಪ್ರತಿಯೊಂದೂ ಕಾಮೆಂಟಿಗೆ ಅವರು ಪ್ರತಿಕ್ರಯಿಸುತ್ತಾರೆ.  ತನ್ನ ಕಟ್ಟಾ ವಿರೋಧಿಯಾದ ಸ್ವಾಮಿಯನ್ನು ಹೀನಾಮಾನ ಬಯ್ಯುತ್ತಾರೆ. ಇವತ್ತಿನ ಗೋಷ್ಠಿಗೆ ತನ್ನ ಪ್ರಬಂಧ ಖಂಡಿತ ಮೆರುಗು ತರುತ್ತದೆ.  ನಾಳೆ ಪತ್ರಿಕೆಗಳ ಮುಖಪುಟಗಳಲ್ಲಿ ಖಂಡಿತ ವರದಿ ಬರುತ್ತದೆ.  ತನ್ನ ಬಡ್ತಿ ಈ ಪ್ರಬಂಧದ ಮೇಲೆ ನಿಂತಿದೆ.

ಕಾರಿನಲ್ಲಿ ಚಕ್ರದ ಮುಂದೆ ಕುಳಿತು ಪ್ರಬಂಧವನ್ನು ಅವನು ಪಕ್ಕದ  ಸೀಟಿನ ಮೇಲೆ ಇಟ್ಟುಕೊಂಡ. ಕಾರ್ ಚಾಲೂ ಮಾಡಿ ಅವನು ಪ್ರಬಂಧದ ಹೆಸರನ್ನು ಮತ್ತೊಮ್ಮೆ ಓದಿದ. "ಸಮಾಜದ ಸ್ವಾಸ್ಥ್ಯಕ್ಕೆ ಅನ್ನಭಾಗ್ಯ ಯೋಜನೆಯ ಅಗತ್ಯ." ತನ್ನ ಪ್ರಬಂಧದಲ್ಲಿ ತಾನು ಇನ್ನಾವುದಾದರೂ ಆಕರ ನೀಡುವುದನ್ನು ಮರೆತಿದ್ದೇನೆಯೇ ಎಂದು ಯೋಚಿಸುತ್ತಾ ಅವನು ಜಾಗರೂಕತೆಯಿಂದ ಗಾಡಿ ನಡೆಸತೊಡಗಿದ.  ಸಣ್ಣಗೆ ಬೀಳುತ್ತಿದ್ದ ಮಳೆ ಜೋರಾಯಿತು. ಕತ್ತಲು ಆವರಿಸಿಕೊಂಡಿತು.  ಮುಂದಿರುವ ಹಾದಿ ಮಸುಕಾಗಿ ಕಾಣುತ್ತಿತ್ತು.  "ಸ್ವಲ್ಪ ಹೊತ್ತು ನಿಂತು ನಡೆದರೆ ಮೇಲು" ಎಂದು ಅವನ ಮನಸ್ಸು ಎಚ್ಚರಿಸಿದರೂ ಗೋಷ್ಠಿಗೆ ತಡವಾದೀತೆಂದು ಅವನು ಗಾಡಿಯ ವೇಗವನ್ನು ತಗ್ಗಿಸದೆ ಮುಂದುವರೆದ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)